An unconventional News Portal.

ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಪ್ರಕರಣ: ಸಾವಿನ ಮನೆಯಲ್ಲಿ ‘ಕ್ಯಾಂಪಸ್ ರಾಜಕೀಯ’

ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಪ್ರಕರಣ: ಸಾವಿನ ಮನೆಯಲ್ಲಿ ‘ಕ್ಯಾಂಪಸ್ ರಾಜಕೀಯ’

ಮಲೆನಾಡು ಭಾಗದ ಕಾಲೇಜೊಂದರ ‘ಕ್ಯಾಂಪಸ್ ರಾಜಕೀಯ’ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಮೂಲಕ ಈ ಭಾಗದಲ್ಲಿ ರಾಜಕೀಯ ಮೇಲಾಟ ಸೃಷ್ಟಿಸಿದೆ.

ಶೃಂಗೇರಿಯ ಜೆಸಿಬಿಎಂ ಕಾಲೇಜು ಮತ್ತು ನಿವೃತ್ತ ಯೋಧದ ಸಂಘ ಜನವರಿ ಮೊದಲ ವಾರದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮ ಮತ್ತು ನಂತರ ನಡೆದ ಘಟನಾವಳಿಗಳು ಆಸಹ್ಯಕರ ತಿರುವು ಪಡೆದುಕೊಂಡಿವೆ. ‘ಸಾವಿನ ಮನೆಯಲ್ಲಿ ಗಳ ಹಿರಿಯುವ’ ಕೆಲಸ ಶುರುವಾಗಿದೆ. ಜತೆಗೆ, ಕಾಲೇಜಿನ ಕ್ಯಾಂಪಸ್ಗಳಲ್ಲಿ ನಡೆಯುವ ವಿದ್ಯಾರ್ಥಿ ಸಂಘಟನೆಗಳ ಚಟುವಟಿಕೆಗಳು ಮತ್ತು ಅವುಗಳು ಬೀರುವ ಕೆಟ್ಟ ಪರಿಣಾಮಗಳು ಹೇಗಿರುತ್ತವೆ ಎಂಬುದಕ್ಕೆ ಸಾಕ್ಷಿಯೊಂದು ಲಭ್ಯವಾಗಿದೆ.

ನಡೆದಿದ್ದೇನು?:

campus-politics-abhishekಶೃಂಗೇರಿಯ ಜೆಸಿಬಿಎಂ ಕಾಲೇಜಿನ ಎನ್. ಸಿ. ಸಿ ಘಟಕವು ಜನವರಿ 7ರಂದು ‘ಯೋಧ ನಮನ’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದಕ್ಕೆ ‘ನಮೋ ಬ್ರಿಗೇಡ್’ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣಕಾರರಾಗಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಸೂಲಿಬೆಲೆ ಅಹ್ವಾನಿಸಿರುವುದನ್ನು ಕಾಂಗ್ರೆಸ್ ಪಕ್ಷದ ಮುಖವಾಣಿ ವಿದ್ಯಾರ್ಥಿ ಸಂಘಟನೆ ಎನ್ಎಸ್ಯುಐ ವಿರೋಧಿಸಿತ್ತು. “ಸೈನಿಕರ ಹೆಸರಿನಲ್ಲಿ ಕೋಮು ದ್ವೇಷವನ್ನು ಹರಡುವ ಭಾಷಣಕಾರನನ್ನು ಕಾಲೇಜಿನ ಕಾರ್ಯಕ್ರಮಕ್ಕೆ ಕರೆದಿದ್ದು ತಪ್ಪು,’ ಎಂದು ಎನ್ಎಸ್’ಯುಐ ಹಾಗೂ ಮತ್ತಿತರ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದವು.

“ಹೀಗಾಗಿ ನಾವು ಚಕ್ರವರ್ತಿಯವರನ್ನು ಹೊರಗಿಟ್ಟು ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆವು. ಅವರು ಕಾರ್ಯಕ್ರಮಕ್ಕೆ ಬರಲಿಲ್ಲ. ಇನ್ನೊಬ್ಬರು ಅತಿಥಿ ಯೋಧ ನಮನದಲ್ಲಿ ಭಾಗವಹಿಸಿದರು. ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು,” ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲರಾದ ದೇವಿದಾಸ್ ನಾಯ್ಕ.

ಕಾರ್ಯಕ್ರಮ ಆಯೋಜನೆಯಾಗಿದ್ದ ಮರುದಿನ ಅಂದರೆ ಜನವರಿ 8ರಂದು ದ್ವಿತೀಯ ಬಿ.ಕಾಂ ಓದುತ್ತಿದ್ದ ಎನ್ಎಸ್’ಯುಐ ಸದಸ್ಯ ಅಂಜನ್ ಕೆ. ಪಿ ಶೌಚಾಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಎಬಿವಿಪಿ ಸದಸ್ಯರು ಅವಾಚ್ಯವಾಗಿ ನಿಂದಿಸಿ ಕೈಮಾಡಿದರು ಎನ್ನಲಾಗಿದೆ. ಅಂಜನ್ ತನ್ನ ಮೇಲೆರಗಿದ ವಿದ್ಯಾರ್ಥಿಗಳ ವಿರುದ್ಧ ಜನವರಿ 9ರಂದು ಶೃಂಗೇರಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದ. “ಕಾಲೇಜಿನಲ್ಲಿ ನಡೆದ ಹೊಡೆದಾಟದ ದೂರಿನ ಆಧಾರದಲ್ಲಿ ಅಭಿಷೇಕ್ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡೆವು,” ಎಂದು ಶೃಂಗೇರಿ ಠಾಣೆಯ ಮೂಲಗಳು ಮಾಹಿತಿ ನೀಡುತ್ತವೆ.

ಅಭಿಷೇಕ್ ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದ. ಆತ ಮತ್ತು ಇತರ ವಿದ್ಯಾರ್ಥಿಗಳ ಮೇಲೆ ಐಪಿಸಿ ಸೆಕ್ಷನ್ 143, 147, 321, 504, 506, 341 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಂತೆಯೇ ಕುಟುಂಬದಿಂದ ಬರಬಹುದಾದ ಪ್ರತಿಕ್ರಿಯೆಯ ಬಗ್ಗೆ ವಿದ್ಯಾರ್ಥಿಗಳು ಚಿಂತಿತರಾಗಿದ್ದರು. ಅದರಲ್ಲೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಕಳಸಪ್ಪ ಗೌಡರ ಮಗನಾಗಿದ್ದ ತೃತೀಯ ಬಿ.ಕಾಂನ ಅಭಿಷೇಕ್ ಆತಂಕಕ್ಕೊಳಗಾದ್ದ. ಕಾಲೇಜಿನಲ್ಲಿ ಹೊಡೆದಾಟ ಮಾಡಲು ಹೋಗಿ ಕೇಸು ದಾಖಲುಗೊಂಡ ಬಗ್ಗೆ ತಂದೆಗೆ ವಿವರಿಸಲಾಗದೆ ಜನವರಿ 10ರಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

 

ಇದೀಗ ಅಭಿಷೇಕ್ ತಂದೆ ಕಳಸಪ್ಪ ಗೌಡರು ಕಾಲೇಜಿನ ಆಡಳಿತ ಮಂಡಳಿ, ಪ್ರಿನ್ಸಿಪಾಲ್ ದೇವಿದಾಸ್ ನಾಯ್ಕ್ ಮತ್ತು ಮಗನ ವಿರುದ್ಧ ದೂರು ನೀಡಿದ ಎನ್ಎಸ್’ಯುಐ ವಿದ್ಯಾರ್ಥಿಗಳ ವಿರುದ್ಧವೇ ದೂರು ನೀಡಿದ್ದು ಅವರೆಲ್ಲರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ. ಐಪಿಸಿ 306 ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.

ಹೆದರಿಕೆಯೇ ಆತ್ಮಹತ್ಯೆಯ ಮೂಲ:

ಅಭಿಷೇಕ್ ಬರೆದಿಟ್ಟ ಡೆತ್ ನೋಟ್.

ಅಭಿಷೇಕ್ ಬರೆದಿಟ್ಟ ಡೆತ್ ನೋಟ್.

ಡೆತ್ ನೋಟಿನಲ್ಲಿ ಅಭಿಷೇಕ್, “ಅಪ್ಪ ನಾನು ಚೆನ್ನಾಗಿ ಓದುತ್ತಿದ್ದೆ. ಒಳ್ಳೆ ಕೆಲಸಕ್ಕೂ ಸೇರುತ್ತಿದ್ದೆ. ನಿಮ್ಮನ್ನು ಚೆನ್ನಾಗಿ ನೋಡ್ಕೊತ್ತಿದ್ದೆ. ಆದರೆ ಎಫ್ಐಆರ್ ಹಾಕಿದ ಮೇಲೆ ಯಾವ ಕೆಲಸವೂ ಸಿಗಲ್ಲ,” ಎಂದು ಬರೆದಿಟ್ಟಿದ್ದಾನೆ.

ಈ ಮೂಲಕ ಆತ ‘ಪ್ರಥಮ ಮಾಹಿತಿ ವರದಿ’ ದಾಖಲಾದ ಕಾರಣಕ್ಕೆ ತನಗೆ ಕೆಲಸ ಸಿಗುವುದಿಲ್ಲ ಎಂದು ಆತಂಕಗೊಂಡಿರುವುದು ಸ್ಪಷ್ಟವಾಗಿದೆ. ಸಾಮಾನ್ಯ ಎಫ್ಐಆರ್ ದಾಖಲಾದ ಮಾತ್ರಕ್ಕೆ ಭವಿಷ್ಯವೇ ಮುಗಿದು ಹೋಯಿತು ಎಂದು ಆತ ಅಂದುಕೊಂಡಿದ್ದಾನೆ. “ಆತ ದೂರು ದಾಖಲಾಗಿದ್ದಕ್ಕೆ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ… ದುರಾದೃಷ್ಟಕರ,” ಎನ್ನುತ್ತಾರೆ ಪ್ರಾಂಶುಪಾಲರಾದ ದೇವಿದಾಸ್ ನಾಯ್ಕ್. ಸಾವಿಗೆ ಶರಣಾದ ಅಭಿಷೇಕ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ಕೊರತೆ ಇರುವುದು ಎದ್ದು ಕಾಣಿಸುತ್ತಿದೆ.

ಆದರೆ ಇಂಥಹದ್ದೊಂದು ಪ್ರಕರಣ ನಡೆದಾಗ, ಆತನನ್ನು ಹೋರಾಟಕ್ಕಿಳಿಸಿದ ಸಂಘಟನೆಯಾದರೂ ಧೈರ್ಯ ತುಂಬಬಹುದಿತ್ತು. ನಾವು ಆ ಕೆಲಸ ಮಾಡಿದ್ದೇವೆ ಎನ್ನುತ್ತಾರೆ ಎಬಿವಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದಿರೆ.

“ಖಂಡಿತವಾಗಿಯೂ ಅರಿವು ಮೂಡಿಸಬೇಕಾದದ್ದು ಸಂಘಟನೆಯ ಕೆಲಸ. ನಾವು ಆ ಕೆಲಸ ಮಾಡಿದ್ದೇವೆ. ಆದರೆ ಅವನಿಗೆ ಎನ್ಎಸ್’ಯುಐವರು ಫೋನ್ ಮಾಡಿ ಗೇಲಿ ಮಾಡಿದ್ದಾರೆ; ನಿನ್ನಿಂದ ಕಾರ್ಯಕ್ರಮ ಮಾಡಲಿಕ್ಕಾಯ್ತಾ? ನಿನ್ನ ಮೇಲೆ ದೂರು ದಾಖಲಾಯಿತು ಎಂದೆಲ್ಲಾ ತಮಾಷೆ ಮಾಡಿದ್ದಾರೆ. ಇದರಿಂದ ನನಗೆ ಕಾರ್ಯಕ್ರಮ ಮಾಡಲು ಆಗಲಿಲ್ಲವಲ್ಲಾ ಅಂತ ಆತ ಮನನೊಂದು ಆತ್ಮಹತ್ಯೆಗೆ ಶರಣಾದ,” ಎಂಬುದು ವಿನಯ್ ಹೇಳಿಕೆ.

ಸದ್ಯ ಇದೇ ವಿಚಾರವಾಗಿ ಎಬಿವಿಪಿ ಗುರುವಾರ ಶೃಂಗೇರಿಯಲ್ಲಿ ಹಾಗೂ ರಾಜ್ಯದ ನಾನಾ ಕಡೆ ಪ್ರತಿಭಟನೆ ನಡೆಸುತ್ತಿದೆ. ಈ ಮೂಲಕ ವಿದ್ಯಾರ್ಥಿಯೊಬ್ಬನ ಸಾವಿನಲ್ಲಿಯೂ ಭಾವನಾತ್ಮಕ ರಾಜಕೀಯ ಮಾಡಲು ಮುಂದಾಗಿದೆ.

ಇನ್ನೊಂದೆಡೆ ಎನ್ಎಸ್’ಐ ಕೂಡ ಅಭಿಷೇಕ್ ಸಾವಿಗೆ ಸೂಲಿಬೆಲೆ ಕಾರಣ ಎಂದು ಬೊಟ್ಟುಮಾಡುತ್ತಿದೆ. “ಈ ಪ್ರಕರಣಕ್ಕೆ ಭಾಷಣವನ್ನೇ ಬಂಡವಾಳ ಮಾಡಿಕೊಂಡಿರುವ ಸೂಲಿಬೆಲೆ ಮತ್ತು ಕಾಲೇಜಿನ ಆಡಳಿತ ಮಂಡಳಿಯೇ ಕಾರಣ,” ಎನ್ನುತ್ತಾರೆ ಸಂಘಟನೆಯ ರಾಜ್ಯಾಧ್ಯಕ್ಷ ಮಂಜುನಾಥ್.

ಕ್ಯಾಂಪಸ್ ರಾಜಕೀಯ:

campus-politics-poster

“ಇಲ್ಲಿ (ಜೆಸಿಬಿಎಂ ಕಾಲೇಜಿನ ಒಳಗೆ) ನಡೆಯುವ ಬೆಳವಣಿಗೆಗಳಿಗೆ ಹೊರಗಿನವರ ಕುಮ್ಮಕ್ಕು ಇದೆ. ಕಳೆದ ಜುಲೈ ತಿಂಗಳಿನಲ್ಲಿ ಈ ಕಾಲೇಜಿಗೆ ಬಂದೆ. ನಂತರ ಎರಡೂ ಕಡೆಯವರನ್ನೂ ಕೂರಿಸಿ ಮಾತನಾಡುವ ಪ್ರಯತ್ನ ಮಾಡಿದ್ದೆ. ಮೊದಲಿನಿಂದಲೂ ಎಬಿವಿಪಿ ಮತ್ತು ಎನ್ಎಸ್ಯುಐ ನಡುವೆ ಇಂತಹ ಘರ್ಷಣೆಗಳು ನಡೆಯುತ್ತಿದ್ದವು. ಅದೀಗ ಆತ್ಮಹತ್ಯೆ ಮೂಲಕ ವಿಕೋಪಕ್ಕೆ ಹೋಗಿದೆ,” ಎನ್ನುತ್ತಾರೆ ಪ್ರಾಂಶುಪಾಲರಾದ ದೇವಿದಾಸ್ ನಾಯ್ಕ್.

ಸುಮಾರು 1300 ವಿದ್ಯಾರ್ಥಿಗಳು ಓದುತ್ತಿರುವ ಜೆಸಿಬಿಎಂ ಕಾಲೇಜಿನಲ್ಲಿ ಎರಡು ಪ್ರಮುಖ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳ ನಡುವಿನ ಸಂಘರ್ಷಕ್ಕೆ ಅಮಾಯಕ ವಿದ್ಯಾರ್ಥಿಯೊಬ್ಬನ ಬಲಿಯಾಗಿದೆ. ಮತ್ತು ಅದು ಮುಂದಿನ ರಾಜಕೀಯದ ಬೇಳೆಯಾಗಿ ಬಳಕೆಯಾಗುತ್ತಿದೆ.  ಕಾಲೇಜುಗಳಲ್ಲಿ ತಮ್ಮ ವಿದ್ಯಾರ್ಥಿ ಸಂಘಟನೆಗಳನ್ನು ಕಟ್ಟುವವರಿಗೆ ಸೂಕ್ಷ್ಮತೆಗಳಿಲ್ಲದಿದ್ದರೆ ಏನಾಗಲಿದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಅದೇ ವೇಳೆ, ಕಾಲೇಜುಗಳನ್ನು ತಮ್ಮ ಸಿದ್ಧಾಂತ ಹರಡುವ ನೆಲೆಗಳಾಗಿ ಮಾಡಿಕೊಳ್ಳಲು ಹವಣಿಸುವವರಿಗೆ ಅಭಿಷೇಕ್ ಆತ್ಮಹತ್ಯೆ ಪಾಠವಾಗಬೇಕಿದೆ.

Leave a comment

FOOT PRINT

Top