An unconventional News Portal.

‘ಮಹಿಳಾ ನ್ಯಾಯ’: ‘ತ್ರಿವಳಿ ತಲಾಖ್’ಗಿಲ್ಲ ಮಣೆ; ಸೀರೆ ಧರಿಸಿದ ನಾರಿಗಷ್ಟೆ ‘ಪದ್ಮನಾಭನ’ ಮನ್ನಣೆ

‘ಮಹಿಳಾ ನ್ಯಾಯ’: ‘ತ್ರಿವಳಿ ತಲಾಖ್’ಗಿಲ್ಲ ಮಣೆ; ಸೀರೆ ಧರಿಸಿದ ನಾರಿಗಷ್ಟೆ ‘ಪದ್ಮನಾಭನ’ ಮನ್ನಣೆ

ದೇಶದ ಎರಡು ಪ್ರತ್ಯೇಕ  ಹೈಕೋರ್ಟುಗಳು ಮಹಿಳೆಯರ ವಿಚಾರದಲ್ಲಿ ತೀರ್ಪುಗಳನ್ನು ನೀಡುವ ಮೂಲಕ ಗುರುವಾರ ಸುದ್ದಿ ಕೇಂದ್ರಕ್ಕೆ ಬಂದಿವೆ.

ಅಲಹಾಬಾದ್ ಉಚ್ಚ ನ್ಯಾಯಾಲಯವು ತನ್ನ ತೀರ್ಪೊಂದರಲ್ಲಿ ‘ತ್ರಿವಳಿ ತಲಾಖ್’ಗೆ ನಿಷೇಧ ಹೇರಿದ್ದರೆ, ಕೇರಳ ಹೈಕೋರ್ಟು ಸಲ್ವಾರ್ ಕಮೀಜ್ ಮತ್ತು ಚೂಡಿದಾರ್ ಧರಿಸಿದ ಮಹಿಳೆಯರಿಗೆ ದೇವಸ್ಥಾನವೊಂದಕ್ಕೆ ಪ್ರವೇಶ ನಿಷೇಧಿಸಿ ಸುದ್ದಿಯಾಗಿದೆ.

ಎರಡೂ ನಿರ್ಧಾರಗಳು ದೇಶದೆಲ್ಲೆಡೆ ಪರ ವಿರೋಧ ಚರ್ಚೆಗೆ ಕಾರಣವಾಗಿವೆ.

ಪದ್ಮನಾಭನ ಸನ್ನಿಧಿಯಲ್ಲಿ: 

ಕೇರಳದ ಪದ್ಮನಾಭಸ್ವಾಮಿ ದೇವಾಲಯ.

ಕೇರಳದ ಪದ್ಮನಾಭಸ್ವಾಮಿ ದೇವಾಲಯ.

ನವೆಂಬರ್ 30ರಂದು ಕೇರಳದ ಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಡ್ರೆಸ್ ಕೋಡ್ ಜಾರಿಗೆ ತರಲಾಗಿತ್ತು. ದೇವಳದ ಆಡಳಿತ ಮಂಡಳಿ ಜಾರಿಗೆ ತಂದ ಹೊಸ ವಸ್ತ್ರ ಸಂಹಿತೆಯ ಪ್ರಕಾರ ಸಲ್ವಾರ್ ಕಮೀಜ್ ಮತ್ತು ಚೂಡಿದಾರ್ ಧರಿಸಿದ ಮಹಿಳೆಯರಿಗೆ ಪ್ರಾರ್ಥನೆಗಾಗಿ ದೇವಸ್ಥಾನ ಪ್ರವೇಶಿಸಲು ಅವಕಾಶ ಕಲ್ಪಿಸಿತ್ತು.

ಆದರೆ ಇದರ ವಿರುದ್ಧ ಕೆಲವು ಧಾರ್ಮಿಕ ಕಾರ್ಯಕರ್ತರು ಮತ್ತು ದೇವಳದ ಹಿರಿಯ ತಂತ್ರಿಯೊಬ್ಬರು ಧ್ವನಿ ಎತ್ತಿದ್ದರು.

ಇದೀಗ ವಸ್ತ್ರ ಸಂಹಿತೆಯ ವಿಚಾರದಲ್ಲಿ ಕೇರಳ ಹೈಕೋರ್ಟ್ ಮಧ್ಯಪ್ರವೇಶಿಸಿದ್ದು ಆಡಳಿತ ಮಂಡಳಿಯ ತೀರ್ಮಾನವನ್ನು ರದ್ದುಗೊಳಿಸಿದೆ. ಸಲ್ವಾರ್ ಮತ್ತು ಚೂಡಿದಾರ್ ಧರಿಸಿ ಪದ್ಮನಾಭಸ್ವಾಮಿ ದೇವಾಲಯದೊಳಕ್ಕೆ ಮಹಿಳೆಯರು ಪ್ರವೇಶಿಸುವಂತಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.

ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ ಮಾಡಲು ಆಗಮಿಸುವ ಮಹಿಳೆಯರು ಸೀರೆ ಅಥವಾ ಹಾಫ್ ಸಾರೀ (ಸೆಟ್ ಧೋತಿ) ಉಟ್ಟುಕೊಳ್ಳಬೇಕು, ಹಾಗೂ ಮುಖ ಮುಚ್ಚಿಕೊಳ್ಳಬಾರದು ಎಂಬ ಸಂಪ್ರದಾಯವಿತ್ತು. ಸಲ್ವಾರ್ ಮತ್ತು ಚೂಡಿದಾರ್ ನಲ್ಲಿ ದೇವಾಲಯಕ್ಕೆ ಬರುತ್ತಿದ್ದ ಮಹಿಳೆಯರು ಒಳಕ್ಕೆ ಪ್ರವೇಶಿಸಲು ತಮ್ಮ ಸೊಂಟಕ್ಕೆ ಧೋತಿ ಕಟ್ಟಿಕೊಳ್ಳಬೇಕಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಕೊನೆಗೆ ಕೋರ್ಟ್ ದೇವಸ್ಥಾನದ ಆಡಳಿತ ಮಂಡಳಿಗೆ ಈ ವಿಚಾರದಲ್ಲಿ 30 ದಿನಗಳ ಒಳಗೆ ತೀರ್ಮಾನ ತೆಗೆದುಕೊಳ್ಳುವಂತೆ ಹೇಳಿತ್ತು. ಅದರಂತೆ ಆಡಳಿತ ಮಂಡಳಿ ಪ್ರವೇಶಕ್ಕೆ ಅನುಮತಿ ನೀಡಿ ತೀರ್ಮಾನ ತೆಗೆದುಕೊಂಡಿತ್ತು. ಆದರೆ ಅದನ್ನು ರದ್ದು ಪಡಿಸಿರುವ ಹೈಕೋರ್ಟ್ ತಾನಾಗಿಯೇ ಹೊಸ ವಸ್ತ್ರ ಸಂಹಿತೆ ಜಾರಿಗೆ ತಂದಿದೆ.

ದೇವಳ ಪ್ರವೇಶಿಸಲು ಪುರುಷರು ಧೋತಿ ಉಟ್ಟು, ಅಂಗಿ ಬನಿಯನ್ ತೆಗೆದು ಒಳ ಹೋಗಬೇಕಾದ ನಿಯಮ ಈಗಾಗಲೇ ಜಾರಿಯಲ್ಲಿದೆ.

‘ತ್ರಿವಳಿ ತಲಾಖ್’ಗಿಲ್ಲ ಮಣೆ:

ತ್ರಿಪಲ್ ತಲಾಕ್ ವಿರುದ್ಧ ಪ್ರತಿಭಟನೆ. (ಸಾಂದರ್ಭಿಕ ಚಿತ್ರ)

ತ್ರಿಪಲ್ ತಲಾಕ್ ವಿರುದ್ಧ ಪ್ರತಿಭಟನೆ. (ಸಾಂದರ್ಭಿಕ ಚಿತ್ರ)

ಇನ್ನೊಂದು ಕಡೆ ಅಲಹಾಬಾದ್ ಹೈಕೋರ್ಟ್ ‘ತ್ರಿವಳಿ ತಲಾಖ್’ ಸಂವಿಧಾನ ಬಾಹಿರ ಎಂದು ಹೇಳಿದೆ. ದೇಶದೆಲ್ಲೆಡೆ ಏಕರೂಪ ನಾಗರಿಕ ಸಂಹಿತೆಯ ಚರ್ಚೆ ಜಾರಿಯಲ್ಲಿರುವ ಹೊತ್ತಲ್ಲೇ ಈ ನಿರ್ಧಾರ ಹೊರ ಬಂದಿದೆ. ಸಹಜವಾಗಿಯೇ ಇದು ಪರ ವಿರೋಧ ಚರ್ಚೆಗೆ ಆಹಾರವಾಗಿದೆ.

ಗುರುವಾರ ‘ತ್ರಿಪಲ್ ತಲಾಖ್’ ವಿಚಾರದಲ್ಲಿ ಆದೇಶ ನೀಡಿದ ಅಲಹಾಬಾದ್ ಹೈಕೋರ್ಟ್, ದೇಶದ ಸಂವಿಧಾನವೇ ಪರಮೋಚ್ಛವಾದುದು, ಮುಸ್ಲಿಂ ಕಾನೂನು ಮಂಡಳಿಯಲ್ಲ ಎಂದು ಹೇಳಿದೆ. ತ್ರಿವಳಿ ತಲಾಖ್ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಯಾವುದೇ ಸಮುದಾಯದ ವೈಯಕ್ತಿಕ ಕಾನೂನುಗಳು ಸಂವಿಧಾನಕ್ಕಿಂತ ದೊಡ್ಡದಲ್ಲ ಎಂದು ಅಭಿಪ್ರಾಯಪಟ್ಟಿದೆ.

ತ್ರಿವಳಿ ತಲಾಖ್ ನ್ನು ಇನ್ಸ್ಟಂಟ್ ಡಿವೋರ್ಸ್ (ಸ್ಥಳದಲ್ಲೇ ವಿಚ್ಚೇದನ) ಎಂದು ವ್ಯಾಖ್ಯಾನಿಸಿರುವ ಕೋರ್ಟ್, ಇದೊಂದು “ತೀರಾ ಅಸಂಬದ್ದ” ಮತ್ತು “ಭಾರತ ಒಂದು ದೇಶವಾಗಲು ಅಡ್ಡಿಯಾಗಿದೆ” ಎಂದು ಹೇಳಿದೆ. ಸುನೀತ್ ಕುಮಾರ್ ಇದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದ್ದು, “ಮುಸ್ಲಿಂ ಮಹಿಳೆಯರು ಈ ಅಮಾನವೀಯ ಸಂಪ್ರದಾಯಕ್ಕೆ ಬಲಿಯಾಗಬೇಕೇ? ವಿನಾಕಾರಣ ಮುಸ್ಲಿಂ ಹೆಂಡತಿಯರ ಪಾಲಿಗೆ ವೈಯಕ್ತಿಕ ಕಾನೂನು ಇಷ್ಟು ಕ್ರೂರವಾಗಿರಬೇಕೇ? ಅವರ ಕೊರಗನ್ನು ಕಡಿಮೆ ಮಾಡಲು ವೈಯಕ್ತಿಕ ಕಾನೂನನ್ನು ತಿದ್ದು ಪಡಿ ಮಾಡಲು ಸಾಧ್ಯವಿಲ್ಲವೇ? ಈ ಎಲ್ಲಾ ಪ್ರಶ್ನೆಗಳು ವಿಚಾರಣೆ ವೇಳೆ ನ್ಯಾಯಾಂಗವನ್ನು ಕಾಡಿದೆ,” ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

“ಭಾರತದಲ್ಲಿರುವ ಮುಸ್ಲಿಂ ಕಾನೂನು ಪವಿತ್ರ ಕುರಾನಿಗೆ ವಿರುದ್ಧವಾಗಿದೆ. ಮಾತ್ರವಲ್ಲ ಮಹಿಳೆಯರ ವಿಚ್ಚೇದನ ಹಕ್ಕಿಗೂ ತದ್ವಿರುದ್ಧವಾಗಿದೆ,” ಎಂದು ಆದೇಶದಲ್ಲಿ ಹೇಳಲಾಗಿದೆ.

“ತೀರಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಇಸ್ಲಾಂನಲ್ಲಿ ವಿಚ್ಛೇದನಕ್ಕೆ ಅವಕಾಶವಿದೆ. ಸಂಬಂಧ ಉಳಿಸುವ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ ಎರಡೂ ಕಡೆಯವರು ಮದುವೆಗೆ ತಲಾಕ್ ಮೂಲಕ ಅಂತಿಮ ಮುದ್ರೆ ಒತ್ತಲು ಮುಂದಾಗಬಹುದು. ಮುಸ್ಲಿಂ ಗಂಡನೊಬ್ಬ ತಕ್ಷಣ ವಿಚ್ಛೇದನ ಪಡೆದುಕೊಳ್ಳಲು ನಿರಂಕುಶ, ಏಕಪಕ್ಷೀಯ ಅಧಿಕಾರವನ್ನು ಬಳಸಿಕೊಳ್ಳುವುದು ಇಸ್ಲಾಂ ಸಂಪ್ರದಾಯಕ್ಕೆ ವಿರುದ್ಧವಾದುದು. ಬೇಕೆಂದಾಗ ವಿವಾಹದಿಂದ ಹೊರಬರಲು ಗಂಡನಾದವನು ಕುರಾನ್ ಕಾನೂನುನ್ನು ಬಳಸಿಕೊಳ್ಳಬಹುದು ಎಂಬ ಅಭಿಪ್ರಾಯ ಈ ಸಮಾಜದಲ್ಲಿ ನೆಲೆಯೂರಿದೆ,” ಎಂಬುದನ್ನು ಕೋರ್ಟ್ ವಿಚಾರಣೆ ವೇಳೆ ಗಮನಕ್ಕೆ ತೆಗೆದುಕೊಂಡು ಈ ಆದೇಶ ನೀಡಿದೆ.

“ಎಲ್ಲಿವರೆಗೆ ಹೆಂಡತಿಯಾದವಳು ವಿಧೇಯಳಾಗಿ ಇರುತ್ತಾಳೋ ಅಲ್ಲಿವರೆಗೆ ಗಂಡನಾದವನಿಗೆ ವಿಚ್ಛೇದನ ನೀಡಲು ಕುರಾನ್ ಒಪ್ಪುವುದಿಲ್ಲ,” ಎಂದು ನವೆಂಬರ್ 5ರಂದೇ ನೀಡಿದ ಆದೇಶದಲ್ಲಿ ಕೋರ್ಟ್ ಹೇಳಿತ್ತು.

ವಿರೋಧ:

ತ್ರಿವಳಿ ತಾಲಾಖ್ ಕುರಿತಾದ ಅಲಹಾಬಾದ್ ಹೈಕೋರ್ಟಿನ ತೀರ್ಪಿಗೆ ಹಲವು ಕಡೆಗಳಿಂದ ವಿರೋಧ ವ್ಯಕ್ತವಾಗಿದೆ. ‘ಅಖಿಲ ಭಾರತೀಯ ಮುಸ್ಲಿಂ ಕಾನೂನು ಮಂಡಳಿ’ಯ ಕಮಲ್ ಫಾರೂಕಿ ಮಾತನಾಡಿ, “ಇದು ಆದೇಶವಲ್ಲ. ಇದೊಂದು ಅವಲೋಕನ,” ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕಾಂಗ್ರೆಸ್ ವಕ್ತಾರ ರಶೀದ್ ಆಳ್ವಿ, “ಅಲಹಾಬಾದ್ ಹೈಕೋರ್ಟಿನ ಈ ನಿಲುವು ಸುಪ್ರಿಂ ಕೋರ್ಟಿನಲ್ಲಿ ನಿಲ್ಲುವುದಿಲ್ಲ. ಅಲಹಾಬಾದ್ ಹೈಕೋರ್ಟ್ ಹೇಳಿದ್ದನ್ನು ನಾನು ಒಪ್ಪುವುದಿಲ್ಲ. ಯಾರೂ ಕಾನೂನಿಗಿಂತ ಮೇಲಲ್ಲ. ಯಾವುದೇ ಸಮುದಾಯದ ಸಂಪ್ರದಾಯಗಳಲ್ಲಿ ಯಾರಿಗೂ ಮೂಗುತೂರಿಸಲು ಅವಕಾಶವಿಲ್ಲ,” ಎಂದು ಹೇಳಿದ್ದಾರೆ.

ಸದ್ಯ ‘ಮುಸ್ಲಿಂ ಲಾ ಬೋರ್ಡ್’ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ.

ಸದ್ಯದಲ್ಲೇ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಲಹಾಬಾದ್ ಹೈಕೋರ್ಟಿನ ಈ ಆದೇಶ ಮಹತ್ವ ಪಡೆದುಕೊಂಡಿದೆ. ಈ ಹಿಂದೆ ನವೆಂಬರ್ 23ರಂದು ಮಾತನಾಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, “ಅಭಿವೃದ್ಧಿಶೀಲ ಭಾರತದಲ್ಲಿ ಮುಸ್ಲಿಂ ಮಹಿಳೆಯರನ್ನು ದ್ವಿತೀಯದರ್ಜೆ ಪ್ರಜೆಗಳ ರೀತಿ ನೋಡಲು ಸಾಧ್ಯವಿಲ್ಲ,” ಎಂದಿದ್ದರು.

ಕಳೆದ ವಾರ ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರಕಾರ ಸುಪ್ರಿಂ ಕೋರ್ಟಿಗೆ ಅಫಿಡವಿತ್ ಸಲ್ಲಿಸಿದೆ. ಇದಕ್ಕೂ ಸೇರಿದಂತೆ ಸಮಾನ ನಾಗರಿಕ ಸಂಹಿತೆಗೆ ಮುಸ್ಲಿಂ ಲಾ ಬೋರ್ಡ್ ಹಾಗೂ ಹಲವರು ವಿರೋಧ ವ್ಯಕ್ತಪಡಿಸಿದ್ದು ಇನ್ನೂ ವಿಚಾರಣೆ ನಡೆಯುತ್ತಿದೆ.

Leave a comment

FOOT PRINT

Top