An unconventional News Portal.

ಹಿಂಸೆಗೆ ತಿರುಗಿದ ಜಲ್ಲಿಕಟ್ಟು ಪ್ರತಿಭಟನೆ: ಮಾಧ್ಯಮಗಳು ತೋರಿಸದ ತಮಿಳುನಾಡಿನ ಇನ್ನೊಂದು ಮುಖ

ಹಿಂಸೆಗೆ ತಿರುಗಿದ ಜಲ್ಲಿಕಟ್ಟು ಪ್ರತಿಭಟನೆ: ಮಾಧ್ಯಮಗಳು ತೋರಿಸದ ತಮಿಳುನಾಡಿನ ಇನ್ನೊಂದು ಮುಖ

ಕಳೆದ ಒಂದು ವಾರದಿಂದ ಚೆನ್ನೈನ ಮರೀನಾ ಬೀಚ್ ಸೇರಿದಂತೆ ತಮಿಳುನಾಡಿನ ಇತರೆ ಕಡೆಗಳಲ್ಲಿ ಜಲ್ಲುಕಟ್ಟು ನಿಷೇಧ ಮೇಲಿನ ತೆರವಿಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ಹಿಂಸೆಗೆ ತಿರುಗಿದೆ.

ವಿದ್ಯಾರ್ಥಿಗಳು ಮತ್ತು ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನೆ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ವರದಿಗಳ ಪ್ರಕಾರ ಮರೀನಾ ಬೀಚ್ ಪ್ರದೇಶದಲ್ಲಿ ಸುಮಾರು 15 ಸಾವಿರ ಪ್ರತಿಭಟನಾಕಾರರು ಸೇರಿದ್ದಾರೆ. ಸುಘ್ರೀವಾಜ್ಞೆ ನಂತರ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಪ್ರತಿಭಟನೆಯನ್ನು ಕೈ ಬಿಡುವಂತೆ ಮಾಡಿಕೊಂಡ ಮನವಿಗೆ ಅವರು ಸ್ಪಂದಿಸಲಿಲ್ಲ. ಈ ಸಮಯದಲ್ಲಿ ಅವರನ್ನು ಚದುರಿಸಲು ಪೊಲೀಸರು ಮುಂದಾದಾಗ ಪ್ರತಿಭಟನೆಗೆ ಹಿಂಸಾಚಾರಕ್ಕೆ ತಿರುಗಿತು.

ಸಮುದ್ರ ತೀರದ ಸಮೀಪದ ಪೊಲೀಸ್ ಠಾಣೆ ಮತ್ತು ಜೀಪುಗಳು ಬೆಂಕಿಗೆ ಆಹುತಿಯಾದವು. ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ ಪರಿಣಾಮ ಅನೇಕ ವಿದ್ಯಾರ್ಥಿಗಳಿಗೆ ಹೊಡೆತ ಬಿದ್ದಿದೆ. ಪ್ರತಿಪಕ್ಷ ಡಿಎಂಕೆ ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಪ್ರಹಾರ ಮಾಡಿದ್ದನ್ನು ಖಂಡಿಸಿದೆ.

ಹೀಗೆ, ಜಲ್ಲಿಕಟ್ಟು ಕ್ರೀಡೆಯ ಹೆಸರಿನಲ್ಲಿ ಕಳೆದ ಒಂದು ವಾರದ ಅಂತರದಲ್ಲಿ ತಮಿಳುನಾಡು ರಾಷ್ಟ್ರೀಯ ಸುದ್ದಿ ಕೇಂದ್ರಕ್ಕೆ ಬಂದಿದೆ. ಆರಂಭದಲ್ಲಿ ಪ್ರತಿಭಟನೆಗೆ ಸರಕಾರವೇ ಕುಮ್ಮಕ್ಕು ನೀಡಿತ್ತು ಎಂಬ ಆರೋಪಗಳು ಕೇಳಿ ಬರುತ್ತಿವೆ. ರಾಜ್ಯದ ಕೃಷಿ ಮತ್ತಿತರ ಬಿಕ್ಕಟ್ಟುಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಜಲ್ಲಿಕಟ್ಟು ವಿವಾದಕ್ಕೆ ನಾಂದಿ ಹಾಡಲಾಗಿತ್ತು ಎಂದು ತಮಿಳು ಮಾಧ್ಯಮಗಳು ವಿಶ್ಲೇಷಣೆ ಮಾಡುತ್ತಿವೆ.

ಕೃಷಿ ಬಿಕ್ಕಟ್ಟು ತೀವ್ರ: 

farmers-crisis-1

ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ತಮಿಳುನಾಡಿನ ಕೃಷಿ ಕ್ಷೇತ್ರ ಭೀಕರ ಬಿಕ್ಕಟ್ಟನ್ನು ಎದುರಿಸುತ್ತಿರುವ ವರ್ಷ ಇದು. ಈಗಾಗಲೇ ರಾಜ್ಯದ 32 ಜಿಲ್ಲೆಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಜನವರಿ 10ರಂದು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹೊರಡಿಸಿದ ಹೇಳಿಕೆಯಲ್ಲಿ ಕಳೆದ ಎರಡು ತಿಂಗಳ ಅಂತರದಲ್ಲಿ ಒಟ್ಟು 17 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.

ಆದರೆ, ರೈತ ಪರ ಸಂಘಟನೆಗಳು 60 ದಿನಗಳಲ್ಲಿ ಸಾವನ್ನಪ್ಪಿದ ರೈತರ ಸಂಖ್ಯೆ 144 ಮೀರಿದೆ ಎಂದು ಅಂಕಿ ಅಂಶಗಳನ್ನು ಮುಂದಿಡುತ್ತಿವೆ. ಇದರಲ್ಲಿ 50 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಉಳಿದವರು ಹೃದಯಾಘಾತ ಮತ್ತಿತರ ಕಾರಣಗಳಿಗಾಗಿ ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ಗಂಭೀರತೆ ಕಡೆಗೆ ತಿರುಗುತ್ತಿದ್ದು, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೂಡ ಹೊಸ ವರ್ಷದ ಆರಂಭದಲ್ಲಿ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು.

ಹೀಗೆ, ತಮಿಳುನಾಡಿನ ಕೃಷಿ ಬಿಕ್ಕಟ್ಟು ಶುರುವಾಗಿದ್ದು ಕಳೆದ 5 ವರ್ಷಗಳ ಹಿಂದೆ. 2016ರಲ್ಲಿ ಕಾವೇರಿ ಕಣಿವೆಯ ತಾಂಜಾವೂರು, ತಿರುವಾವೂರು, ನಾಗಪಟ್ಟನಂ, ಕುಟ್ಲೂರುಗಳಲ್ಲಿ ಕೃಷಿ ಭೂಮಿ ಬರಡು ಬಿದ್ದಿತ್ತು. 2016- 17ನೇ ಸಾಲಿನಲ್ಲಿ ಭತ್ತ ಬೆಳೆಯುವ ತಮಿಳುನಾಡಿನ ಕೃಷಿ ಭೂಮಿಯಲ್ಲಿ ಶೇ. 40ರಷ್ಟು ಕುಸಿತ ಕಂಡು ಬಂದಿದೆ.

  1. 55 ಲಕ್ಷ ಎಕರೆ ಭತ್ತದ ಗದ್ದೆಗಳಲ್ಲಿ ಕೇವಲ 17. 95 ಎಕರೆಯಲ್ಲಿ ಮಾತ್ರವೇ ರೈತರು ಕೃಷಿ ಮಾಡುತ್ತಿದ್ದಾರೆ. ಉಳಿದ ಧಾನ್ಯಗಳ ಕೃಷಿಯಲ್ಲಿಯೂ ಇದೇ ಕುಸಿತ ಕಂಡು ಬಂದಿದೆ ಎಂದು ‘ಕೃಷಿ ಸಂಶೋಧನಾ ಮಂಡಳಿ’ಯ ವರದಿ ಹೇಳುತ್ತಿದೆ.

ಒಂದು ಕಡೆ ಕೃಷಿ ಬಿಕ್ಕಟ್ಟು ತಾರಕಕ್ಕೇರುತ್ತಿದ್ದರು ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪಕ್ಕೆ ಗುರಿಯಾಗಿತ್ತು. “ಸರಕಾರ ಮಳೆಯ ಮಾರುತಗಳಿಗಾಗಿ ಕಾಯುತ್ತ ಕುಳಿತುಕೊಂಡಿತ್ತು. ಮಾರುತಗಳು ತರುವ ಮಳೆಯ ಮೂಲಕ ಬರದ ಸ್ಥಿತಿಯನ್ನು ಹೋಗಲಾಡಿಸಬಹುದು ಎಂಬುದು ಅದರ ನಂಬಿಕೆಯಾಗಿತ್ತು. ಆದರೆ, ಕಳೆದ ಮೂರು ಮಾರುತಗಳು ನಿರೀಕ್ಷಿತ ಮಳೆಯನ್ನು ತರಲಿಲ್ಲ. ಹೀಗಾಗಿ ಪರಿಸ್ಥಿತಿ ಬಿಗಡಾಯಿಸಿದೆ,” ಎಂದು ‘ದಿ ವೈರ್’ ವೆಬ್ ಸೈಟಿಗೆ ಕೋಯಂಬತ್ತೂರಿನ ಕೃಷಿ ವಿಜ್ಞಾನಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಕೃಷಿ ಪ್ಯಾಕೇಜ್ ಘೋಷಿಸಿದರಾದರೂ, ಅದು ಸಮಸ್ಯೆ ಪರಿಹಾರಕ್ಕೆ ಸಾಕಾಗಲಿಲ್ಲ ಎಂದು ರೈತರು ಆರೋಪಿಸಿದ್ದರು.

ಕೇಂದ್ರ ಸರಕಾರದ ಅನಾಣ್ಯೀಕರಣ ಘೋಷಣೆಯಾದ ನಂತರ ತಮಿಳುನಾಡಿನ ಬರದ ಸ್ಥಿತಿ ಕೆಟ್ಟ ಪರಿಸ್ಥಿತಿಯಿಂದ ಅತೀ ಕೆಟ್ಟ ಸ್ಥಿತಿಗೆ ಬಂದು ನಿಂತಿತು. ಇಲ್ಲಿನ ರೈತರ ಸಾಲ ಮೂಲವಾದ ಸಹಕಾರ ಸಂಘಗಳಲ್ಲಿ ಸಾಲ ಸಿಗದ ಪರಿಸ್ಥಿತಿ ನಿರ್ಮಾಣವಾಯಿತು. ಜತೆಗೆ, ಕೃಷಿ ಬೆಳೆಗಳ ಮಾರುಕಟ್ಟೆ ಕುಸಿದು ಬಿತ್ತು. ಹೀಗಾಗಿ, ರೈತರು ಖಾಸಗಿ ಲೇವಾದೇವಿಗಾರರಿಗೆ ಸಾಲಕ್ಕೆ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಅದರ ಜತೆಗೆ, ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಸರಕಾರ ರೈತರ ಸಮಸ್ಯೆ ಕಡೆಗೆ ನೋಡದೆ ಇದ್ದದ್ದು ಇನ್ನಷ್ಟು ಪರಿಸ್ಥಿತಿಯನ್ನು ಬಿಗಡಾಯಿಸಿತ್ತು. ಇದೀಗ ಜಲ್ಲಿಕಟ್ಟು ವಿವಾದ ಮೂಲಕ ರಾಜ್ಯದ ರೈತರ ನಿಜವಾದ ಸಮಸ್ಯೆ ಮುಖ್ಯವಾಹಿನಿಯಿಂದ ಮರೆಯಾಗಿದೆ. ಸ್ಥಳೀಯ ಮಟ್ಟದಲ್ಲಿ ರೈತರ ಆತ್ಮಹತ್ಯಗಳು ಇನ್ನಷ್ಟು ಹೆಚ್ಚುವ ಮುನ್ಸೂಚನೆ ಸಿಕ್ಕಿದೆ.

“ಜಯಲಲಿತಾ ನಂತರ ರಾಜ್ಯದಲ್ಲಿ ಜಯಲಲಿತಾ ನಂತರ ಪ್ರಬಲ ನಾಯಕತ್ವ ಇಲ್ಲವಾಗಿದೆ. ಸರಕಾರದ ಮಟ್ಟದಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಲ್ಲಿಕಟ್ಟು ವಿಚಾರದಲ್ಲಿಯೂ ಇದನ್ನು ಕಾಣಬಹುದು. ಆರಂಭದಲ್ಲಿ ಸರಕಾರವೇ ಎಲ್ಲಾ ಸಮಸ್ಯೆಗಳಿಂದ ಗಮನವನ್ನು ಬೇರೆ ಕಡೆ ತಿರುಗಿಸಲು ಜಲ್ಲಿಕಟ್ಟು ಪ್ರತಿಭಟನಾಕಾರರಿಗೆ ಅನುಕೂಲ ಮಾಡಿಕೊಟ್ಟಿತ್ತು. ಅದರ ಜತೆಗೆ ಪ್ರತಿ ಪಕ್ಷ ಡಿಎಂಕೆ ಕೂಡ ಅಖಾಡಕ್ಕೆ ಇಳಿಯಿತು. ಒಂದು ಹಂತದಲ್ಲಿ ಪ್ರತಿಭಟನೆ ಹತೋಟಿ ಮೀರಿದ ನಂತರ ಲಾಠಿ ಚಾರ್ಜ್ ಮಾಡಲು ಮುಂದಾಯಿತು. ಇದು ಇನ್ನಷ್ಟು ಸಮಸ್ಯೆಯನ್ನು ಬಿಗಡಾಯಿಸಿತು. ಈ ಸಮಯದಲ್ಲಿ, ತಮಿಳುನಾಡಿನ ಹಳ್ಳಿಗಳಲ್ಲಿ ರೈತರು ಸಾಲ ಸಿಗದೆ, ಕೈ ಸಾಲದ ಮೂಲಕ ಇನ್ನಷ್ಟು ಹೊರೆಯನ್ನು ಹೊತ್ತುಕೊಳ್ಳುವಂತಾಗಿದೆ. ಮುಂದಿನ ದಿನಗಳಲ್ಲಿ ತಮಿಳುನಾಡಿನ ಕೃಷಿ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಲಿದೆ,” ಎನ್ನುತ್ತಾರೆ ತಮಿಳು ದಿನ ಪತ್ರಿಕೆಯ ವರದಿಗಾರರೊಬ್ಬರು.

ಇದು ಸದ್ಯದ ತಮಿಳುನಾಡಿನ ತಳಮಟ್ಟದ ಪರಿಸ್ಥಿತಿ. ಆದರೆ, ಜಲ್ಲಿಕಟ್ಟು ಮತ್ತು ಅದರ ಸುತ್ತ ಎದ್ದಿರುವ ಪ್ರತಿಭಟನೆಯ ಜನಪ್ರಿಯ ಮಾದರಿಯ ಮುಂದೆ ವಾಸ್ತವದ ಅಂಶಗಳು ಕಣ್ಮರೆಯಾಗಿವೆ.

ಚಿತ್ರ ಕೃಪೆ: ಇಂಡಿಯನ್ ಎಕ್ಸ್’ಪ್ರೆಸ್.

 

Leave a comment

FOOT PRINT

Top