An unconventional News Portal.

ಇರೋಮ್ ಶರ್ಮಿಳಾ ಸಂದರ್ಶನ: ‘ಜನ ಬದಲಾವಣೆ ಬಯಸುತ್ತಾರೆ; ಆದರೆ ಪಾಲ್ಗೊಳ್ಳುವಿಕೆ ಕಡಿಮೆ’

ಇರೋಮ್ ಶರ್ಮಿಳಾ ಸಂದರ್ಶನ: ‘ಜನ ಬದಲಾವಣೆ ಬಯಸುತ್ತಾರೆ; ಆದರೆ ಪಾಲ್ಗೊಳ್ಳುವಿಕೆ ಕಡಿಮೆ’

ಸುಮಾರು 16 ವರ್ಷಗಳ ಕಾಲ ಸೇನಾ ವಿಶೇಷಾಧಿಕಾರ ಕಾಯ್ದೆಯನ್ನು ವಿರೋಧಿಸಿ ಸತ್ಯಾಗ್ರಹ ನಡೆಸಿದ್ದವರು ಇರೋಮ್ ಶರ್ಮಿಳಾ. ಮುಂದಿನ ತಿಂಗಳು ಮಣಿಪುರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅವರ ಸ್ವತಂತ್ರ ಪಕ್ಷ ‘ಪೀಪಲ್ ರಿಸರ್ಜೆನ್ಸ್ ಅಂಡ್ ಜಸ್ಟಿಸ್ ಅಲಯನ್ಸ್ (PRJA) ಪಕ್ಷ ಸ್ಪರ್ಧಿಸುತ್ತಿದೆ.

ಮುಖ್ಯಮಂತ್ರಿ  ಒ. ಇಬೋಬಿ ಸಿಂಗ್‌ ವಿರುದ್ಧ ಇರೋಮ್ ಶರ್ಮಿಳಾ ಅಖಾಡಕ್ಕೆ ಇಳಿಯುವ ಪ್ರಕಟಣೆ ಹೊರಬಿದ್ದಿದೆ. ಜತೆಗೆ, ಮಣಿಪುರ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರಿಗೆ ಪಕ್ಷ ಟಿಕೆಟ್ ನೀಡಿದೆ. ವಿಶೇಷ ಅಂದರೆ, ಮುಂದಿನ ಅರ್ಧ ಶತಮಾನದ ಯೋಜನೆ ಹಾಕಿಕೊಂಡಿರುವ ಪಿಆರ್ಜೆಎ ಜತೆ ವಿಶ್ವಸಂಸ್ಥೆ ಸೇರಿದಂತೆ ಮತ್ತಿತರ ಪ್ರತಿಷ್ಠಿತ ಕೇಂದ್ರಗಳಲ್ಲಿ ಕೆಲಸ ಮಾಡಿದ ವಿದ್ಯಾವಂತ ಯುವಕ ಯುವತಿಯರು ಕೈ ಜೋಡಿಸಿದ್ದಾರೆ. ಮಣಿಪುರದ ಸಾಂಪ್ರದಾಯಿಕ ಸಂಸ್ಕೃತಿ ಮೀತೇಯಿಯನ್ನು ಪುನರ್ ಸ್ಥಾಪನೆ ಮಾಡಬೇಕು ಎಂದು ಹೊರಟಿದ್ದಾರೆ.

ಈ ಸಮಯದಲ್ಲಿ, ಪಕ್ಷವನ್ನು ಮುನ್ನಡೆಸುತ್ತಿರುವ ಒಂದು ಕಾಲದ ಸತ್ಯಾಗ್ರಹಿ ಇರೋಮ್ ಶರ್ಮಿಳಾ ಜತೆ ‘ಸಮಾಚಾರ’ ನಡೆಸಿದ ಸಂದರ್ಶನ ಇಲ್ಲಿದೆ. ಇದು ಮಣಿಪುರದ ಭವಿಷ್ಯ, ಸೇನಾ ವಿಶೇಷಾಧಿಕಾರ ಕಾಯ್ದೆ ಮತ್ತು ಚುನಾವಣಾ ಸಿದ್ಧತೆಗಳ ಕುರಿತು ಶರ್ಮಿಳಾ ಅವರ ಅಭಿಪ್ರಾಯಗಳ ಮೇಲೆ ಬೆಳಕು ಚೆಲ್ಲುತ್ತಿದೆ. ಇದು ಕನ್ನಡ ಮಾಧ್ಯಮವೊಂದಕ್ಕೆ ಇರೋಮ್ ಶರ್ಮಿಳಾ ನೀಡಿದ ಮೊದಲ ಸಂದರ್ಶನ ಎಂಬುದು ಗಮನಾರ್ಹ.

ಇಂಪಾಲದ ಸಿಖ್ ಗುರುದ್ವಾರದಲ್ಲಿ ಶರ್ಮಿಳಾ ಪ್ರಚಾರ. ಮಣಿಪುರದಲ್ಲಿ ಸಿಖ್ ಅತ್ಯಂತ ಅಲ್ಪಸಂಖ್ಯಾತ ಸಮುದಾಯ.

ಇಂಪಾಲದ ಸಿಖ್ ಗುರುದ್ವಾರದಲ್ಲಿ ಶರ್ಮಿಳಾ ಪ್ರಚಾರ. ಮಣಿಪುರದಲ್ಲಿ ಸಿಖ್ ಅತ್ಯಂತ ಅಲ್ಪಸಂಖ್ಯಾತ ಸಮುದಾಯ.


ಸಮಾಚಾರ: ನೀವೀಗ ಮಣಿಪುರದಲ್ಲಿ ಆರಂಭಿಸಿರುವ ರಾಜಕೀಯ ಪ್ರಯೋಗವನ್ನು ಹೇಗೆ ನೋಡುತ್ತಿದ್ದೀರಾ? ಅಧಿಕಾರ ರಾಜಕಾರಣಕ್ಕೆ ಪರ್ಯಾಯ ಅಂತನಾ? ಇಲ್ಲಾ, ಬರೀ ಪ್ರತಿರೋಧಕ್ಕೆ ಸೀಮಿತಾನಾ?

ಶರ್ಮಿಳಾ: ರಾಜಕೀಯ ಕ್ರಾಂತಿಗಾಗಿ, ಸ್ವಂತ ನೆಲೆಯ ಮೇಲೆ ಸ್ವಾವಲಂಭಿ ಸರಕಾರವನ್ನು ನಿರ್ಮಾಣ ಮಾಡಲಿಕ್ಕಾಗಿ ಹುಟ್ಟು ಹಾಕಿರುವ ರಾಜಕೀಯ ಪಕ್ಷ PRJA. ಸದ್ಯ ನೆಲೆ ಕಳೆದುಕೊಂಡಿರುವ ಜನರ ನಿಜವಾದ ದನಿಯನ್ನು ಮುಂದೆ ತರಬೇಕಿದೆ. ಇವತ್ತು ಹಣ ಬಲ ಹಾಗೂ ತೋಳ್ಬಲಗಳ ಮೂಲಕ ಸಾಮಾಜಿಕ ಸಂಸ್ಕೃತಿಯ ಭಾಗವೇ ಆಗಿ ಹೋಗಿರುವ ಅಧಿಕಾರ ರಾಜಕಾರಣ ಸೃಷ್ಟಿಸಿರುವ ಭಯಬೀತ ವಾತಾವರಣಕ್ಕೆ ಪರ್ಯಾಯ ಪ್ರತಿರೋಧವನ್ನು ನಾವು ಕಟ್ಟುತ್ತಿದ್ದೇವೆ. ಸದ್ಯದ ರಾಜಕಾರಣ, ನಾಯಕತ್ವದ ಗುಣ ಇರುವವರನ್ನು ರಾಜಕೀಯಕ್ಕೆ ಬರದಂತೆ ತಡೆಯುತ್ತಿದೆ. ಈ ಸಮಯದಲ್ಲಿ PRJA ಅಂತಹ ಭಯ ಮೂಡಿಸುವ ವಾತಾವರಣಕ್ಕೆ ತಡೆಯೊಡ್ಡಿ, ಜನರ ಪರವಾಗಿ ಕೆಲಸ ಮಾಡುವ ನಾಯಕತ್ವವನ್ನು ಬೆಳೆಸಲು ಪ್ರಯತ್ನಿಸುತ್ತಿದೆ. ನಮ್ಮಲ್ಲಿನ ರಾಜಕಾರಣಿಗಳು ಶಸಸ್ತ್ರ ಪಡೆಗಳಿಗಿರುವ ವಿಶೇಷ ಅಧಿಕಾರವನ್ನು ಪ್ರಶ್ನೆ ಮಾಡುತ್ತಿಲ್ಲ. ಹಾಗೆಯೇ ಅವರಿಗೆ ವಾಸ್ತವದ ಸಮಸ್ಯೆಗಳ ಬಗ್ಗೆ ಆಸಕ್ತಿಯೂ ಇಲ್ಲ. ಅವರು ಅಧಿಕಾರಕ್ಕಾಗಿ ಹಪಾಹಪಿಸುತ್ತಿದ್ದಾರೆ ಮತ್ತು ವೈಯಕ್ತಿಕ ಲಾಭಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ನಾವು ರಾಜಕೀಯ ಪರ್ಯಾಯವನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದೇವೆ.

ಸಮಾಚಾರ: ನಮಗಿರುವ ಮಾಹಿತಿ ಪ್ರಕಾರ, ಮಣಿಪುರದ 60 ವಿಧಾನಸಭಾ ಕ್ಷೇತ್ರಗಳ ಪೈಕಿ ನಿಮ್ಮ ಪಕ್ಷ ಕೇವಲ 5 ಕಡೆಗಳಲ್ಲಿ ಮಾತ್ರವೇ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿದೆ. ಯಾಕೆ?

ಶರ್ಮಿಳಾ: ಜನರಿಗೆ ಬದಲಾವಣೆ ಬೇಕು; ಆದರೆ ಬಹುತೇಕ ಸಮಯದಲ್ಲಿ ಅವರು ಬದಲಾವಣೆಯನ್ನು ತರುವ ಪ್ರಯತ್ನದಲ್ಲಿ ಮಾತ್ರ ಪಾಲ್ಗೊಳ್ಳುವುದಿಲ್ಲ. ನಮ್ಮ ಪಕ್ಷದ ಟಿಕೆಟ್ಗಾಗಿ ಹಲವು ಆಸಕ್ತ ಅಭ್ಯರ್ಥಿಗಳು ಸಂಪರ್ಕ ಮಾಡಿದ್ದರು. ಆದರೆ, ನಾವು ಮಾತ್ರ ಐವರನ್ನು ಚುನಾವಣಾ ಅಖಾಡಕ್ಕೆ ಇಳಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ. ನಾವೀಗ ಆರಂಭಿಸಿರುವ ಕ್ರಾಂತಿಯ ಬಗ್ಗೆ ಅವರಲ್ಲಿನ ಹುಮ್ಮಸ್ಸು, ತ್ಯಾಗ ಮನೋಭಾವ, ಇಚ್ಚಾಶಕ್ತಿಗಳನ್ನು ಗಮನಿಸಿ ಆಯ್ಕೆ ಮಾಡಿದ್ದೇವೆ, ಅಷ್ಟೆ.

ಸಮಾಚಾರ: ಪಿಆರ್ಜೆಎ ಪಕ್ಷ ಮಣಿಪುರ ಮುಂದಿನ 50 ವರ್ಷಗಳ ಯೋಜನೆ ಇಟ್ಟುಕೊಂಡು ಕಾರ್ಯಾರಂಭ ಮಾಡಿದೆ ಎಂದು ಮೂಲಗಳು ಹೇಳುತ್ತಿವೆ. ಈ ಬಗ್ಗೆ ಸ್ವಲ್ಪ ವಿವರಿಸಿ..

ಶರ್ಮಿಳಾ: ತತ್ವ ಮತ್ತು ಸಿದ್ಧಾಂತಗಳನ್ನು ಒಳಗೊಂಡ ಪಕ್ಷ ಮಣಿಪುರದಲ್ಲಿ ಗಟ್ಟಿಯಾಗಿ ತಳವೂರಬೇಕು, ಅದಕ್ಕೆ ಎಷ್ಟು ವರ್ಷಗಳು ತೆಗೆದುಕೊಳ್ಳುತ್ತವೆ ಎಂದು ಈಗಲೇ ಹೇಳುವುದು ಕಷ್ಟ. ಪಿಆರ್ಜೆ ಮತ್ತು ಜನರ ನಡುವಿನ ಸಂಬಂಧವನ್ನು ಈ ಕಾಲ ಅವಲಂಬಿಸಿದೆ.

ಸಮಾಚಾರ: ಹಿಂದೆ ನೀವು ಸತ್ಯಾಗ್ರಹಿಯಾಗಿದ್ದವರು. ಈಗ ಪೂರ್ಣಾವಧಿ ರಾಜಕಾರಣಿಯಾಗಿದ್ದೀರ. ವ್ಯತ್ಯಾಸ ಏನಾದರೂ ಕಾಣಿಸುತ್ತಿದೆಯಾ?

ಶರ್ಮಿಳಾ: ಹಿಂದೆ ನಾನು ಭಾವನೆಗಳ ಜತೆ ಬದುಕುತ್ತಿದ್ದೆ. ಈಗ ಜನರ ನಡುವೆ ಚಟುವಟಿಕೆ ನಡೆಸುತ್ತಿದ್ದೇನೆ. ಅಷ್ಟೆ ವ್ಯತ್ಯಾಸ.

 

ಸಮಾಚಾರ: ಬಿಜೆಪಿ ಹೇಳುತ್ತಿರುವ ರಾಷ್ಟ್ರೀಯತೆಗೂ ಮಣಿಪುರದ ಮೀತೇಯಿ ಸಂಪ್ರದಾಯಕ್ಕೂ ವ್ಯತ್ಯಾಸ ಇದೆಯಾ? ಇದ್ದರೆ ಹೇಗೆ? 

ಶರ್ಮಿಳಾ: ನಿಜವಾದ ಮೀತೇಯಿ ಸಂಸ್ಕೃತಿಗೂ ಬಿಜೆಪಿಯ ರಾಷ್ಟ್ರೀಯತೆಗೂ ಸಂಬಂಧವೇ ಇಲ್ಲ. ನಮ್ಮಲ್ಲಿನ ಬುಡಕಟ್ಟು ಹಾಗೂ ಸಂಪ್ರದಾಯಗಳ ನಡುವೆ ಸಹಜೀವನವನ್ನು ಸಹಸ್ರಾರು ವರ್ಷಗಳವರೆಗೆ ಕಾಯ್ದುಕೊಂಡು ಬಂದಿದ್ದು ಮೀತೇಯಿ. ಬಿಜೆಪಿಯ ರಾಷ್ಟ್ರೀಯತೆ ಎಂಬುದು ಇತ್ತೀಚಿನ ಪರಿಕಲ್ಪನೆ ಮತ್ತು ಮೀತೇಯಿ ಸಂಸ್ಕೃತಿ ಅದರಿಂದಾಗಿ ಅಪಾಯದಲ್ಲಿದೆ ಅನ್ನಿಸುತ್ತದೆ.

ಸಮಾಚಾರ: ಸೇನಾಪಡೆಗಳಿಗೆ ಮಣಿಪುರದಲ್ಲಿ ನೀಡುರುವ ವಿಶೇಷಾಧಿಕಾರವನ್ನು ವಿರೋಧಿಸಿಕೊಂಡು ಬಂದವರು. ಈಗ ರಾಜಕಾರಣಿಯಾಗಿ ಅದರ ಬಗ್ಗೆ ನಿಮ್ಮ ನಿಲುವೇನು?

ಶರ್ಮಿಳಾ: ನಾನು ಈಗಲೂ ಸೇನಾ ವಿಶೇಷಾಧಿಕಾರವನ್ನು ತೆಗೆದು ಹಾಕುವುದು ಹೇಗೆ ಎಂಬ ಬಗ್ಗೆ ಆಲೋಚನೆ ಮಾಡುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ನಾನು ಮನೆಮಾತಾಗಿದ್ದು ನಾನು ದಮನಕಾರಿಯಾದ ಕಾಯ್ದೆಯನ್ನು ವಿರೋಧಿಸಿದೆ ಎಂಬ ಕಾರಣಕ್ಕಾಗಿ. ಏಕಾಂಗಿಯಾಗಿ, ಎಲ್ಲೋ ದೂರದಲ್ಲಿ ಅದನ್ನು ವಿರೋಧಿಸುತ್ತಿದ್ದ ನನ್ನ ಧ್ವನಿ ಇನ್ನು ಮುಂದೆ ದೇಶದ ಸಂಸತ್ತಿನಲ್ಲಿ ಮೊಳಗಿಸಲು ಈಗ ಅನುಕೂಲವಾಗಲಿದೆ.

ಸಮಾಚಾರ: ಕೊನೆಯದಾಗಿ, ನೀವು ಮದುವೆಯಾಗುತ್ತೀನಿ ಎಂದು ಪ್ರಕಟಿಸಿದ್ದಿರಿ. ನಿಮ್ಮ ವೈಯಕ್ತಿಕ ಬದುಕಿನಲ್ಲಿ ಬರುವ ಈ ಬದಲಾವಣೆಯನ್ನು ನಿಮ್ಮ ಸುತ್ತಲಿನ ಜನ ಹೇಗೆ ಸ್ವೀಕರಿಸುತ್ತಾರೆ ಅನ್ನಿಸುತ್ತದೆ?

ಶರ್ಮಿಳಾ: ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ವೈಯಕ್ತಿಕ ಜೀವನ ಇದ್ದೇ ಇರುತ್ತದೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಜನ ಆಲೋಚನೆ ಮಾಡುವ ರೀತಿ ಬದಲಾಗಬೇಕೆಂದು ನಾನು ಬಯಸುತ್ತೇನೆ.

Leave a comment

FOOT PRINT

Top