An unconventional News Portal.

‘ದೇಶಪ್ರೇಮಿಗಳ ಗಮನಕ್ಕೆ’: ಯೋಧನೊಬ್ಬನ ಗಂಭೀರ ಆರೋಪ ಮತ್ತು ಬಿಎಸ್ಎಫ್ ಅಂತರಂಗ

‘ದೇಶಪ್ರೇಮಿಗಳ ಗಮನಕ್ಕೆ’: ಯೋಧನೊಬ್ಬನ ಗಂಭೀರ ಆರೋಪ ಮತ್ತು ಬಿಎಸ್ಎಫ್ ಅಂತರಂಗ

ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಅಥವಾ ಗಡಿ ರಕ್ಷಣಾ ಪಡೆ…

ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ಚಕಮಕಿಯಾದಾಗ, ಬಾಂಗ್ಲದೇಶದ ಗಡಿಯಲ್ಲಿ ಅಕ್ರಮ ವಲಸೆಗಳು ನಡೆದಾಗ, ಅರಬ್ಬೀ ಸಮುದ್ರದಲ್ಲಿ ಒಳನುಸುಳುವಿಕೆಯ ಸಂಗತಿ ಬಹಿರಂಗವಾದಾಗ, ಆಂಧ್ರ- ಒರಿಸ್ಸಾ- ಬಿಹಾರ ಗಡಿಯಲ್ಲಿ ನಕ್ಸಲ್ ಕಾರ್ಯಾಚರಣೆಗಳು ನಡೆದಾಗ ಸುದ್ದಿಕೇಂದ್ರದಕ್ಕೆ ಬರುವ ಪದವಿದು.

ಆದರೆ ಈ ಬಾರಿ, ಗಡಿ ನಿಯಂತ್ರಣ ಪಡೆಯ ಸೈನಿಕನೊಬ್ಬ ಜಮ್ಮ ಮತ್ತು ಕಾಶ್ಮೀರದ ಹಿಮಚ್ಛಾದಿತ ಪ್ರದೇಶದಿಂದ ‘ಸರಿಯಾಗಿ ಊಟ ಸಿಗುತ್ತಿಲ್ಲ’ ಎಂಬ ಆರೋಪ ಮಾಡಿರುವ ವಿಡಿಯೋ ಕಾರಣಕ್ಕೆ ಬಿಎಸ್ಎಫ್ ಸುದ್ದಿಯಲ್ಲಿದೆ. ತೇಜ್ ಬಹುದ್ದೂರ್ ಯಾದವ್ ಎಂಬ 29ನೇ ಬೆಟಾಲಿಯನ್ ಸೈನಿಕ ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ಮತ್ತು ಸೋಮವಾರ ಮೂರು ಪ್ರತ್ಯೇಕ ವಿಡಿಯೋಗಳನ್ನು ಹಂಚಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಬಿಎಸ್ಎಫ್ ಮತ್ತು ಅದರಲ್ಲಿ ಕೆಲಸ ಮಾಡುತ್ತಿರುವ ಸೈನಿಕರ ಸ್ಥಿತಿಗತಿಗಳ ಕುರಿತು ಚರ್ಚೆ ಶುರುವಾಗಿದೆ. ಸೇನೆಯಲ್ಲಿ ಹಿರಿಯ ಅಧಿಕಾರಿಗಳ ಭ್ರಷ್ಟತೆಯ ಕುರಿತು ಆಕ್ರೋಶಗಳು ವ್ಯಕ್ತವಾಗಿವೆ. ಈ ಬಾರಿಯ ಆಯವ್ಯಯದಲ್ಲಿ ಸುಮಾರು 16 ಸಾವಿರ ಕೋಟಿ ಜನರ ತೆರಿಗೆ ಹಣವನ್ನು ಪಡೆದುಕೊಂಡಿರುವ ಬಿಎಸ್ಎಫ್ ತನ್ನ ಸೈನಿಕರಿಗೆ ಗುಣಮಟ್ಟದ ಊಟವನ್ನೂ ನೀಡಲು ಯಾಕೆ ಸಾಧ್ಯವಾಗಿಲ್ಲ ಎಂಬುದು ಅನುಮಾನಗಳನ್ನು ಹುಟ್ಟುಹಾಕಿದೆ.

ಆದರೆ, ಕಂಡಕಂಡ ವಿಚಾರಗಳಿಗೆ ಸೈನಿಕರನ್ನು ಎಳೆದುತಂದು ದೇಶಭಕ್ತಿ, ದೇಶಪ್ರೇಮದ ಭಾಷಣ ಮಾಡುವವರು ಈ ವಿಚಾರದಲ್ಲಿ ಮೌನವಹಿಸಿದ್ದಾರೆ. ಸೈನಿಕನೊಬ್ಬ ತನ್ನ ಸಂಕಷ್ಟಗಳನ್ನು ದೇಶದ ಮುಂದಿಟ್ಟಿದ್ದಕ್ಕೆ ಆತನನ್ನೇ ಬಲಿಪಶು ಮಾಡುವ ಕೆಲಸ ಶುರುವಾಗಿದೆ.

ಘಟನೆ ಹಿನ್ನೆಲೆ:

ಕುಟುಂಬದ ಜತೆ ತೇಜ್ ಬಹದ್ದೂರ್ ಯಾದವ್. (ಫೇಸ್ ಬುಕ್)

ಕುಟುಂಬದ ಜತೆ ತೇಜ್ ಬಹದ್ದೂರ್ ಯಾದವ್. (ಫೇಸ್ ಬುಕ್)

ಗಡಿ ರಕ್ಷಣಾ ಪಡೆಯ 29ನೇ ಬೆಟಾಲಿಯನ್ಗೆ ಸೇರಿದ ಸೈನಿಕ ತೇಜ್ ಬಹುದ್ದೂರ್ ಯಾದವ್, ಭಾನುವಾರ ಸಂಜೆ 5. 37ರ ಸುಮಾರಿಗೆ ಮೊದಲ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಗಡಿ ಭಾಗವನ್ನು ಕಾಯುತ್ತಿರುವ ಸೈನಿಕರ ಪರಿಸ್ಥಿತಿಯನ್ನು ಅವರು ವಿವರಿಸಿದ್ದರು. ಜತೆಗೆ, ಅಧಿಕಾರಿಗಳಿಂದ ಹೇಗೆಲ್ಲಾ ಅನ್ಯಾಯವಾಗುತ್ತಿದೆ ಎಂದು ವಿವರಿಸಿದ್ದರು. ಸೈನಿಕರ ಕಷ್ಟಗಳನ್ನು ಕೇಳಲು ಯಾರೂ ಇಲ್ಲ ಎಂದೂ ಅಳಲು ತೋಡಿಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ, ತಮಗೆ ನೀಡುತ್ತಿರುವ ಆಹಾರ ಅತ್ಯಂತ ಕಳಪೆಯಾಗಿರುತ್ತದೆ ಎಂಬುದನ್ನು ವಿವರಿಸಿದ್ದರು.

“ಬೆಳಗ್ಗೆ ತಿಂಡಿಗೆ ಒಂದು ಪರೋಟ ಮತ್ತು ಟೀ ಮಾತ್ರವೇ ನೀಡಲಾಗುತ್ತಿದೆ. ಮಧ್ಯಾಹ್ನ ಹಳದಿ ಮತ್ತು ನೀರನ್ನು ಬೆರೆಸಿದಂತಿರುವ ದಾಲ್ ಮತ್ತು ಪರೋಟಗಳೇ ಊಟ. ಕೆಲವೊಮ್ಮೆ ಸೈನಿಕರು ಹಸಿವಿನಿಂದಲೇ ಮಲಗುವುದೂ ಇರುತ್ತದೆ.” ಎಂದು ಬಹದ್ದೂರ್ ವಿಡಿಯೋದಲ್ಲಿ ದೂರಿದ್ದರು. “ಇದಕ್ಕೆಲ್ಲಾ ಮೇಲಾಧಿಕಾರಿಗಳ ಭ್ರಷ್ಟಾಚಾರ ಕಾರಣ. ಸರಕಾರ ಸವಲತ್ತು ನೀಡುತ್ತದೆ; ಆದರೆ ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಿಕೊಳ್ಳಲಾಗುತ್ತದೆ.” ಎಂಬ ಗಂಭೀರ ಆರೋಪ ಮಾಡಿದ್ದರು.

ಇದಾದ ನಂತರ ಮಾರನೇ ದಿನ ಸೋಮವಾರ ಬೆಳಗ್ಗೆ 7. 28ಕ್ಕೆ ಹಾಗೂ 8. 12ಕ್ಕೆ ಮತ್ತೆರಡು ವಿಡಿಯೋಗಳನ್ನು ಅವರು ಪೋಸ್ಟ್ ಮಾಡಿದ್ದರು. ಅವುಗಳಲ್ಲಿ ಸೈನಿಕರು ಆಹಾರವನ್ನು ತಯಾರಿಸುವ ದೃಶ್ಯಗಳ ಜತೆಗೆ, ಕಳಪೆ ಗುಣಮಟ್ಟದ ಸರಬರಾಜಿನ ಕುರಿತು ಮಾತುಕತೆಗಳಿದ್ದವು.

ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ತೇಜ್ ಬಹದ್ದೂರ್ ಪ್ರೊಫೈಲಿನಿಂದಲೇ ಈವರೆಗೆ ವೀಕ್ಷಿಸಿದ ಜನರ ಸಂಖ್ಯೆ 90 ಲಕ್ಷ ದಾಟಿದೆ. ಮಾಧ್ಯಮಗಳಲ್ಲಿ ಇದು ಬಂದ ಹಿನ್ನೆಲೆಯಲ್ಲಿ ಸರಕಾರ ಮುಜುಗರಕ್ಕೆ ಸಿಲುಕಿತು. ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಪ್ರತಿಕ್ರಿಯಿಸಿದರು. ಬಿಎಸ್ಎಫ್ ಅಧಿಕಾರಿಗಳಿಗೆ ವರದಿ ನೀಡುವಂತೆ ತಿಳಿಸಿದರು. ಆದರೆ, ಬಿಎಸ್ಎಫ್ ಮಾತ್ರ ಯಥಾಪ್ರಕಾರ, “ಸೈನಿಕ ಕುಡಿತದ ಚಟಕ್ಕೆ ಬಲಿಯಾದವನು. ಹಿಂದೆಯೂ ಮೇಲಾಧಿಕಾರಿಗಳಿಗೆ ಎದುತ್ತರ ನೀಡಿದ ಕಾರಣಕ್ಕೆ ಕಪ್ಪು ಚುಕ್ಕೆಯನ್ನು ಹೊಂದಿದ್ದವನು,” ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿತು. ಜತೆಗೆ, ತಮ್ಮ ಮೇಲೆ ಆರೋಪ ಮಾಡಿದ ವ್ಯಕ್ತಿಯ ವ್ಯಕ್ತಿತ್ವವನ್ನೇ ಹರಣ ಮಾಡುವ ಕೆಲಸಕ್ಕೆ ಇಳಿಯಿತು.

ಬಿಎಸ್ಎಫ್ ಅಂತರಂಗ: 

bsf-2

ದೇಶದ ಪೂರ್ವ ಮತ್ತು ಪಶ್ಚಿಮ ಗಡಿಯನ್ನು 24/7 ಕಾಯಲು 1965ರಲ್ಲಿ ಸ್ಥಾಪನೆಗೊಂಡ ಪಡೆಯೇ ಬಿಎಸ್ಎಫ್. ಇದರಲ್ಲಿ ಸುಮಾರು 2. 5 ಲಕ್ಷ ಪುರುಷ ಹಾಗೂ ಮಹಿಳಾ ಸೈನಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 6. 5 ಸಾವಿರ ಕಿ. ಮೀ ನೆಲ, ಜಲ ಮತ್ತು ಹಿಮ ಆವೃತ ಗಡಿ ಪ್ರದೇಶವನ್ನು ಇವರು ಹಗಲೂ ರಾತ್ರಿ ಕಾಯುತ್ತಿದ್ದಾರೆ. ಇಂತಹ ಕಠಿಣ ಸ್ಥಳಗಳಲ್ಲಿ ನಿಯೋಜಿಸುವ ಮೊದಲು ಬಿಎಸ್ಎಫ್ ಅಕಾಡೆಮಿಯಲ್ಲಿ 50 ವಾರಗಳ ಕಾಲ ಕಠಿಣ ತರಬೇತಿಯನ್ನು ನೀಡಲಾಗುತ್ತದೆ.

ದಿಲ್ಲಿಯಲ್ಲಿರುವ ಬಿಎಸ್ಎಫ್ ಕೇಂದ್ರ ಕಚೇರಿಯಲ್ಲಿ ಪ್ರತಿ ವಾರ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಭಾರತ- ಪಾಕಿಸ್ತಾನದ ಗಡಿ ಮತ್ತು ಭಾರತ- ಬಾಂಗ್ಲ ಗಡಿಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತದೆ. ಬಿಎಸ್ಎಫ್ ವೆಬ್ಸೈಟ್ ಹೇಳುವ ಪ್ರಕಾರ, ವಿಶ್ವಸಂಸ್ಥೆಯ ಶಾಂತಿಪಡೆಗೂ ಸೈನಿಕರನ್ನು ಇದು ಕಳುಹಿಸುತ್ತದೆ. ಮಣಿಪುರದಂತಹ ರಾಜ್ಯಗಳಲ್ಲಿ ಆಂತರಿಕ ಭದ್ರತೆಯ ವಿಚಾರದಲ್ಲಿಯೂ ಬಿಎಸ್ಎಫ್ ಸೈನಿಕರು ಸೇವೆ ಸಲ್ಲಿಸುತ್ತಾರೆ. 2001ರಲ್ಲಿ ಗುಜರಾತ್ ಭೂಕಂಪದ ಸಮಯದಲ್ಲಿ ಮೊದಲು ಸ್ಥಳದಲ್ಲಿದ್ದದ್ದು ಬಿಎಸ್ಎಫ್ ಯೋಧರು.

ಹೀಗೆ, ದೇಶವನ್ನು ಹೊರಗಿನ ಶತ್ರುಗಳಿಂದ ರಕ್ಷಿಸುವ ಮತ್ತು ಆಂತರಿಕ ಭದ್ರತೆ ವಿಚಾರದಲ್ಲಿಯೂ ಗಣನೀಯ ಕೊಡುಗೆ ನೀಡುತ್ತಿರುವ ಗಡಿ ರಕ್ಷಣಾ ಪಡೆಗೆ ಜನರ ತೆರಿಗೆ ಹಣದಲ್ಲಿ 2016- 17ನೇ ಆಯವ್ಯಯದಲ್ಲಿ ಎತ್ತಿಟ್ಟಿದ್ದ ಹಣವೇ ಸುಮಾರು 14, 652. 90 ಕೋಟಿ ರೂಪಾಯಿಗಳು. ಇದೀಗ ಅಂತಹ ಪಡೆಯಲ್ಲಿ ತಳಮಟ್ಟದಲ್ಲಿ ಜೀವದ ಹಂಗನ್ನೂ ಲೆಕ್ಕಿಸದೇ ಗಡಿ ಕಾಯುವ ಯೋಧರಿಗೆ ಗುಣಮಟ್ಟದ ಆಹಾರ ಪೂರೈಕೆ ಆಗುತ್ತಿಲ್ಲ ಎಂಬುದನ್ನು ಸ್ವತಃ ಯೋಧರೊಬ್ಬರು ಬಹಿರಂಗಪಡಿಸಿದ್ದಾರೆ. ಅದರ ಜತೆಗೆ, ಮೇಲಾಧಿಕಾರಿಗಳು ಸರಕಾರ ನೀಡುವ ಸವಲತ್ತುಗಳನ್ನು ಮಾರಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.

ತನಿಖೆ ಬದಲು ಶಿಕ್ಷೆ: 

ಹೀಗೊಂದು ಗಂಭೀರ ಆರೋಪ ಬರುತ್ತಿದ್ದಂತೆ ಸ್ವತಂತ್ರ ತನಿಖೆಯೊಂದನ್ನು ಬಿಎಸ್ಎಫ್ ನಡೆಸಲು ಮುಂದಾಗಬೇಕಿತ್ತು. ಬದಲಿಗೆ, ಆರೋಪ ಮಾಡಿದ ಸೈನಿಕನ ತೇಜೋವಧೆಗೆ ಮುಂದಾಗಿದೆ. ಇದರ ಬಗ್ಗೆ ವ್ಯಾಪಕ ಟೀಕೆ ಬರುತ್ತಿದ್ದಂತೆ ಮಂಗಳವಾರ ಬಿಎಸ್ಎಫ್ ಹೇಳಿಕೆಯೊಂದನ್ನು ಬಿಡುಗಡೆಮಾಡಿದೆ. ‘ಆರೋಪ ಮಾಡಿದ ಸೈನಿಕ ತೇಜ್ ಬಹದ್ದೂರ್ ಅವರನ್ನು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ತನಿಖೆಯನ್ನೂ ನಡೆಸಲಾಗುವುದು,’ ಎಂದು ಹೇಳಿದೆ. ಆದರೆ, ದೇಶದ ಭದ್ರತಾ ಪಡೆಗಳಲ್ಲಿ ಇಂತಹ ಆರೋಪಗಳು ಹಿಂದೆಯೂ ಕೇಳಿಬಂದಿದ್ದವು. ಅವುಗಳ ತಾರ್ಕಿಕ ಅಂತ್ಯದಲ್ಲಿ ಯಾವ ಮೇಲಾಧಿಕಾರಿಗೂ ಶಿಕ್ಷೆಯಾಗಿಲ್ಲ. ಹೀಗಿರುವಾಗ ಈ ಹೊಸ ಆರೋಪಗಳು ಮುಂದೊಂದು ದಿನ ತೆರೆಮರೆಗೆ ಸರಿಯವು ಸಾಧ್ಯತೆಗಳೇ ಹೆಚ್ಚಿವೆ.

ಯುವಕರಲ್ಲಿ ದೇಶಭಕ್ತಿಯನ್ನು ಹೆಚ್ಚಿಸಲು ಹಾಗೂ ಸೈನಿಕರ ಕುರಿತು ರಾಜ್ಯಾದ್ಯಂತ ಭಾಷಣ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡುವ ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಈ ಕುರಿತು ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ, “ಎರಡು ದಿನಗಳ ನಂತರ ಕರೆ ಮಾಡಿ, ಬ್ಯುಸಿ ಇದ್ದೇನೆ,” ಎಂದರು.

Leave a comment

FOOT PRINT

Top