An unconventional News Portal.

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಪಿಯುಸಿ ಉಪನ್ಯಾಸಕರು; ಬಿ.ಎಡ್ ಗೊಂದಲ ಮುಗಿಯುವುದು ಯಾವಾಗ?

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಪಿಯುಸಿ ಉಪನ್ಯಾಸಕರು; ಬಿ.ಎಡ್ ಗೊಂದಲ ಮುಗಿಯುವುದು ಯಾವಾಗ?

ಕರ್ನಾಟಕ ರಾಜ್ಯ ಸರಕಾರದ ‘ಬಿ.ಎಡ್ ಕಡ್ಡಾಯ’ ಗೊಂದಲ ನಿವಾರಣೆಯಾಗುವಂತೆ ಕಾಣಿಸುತ್ತಿಲ್ಲ. ಪಿಯು ಉಪನ್ಯಾಸಕರಿಗೆ ಬಿ.ಎಡ್ ಕಡ್ಡಾಯ ನಿಯಮದಿಂದ ಇದೀಗ 2013ರಲ್ಲಿ ನೇಮಕೊಂಡವರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಉಪನ್ಯಾಸಕರಿಗೆ ಬಿ.ಎಡ್ ಕಲಿಯಲು ಸರಿಯಾದ ಅವಕಾಶವನ್ನೂ ಸೃಷ್ಟಿಸದೆ ಪದವಿಪೂರ್ವ ಶಿಕ್ಷಣ ಇಲಾಖೆ ಗೊಂದಲ ನಿರ್ಮಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಏನು ಸಮಸ್ಯೆ?

2013ರಲ್ಲಿ ಪಿಯುಸಿ ಉಪನ್ಯಾಸಕರ ನೇಮಕಾತಿಗಾಗಿ ಸುತ್ತೋಲೆ ಹೊರಡಿಸಲಾಗಿತ್ತು. ಈ ವೇಳೆ ವಿಜ್ಞಾನದ ಕೆಲವು ವಿಷಯಗಳಿಗೆ ಬಿ.ಎಡ್ ಮುಗಿಸಿದ ಉಪನ್ಯಾಸಕರ ಕೊರತೆ ಕಾಣಿಸಿಕೊಂಡಿತು. ಆಗ ನಿಯಮಾವಳಿ ಸಡಿಲ ಮಾಡಿ ನೇಮಕವಾದ ನಾಲ್ಕು ವರ್ಷದೊಳಗೆ ಬಿ.ಎಡ್ ಪೂರ್ಣಗೊಳಿಸಿದರೆ ಸಾಕು ಎಂದು ತಿದ್ದುಪಡಿ ತರಲಾಯಿತು. ಅದರಂತೆ 1764 ಉಪನ್ಯಾಸಕರನ್ನು ನೇಮಕವೂ ಮಾಡಿಕೊಳ್ಳಲಾಯಿತು. ಇವರಲ್ಲಿ 733 ಉಪನ್ಯಾಸಕರು ಇನ್ನೂ ಬಿ.ಎಡ್ ಮಾಡಿರಲಿಲ್ಲ.

ಸರಕಾರದ ನಿಯಮಾವಳಿಗಳ ಪ್ರಕಾರ ಇದೇ ಉಪನ್ಯಾಸಕರು 2017ರ ಜೂನ್ ಒಳಗೆ ಬಿ.ಎಡ್ ಪೂರ್ಣ ಮಾಡದೇ ಇದ್ದಲ್ಲಿ ಹುದ್ದೆಯಿಂದ ವಜಾ ಆಗುತ್ತಾರೆ ಎಂದಿದೆ. ಆದರೆ “ದೂರಶಿಕ್ಷಣದ ಮೂಲಕ ಬಿ.ಎಡ್ ಗೆ ನೋಂದಣಿ ಮಾಡಿಕೊಳ್ಳಲು ಮೊದಲು ಎರಡು ವರ್ಷದ ಅನುಭವ ಬೇಕು ಎಂಬ ನಿಯಮ ಇತ್ತು. ನಮಗೆ ಎರಡು ವರ್ಷ ಅನುಭವ ಆಗುವಷ್ಟರಲ್ಲಿ ಅದನ್ನು ನಂತರ ಟಿಸಿಎಚ್ ಅಥವಾ ಡಿ.ಎಡ್ ಆಗಿರಲೇಬೇಕು ಎಂದು ಬದಲಾಯಿಸಿದರು. ಅದು ಎರಡೂ ನಮ್ಮಿಂದ ಸಾಧ್ಯವಿಲ್ಲ. ಇತ್ತೀಚೆಗೆ ನಾವೆಲ್ಲಾ ಇದೇ ರೀತಿ ದೂರ ಶಿಕ್ಷಣದ ಮೂಲಕ ಬಿ.ಎಡ್ ಕೋರ್ಸಿಗೆ ಅರ್ಜಿ ಹಾಕಿದಾಗ ನೀವು ಅರ್ಹರಲ್ಲ ಅಂತ ನಮ್ಮ ಅರ್ಜಿ ತಿರಸ್ಕರಿಸಿದ್ದಾರೆ,” ಎಂದು ತಮ್ಮ ಸಮಸ್ಯೆ ತೋಡಿಕೊಂಡರು ಉಡುಪಿ ಕಾಲೇಜಿನ ಉಪನ್ಯಾಸಕರೊಬ್ಬರು. ಹೆಸರು ಬಹಿರಂಗಪಡಿಸಬಾರದು ಎಂಬ ಕರಾರಿನೊಂದಿಗೆ ಅವರು ಮಾತನಾಡಿದರು. “ನಮಗೀಗ ಸಂಬಳ ಇಲ್ಲ, ಅನುಭವ (ಸರ್ವಿಸ್) ಇಲ್ಲ. ಎರಡು ವರ್ಷ ಸಮಯ ನೀಡುತ್ತೇವೆ. ಬಿ.ಎಡ್ ಮಾಡಿಕೊಂಡು ಬನ್ನಿ ಎನ್ನುತ್ತಿದ್ದಾರೆ. ಆದರೆ ಮದುವೆ ಆಗಿ ಮಕ್ಕಳು ಇರುವವರಿಗೆ ಹೀಗೆ ಎರಡು ವರ್ಷ ಸಂಬಳ ಬಿಟ್ಟು ಇರುವುದು ಕಷ್ಟ,” ಎಂದು ಅವರು ಅಳಲು ತೋಡಿಕೊಳ್ಳುತ್ತಾರೆ.

ಪರಿಸ್ಥಿತಿ ಹೀಗಿದ್ದರೆ ಈ ಬಾರಿಯ ಬಿ.ಎಡ್ ಗೆ ಅರ್ಜಿ ಸಲ್ಲಿಸಲು ಜನವರಿ 14 ಕೊನೆಯ ದಿನವಾಗಿದೆ. ಆದರೆ ಸರಕಾರ ತನ್ನ ಅಂತಿಮ ಅಭಿಪ್ರಾಯ ತಿಳಿಸುತ್ತಿಲ್ಲ. “ಇದೇ ಶುಕ್ರವಾರ ನಾವು 500 ಜನ ಉಪನ್ಯಾಸಕರು ಸೇರಿಕೊಂಡು ತನ್ವೀರ್ ಸೇಠ್ ರನ್ನು ಬೆಂಗಳೂರಿನಲ್ಲಿ ಭೇಟಿಯಾದೆವು. ಅವರು ಎರಡು ವರ್ಷ ಸರ್ವಿಸ್ ನೀಡುತ್ತೇವೆ. ಆದರೆ ಸಂಬಳದ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಹಾಗಾಗಿ ಅದು ಹಾಗೆಯೇ ಉಳಿದುಕೊಂಡಿದೆ,” ಎನ್ನುತ್ತಾರೆ ಉಪನ್ಯಾಸಕರ ಸಂಘದ ಸದಸ್ಯರೊಬ್ಬರು. 2009ರ ಬ್ಯಾಚಿನಲ್ಲಿ ಇದೇ ರೀತಿ 1600 ಜನರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ನಂತರ ಅವರಿಗೆ ಸಂಬಳ ಸಹಿತ ರಜೆ ನೀಡಿ 2014ರಲ್ಲಿ ಬಿ.ಎಡ್ ಕಲಿಯಲು ಕಳುಹಿಸಿಕೊಡಲಾಗಿತ್ತು. ಆದರೆ ಸದರಿ 2013ರ ಬ್ಯಾಚಿನವರಗೆ ಈ ಸೌಲಭ್ಯ ಕೊಡುತ್ತಿಲ್ಲ.

ಇನ್ನೊಂದು ಕಡೆ, “ಎರಡು ವರ್ಷಗಳ ಸಮಯ ನೀಡಿ ಬಿ.ಎಡ್ ಮಾಡಿಕೊಂಡು ಬರುವ ಕರಾರಿಗೆ ಸಹಿ ಹಾಕುವಂತೆ ಪ್ರಾಂಶುಪಾಲರ ಮೂಲಕ ಇಲಾಖೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಒಂದೊಮ್ಮೆ ಸಹಿ ಹಾಕಿದರೆ ನಾವು ಆ ರೀತಿ ಮಾಡಬೇಕಾಗುತ್ತದೆ. ಆದರೆ ನಮಗೆ ಸಂಬಳ ಬೇಕು. ಇದರಿಂದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಿದೆ,” ಎನ್ನುತ್ತಾರೆ ದಕ್ಷಿಣ ಕನ್ನಡದ ಉಪನ್ಯಾಸಕರೋರ್ವರು. ನಮಗೂ ಸಂಬಳ ನೀಡಿ ಬಿ.ಎಡ್ ಮಾಡಲು ಕಳುಹಿಸಿಕೊಡಬಹುದು ಎಂಬ ನಂಬಿಕೆ ಸರಕಾರದ ಮೇಲೆ ಇದೆ; ನೋಡೋಣ ಎಂದು ಎನ್ನುತ್ತಾರೆ ಅವರು.

ಬಿ.ಎಡ್ ಕಡ್ಡಾಯ ಏಕೆ?

ಶಿಕ್ಷಕರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಹಿಂದಿನಿಂದಲೂ ಜಾರಿಯಲ್ಲಿವೆ. ಈ ಕಾರಣಕ್ಕೆ ಹುಟ್ಟಿಕೊಂಡಿದ್ದೇ ಡಿ.ಎಡ್, ಬಿ.ಎಡ್ ಮತ್ತು ಎಂ.ಎಡ್ ಕೋರ್ಸುಗಳು. ಆದರೆ ಪಿಯು ಉಪನ್ಯಾಸಕರಿಗೆ ಬಿ.ಎಡ್ ಕಡ್ಡಾಯವಾಗಿರಲಿಲ್ಲ. ಆದರೆ ಮುಂದೆ ಬೋಧನೆಯ ಗುಣಮಟ್ಟ ಹೆಚ್ಚುವುದಕ್ಕೆ ಶಿಕ್ಷಕರ ಶಿಕ್ಷಣದ ಮಾದರಿಯೂ ಬದಲಾಗಬೇಕು, ಜತೆಗೆ ದೇಶದೆಲ್ಲೆಡೆ ಏಕರೂಪ ಶಿಕ್ಷಣ ಜಾರಿಯಾಗಬೇಕು ಎಂಬ ವಾದ ಹುಟ್ಟಿಕೊಂಡಿತು. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ((National Council For Teacher Education) 2014ರ ಕೊನೆಯಲ್ಲಿ ಶಿಕ್ಷಕರ ಶಿಕ್ಷಣ ಮತ್ತು ತರಬೇತಿಗೆ ಸಂಬಂಧಿಸಿದ ಪ್ರಸ್ತಾವಗಳನ್ನು ಮುಂದಿಟ್ಟಿತ್ತು.

ಇದರನ್ವಯ ಜನವರಿ 6, 2015ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ನೇತೃತ್ವದಲ್ಲಿ ನಡೆದ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಜಾರಿಯಾಗಬೇಕಾದ ಸುಧಾರಣೆಗಳ ಪಟ್ಟಿ ಮಾಡಲಾಯಿತು. ಒಂದು ವರ್ಷದ ಅವಧಿಯ  ಬಿ.ಎಡ್ ಮತ್ತು ಎಂ.ಎಡ್ ಕೋರ್ಸ್‌ಗಳನ್ನು ಎರಡು ವರ್ಷದ ಕೋರ್ಸ್‌­ಗಳ­ನ್ನಾಗಿ ಮಾರ್ಪಡಿಸುವುದು. ಪದವಿಯ ಜೊತೆಗೇ ಸಮಗ್ರ ಶಿಕ್ಷಕರ ಶಿಕ್ಷಣ ಕೋರ್ಸ್‌­ಗಳನ್ನು ಪರಿಚಯಿಸುವುದು. ಅಂದರೆ ನಾಲ್ಕು ವರ್ಷಗಳ ಅವಧಿಯ ಬಿ.ಎ–ಬಿ.ಎಡ್, ಬಿ.ಎಸ್ಸಿ–ಬಿ.ಎಡ್ ಕೋರ್ಸ್‌ಗಳನ್ನು ಆರಂಭಿಸು­ವುದು. ಸದ್ಯ ದೂರ ಶಿಕ್ಷಣದಲ್ಲಿಯೂ ಎಂ.ಎಡ್ ಪದವಿಯನ್ನು ಪಡೆಯಲು ಸಾಧ್ಯವಿದೆ. ಇದನ್ನು ರದ್ದುಪಡಿಸುವುದು. ಹಾಗೆಯೇ ಬೋಧನೆಯಲ್ಲಿ ತರಬೇತಿ ಪಡೆಯದ ಅಧ್ಯಾಪಕರಿಗೆ ಅರೆಕಾಲಿಕ ಕೋರ್ಸ್‌ಗಳನ್ನು ರೂಪಿಸುವುದು.

ಈ ಕೋರ್ಸ್‌ ಅವಧಿಯ ವಿಸ್ತರಣೆ 2015-16ರಿಂದ ಆರಂಭವಾಗಿ, ಐದು ವರ್ಷ­ಗಳಲ್ಲಿ ಅನುಷ್ಠಾನಗೊಳಿಸಬೇಕೆಂದು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ರಚಿಸಿದ್ದ ‘ಪೂನಮ್ ಬಾತ್ರ ಸಮಿತಿ’ಯೂ ಶಿಫಾರಸು ಮಾಡಿತ್ತು. ಇದರಂತ ಈಗ ಬಿ.ಎಡ್ ಕೋರ್ಸಿನ ಅವಧಿಯನ್ನು ಎರಡು ವರ್ಷಕ್ಕೆ ಹೆಚ್ಚಿಸಲಾಗಿದೆ. ಜತೆಗೆ ಪಿಯುಸಿ ಉಪನ್ಯಾಸಕರಿಗೆ ಬಿ.ಎಡ್ ಕಡ್ಡಾಯ ಮಾಡಲಾಗಿದೆ.

ಬಿ.ಎಡ್ ಕಡ್ಡಾಯ ಸಮಸ್ಯೆ:

ಕೆಲವು ಪಿಯುಸಿ ಉಪನ್ಯಾಸಕರು ಪಿ.ಎಚ್‌ಡಿ ಪದವೀಧರರಿದ್ದಾರೆ. ನೆಟ್ (ನ್ಯಾಷನಲ್ ಎಂಟ್ರಾನ್ಸ್ ಟೆಸ್ಟ್) ಪಾಸಾದವರಿದ್ದಾರೆ. ಆದರೆ ಪಿಯುಸಿ ಬೋಧನೆಗೆ ಇವರೆಲ್ಲಾ ಬಿ.ಎಡ್ ಮಾಡಲೇಬೇಕಾಗಿದೆ. ಎಷ್ಟೇ ಉನ್ನತ ವ್ಯಾಸಾಂಗ ಮಾಡಿದರೂ ಅದು ಲೆಕ್ಕಕ್ಕೆ ಇಲ್ಲ. ಇದರಿಂದ ಕೆಲವರು ಖಾಸಗಿ ಬಿ.ಎಡ್ ಕಾಲೇಜುಗಳಿಗೆ ಹೋಗಿ, “ಏನೋ ಸರ್ಕಾರ ನಿಯಮ ಮಾಡಿದೆ. ನಾವು ಪ್ರತಿ ನಿತ್ಯ ಕಾಲೇಜಿಗೆ ಬರಲು ಸಾಧ್ಯವಿಲ್ಲ. ನೀವು ಹೇಳಿದ ಸಮಯಕ್ಕೆ ನಾವು ‘ಆಂತರಿಕ ಮೌಲ್ಯಾಂಕನ’ ನೀಡುತ್ತೇವೆ. ಜತೆಗೆ ಹೆಚ್ಚಿನ ಹಣ ಕೂಡ ನೀಡುತ್ತೇವೆ. ನೀವು ಪ್ರವೇಶ ಕಲ್ಪಿಸಿ,” ಎಂದು ಬೇಡಿಕೆ ಇಟ್ಟಿದ್ದಾರೆ ಎಂಬುದೂ ಈ ಹಿಂದೆ ಸುದ್ದಿಯಾಗಿತ್ತು.

ಇನ್ನು ಈ ಹಿಂದೆ ಮಾತನಾಡಿದ್ದ ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ‘ಬಿ.ಎಡ್‌ ಶಿಕ್ಷಣ ಕಡ್ಡಾಯ ಅವೈಜ್ಞಾನಿಕ ತೀರ್ಮಾನ’ ಎಂದಿದ್ದರು. 9, 10, 11 ಮತ್ತು  12ರ ಹಂತದ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿ ಇನ್ನೂ ಜಾರಿಗೆ ಬಂದಿಲ್ಲ. ಉಪನ್ಯಾಸಕರು 9 ಮತ್ತು 10ನೇ ತರಗತಿಗೆ ಕಲಿಸುವಂತಾದಾಗ ಮಾತ್ರ  ಬಿ.ಎಡ್‌ ಶಿಕ್ಷಣ ಕಡ್ಡಾಯ ಮಾಡಬೇಕು. ಈಗ
ಆ ವ್ಯವಸ್ಥೆಯೇ ಇಲ್ಲವೆಂದ ಮೇಲೆ ಅದಕ್ಕೆ ಏಕೆ ಕಡ್ಡಾಯದ ಬರೆ ಎಳೆಯಬೇಕೆಂದೂ ಪ್ರಶ್ನಿಸಿದ್ದರು.

ಇದರ ಜತೆಗೆ ಸ್ನಾತಕೋತ್ತರ ವ್ಯಾಸಾಂಗ ಮಾಡಿದವರೂ ಬಿ.ಎಡ್ ಕೋರ್ಸ್ ಮಾಡಬೇಕಾಗಿರುವುದರಿಂದ ಅನಿವಾರ್ಯವಾಗಿ ಮೂರು ವರ್ಷ ಹೆಚ್ಚಿನ ಹೊರೆಯನ್ನೂ ನಿಭಾಯಿಸಬೇಕಾಗಿದೆ. ಎರಡು ವರ್ಷದ ಕೋರ್ಸ್ ಜನವರಿ ಹೊತ್ತಿಗೆ ಆರಂಭವಾಗುವುದರಿಂದ ಮೂರು ವರ್ಷ ಕಳೆಯುತ್ತದೆ. ಇದು ಆರ್ಥಿಕವಾಗಿ ಹಲವರಿಗೆ ಹೊರೆಯಾಗುತ್ತದೆ. “ಇದೇ ಅವಧಿಗೆ ಇನ್ನೆರಡು ವರ್ಷ ಸೇರಿಸಿದರೆ ಅರಾಮದಲ್ಲಿ ಪಿಎಚ್ಡಿಯೇ ಮುಗಿಸಬಹುದು. ಆದರೆ ಪಿಎಚ್ಡಿ ಮಾಡಿದರೂ ಉಪನ್ಯಾಸಕರಾಗಲು ಸಾಧ್ಯವಿಲ್ಲ. ಏನು ಮಾಡುವುದು,” ಎಂದು ಉಪನ್ಯಾಸಕರು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

ಇನ್ನು ಸದ್ಯ ಸರಕಾರಿ ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಬಿ.ಎಡ್ ಕಡ್ಡಾಯವಿದೆ. ಆದರೆ ಖಾಸಗಿ ಕಾಲೇಜುಗಳಲ್ಲಿ ಅದನ್ನು ಪಾಲಿಸುತ್ತಿಲ್ಲ. ಇನ್ನು ಕೆಲವರಿಗೆ ಸ್ನಾತಕೋತ್ತರ ಪದವಿಯಲ್ಲಿ ಪಡೆದ ವಿಷಯಗಳನ್ನು ಹೊರತಾಗಿಯೂ ಬಿ.ಎಡ್ ವಿಷಯ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ನೌಕರಿ ವಿಚಾರಕ್ಕೆ ಬಂದಾಗ ಮೂಲ ವಿಷಯಗಳನ್ನೇ ನೋಡುತ್ತಾರೆ. ಇಲ್ಲೂ ಒಂದಷ್ಟು ಗೊಂದಲಗಳಿವೆ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ವಾಣಿಜ್ಯ ಉಪನ್ಯಾಸಕರಿಗೆ ಬಿ.ಎಡ್ ಕೋರ್ಸ್ ಇಲ್ಲ. ಅವರು ಏನು ಮಾಡಬೇಕು ಎಂಬ ಗೊಂದಲವಿದೆ. ಅವರಿಗಿನ್ನೂ ಬಿ.ಎಡ್ ಕೋರ್ಸ್ ಆರಂಭವಾಗಿಲ್ಲ.

ಹೀಗೆ ಬಿ.ಎಡ್ ಎನ್ನುವುದು ಗೋಜಲಾಗಿ ಪರಿಣಮಿಸಿ ವರ್ಷಗಳೇ ಕಳೆದಿವೆ. ಈ ವಿಚಾರದಲ್ಲಿ ಸರಕಾರ ಸ್ಪಷ್ಟ ನಿಯಮಗಳನ್ನು ಇನ್ನಾದರೂ ರೂಪಿಸಬೇಕಾಗಿದೆ.

ಈ ಕುರಿತು ಪ್ರತಿಕ್ರಿಯೆಗೆ ಪಿಯು ಬೋರ್ಡ್ ನಿರ್ದೇಶಕಿ ಶಿಖಾ ಲಭ್ಯರಾಗಲಿಲ್ಲ.

ಚಿತ್ರ ಕೃಪೆ: ಒನ್ ಇಂಡಿಯಾ

Leave a comment

FOOT PRINT

Top