An unconventional News Portal.

ಫೇಸ್ ಬುಕ್ V/S ಪಬ್ಲಿಕ್ ಟಿವಿ: ಟೀಕೆ ಎಂಬ ಟಿಆರ್ಪಿಯೂ; ‘ದರಿದ್ರ’ ತಂದೊಡ್ಡಿದ ಫಜೀತಿಯೂ…

ಫೇಸ್ ಬುಕ್ V/S ಪಬ್ಲಿಕ್ ಟಿವಿ: ಟೀಕೆ ಎಂಬ ಟಿಆರ್ಪಿಯೂ; ‘ದರಿದ್ರ’ ತಂದೊಡ್ಡಿದ ಫಜೀತಿಯೂ…

“ರಚನಾತ್ಮಕ ಟೀಕೆಗಳಿಂದ ಸಮಸ್ಯೆ ಇಲ್ಲ. ಆದರೆ ಸೊಂಟದ ಕೆಳಗಿನ ಭಾಷೆಯದ್ದೇ ತೊಂದರೆ. ಅಸಹ್ಯ ಟೀಕೆಗಳು ಮಾನಸಿಕವಾಗಿ ಪರಿಣಾಮ ಬೀರುತ್ತವೆ. ಇದರಿಂದ ಏಕಾಗ್ರತೆಗೆ ಭಂಗವಾಗಿದೆ,” ಹೀಗಂದವರು ಪಬ್ಲಿಕ್ ಟಿವಿಯ ಮುಖ್ಯ ನಿರೂಪಕಿ ರಾಧಾ ಹಿರೇಗೌಡರ್. ಸಾಮಾಜಿಕ ಜಾಲತಾಣದಲ್ಲಿ ಪಬ್ಲಿಕ್ ಟಿವಿ ಮತ್ತು ಅವರ ವಿರುದ್ಧ ನಡೆಯುತ್ತಿರುವ ಟೀಕೆಗಳ ಹಿನ್ನಲೆಯಲ್ಲಿ ಅವರು ‘ಸಮಾಚಾರ’ದ ಜತೆಗಿನ ಮಾತುಕತೆಯಲ್ಲಿ ಹೇಳಿದ್ದು ಹೀಗೆ.

ರಾಧಾ ಹಿರೇಗೌಡರ್

ರಾಧಾ ಹಿರೇಗೌಡರ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಚರ್ಚೆಗೆ ಗುರಿಯಾದ ಚಾನಲ್  ಪಬ್ಲಿಕ್ ಟಿವಿ; ನಿರೂಪಕರ ವಿಚಾರಕ್ಕೆ ಬಂದಾಗ ಬಹುಶಃ ಅದು ರಾಧಾ ಹಿರೇಗೌಡರ್. ನರೇಂದ್ರ ಮೋದಿ ಪುನರ್ಜನ್ಮ ಎಂಬ ಅಸಹ್ಯಕರ ಅಭಿರುಚಿಯ ಕಾರ್ಯಕ್ರಮವೊಂದರಲ್ಲಿ ‘ದರಿದ್ರ ದೇಶ’ ಎಂಬ ಪದ ಬಳಕೆಯಿಂದಾಗಿ ಕಳೆದ ಕೆಲವು ದಿನಗಳಿಂದ ಪಬ್ಲಿಕ್ ಟಿವಿ ಸಾಮಾಜಿಕ ಜಾಲತಾಣಗಳಲ್ಲಿ ವಿವಾದದ ಅಲೆ ಎಬ್ಬಿಸಿದೆ. ಈ ಕುರಿತು ಚಾನಲ್ ಕಡೆಯಿಂದ ಕ್ಷಮಾಪಣೆ ಬರುವ ಮೊದಲೇ ರಾಧಾ ಹಿರೇಗೌಡರ್ ತಾವೇ ಮುಂದಾಗಿ ಕ್ಷಮೆ ಕೇಳಿದ್ದು ಅವರ ಮೇಲಿನ ಟೀಕೆಗಳು ಹೆಚ್ಚಾಗಲು ಕಾರಣವಾಯಿತು. ಈ ಕುರಿತು ಸಮಾಚಾರದ ಪ್ರಶ್ನೆಗಳಿಗೆ ರಾಧಾ ಹೇಳಿದ್ದು ಹೀಗೆ:

ಪ್ರಶ್ನೆ: ‘ನ್ಯೂಸ್ ಚಾನಲ್ ವರ್ಸಸ್ ಸೋಷಿಯಲ್ ಮೀಡಿಯಾ’ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ರಾಧಾ ಹಿರೇಗೌಡರ್: ಇವತ್ತು ಸಾಮಾಜಿಕ ಜಾಲ ತಾಣ ಎನ್ನುವಂಥಹದ್ದು ತುಂಬಾ ಶಕ್ತಿಯುತವಾದುದು. ನರೇಂದ್ರ ಮೋದಿ ಪ್ರಧಾನಿಯಾದಾಗಲೇ ಅದರ ಶಕ್ತಿ ಗೊತ್ತಾಗಿದ್ದು. ಇಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಇರುವಾಗ ಟೀಕೆ ಟಿಪ್ಪಣಿಗಳನ್ನು ಮಾಡುವುದು ಸಹಜ. ಆದರೆ ಟೀಕೆಗಳು ಟೀಕೆಗಳಾಗಿದ್ದರೆ ಸಮಸ್ಯೆ ಇಲ್ಲ. ಆದರೆ ವೈಯಕ್ತಿಕವಾಗಿ, ಕೀಳು ಅಭಿರುಚಿಯ ಟೀಕೆ ಮಾಡುವುದು ತರವಲ್ಲ. ಇದು ಸೋಷಿಯಲ್ ಮೀಡಿಯಾ ವರ್ಸಸ್ ಐಡಿಯಾಲಜಿ; ನ್ಯೂಸ್ ಮೀಡಿಯಾ ಅಲ್ಲ.

ಪ್ರ: ನಿಮ್ಮ ಕ್ಷಮಾಪಣೆ ಬಗ್ಗೆ ಏನು ಹೇಳುತ್ತೀರಿ?

ರಾ: ಅದು ನನ್ನ ತಪ್ಪಲ್ಲ. ಯಾರೋ ಮಾಡಿದ ತಪ್ಪು. ಆದರೆ ಟೀಕೆ ಮಾಡುವವರು ನನ್ನತ್ತ ಬೆಟ್ಟು ಮಾಡುತ್ತಾರೆ. ಪಬ್ಲಿಕ್ ಟಿವಿಯಲ್ಲಿ ಹೂ ಅರಳಿದರೂ ನನ್ನನ್ನೇ ಕೇಳುವುದು ಸರಿಯಲ್ಲ. ನಾನು ಓರ್ವ ಸಿಬ್ಬಂದಿ ಅಷ್ಟೆ. ಆದರೂ ಯಾರೋ ಮಾಡಿದ ತಪ್ಪಿಗೆ, ದಾರಿದ್ರ್ಯ ಎಂದಾಗಬೇಕಿತ್ತು ಅದು ದರಿದ್ರ ಆಗಿದೆ; ತಪ್ಪು ಮಾಡುವುದು ಸಹಜ ಎಂದು ನಾನು ಚಾನಲಿನ ಪ್ರತಿನಿಧಿಯಾಗಿ ಕ್ಷಮೆ ಕೇಳಿದರೆ ಅದಕ್ಕೂ ಕೀಳು ಕೀಳಾಗಿ ಕಮೆಂಟ್ ಮಾಡುತ್ತಾರೆ.

ಪ್ರ: ಯಾಕೆ ಹೀಗಾಗುತ್ತದೆ? ಯಾಕೆ ರಾಧಾ ಹಿರೇಗೌಡರ್ ಅವರನ್ನೇ ಟೀಕೆ ಮಾಡ್ತಾರೆ?

ರಾ: ನೋಡಿ ನನ್ನ ವೈಯಕ್ತಿಕ ಸಿದ್ಧಾಂತಗಳು ಏನೇ ಇರಬಹುದು. ಆದರೆ ನಾನು ಟಿವಿಯಲ್ಲಿ ಬಂದು ಕೂತಾಗ ಅದೆಲ್ಲವನ್ನೂ ಬಿಟ್ಟು ಬಂದು ಕುಳಿತುಕೊಳ್ಳುತ್ತೇನೆ. ಬಹುಸಂಖ್ಯಾತರ ಅಭಿಪ್ರಾಯಗಳ ಮೇಲೆ ಟೀಕೆ ಮಾಡುತ್ತೇನೆ ಅಷ್ಟೆ. ನಿನ್ನೆ ರಾಜೂ ಕಾಗೆಯವರ ವಿಚಾರವೇ ನಡೆಯಿತು. ಅದನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಹೀಗೆ ನಾನು ಟೀಕೆ ಮಾಡಿದಾಗಲೆಲ್ಲಾ ಒಮ್ಮೆ ಬಿಜೆಪಿ ಏಜೆಂಟ್, ಒಮ್ಮೆ ಕಾಂಗ್ರೆಸ್ ಏಜೆಂಟ್, ಜೆ.ಡಿ.ಎಸ್ ಏಜೆಂಟ್ ಎಂದೆಲ್ಲಾ ಕರಿಯುತ್ತಾರೆ. ಟೀಕೆ ಮಾಡುತ್ತಿದ್ದಾರೆ ಎಂದರೆ ನಾನು ಸರಿ ದಾರಿಯಲ್ಲಿ ಇದ್ದೇನೆ ಎಂದು ಅರ್ಥ.

ಪ್ರ: ಈ ರೀತಿಯ ಟೀಕೆಗಳು ಕೇಳಿ ಬಂದಾಗ ಮಾನಸಿಕವಾಗಿ ಪರಿಣಾಮ ಬೀರಿದ್ದು ಇದೆಯಾ?

ರಾ: ನಿಜವಾಗಿಯೂ ಪರಿಣಾಮ ಬೀರುತ್ತದೆ. ಟೀಕೆಗಳು ಗುಣಾತ್ಮಕವಾಗಿದ್ದಾಗ ನಾನು ಅದನ್ನು ಸ್ವೀಕರಿಸಿದ್ದೇನೆ. ಮುಖ್ಯವಾಗಿ ನಾನು ಜಾಸ್ತಿ ಮಾತಾಡುತ್ತೇನೆ, ಮಧ್ಯೆ ಬಾಯಿ ಹಾಕುತ್ತೇನೆ ಎಂದೆಲ್ಲಾ ಹೇಳುತ್ತಾರೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇತ್ತೀಚೆಗೆ ನಾನು ಹಾಗೆ ಮಾತನಾಡುವುದನ್ನು ಕಡಿಮೆಯೂ ಮಾಡಿದ್ದೇನೆ. ಆದರೆ ಈ ರೀತಿಯ ಕೀಳು ಮಟ್ಟದ ಟೀಕೆಗಳು ಬಂದಾಗ ಕಾನ್ಸಂಟ್ರೇಷನ್ ಹೇಗೆ ಮಾಡುವುದು ಹೇಳಿ. ನನ್ನ ಮಗನ ಬರ್ತ್ಡೆ ಚಿತ್ರ ಹಾಕಿದರೂ ‘ಮಿಂಡ್ರಿ ಮೀಡಿಯಾ’ ಎನ್ನುತ್ತಾರೆ. ಗಂಡ, ತಂಗಿ ಎಲ್ಲರನ್ನೂ ಎಳೆದು ತರುತ್ತಾರೆ. ನಿಜವಾಗಿಯೂ ಹೇಳುತ್ತೇನೆ ನಿನ್ನೆ ನನಗೆ ಕಾನ್ಸಂಟ್ರೇಷನ್ ಮಾಡಲಿಕ್ಕೇ ಆಗಲಿಲ್ಲ. ಅಷ್ಟು ಡಿಸ್ಟರ್ಬ್ ಆಗಿದ್ದೆ. ಮೇಕ್ಅಪ್ ತೆಗೆದ ಮೇಲೆ ನನಗೆ ನನ್ನದೇ ವೈಯಕ್ತಿಕ ಜೀವನವಿದೆ. ನನ್ನನ್ನು ಟಿವಿ ಮೇಲಿನ ರಾಧಾ ಹಿರೇಗೌಡರ್ ರೀತಿ ನೋಡುವುದು ಸರಿಯಲ್ಲ.

ಪ್ರ: ಹೀಗೆಲ್ಲಾ ಯಾಕೆ ಆಗುತ್ತದೆ? ಸಮಸ್ಯೆ ಯಾರಲ್ಲಿದೆ? ನಿಮ್ಮಲ್ಲೇ ಏನಾದರೂ ಸಮಸ್ಯೆ ಇದೆ ಅಂತ ಅನಿಸುತ್ತಿದೆಯಾ?

ರಾ: ಕೆಲವೊಮ್ಮೆ ಅವೆಲ್ಲಾ ಅನಿವಾರ್ಯ ಆಗಿರುತ್ತವೆ. ಕಾರ್ಯಕ್ರಮದಲ್ಲಿ ಬಂದವರು ಭಾಷಣ ಹೊಡಿತಾ ಕೂತಿರ್ತಾರೆ. ನಾನು ಅವರನ್ನು ವಿಷಯಕ್ಕೆ ಎಳೆದು ತರಲು ಮಧ್ಯೆ ಬಾಯಿ ಹಾಕಬೇಕಾಗುತ್ತದೆ. ಇನ್ಯಾರೋ ಗೆಸ್ಟ್ ಕರೆದಿರುತ್ತೇವೆ. ಅವರು ಬೇಕಾದ ವಿಷಯನೇ ಮಾತನಾಡದಿದ್ದಾಗ ನಾನು ಮಾತನಾಡುತ್ತೇನೆ. ಒಂದು ಗಂಟೆಯ (ಚೆಕ್ ಬಂದಿ) ಕಾರ್ಯಕ್ರಮದಲ್ಲಿ ಸಿಗುವುದು ನನಗೆ 30 ನಿಮಿಷ ಮಾತ್ರ. ನಾನು ಮಾಡಿದ್ದು ಸರಿ ಎಂದು ನಾನು ಹೇಳುವುದಿಲ್ಲ. ಆದರೆ ನಾನು ಹಾಗೆ ಮಧ್ಯೆ ಬಾಯಿ ಹಾಕುವುದು ಸಹಜ.

ಏರು ಧ್ವನಿಯಲ್ಲಿ ಮಾತನಾಡುತ್ತೇನೆ ಎಂದು ನಾನು ಸೌಮ್ಯವಾಗಿ ಮಾತನಾಡಿದರೆ ಟಿ.ಆರ್.ಪಿಯೇ ಬರುವುದಿಲ್ಲ. ಇದು ಚೈನ್ ಇದ್ದ ಹಾಗೆ. ನಾವು ಕೊಡ್ತೇವೆ ಅಂತ ಅವರು ನೋಡ್ತಾರೋ, ಅವರು ನೋಡ್ತೇವೆ ಅಂತ ನಾವು ಕೊಡುತ್ತೇವೆಯೋ ಗೊತ್ತಿಲ್ಲ. 9 ಒಳ್ಳೆಯ ಕೆಲಸ ಮಾಡಿದಾಗ ಒಂದು ತಪ್ಪನ್ನು ಹಿಡಿದುಕೊಂಡು ಬ್ಯಾನ್ ಪಬ್ಲಿಕ್ ಟಿವಿ ಅಂತೆಲ್ಲಾ ಹೇಳುವುದು ಸರಿಯಲ್ಲ. ನಾವು ಸಮಾಜದ ಒಂದು ತಪ್ಪನ್ನೇ ಬೆಳಗ್ಗೆಯಿಂದ ಸಂಜೆವರೆಗೆ ತೋರಿಸುತ್ತೇವೆ. ಬಹುಶಃ ಜನರೂ ಇದೇ ರೀತಿ ಮಾಡುತ್ತಿರಬಹುದು.

ಪ್ರ: ಇಷ್ಟೆಲ್ಲಾ ಆದ ಮೇಲೆ ನಿಮಗೆ ನೀವು ಬದಲಾಗಬೇಕು ಎಂದು ಅನಿಸುತ್ತಿದೆಯಾ?

ರಾ: ನಾನು ಬದಲಾವಣೆಗಳಿಗೆ ಒಗ್ಗಿಕೊಂಡೇ ಬಂದವಳು. ಉದಯ ಟಿವಿಯಲ್ಲಿದ್ದಾಗ ಕೇವಲ ಟಿಪಿ ಓದುವವಳಾಗಿದ್ದೆ. ನಮ್ಮ 24/7 ಸುದ್ದಿ ವಾಹಿನಿಗಳು ಆರಂಭವಾಗಿ 10 ವರ್ಷಗಳು ಆಯಿತು ಅಷ್ಟೆ. ರಾಷ್ಟ್ರ ಮಟ್ಟದ ವಾಹಿನಿಗಳನ್ನು ನೋಡಿ ನಾವೂ ಪ್ರಯೋಗಗಳನ್ನು ಮಾಡುತ್ತಾ ಬಂದಿದ್ದೇವೆ. ಭಾಷೆ, ಬಾಡಿ ಲಾಂಗ್ವೇಜ್ ಎಲ್ಲವೂ ಬದಲಾಗಿದೆ.

ನಾನು ಎರಡು ಕಾರ್ಯಕ್ರಮಗಳನ್ನು ಮಾಡುತ್ತೇನೆ. ‘ಚೆಕ್ ಬಂದಿ’ಯಲ್ಲಿ ನಾನು ಮಾತನಾಡುತ್ತೇನೆ; ಅದೆ ‘ಬಿಗ್ ಬುಲೆಟಿನ್’ನಲ್ಲಿ ನಾನು ವಿದ್ಯಾರ್ಥಿಯಾಗುತ್ತೇನೆ. ಮಾನವಾಸಕ್ತ ವಿಷಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿದ್ದಾಗ ನಾನೇ ಮಾಡುತ್ತೇನೆ; ನನಗೆ ಅದರಲ್ಲಿ ಆಸಕ್ತಿ ಜಾಸ್ತಿ. ಗುಣಾತ್ಮಕ ಟೀಕೆಗಳನ್ನು ಸ್ವೀಕರಿಸುತ್ತೇನೆ. ಇತ್ತೀಚೆಗೆ ಮಾತು ಕಡಿಮೆ ಮಾಡಿದ್ದೇನೆ; ಆಲಿಸುತ್ತೇನೆ. ಹೀಗೆ ಬದಲಾಗುತ್ತಲೇ ಬಂದಿದ್ದೇನೆ.

ಕೆಲವು ಕಾರ್ಯಕ್ರಮಗಳು ವೈಯಕ್ತಿಕವಾಗಿ ನನಗೂ ಇಷ್ಟ ಇರುವುದಿಲ್ಲ. ಆದರೆ ಸಂಸ್ಥೆ ಅಂತ ಬಂದಾಗ ಅವರಿಗೆ ಅದೆಲ್ಲಾ ಬೇಕಾಗುತ್ತದೆ. ಆದರೆ ಯಾವತ್ತೂ ಆತ್ಮಗೌರವಕ್ಕೆ ಚ್ಯುತಿ ತಂದುಕೊಂಡಿಲ್ಲ. ನನಗೆ ಇದೇ ಮಾಡಿಕೊಂಡು ಹೋಗಿ, ಇವರನ್ನೇ ಬಯ್ಯಿರಿ, ಟಾರ್ಗೆಟ್ ಮಾಡಿ ಅಂತ ರಂಗನಾಥ್ ಸರ್ ಆಗಲೀ ಮ್ಯಾನೇಜ್ ಮೆಂಟ್ ಕಡೆಯವರಾಗಲಿ ಹೇಳಿಲ್ಲ. ಕೈ ಬಾಯಿ ಶುದ್ಧವಾಗಿರುವಾಗ ಹೆದರುವ ಅಗತ್ಯವಿಲ್ಲ.


ಪಬ್ಲಿಕ್ ಟಿವಿ ಬಗ್ಗೆ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಚಾನಲ್ಲಿನ ಟಿಆರ್ಪಿಯು ಏರುಗತಿಯಲ್ಲೇ ಸಾಗಿದೆ. ಚಾನಲ್ಗೆ ಹಿಂದೆಂದೂ ಕಾಣದ ರೀತಿಯಲ್ಲಿ ಟಿಆರ್ಪಿ ಬರುತ್ತಿದೆ. ವಿವಾದಗಳೇ ಟಿಆರ್ಪಿ ಹೊತ್ತು ತರುತ್ತಿವೆಯೋ? ವಿವಾದಗಳಾದರೆ ಟಿಆರ್ಪಿ ಬರುತ್ತದೆ ಎಂದು ಚಾನಲ್ಲಿನಲಿರುವವರು ನಂಬಿದ್ದಾರೋ ಗೊತ್ತಿಲ್ಲ. ಈ ಕುರಿತು ಪ್ರತಿಕ್ರಿಯೆಗೆ ಚಾನಲ್ಲಿನ ಸಂಪಾದಕೀಯ ಮುಖ್ಯಸ್ಥರಾದ ಅಜ್ಮತ್ ಗೆ ಕರೆ ಮಾಡಲಾಯಿತಾದರೂ ಅವರು ಬೇರೊಬ್ಬರಿಗೆ ಕರೆ ಮಾಡಲು ಸೂಚಿಸಿ ಫೋನಿಟ್ಟರು.

ಈ ಎಲ್ಲಾ ಬೆಳವಣಿಗೆಗಳ ನಡೆಯುತ್ತಿರುವಾಗಲೇ ಚಾನಲಿನ ಆರಂಭದಿಂದಲೂ ಜತೆಗಿದ್ದ, ಸೂಕ್ಷ್ಮ ಮನಸ್ಸಿನ ಪತ್ರಕರ್ತ ಎಂದು ಹೆಸರಾಗಿದ್ದ ವಾಹಿನಿಯ ರಾಜಕೀಯ ವಿಭಾಗದ  ಮುಖ್ಯಸ್ಥ ಅವಿನಾಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯಕ್ಕೆ ವಾಹಿನಿ ಆರ್ಥಿಕ ಆಯಾಮದಿಂದ ಒಳ್ಳೆಯ ದಿನಗಳನ್ನು ಕಾಣುತ್ತಿದೆ. ರಾಜ್ಯದ ಗ್ರಾಮೀಣ ಭಾಗಗಳಲ್ಲಿ ವಾಹಿನಿಗೆ ಹಾಗೂ ಮುಖ್ಯಸ್ಥ ರಂಗನಾಥ ಅವರಿಗೆ ಜನಪ್ರಿಯತೆ ಇದೆ. ನಗರ ಪ್ರದೇಶದ ಜನ ವಿಶೇಷವಾಗಿ ಆನ್ ಲೈನ್ ತೆರೆದುಕೊಂಡವರು ನಿಧಾನವಾಗಿ ವಾಹಿನಿಯಿಂದ ಹೊರಬರುತ್ತಿದ್ದಾರೆ. ಟಿಆರ್ಪಿ ಆಚೆಗೂ ವಾಹಿನಿಯ ಆಡಳಿಯ ಮಂಡಳಿ ಇಂತಹ ಸೂಕ್ಷ್ಮಗಳನ್ನು ಗಮನಿಸುವುದಕ್ಕೆ ಇದು ಸಕಾಲ.

Leave a comment

FOOT PRINT

Top