An unconventional News Portal.

‘ಡ್ರೀಮ್ಸ್ ಜಿಕೆ’ ಮಹಾ ವಂಚನೆ: ‘ಸಚಿನ್ ನಾಯಕ್ ಎಲ್ಲೀದ್ದೀರಾ’ ಎಂದು ಮಾಧ್ಯಮಗಳೇಕೆ ಕೇಳುತ್ತಿಲ್ಲ?

‘ಡ್ರೀಮ್ಸ್ ಜಿಕೆ’ ಮಹಾ ವಂಚನೆ: ‘ಸಚಿನ್ ನಾಯಕ್ ಎಲ್ಲೀದ್ದೀರಾ’ ಎಂದು ಮಾಧ್ಯಮಗಳೇಕೆ ಕೇಳುತ್ತಿಲ್ಲ?

ಮಾಧ್ಯಮಗಳನ್ನೇ ವೇದಿಕೆಯನ್ನಾಗಿಸಿಕೊಂಡು, ಪೊಲೀಸರನ್ನು ಕಾವಲು ನಾಯಿಗಳಾಗಿ ಮಾಡಿಕೊಂಡು ವಂಚನೆಗೆ ಇಳಿದರೆ ಯಾವ ಪ್ರಮಾಣದಲ್ಲಿ ಜನರ ದುಡಿಮೆಯ ಹಣಕ್ಕೆ ಕನ್ನ ಹಾಕಬಹುದು ಎಂಬುದು ಕೊನೆಗೂ ಬಹಿರಂಗವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವಂಚಕನೊಬ್ಬನ ಬಂಧನದೊಂದಿಗೆ ಈ ಸುದ್ದಿ ಜಗಜ್ಜಾಹೀರಾಗಿದೆ.

ಸಚಿನ್ ನಾಯಕ್ ಅಲಿಯಾಸ್ ಸುಮನ್ ಕುಮಾರ್ ದಾಸ್ ಎಂಬಾತನ ಕರ್ಮಕಾಂಡದ ಕತೆ ಇದು. ನಿಮಗೆ ಸಚಿನ್ ನಾಯಕ್ ಅನ್ನೋದಕ್ಕಿಂತ ಡ್ರೀಮ್ಸ್ ಜಿಕೆ, ಸೆಂಡ್ ಮೈ ಗಿಫ್ಟ್ ಅಥವಾ ಡೈಲಿ ಪೂಜಾ ಎಂಬ ಹೆಸರುಗಳು ಚಿರಪರಿಚಿತವಾಗಿರುತ್ತವೆ. ಇದಕ್ಕೆ ಕಾರಣ ಕರ್ನಾಟಕದ ಮಾಧ್ಯಮಗಳು. ಟಿವಿ ಮತ್ತು ಪತ್ರಿಕೆಗಳಲ್ಲಿ ಈ ಹೆಸರಿನ ಜಾಹೀರಾತುಗಳನ್ನು, ವಿಶೇಷ ಕಾರ್ಯಕ್ರಮಗಳನ್ನು ಕಳೆದ ಎರಡು ವರ್ಷಗಳ ಅಂತರದಲ್ಲಿ ನೀವೆಲ್ಲರೂ ನೋಡಿರುತ್ತೀರಿ. ಅದಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋದರೆ, ಮಾಧ್ಯಮ ಸಂಸ್ಥೆಗಳೇ ನಡೆಸಿದ ‘ರಿಯಾಲಿಟಿ ಎಕ್ಸ್ಪೋ’ವನ್ನೂ ನೀವು ಗಮನಿಸಿರುತ್ತೀರಿ.

ಇವತ್ತು ಅವೆಲ್ಲವುಗಳ ಫಲ ಎಂಬಂತೆ ರಾಜಧಾನಿಯಲ್ಲಿ ಮನೆಕೊಳ್ಳುವ ಕನಸು ಕಂಡ ಸಾವಿರಾರು ಕುಟುಂಬಗಳು ಕಣ್ಣೀರು ಹಾಕುತ್ತಿವೆ. ವರ್ಷಾನುಗಟ್ಟಲೆ ತಾವು ದುಡಿದ ದುಡಿಮೆಯ ಹಣವನ್ನು ಕಳೆದುಕೊಂಡಿವೆ. ಸಾವಿರಾರು ಪ್ರಕರಣಗಳು ಬೆಂಗಳೂರು ದಕ್ಷಿಣ ಭಾಗದ ಪೊಲೀಸ್ ಠಾಣೆಗಳ ಮೆಟ್ಟಿಲೇರಿವೆ. ವಿಶೇಷವಾಗಿ ಮಡಿವಾಳ ಪೊಲೀಸ್ ಠಾಣೆಯಲ್ಲಿ 400ಕ್ಕೆ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಲ್ಲಿ ಖಾಸಗಿ ದೂರುಗಳು ಸಲ್ಲಿಕೆಯಾಗಿವೆ. ಕೊನೆಗೂ ಈ ಎಲ್ಲಾ ಕಂಪನಿಗಳ ಸೂತ್ರದಾರ ಸಚಿನ್ ನಾಯಕ್ ಬಂಧನವಾಗಿದೆ. ಆದರೆ, ಆತನಿಂದ ಭಕ್ಷೀಸು, ಜಾಹೀರಾತು ಪಡೆದ ಮಾಧ್ಯಮಗಳು ಯಶ್ ಮದುವೆಯ ‘ಲೈವ್ ಫೀಡ್’ ಭಿತ್ತರಿಸುತ್ತಿವೆ. ಇದಕ್ಕೆ ಅಪವಾದ ಎಂಬಂತೆ ‘ವಿಶ್ವವಾಣಿ’ ಪತ್ರಿಕೆ ಮಾತ್ರವೇ ಸಚಿನ್ ನಾಯಕ್ ವಂಚನೆಯ ಬಗ್ಗೆ ವಿಶೇಷ ವರದಿಯೊಂದನ್ನು ಶುಕ್ರವಾರ ಪ್ರಕಟಿಸಿದೆ.

'ವಿಶ್ವವಾಣಿ'ಯಲ್ಲಿ ಸಚಿನ್ ನಾಯಕ್ ವಂಚನೆ ಪ್ರಕರಣದ ವರದಿ.

‘ವಿಶ್ವವಾಣಿ’ಯಲ್ಲಿ ಸಚಿನ್ ನಾಯಕ್ ವಂಚನೆ ಪ್ರಕರಣದ ವರದಿ.

ಇದೆಂತಹ ಹಗಲು ದರೋಡೆ:

ಆತ ಸಚಿನ್ ನಾಯಕ್. ನಿಜವಾದ ಹೆಸರು ಸುಮನ್ ಕುಮಾರ್ ದಾಸ್. ಕೆಲವು ವರ್ಷಗಳ ಹಿಂದೆ ಮುಂಬೈಯಲ್ಲಿದ್ದ ಎನ್ನುತ್ತವೆ ಪೊಲೀಸ್ ಮೂಲಗಳು. ಅವು ನೀಡುವ ಮಾಹಿತಿ ಪ್ರಕಾರ, 2007ರ ಹೊತ್ತಿಗೆ ಬೆಂಗಳೂರಿಗೆ ಬಂದವನು ಇಲ್ಲೊಂದು ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಶುರುಮಾಡುತ್ತಾನೆ. ಅದರಲ್ಲಿ ವಂಚನೆಯಾಯಿತು ಎಂದು ಒಂದಷ್ಟು ಜನ ಕಾಟನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಈ ಸಮಯದಲ್ಲಿ ಸುಮನ್ ಕುಮಾರ್ ದಾಸ್ ಬಂಧನಕ್ಕೆ ಒಳಗಾಗುತ್ತಾನೆ. ಜೈಲಿನಿಂದ ಹೊರಬಂದವನು ತನ್ನ ವಂಚಕ ಯೋಜನೆಗೆ ಬೇರೆಯದೇ ಸ್ವರೂಪವನ್ನು ನೀಡುತ್ತಾನೆ.

ಅದಾದ ಕೆಲವು ವರ್ಷಗಳ ನಂತರ ಕನ್ನಡದ ಪ್ರಮುಖ ದಿನ ಪತ್ರಿಕೆಗಳು ಹಾಗೂ ಸುದ್ದಿ ವಾಹಿನಿಗಳಿಗೆ ಸಚಿನ್ ನಾಯಕ್ ‘ಅನ್ನದಾತ’ನಾಗುತ್ತಾನೆ. ಕೋಟಿಗಟ್ಟಲೆ ಜಾಹೀರಾತು ಸುರಿಯುತ್ತಾನೆ. ಇವನ ವಂಚಕ ಕಂಪನಿಯ ಕುರಿತು ವಿಶೇಷ ಪ್ರಾಯೋಜಿತ ಕಾರ್ಯಕ್ರಮಗಳು ವಾಹಿನಿಗಳಲ್ಲಿ ಭಿತ್ತರವಾಗುತ್ತವೆ.

ಟಿವಿ 9ರಲ್ಲಿ ಡ್ರೀಮ್ಸ್ ಜಿಕೆ ಎಂಬ ವಂಚಕ ಕಂಪನಿಯ ಧಮಾಕ.

ಟಿವಿ 9ರಲ್ಲಿ ‘ಡ್ರೀಮ್ಸ್ ಜಿಕೆ’ ಎಂಬ ವಂಚಕ ಕಂಪನಿಯ ಧಮಾಕ.

ಇಂತಹ ವಂಚಕ ಕಾರ್ಯಕ್ರಮಗಳ ಜತೆಗೇ, ವಾಹಿನಿಗಳು ಮತ್ತು ಪ್ರಮುಖ ಪತ್ರಿಕೆಗಳ ಸಹಯೋಗದಲ್ಲಿ ‘ಪ್ರಾಪರ್ಟಿ ಎಕ್ಸ್ಪೋ’ಗಳು ಆಯೋಜನೆಗೊಳ್ಳುತ್ತವೆ. ಮಾಧ್ಯಮಗಳಿಗೆ ಇರುವ ಚೂರುಪಾರು ವಿಶ್ವಾಸಾರ್ಹತೆ ಮತ್ತು ಜನರನ್ನು ತಲುಪುವ ಸಾಮರ್ಥ್ಯಗಳನ್ನೇ ಬಳಸಿಕೊಂಡು ನಡೆದ ಇಂತಹ ಶೋಗಳ ಮೂಲಕ ಜನರಿಗೆ ಮನೆಗಳನ್ನು ಕಟ್ಟಿಕೊಡುವುದಾಗಿ ಹುಸಿ ಭರವಸೆಗಳು ನೀಡಲಾಗುತ್ತದೆ.

ವಂಚನೆಯ ಜಾಲ ಹೇಗೆ?

ಇಲ್ಲಿ ಡ್ರೀಮ್ಸ್ ಜಿಕೆ ಮತ್ತಿತರ ಕಂಪನಿಗಳ ಹೆಸರಿನಲ್ಲಿ ಸಚಿನ್ ನಾಯಕ್ ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿದ್ದ. ಇದನ್ನು ನೋಡಿದ ಜನ ಕರೆ ಮಾಡಿದರೆ ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಐಶಾರಾಮಿ ಕಚೇರಿಗೆ ಕರೆಸಿಕೊಳ್ಳುತ್ತಿದ್ದ. ಅಲ್ಲಿಂದ ತಮ್ಮ ಹಿಂಬಾಲಕನ ಮೂಲಕ ಎಸಿ ಕಾರಿನಲ್ಲಿ ಕರೆದುಕೊಂಡು ಖಾಲಿ ಜಾಗವೊಂದಕ್ಕೆ ಕಳಿಸಿಕೊಡುತ್ತಿದ್ದ. ಅಲ್ಲಾಗಲೇ ತನ್ನ ಕಂಪನಿ ಹೆಸರಿನಲ್ಲಿ ನೆಟ್ಟಿದ್ದ ಫಲಕವನ್ನು ತೋರಿಸಿ, ಮುಂದಿನ ಎರಡು ವರ್ಷಗಳಲ್ಲಿ ಅಪಾರ್ಟ್ಮೆಂಟ್ ನಿರ್ಮಾಣವಾಗುತ್ತದೆ. ನೀವು ಈಗಲೇ ಮುಂಗಡ ಕೊಟ್ಟರೆ ಕಡಿಮೆ ದರದಲ್ಲಿ ಮನೆ ಸಿಗುತ್ತದೆ ಎಂದು ಭರವಸೆ ನೀಡಲಾಗುತ್ತಿತ್ತು. ಹೀಗೆ, 10 ರಿಂದ 50 ಲಕ್ಷದವರೆಗೂ ಮುಂಗಡ ಹಣವನ್ನು ಪಡೆದುಕೊಳ್ಳಲಾಗುತ್ತಿತ್ತು. ಆದರೆ, ಎರಡು ವರ್ಷ ಕಳೆದರೆ ಆ ಜಾಗದಲ್ಲಿ ಯಾವುದೇ ನಿರ್ಮಾಣ ಯೋಜನೆಗಳು ಶುರುವಾಗುತ್ತಿರಲಿಲ್ಲ. ಕೊನೆಗೆ, ಮುಂಗಡ ನೀಡಿದವರು ಹಣ ವಾಪಾಸ್ ಕೊಡಿ ಎಂದು ಗಲಾಟೆ ಮಾಡುತ್ತಿದ್ದರು. ಹೀಗೆ, “ಸಚಿನ್ ನಾಯಕ್ ವಿರುದ್ಧ ಬೆಂಗಳೂರಿನ ನಾನಾ ಪೊಲೀಸ್ ಠಾಣೆಯಲ್ಲಿ 2 ಸಾವಿರಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿರಬಹುದು,” ಎನ್ನುತ್ತಾರೆ ಡ್ರೀಮ್ಸ್ ಜಿಕೆಯನ್ನು ಹತ್ತಿರದಿಂದ ಬಲ್ಲ ಪತ್ರಕರ್ತರೊಬ್ಬರು. ಇನ್ನೂ ಕೆಲವರು ಪೊಲೀಸ್ ಠಾಣೆಗಳನ್ನು ಅಲೆದು ಸುಸ್ತಾಗಿ ನೇರವಾಗಿ ನ್ಯಾಯಾಲಯದಲ್ಲಿ ಖಾಸಗಿ ದೂರನ್ನೂ ಸಲ್ಲಿಸಿದ್ದಾರೆ.

ಇದು ಮಾನಿಕ್ ಕತೆ:

ಹೀಗೆ ವಂಚನೆಗೆ ಒಳಗಾದ ಹಲವು ಕತೆಗಳಿಗೆ ‘ಸಮಾಚಾರ’ ಕಳೆದ ಮೂರು ದಿನಗಳಿಂದ ಕಿವಿಯಾಗುತ್ತಲೇ ಇದೆ. ಬಹುತೇರು ಮಾಧ್ಯಮಗಳಲ್ಲಿ ಬಂದ ಜಾಹೀರಾತುಗಳಿಂದಾಗಿ ಇಲ್ಲವೇ ಅವು ನಡೆಸಿದ ರಿಯಾಲಿಟಿ ಎಕ್ಸ್ಪೋದಂತಹ ವಂಚಕ ಕಾರ್ಯಕ್ರಮಗಳಿಂದಾಗಿ ಮೋಸ ಹೋಗಿದ್ದಾರೆ. ಹೀಗೆ, ಡ್ರೀಮ್ಸ್ ಜಿಕೆ ಜಾಲಕ್ಕೆ ಬಿದ್ದವರ ಪೈಕಿ ಭೋಪಾಲ್ ಮೂಲದ ಮಾನಿಕ್ ಕೂಡ ಒಬ್ಬರು. ಆಗಸ್ಟ್ 2003ರಲ್ಲಿ ಅವರು 9. 5 ಲಕ್ಷ ಹಣವನ್ನು ಸಚಿನ್ ನಾಯಕ್ ಕಂಪನಿಗೆ ಚೆಕ್ ಮೂಲಕ ಕಟ್ಟಿದ್ದರು. ಎರಡು ವರ್ಷಗಳಲ್ಲಿ ಫ್ಲ್ಯಾಟ್ ನೀಡುವ ಭರವಸೆ ಅವರಿಗೆ ಸಿಕ್ಕಿತ್ತು. ಆದರೆ ಎರಡು ವರ್ಷಗಳು ಕಳೆದರೂ ಅವರಿಗೆ ತೋರಿಸಿದ ಜಾಗ ಖಾಲಿ ಉಳಿದಿತ್ತು. “ಅನುಮಾನ ಬಂದ ಕಾರಣಕ್ಕೆ ವಿಚಾರಣೆ ನಡೆಸಿದ ಕಾರಣಕ್ಕೆ ಇದು ವಂಚಕ ಕಂಪೆನಿ ಎಂದು ಗೊತ್ತಾಯಿತು. ಇದನ್ನು ಕೇಳಲು ನಾನು ಅವರ ಕಚೇರಿಗೆ ಹೋದಾಗ ಕೊಲೆ ಬೆದರಿಕೆಯನ್ನೂ ಹಾಕಿದರು. ಮಡಿವಾಳ ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಪ್ರಯೋಜನವಾಗಲಿಲ್ಲ. ಕೊನೆಗೆ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಮೂರ್ನಾಲ್ಕು ವರ್ಷ ಬಡಿದಾಡಿದೆವು. ಕೊನೆಗೆ ನಾನು ಕಟ್ಟಿದ ಹಣಕ್ಕೆ ಒಂದು ಲಕ್ಷ ಬಡ್ಡಿ ಸೇರಿಸಿ ವಾಪಾಸ್ ಕೊಟ್ಟರು,” ಎನ್ನುತ್ತಾರೆ ಮಾನಿಕ್.

ಹೀಗೆ ಡ್ರೀಮ್ಸ್ ಜಿಕೆ ಕಂಪನಿ ಕಡೆಯಿಂದ ಹಣವನ್ನು ಮರಳಿ ಪಡೆದ ಜನರ ಸಂಖ್ಯೆ ಅತ್ಯಂತ ಕಡಿಮೆ. ಉಳಿದವರು ಇವತ್ತಿಗೂ ಹಣಕ್ಕಾಗಿ ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲುಗಳನ್ನು ಸವೆಸುತ್ತಲೇ ಇದ್ದಾರೆ. ವಿಶೇಷ ಎಂದರೆ, ಸಚಿನ್ ನಾಯಕ್ ಕಂಪನಿಯ ವಿರುದ್ಧ ದೂರುಗಳು ದಾಖಲಾಗುತ್ತಿದ್ದ ಸಮಯದಲ್ಲಿಯೇ ಆತ ಸೆಂಡ್ ಮೈ ಗಿಫ್ಟ್, ಡೈಲಿ ಪೂಜಾ ಡಾಟ್ ಕಾಮ್ ಹೆಸರುಗಳಲ್ಲಿ ಕಂಪನಿಗಳನ್ನು ತೆರೆಯುತ್ತಲೇ ಇದ್ದ. ಈ ಕುರಿತು ಕನ್ನಡದ ಮಾಧ್ಯಮಗಳಲ್ಲಿ ವಿಪರೀತ ಎನ್ನಿಸುವಷ್ಟು ಕವರೇಜ್ ಸಿಗುತ್ತಲೇ ಇತ್ತು ಎಂಬುದು ಗಮನಾರ್ಹ.

ಜನಶ್ರೀ ಟಿವಿಯಲ್ಲಿ ಸೆಂಡ್ ಮೈ ಗಿಫ್ಟ್.

ಜನಶ್ರೀ ಟಿವಿಯಲ್ಲಿ ಸೆಂಡ್ ಮೈ ಗಿಫ್ಟ್.

ಸಚಿನ್ ಪರವಾಗಿ ಜನಶ್ರೀ:

2016ರ ಫೆಬ್ರವರಿಯಲ್ಲಿ ಸಚಿನ್ ನಾಯಕ್ ಪರವಾಗಿ ಜನಶ್ರೀ ವಾಹಿನಿ ಅಖಾಡಕ್ಕೆ ಇಳಿದಿತ್ತು ಎಂಬ ಆರೋಪ ಕೇಳಿಬಂದಿತ್ತು. ಪತ್ರಕರ್ತ ಸ್ವಾಮಿ ಗೌಡ ತಮ್ಮ ‘ಹಿಮಾಗ್ನಿ’ ವಾರಪತ್ರಿಕೆಯಲ್ಲಿ ಸಚಿನ್ ನಾಯಕ್ ಕರ್ಮಕಾಂಡದ ಕತೆಯನ್ನು ಪ್ರಕಟಿಸಿದ್ದರು. ಈ ಸಮಯದಲ್ಲಿ ಆತ ಜನಶ್ರೀ ವಾಹಿನಿಯಲ್ಲಿ ಪಾಲುದಾರ ಎಂದು ಹೇಳಿಕೊಳ್ಳುತ್ತಿದ್ದ. ಅದೇ ಹೊತ್ತಿಗೆ ವಾಹಿನಿಯಲ್ಲಿ ಸ್ವಾಮಿಗೌಡ ವಿರುದ್ಧ ಸುದ್ದಿಯೊಂದು ಭಿತ್ತರವಾಗಿತ್ತು. ಈ ಕುರಿತು ಸ್ವತಃ ಜನಶ್ರೀ ಟಿವಿಗೆ ನೀಡಿದ ಪ್ರತಿಕ್ರಿಯೆಯ ವಿಡಿಯೋ ಕ್ಲಿಪಿಂಗ್ ಒಂದು ಇಲ್ಲಿದೆ. ಇಲ್ಲಿರುವ ಸಂಭಾಷಣೆ ಸಚಿನ್ ನಾಯಕ್ ಮತ್ತು ಮಾಧ್ಯಮಗಳ ನಡುವಿನ ಅನೈತಿಕ ಸಂಬಂಧಕ್ಕೆ ಕನ್ನಡಿ ಹಿಡಿದಂತಿದೆ.

ಸಚಿನ್ ನಾಯಕ್ ಕನ್ನಡದ ಇತರೆ ವಾಹಿನಿಗಳಲ್ಲೂ ಹೂಡಿಕೆ ಮಾಡುತ್ತೀನಿ ಎಂದು ಹೋಗಿದ್ದ ಎನ್ನುತ್ತವೆ ಪತ್ರಕರ್ತರ ಮೂಲಗಳು. ಕೆಲವು ವಾಹಿನಿಗಳು ಈತನಿಂದ ಹೂಡಿಕೆ ಮಾಡಿಸಿಕೊಂಡಿದ್ದರೆ, ‘ರಾಜ್ ನ್ಯೂಸ್ ಕನ್ನಡ’ ಕೊನೆಯ ಕ್ಷಣದಲ್ಲಿ ಡೀಲ್ ಒಪ್ಪಿಕೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪತ್ನಿ ಹೆಸರಿನಲ್ಲಿ ವಂಚಕ ಜಾಲ:

ವಂಚನೆಗೆ ಇಳಿದವರು ಪತ್ನಿ ಹೆಸರನ್ನು ಉಪಯೋಗಿಸಿಕೊಳ್ಳುವುದನ್ನು ಕರ್ನಾಟಕದ ಹಲವು ಗಣಿ ಹಗರಣಗಳು ಸಾಬೀತುಪಡಿಸಿತ್ತು. ಸಚಿನ್ ನಾಯಕ್ ಕೂಡ ಇದೇ ಮಾದರಿಯಲ್ಲಿ ತನ್ನ ಪತ್ನಿ ಮಂದೀಪ್ ಕೌರ್ ಹೆಸರಿನಲ್ಲಿಯೇ ತನ್ನ ಕಂಪನಿಗಳನ್ನು ನೋಂದಣಿ ಮಾಡಿಸಿಕೊಂಡಿದ್ದಾನೆ. ಕೆಲವು ತಿಂಗಳ ಹಿಂದೆ, ಕನ್ನಡ ಸುದ್ದಿ ವಾಹಿನಿಯೊಂದರ ಮಾರುಕಟ್ಟೆ ವಿಭಾಗದ ಸಿಬ್ಬಂದಿಯೊಬ್ಬರ ಜತೆ ಮಾತನಾಡಿದ್ದ ಕೌರ್, “ನನ್ನ ಗಂಡ ಎಲ್ಲಾ ಕಂಪನಿಗಳನ್ನು ನನ್ನ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾನೆ. ಮುಂದೊಂದು ದಿನ ತೊಂದರೆಯಾಗಬಹುದು,” ಎಂದು ಅಳಲು ತೋಡಿಕೊಂಡಿದ್ದರು ಎಂದು ಮೂಲಗಳು ಹೇಳುತ್ತವೆ. ಇದೀಗ ಸಚಿನ್ ನಾಯಕ್ ಬಂಧನವಾಗಿದ್ದು, ಕೌರ್ ಕರೆಯನ್ನು ಸ್ವೀಕರಿಸುತ್ತಿಲ್ಲ. ಆಕೆಯೂ ತಲೆ ಮರೆಸಿಕೊಂಡಿರಬಹುದು ಎಂದು ಹತ್ತಿರದಿಂದ ಬಲ್ಲವರು ‘ಸಮಾಚಾರ’ಕ್ಕೆ ತಿಳಿಸಿದ್ದಾರೆ.

ಮಂದೀಪ್ ಕೌರ್ ಹೆಸರಿನಲ್ಲಿರುವ ಕಂಪನಿಗಳು.

ಮಂದೀಪ್ ಕೌರ್ ಹೆಸರಿನಲ್ಲಿರುವ ಕಂಪನಿಗಳು.

ನೈತಿಕತೆ ಪ್ರಶ್ನೆ: 

ಸಚಿನ್ ನಾಯಕ್ ವಿರುದ್ಧ ಇಷ್ಟು ದೊಡ್ಡ ಸಂಖ್ಯೆಗಳಲ್ಲಿ ಪ್ರಕರಣಗಳು ದಾಖಲಾಗುವವರೆಗೂ ಪೊಲೀಸರು ಏನು ಮಾಡುತ್ತಿದ್ದರು ಎಂಬುದು ಪ್ರಶ್ನೆ. “ಆತನ ವಿರುದ್ಧ ನಮ್ಮ ಲಿಮಿಟ್ಸ್ನಲ್ಲಿ 400 ಪ್ರಕರಣಗಳು ದಾಖಲಾಗಿವೆ. ದೂರು ಬರುತ್ತಿದ್ದಂತೆ ಹಣ ವಾಪಾಸ್ ಕೊಡುತ್ತೀವಿ ಎಂದು ಭರವಸೆ ಕೊಡುತ್ತಿದ್ದರಿಂದ ನಾವು ಕ್ರಮ ಕೈಗೊಳ್ಳಲು ಹೋಗಿರಲಿಲ್ಲ” ಎಂಬ ಜಾಣ್ಮೆಯ ಉತ್ತರವನ್ನು ನೀಡುತ್ತಾರೆ ಆಗ್ನೇಯ ವಿಭಾಗದ ಡಿಸಿಪಿ ಎಂ. ಬಿ. ಬೋರಲಿಂಗಯ್ಯ.

ಸದ್ಯ ಆತನ ಮೇಲೆ ವಂಚನೆ ಪ್ರಕರಣಗಳು ದಾಖಲಾಗಿರುವುದಿಂದ ಜಾಮೀನು ಪಡೆಯುವುದು ಕಷ್ಟವಾಗಲಾರದು ಎನ್ನುತ್ತಾರೆ ಅಧಿಕಾರಿಗಳು. ಒಮ್ಮೆ ಜಾಮೀನು ಪಡೆದು ಹೊರಬಂದ ಮೇಲೆ ಸಚಿನ್ ನಾಯಕ್ ವಂಚನೆಗಳು ಮುಂದುವರಿಯುತ್ತವಾ? ಮತ್ತೆ ಮಾಧ್ಯಮಗಳಲ್ಲಿ ಆತನ ವಂಚಕ ಕಂಪನಿಗಳ ಜಾಹೀರಾತುಗಳು ರಾರಾಜಿಸುತ್ತವಾ? ಎಂಬುದನ್ನು ಕಾದು ನೋಡಬೇಕಿದೆ. ಅದಕ್ಕಿಂತ ಹೆಚ್ಚಾಗಿ ಜಾಹೀರಾತು ಮತ್ತು ವಿಶೇಷ ಪ್ರಾಯೋಜಿತ ಕಾರ್ಯಕ್ರಮಗಳು ನೈತಿಕ ಚೌಕಟ್ಟನ್ನು ಮೀರಿದ್ದಾ ಎಂಬುದನ್ನು ಕಾಲ ಸಾಬೀತುಪಡಿಸಲಿದೆ.

Leave a comment

FOOT PRINT

Top