An unconventional News Portal.

ಇಳೀ ವಯಸ್ಸಿನಲ್ಲಿ ಆಕ್ರೋಶ ಹೊರಹಾಕಿದ ದೊರೆಸ್ವಾಮಿ: ದಿಡ್ಡಳ್ಳಿ ಆದಿವಾಸಿಗಳಿಗೆ ತಕ್ಷಣದ ನೆರವು

ಇಳೀ ವಯಸ್ಸಿನಲ್ಲಿ ಆಕ್ರೋಶ ಹೊರಹಾಕಿದ ದೊರೆಸ್ವಾಮಿ: ದಿಡ್ಡಳ್ಳಿ ಆದಿವಾಸಿಗಳಿಗೆ ತಕ್ಷಣದ ನೆರವು

“ನಾವು ಅಲ್ಲಿಗೆ (ದಿಡ್ಡಳ್ಳಿ) ಹೋಗಿಯೇ ಹೋಗುತ್ತೇವೆ. ಜೈಲಿಗೆ ಕಳುಹಿಸುತ್ತೀರೋ ಕಳುಹಿಸಿ ನೋಡಿ,” ಹೀಗಂತ ಗುಡುಗಿದವರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ.

ದಿಡ್ಡಳ್ಳಿ ನಿರಾಶ್ರಿತ ಆದಿವಾಸಿಗಳ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್ ರನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ನಿಯೋಗ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿತು. ಈ ಸಂದರ್ಭ ಸರಕಾರ ದಿಡ್ಡಳ್ಳಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದದರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

“ನಕ್ಸಲರು ಬರುತ್ತಾರೆ ಎಂದೆಲ್ಲಾ ಸರಕಾರ ಸುಮ್ಮನೆ ಹೇಳಬಾರದು. ಯಾರು ನಕ್ಸಲರು. ಅವರನ್ನು (ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್) ಮುಖ್ಯವಾಹಿನಿಗೆ ಕರೆತಂದವನೇ ನಾನು. ಕಳೆದ ಹಲವು ಸಮಯದಿಂದ ಅವರು ರಾಜ್ಯದಾದ್ಯಂತ 10 ಸಾವಿರ ಜನರನ್ನು ಸಂಘಟನೆ ಮಾಡಿದ್ದಾರೆ. ಅವರು ನಕ್ಸಲರು ಎಂದು ಸರಕಾರ ಸಾಬೀತು ಮಾಡಿದರೆ ನಾನು ಅವರ ಜತೆಗಿನ ಸಂಪರ್ಕ ನಿಲ್ಲಿಸುತ್ತೇನೆ. ಸುಮ್ಮನೆ ನಕ್ಸಲರು ಬರುತ್ತಾರೆ ಎನ್ನುವುದಲ್ಲ. ಸರಕಾರ ನಿಮ್ಮ ಬಳಿಯೇ ಇದೆ. ನಕ್ಸಲರನ್ನು ಗುರುತಿಸಿ ಹಿಡಿಯಿರಿ,” ಎಂದು ಅವರು ಏರು ದಿನಯಲ್ಲಿ ಮಣಿವಣ್ಣನ್ ರನ್ನು ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲ “ಸರಕಾರ ತಕ್ಷಣ ಸೆಕ್ಷನ್ 144ನ್ನು ಸರಕಾರ ಹಿಂದಕ್ಕೆ ತೆಗೆದುಕೊಳ್ಳಬೇಕು. ಹೊರಗಿನವರು ಬರಬಾರದು ಎನ್ನಲು ನಾವೇನು ಬೇರೆ ರಾಜ್ಯದಿಂದ ಬಂದವರಲ್ಲ. ಚೀನಾ ಅಥವಾ ಪಾಕಿಸ್ತಾನದಿಂದ ಬಂದು ನಾವು ಕೊಡಗಿಗೆ ತೆರಳುತ್ತಿಲ್ಲ. ಸರಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನು ಯಾವತ್ತೂ ಕರ್ನಾಟಕದವರನ್ನು ಹೊರಗಿನವರು ಎನ್ನಬಾರದು,” ಎಂದು ಆಗ್ರಹಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಣಿವಣ್ಣನ್, ತಕ್ಷಣ ಜಿಲ್ಲಾಧಿಕಾರಿಗೆ ಸೆಕ್ಷನ್ 144 ಜಾರಿಗೊಳಿಸಿದ್ದನ್ನು ಮರುಪರಿಶೀಲನೆ ಮಾಡುವಂತೆ ನೊಟೀಸ್ ನೀಡಲು ಸಿಬ್ಬಂದಿಗೆ ಆದೇಶಿಸಿದರು.

ಈ ಸಂದರ್ಭ ನಿಯೋಗ ಸಚಿವರ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿತು. ತಕ್ಷಣ ಅಲ್ಲಿನ ಜನರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಡುವುದು; ಊಟ ಮತ್ತು ನೀರಿನ ವ್ಯವಸ್ಥೆ ಮಾಡುವುದು. ಅದಾದ ನಂತರ ಆರು ತಿಂಗಳ ಮಟ್ಟಿಗೆ ಅವರಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸುವುದು. ನಂತರ ಅಷ್ಟೂ ಜನರಿಗೆ ಜಮೀನು ನೀಡಿ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಬೇಡಿಕೆ ಇಟ್ಟಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಣಿವಣ್ಣನ್, ಒಂದು ವಾರದ ಒಳಗೆ ತಾತ್ಕಾಲಿಕ ಪುನರ್ವಸತಿಗೆ ಜಾಗ ಹುಡುಕುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ನಿರ್ದೇಶಿಸಿದರು. ಕರ್ನಾಟಕ ಬುಡಕಟ್ಟು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರನ್ನು ಕರೆಸಿಕೊಂಡ ಮಣಿವಣ್ಣನ್, ಆಹಾರ, ನೀರು ಮತ್ತು ತಕ್ಷಣ ಟೆಂಟುಗಳನ್ನು ನಿರ್ಮಿಸಲು 99 ಲಕ್ಷ ಬಿಡುಗಡೆ ಮಾಡುವಂತೆ ಆದೇಶಿಸಿದರು.

ಆದರೆ “ಜಿಲ್ಲಾಡಳಿತದ ಮೂಲಕ ಇದನ್ನು ಕಾರ್ಯಗತಗೊಳಿಸುವುದು ಬೇಡ; ಜಿಲ್ಲಾಧಿಕಾರಿ ಸರಿ ಇಲ್ಲ,” ಎಂದು ಹೋರಾಟಗಾರರು ಒತ್ತಾಯಿಸಿದ ಹಿನ್ನಲೆಯಲ್ಲಿ ಇಲಾಖೆಯ ಮೈಸೂರು ಅಧಿಕಾರಿಗಳಿಂದ ಸವಲತ್ತುಗಳನ್ನು ಆದಿವಾಸಿಗಳಿಗೆ ಒದಗಿಸಲಾಗುವುದು. ಸ್ಥಳೀಯ ಅಧಿಕಾರಿಯೂ ಬೇಡ ಎಂದು ಮಣಿವಣ್ಣನ್ ಹೇಳಿದರು. ಮಾತ್ರವಲ್ಲ ನಾಳೆ (ಶುಕ್ರವಾರ) ತಾವೇ ಮಡಿಕೇರಿಗೆ ಬರುವುದಾಗಿಯೂ ಭರವಸೆ ನೀಡಿದ್ದಾರೆ. ಒಂದೊಮ್ಮೆ ತಾತ್ಕಾಲಿಕ ಪುನರ್ವಸತಿಗೆ ಸರಕಾರಿ ಜಾಗ ಸಿಗದಿದ್ದಲ್ಲಿ ಖಾಸಗಿ ಜಾಗವನ್ನು ಬಾಡಿಗೆಗೆ ತೆಗೆದುಕೊಂಡಾದರೂ ತಾತ್ಕಾಲಿಕ ಮನೆ ನಿರ್ಮಿಸಿಕೊಡುವುದಾಗಿಯೂ ಹೇಳಿದ್ದಾರೆ.

ಹೋರಾಟಗಾರರೇ ಜಾಗ ಹುಡುಕಿಕೊಟ್ಟಲ್ಲಿ ತಕ್ಷಣವೇ ಜಮೀನು ಮಂಜೂರು ಮಾಡಲೂ ಸರಕಾರ ಬದ್ಧವಾಗಿದೆ ಎಂದು ಮಣಿವಣ್ಣನ್ ಹೇಳಿದ್ದಾರೆ.

ಎಂ.ಆರ್ ಸೀತಾರಾಮ್ ಭೇಟಿ:

ಇದೇ ಸಂದರ್ಭ ನಿಯೋಗ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ. ಆರ್. ಸೀತಾರಾಮ್ ಭೇಟಿ ಮಾಡಿತು. ಈ ಸಂದರ್ಭ ಸಚಿವರು ಜನವರಿ 2ರಂದು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಸಚಿವರು, ಕಾರ್ಯದರ್ಶಿಗಳು, ಆದಿವಾಸಿ ಪ್ರತಿನಿಧಿಗಳು ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲು ದಿನ ಗೊತ್ತುಪಡಿಸಿದರು. ಉಸ್ತುವಾರಿ ಸಚಿವರ ಗಮನಕ್ಕೆ ತರದೆ ಆದಿವಾಸಿಗಳ ಮೇಲೆ ಅಮಾನುಷ ದೌರ್ಜನ್ಯ ನಡೆಸಿದ ಅಧಿಕಾರಿಗಳ ಮೇಲೆ ತನಿಖೆ ಆರಂಭಿಸುವ ಭರವಸೆ ನೀಡಿದರು. ಉಳಿದ ಸಮಸ್ಯೆಗಳ ಬಗ್ಗೆಯೂ ಪರಿಹಾರ ಕಂಡುಕೊಳ್ಳುವುದಾಗಿ ನಿಯೋಗಕ್ಕೆ ತಿಳಿಸಿದ್ದಾರೆ.

ಕೊಡಗಿನಲ್ಲಿ ಮಿಂಚಿನ ಬೆಳವಣಿಗೆಗಳು:

ದಿಡ್ಡಳ್ಳಿಯಲ್ಲಿ ಸೆಕ್ಷನ್ 144 ಹಾಕಿರುವುದನ್ನು ವಿರೋಧಿಸಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸದಸ್ಯರು ಗುರುವಾರ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಆದರೆ ಪ್ರತಿಭಟನಕಾರರ ಜತೆ ಮಾತನಾಡುವ ಸೌಜನ್ಯವನ್ನೂ ಜಿಲ್ಲಾಧಿಕಾರಿ ವಿನ್ಸೆಂಟ್ ಡಿ ಸೋಜ ತೋರಿಸಿಲ್ಲ.

ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿರಿಮನೆ ನಾಗರಾಜ್, “ಜಿಲ್ಲಾಧಿಕಾರಿಗೆ ಸ್ವಂತ ಯೋಚನೆ, ಹೃದಯ, ಘನತೆ ಇರಬೇಕು. ಆದರೆ ಇವರಿಗೆ ಯಾವುದೂ ಇಲ್ಲ. ಡಿಸೆಂಬರ್ 19 ರಂದು ದಿಡ್ಡಳ್ಳಿಯಲ್ಲಿ ನಡೆದ ಸಭೆಯಲ್ಲಿ ಪುನರ್ವಸತಿಗೆ ಒಪ್ಪಿಕೊಂಡಿದ್ದರು. ಆದರೆ ಏನೂ ಮಾಡಿಲ್ಲ. ಬದಲಿಗೆ ಮಾನವ ಹಕ್ಕು ಆಯೋಗಕ್ಕೆ 6 ದಿನಗಳಿಂದ ಊಟ ಕೊಡಿಸುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇವರಿಗೆ ಸ್ವಲ್ಪವೂ ಘನತೆಯಿಲ್ಲ,” ಎಂದರು.

diddalli-protest-1

ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ನಡೆದ ಪ್ರತಿಭಟನೆಯ ಚಿತ್ರ.

“ಡಿಸೆಂಬರ್ 13ರಂದು ಬೆಂಗಳೂರಿನಲ್ಲಿನ ಭೂಮಿ ಮತ್ತು ವಸತಿ ಹೋರಾಟ ಸಮಿತಿ ಸಭೆಗೆ ಆದಿವಾಸಿ ಮುಖಂಡರಾದ ಮುತ್ತಮ್ಮ, ಅಪ್ಪಾಜಿಯವರು ಬಂದು ತಮ್ಮ ನೋವು ತೋಡಿಕೊಂಡರು. ಇದಕ್ಕೆ ಸ್ಪಂದಿಸುವುದು ನಮ್ಮ ತಪ್ಪಲ್ಲ. ಇಲ್ಲಿರುವ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದರೆ ನಾವ್ಯಾಕೆ ಇಲ್ಲಿಗೆ ಬರಬೇಕಿತ್ತು,” ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಹೊರಗಿನವರು ಎಂದು ಹೇಳುವುದನ್ನು ಜಿಲ್ಲಾಧಿಕಾರಿ ನಿಲ್ಲಿಸಲಿ ಎಂದೂ ಆಗ್ರಹಿಸಿದ್ದಾರೆ.

ನಾವು ಪ್ರಜಾತಂತ್ರ ಉಳಿಸಲು ಹೋರಾಡುತ್ತಿದ್ದೇವೆ. ಆದಿವಾಸಿಗಳ ನ್ಯಾಯೋಚಿತ ಹಕ್ಕುಗಳನ್ನು ರಕ್ಷಿಸಲು ಮುಂದಾಗಿದ್ದೇವೆ. ಈ ನ್ಯಾಯಯುತ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಸಕ ಬೋಪಯ್ಯ, ಜೈಲಿಗೆ ಹೋಗಿ ಬಂದವರ ಜೊತೆ ನಾನು ಮಾತನಾಡುವುದಿಲ್ಲ ಎನ್ನುವ ದರ್ಪ ತೋರುತ್ತಿದ್ದಾನೆ. ಹೌದು ನಾನು ಜನರಿಗಾಗಿ ಜೈಲಿಗೆ ಹೋಗಿ ಬಂದಿದ್ದೇನೆ. ಭಗತ್ ಸಿಂಗ್, ದೊರೆಸ್ವಾಮಿ, ಮುಂತಾದವರು ನನಗೆ ಸ್ಫೂರ್ತಿ. ಬದಲಿಗೆ ತಮ್ಮ ಭ್ರಷ್ಟಾಚಾರದಿಂದ ಜೈಲಿಗೆ ಹೋದ ಬಿಜೆಪಿ ಮುಖಂಡರಲ್ಲ.

-ಸಿರಿಮನೆ ನಾಗರಾಜ್

ಹೋರಾಟದಲ್ಲಿ ಬದಲಾವಣೆ:

ದಿಡ್ಡಳ್ಳಿ ಹೋರಾಟದ ಬದಲಾವಣೆ ಕುರಿತು ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ’ ಸಮಿತಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

‘ನಮ್ಮ ಹೋರಾಟಗಾರರು ನಿಷೇದಾಜ್ಞೆಯನ್ನು ಧಿಕ್ಕರಿಸಿ ದಿಡ್ಡಳ್ಳಿಯಲ್ಲೇ ಉಳಿದು ಹೋರಾಟ ಮುಂದುವರಿಸಲು ತಯಾರಾಗಿದ್ದಾರೆ. ಪೋಲೀಸರು ಬಂಧಿಸಿದಲ್ಲಿ ಬಂಧನದಲ್ಲಿಯೂ ಹೋರಾಟ ನಡೆಸಲು ಕಟಿಬದ್ಧರಾಗಿದ್ದಾರೆ. ಆದರೆ ಸಂಘರ್ಷದಿಂದ ಆದಿವಾಸಿ ಸಮಸ್ಯೆ, ಸಮಿತಿ ಕಾರ್ಯಕರ್ತರ ಮೇಲಿನ ನಿರ್ಬಂಧಕ್ಕೆ ತಿರುಗಿಕೊಳ್ಳುತ್ತದೆ. ಈ ಕಾರಣಕ್ಕೆ ಪ್ರತಿಭಟನಾ ಧರಣಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆಯೇ ಬೆಳಿಗ್ಗೆ 10 ಗಂಟೆಯಿಂದ ಆರಂಭಿಸಲಿದ್ದೇವೆ. ಅಲ್ಲದೆ ಆದಿವಾಸಿಗಳು ದಿಡ್ಡಲ್ಲಿಯಲ್ಲೂ ಪ್ರತಿಭಟನಾ ಧರಣಿ ಮುಂದುವರಿಸುತ್ತಾರೆ. ಹೆಚ್.ಎಸ್.ದೊರೆಸ್ವಾಮಿಯವರ ನೇತೃತ್ವದಲ್ಲಿ ಬೆಂಗಳೂರಿನ ಟೌನ್ ಹಾಲ್ ಎದುರುಗಡೆ ಪ್ರತಿಭಟನೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳ್ಲೂ ಪ್ರತಿಭಟನೆಗಳು ನಡೆಯಲಿವೆ,’ ಎಂದು ನೂರ್ ಶ್ರೀಧರ್ ಮಾಹಿತಿ ನೀಡಿದ್ದಾರೆ.

ದಿಡ್ಡಳ್ಳಿಯಲ್ಲಿ ಸರಕಾರದಿಂದ ಸಿಸಿ ಕ್ಯಾಮೆರಾ!

“47 ವರ್ಷಗಳಿಂದ ನಾನು ಸಿಸಿ ಕ್ಯಾಮರಾ ನೋಡಿರಲಿಲ್ಲ. ತೇಗ ಬೀಟೆಯ ಬಳಿ ಸಿ ಸಿ ಕ್ಯಾಮರ ಹಾಕುವುದನ್ನು ಬಿಟ್ಟು ನಮ್ಮ ಹಾಡಿಯಲ್ಲಿ ಯಾಕೆ ಹಾಕಿದ್ದಾರೆ? ಹೆಂಗಸರು, ಮಕ್ಕಳು ಶೌಚಕ್ಕೆ ಹೋಗುವುದನ್ನು ನೋಡಲಿಕ್ಕಾ? ಥೂ ಇವರ ಕೊಳಕು ಮನಸ್ಥಿತಿಗೆ ಧಿಕ್ಕಾರ” ಹೀಗಂದವರು ದಿಡ್ಡಳ್ಳಿ ಆದಿವಾಸಿ ಸೋಮಣ್ಣ.

“ಇವತ್ತು ಸಂಘಗಳು ಬೇಡ ಅನ್ನಲು ಇವರು ಯಾರೂ? ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿರುವವರು ಸಂಘಗಳು ಮಾತ್ರ. ನಕ್ಸಲರು ಇದ್ದಾರೆ ಎಂದು ಸುಳ್ಳು ಹೇಳುವುದು ನಿಲ್ಲಬೇಕು. ಅರಿವಿಲ್ಲದ ಜನರ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಲ್ಲಿಯ ಅಧಿಕಾರಿಗಳು ಕುಡುಕರಿಗಿಂತ ದಡ್ಡರು,” ಎಂದು ಹರಿಹಾಯ್ದಿದ್ದಾರೆ.

“ನಿದ್ದೆ ಮಾಡುವವರನ್ನು ಎಬ್ಬಿಸಬಹುದು ನಾಟಕವಾಡುವವರನ್ನು ನಂಬಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ನಿದ್ದೆ ಮಾಡುತ್ತಿದ್ದಾರೆ. ನಾವು ಜನರಿಗೆ ಅಡ್ಡಬೀಳುತ್ತೇವೆ; ಅಧಿಕಾರಿಗಳಿಗಲ್ಲ; ಜನಪ್ರತಿನಿಧಿಗಳಿಗಲ್ಲ. ಮನೆ ಭೂಮಿ ಸಿಗುವವರೆಗೂ ದಿಡ್ಡಳ್ಳಿ ಬಿಟ್ಟು ಹೋಗುವುದಿಲ್ಲ,” ಎಂದು ಸೋಮಣ್ಣ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ದಿನದಿಂದ ದಿನಕ್ಕೆ ದಿಡ್ಡಳ್ಳಿ ಹೋರಾಟ ಕಾವು ಪಡೆದುಕೊಳ್ಳುತ್ತಿದ್ದು, ಆಡಳಿತರೂಡ ಕಾಂಗ್ರೆಸ್ ಸರಕಾರವನ್ನು ಮತ್ತು ಕೊಡಗಿನ ಬಿಜೆಪಿ ಜನಪ್ರತಿನಿಧಿಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಶುಕ್ರವಾರ ದಿಡ್ಡಳ್ಳಿಗೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭೇಟಿ ನೀಡಲಿದ್ದು ಸಮಸ್ಯೆ ಯಾವ ರೂಪಕ್ಕೆ ತಿರುಗಲಿದೆ ಎಂದು ಕಾದು ನೊಡಬೇಕಷ್ಟೆ. ಈ ನಡುವೆ ಮಾಧ್ಯಮಗಳನ್ನು ದಿಡ್ಡಳ್ಳಿಯಿಂದ ಹೊರಗಿಡಲಾಗಿದೆ.

Leave a comment

FOOT PRINT

Top