An unconventional News Portal.

ಐತಿಹಾಸಿಕ ಮೈಸೂರು ಮೃಗಾಲಯದಲ್ಲಿ ಕಾಣಿಸಿಕೊಂಡ ‘ಹಕ್ಕಿ ಜ್ವರ’ದ ಸುತ್ತ ಅನುಮಾನಗಳ ಹುತ್ತ!

ಐತಿಹಾಸಿಕ ಮೈಸೂರು ಮೃಗಾಲಯದಲ್ಲಿ ಕಾಣಿಸಿಕೊಂಡ ‘ಹಕ್ಕಿ ಜ್ವರ’ದ ಸುತ್ತ ಅನುಮಾನಗಳ ಹುತ್ತ!

ನೂರಾ ಇಪ್ಪತ್ತೈದು ವರ್ಷಗಳಷ್ಟು ಹಳೆಯದಾದ, ಮೈಸೂರಿನ ಐತಿಹಾಸಿಕ ಮೃಗಾಯಲಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಸಾರ್ವಜನಿಕ ವೀಕ್ಷಣೆ ನಿಷೇಧಿಸಲಾಗಿದೆ. ಇಲ್ಲಿ H5N8 ವೈರಾಣುಗಳು ಕಾಣಿಸಿಕೊಂಡಿರುವುದಕ್ಕೆ ‘ವಲಸೆ ಬಂದ ಹಕ್ಕಿಗಳೇ ಕಾರಣ’ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ.

ಆದರೆ, ಮೈಸೂರಿನ ಮೃಗಾಲಯ ಆಡಳಿತ ಮಂಡಳಿಯ ವಿವರಣೆಗಳು, ಅಲ್ಲಿನ ಅವೈಜ್ಞಾನಿಕ ಆಡಳಿತ ಕ್ರಮಗಳು, ಪಕ್ಕದ ಕಾರಂಜಿ ಕೆರೆಯ ಸ್ಥಿತಿ, ತಜ್ಞರ ಜತೆ ಮಾತುಕತೆ ನಡೆಸಿರುವ ‘ಸಮಾಚಾರ’ ಪ್ರಸಿದ್ಧ ಮೃಗಾಲಯದಲ್ಲಿ ಕಾಣಿಸಿಕೊಂಡಿರುವ ಗಂಭೀರ ಸಮಸ್ಯೆಗೆ ಬೇರೆಯದೇ ಆಯಾಮಗಳಿರುವ ಸಾಧ್ಯತೆಗಳನ್ನು ಪತ್ತೆ ಹಚ್ಚಿದೆ. ಇದು, ಮೈಸೂರು ಮೃಗಾಲಯದ ಸದ್ಯದ ಪರಿಸ್ಥಿತಿಯ ಕುರಿತು ತಳಮಟ್ಟದ ವರದಿ.

ನಡೆದಿದ್ದೇನು?:

ಮೈಸೂರಿನ ಜಯಚಾಮರಾಜೇಂದ್ರ ಪ್ರಾಣಿಶಾಸ್ತ್ರ ಉದ್ಯಾನವನದ ಒಳಗೆ ಒಟ್ಟು ಮೂರು ಕೊಳಗಳಿವೆ. ಇವುಗಳಲ್ಲಿ ಅತ್ಯಂತ ದೊಡ್ಡ ಕೊಳವೊಂದರಲ್ಲಿ ಒಂದು ಕೊಕ್ಕರೆ ಮತ್ತು ಮೂರು ಬಾತುಕೋಳಿಗಳ ಮೃತ ದೇಹ ಡಿ. 28, 2016ರಂದು ಪತ್ತೆಯಾಗಿದ್ದವು. ಇವುಗಳನ್ನು ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್‌ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್ಐಎಚ್ಎಸ್ಎಡಿ)ಗೆ ಪರೀಕ್ಷೆಯ ಕಾರಣಕ್ಕೆ ಕಳುಹಿಸಿಕೊಡಲಾಯಿತು. ಪರೀಕ್ಷೆಯ ವರದಿಗಳು ಸತ್ತ ಪಕ್ಷಗಳ ದೇಹದಲ್ಲಿ ಹಕ್ಕಿ ಜ್ವರ ಹರಡಲು ಕಾರಣವಾಗುವ ಎಚ್5ಎನ್8 ಏವಿಯನ್ ಇನ್ ಫ್ಲುಯೆಂಜಾ ವೈರಾಣುಗಳಿರುವುದು ದೃಢಪಟ್ಟಿತು.

ಹೀಗಿರುವಾಗಲೇ ಡಿ. 30ರಂದು ಅದೇ ಕೊಳದಲ್ಲಿ ಮತ್ತೊಂದು ಬಾತುಕೋಳಿ ಮತ್ತು ಕೊಕ್ಕರೆ ಸತ್ತು ಬಿದ್ದಿದ್ದವು. ಜ. 5ರ ಹೊತ್ತಿಗೆ ಮೃಗಾಯಲದೊಳಗೆ ಪಕ್ಷಿಗಳ ಸಾವಿನ ಸಂಖ್ಯೆ 7ಕ್ಕೇರಿತ್ತು. ಮೊದಲು ಕಳುಹಿಸಿದ 4 ಸತ್ತ ಪಕ್ಷಿಗಳ ದೇಹ ಹಾಗೂ ಹಿಕ್ಕೆಗಳಲ್ಲಿ, ಎರಡರಲ್ಲಿ ಹಕ್ಕಿ ಜ್ವರ ಹರಡುವ ವೈರಾಣುಗಳಿರುವುದನ್ನು ಎನ್ಐಎಚ್ಎಸ್ಎಡಿ ಪತ್ತೆ ಹಚ್ಚಿತ್ತು. ಹೀಗಾಗಿ ತುರ್ತು ಮತ್ತು ತೀವ್ರ ನಿಗಾ ವಹಿಸುವಂತೆ ಸೂಚಿಸಲಾಯಿತು.

ಈ ಹಿನ್ನೆಲೆಯಲ್ಲಿ, ಜ. 4ರಿಂದ ಫೆಬ್ರವರಿ 4ವರೆಗೆ ಒಂದು ತಿಂಗಳ ಕಾಲ ಮೃಗಾಯಲಯವನ್ನು ಮುಚ್ಚಲು ಆಡಳಿತ ವರ್ಗ ತೀರ್ಮಾನ ತೆಗೆದುಕೊಂಡಿತು. ಸಾರ್ವಜನಿಕ ವೀಕ್ಷಣೆಗೆ ಕಡಿವಾಣ ಹೇರಲಾಯಿತು. ಹಕ್ಕಿ ಜ್ವರ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ‘ವಿಕ್ರಾನ್ ಎಸ್’ಎಂಬ ಔಷಧಿಯನ್ನು ಸಿಂಪಡಣೆ ಮಾಡುವ ಕೆಲಸ ಶುರುವಾಯಿತು.

ಝೂ ಆವರಣದಲ್ಲಿ ಔಷಧಿ ಸಿಂಪಡಿಸುತ್ತಿರುವ ಸಿಬ್ಬಂದಿ

ಝೂ ಆವರಣದಲ್ಲಿ ‘ವಿಕ್ರಾನ್ ಎಸ್’ ಔಷಧಿ ಸಿಂಪಡಿಸುತ್ತಿರುವ ಸಿಬ್ಬಂದಿ

ಮೃಗಾಲಯಕ್ಕೆ ಪ್ರತಿ ದಿನ ಸುಮಾರು 6 ಸಾವಿರ ಜನ ಭೇಟಿ ನೀಡುತ್ತಿದ್ದರು. ಹೀಗಾಗಿ, ಒಂದು ತಿಂಗಳ ಕಾಲ ಸಾರ್ವಜನಿಕರ ನಿಷೇಧದ ತೀರ್ಮಾನದಿಂದಾಗಿ ಅಂದಾಜು 1. 25 ಕೋಟಿ ನಷ್ಟವಾಗಲಿದೆ. ಇಲ್ಲೀಗ ಇಟ್ಟು 1478 ಪ್ರಾಣಿಗಳು, 79 ನಾನಾ ಪ್ರಬೇಧದ ಒಟ್ಟು 813 ಪಕ್ಷಿಗಳಿವೆ. ಇವುಗಳ ರಕ್ಷಣೆಗೆ ಈಗ ಕ್ರಮ ಕೈಗೊಳ್ಳಲಾಗಿದೆ.

ಕಾರಣ ಏನಿರಬಹುದು?:

“ಸ್ಪಾಟ್ ಬಿಲ್ಡ್ ಪೆಲಿಕಾನ್ (ಕೊಕ್ಕರೆ) ಎಂಬ ವಲಸೆ ಹಕ್ಕಿಯ ಮೂಲಕ ವೈರಾಣುಗಳು ಮೃಗಾಯಲವನ್ನು ಪ್ರವೇಸಿದವು. ಇದರಿಂದ ಬಾತುಕೋಳಿ(ಗ್ರೇಲ್ಯಾಗ್ ಗೂಸ್) ಗಳು ಸತ್ತು ಹೋದವು,” ಎನ್ನುತ್ತಾರೆ ಮೃಗಾಲಯದ ವ್ಯವಸ್ಥಾಪಕ ನಿರ್ದೇಶಕಿ ಕೆ. ಕಮಲ. ಐಎಫ್ಎಸ್ ಅಧಿಕಾರಿಯಾಗಿರುವ ಕಮಲ, ಕೊಕ್ಕರೆಯನ್ನು ವಲಸೆ ಹಕ್ಕಿ ಅಂದುಕೊಂಡಿರುವುದು ಅಚ್ಚರಿ ಮೂಡಿಸುತ್ತದೆ.

ಪಕ್ಷಿ ಶಾಸ್ತ್ರಜ್ಞ ಎಂ. ಬಿ. ಕೃಷ್ಣ ಸ್ಪಾಟ್ ಬಿಲ್ಡ್ ಪೆಲಿಕಾನ್ ಹಕ್ಕಿಯ ಕುರಿತು ಬೇರೆಯದೇ ಮಾಹಿತಿ ನೀಡುತ್ತಾರೆ. “ಕೊಕ್ಕರೆ ಜಾತಿಗೆ ಸೇರಿದ ಈ ಹಕ್ಕಿ ಎಲ್ಲಿಂದಲೂ ವಲಸೆ ಬಂದಿದ್ದಲ್ಲ. ಸಮೀಪದ ಕೊಕ್ಕರೆ ಬೆಳ್ಳೂರಿನ ಕೆರೆಯಲ್ಲಿ ಅದು ಮೊಟ್ಟೆ ಇಟ್ಟು ವಂಶವಾಹಿನಿಯನ್ನು ಬೆಳೆಸುತ್ತದೆ,” ಎನ್ನುತ್ತಾರೆ ಅವರು.

‘ಸಮಾಚಾರ’ ಜತೆ ಮಾತನಾಡಿದ ಮೃಗಾಲಯದ ವ್ಯವಸ್ಥಾಪಕ ನಿರ್ದೇಶಕಿ ಕಮಲ ಸಂಪೂರ್ಣ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದದ್ದು ಕಂಡು ಬಂತು. “ಬಾತುಕೋಳಿ (ಗ್ರೇಲ್ಯಾಗ್ ಗೂಸ್) ಗಳನ್ನು  2006ರಲ್ಲಿ ಇಲ್ಲಿಗೆ ಕರೆತರಲಾಗಿತ್ತು. ಅವುಗಳ ಸಂತಾನಾಭಿವೃದ್ಧಿ ಸಾಕಷ್ಟು ಆದ ನಂತರ ಅವುಗಳ ರೆಕ್ಕೆ ಕ್ಲಿಪ್ ಮಾಡಿ ಮೃಗಾಲಯದಲ್ಲಿ (ಫ್ರೀ ರೇಂಜ್) ಓಡಾಡಿಕೊಂಡಿರಲು ಬಿಡಲಾಗುತ್ತಿತ್ತು,” ಎಂದವರು ಹೇಳುತ್ತಾರೆ. ಇವುಗಳಿಗೆ ವಲಸೆ ಬಂದ ಹಕ್ಕಿಗಳಿಂದಾಗಿಯೇ ವೈರಾಣುಗಳು ತಗುಲಿದವು ಎಂದವರು ನಂಬಿಕೊಂಡಿದ್ದಾರೆ.

ಅಚ್ಚರಿಯ ಅಂಶ ಏನೆಂದರೆ, ಇಡೀ ಮೃಗಾಲಯದಲ್ಲಿ ವಲಸೆ ಬರುವ ಹಕ್ಕಿಗಳ ಬಗ್ಗೆ ಮಾಹಿತಿಯೇ ಇಲ್ಲ. “ನಾವು ವಲಸೆ ಹಕ್ಕಿಗಳ ಬಗ್ಗೆ ಯಾವುದೇ ದಾಖಲೆಗಳನ್ನು ಇಟ್ಟುಕೊಂಡಿಲ್ಲ. ನಮಗಿರುವ ಮಾಹಿತಿ ಪ್ರಕಾರ ಕೊಕ್ಕರೆ ವಲಸೆ ಬಂದ ಹಕ್ಕಿ,” ಎನ್ನುತ್ತಾರೆ ನಿರ್ದೇಶಕಿ ಕಮಲ ಮತ್ತು ಮೃಗಾಲಯದ ಪಶುವೈದ್ಯ ಡಾ. ರಮೇಶ್. ಜತೆಗೆ, ಪಕ್ಕದ ಕಾರಂಜಿ ಕೆರೆಯಿಂದ ಬಂದ ಹಕ್ಕಿಗಳಿಂದಾಗಿಯೇ ಸಮಸ್ಯೆ ಶುರುವಾಯಿತು ಎಂದೂ ಅವರು ತಿಳಿಸುತ್ತಾರೆ.

ಕಾರಂಜಿ ಕೆರೆಯಲ್ಲೇನಾಗಿದೆ?:

ಪ್ರವಾಸಿಗರೂ ಇದ್ದಾರೆ, ಪಕ್ಷಿಗಳೂ ಇವೆ; ಕಾರಂಜಿಕೆರೆಯಲ್ಲಿ ಯಾವ ಬದಲಾವಣೆಯೂ ಇಲ್ಲ

ಪ್ರವಾಸಿಗರೂ ಇದ್ದಾರೆ, ಪಕ್ಷಿಗಳೂ ಇವೆ; ಕಾರಂಜಿಕೆರೆಯಲ್ಲಿ ಯಾವ ಬದಲಾವಣೆಯೂ ಇಲ್ಲ

ಹಾಗೆ ನೋಡಿದರೆ, ಮೃಗಾಲಯದ ಪಕ್ಕದಲ್ಲಿಯೇ ಇರುವ ಕಾರಂಜಿ ಕೆರೆಯಲ್ಲಿ ಈವರೆಗೆ ಯಾವುದೇ ಪಕ್ಷಿಯೂ ಸಾವನ್ನಪ್ಪಿಲ್ಲ. ಇದನ್ನು ಮೃಗಾಲಯದ ಅಧಿಕಾರಿಗಳೇ ತಿಳಿಸುತ್ತಾರೆ. ಜತೆಗೆ, ಅಲ್ಲಿ ಇವತ್ತಿಗೂ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. ಕಾರಂಜಿ ಕೆರೆಯಲ್ಲಿರುವ ಪಕ್ಷಿಗಳ ಮೇಲೆಯೂ ನಿಗಾ ವಹಿಸಲಾಗಿದೆ ಅಷ್ಟೆ. ಗಮನಾರ್ಹ ಸಂಗತಿ ಏನೆಂದರೆ, ಕಾರಂಜಿ ಕೆರೆಯಿಂದ ಮೃಗಾಲಯದ ಒಳಗಿರುವ ಕೊಳಗಳಿಗೆ ಪಕ್ಷಿಗಳು ಹೋಗಿ ಬರುತ್ತಿವೆ. ಆದರೆ, ಈವರೆಗೆ ರೋಗದ ಲಕ್ಷಣಗಳು ಕಾರಂಜಿ ಕೆರೆಯಲ್ಲಿ ಕಾಣಿಸಿಕೊಂಡಿಲ್ಲ.

ಪಕ್ಷಿ ವೀಕ್ಷಕ ಮನು, “ಕಾರಂಜಿ ಕೆರೆಯಲ್ಲಿ ಸುಮಾರು 60 ನಾನಾ ಪ್ರಬೇಧದ ಪಕ್ಷಿಗಳಿವೆ. ಆದರೆ ಇವುಗಳ ಬಗ್ಗೆಯಾಗಲೀ, ವಲಸೆ ಬರುವ ಹಕ್ಕಿಗಳ ಬಗ್ಗೆಯಾಗಲೀ ಸರಿಯಾದ ಜ್ಞಾನವೇ ಇಲ್ಲ,” ಎಂದು ಮೃಗಾಲಯದ ಆಡಳಿತ ವರ್ಗದ ವಿರುದ್ಧ ಗಂಭೀರ ಆರೋಪ ಮಾಡುತ್ತಾರೆ.  ಪರಿಸರ ತಜ್ಞ ವಸಂತ್, “ಮೃಗಾಲಯದ ಒಳಗೆ ಹಕ್ಕಿ ಜ್ವರದ ವೈರಾಣುಗಳಿಗೆ ತುತ್ತಾದ ಪಕ್ಷಿಗಳು ಕಾರಂಜಿ ಕೆರೆಗೆ ಭೇಟಿ ನೀಡಿರುವ ಸಾಧ್ಯತೆಗಳು ಕಡಿಮೆ,” ಎನ್ನುತ್ತಾರೆ. ಕೃಷ್ಣ ಕೂಡಾ ಕಾರಂಜಿ ಕೆರೆಯ ಬಗ್ಗೆ ಇದೇ ಅಭಿಪ್ರಾಯ ಹೊಂದಿದ್ದಾರೆ. “ಕಾರಂಜಿ ಕೆರೆಯಲ್ಲಿ ಪಕ್ಷಿಗಳು ಸ್ವಚ್ಛಂದವಾಗಿರುತ್ತವೆ. ಅದೇ ಮೃಗಾಲಯದಲ್ಲಿ ಜನರ ಓಡಾಟ ಪಕ್ಷಿಗಳಿಗೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆಗಳು ಜಾಸ್ತಿ. ಹಾಗಾಗಿ ಅಲ್ಲಿಗೆ ಅವುಗಳು ತೆರಳಲಿಕ್ಕಿಲ್ಲ,” ಎನ್ನುತ್ತಾರೆ.

ಅಂತರ್ ಮೃಗಾಯಲ ಸಮಸ್ಯೆ:

ಪಕ್ಷಿ ತಜ್ಞ ಕೃಷ್ಣಾ ಬೇರೆಯದೇ ಆಯಾಮದಲ್ಲಿ ಸಮಸ್ಯೆಯನ್ನು ಗುರುತಿಸುತ್ತಾರೆ. “ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಇದೇ ರೀತಿಯ ಸಮಸ್ಯೆಯಾಗಿ ದಿಲ್ಲಿಯ ಮೃಗಾಯಲವನ್ನು ಮುಚ್ಚಲಾಗಿತ್ತು. ಕೇರಳ ಮತ್ತು ಒರಿಸ್ಸಾ ಮೃಗಾಲಯಗಳಲ್ಲಿಯೂ ಹಕ್ಕಿಗಳು ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದವು. ಹೀಗಾಗಿ, ಇದು ಮೃಗಾಲಯಗಳ ನಡುವೆ ಪಕ್ಷಿಗಳನ್ನು ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆ ಇದ್ದರೂ ಇರಬಹುದು,” ಎಂದು ಕೃಷ್ಣಾ ಅನುಮಾನ ವ್ಯಕ್ತಪಡಿಸುತ್ತಾರೆ. ಜತೆಗೆ, ಮೃಗಾಲಯದ ಆಹಾರ ನೀಡುವ ಪದ್ಧತಿಯನ್ನೂ ಪರೀಕ್ಷೆಗೆ ಒಳಪಡಿಸುವುದು ಸೂಕ್ತ ಎಂಬುದು ಅವರ ಅಭಿಪ್ರಾಯ.

ಸದ್ಯ, ಮೈಸೂರು ಮೃಗಾಲಯದ ವ್ಯಸವ್ಥಾಪಕ ನಿರ್ದೇಶಕಿ ಕೆ. ಕಮಲ ಪ್ರತಿದಿನ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ವರದಿಗಳನ್ನು ಕಳುಹಿಸುತ್ತಿದ್ದಾರೆ. ಈ ವರದಿಗಳು ಬಹಿರಂಗಗೊಂಡರೆ ಐತಿಹಾಸಿಕ ಮೃಗಾಲಯದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರಕ್ಕೆ ಸ್ಪಷ್ಟ ಕಾರಣಗಳು ಏನಿವೆ ಎಂಬುದು ಬಹಿರಂಗವಾಗಬಹುದು. ಅದೇ ವೇಳೆ, ಸ್ವತಂತ್ರ ತನಿಖೆಯೊಂದನ್ನು ನಡೆಸಬೇಕಾದ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ.

Leave a comment

FOOT PRINT

Top