An unconventional News Portal.

‘ಬಿಗ್ ಬ್ರದರ್’ನಿಂದ ‘ಬಿಗ್ ಬಾಸ್’ವರೆಗೆ: ಖಾಸಗಿತನದ ಮಾರಾಟ; ಕುತೂಹಲ ಎಂಬ ಬಂಡವಾಳ!

‘ಬಿಗ್ ಬ್ರದರ್’ನಿಂದ ‘ಬಿಗ್ ಬಾಸ್’ವರೆಗೆ: ಖಾಸಗಿತನದ ಮಾರಾಟ; ಕುತೂಹಲ ಎಂಬ ಬಂಡವಾಳ!

ದಕ್ಷಿಣ ಭಾರತದ ಮನೋರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಪೈಕಿ ಅತೀ ಹೆಚ್ಚು ಹೂಡಿಕೆ ಕಂಡ ‘ಬಿಗ್ ಬಾಸ್- ಕನ್ನಡ’ ಕಾರ್ಯಕ್ರಮದ ನಾಲ್ಕನೇ ಅವತರಿಣಿಕೆಗೆ ಶನಿವಾರ ತೆರೆ ಬೀಳಲಿದೆ. ಉಳಿದಿರುವ ಐವರ ಪೈಕಿ ಒಬ್ಬರು 50 ಲಕ್ಷದ ಬಹುಮಾನದ ಮೊತ್ತ (ಇದರಲ್ಲಿ ತೆರಿಗೆ ಕಳೆದು 30 ಲಕ್ಷ ಕೈಗೆ ಬರಬಹುದು)ವನ್ನು ಗೆದ್ದುಕೊಳ್ಳಲಿದ್ದಾರೆ. ವಿಜೇತರನ್ನು ವೀಕ್ಷಕರು ಕಳುಹಿಸುವ ಎಸ್ಎಂಎಸ್ಗಳು ನಿರ್ಧರಿಸಲಿವೆ. ಕಳೆದ ಮೂರು ತಿಂಗಳಿನಿಂದ ‘ಕಲರ್ಸ್ ಕನ್ನಡ’ ಮತ್ತು ‘ಕಲರ್ಸ್ ಸೂಪರ್’ ಚಾನಲ್ಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

‘ಬಿಗ್ ಬಾಸ್’ ಎಂಬ ಕಾರ್ಯಕ್ರಮ ಅದರ ನಿರೂಪಣೆ ಮತ್ತು ರಚನೆಯ ಕಾರಣಕ್ಕೆ ಕುತೂಹಲವನ್ನು ಕೆರಳಿಸುತ್ತದೆ. ಅದರ ಬಗ್ಗೆ ಅನುಮಾನಗಳನ್ನು, ಅಭಿರುಚಿಗಳನ್ನು ಹಂಚಿಕೊಳ್ಳುವಂತೆ ಪ್ರಚೋದಿಸುತ್ತದೆ. ಸಮಾಜದಲ್ಲಿ ಒಂದಷ್ಟು ಹೆಸರು ಮಾಡಿದವರನ್ನು ಒಂದು ಮನೆಯೊಳಗೆ 100 ದಿನಗಳ ಕಾಲ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ, ಅವರನ್ನು ಕಾಯಲು ಕ್ಯಾಮೆರಾಗಳನ್ನು ಇಡುವ ಪರಿಕಲ್ಪನೆಯಲ್ಲಿಯೇ ಹೀಗೊಂದು ಸಾಧ್ಯತೆ ಇದೆ. ಇನ್ನೊಬ್ಬರ ವೈಯಕ್ತಿಕ ಜೀವನದ ವಿಚಾರಕ್ಕೆ ಬಂದಾಗ ಜನ ಕುತೂಹಲಿಗಳಾಗುವುದು ಸಹಜ ಕೂಡ. ಅಂತಹ ಕುತೂಲಹದ ಮನೋ ಭಾವನೆಗಳೇ ಈ ಕಾರ್ಯಕ್ರಮದ ಬಂಡವಾಳ.

ಈ ಕುರಿತು ಕಳೆದ ಮೂರು ತಿಂಗಳ ಅಂತರದಲ್ಲಿ ರಾಜ್ಯದ ಪತ್ರಿಕೆಗಳು, ಟಿವಿಗಳು, ನ್ಯೂಸ್ ಪೋರ್ಟಲ್ಗಳು ಮತ್ತು ಸಾಮಾಜಿಕ ಜಾಲತಾಣಗಳು ನೀಡಿದ ನಿತಂತರ ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೋಚರಿಸುವ ಸತ್ಯವಿದು. ‘ಬಿಗ್ ಬಾಸ್’ ಎಂಬುದು ಸಂಪೂರ್ಣ ರಿಯಾಲಿಟಿ ಅಲ್ಲವಂತೆ ಎಂಬಲ್ಲಿಂದ ಶುರುವಾಗಿ, ‘ಬಿಗ್ ಬಾಸ್’ ಮನೆಯೊಳಗೆ ಮದ್ಯ, ಸಿಗರೇಟು ಎಲ್ಲವೂ ಸರಬರಾಜಾಗುತ್ತೆ ಎಂಬಲ್ಲಿವರೆಗೆ ಗುಮಾನಿಗಳನ್ನೇ ಆಧರಿಸಿದ ಸುದ್ದಿಗಳು ಪ್ರಸ್ತುತಗೊಂಡಿವೆ.(ಬಹುಶಃ ಅನುಮಾನಗಳಿಗೆ ಕಡಿವಾಣ ಹಾಕುವ ಸಲುವಾಗಿ ಈ ಬಾರಿ ಮೋಹನ್ ಸಿಗರೇಟು ಸೇದುವ ಚಿಕ್ಕದೊಂದು ದೃಶ್ಯವನ್ನು ವಾಹಿನಿ ಪ್ರಸಾರ ಮಾಡಿತ್ತು).

ಹೀಗೆ, ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುವ ವಾಹಿನಿ ಮತ್ತದರ ಔದ್ಯಮಿಕ ಹಿತಾಸಕ್ತಿಗಳನ್ನು ಪಕ್ಕಕ್ಕಿಟ್ಟು ‘ಬಿಗ್ ಬಾಸ್’ ಕುರಿತು ಸಾಮಾಜಿಕ ಚರ್ಚೆ ನಡೆದಿದೆ. ಇಂತಹ ಮೇಲ್ಮಟ್ಟದ ಚರ್ಚೆ ಮತ್ತು ಹಿತಾಸಕ್ತಿಗಳ ಆಚೆಗೆ ‘ಬಿಗ್ ಬಾಸ್’ ಕುರಿತು ಅರ್ಥಮಾಡಿಕೊಳ್ಳಲೇಬೇಕಾದ ಕೆಲವು ಅಂಶಗಳಿವೆ. ಅಂತಹ ಕೆಲವು ಕುತೂಹಲಕಾರಿಯಾದ, ಅಪರೂಪದ ಮಾಹಿತಿಗಳನ್ನು ‘ಸಮಾಚಾರ’ದ ಈ ವರದಿ ನಿಮ್ಮ ಮುಂದಿಡುತ್ತಿದೆ.

‘ಬಿಗ್ ಬ್ರದರ್’ ಟು ‘ಬಿಗ್ ಬಾಸ್’:

ಬಿಗ್ ಬಾಸ್ ಪರಿಕಲ್ಪನೆಗೆ ಪ್ರೇರಣೆ ನೀಡಿದ ಕಾದಂಬರಿ.

ಬಿಗ್ ಬಾಸ್ ಪರಿಕಲ್ಪನೆಗೆ ಪ್ರೇರಣೆ ನೀಡಿದ ಕಾದಂಬರಿ.

‘ಬಿಗ್ ಬಾಸ್’ ಕಾರ್ಯಕ್ರಮದ ಪರಿಕಲ್ಪನೆಯ ಮೂಲವನ್ನು ಹುಡುಕಿಕೊಂಡು ಹೋದರೆ, ಹೋಗಿ ನಿಲ್ಲುವುದು ಜಾರ್ಜ್ ಆರ್ವೆಲ್ ಎಂಬ ಖ್ಯಾತ ಇಂಗ್ಲಿಷ್ ಬರಹಗಾರನ ‘1984’ ಎಂಬ ಕಾದಂಬರಿಗೆ. ಆತ ತನ್ನ ಕಾದಂಬರಿಯಲ್ಲಿ ‘ಬಿಗ್ ಬ್ರದರ್ ಇಸ್ ವಾಚಿಂಗ್ ಯೂ’ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದ. ಕಾದಂಬರಿಯ ಪಾತ್ರಗಳನ್ನು ಸದಾ ಒಬ್ಬರು ಗಮನಿಸುತ್ತಿದ್ದಾರೆ ಎಂಬ ಕಥಾಹಂದರವನ್ನು ಆತ ಕಟ್ಟಿಕೊಟ್ಟಿದ್ದ. ಇದರಿಂದ ಪ್ರೇರಣೆ ಪಡೆದ ಡಚ್ ಟಿವಿಯೊಂದು 1997ರಲ್ಲಿ ಮೊದಲ ಬಾರಿಗೆ ‘ಬಿಗ್ ಬ್ರದರ್’ ಎಂಬ ಕಾರ್ಯಕ್ರಮವನ್ನು ಕಿರುತೆರೆಗೆ ಅಳವಡಿಸಿತು. ಒಂದು ಮನೆ, ಅದರ ಕೋಣೆ ಕೋಣೆಗಳನ್ನೂ ಗಮನಿಸುವ ಕ್ಯಾಮೆರಾಗಳು ಹಾಗೂ ಅದರಲ್ಲಿ 100 ದಿನಗಳ ಕಾಲ ಉಳಿದುಕೊಳ್ಳುವ ಸ್ಪರ್ಧಿಗಳು ಮತ್ತು ಒಟ್ಟಾರೆ ಅದೊಂದು ‘ಗೇಮ್ ಶೋ’ ಎಂಬರ್ಥದಲ್ಲಿ ಕಾರ್ಯಕ್ರಮ ಪ್ರಸಾರವಾಯಿತು.

ಮುಂದೆ, ಅದು ಯುರೋಪಿನಿಂದ ಅಮೆರಿಕಾ ಕಾಲಿಟ್ಟ ಮೇಲೆ ಜಗತ್ತಿನ ಮನೋರಂಜನಾ ವಾಹಿನಿಗಳ ಪಾಲಿಗೆ ಪ್ರತಿಷ್ಠೆಯ ಕಾರ್ಯಕ್ರಮವಾಗಿ ಬದಲಾಯಿತು. ಇವತ್ತಿಗೆ ಜಗತ್ತಿನ ಸುಮಾರು 50 ನಾನಾ ಭಾಷೆ ಮತ್ತು ದೇಶಗಳಲ್ಲಿ ಇದೇ ಮಾದರಿಯ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಮತ್ತು ಈ ‘ಸೋ ಕಾಲ್ಡ್’ ಆಟದ ನೀತಿ ನಿರೂಪಣೆಗಳು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬದಲಾಗುತ್ತಿವೆ ಎಂಬುದು ಗಮನಾರ್ಹ.

ನಾಲ್ಕು ವರ್ಷಗಳ ಹಿಂದೆ ಅವತ್ತಿಗಿನ್ನೂ ಈ- ಟಿವಿಯಾಗಿದ್ದ ಕಲರ್ಸ್ ಕನ್ನಡ ವಾಹಿನಿ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮವನ್ನು ಆರಂಭಿಸಿತ್ತು. ಅದನ್ನು ಮುನ್ನಡೆಸಿದವರು, ಇವತ್ತು ಕಲರ್ಸ್ ಕನ್ನಡ ಬಿಜಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್. ಅವರೀಗ ಕಾರ್ಯಕ್ರಮದ ನಿರ್ದೇಶಕರು ಕೂಡ. ನಂತರದ ಒಂದು ಸೀಸನ್ ಸುವರ್ಣ ವಾಹಿನಿ ನಡೆಸಿಕೊಟ್ಟಿತು. ಮೂರು ಮತ್ತು ನಾಲ್ಕನೇ ಸೀಸನ್ ಮತ್ತೆ ಕಲರ್ಸ್ ಕನ್ನಡದ ತೆಕ್ಕೆಗೆ ಬಂತು. ಈ ಕಾರ್ಯಕ್ರಮದ ಕಾಪಿ ರೈಟ್ಸ್ ಇರುವುದು ಎಂಡೋಮಲ್ ಎಂಬ ಅಂತರಾಷ್ಟ್ರೀಯ ಕಂಪನಿಯೊಂದರ ಬಳಿ.

ಮೊದಲ ಮೂರು ಸೀಸನ್ಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರ್ಥಿಕ ದೃಷ್ಟಿಯಿಂದ ಯಾವುದೇ ಲಾಭವನ್ನು ತಂದುಕೊಟ್ಟಿರಲಿಲ್ಲ ಎಂಬುದು ಇನ್ ಸೈಡ್ ಸ್ಟೋರಿ. ಇದಕ್ಕೆ ಕಾರಣ ಈ ಕಾರ್ಯಕ್ರಮ ಬೇಡುವ ಭಾರಿ ಮೊತ್ತದ (ಸುಮಾರು 30 ಕೋಟಿ/ ಸೀಸನ್ಗೆ) ಹೂಡಿಕೆ. ಆದರೆ, ಈ ಬಾರಿ ಕಲರ್ಸ್ ತನ್ನ ಎರಡು ವಾಹಿನಿಗಳಲ್ಲಿ ಪ್ರತ್ಯೇಕವಾಗಿ ‘ಬಿಗ್ ಬಾಸ್’ ಪ್ರಸಾರ ಮಾಡಿದ್ದರಿಂದ ಒಂದಷ್ಟು ಲಾಭ ಬಂದಿದೆ ಎನ್ನಲಾಗುತ್ತದೆ. “ನಿಜ, ಆರಂಭದಲ್ಲಿ ಲಾಭ ಆಗಿರಲಿಲ್ಲ. ಹಾಗಂತ ಹೂಡಕೆ ಮಾಡುತ್ತಲೇ ಯಾವ ಉದ್ಯಮವೂ ಲಾಭವನ್ನು ತಂದುಕೊಡುವುದಿಲ್ಲ. ಈ ಬಾರಿ ನಾವು ಎರಡು ವಾಹಿನಿಗಳಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದೇವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲು ಸಾದ್ಯವಿಲ್ಲವಾದರೂ, ಒಂದಂತೂ ಸ್ಪಷ್ಟಪಡಿಸುತ್ತೇನೆ. ನಮಗೆ ಈ ಬಾರಿ ನಷ್ಟವಾಗುವುದಿಲ್ಲ,” ಎನ್ನುತ್ತಾರೆ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್.

“ಈ ಕಾರ್ಯಕ್ರಮವನ್ನು ಕೇವಲ ಆರ್ಥಿಕ ದೃಷ್ಟಿಯಲ್ಲಿ ಮಾತ್ರವೇ ನೋಡಲು ಸಾಧ್ಯವಿಲ್ಲ. ‘ಬಿಗ್ ಬಾಸ್’ ಪ್ರಸಾರವಾಗುವಷ್ಟು ದಿನವೂ ವಾಹಿನಿಯ  ಹೆಸರು (ಬ್ರಾಂಡ್) ಸುದ್ದಿಯಲ್ಲಿರುತ್ತದೆ. ಹೀಗಾಗಿ ವಾಹಿನಿಯ ಇತರೆ ಕಾರ್ಯಕ್ರಮಗಳಿಗೂ ಅನುಕೂಲವಾಗುತ್ತದೆ,” ಎನ್ನುತ್ತಾರೆ ಅವರು. ಪದೇ ಪದೇ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಕೋಟ್ಯಾಂತರ ಜನ ನೋಡುತ್ತಾರೆ ಎಂಬ ಸಂದೇಶ ಸ್ಪರ್ಧಿಗಳ ಬಾಯಲ್ಲಿ ಬರುತ್ತದೆ. ಆದರೆ, “ನಾವು ಕೋಟ್ಯಾಂತರ ಜನ ಎಂದು ಎಲ್ಲಿಯೂ ಹೇಳಿಲ್ಲ. ಕರ್ನಾಟಕದಲ್ಲಿ ಒಂದು ದಿನದಲ್ಲಿ ಒಂದು ನಿಮಿಷವಾದರೂ ‘ಬಿಗ್ ಬಾಸ್’ ನೋಡುವ ಜನರ ಸಂಖ್ಯೆ 80 ಲಕ್ಷ,” ಎಂದು ಸ್ಪಷ್ಟಪಡಿಸುತ್ತಾರೆ ಗುಂಡ್ಕಲ್.

ಹೂಡಿಕೆಗಳ ನಾನಾ ರೀತಿ:

ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿರುವ 'ಬಿಗ್ ಬಾಸ್' ಮನೆ.

ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿರುವ ‘ಬಿಗ್ ಬಾಸ್’ ಮನೆ.

‘ಬಿಗ್ ಬಾಸ್’ ಕಾರ್ಯಕ್ರಮದ ಹಿನ್ನೆಲೆ, ಜನಪ್ರಿಯತೆಗಳ ಆಚೆಗೂ ಗಮನ ಸೆಳೆಯುವುದು ಇದರ ಹಿಂದಿರುವ ತಂತ್ರಜ್ಞಾನದ ಬಳಕೆ. ಒಂದು ಮನೆಯನ್ನು ಆವರಿಸಿಕೊಂಡಿರುವ ಸುಮಾರು 60ಕ್ಕೂ ಹೆಚ್ಚು ಕ್ಯಾಮೆರಾಗಳು, ಅವುಗಳನ್ನು 24/7 ಕಾಯಲು ಅಳವಡಿಸಿಕೊಂಡಿರುವ ಶೈಲಿ, ಕೊನೆಗೆ, ದಿನಕ್ಕೊಂದು ಸ್ಟೋರಿಯ ರೂಪದಲ್ಲಿ ಒಂದು ಗಂಟೆಗೆ ನಡೆಯುವ ಎಡಿಟಿಂಗ್, ದೃಶ್ಯ ಮತ್ತು ಧ್ವನಿಯಲ್ಲಿ ಕಾಪಾಡಿಕೊಳ್ಳುವ ಗುಣಮಟ್ಟ ಹೀಗೆ ಹಲವು ಕಾರಣಗಳಿಗಾಗಿ ‘ಬಿಗ್ ಬಾಸ್’ ಗಮನ ಸೆಳೆಯುತ್ತದೆ. “ನಾನು ನಾನಾ ರಿಯಾಲಿಟಿ ಶೋಗಳನ್ನು ಮಾಡಿದ್ದೆ. ಆದರೆ, ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಕೆಲಸ ಮಾಡಬೇಕು ಎಂಬ ಆಸಕ್ತಿ ಇತ್ತು. ಹೀಗಾಗಿ ಬಿಡದಿಯ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಬಂದು ಸೇರಿಕೊಂಡೆ,” ಎನ್ನುತ್ತಾರೆ ಸೀಸನ್-4ರ ತಂತ್ರಜ್ಞರ ತಂಡದ ಸದಸ್ಯರೊಬ್ಬರು. ಯಾವುದೇ ಮಾಹಿತಿ ನೀಡದೆ ಸ್ಥಳಕ್ಕೆ ಭೇಟಿ ನೀಡಿದ್ದ ‘ಸಮಾಚಾರ’ದ ಜತೆ ತಮ್ಮ ಗುರುತನ್ನು ಗೌಪ್ಯವಾಗಿಡಬೇಕು ಎಂಬ ಷರತ್ತಿನೊಂದಿಗೆ ಅವರು ಮಾಹಿತಿ ಹಂಚಿಕೊಂಡರು.

“ಪ್ರತಿ ದಿನದ ಕಾರ್ಯಕ್ರಮವನ್ನು ನಿರ್ವಹಣೆ ಮಾಡುವವರನ್ನು ಡೈಲಿ ಪ್ರೊಡ್ಯೂಸರ್ಸ್ ಎಂದು ಕರೆಯುತ್ತೇವೆ. ಅವರು ಬೆಳಗ್ಗೆಯಿಂದ ರಾತ್ರಿವರೆಗೆ ಮನೆಯೊಳಗೆ ನಡೆಯುವ ವಿದ್ಯಮಾನಗಳಲ್ಲಿ ಆಯ್ದ ಕೆಲವೊಂದು ಸನ್ನಿವೇಶಗಳನ್ನು ಎಪಿಸೋಡ್’ಗಳನ್ನಾಗಿ ರೂಪಿಸುತ್ತಾರೆ. ಇದರ ಜತೆಗೆ ‘ಸ್ಟೋರಿ ಪ್ರೊಡ್ಯೂಸರ್ಸ್’ ಕೂಡ ಇರುತ್ತಾರೆ. ಇವರು ಒಂದೊಂದು ಎಪಿಸೋಡಿನಲ್ಲೂ ಏನೇನು ಇರಬೇಕು ಎಂದು ತೀರ್ಮಾನಿಸುತ್ತಾರೆ,” ಎಂದು ಅವರು ಮಾಹಿತಿ ನೀಡಿದರು.

ಹಿಂದಿನ ಸೀಸನ್ ಒಂದರಲ್ಲಿ ಕೆಲಸ ಮಾಡಿದ ಪತ್ರಕರ್ತರೊಬ್ಬರು, ‘ಬಿಗ್ ಬಾಸ್’ನಲ್ಲಿರುವ ರಿಯಾಲಿಟಿ ಹಾಗೂ ಸ್ಕ್ರಿಪ್ಟ್ ನಡುವಿನ ಅಂತರದ ಕುರಿತು ಬೆಳಕು ಚೆಲ್ಲುತ್ತಾರೆ. “ರಿಯಾಲಿಟಿ ಎಂದರೆ ಮನೆಯೊಳಗಿನ ಸ್ಪರ್ಧಿಗಳನ್ನು ಅವರ ಪಾಡಿಗೆ ಬಿಟ್ಟುಬಿಡುವುದು. ಆದರೆ, ಅಷ್ಟೆ ಆದರೆ ಅದರಲ್ಲಿ ಮನೋರಂಜನೆ ಇರುವುದಿಲ್ಲ. ಬರೀ ಮಾತುಗಳನ್ನು ಇಟ್ಟುಕೊಂಡು ಎಪಿಸೋಡ್’ಗಳನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಟಾಸ್ಕ್ಗಳನ್ನು ನೀಡಲಾಗುತ್ತದೆ. ಅದು ಕೂಡ ಒಂದು ರೀತಿಯ ಸ್ಕ್ರಿಪ್ಟ್ ಆಗಿರುತ್ತದೆ,” ಎನ್ನುತ್ತಾರೆ ಅವರು.

ಹೀಗೆ, ಒಂದಷ್ಟು ರಿಯಾಲಿಟಿ, ಇನ್ನೊಂದಿಷ್ಟು ಮನೋರಂಜನಾ ದೃಷ್ಟಿಯಿಂದ ನೀಡಲಾಗುವ ಟಾಸ್ಕ್ಗಳ ಮೂಲಕ ಸ್ಪರ್ಧಿಗಳ ವರ್ತನೆಯನ್ನು ಸೆರೆ ಹಿಡಿದು ಜನರಿಗೆ ತೋರಿಸಲಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರಿಗೂ ವಾರದ ಲೆಕ್ಕದಲ್ಲಿ ಸಂಭಾವನೆಯನ್ನೂ ನೀಡಲಾಗುತ್ತದೆ. ಹೊರಗಿನ ಪ್ರಪಂಚದಲ್ಲಿ ಜಾಸ್ತಿ ಹೆಸರು ಮಾಡಿದವರಿಗೆ ಹೆಚ್ಚು ಸಂಭಾವನೆ, ಕಡಿಮೆ ಹೆಸರು ಇದ್ದವರಿಗೆ ಕಡಿಮೆ ಸಂಭಾವನೆ ನೀಡಲಾಗುತ್ತದೆ. ಮೂಲಗಳ ಪ್ರಕಾರ, ಈ ಬಾರಿಯ ಸೀಸನ್ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದವರು ನಟಿ ಮಾಳವಿಕ. ಅವರಿಗೆ ವಾರಕ್ಕೆ 2 ಲಕ್ಷವನ್ನು ಪಾವತಿಸಲಾಗಿದೆ ಅಂತೆ.

ಮನಸ್ಸುಗಳ ಮಾರಾಟ: 

'ಬಿಗ್ ಬಾಸ್' ಸೀಸನ್ 4ರ ಅಂತಿಮ ಘಟ್ಟದಲ್ಲಿರುವ ಅಭ್ಯರ್ಥಿಗಳು.

‘ಬಿಗ್ ಬಾಸ್’ ಸೀಸನ್ 4ರ ಅಂತಿಮ ಘಟ್ಟದಲ್ಲಿರುವ ಅಭ್ಯರ್ಥಿಗಳು.

‘ಬಿಗ್ ಬಾಸ್’ ಪರಿಕಲ್ಪನೆಯ ಕುರಿತು ಸಾಕಷ್ಟು ಅಧ್ಯಯನಗಳು ಅಮೆರಿಕಾದ ನಾನಾ ವಿಶ್ವವಿದ್ಯಾನಿಯಲಗಳಲ್ಲಿ ನಡೆದಿವೆ. ಮನುಷ್ಯನ ವರ್ತನೆಗಳು ಹಾಗೂ ಆತನ/ ಆಕೆಯ ಮನಸ್ಸುಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಅರಿಯಲು ಇಂತಹ ಕಾರ್ಯಕ್ರಮ ನೆರವು ನೀಡಿದೆ.

“ಒಂದು ಮನೆಯಲ್ಲಿ ಹೊರಗಿನ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡು ನೂರು ದಿನ ಕಳೆಯುವುದು ಸುಲಭವಲ್ಲ. ಕೆಲವೊಮ್ಮೆ ಅದು ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ,” ಎನ್ನುತ್ತಾರೆ ಬೆಂಗಳೂರು ಮೂಲದ ಮನಶಾಸ್ತ್ರಜ್ಞ ಡಾ. ಮಹೇಶ್. ಅವರು ತಮ್ಮ ಬಳಿಯಲ್ಲಿ ಬಂದು ಸಲಹೆ ಪಡೆದುಕೊಂಡು ಹೋದ ಬಿಗ್ ಬಾಸ್ ಸ್ಪರ್ಧಿಯೊಬ್ಬರ ವಿವರಗಳನ್ನು ನೀಡಿದರು. “ಅವರು ಒಂದಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದು ಬಂದಿದ್ದರು. ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅದನ್ನು ನಮ್ಮ ಭಾ‍ಷೆಯಲ್ಲಿ ಸ್ಟಾಕ್ ಹೋಮ್ ಸಿಂಡ್ರೋಮ್ ಎಂದು ಗುರುತಿಸುತ್ತೀವಿ,” ಎಂದರು. ಈ ಬಾರಿಯ ಬಿಗ್ ಬಾಸ್ ಸೀಸನ್ ಕೊನೆಯ ದಿನಗಳನ್ನು ನೋಡುತ್ತಿದ್ದರೆ, ಮನೆಯಿಂದ ಹೊರಹೋದ ಸ್ಪರ್ಧಿಗಳನ್ನು ಮತ್ತೆ ಕರೆಸಿ, ಅವರ ಮೂಲಕ ‘ಹೊರಗಿನ ಪ್ರಪಂಚದಲ್ಲಿ ಅದ್ಭುತವಾದ ಪ್ರತಿಕ್ರಿಯೆ’ ಇದೆ ಎಂದು ಹೇಳಿಸುವ ಪ್ರಯತ್ನ ನಡೆದಿತ್ತು.

ಇಂತಹ ಸ್ಪರ್ಧೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗಲೇ ಅವರ ಮಾನಸಿಕ ಆರೋಗ್ಯವನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎನ್ನುತ್ತಾರೆ ಪರಮೇಶ್ವರ್ ಗುಂಡ್ಕಲ್. “ನಾವು ಅಭ್ಯರ್ಥಿಗಳ ಆಯ್ಕೆಗೆ ನಾನಾ ಮಾನದಂಡಗಳನ್ನು ಅನುಸರಿಸುತ್ತೇವೆ. ಅದರಲ್ಲಿ ಅವರು ನೂರು ದಿನ ಮನೆಯೊಳಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಇರುವುದೂ ಕೂಡ ಒಂದು. ಹೊರಗಿನ ಜಗತ್ತಿನಲ್ಲಿ ಸೆಲೆಬ್ರೆಟಿಗಳನ್ನು ಜನ ಮನೆಯೊಳಗೆ ನೋಡಲು ಇಷ್ಟಪಡುತ್ತಾರೆ. ನನ್ನ ಪ್ರಕಾರ ಶಾಲೆಯ ಶಿಕ್ಷಕ ಕೂಡ ಸೆಲೆಬ್ರೆಟಿಯೇ. ಆದರೆ ಅಂತಹ ಕ್ಷೇತ್ರದಿಂದ ಬರುವವರು ನಮ್ಮ ಆಯ್ಕೆ ಅಲ್ಲ. ಸಿನೆಮಾ, ಕ್ರೀಡೆ ಮತ್ತು ಕಿರುತೆರೆ ಕ್ಷೇತ್ರಗಳಿಗೆ ಪ್ರಾಶಸ್ತ್ಯ ನೀಡುತ್ತೀವಿ,” ಎಂದವರು ಹೇಳುತ್ತಾರೆ. ಅದರ ಆಚೆಗೆ, ಬಿಗ್ ಬಾಸ್ ಕಾರ್ಯಕ್ರಮ ಸುಮಾರು ಮೂರು ತಿಂಗಳು ಪ್ರತಿ ದಿನದ ಲೆಕ್ಕದಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗುವ ಮೂಲಕ ಸ್ಪರ್ಧಿಗಳನ್ನು ಸೆಲೆಬ್ರಿಟಿಗಳನ್ನಾಗಿ ಮಾಡುತ್ತದೆ ಎಂಬುದು ಕೂಡ ಸತ್ಯ ಮತ್ತು ಸಹಜ ಕೂಡ.

ಉಳಿದಂತೆ, ಈ ಬಾರಿಯ ‘ಬಿಗ್ ಬಾಸ್ ಕನ್ನಡ’ದಲ್ಲಿ ನಡೆದಿದ್ದೇನು? ಎಂಬುದನ್ನು ಸಾಕಷ್ಟು ವರದಿಗಳು ಹೇಳುತ್ತವೆ; ಮನೆಯೊಳಗೆ ಏನೆಲ್ಲಾ ನಡೆಯಿತು ಎಂಬುದು ವಾಹಿನಿಯಲ್ಲಿ ಪ್ರಸಾರವಾಗಿದೆ; ಏನೆಲ್ಲಾ ನಡೆದಿರಬಹುದು ಎಂಬುದನ್ನು ಜನ ಅವರವರ ನೆಲೆಯಲ್ಲಿ ಊಹಿಸಿಕೊಂಡಿದ್ದಾರೆ. ಅದರಾಚೆಗೆ, ಸದ್ಯದಲ್ಲಿಯೇ ಇದೇ ಮಾದರಿಯ ಕಾರ್ಯಕ್ರಮ ತೆಲುಗು ಮತ್ತು ತಮಿಳು ಭಾ‍ಳೆಗಳಲ್ಲಿಯೂ ಪ್ರಸಾರವಾಗುವ ಸಾಧ್ಯತೆಗಳಿವೆ. ಹಿಂದೊಮ್ಮೆ ಯುರೋಪಿನಲ್ಲಿ ಹುಟ್ಟಿಕೊಂಡು, ಅಮೆರಿಕಾದ ಮಾರುಕಟ್ಟೆಯಲ್ಲಿ ಕೌಶಲ್ಯಗಳನ್ನು ತುಂಬಿಕೊಂಡು ಭಾರತಕ್ಕೆ ಕಾಲಿಟ್ಟ ಈ ಪರಿಕಲ್ಪನೆ ದಕ್ಷಿಣ ಭಾರತದಲ್ಲಿಯೂ ಸದ್ದು ಮಾಡಲಿದೆ.

“ಇನ್ನೊಬ್ಬರ ಅದರಲ್ಲೂ ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆ ಜನರಿಗಿರುವ ಕೆಟ್ಟ ಕುತೂಹಲವೇ ಈ ಕಾರ್ಯಕ್ರಮದ ಬಂಡವಾಳ. ಒಂದು ವೇಳೆ, ಈ ಕುತೂಹಲ ಕಳೆದು ಹೋದರೆ, ‘ಬಿಗ್ ಬಾಸ್’ ಖಂಡಿತಾ ‘ಬಿಗ್ ಬಾಸ್’ ಆಗಿ ಉಳಿಯುವುದಿಲ್ಲ,” ಎನ್ನುತ್ತಾರೆ ಅದರ ಭಾಗವಾಗಿದ್ದ ಪತ್ರಕರ್ತರೊಬ್ಬರು.

ಇಷ್ಟೆಲ್ಲಾ ಹೇಳಿದ ಮೇಲೆ, ಕಾರ್ಯಕ್ರಮದ ಬಗ್ಗೆ ಮಾಹಿತಿ ಇರುವವರು ಕೇಳಬಹುದಾದ ಪ್ರಶ್ನೆ, Question-mark-“ಯಾರು ಈ ಬಿಗ್ ಬಾಸ್?” ಎಂಬುದು. ನಮಗನ್ನಿಸುವ ಪ್ರಕಾರ, ‘ಬಿಗ್ ಬಾಸ್’ ಎಂದರೆ ಕಾರ್ಯಕ್ರಮದ ನಿರ್ದೇಶಕರು ಮತ್ತು ಆ ಪರಿಕಲ್ಪನೆಯನ್ನು ಮಾರಾಟ ಮಾಡುತ್ತಿರುವ ಎಂಡೊಮೊಲ್ ಎಂಬ ಅಂತರಾಷ್ಟ್ರೀಯ ಸಂಸ್ಥೆ, ಅಷ್ಟೆ.

Leave a comment

FOOT PRINT

Top