An unconventional News Portal.

‘ಜಯಲಲಿತಾ ಮತ್ತು ದ್ರಾವಿಡ ಚಳವಳಿ’: ಬ್ರಾಹ್ಮಣ ವಿರೋಧಿ ತಮಿಳು ಪರಂಪರೆ ಹಳಿ ತಪ್ಪಿದ್ದೆಲ್ಲಿ?

‘ಜಯಲಲಿತಾ ಮತ್ತು ದ್ರಾವಿಡ ಚಳವಳಿ’: ಬ್ರಾಹ್ಮಣ ವಿರೋಧಿ ತಮಿಳು ಪರಂಪರೆ ಹಳಿ ತಪ್ಪಿದ್ದೆಲ್ಲಿ?

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವಿನ ನಂತರ ಅವರ ವ್ಯಕ್ತಿತ್ವದ ಗುಣಗಾನ ಆರಂಭವಾಗಿದೆ.

ಅದು ಸಹಜ ಕೂಡ. ಸತ್ತವರ ಕುರಿತು ಒಳ್ಳೆಯದನ್ನಷ್ಟೆ ಮಾತನಾಡಬೇಕು ಎಂಬ ಪ್ರತೀತಿ ನಮ್ಮಲ್ಲಿ ಇರುವುದರಿಂದ, ಇವತ್ತು ಜಯಲಲಿತಾ ಕುರಿತು ಹೊರಬರುತ್ತಿರುವ ವರದಿಗಳಲ್ಲಿ ಅವರ ಒಳ್ಳೆಯತನಗಳಷ್ಟೆ ಹೆಚ್ಚು ‘ಫೋಕಸ್’ ಆಗುತ್ತಿವೆ. ಅದೇ ವೇಳೆ, ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಜಯಲಲಿತಾರ ಅಂತ್ಯಕ್ರಿಯೆ ‘ದ್ರಾವಿಡ ಸಂಪ್ರದಾಯ’ದಂತೆ ನಡೆದು ಹೋಗಿದೆ. ಯಾಕೆ ಹೀಗೆ?

ಜಯಲಲಿತಾರ ಹುಟ್ಟಿನ ಹಿನ್ನೆಲೆ ಏನೇ ಇದ್ದರೂ, ಅವರು ಬೆಳೆದಿದ್ದು, ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದು ದ್ರಾವಿಡ ಚಳವಳಿಯ ಮೂಸೆಯಲ್ಲಿ ಹುಟ್ಟಿದ ಎಐಎಡಿಎಂಕೆ ಪಕ್ಷದ ಮೂಲಕ. ಆಕೆ ತನ್ನ ರಾಜಕೀಯ ಜೀವನದ ಉದ್ದಕ್ಕೂ ದ್ರಾವಿಡ ಪರಂಪರೆಯನ್ನು ದಿಕ್ಕು ತಪ್ಪಿಸಿದರು ಎಂಬ ಆರೋಪಕ್ಕೆ ಒಳಗಾದರೂ, ಅಂತ್ಯ ಸಂಸ್ಕಾರದ ವಿಚಾರಕ್ಕೆ ಬಂದಾಗ ಜನರ ಮುಂದೆ ಸಾಂಕೇತಿಕವೊಂದನ್ನು ಬಿಟ್ಟು ಹೋಗುವ ಪ್ರಯತ್ನ ನಡೆದಿದೆ ಎನ್ನುತ್ತಿವೆ ವಿಶ್ಲೇಷಣೆಗಳು.

ಏನಿದು ದ್ರಾವಿಡ ಪರಂಪರೆ?

ಪೆರಿಯಾರ್ ಇ. ವಿ. ರಾಮಸ್ವಾಮಿ.

ಪೆರಿಯಾರ್ ಇ. ವಿ. ರಾಮಸ್ವಾಮಿ.

“ದ್ರಾವಿಡ ಚಳವಳಿ ಎಂದರೆ ಆರ್ಯರ (ಬ್ರಾಹ್ಮಣ) ಸಂಸ್ಕೃತಿಗೆ ವಿರುದ್ಧವಾಗಿ ಹುಟ್ಟಿಕೊಂಡ ಚಳವಳಿ ಎನ್ನುತ್ತಾರೆ ಕೊಳತ್ತೂರು ಮಣಿ.

‘ಸಮಾಚಾರ’ ಜತೆ ಈ ಕುರಿತು ಅಪಾರ ಒಳನೋಟಗಳ ಜತೆ ಮಾಹಿತಿ ಹಂಚಿಕೊಂಡ ಅವರು, “ತಮಿಳುನಾಡಿನ ರಾಜಕೀಯದಲ್ಲಿ ದ್ರಾವಿಡ ಪರಂಪರೆಯನ್ನು ಕಡೆಗಣಿಸಿದ ಕೀರ್ತಿ ಜಯಲಲಿತಾ ಹಾಗೂ ಆಕೆಯ ಗುರು ಎಂ. ಜಿ. ರಾಮಚಂದ್ರನ್ಗೇ ಸಲ್ಲಬೇಕು,” ಎಂದರು.

ಸ್ವಾಭಿಮಾನಿ ಚಳವಳಿ ಅಂತಲೂ ಕರೆಸಿಕೊಳ್ಳುವ ದ್ರಾವಿಡ ಚಳವಳಿಯನ್ನು ಹುಟ್ಟು ಹಾಕಿದವರು ಇ. ವಿ. ರಾಮಸ್ವಾಮಿ ಅಲಿಯಾಸ್ ಪೆರಿಯಾರ್. 1925ರ ಸುಮಾರಿಗೆ ಅವರು ಬ್ರಾಹ್ಮಣ ಸಂಸ್ಕೃತಿ, ಸಂಪ್ರದಾಯಗಳ ವಿರುದ್ಧ ತಮಿಳು ಜನರ ಮೂಲ ಪರಂಪರೆಯನ್ನು ನೆನಪಿಸುವ ಸಲುವಾಗಿ ಚಳವಳಿಯೊಂದನ್ನು ಆರಂಭಿಸಿದರು.

ಇದರ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ. ಮುಂದೆ, ಡಿಎಂಕೆಯಿಂದ ಸಿಡಿದೆದ್ದ ಒಂದಷ್ಟು ಜನ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಡಿಎಂಕೆ) ಪಕ್ಷವನ್ನು ಹುಟ್ಟು ಹಾಕಿದರು. 1970ರ ಸುಮಾರಿಗೆ ಎರಡೂ ಪಕ್ಷಗಳು ಜನಪ್ರಿಯ ರಾಜಕಾರಣದ ಹಾದಿಯಲ್ಲಿ ಸಾಗಿದವು ಎನ್ನುತ್ತದೆ ತಮಿಳುನಾಡಿನ ರಾಜಕೀಯ ಇತಿಹಾಸ. ದೇವರ ಮೂರ್ತಿಗಳಿಗೆ ಸಾರ್ವಜನಿಕ ಚಪ್ಪಲಿ ಸೇವೆ ಮಾಡಿದ್ದ ದ್ರಾವಿಡ ಚಳವಳಿ ನಿಧಾನವಾಗಿ ಕಾವು ಕಳೆದುಕೊಳ್ಳತೊಡಗಿದ್ದರ ಮುನ್ಸೂಚನೆ ಇದಾಗಿತ್ತು. ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನರಿಗೆ ಇರುವ ವಿರೋಧ ಮಾತ್ರ ಮುಂದುವರಿದಿತ್ತು.

“ಬ್ರಾಹ್ಮಣರನ್ನು ಸರಕಾರದ ಹುದ್ದೆಗಳಿಗೆ ನೇಮಕ ಮಾಡುವ ಪರಿಪಾಠವನ್ನು ಆರಂಭಿಸಿದವರು ಎಂಜಿಆರ್. ಅವರು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿದ ಕರ್ನಾಟಕ ಮೂಲದ ಜಯಲಲಿತಾ ಮೊದಲ ಬ್ರಾಹ್ಮಣ ಜನಪ್ರತಿನಿಧಿಯಾಗಿದ್ದರು. ಹೀಗೆ, ದ್ರಾವಿಡ ಪರಂಪರೆಯ ರಾಜಕೀಯ ಮೊದಲ ಬಾರಿಗೆ ಹಳಿ ತಪ್ಪಲು ಶುರುವಾಯಿತು,” ಎನ್ನುತ್ತಾರೆ ಮಣಿ.

ಕೊಳತ್ತೂರು ಮಣಿ, ದ್ರಾವಿಡ ಚಳವಳಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಂಘಟನೆ ಕಟ್ಟಿಕೊಂಡು ಇವತ್ತಿಗೂ ಹೋರಾಟ ಮಾಡುತ್ತಿದ್ದಾರೆ. ಎಲ್‌ಟಿಟಿಇ ಹಾಗೂ ವೀರಪ್ಪನ್ ಜತೆಗಿನ ಸಖ್ಯದ ಕಾರಣಕ್ಕೆ ಸುದ್ದಿಯಾಗಿದ್ದವರು.

ಜಯಲಲಿತಾ ಕಾಲಘಟ್ಟ:

jaya-temple-2

ಅರ್ಚಕರ ಜತೆ ಜಯಲಲಿತಾ.

ದ್ರಾವಿಡ ಚಳಿವಳಿಯ ಹಿನ್ನೆಲೆಯಿಂದ ಬಂದ ಎಐಎಡಿಎಂಕೆ ಪಕ್ಷದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ಬದಲಾವಣೆಗಳು ಶುರುವಾಗಿದ್ದು ಜಯಲಲಿತಾ ಕಾಲದಲ್ಲಿ. ಜಯಾ ಅಧಿಕಾರಕ್ಕೆ ಬರುತ್ತಿದ್ದಂತೆ ದೇವಸ್ಥಾನಗಳಿಗೆ ಹೋಗತೊಡಗಿದರು. ಪೂಜೆ, ಯಜ್ಞಗಳನ್ನು ಮಾಡಿಸತೊಡಗಿದರು. ಅದಕ್ಕಿಂತ ಮುಂಚೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ತಮಿಳುನಾಡಿನ ಯಾವ ರಾಜಕೀಯ ನಾಯಕರು ಬ್ರಾಹ್ಮಣ ಸಂಸ್ಕೃತಿಯನ್ನು ಆಚರಣೆ ಮಾಡುತ್ತಿರಲಿಲ್ಲ. “ದೇವಸ್ಥಾನಗಳಿಗೆ ಹೋಗಲು ಶುರುಮಾಡಿದ್ದು ಎಂಜಿಆರ್. ಕರ್ನಾಟಕದ ಕೊಲ್ಲೂರಿನ ಮೂಕಾಂಬಿಕೆ ದೇವಸ್ಥಾನಕ್ಕೆ ಅವರು ಮೊದಲ ಭೇಟಿ ನೀಡಿದರು. ಅದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟಿದ್ದು ಅವರ ಶಿಷ್ಯೆ ಜಯಲಲಿತಾ,” ಎನ್ನುತ್ತಾರೆ ಮಣಿ.

ಜಯಲಲಿತಾ ಕೇವಲ ದೇವಸ್ಥಾನ, ಪೂಜೆ- ಯಜ್ಞಗಳಿಗೆ ಸೀಮಿತರಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ, ತಮಿಳು ಪರಂಪರೆಯ ಕೆಲವು ನಂಬಿಕೆಗಳನ್ನೂ ಅವರು ಅಲ್ಲಾಡಿಸಲು ಶುರು ಮಾಡಿದ್ದರು. ತಮಿಳರ ಪ್ರಕಾರ ಅವರ ಹೊಸ ವರ್ಷ ಆರಂಭವಾಗುವುದು ಜನವರಿಯಲ್ಲಿ. ಕವಿ ತಿರುವಳ್ಳರ್ ಹುಟ್ಟಿದ ದಿನ ಅವರ ಪಾಲಿಗೆ ಹೊಸ ವರ್ಷದ ಎರಡನೇ ದಿನ. ಪೊಂಗಲ್ ಅವರು ಆಚರಿಸಿಕೊಂಡು ಬಂದ ಹಬ್ಬ.

“ಆದರೆ ಜಯಲಲಿತಾ ದೀಪಾವಳಿಯಂತಹ ಹಿಂದೂ- ಬ್ರಾಹ್ಮಣ ಹಬ್ಬವನ್ನು ಪ್ರೋತ್ಸಾಹಿಸಲು ಶುರುಮಾಡಿದರು. ಅದಕ್ಕಾಗಿ ಬೋನಸ್ ಕೊಡಲು ಶುರುಮಾಡಿದರು. 2011ರಲ್ಲಿ ಮುಖ್ಯಮಂತ್ರಿಯಾಗುತ್ತಿದ್ದಂತೆ, ತಮಿಳರು ಹೊಸ ವರ್ಷಾಚರಣೆಯನ್ನು ಏಪ್ರಿಲ್ 14ಕ್ಕೆ ಆಚರಿಸಬೇಕು ಎಂದು ಆದೇಶ ಹೊರಡಿಸಿದರು. ಇದರ ವಿರುದ್ಧ ಪ್ರತಿಭಟನೆಗಳಾದವು,” ಎಂದು ಕೊಳತ್ತೂರು ಮಣಿ ಮಾಹಿತಿ ನೀಡುತ್ತಾರೆ.

ಜನಪ್ರಿಯತೆಯ ಮೂಲ: 

ಜಯಲಲಿತಾ ‘ಅಮ್ಮ’ ಆಗುವ ಮೂಲಕ ಅಪಾರ ಪ್ರಮಾಣ ಜನಪ್ರಿಯತೆ ಗಳಿಸಿದ್ದರ ಹಿಂದೆಯೂ ಕೆಲವು ಲೆಕ್ಕಚಾರಗಳಿವೆ. ಅವರ ಸರಕಾರ ರೂಪಿಸಿದ ತಳಮಟ್ಟದ ಜನರಿಗೆ ಅನುಕೂಲವಾಗುವ ಯೋಜನೆಗಳು ಒಂದು ಮಟ್ಟಿಗಿನ ಬೆಂಬಲ ಸಿಗುವಂತೆ ಮಾಡಿವೆ ಎನ್ನಿಸುತ್ತಿದೆ. ಅದರ ಜತೆಗೆ, ಡಿಎಂಕೆ ಪಕ್ಷದ ಮನಸ್ಥಿತಿಯಲ್ಲಾದ ಬದಲಾವಣೆಯೂ ಜಯಾಗೆ ಜನಪ್ರಿಯತೆಗೆ ನೀರೆರಿದೆ.

“ಅವತ್ತಿನ ಕಾಲಕ್ಕೆ ಕಾಂಗ್ರೆಸ್ ಎಂದರೆ ತಮಿಳುನಾಡಿನಲ್ಲಿ ಶ್ರೀಮಂತರ ಪಕ್ಷ ಎನ್ನುತ್ತಿದ್ದರು. ಡಿಎಂಕೆ ಮಾತ್ರವೇ ಬಡವರ ಪಕ್ಷ ಎಂದು ಜನ ನಂಬಿದ್ದರು. ಅಂತಹ ಡಿಎಂಕೆ ನಿಧಾನವಾಗಿ ತಮ್ಮ ಮೂಲಸತ್ವವನ್ನು ಕಳೆದುಕೊಂಡು ಶ್ರೀಮಂತರ ಕಡೆಗೆ ವಾಲತೊಡಗಿತು. ಈ ಸಮಯದಲ್ಲಿ ಎಐಎಡಿಎಂಕೆ ಮತ್ತು ಎಂಜಿಆರ್ ಬಡವರನ್ನು ಪಕ್ಷದೊಳಕ್ಕೆ ಬಿಟ್ಟುಕೊಂಡರು. ಇದನ್ನು ಮುಂದುವರಿಸಿದ ಜಯಲಲಿತಾ, ಒಂದಷ್ಟು ಯೋಜನೆಗಳ ಮೂಲಕ ಶಾಶ್ವತವಾಗಿ ಜನ ತಮ್ಮ ಜತೆ ನಿಲ್ಲುವಂತೆ ನೋಡಿಕೊಂಡರು. ಅದರ ಫಲವಾಗಿ ಒಂದು ದಶಕಗಳ ಅಂತರದಲ್ಲಿ ಜಯಲಲಿತಾ, ಜನಪ್ರಿಯ ಅಮ್ಮಾ ಆದರು,” ಎನ್ನುತ್ತಾರೆ ತಮಿಳುನಾಡು ಮೂಲಕ ಐಎಎಸ್ ಅಧಿಕಾರಿಯೊಬ್ಬರು.

ಒಂದು ಕಡೆ ದ್ರಾವಿಡ ಚಳವಳಿಯ ಮೂಲ ಸತ್ವವನ್ನೇ ಮರೆತಿದ್ದ ಜಯಲಲಿತಾ, ಎಐಎಡಿಎಂಕೆ ಪಕ್ಷವನ್ನು ಆರ್ಯನ್ ಸಂಪ್ರದಾಯಕ್ಕೆ ಒಗ್ಗಿಸಿದರು ಎಂಬ ಆರೋಪವನ್ನು ಹೊತ್ತುಕೊಂಡಿದ್ದಾರೆ. ಅದೇ ವೇಳೆ, ಅವರ ಕಾಲಾವಧಿಯಲ್ಲಿ ನಡೆದ ಹಗರಣಗಳು, ಡಿಎಂಕೆ ಪಕ್ಷಕ್ಕೂ ಎಐಎಡಿಎಂಕೆ ಪಕ್ಷಕ್ಕೂ ನಡುವಿನ ವ್ಯತ್ಯಾಸ ಕಾಣದಂತೆ ಮಾಡಿದ್ದವು.

‘ಅಮ್ಮ’ನ ಅಕ್ರಮ ಗಣಿಗಾರಿಕೆ:

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿಕೊಂಡು ಪ್ರಕರಣ ಜಯಲಲಿತಾ ಮೇಲಿರುವ ಜನಪ್ರಿಯ ಹಾಗೂ ದೀರ್ಘಕಾಲ ಚರ್ಚೆಯಲ್ಲಿದ್ದ ಹಗರಣ. ಇದೇ ಪ್ರಕರಣದಲ್ಲಿ ಜಯಲಲಿತಾ ಜೈಲಿಗೂ ಹೋಗಿಬಂದರು. ಅದನ್ನು ಹೊರತು ಪಡಿಸಿಯೂ ಜಯಾ ಮೇಲೆ ಗುರುತರವಾದ ಭ್ರಷ್ಟಾಚಾರ ಪ್ರಕರಣಗಳು ಕೇಳಿ ಬಂದಿದ್ದವು.

“ಇದು ಬರೀ ಸರಕಾರಿ ವ್ಯವಸ್ಥೆ ಮಾತ್ರವಲ್ಲ, ಎರಡು ಪ್ರಮುಖ ಪಕ್ಷಗಳೂ ಮೈನಿಂಗ್ ಮಾಫಿಯಾವನ್ನು ಪೋಷಿಸಿಕೊಂಡು ಬಂದಿವೆ. ಖಾಸಗಿ ಗಣಿ ಕಂಪನಿಗಳಿಗೆ ಅನುಕೂಲಕರವಾಗಿ ನ್ಯಾಯಾಂಗ ಕೂಡ ನಡೆದುಕೊಂಡಿದೆ. ಮೈನಿಂಗ್ ಪರವಾನಗಿಯನ್ನು ರದ್ದುಮಾಡುವಂತೆ ಕೋರಿರುವ ಅನೇಕ ಅರ್ಜಿಗಳ ಮೇಲೆ ತಡೆಯಾಜ್ಞೆ ಇದೆ”

ಹೀಗೆ, ತಮಿಳುನಾಡಿನ ಗಣಿಗಾರಿಕೆ ವಿಚಾರದಲ್ಲಿ ಮುಕ್ತವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರೊಬ್ಬರು. ಅದು 90ರ ಕಾಲಘಟ್ಟ. ಜಯಲಲಿತಾ ಗಣಿಗಾರಿಕೆಗೆ ಅನುಮತಿ ಪಡೆಯಲು ಇದ್ದ ನಿಯಮಗಳನ್ನು ಸಡಿಲಗೊಳಿಸಿದರು. ಇದರ ಲಾಭ ಪಡೆದುಕೊಂಡು ಹುಟ್ಟಿಕೊಂಡಿದ್ದೇ ಪಿ. ಆರ್. ಪಳನಿಸಾಮಿ ಎಂಬ ಗುತ್ತಿಗೆದಾರ. ಆತನ ಪಿಆರ್ಪಿ ಗ್ರಾನೈಟ್ಸ್ ಕಂಪನಿ ಕೆಲವೇ ವರ್ಷಗಳನ್ನು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಸಂಸ್ಥೆಯಾಗಿ ಬೆಳೆಯಿತು. ಅಲ್ಲೀವರೆಗೂ ಗ್ರಾನೈಟ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದಿದ್ದ, ಡಿಎಂಕೆ ಬೆಂಬಲಿತ ಉದ್ಯಮಿ ದಯಾನಿಧಿ ಮಾರನ್ ಎದುರಾಗಿ ಪಳನಿಸಾಮಿ ಬೆಳೆಯಲು ಕಾರಣವಾಗಿದ್ದು ಜಯಲಲಿತಾ.

ಪಳನಿಸಾಮಿ ಕಂಪನಿ ವಹಿವಾಟುಗಳು ಮತ್ತು ನೀಡಿರುವ ಗುತ್ತಿಗೆ ಪರವಾನಗಿ ಕುರಿತು ಮಾಹಿತಿ ಹಕ್ಕು ಕಾಯ್ದೆ ಅಡಿ ಎಸ್. ಮುಗುರಗೇಶ್ ಎಂಬುವವರು ಪ್ರಶ್ನಿಸಿದರೂ ಸರಕಾರ ಯಾವುದೇ ಉತ್ತರವನ್ನೂ ನೀಡಲಿಲ್ಲ. ಕೊನೆಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಯಿತು. ಅದು ಎರಡು ದಶಕಗಳು ಕಳೆದ ನಂತರವೂ ಹಾಗೆಯೇ ಕೊಳೆಯುತ್ತಿದೆ.

ತಮ್ಮ 23 ವರ್ಷಗಳ ವೃತ್ತಿ ಬದುಕಿನಲ್ಲಿ 24 ವರ್ಗಾವಣೆಗಳನ್ನು ಕಂಡ ತಮಿಳುನಾಡಿನ ಐಎಎಸ್ ಅಧಿಕಾರಿ ಯು. ಸಗಾಯಂ ಪ್ರಕಾರ, ಜಯಾ ಕೃಪಾಕಟಾಕ್ಷದಲ್ಲಿ ನಡೆದ ಈ ಗ್ರಾನೈಟ್ ಹಗರಣದ ಮೊತ್ತವೇ ಸುಮಾರು 16 ಸಾವಿರ ಕೋಟಿಯಷ್ಟಿದೆ.

 

ಹೀಗೆ, ಭ್ರಷ್ಟಾಚಾರ, ಸಂಸ್ಕೃತಿಯ ಹೇರಿಕೆ ಮತ್ತಿತರ ಆರೋಪಗಳ ಜತೆಗೇ ಜನರ ಅಭಿಮಾನವನ್ನು ಸಂಪಾದಿಸಿದ್ದ ‘ಅಮ್ಮ’ ಈಗ ತಮ್ಮ ಗುರುವಿನ ಸಮ್ಮುಖದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಅದೇ ವೇಳೆ ತಮಿಳುನಾಡಿನ ರಾಜಕಾರಣ ಮಗ್ಗಲು ಬದಲಿಸುವ ಸಾದ್ಯತೆಯೂ ಕಾಣಿಸುತ್ತಿದೆ. ಅಲ್ಲಿ ಮತ್ತೊಂದು ಸುತ್ತಿನ ‘ಸ್ವಾಭಿಮಾನಿ ಚಳವಳಿ’ ಹುಟ್ಟಲಿದೆ ಎಂದು ಮಣಿಯಂತವರು ಆಶಯ ವ್ಯಕ್ತಪಡಿಸುತ್ತಿದ್ದಾರೆ.

Leave a comment

FOOT PRINT

Top