An unconventional News Portal.

ವಕೀಲರಿಗಾಗಿ ವಿಚಾರ ಸಂಕಿರಣ: ‘ಅನಾಣ್ಯೀಕರಣದ ಉದ್ದೇಶಗಳೇ ಅನುಮಾನ ಮೂಡಿಸಿವೆ’

ವಕೀಲರಿಗಾಗಿ ವಿಚಾರ ಸಂಕಿರಣ: ‘ಅನಾಣ್ಯೀಕರಣದ ಉದ್ದೇಶಗಳೇ ಅನುಮಾನ ಮೂಡಿಸಿವೆ’

ಕೇಂದ್ರ ಸರಕಾರ ದಿನಕ್ಕೊಂದು ನೀತಿಗಳನ್ನು ಬಿಡುಗಡೆ ಮಾಡುತ್ತಿದ್ದು ಸದ್ಯ ಅನಾಣ್ಯೀಕರಣದ ಉದ್ದೇಶವನ್ನೇ ಬದಲಾಯಿಸಿದೆ ಎಂದು ಆರ್ಥಿಕ ತಜ್ಞ ಪ್ರೊಫೆಸರ್ ಎಸ್. ಆರ್. ಕೇಶವ ಅಭಿಪ್ರಾಯ ಪಟ್ಟರು.

ಅನಾಣ್ಯೀಕರಣ ಬಿಸಿಯ ನಡುವೆ ಬೆಂಗಳೂರಿನಲ್ಲಿ ಲಾಯರ್ಸ್ ಫೋರಂ ಫಾರ್ ಜಸ್ಟಿಸ್ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಜಂಟಿಯಾಗಿ ಆಯೋಜಿಸಿದ್ದ “ಅನಾಣ್ಯೀಕರಣ ಮತ್ತು ಅದರ ಪರಿಣಾಮಗಳು” ಕುರಿತಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

“ಕೇಂದ್ರ ಸರಕಾರದ ಕ್ರಮ ಸರಿಯೋ ತಪ್ಪೋ ಅನ್ನುವುದು ಬೇರೆ ವಿಚಾರ. ಆದರೆ ಯೋಜನೆಯ ಜಾರಿಗೆ ಸರಿಯಾದ ಪೂರ್ವಸಿದ್ಧತೆಯನ್ನೇ ಮಾಡಿಕೊಂಡಿರಲಿಲ್ಲ. ಇದರಿಂದ ಒಟ್ಟು ಯೋಜನೆಯೇ ಉದ್ದೇಶ ಕಳೆದು ಹೋಗಿದೆ. ಆರಂಭದಲ್ಲಿ ಸರಕಾರ ಕಪ್ಪು ಹಣ ಮತ್ತು ಭಯೋತ್ಪಾದನೆಗೆ ಕಡಿವಾಣ ಹಾಕಲು ಅನಾಣ್ಯೀಕರಣವನ್ನು ಜಾರಿಗೆ ತರುತ್ತಿರುವುದಾಗಿ ಹೇಳಿತ್ತು. ಈಗ ಅದನ್ನೇ ನಾವು ಕ್ಯಾಶ್ ಲೆಸ್ (ಹಣಕಾಸು ರಹಿತ) ಆರ್ಥಿಕತೆಯತ್ತ ದೇಶವನ್ನು ಕೊಂಡೊಯ್ಯುತ್ತಿದ್ದೇವೆ ಎನ್ನುತ್ತಿದ್ದಾರೆ. ಇಡೀ ಪ್ರಕ್ರಿಯೆಯಲ್ಲಿ ಜನರಿಗಾಗುತ್ತಿರುವ ಸಮಸ್ಯೆಯತ್ತ ಸರಕಾರ ದಿವ್ಯ ನಿರ್ಲಕ್ಷ್ಯ ತಾಳಿದೆ. ಬ್ಯಾಂಕಿಂಗ್ ವ್ಯವಸ್ಥೆಯ ಶಕ್ತಿ, ಬ್ಯಾಂಕಿಂಗ್ ಕ್ಷೇತ್ರದ ವಿಸ್ತರಣೆ ಬಗ್ಗೆ ಕೇಂದ್ರ ಸರಕಾರ ಗಮನವೇ ಹರಿಸಿಲ್ಲ,” ಎಂದು ಹರಿಹಾಯ್ದರು.

“ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಹಣಕಾಸು ವ್ಯವಸ್ಥೆಗಳು ಒಟ್ಟಾಗಿ ಕೂತು ಈ ಪಾಲಿಸಿ ಬಗ್ಗೆ ಯೋಚಿಸಿಲ್ಲ. ಒಂದೊಮ್ಮೆ ಈ ಯೋಜನೆ ಪೂರ್ಣಗೊಂಡರೂ ಇದರಿಂದ ಸಾಮಾನ್ಯ ಜನರಿಗೆ ತೊಂದರೆ ತಪ್ಪಿದ್ದಲ್ಲ” ಎಂದು ಕಥೆಯ ಮೂಲಕ ಇಡೀ ಅನಾಣ್ಯೀಕರಣದಲ್ಲಿ ಜನರ ಪಾತ್ರವನ್ನು ವಿವರಿಸಿದರು. “ಒಮ್ಮೆ ಒಬ್ಬ ಕುರಿಗಾಹಿ ಕುರಿಗಳಿಗೆ ನಿಮಗೆ ಚಳಿಗಾಲದಲ್ಲಿ ತುಂಬಾ ಚಳಿಯಾಗಲಿದೆ. ನಾನು ನಿಮಗೆಲ್ಲಾ ಉಣ್ಣೆಯ ಸ್ವೆಟರ್ ತೆಗೆದುಕೊಡುತ್ತೇನೆ ಎಂದು ಹೇಳಿದ್ದ. ಆರಂಭದಲ್ಲಿ ಕುರಿಗಳು ತುಂಬಾ ಸಂತೋಷ ಪಟ್ಟವು. ನಂತರ ಕುರಿಗಳೆಲ್ಲಾ ಕೂತು ಉಣ್ಣೆ ಎಲ್ಲಿಂದ ಬರುತ್ತದೆ ಎಂದು ಯೋಚಿಸಿದಾಗ ಅವುಗಳ ಅರಿವಿಗೆ ಬಂತು; ಈತ ನಮ್ಮ ಉಣ್ಣೆಯಿಂದಲೇ ನಮಗೆ ಸ್ವೆಟರ್ ತೆಗೆದು ಕೊಡುತ್ತಿದ್ದಾನೆ ಎಂಬುದು. ಹೀಗೆ ಯಾವಾಗ ಯೋಚನೆ ಮಾಡ್ತಾರೋ ಆವಾಗ ಮಾತ್ರ ಅನಾಣ್ಯೀಕರಣ ಅರ್ಥವಾಗುತ್ತದೆ. ಅಲ್ಲಿವರೆಗೆ ನಾವೆಲ್ಲಾ ಕುರಿಗಳಾಗಿರುತ್ತೇವೆ,” ಎಂದು ವಿಷಾದ ವ್ಯಕ್ತಪಡಿಸಿದರು.

“ಒಂದು ಭಯದ ನಡುವೆ ಜನರು ಬದುಕುತಿದ್ದಾರೆ. ಎಲ್ಲಿ ತಮ್ಮ ಭಯ ವ್ಯಕ್ತಪಡಿಸಿದರೆ ದೇಶದ್ರೋಹಿಗಳಾಗುತ್ತೇವೆಯೋ ಎಂದು ಸುಮ್ಮನೆ ಕುಳಿತಿದ್ದಾರೆ,” ಎಂದು ಹೇಳಿದರು.

ಇನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಅಡ್ವೊಕೇಟ್ ಜನರಲ್ ಪ್ರೊಫೆಸರ್ ರವಿವರ್ಮ ಕುಮಾರ್, “ಅನಾಣ್ಯೀಕರಣ ಆರ್ಬಿಐ ಆಕ್ಟ್ ನ ಸೆಕ್ಷನ್ 26ರ ಉಲ್ಲಂಘನೆಯಾಗಿದೆ. ಸೆಕ್ಷನ್ 26ರ ಪ್ರಕಾರ ಆರ್ಬಿಐ ಅನಾಣ್ಯೀಕಣವನ್ನು ನಿರ್ಧರಿಸಬೇಕು ಮತ್ತು ಇದಕ್ಕೆ ಸರಕಾರದಿಂದ ಅನುಮತಿ ಪಡೆಯಬೇಕು. ದೇಶದ ಬ್ಯಾಂಕಿಂಗ್ ವ್ಯವಸ್ಥೆ ಹೇಗಿದೆ, ಜನರಿಗೆ ಹೇಗೆ ತಲುಪಬೇಕು, ನಮ್ ಶಕ್ತಿ ಏನು ಎಂಬುದನ್ನೆಲ್ಲಾ ಆರ್ಬಿಐ ತಜ್ಞರು ಕುಳಿತು ನಿರ್ಧರಿಸಬೇಕು. ಆದರೆ ಇಲ್ಲಿ ಸರಕಾರ ತನಗೆ ಬೇಕಾಗಿದ್ದನ್ನು ನಿರ್ಧರಿಸಿ ಆರ್ಬಿಐ ಕೈಯಿಂದ ಮಾಡಿಸಿದೆ. ಈ ಮೂಲಕ ರಿಸರ್ವ್ ಬ್ಯಾಂಕ್ ಸಾರ್ವಭೌಮತ್ವವನ್ನು ಮೋದಿ ಸರಕಾರ ನಾಶ ಮಾಡಿದೆ.  ಇದೊಂದು ಸಂವಿಧಾನ ಹಾಗೂ ಆರ್ಬಿಐ ಕಾನೂನಿನ ವಿರೋಧಿ ಕ್ರಮವಾಗಿದೆ. ಇಲ್ಲಿ ಒನ್ ಮ್ಯಾನ್ ಶೋ ನಡಿಯುತ್ತಿದೆ. ಸಂಸ್ಥೆಗಳು ನಾಶವಾಗುತ್ತಿವೆ,”ಎಂದು ನರೇಂದ್ರ ಮೋದಿ ಸರಕಾರವನ್ನು ಝಾಡಿಸಿದರು.

“ಮಾತ್ರವಲ್ಲ ಅನಾಣ್ಯೀಕರಣ ಮೂಲಭೂತ ಹಕ್ಕುಗಳ ಅನುಚ್ಛೇದ 21ರ ಉಲ್ಲಂಘನೆಯೂ ಹೌದು. ಇವತ್ತು ಸಮಾನ್ಯ ಜನರ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಆರ್ಬಿಐ ಸಾಮಾನ್ಯ ಜನರಿಗೆ 500 ರೂಪಾಯಿ ನೋಟು ಎಂದರೆ ನಾನು ನಿನಗೆ 500 ರೂಪಾಯಿ ನೀಡುತ್ತೇನೆ ಎನ್ನುತ್ತದೆ. ಆದರೆ ಇದನ್ನು ಸಾಮಾನ್ಯ ಜನರ ಗಮನಕ್ಕೆ ತರದೇ ಹಿಂದೆಗೆದುಕೊಳ್ಳಲಾಗಿದೆ. ಇದು ದೇಶದ ಸಂವಿಧಾನದ ಉಲ್ಲಂಘನೆಯಾಗಿದೆ,” ಎಂದು ಹೇಳಿದರು.

Leave a comment

FOOT PRINT

Top