An unconventional News Portal.

‘ಕ್ಯಾಶ್ ಲೆಸ್ ಎಕಾನಮಿ’: ಭಾರತದಲ್ಲಿ ಇದು ಹೇಗೆ ಸಾಧ್ಯ? ಎಷ್ಟರ ಮಟ್ಟಿಗೆ ಅಗತ್ಯ?

‘ಕ್ಯಾಶ್ ಲೆಸ್ ಎಕಾನಮಿ’: ಭಾರತದಲ್ಲಿ ಇದು ಹೇಗೆ ಸಾಧ್ಯ? ಎಷ್ಟರ ಮಟ್ಟಿಗೆ ಅಗತ್ಯ?

“ನಾವು ಕ್ಯಾಶ್‌ಲೆಸ್‌ ಭಾರತದತ್ತ ತೆರಳದೇ ಇರಲು ಕಾರಣಗಳೇ ಇಲ್ಲ,” ಹೀಗಂಥ ಮೋದಿ ನವೆಂಬರ್ 27ರಂದು ಭಾಷಣ ಮಾಡಿದ್ದರು. ಅದಕ್ಕೂ ಸ್ವಲ್ಪ ಮೊದಲು ಮಾತನಾಡಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ “ಭಾರತವನ್ನು ನಗದು ರಹಿತ ಅರ್ಥ ವ್ಯವಸ್ಥೆಯತ್ತ ಕೊಂಡೊಯ್ಯುತ್ತೇವೆ,” ಎಂದಿದ್ದರು. ಇತ್ತ ಕರ್ನಾಟಕದಲ್ಲಿ ಬ್ರಿಗೇಡ್ ಬಾಯ್ಗಳು ‘ಕ್ಯಾಶ್‌ಲೆಸ್‌ ದುನಿಯಾ’ ಅಂತ ಊರೂರು ಸುತ್ತಿ ಭಾಷಣ ಬಿಗಿಯುತ್ತಿದ್ದಾರೆ. ‘ನಗದು ವ್ಯವಹಾರ ಮುಕ್ತ ಅರ್ಥ ವ್ಯವಸ್ಥೆ’ಯೇ ಆದರ್ಶ ಎನ್ನುವ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಆದರೆ ನಿಜಕ್ಕೂ ಇಂಡಿಯಾ ಕ್ಯಾಶ್‌ಲೆಸ್‌ ಆಗುತ್ತಾ? ಹೀಗೊಂದು ಸಾಧ್ಯತೆ ಇದೆಯಾ? ಜಗತ್ತಿನ ವಿವಿಧ ದೇಶಗಳ ನಗದು ರಹಿತ ಅರ್ಥ ವ್ಯವಸ್ಥೆಯ ಪ್ರಮಾಣಗಳೆಷ್ಟು?

‘ಸಮಾಚಾರ’ದ ಈ ವರದಿಯಲ್ಲಿ ಅವುಗಳತ್ತ ಬೆಳಕು ಚೆಲ್ಲಲಾಗಿದೆ.

Prime Minister Narendra Modiನಗದಿನಲ್ಲೇ ವ್ಯವಹಾರ ನಡೆಯುವ ದೇಶಗಳಲ್ಲಿ ಭಾರತ ಪ್ರಮುಖವಾದುದು. ಇಲ್ಲಿನ ಅರ್ಧಕ್ಕಿಂತ ಸ್ವಲ್ಪವೇ ಹೆಚ್ಚಿನ ವಯಸ್ಕರ ಬಳಿಯಷ್ಟೇ ಬ್ಯಾಂಕ್ ಅಕೌಂಟುಗಳಿವೆ. ಇವರಲ್ಲಿ ತೀರಾ ಅಲ್ಪ ಪ್ರಮಾಣದ ಜನ ಮಾತ್ರ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸುತ್ತಾರೆ. ಇಂದಿಗೂ ದೇಶದ ಶೇಕಡಾ 98 ವ್ಯವಹಾರಗಳು ನಡೆಯುವುದು ನಗದಿನ ರೂಪದಲ್ಲಿಯೇ. ಕಿರಾಣಿ ಅಂಗಡಿಯಿಂದ ಹಿಡಿದು ಜುವೆಲ್ಲರಿ ಶಾಪಿನವರೆಗೆ ಭಾರತೀಯರಿಗೆ ಕ್ಯಾಶ್ ನೀಡಿಯೇ ಅಭ್ಯಾಸ. ಇದೇ ಕಾರಣಕ್ಕೆ 2015ರ ಅಂತ್ಯಕ್ಕೆ ದೇಶದಲ್ಲಿ ಡೆಬಿಟ್ ಕಾರ್ಡುಗಳನ್ನು ಪಡೆದುಕೊಂಡ ಖಾತೆದಾರರ ಸಂಖ್ಯೆ ಕೇವಲ ಶೇಕಡಾ 11 ಮಾತ್ರ.

ಮೂಲಭೂತ ಸೌಕರ್ಯದ ಕೊರತೆ:

ದೇಶದಲ್ಲಿ ನಗದು ರಹಿತ ವ್ಯವಹಾರಗಳಿಗೆ ಮೂಲಭೂತ ಸೌಕರ್ಯದ್ದೇ ಬಲುದೊಡ್ಡ ಸಮಸ್ಯೆ. ದೇಶದಲ್ಲಿರುವ ಎಟಿಎಂಗಳ ಸಂಖ್ಯೆ ತೀರಾ ಕಡಿಮೆ. ಇಡೀ ದೇಶದಲ್ಲಿ ಒಂದು ಲಕ್ಷ ಜನರಿಗೆ ಕೇವಲ 18 ಎಟಿಎಂಗಳಿವೆ. ಆದರೆ ವಿಶ್ವ ಬ್ಯಾಂಕ್ ಪ್ರಕಾರ ಬ್ರೆಜಿಲ್ನಲ್ಲಿರುವ ಎಟಿಎಂಗಳ ಸಂಖ್ಯೆ 129.

ಇದು ಒಂದು ಕಡೆಯಾದರೆ ಸಂಶೋಧನೆಯೊಂದರ ಪ್ರಕಾರ ದೇಶದಲ್ಲಿ ಇಂಟರ್ನೆಟ್ ಬಳಸುತ್ತಿರುವವರ ಸಂಖ್ಯೆ ಕೇವಲ ಶೇಕಡಾ 22 ಮಾತ್ರ; ಸ್ಮಾರ್ಟ್ ಫೋನ್ ಹೊಂದಿದವರ ಸಂಖ್ಯೆ ಶೇಕಡಾ 17.

ಹೀಗಿರುವಾಗ ನಗದು ರಹಿತ ವ್ಯವಹಾರ ಮಾಡಬೇಕೆಂದು ಮನಸ್ಸಿದ್ದರೂ ಮಾಡಲು ಸಾಧ್ಯವಿಲ್ಲ ಎನ್ನುವುದು ವಾಸ್ತವ ವಿಚಾರ.

ಬ್ಯಾಂಕಿಂಗ್ ಸಮಸ್ಯೆ:

ಸದ್ಯ ಹಣಕಾಸಿನ ವಹಿವಾಟೇ ಒಂದು ಹಂತಕ್ಕೆ ನಿಂತು ಹೋಗಿರುವುದರಿಂದ ಜನ ಅನಿವಾರ್ಯವಾಗಿ ಬ್ಯಾಂಕ್ ವ್ಯವಸ್ಥೆಯ ಮೊರೆ ಹೋಗಬೇಕಾಗಿದೆ. ಆದರೆ ಹಲವು ಹಳ್ಳಿಗಳಲ್ಲಿ ಇವತ್ತಿಗೂ ಬ್ಯಾಂಕುಗಳಿಲ್ಲ. ಬ್ಯಾಂಕ್ ಇದ್ದರೂ ಖಾತೆ ಇಲ್ಲದವರಿಗೆ ಅಕೌಂಟ್ ಓಪನ್ ಮಾಡಲು ಸಾಧ್ಯವಾಗುತ್ತಿಲ್ಲ. “ಅಕೌಂಟ್ ಓಪನ್ ಮಾಡಲು ನಮ್ಮಲ್ಲಿ ಸಾಕಷ್ಟು ಸಿಬ್ಬಂದಿಗಳು ಇಲ್ಲ,” ಎನ್ನುತ್ತಾರೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿರುವ ಖಾಸಗಿ ಬ್ಯಾಂಕ್ ಮ್ಯಾನೇಜರ್ ಒಬ್ಬರು. ಮಾಧ್ಯಮದ ಜತೆ ಮಾತನಾಡಲು ನಾನು ಅಧಿಕೃತ ವ್ಯಕ್ತಿ ಅಲ್ಲ ಎನ್ನುತ್ತಲೇ ಅವರು ಖಾಸಗಿಯಾಗಿ ಮಾತನಾಡುತ್ತಿದ್ದರು. ಖಾತೆ ಓಪನ್ ಮಾಡಲು ಏನಿದ್ದರೂ ಡಿಸೆಂಬರ್ ನಂತರ ಬನ್ನಿ ಎಂದು ಅವರು ಬ್ಯಾಂಕಿಗೆ ಬಂದವರನ್ನು ವಾಪಾಸ್ ಕಳುಹಿಸುತ್ತಿದ್ದರು. ಇದು ಸದ್ಯದ ಭಾರತದ ಪರಿಸ್ಥಿತಿ.

ಭಾರತ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂದುವರಿಯಬೇಕಾಗಿದ್ದು ಇನ್ನೂ ಇದೆ. ಈ ಕ್ಷೇತ್ರದಲ್ಲಿ ಚೀನಾ ಹಲವು ಸರಳ ವಿಧಾನಗಳನ್ನು ಅಳವಡಿಸಿಕೊಂಡಿದೆ. ಅಲ್ಲಿ ಕೇವಲ 1 ನಿಮಿಷದಲ್ಲ್ಲಿ ಬ್ಯಾಂಕ್ ಖಾತೆ ತೆರೆಯಬಹುದು. ಅದಕ್ಕಾಗಿ ಮೊಬೈಲ್ ನಂಬರ್, ರಾಷ್ಟ್ರೀಯ ಗುರುತು ಚೀಟಿ ಮತ್ತು ಒಂದು ಸೆಲ್ಫಿ ಸಾಕು. ಆದರೆ ಭಾರತದಲ್ಲಿ ಹಾಗಲ್ಲ. ಇಲ್ಲಿ ಖಾತೆ ತೆರೆಯಲು ಹಲವಾರು ದಾಖಲೆಗಳನ್ನು ಕೇಳುತ್ತಾರೆ. ಇಲ್ಲಿ ಕಲವು ಜನರಿಗೆ ಗುರುತಿನ ಚೀಟಿಯೇ ಇಲ್ಲ. ಇತ್ತೀಚೆಗೆ ಸುದ್ದಿಯಲ್ಲಿರುವ ಕೊಡಗಿನ ದಿಡ್ಡಳ್ಳಿಯ ಜನರನ್ನೇ ನೋಡಿದರೆ, ಇಲ್ಲಿನ ಹೆಚ್ಚಿನವರ ಬಳಿ ಯಾವುದೇ ಗುರುತಿನ ಚೀಟಿಗಳಿಲ್ಲ. ಇನ್ನು ಬ್ಯಾಂಕ್ ಖಾತೆ ತೆರೆಯುವುದು ಇವರ ಪಾಲಿಗೆ ಗಗನ ಕುಸುಮವೇ ಸರಿ.

ಒಂದೊಮ್ಮೆ ಬ್ಯಾಂಕಿಂಗ್ ವ್ಯವಸ್ಥೆ ಸರಳವಾದರೆ ಆಗ ಜನ ಅವರಾಗಿಯೇ ನಗದು ರಹಿತ ಆರ್ಥಿಕತೆಯತ್ತ ಹರಿದು ಬರಲಿದ್ದಾರೆ. ಇದಕ್ಕೆ ಭಾರತೀಯರು ಲ್ಯಾಂಡ್ ಫೋನ್ ಬಿಟ್ಟು ನೇರವಾಗಿ ಮೊಬೈಲ್ ಫೋನನ್ನು ಅಪ್ಪಿಕೊಂಡಿದ್ದು, ಇದೀಗ ಸ್ಮಾರ್ಟ್ ಫೋನುಗಳ ಸಂಖ್ಯೆ ವೇಗವಾಗಿ ವೃದ್ಧಿಯಾಗುತ್ತಿರುವುದು ಇದಕ್ಕೆ ಸಾಕ್ಷಿ ಎನ್ನುತ್ತದೆ ‘ಬ್ಲೂಂಬರ್ಗ್’ ವರದಿ.

ಕ್ಯಾಶ್‌ಲೆಸ್‌ ಎಕಾನಮಿ ಸಾಧ್ಯತೆಗಳು:

ಇಡೀ ಜಗತ್ತಿನಲ್ಲಿ ಅತೀ ಹೆಚ್ಚಿನ ಹಣಕಾಸು ರಹಿತ ವ್ಯವಹಾರ ಮಾಡುವ ದೇಶ ಅಂದರೆ ಅದು ಬೆಲ್ಜಿಯಂ. ಇಲ್ಲಿ 3,000 (2,10,000 ರೂಪಾಯಿ) ಯೂರೋಗಿಂತ ಜಾಸ್ತಿ ನಗದು ರೂಪದಲ್ಲಿ ಪಾವತಿಗಳನ್ನು ಮಾಡುವಂತಿಲ್ಲ. ಹೀಗಾಗಿ ದೇಶದ ಶೇಕಡಾ 93 ಗ್ರಾಹಕರು ಡಿಜಿಟಲ್ ಪಾವತಿಗಳನ್ನೇ ಮಾಡುತ್ತಾರೆ ಎನ್ನುತ್ತದೆ ‘ಮಾಸ್ಟರ್ ಕಾರ್ಡ್’ನ ಹೊಸ ಸಮೀಕ್ಷೆ. ಹೀಗಿದ್ದು ಜಗತ್ತಿನ ನಗದು ರಹಿತ ವ್ಯವಹಾರ ಹೊಂದಿರುವ ದೇಶಗಳಲ್ಲಿ ಬೆಲ್ಜಿಯಂ 6ನೇ ಸ್ಥಾನದಲ್ಲಿದೆ. ಇಲ್ಲಿನ ಕ್ಯಾಶ್‌ಲೆಸ್‌ ವ್ಯವಹಾರದ ಪ್ರಮಾಣ ಶೇಕಡಾ 56 ಮಾತ್ರ. ಅದೇ ಮುಂದುವರಿದ ರಾಷ್ಟ್ರ ಎಂದು ಕರೆಯಲ್ಪಡುವ ಅಮೆರಿಕಾದಲ್ಲಿ ಶೇಕಡಾ 80 ಗ್ರಾಹಕರು ನಗದು ರಹಿತ ಪಾವತಿಗಳನ್ನುಮಾಡುತ್ತಾರೆ. ಹೀಗಿದ್ದೂ ಅಲ್ಲಿನ ನಗದು ರಹಿತ ವ್ಯವಹಾರದ ಪ್ರಮಾಣ ಶೇಕಡಾ 45 ಮಾತ್ರ. ಇನ್ನು ಇತರ ದೇಶಗಳಲ್ಲಿ ನಗದು ರಹಿತ ಹಣಕಾಸು ವ್ಯವಹಾರಗಳನ್ನು ನೋಡುವುದಾದರೆ,

ದೇಶಗಳು ನಗದು ರಹಿತ ವ್ಯವಹಾರ ಪ್ರಮಾಣ
1-ಸಿಂಗಾಪುರ 61%
2-ನೆದರ್ಲಾಂಡ್ 60%
3-ಫ್ರಾನ್ಸ್ 59%
4-ಸ್ವೀಡನ್ 59%
5-ಕೆನಡಾ 57%
6-ಬೆಲ್ಜಿಯಂ 56%
7-ಬ್ರಿಟನ್ 52%
8-ಅಮೆರಿಕಾ 45%
9-ಆಸ್ಟ್ರೇಲಿಯಾ 35%
10-ಜರ್ಮನಿ 33%
11-ದಕ್ಷಿಣ ಕೊರಿಯಾ 29%
12-ಸ್ಪೇನ್ 16%
13-ಬ್ರೆಜಿಲ್ 15%
14-ಜಪಾನ್ 14%
15-ಚೀನಾ 10%
ಭಾರತ 2%

ಮಾಹಿತಿ:ಮಾಸ್ಟರ್ ಕಾರ್ಡ್ ಅಡ್ವೈಸರ್ಸ್ಮೆ ಮೆಝರಿಂಗ್ ಪ್ರೋಗ್ರಾಮ್ ಟುವರ್ಡ್ ಎ ಕ್ಯಾಶ್‌ಲೆಸ್‌ ಸೊಸೈಟಿ

ಕಣ್ಣ ಮುಂದಿನ ವಾಸ್ತವ ಪರಿಸ್ಥಿತಿಗಳು ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಕ್ಯಾಶ್‌ಲೆಸ್‌ ಇಂಡಿಯಾ ಎನ್ನುತ್ತಿದ್ದಾರೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನೂ ಅವರು ಮಾಡಿಕೊಂಡಂತೆ ಕಾಣಿಸುತ್ತಿಲ್ಲ. ಹೀಗಿರುವಾಗ ಪೂರ್ತಿಯಲ್ಲದಿದ್ದರೂ ‘ಕನಿಷ್ಟ ನಗದು ವ್ಯವಹಾರದ ಆರ್ಥಿಕತೆ’ಯನ್ನಾದರೂ ನಿರೀಕ್ಷಿಸಬಹುದಾ ಎಂದರೆ ಅದೂ ಇಲ್ಲ. ಅನಿವಾರ್ಯವಾಗಿ, ಸದ್ಯದ ಭಾರತದ ಪರಿಸ್ಥಿತಿ ನಗದು ರಹಿತ ವ್ಯವಹಾರಕ್ಕೆ ಒಗ್ಗುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಇತ್ತೀಚಿನ ಒಂದು ಸಂದರ್ಶನದಲ್ಲಿ ಕ್ಯಾಶ್ ಲೆಸ್ ಎಕಾನಮಿಯ ಕುರಿತು ಪ್ರತಿಕ್ರಿಯಿಸಿದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, “ಕ್ಯಾಶ್ ಲೆಸ್ ಎಕಾನಮಿ ಎನ್ನುವುದೇ ಜನರ ಹಕ್ಕುಗಳನ್ನು ಕಿತ್ತುಕೊಳ್ಳುವಂತದ್ದು. ದೊಡ್ಡ ಮಟ್ಟದ ವಹಿವಾಟಿನಲ್ಲಿ ನಗದು ಹಣವನ್ನು ನಿಷೇಧಿಸುವುದು ಸರಿ. ಆದರೆ, ಜನ ಸಾಮಾನ್ಯರ ನಿತ್ಯದ ಬದುಕಿನಲ್ಲಿ ನಗದು ಬಳಕೆಗೆ ತಡೆ ಹಾಕುವುದು ಸರಿಯಲ್ಲ,” ಎಂದು ಹೇಳಿದ್ದರು.

ಸದ್ಯದ ಪರಿಸ್ಥಿತಿ ನೋಡಿದರೆ, ಈ ಕ್ಯಾಶ್ ಲೆಸ್ ಎಕಾನಮಿ ಸಾಮಾನ್ಯ ಜನರನ್ನೇ ಟಾರ್ಗೆಟ್ ಮಾಡಿದಂತಿದೆ.

ಚಿತ್ರ ಕೃಪೆ: ಟೆಕ್ ವೈರ್ ಏಷ್ಯಾ

Leave a comment

FOOT PRINT

Top