An unconventional News Portal.

‘ಓದುಗರಿಗೊಂದು ಮೊದಲ ಪತ್ರ’: ಅಂದಹಾಗೆ, ಯಾರದ್ದು ಈ ‘ಸಮಾಚಾರ’?

‘ಓದುಗರಿಗೊಂದು ಮೊದಲ ಪತ್ರ’: ಅಂದಹಾಗೆ, ಯಾರದ್ದು ಈ ‘ಸಮಾಚಾರ’?

ಆತ್ಮೀಯ ಓದುಗರೇ, 

ನಾವು ನಿಮಗಾಗಿ ಈ ಪತ್ರವನ್ನು ಬರೆಯುತ್ತಿರುವ ಹೊತ್ತಿಗೆ ‘ಸಮಾಚಾರ’ 9 ತಿಂಗಳು ತುಂಬಿ ಹತ್ತನೇ ತಿಂಗಳಿಗೆ ಕಾಲಿಟ್ಟಿದೆ. ಮಗುವೊಂದು ತಾಯಿಯ ಮಡಿಲಿನಿಂದ ಹೊರಜಗತ್ತಿಗೆ ಕಾಲಿಡಲು ತೆಗೆದುಕೊಳ್ಳುವ ಸಮುಯ ಇದು. ಈವರೆಗೂ ‘ಸಮಾಚಾರ’ವನ್ನು ನಾವೇ ನಮ್ಮ ಗರ್ಭದಲ್ಲಿ ಇಟ್ಟು ಪೋಷಿಸಿ ಬೆಳೆಸಿದ್ದೀವಿ. ಇದೀಗ ಅದು ಹೊರ ಜಗತ್ತಿಗೆ ಕಾಲಿಡುವ ಸಮಯ. ಅಂದರೆ, ನಮ್ಮ ಪರಿಧಿಯನ್ನು ದಾಟಿ ಇನ್ನಷ್ಟು ಪಾರದರ್ಶಕವಾಗುವ ಕಾಲ ಇದು.

ಈ ವರ್ಷದ ಆರಂಭದಲ್ಲಿ ಕರ್ನಾಟಕದ ನಾನಾ ಸುದ್ದಿಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕದೊಂದು ಪತ್ರಕರ್ತರ ತಂಡ, ಹೊಸತನವನ್ನು ಹುಡುಕಬೇಕು ಎಂದರೆ; ‘ಇರುವುದನ್ನು ಕಳೆದುಕೊಂಡು ನಿಲ್ಲಬೇಕು’ ಎಂದು ತೀರ್ಮಾನಿಸಿತ್ತು. ಸುದ್ದಿ ವಿಚಾರದಲ್ಲಿ ಹೊಸತನ ಮಾತ್ರವಲ್ಲ, ಸುದ್ದಿಯನ್ನು ಓದುಗರಿಗೆ ನೀಡುವ ಸಾಧ್ಯತೆಯಲ್ಲಿಯೂ ಹೊಸತನ ಬೇಕು ಎಂದು ತಂಡಕ್ಕೆ ಅನ್ನಿಸಿತ್ತು. ಹೀಗಾಗಿಯೇ ಸುದ್ದಿಯನ್ನು ನೀಡಲು ಕಡಿಮೆ ವೆಚ್ಚದಲ್ಲಿ, ಇವತ್ತಿನ ತಂತ್ರಜ್ಞಾನದ ಬೆಳವಣಿಗೆಯ ವೇಗದಲ್ಲಿ ‘ಆನ್ ಲೈನ್’ ಉತ್ತಮ ವೇದಿಕೆ ಎಂದು ತೀರ್ಮಾನಿಸಲಾಯಿತು. ಅದೇ ಮುಂದೆ ‘ಸಮಾಚಾರ’ದ ರೂಪವನ್ನು ಪಡೆದುಕೊಂಡು 2016ರ ಏಪ್ರಿಲ್ 2ನೇ ತಾರೀಖು ಮುಂಜಾನೆ 6 ಗಂಟೆಗೆ ನಿಮ್ಮೆದುರಿಗೆ ಬಂತು.

samachara-final-logo

‘ಸಮಾಚಾರ’ ಮೊದಲ ದಿನವೇ ಕವಿ ಕುವೆಂಪುರವರ ‘ಕವಿಮನೆ’ಯಲ್ಲಿ ಆಗಿದ್ದ ಕಳ್ಳತನ ಪ್ರಕರಣದ ತನಿಖಾ ವರದಿಯನ್ನು ನಿಮ್ಮೆದುರಿಗೆ ಇಟ್ಟಿತು. ಜತೆಗೆ, ಕವಿಮನೆಯಲ್ಲಿ ಪದಕಗಳನ್ನು ಕದ್ದ ಆರೋಪಕ್ಕೆ ಗುರಿಯಾದ ‘ಶ್ರೀಸಾಮಾನ್ಯ ಆರೋಪಿ’ಯ ಸಂದರ್ಶನವನ್ನೂ ಪ್ರಕಟಿಸಿತ್ತು. ಮಧ್ಯಾಹ್ನದ ವೇಳೆಗೆ, ತುಮಕೂರು ಮೂಲದ ವಿದ್ಯಾರ್ಥಿಗಳ ಮೇಲೆ ರಾಜದ್ರೋಹದ ಪ್ರಕರಣವನ್ನು ಬಯಲಿಗೆಳೆದೆವು. ಮಾರನೇ ದಿನ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳು ಈ ಸುದ್ದಿಯ ಫೋಲೋ ಅಪ್ ಪ್ರಕಟಿಸಿದವು.

ಹೀಗೆ, ಶುರುವಾದ ‘ಸಮಾಚಾರ’ದ ಸುದ್ದಿ ನೀಡುವ ಪಯಣ ಈವರೆಗೆ ಸಾಕಷ್ಟು ಅಪರೂಪದ, ನಿರ್ಭಿಡೆಯ ಸುದ್ದಿಗಳನ್ನು ನಿಮ್ಮೆದುರಿಗೆ ಇಟ್ಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗುಣಮಟ್ಟದ ವರದಿಗಳನ್ನು ನೀವು ನಿರೀಕ್ಷಿಸಬಹುದಾಗಿದೆ.

ಅಂದಹಾಗೆ, ಯಾರದ್ದು ಈ ‘ಸಮಾಚಾರ’?.

ನಮ್ಮಲ್ಲಿ ಹೊಸತೊಂದು ಸುದ್ದಿ ವಾಹಿನಿ ಆರಂಭವಾಗುತ್ತಿದೆ, ಹೊಸ ಪತ್ರಿಕೆಯೊಂದು ಮಾರುಕಟ್ಟೆಗೆ ಬರುತ್ತಿದೆ ಎಂದರೆ ಮೊದಲು ಕೇಳುವ ಪ್ರಶ್ನೆ, ‘ಯಾರು ದುಡ್ಡು ಹಾಕುತ್ತಿದ್ದಾರೆ?’ ಎಂದು. ಹಾಗೆ ನೋಡಿದರೆ, ‘ಸಮಾಚಾರ’ ಅತ್ಯಂತ ಕಡಿಮೆ ಮೂಲ ಬಂಡವಾಳದಲ್ಲಿ ಶುರುವಾದ ಮಾಧ್ಯಮ ಸಂಸ್ಥೆ. ಪತ್ರಕರ್ತರು ತಮ್ಮ ಸಂಬಳದಲ್ಲಿ ಉಳಿಸಿದ ಬಂದ ಹಣದಲ್ಲಿ ಶುರು ಮಾಡಿದ ಸಂಸ್ಥೆ ಇದು. ಈವರೆಗೂ, ಅಂದರೆ ಕಳೆದ 9 ತಿಂಗಳವರೆಗೂ ‘ಸಮಾಚಾರ’ದ ಆರ್ಥಿಕ ಮೂಲ ಇದೆ.

ಆದರೆ ಮುಂದೆ?

ನಮ್ಮ ಮುಂದೆ ಹಣಕ್ಕಾಗಿ ಎರಡು ಸ್ಪಷ್ಟದಾರಿಗಳಿವೆ. ಅವುಗಳಲ್ಲಿ ಒಂದು- ಬಂಡವಾಳ ಹೂಡುವವರನ್ನು ಒಳಗೆ ಬಿಟ್ಟುಕೊಳ್ಳುವುದು. ಈವರೆಗೆ ನಮಗೆ ಮಾಜಿ ಪತ್ರಕರ್ತರಿಂದ ಹಿಡಿದು, ಉದ್ಯಮಿಗಳವರೆಗೆ, ‘ನಾವು ಬಂಡವಾಳ ಹೂಡುತ್ತೇವೆ’ ಎಂಬ ಕರೆಗಳು ಸಾಕಷ್ಟು ಬಂದಿವೆ. ಇವರೆಲ್ಲರಿಗೂ ಬಂಡವಾಳ ಹೂಡಿ ಲಾಭವನ್ನು ಗಳಿಸಿಕೊಳ್ಳಲು ಮಾಧ್ಯಮ ಉತ್ತಮವಾದ ಕ್ಷೇತ್ರ ಎಂಬ ಸ್ಪಷ್ಟ ಅರಿವಿದೆ. ಇದಕ್ಕಾಗಿಯೇ ನಾವು ಹಿಂದೇಟು ಹಾಕಿದ್ದೇವೆ.

ಎರಡನೇ ಸಾಧ್ಯತೆ ಜಾಹೀರಾತುಗಳದ್ದು. ಇವತ್ತು ಜಗತ್ತಿನ ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳು ನಡೆಯುತ್ತಿರುವ ರೀತಿ ಇದು. ‘ಕಂಟೆಂಟ್’ ಎಂದು ಕರೆಯುವ ಸುದ್ದಿಗಳ ಜತೆಯಲ್ಲಿ ಓದುಗರಿಗೆ ಜಾಹೀರಾತುಗಳನ್ನು ತಲುಪಿಸಿದರೆ ಒಂದಷ್ಟು ಹಣವನ್ನು ಜಾಹೀರಾತುದಾರರು ಅಥವಾ ಸಂಸ್ಥೆಗಳು ನೀಡುತ್ತವೆ. ನಿಧಾನವಾಗಿ ಕಂಟೆಂಟ್ ವಿಚಾರದಲ್ಲಿಯೂ ಒಂದಷ್ಟು ಹೊಂದಾಣಿಕೆ ಮಾಡಿಕೊಂಡರೆ, ಆದಾಯದ ಹರಿಯುವಿಕೆಯೂ ಹೆಚ್ಚುತ್ತದೆ. ಆದರೆ ಕಂಟೆಂಟ್ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂಜರಿಯುವ ಮನಸ್ಸು ನಮಗಿಲ್ಲವಾದ್ದರಿಂದ, ನಮ್ಮ ಮಾಧ್ಯಮವನ್ನು ಜಾಹೀರಾತುಗಳ ಜಾಲಕ್ಕೆ ಅಡವಿಡಲು ನಾವು ಸಿದ್ಧರಿಲ್ಲ.

ಇವೆರಡನ್ನೂ ಬಿಟ್ಟರೆ ಇರುವ ಒಂದೇ ದಾರಿ ಓದುಗರಿಂದಲೇ ಧನ ಸಹಾಯವನ್ನು ಪಡೆದುಕೊಳ್ಳುವುದು. ಅದು ನಮ್ಮ ಈವರೆಗಿನ ಅನುಭವಕ್ಕೆ ಧಕ್ಕಿರುವ ‘ಬಿಜಿನೆಸ್ ಮಾಡೆಲ್’.

ಒಂದು ಪರ್ಯಾಯ ಮಾಧ್ಯಮವನ್ನು ಕಟ್ಟಬೇಕು ಎಂದು ಹೊರಟವರಿಗೆ ಮೇಲೆ ತಿಳಿಸಿದ ಮೊದಲ ಎರಡೂ ಸಾಧ್ಯತೆಗಳನ್ನು ಪಕ್ಕಕ್ಕೆ ಇಡುವುದು ಅನಿವಾರ್ಯ ಕೂಡ. ಯಾವುದೇ ಕಾರಣಕ್ಕೂ ಮಾಧ್ಯಮವನ್ನು ಯಾರದ್ದೋ ವೈಯಕ್ತಿಕ ಲಾಭಕ್ಕಾಗಿಯೋ, ಇಲ್ಲವೇ ಕಂಪನಿಗಳ ಜಾಹೀರಾತನ್ನು ತಲುಪಿಸಲು ವೇದಿಕೆಯಾಗಿಯೋ ಬಳಸುವುದು ಸರಿಯಲ್ಲ ಎಂಬ ಸ್ಪಷ್ಟತೆ ಇದ್ದರೆ ಮಾತ್ರವೇ ಪರ್ಯಾಯವನ್ನು ಹುಟ್ಟು ಹಾಕಲು ಸಾದ್ಯ. ಹಾಗಂತ ಇದು ನಾವೇ ಕಂಡು ಹಿಡಿದ ಮಾದರಿಯೇನಲ್ಲ! ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಮಹಾತ್ಮ ಗಾಂಧಿ ‘ಯಂಗ್ ಇಂಡಿಯಾ’ ಎಂಬ ಪತ್ರಿಕೆಯನ್ನು ನಾಲ್ಕು ಭಾಷೆಗಳಲ್ಲಿ ಹೊರತರಲು ಆಯ್ಕೆ ಮಾಡಿಕೊಂಡು ದಾರಿ ಇದೇ ಆಗಿತ್ತು. ಇವತ್ತಿಗೂ ಆಗಾಗ್ಗೆ ತನಿಖಾ ವರದಿಗಳ ಮೂಲಕ ಜಗತ್ತನ್ನು ಎಚ್ಚರಿಸುವ ‘ದಿ ಗಾರ್ಡಿಯನ್’ ಕೂಡ ಇದೇ ಮಾದರಿಯಲ್ಲಿ ಓದುಗರಿಂದಲೇ ಚಂದಾ ಸಂಗ್ರಹಿಸಿ ಸುದ್ದಿ ಲೋಕದಲ್ಲಿ ದಾಪುಗಾಲು ಇಡುತ್ತಿದೆ. ಇಂತಹ ಹತ್ತು ಹಲವು ಉದಾಹರಣೆಗಳು ನಮ್ಮೆದುರಿಗೆ ಇವೆ. ಆದರೆ ಕರ್ನಾಟಕದ ವಿಚಾರಕ್ಕ ಬಂದರೆ, ಈ ನಿಟ್ಟಿನಲ್ಲಿ ಬಹುಶಃ ‘ಸಮಾಚಾರ’ ಮೊದಲ ಪ್ರಯತ್ನ ಅಷ್ಟೆ.

ಮುಂದಿರುವ ಸಾಧ್ಯತೆಗಳು:

ಸದ್ಯ ನಮ್ಮ ಈವರೆಗಿನ ಅನುಭವಗಳು, ಪತ್ರಿಕೋದ್ಯಮ ಇತಿಹಾಸದ ಪಾಠಗಳು ಹಾಗೂ ಭವಿಷ್ಯದ ಹಾದಿಗಳನ್ನು ಇಟ್ಟುಕೊಂಡು ನಾವು ಒಂದು ಪರ್ಯಾಯ ಆರ್ಥಿಕ ಮೂಲದ ಹುಡುಕಾಟವನ್ನು ಶುರುಮಾಡಿದ್ದೇವೆ. ಇದಕ್ಕಾಗಿಯೇ, ‘ಪೀಪಲ್ ಮೀಡಿಯಾ ಫೌಂಡೇಶನ್’ ಎಂಬ ಲಾಭ ರಹಿತ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದೇವೆ. ಇವತ್ತಿಗೆ ‘ಸಮಾಚಾರ’, ಮುಂದಿನ ದಿನಗಳಲ್ಲಿ ಇನ್ನಷ್ಟು ಪರ್ಯಾಯ ಮಾಧ್ಯಮದ ಸಾಧ್ಯತೆಗಳನ್ನು ಕಟ್ಟುವ ನಿಟ್ಟಿನಲ್ಲಿ ಈ ಫೌಂಡೇಶನ್ ಕೆಲಸ ಮಾಡುವ ಆಶಯ ಇಟ್ಟುಕೊಂಡಿದೆ. ಇದಕ್ಕಾಗಿ ಈ ಹಂತದಲ್ಲಿ ನಮ್ಮ ಓದುಗರಿಂದಲೇ ಧನ ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ.

people-media-samachara

ಮಾಧ್ಯಮ ಸಂಸ್ಥೆಯೊಂದಕ್ಕೆ ಓದುಗರೇ ಹಣ ಯಾಕೆ ನೀಡಬೇಕು? ಬಹುಶಃ ಒಬ್ಬ ರಾಜಕಾರಣಿ, ಒಬ್ಬ ಭ್ರಷ್ಟ ಅಧಿಕಾರಿ ಯಾಕೆ ಮಾಧ್ಯಮ ಸಂಸ್ಥೆಗಳ ಮೇಲೆ ಹಣ ಹೂಡುತ್ತಾರೆ ಎಂಬುದನ್ನು ಅರ್ಥ ಮಾಡಿಕೊಂಡರೆ ಈ ಪ್ರಶ್ನೆಗೆ ಉತ್ತರ ಸುಲಭವಾಗಿ ಸಿಕ್ಕಿ ಬಿಡುತ್ತದೆ. ಹಣ ಯಾರು ಹೂಡುತ್ತಾರೋ, ಅವರ ದನಿಗೆ ಮಾಧ್ಯಮದಲ್ಲಿ ಹೆಚ್ಚು ಪ್ರಾಶಸ್ತ್ಯ ಸಿಗುತ್ತದೆ. ಹೀಗಾಗಿ ಆರ್ಥಿಕ ಸಹಾಯ ನೀಡುವವರು ಓದುಗರೇ ಆದರೆ ಸಹಜವಾಗಿಯೇ ಸಮಾಜದ ತಳಮಟ್ಟದ ದನಿಯನ್ನು ಮಾಧ್ಯಮ ಸಂಸ್ಥೆಗಳು ಎತ್ತಿ ಹಿಡಿಯುತ್ತವೆ. ‘ಸಮಾಚಾರ’ ಆಶಯ ಕೂಡ ಇದೇ ಆಗಿದೆ. ಪರ್ಯಾಯ ಮಾಧ್ಯಮ ಎಂದು ಕರೆದುಕೊಂಡ ಮೇಲೆ ಅದು ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರವೇ ಇರುವ ಮಾಧ್ಯಮವಾಗಿ ರೂಪುಗೊಳ್ಳಬೇಕು. ಅದಕ್ಕಾಗಿ ಅದು ತನ್ನ ಆರ್ಥಿಕ ಮೂಲವಾಗಿ ಓದುಗರನ್ನೇ ನೆಚ್ಚಿಕೊಳ್ಳಬೇಕು.

ಕಳೆದ 9 ತಿಂಗಳ ಅಂತರದಲ್ಲಿ ‘ಸಮಾಚಾರ’ ದೇಶ ವಿದೇಶಗಳಲ್ಲಿ ಲಕ್ಷಾಂತರ ಸಂಖ್ಯೆಯ ಓದುಗರನ್ನು ತಲುಪಿದೆ. ಕಡಿಮೆ ಅವಧಿಯಲ್ಲಿ, ಯಾವುದೇ ಹೆಚ್ಚಿನ ಬಂಡವಾಳದ ಹೂಡುವಿಕೆ ಇಲ್ಲದೆ ತಲುಪಿರುವ ಈ ಜನರನ್ನೇ ನಮ್ಮ ಮುಂದಿನ ದಿನಗಳ ಯಾತ್ರೆಗೆ ಕೈ ಹಿಡಿಯಿರಿ ಎಂದು ಈ ಮೂಲಕ ಕೇಳುತ್ತಿದ್ದೇವೆ.


ನೀವು ಕರ್ನಾಟಕದಲ್ಲಿ ಸ್ವತಂತ್ರ ಮಾಧ್ಯಮ ಸಂಸ್ಥೆಯೊಂದನ್ನು ಬೆಳೆಸಲು ಹೇಗೆಲ್ಲಾ ಬೆಂಬಲಿಸಬಹುದು ಎಂಬುದಕ್ಕೆ ಕೆಳಗಿನ ಕೆಲವು ಸಾಧ್ಯತೆಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ:

samachara-donation-1

  1. ‘ಸಮಾಚಾರ’ಕ್ಕೆ ಧನಸಹಾಯ: ಈ ಹಂತದಲ್ಲಿ ನೀವು ಸಮಾಚಾರದ ದಿನನಿತ್ಯದ ಖರ್ಚು ವೆಚ್ಚಗಳನ್ನು ನಿರ್ವಹಿಸಲು ಧನ ಸಹಾಯ ಮಾಡಿ. ಇದಕ್ಕಾಗಿ ನೀವು ‘ಪೀಪಲ್ ಮೀಡಿಯಾ ಫೌಂಡೇಶನ್’ ಅಕೌಂಟಿಗೆ ಹಣ ಹಾಕಿದರೆ ಸಾಕು. ಮುಂದಿನ ದಿನಗಳಲ್ಲಿ ನಾವು ಧನ ಸಹಾಯ ಮಾಡಿದವರ ಸಂಪೂರ್ಣ ವಿವರ ಮತ್ತು ಆದ ಖರ್ಚು ವೆಚ್ಚಗಳನ್ನು ಪ್ರಕಟಿಸುತ್ತೇವೆ. ಹೀಗಾಗಿ, ನೀವು ನೀಡಿದ ಹಣಕ್ಕೆ ಲೆಕ್ಕವನ್ನೂ, ಮಾಧ್ಯಮ ಸಂಸ್ಥೆಯೊಂದರಿಂದ ಸಂಪೂರ್ಣ ಪಾರದರ್ಶಕತೆಯನ್ನೂ ನಮ್ಮಿಂದ ನಿರೀಕ್ಷಿಸಬಹುದು.

ನಮ್ಮ ಬ್ಯಾಂಕ್ ವಿವರ:

People Media Foudation

Account No.: 50200022368484

Bank Name: HDFC

Branch: Wilson Garden, Bengaluru

IFSC: HDFC0001748 

 

  1. ‘ಸಮಾಚಾರ’ಕ್ಕೆ ಉಪಕರಣಗಳನ್ನು ನೀಡಿ: ನಿಮ್ಮ ಈ ಪೋರ್ಟಲ್ ಹೊರಬರಬೇಕಾದರೆ ತಂತ್ರಜ್ಞಾನ ಸಲಕರಣೆಗಳ ಅಗತ್ಯವಿದೆ. ನೀವು ನಮಗೆ ಕಂಪ್ಯೂಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೀಡಿದರೂ, ಈ ಸಮಯದಲ್ಲಿ ನಮಗೆ ಸಹಾಯವಾಗುತ್ತದೆ.

ವಿಳಾಸ ಇಲ್ಲಿದೆ: 

People Media Foundation

No. 191, New No. 43/3

10th Cross, Wilson Garden

Bengaluru- 560027

  1. ‘ಸಮಾಚಾರ’ಕ್ಕೆ ಮಾಹಿತಿ ನೀಡಿ: ಸ್ವತಂತ್ರ ಮಾಧ್ಯಮವೊಂದು ಸದಾ ಕಾಲ ಸದ್ದು ಮಾಡಲು ‘ಮಾನಿಟರಿ ಸಪೋರ್ಟ್’ ಜತೆಗೆ ಸುದ್ದಿಯ ಸರಕನ್ನೂ ಬೇಡುತ್ತದೆ. ನಿಮ್ಮ ಬಳಿ ಇರುವ ಸುದ್ದಿಯಾಗಲು ಯೋಗ್ಯ ಅಂತ ಅನ್ನಿಸುವ ಯಾವುದೇ ಮಾಹಿತಿ ಇದ್ದರೂ ನಮ್ಮ ಜತೆ ಹಂಚಿಕೊಳ್ಳಿ. ಈ ಮೂಲಕ ಯಾವುದೇ ಅಡೆತಡೆಯಿಲ್ಲದೆ ಮಾಹಿತಿ ಜನರಿಗೆ ತಲುಪಲು ನೆರವಾಗಿ. ಇದಕ್ಕಾಗಿ [email protected] ಅಥವಾ [email protected] ಇ- ಮೇಲ್ ವಿಳಾಸಗಳನ್ನು ಬಳಸಿಕೊಳ್ಳಬಹುದು.

ಈ ಕುರಿತು ಯಾವುದೇ ಸ್ಪಷ್ಟೀಕರಣ, ಮಾಹಿತಿ ಬೇಕಿದ್ದಲ್ಲಿ ಈ ನಂಬರಿಗೆ ಕರೆ ಮಾಡಿ: 080- 41205696 (ಬೆಳಗ್ಗೆ 10- 7ರವರೆಗೆ- ಭಾನುವಾರ ಹೊರತುಪಡಿಸಿ)

-ಸಮಾಚಾರ ಬಳಗ.

Leave a comment

FOOT PRINT

Top