An unconventional News Portal.

‘ಇದು ನಿಮ್ಮದೇ ಪಾಪದ ಕೂಸು’: ರಿಯಲ್ ಎಸ್ಟೇಟ್ ವಂಚಕ ಸಚಿನ್ ನಾಯಕ್ ಮತ್ತೆ ಅಖಾಡಕ್ಕೆ?

‘ಇದು ನಿಮ್ಮದೇ ಪಾಪದ ಕೂಸು’: ರಿಯಲ್ ಎಸ್ಟೇಟ್ ವಂಚಕ ಸಚಿನ್ ನಾಯಕ್ ಮತ್ತೆ ಅಖಾಡಕ್ಕೆ?

ಇತ್ತೀಚಿನ ದಿನಗಳಲ್ಲಿ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ನಡೆದಿರುವ ಬಹುದೊಡ್ಡ ರಿಯಲ್ ಎಸ್ಟೇಟ್ ವಂಚನೆ ಪ್ರಕರಣದಲ್ಲಿ ಮೋಸ ಹೋದವರ ಅರಣ್ಯ ರೋದನೆ ಮುಂದುವರಿದಿದೆ.

ಟಿಜಿಎಸ್, ಡ್ರೀಮ್ಸ್ ಜಿಕೆ ಮತ್ತಿತರ ಕಂಪನಿಗಳ ಹೆಸರಿನಲ್ಲಿ ಫ್ಲಾಟ್, ಸೈಟ್, ವಿಲ್ಲಾಗಳನ್ನು ನೀಡುತ್ತೇವೆ ಎಂದು ಹೇಳಿ ಗ್ರಾಹಕರಿಂದ ಹಣ ಪಡೆದು ವಂಚನೆ ಎಸಗಲಾಗಿತ್ತು. ಈ ಕಂಪನಿಗಳ ಪ್ರಮೋಟರ್ ಸಚಿನ್ ನಾಯಕ್ ಅಲಿಯಾಸ್ ಸುಮನ್ ಕುಮಾರ್ ದಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವ ಈತ, ವಂಚನೆ ಎಸಗಿದ ಜನರಿಗೆ ಪರಿಹಾರ ನೀಡುವ ಭರವಸೆ ಮೇರೆಗೆ ಸಭೆಯೊಂದನ್ನು ಗುರುವಾರ ಆಯೋಜಿಸಿದ್ದ.

ಅನೌಪಚಾರಿಕ ಸಭೆ ನಡೆಯುತ್ತಿದ್ದ ನಗರದ ಎಚ್ಎಸ್ಆರ್ ಲೇಔಟಿನ ವೈಟ್ ಹೌಸ್ ಎಂಬ ಕಲ್ಯಾಣ ಮಂಟಪದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಜಮಾವಣೆಗೊಂಡು, ನೀಡಿದ ಹಣ ವಾಪಾಸ್ ಕೊಡುವಂತೆ ದುಂಬಾಲು ಬಿದ್ದರು. “ಈ ಹೊತ್ತಿನವರೆಗೂ ಸಚಿನ್ ನಾಯಕ್ ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ, ಜನ ಕಾಗದ ಪತ್ರಗಳ ಜತೆಗೆ, ಟಿಜಿಎಸ್ ಮತ್ತಿತರ ಕಂಪನಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ,” ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಸಮಾಚಾರ’ಕ್ಕೆ ಮಾಹಿತಿ ನೀಡಿದರು.

ಟಿಜಿಎಸ್, ಡ್ರೀಮ್ಸ್ ಜಿಕೆ ಕಂಪನಿಗಳಿಂದ ಮೋಸ ಹೋದ ಜನ ಗುರುವಾರ ಒಂದು ಕಡೆ ಸೇರಿದ್ದ ದೃಶ್ಯ.

ಟಿಜಿಎಸ್, ಡ್ರೀಮ್ಸ್ ಜಿಕೆ ಕಂಪನಿಗಳಿಂದ ಮೋಸ ಹೋದ ಜನ ಗುರುವಾರ ಒಂದು ಕಡೆ ಸೇರಿದ್ದ ದೃಶ್ಯ.

ವಂಚನೆಗೊಳಗಾದವರ ಕತೆ:

ಸಚಿನ್ ನಾಯಕ್ ಮತ್ತು ಆತನ ಪತ್ನಿ ಮಂದೀಪ್ ಕೌರ್ ಬೆಂಗಳೂರಿನಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಿದವರ ಪಟ್ಟಿ ಬೆಳೆಯುತ್ತಲೇ ಇದೆ. ಮಡಿವಾಳ ಪೊಲೀಸ್ ಠಾಣೆ ಸೇರಿದಂತೆ ಬೆಂಗಳೂರಿನ ನಾನಾ ಠಾಣೆಗಳಲ್ಲಿ ಇವರಿಬ್ಬರ ವಿರುದ್ಧ ದೂರುಗಳು ದಾಖಲಾಗುತ್ತಲೇ ಇವೆ. ಜತೆಗೆ ಕೇಂದ್ರ ಗೃಹ ಸಚಿವರಿಗೂ ಒಂದು ಆನ್ ಲೈನ್ ಪಿಟಿಷನ್ ಕಳುಹಿಸಲಾಗಿದೆ. (ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ)

ಹೀಗೆ, ದಂಪತಿಯಿಂದ ಮೋಸ ಹೋದ ಅಸಂಖ್ಯಾತ ಜನರ ಪೈಕಿ ಸುಕೇಶ್ ಕುಮಾರ್ ಕೂಡ ಒಬ್ಬರು. ಇವರು ಬೆಂಗಳೂರಿನಲ್ಲಿ ಮನೆಯೊಂದನ್ನು ಹೊಂದಬೇಕು ಎಂದು ಆಸೆ ಪಟ್ಟಿದ್ದರು. ಅದೇ ಸಮಯಕ್ಕೆ ಸರಿಯಾಗಿ ಮಾಧ್ಯಮಗಳಲ್ಲಿ ‘ಟಿಜಿಎಸ್ ಇ ಕಾಮರ್ಸ್’ ಕಂಪೆನಿಯ ಜಾಹೀರಾತು ರಾರಾಜಿಸಲು ಆರಂಭಿಸಿತ್ತು. ಮಾಧ್ಯಮ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುತ್ತಿದ್ದ ಪ್ರಾಪರ್ಟಿ ಎಕ್ಸ್ ಪೋಗಳಲ್ಲೂ ಟಿಜಿಎಸ್ ಕಂಪೆನಿಯೇ ಮುಂಚೂಣಿಯಲ್ಲಿತ್ತು. ಮಾತ್ರವಲ್ಲ ಬೆಂಗಳೂರು ‘ರಾಯಲ್ ಚಾಲೆಂಜರ್ಸ್’ ತಂಡವನ್ನು ವಂಚಕ ಕಂಪನಿ ಪ್ರಾಯೋಜಿಸಿತ್ತು.

ಇದರಿಂದ ಪ್ರಭಾವಕ್ಕೆ ಒಳಗಾದ ಸುಕೇಶ್ ಕುಮಾರ್, ‘ಟಿಜಿಎಸ್ ಲಕ್ಷ್ಮೀ’ ಎಂಬ ಪ್ರಾಜೆಕ್ಟಿನಲ್ಲಿ ಮನೆ ಹೊಂದಲು ಮುಂಗಡವಾಗಿ ಹಣ ನೀಡಿದರು. ತಾವರೆಕೆರೆ ಹೋಬಳಿಯ ಕೋಲೂರು ಗ್ರಾಮದಲ್ಲಿ ಕಂಪನಿ ಪ್ಲ್ಯಾಟ್ ನೀಡುವುದಾಗಿ ಭರವಸೆ ನೀಡಿತ್ತು. ಒಮ್ಮೆ ಒಂದು ಲಕ್ಷ, ಮತ್ತೊಮೆ ಒಂದೂವರೆ ಲಕ್ಷ ಹಣವನ್ನು, 2015ರ ಜನವರಿಯಲ್ಲಿ ‘ಟಿಜಿಎಸ್ ಇ- ಕಾಮರ್ಸ್’ ಹೆಸರಿಗೆ ಹಣ ಪಾವತಿ ಮಾಡಿದ್ದರು. ಕಂಪನಿಯು ಸಚಿನ್ ನಾಯಕ್ ಪತ್ನಿ ಮಂದೀಪ್ ಕೌರ್ ಹೆಸರಿನಲ್ಲಿತ್ತು.

ಸಚಿನ್ ನಾಯಕ್ ಪತ್ನಿ ಮಂದೀಪ್ ಕೌರ್. ಈಕೆಯ ಹೆಸರಿನಲ್ಲಿ ಸಾಷಕ್ಟು ಕಂಪನಿಗಳಿವೆ. ಇವುಗಳ ಮೇಲೆ ಈಗ ಗುರುತರ ಆರೋಪಗಳು ಬಂದಿವೆ.

ಸಚಿನ್ ನಾಯಕ್ ಪತ್ನಿ ಮಂದೀಪ್ ಕೌರ್. ಈಕೆಯ ಹೆಸರಿನಲ್ಲಿ ಸಾಷಕ್ಟು ಕಂಪನಿಗಳಿವೆ. ಇವುಗಳ ಮೇಲೆ ಈಗ ಗುರುತರ ಆರೋಪಗಳು ಬಂದಿವೆ.

ನಂತರ ಮನೆಯೂ ನಿರ್ಮಾಣವಾಗಲಿಲ್ಲ ಎಂದು ಸುಕೇಶ್ ಕುಮಾರ್ ಹಣ ವಾಪಸ್ ಕೇಳಿದರು. ಕೊನೆಗೆ ಸಂಸ್ಥೆ ಇದೇ ಅಕ್ಟೋಬರಿನಲ್ಲಿ 2.5 ಲಕ್ಷದ ಚೆಕ್ ನೀಡಿ ಕೈ ತೊಳೆದುಕೊಂಡಿತು. ಇನ್ನೇನು ಹಣ ಸಿಕ್ಕಿತು ಎಂದು ಸುಕೇಶ್ ಕುಮಾರ್ ಬ್ಯಾಂಕಿಗೆ ಚೆಕ್ ಹಾಕಿದರೆ, ಚೆಕ್ ಬೌನ್ಸ್ ಆಗಿತ್ತು. ಕೇಳಿದರೆ ಕಂಪೆನಿ ಕಡೆಯಿಂದ ಯಾವುದೇ ಉತ್ತರವಿಲ್ಲ. ಇದ್ದ ಕಚೇರಿಗಳೂ ಬಾಗಿಲೆಳೆದುಕೊಂಡಿದ್ದವು.

“ಕೊನೆಗೆ ಗುರುವಾರ ಎಚ್.ಎಸ್.ಆರ್ ಲೇ ಔಟಿನಲ್ಲಿರುವ ವೈಟ್ ಹೌಸ್ ಕಲ್ಯಾಣ ಮಂಟಪಕ್ಕೆ ಬಂದರೆ ಅಲ್ಲಿ ಸಚಿನ್ ನಾಯಕ್ ಸಿಗುತ್ತಾರೆ ಎಂದು ಯಾರೋ ಹೇಳಿದರು. ಅದೇ ರೀತಿ ಬಂದು ನೋಡಿದರೆ ಸಾವಿರಾರು ಜನ ಅಲ್ಲಿ ಸೇರಿದ್ದರು. ಎಲ್ಲರಿದ್ದೂ ಒಂದೇ ಕತೆ; ಚೆಕ್ ಬೌನ್ಸ್. ಅದರಲ್ಲೂ ಕೆಲವರ ಚೆಕ್ಕುಗಳು ಮೂರು ಮೂರು ಬಾರಿ ಬೌನ್ಸ್ ಆಗಿವೆ,” ಎಂದು ಸ್ಥಳದಲ್ಲಿದ್ದ ಸುಕೇಶ್ ಕುಮಾರ್ ಸಹೋದರ ಎಸ್. ಸಿ. ದಿನೇಶ್ ಕುಮಾರ್ ‘ಸಮಾಚಾರ’ಕ್ಕೆ ಮಾಹಿತಿ ನೀಡಿದರು.

“ಇಲ್ಲಿ ಇವತ್ತು ಸಚಿನ್ ನಾಯಕ್ ಬಂದು ಎಲ್ಲರನ್ನೂ ಅಡ್ರೆಸ್ ಮಾಡುತ್ತಾರೆ ಎಂದು ಹೇಳಿದ್ದರು. ಅದಕ್ಕೆ ಬಂದಿದ್ದೆವು. ವಾಟ್ಸಾಪ್, ಫೋನಿನಲ್ಲಿ ಒಬ್ಬರಿಗೊಬ್ಬರು ಹೇಳಿಯೇ ಇಲ್ಲಿ 3-4 ಸಾವಿರ ಜನ ಸೇರಿದ್ದಾರೆ. ಆದರೆ ಇಷ್ಟು (ಮಧ್ಯಾಹ್ನ) ಹೊತ್ತಾದರೂ ಸಚಿನ್ ನಾಯಕ್ ಬಂದಿಲ್ಲ. ಬರುವ ಲಕ್ಷಣವೂ ಇಲ್ಲ,” ಎಂದರು ದಿನೇಶ್ ಕುಮಾರ್.

“ಇಷ್ಟರ ಮಧ್ಯೆ 20-25 ಜನ ಸಚಿನ್ ನಾಯಕ್ ಬೆಂಬಲಿಗರು ಬಂದು ನೀವು ಹೀಗೆ ಗಲಾಟೆ ಮಾಡಿದರೆ ಅವರು ಬಂದು ಮಾತನಾಡಲು ಆಗುವುದಿಲ್ಲ. ಎಲ್ಲರೂ ಶಾಂತ ರೀತಿಯಿಂದ ಇರಿ. ನಾವೂ ಹಣ ಕಳೆದುಕೊಂಡವರೇ. ಅವರಿಗೆ ಜನವರಿ 15ರ ವರೆಗೆ ಸಮಯ ಕೊಡೋಣ. ಎಲ್ಲಾ ಕಚೇರಿಗಳು ಮತ್ತೆ ಆರಂಭವಾಗುತ್ತವೆ. ಸೈಟು ಬೇಕಾದವರು ಸೈಟು, ಮನೆ ಬೇಕಾದವರು ಮನೆ, ಹಣ ಬೇಕಾದವರು ಹಣ ಪಡೆದುಕೊಳ್ಳಬಹುದು ಎಂದು ಮತ್ತದೇ ಸುಳ್ಳು ಭರವಸೆಯನ್ನು ಬಿತ್ತುತ್ತಿದ್ದಾರೆ,” ಎಂದವರು ಹೇಳಿದರು. ಈ ಮೂಲಕ ಸಚಿನ್ ನಾಯಕ್ ಯಾವುದೇ ಅಡೆತಡೆ ಇಲ್ಲದೆ ತನ್ನ ವಂಚಕ ಜಾಲವನ್ನು ಮುಂದುವರಿಸುವ ಸುಳಿವೂ ಸಿಕ್ಕಂತಾಗಿದೆ.

ಸಚಿನ್ ನಾಯಕ್ ಹಾಗೂ ಪತ್ನಿ ಮಂದೀಪ್ ಕೌರ್ ಕಂಪನಿಯ ವಂಚಕ ಜಾಹೀರಾತುಗಳನ್ನು, ಅರ್ಧ ಗಂಟೆಯ ಕಾರ್ಯಕ್ರಮಗಳನ್ನು, ಎಕ್ಸ್ ಪೋಗಳನ್ನು ನೋಡಿದ ಜನ ಮೋಸಹೋಗಿದ್ದಾರೆ. ಈಗವರು ಗೋಳು ಹೇಳಿಕೊಳ್ಳಲು ಸಾರ್ವಜನಿಕವಾಗಿ ಬರುತ್ತಿದ್ದಾರೆ. ಆದರೆ ವಂಚಕ ಸಚಿನ್ ನಾಯಕ್ ಮತ್ತಾತನ ಪತ್ನಿಯನ್ನು ಪ್ರಮೋಟ್ ಮಾಡಿ ಬೆಳೆಸಿದ ಮಾಧ್ಯಮಗಳು ಮಾತ್ರ ವಂಚನೆಗೆ ಒಳಗಾದವರ ಕಣ್ಣೀರಿನ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿವೆ. ಇದ್ಯಾವ ಸೀಮೆ ನ್ಯೂಸ್ ಬಿಜಿನೆಸ್? ಇದ್ಯಾವ ಸೀಮೆ ‘ಉತ್ತಮ ಸಮಾಜ ಸ್ವಾಮಿ’ ಅಂತ ಜನ ಕೇಳುತ್ತಿದ್ದಾರೆ.

Leave a comment

FOOT PRINT

Top