An unconventional News Portal.

ದಿಡ್ಡಳ್ಳಿ ಆದಿವಾಸಿಗಳ ‘ಲೈನ್ ಮನೆ ಜೀತ’ ಮತ್ತು ಕೊಡಗಿನ ಕಾಫಿ ತೋಟಗಳ ಅಂತರಾಳ

ದಿಡ್ಡಳ್ಳಿ ಆದಿವಾಸಿಗಳ ‘ಲೈನ್ ಮನೆ ಜೀತ’ ಮತ್ತು ಕೊಡಗಿನ ಕಾಫಿ ತೋಟಗಳ ಅಂತರಾಳ

ಇದು ಉಳ್ಳವರು ಮತ್ತು ಏನೂ ಇರದವರ ನಡುವಿನ ವರ್ಗ ಸಂಘರ್ಷ…

ಕಳೆದ 13 ದಿನಗಳಿಂದ ಕೊಡುಗು ಜಿಲ್ಲೆಯ ಮಾಚಿದೇವ ಮೀಸಲು ಅರಣ್ಯದಲ್ಲಿ ಹುಟ್ಟಿಕೊಂಡಿರುವ ‘ಮಾನವೀಯತೆಯ ಬಿಕ್ಕಟ್ಟು’ ಆದಿವಾಸಿಗಳು, ಅವರ ಬದುಕು ಮತ್ತು ಕಾಫಿ ತೋಟಗಳ ಸುಂದರ ಹಸಿರು ಪರಿಸರದ ಮರೆಯಲ್ಲಿಯೇ ಕೊಳೆತು ನಾರುತ್ತಿದ್ದ ವೃಣವನ್ನು ಹೊರಜಗತ್ತಿಗೆ ಪರಿಚಯಿಸಿದೆ.

ಈ ಮೂಲಕ ನಾಗರೀಕ ಸಮಾಜ, ಅರಣ್ಯದ ಜತೆಗೇ ಬದುಕು ಕಟ್ಟಿಕೊಂಡು ಬಂದಿದ್ದ ಆದಿವಾಸಿಗಳ ಕಡೆಗೆ ಹಿಂದೆಂದೂ ಇಲ್ಲದಷ್ಟು ಕಕ್ಕುಲತೆಯಿಂದ ನೋಡುವಂತೆ ಮಾಡಿದೆ. ಈ ವಿಚಾರದಲ್ಲಿ ಇನ್ನೊಂದಿಷ್ಟು ಆಳಕ್ಕಿಳಿದರೆ ರಾಜ್ಯಾದ್ಯಂತ ಇಂತಹದೇ ಬಿಕ್ಕಟ್ಟೊಂದು ಹಲವು ವರ್ಷಗಳಿಂದ ಅಂತರ್ವಾಹಿನಿಯಾಗಿ ಪ್ರವಹಿಸುತ್ತಿರುವುದು ಕಾಣಸಿಗುತ್ತದೆ. ಜತೆಗೆ, ಸರಕಾರ ಮತ್ತು ಅದರ ಘೋಷಣೆಯಲ್ಲಿ ಮಾತ್ರವೇ ಇರುವ ಕೋಟ್ಯಾಂತ ರೂಪಾಯಿ ಹಣದ ಮಾಹಿತಿಯೂ ಲಭ್ಯವಾಗುತ್ತದೆ. ಅವೆಲ್ಲಕ್ಕಿಂತ ಹೆಚ್ಚಾಗಿ, ‘ಲೈನ್ ಮನೆಗಳು’ ಎಂಬ ಕಾಫಿ ಪ್ಲಾಂಟೇಶನ್ಗಳ ಒಳಗಿರುವ ಆಧುನಿಕ ಜೀತ ಕ್ರಮದ ಅಮಾನವೀಯ ಮುಖವೊಂದು ಅನಾವರಣಗೊಳ್ಳುತ್ತದೆ. ಇದು ಅವೆಲ್ಲವುಗಳ ಮೇಲೆ ಬೆಳಕು ಚೆಲ್ಲುವ ಸಮಗ್ರ ವರದಿ.

ಅವರು ಅಲ್ಪಸಂಖ್ಯಾತರು: 

ಆದಿವಾಸಿಗಳನ್ನು ಸರಕಾರದ ಭಾಷೆಯಲ್ಲಿ ಪರಿಶಿಷ್ಟ ಪಂಗಡಗಳು ಎಂದು ಕರೆಯುತ್ತಾರೆ. ಹೀಗೆ, ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಸೇರಿದ ಜನಸಂಖ್ಯೆ ಸುಮಾರು 42 ಲಕ್ಷ. “ಇದು 2011ರ ಜನಗಣತಿ ಪ್ರಕಾರ ಸಿಗುವ ಅಂಕಿಅಂಶ. ನನಗೆ ಅನ್ನಿಸುವುದು ಈ ಸಂಖ್ಯೆ 50- 60 ಲಕ್ಷದಷ್ಟಿದೆ,” ಎನ್ನುತ್ತಾರೆ ಪ್ರೊ. ಎ. ಎಸ್. ಪ್ರಭಾಕರ್. ಇವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಆದಿವಾಸಿಗಳ ಅಧ್ಯಯನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಆದಿವಾಸಿಗಳ ಕುರಿತು ಅಧ್ಯಯನ ನಡೆಸಿಕೊಂಡ ಬಂದ ಪ್ರಭಾಕರ್ ಹಲವು ಅಂಶಗಳ ಕುರಿತು ಬೆಳಕು ಚೆಲ್ಲುತ್ತಾರೆ.

“ಆದಿವಾಸಿಗಳಿಗಾಗಿಯೇ ಕರ್ನಾಟಕ ಸರಕಾರ ವಿಶೇಷ ಕಾಯ್ದೆ ಅಡಿಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಹಣವನ್ನು ಮೀಸಲಿಟ್ಟಿದೆ. 5 ಸಾವಿರ ಕೋಟಿ ಹಣ ಅವರ ಕಲ್ಯಾಣಕ್ಕಾಗಿಯೇ ಇದೆ. ದುರಂತ ಎಂದರೆ, ಈ ಹಣವನ್ನು ಜನಪ್ರಿಯ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸಲಾಗುತ್ತಿದೆ. ಇದರಿಂದ ಆದಿವಾಸಿ ಸಮುದಾಯ ಸ್ವಾವಲಂಭಿಗಳಾಗುವ ಮಾತು ದೂರವೇ ಉಳಿದಿದೆ,” ಎನ್ನುತ್ತಾರೆ ಪ್ರಭಾಕರ್.

15589782_1035624609898348_7815562289934381250_n

ಭೂಮಿ ಹಕ್ಕಿನ ಪ್ರಶ್ನೆ:

ದಿಡ್ಡಳ್ಳಿಯ ಆದಿವಾಸಿಗಳ ಸಮುದಾಯದ ಬಿಕ್ಕಟ್ಟು ಹುಟ್ಟಿಕೊಂಡಿದ್ದೇ ಭೂಮಿ ಹಕ್ಕಿನ ವಿಚಾರದಲ್ಲಿ. ಕಳೆದ ಕೆಲವು ವರ್ಷಗಳ ಅಂತರದಲ್ಲಿ ಕಾಫಿ ತೋಟಗಳ ಲೈನ್ ಮನೆಗಳಿಂದ ಹೊರಬಂದ ಆದಿವಾಸಿಗಳು ಮೀಸಲು ಅರಣ್ಯ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡಲು ಶುರುಮಾಡಿದರು. ಇದು ದಿಡ್ಡಳ್ಳಿ ಆದಿವಾಸಿಗಳ ಕುರಿತು ಸರಕಾರಕ್ಕೂ ಇರುವ ಮಾಹಿತಿ. “ಅಲ್ಲಿ ಹೊರಗಿನಿಂದ ಬಂದವರು ಇದ್ದಾರೆ ಎಂಬ ಮಾಹಿತಿ ಇದೆ. ಈ ಕುರಿತು ಅಧ್ಯಯನ ನಡೆಸಲು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಸಿಎಂ ಹೇಳಿದರು,” ಎನ್ನುತ್ತಾರೆ ಅನಂತ ನಾಯಕ್. ಮಂಗಳವಾರ ನಟ ಚೇತನ್ ನೇತೃತ್ವದಲ್ಲಿ ಆದಿವಾಸಿಗಳ ಕಷ್ಟವನ್ನು ತೆಗೆದುಕೊಂಡು ಸಿಎಂ ಬಳಿಗೆ ಹೋದ ನಿಯೋಗದ ಜತೆ ನಾಯಕ್ ಕೂಡ ಇದ್ದರು.

“ಆದಿವಾಸಿ ಸಮುದಾಯಗಳು ಕಾಡಿನಲ್ಲಿ ಬದುಕುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅರಣ್ಯ ಹಕ್ಕು ಕಾಯ್ದೆ- 2006 ಸ್ಪಷ್ಟವಾಗಿ ಹೇಳುತ್ತದೆ. ಆದರೆ ಇದನ್ನು ಅಧಿಕಾರಿಗಳು ತಿರುಚುತ್ತಿದ್ದಾರೆ,” ಎನ್ನುತ್ತಾರೆ ಪ್ರೊ. ಪ್ರಭಾಕರ್. ಸದ್ಯ ದಿಡ್ಡಳ್ಳಿ ವಿಚಾರದಲ್ಲಿ ಭೂಮಿ ಹಕ್ಕಿನ ವಿಚಾರದಲ್ಲಿ ಗೊಂದಲ ಎದ್ದಿದೆ. ಅರಣ್ಯ ಕಾಯ್ದೆಗಳು ಏನು ಹೇಳುತ್ತವೆ ಎಂಬ ಬಗ್ಗೆ ಸ್ಪಷ್ಟತೆ ಇನ್ನೂ ಬರಬೇಕಿದೆ.

“ಹಾಗೆ ನೋಡಿದರೆ, ದಿಡ್ಡಳ್ಳಿ ಆದಿವಾಸಿಗಳ ಭೂಮಿ ಹಕ್ಕಿನ ಪ್ರಶ್ನೆ ಎಲ್ಲಾ ಕಡೆಯಲ್ಲಿಯೂ ಇರುವಂತದ್ದು. ಅದಕ್ಕಿಂತ ಹೆಚ್ಚಾಗಿ ಗಮನಿಸಬೇಕಾದ ಸಾಮಾಜಿಕ ಬೆಳವಣಿಗೆಯೊಂದು ಇದರ ಹಿಂದಿದೆ. ಅಲ್ಲಿರುವ ಆದಿವಾಸಿ ಕುಟುಂಬಗಳಲ್ಲಿ ಬಹುತೇಕ ಕುಟುಂಬಗಳು ಹಿಂದೆ ಲೈನ್ ಮನೆಗಳಲ್ಲಿ ವಾಸಿಸುತ್ತಿದ್ದವು. ಅವೀಗ ಹೊರಬಂದ ಸ್ವತಂತ್ರ ಬದುಕು ಕಟ್ಟಿಕೊಂಡಿವೆ. ಇದನ್ನು ಕಾನೂನಿನ ಅಡಿಯಲ್ಲಿ ಮಾನ್ಯ ಮಾಡಿದರೆ, ಅದು ಕೊಡಗಿನಲ್ಲಿ ಟ್ರೆಂಡ್ ಸೃಷ್ಟಿಸಬಹುದು ಎಂಬ ಆತಂಕವೂ ಇದ್ದ ಹಾಗಿದೆ. ಹೀಗಾಗಿ, ಆದಿವಾಸಿಗಳು ಮತ್ತದೇ ಜೀತದ ಕೂಪದಲ್ಲಿ ಬೀಳಬೇಕು ಎಂಬ ಮನಸ್ಥಿತಿ ಇದರ ಹಿಂದೆ ಕೆಲಸ ಮಾಡುತ್ತಿದೆ,” ಎನ್ನುತ್ತಾರೆ ಪತ್ರಕರ್ತ ಹರ್ಷಕುಮಾರ್ ಕುಗ್ವೆ.

ಪ್ಲಾಂಟರ್ಸ್ ಏನಂತಾರೆ?: 

ದಿಡ್ಡಳ್ಳಿ ಆದಿವಾಸಿಗಳನ್ನು ಅರಣ್ಯ ಇಲಾಖೆ ಏಕಾಏಕಿ ಹೊರಹಾಕುವ ಮೂಲಕ ಬಿಕ್ಕಟ್ಟೊಂದನ್ನು ಸೃಷ್ಟಿಸಿದೆ. ಇದು ಮಡಿಕೇರಿಯ ಕಾಫಿ ತೋಟಗಳಲ್ಲಿ ಕೂಲಿಯಾಳುಗಳು ಉಳಿದುಕೊಳ್ಳಲು ವ್ಯವಸ್ಥ ಮಾಡಿರುವ ಲೈನ್ ಮನೆಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. “ಲೈನ್ ಮನೆಗಳು ಎಂದರೆ, ಕೂಲಿಯಾಳುಗಳು ಉಳಿದುಕೊಳ್ಳಲು ಒಂದು ಕೋಣೆಯ ವ್ಯವಸ್ಥೆ ಅಷ್ಟೆ. ಇಲ್ಲಿನ ಚಳಿಯಲ್ಲಿ ಬದುಕುವುದಕ್ಕೆ ಒಂದು ಸೂರು. ಹೇಳಿಕೊಳ್ಳಲೂ ಅಲ್ಲಿ ಏನೂ ವ್ಯವಸ್ಥೆ ಇರುವುದಿಲ್ಲ,” ಎನ್ನುತ್ತಾರೆ ಮಡಿಕೇರಿಯ ಸ್ಥಳೀಯ ಪತ್ರಕರ್ತರೊಬ್ಬರು.

ಇಂತಹ ಲೈನ್ ಮನೆಗಳಲ್ಲಿ ಇವತ್ತಿಗೂ ಲಕ್ಷಾಂತರ ಕೂಲಿಯಾಳುಗಳು ಅಲ್ಲಿ ಬದುಕುತ್ತಿದ್ದಾರೆ. “ಕೂಲಿಯಾಳುಗಳು ಬರುತ್ತಿರುತ್ತಾರೆ. ಹೊರಗೆ ಹೋಗುವವರು ಹೋಗುತ್ತಿರುತ್ತಾರೆ. ಒಬ್ಬ ಪ್ಲಾಂಟರ್ ತನ್ನ ಬೆಳೆಯನ್ನು ಬೆಳೆದ ನಂತರ ಮನೆಗೆ ತಂದು ಹಾಕಲು ಅವರನ್ನೇ ನೆಚ್ಚಿಕೊಳ್ಳಬೇಕು. ಕೂಲಿಯಾಳುಗಳ ಸಮಸ್ಯೆ ಇಂದು ನಿನ್ನೆಯದಲ್ಲ. ನಮಗೂ ಸಮಸ್ಯೆಗಳಿವೆ,” ಎನ್ನುತ್ತಾರೆ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಶನ್ ಅಧ್ಯಕ್ಷ, ಎಂ. ಎಂ. ಚಂಗಪ್ಪ. ವೃತ್ತಿಯಲ್ಲಿ ವೈದ್ಯರಾಗಿರುವ ಚಂಗಪ್ಪ, “ಕೂಲಿಯಾಳುಗಳು ಲೈನ್ ಮನೆಯಲ್ಲಿದ್ದರೂ, ಹೊರಗಿದ್ದರೂ ಅಂತಹ ವ್ಯತ್ಯಾಸ ಏನೂ ಆಗುವುದಿಲ್ಲ,” ಎನ್ನುತ್ತಾರೆ.

ಲೈನ್ ಮನೆಗಳಲ್ಲಿಯೇ ಇದ್ದರೆ ರೇಷನ್ ಕಾರ್ಡು ಕೂಡ ಇರುವುದಿಲ್ಲ. ಜತೆಗೆ ಕೂಲಿಯೂ ಕಡಿಮೆ. ಹೀಗಾಗಿ, ಕೂಲಿಯಾಳುಗಳು ಅಂತಹ ಸೂರು ಬಿಟ್ಟು ಸ್ವಂತ ಸೂರು ಹುಡುಕಿಕೊಂಡು ಪ್ಲಾಂಟೇಶನ್ಗಳಿಂದ ಹೊರಬರುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರೊಬ್ಬರು.

ಒಟ್ಟಾರೆ, ಬದುಕು, ಕೂಲಿ, ಶ್ರಮ ಮತ್ತು ಭೂಮಿಯ ಹಕ್ಕಿನ ಹಿನ್ನೆಲೆಯಲ್ಲಿ ಆದಿವಾಸಿಗಳ ಸಂಕಷ್ಟಗಳು ಅನಾವರಣಗೊಂಡಿವೆ. ಸರಕಾರ ತಾಂತ್ರಿಕ ಸಮಸ್ಯೆ ಮುಂದಿಟ್ಟು ದಿನ ತಳ್ಳುತ್ತಿದೆ. ಸಮಾಜ ಕಲ್ಯಾಣ ಸಚಿವ ಆಂಜುನೇಯ ಖುದ್ದಾಗಿ ದಿಡ್ಡಳ್ಳಿಗೆ ಹೊರಟು ನಿಂತಿದ್ದಾರೆ. ಮೊದಲ ಬಾರಿಗೆ ಆದಿವಾಸಿಗಳ ಸಮಸ್ಯೆ ಕರ್ನಾಟಕದ ಮುಖ್ಯವಾಹಿನಿಯಲ್ಲಿ ಸದ್ದು ಮಾಡುತ್ತಿದೆ. ಇದು ಮುಂದಿನ ದಿನಗಳಲ್ಲಿ ತಾರ್ಕಿಕ ಅಂತ್ಯವೊಂದನ್ನು ಕಂಡರೆ, ರಾಜ್ಯ ಇತರೆ ಭಾಗಗಳಲ್ಲಿಯೂ ಇರುವ ಇಂತಹದ್ದೇ ಬಿಕ್ಕಟ್ಟುಗಳ ಪರಿಹಾರಕ್ಕೆ ಸೂತ್ರವೊಂದನ್ನು ಕಂಡುಕೊಂಡಂತೆ ಆಗುತ್ತದೆ.

Leave a comment

FOOT PRINT

Top