An unconventional News Portal.

ಜಯಲಲಿತಾ ಆಪ್ತ, ನರೇಂದ್ರ ಮೋದಿ ‘ರಾಜ ಗುರು’, ಚೋ ರಾಮಸ್ವಾಮಿ ಇನ್ನಿಲ್ಲ…

ಜಯಲಲಿತಾ ಆಪ್ತ, ನರೇಂದ್ರ ಮೋದಿ ‘ರಾಜ ಗುರು’, ಚೋ ರಾಮಸ್ವಾಮಿ ಇನ್ನಿಲ್ಲ…

ತಮಿಳುನಾಡು ಮೂಲದ ಹಿರಿಯ ಪತ್ರಕರ್ತ, ನಟ, ಬಹುಮುಖ ಪ್ರತಿಭೆ ಚೋ. ರಾಮಸ್ವಾಮಿ ಇಹಲೋಕ ತ್ಯಜಿಸಿದ್ದಾರೆ.

ಚೋ ರಾಮಸ್ವಾಮಿ ಎಂದೇ ಜನಪ್ರಿಯರಾಗಿದ್ದ ರಾಜಕೀಯ ವಿಶ್ಲೇಷಕ ಶ್ರೀನಿವಾಸ ಐಯರ್ ರಾಮಸ್ವಾಮಿ ಹೃದಯಾಘಾತದಿಂದ ಬುಧವಾರ ಬೆಳಿಗ್ಗೆ ಚೆನ್ನೈನಲ್ಲಿ ಅಸುನೀಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಜಯಲಲಿತಾರಿಗೆ ಆಪ್ತ ಗೆಳೆಯರೂ ಆಗಿದ್ದ ರಾಮಸ್ವಾಮಿ 1999ರಲ್ಲಿ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದರು. ಬಿ. ಡಿ. ಗೋಯೆಂಕಾ ‘ಎಕ್ಸಲೆನ್ಸ್ ಇನ್ ಜರ್ನಲಿಸಂ’ ಪ್ರಶಸ್ತಿಯೂ ಅವರಿಗೆ ಸಂದಿತ್ತು. 2014ರ ಲೋಕಸಭೆಯಲ್ಲಿ ನರೇಂದ್ರ ಮೋದಿ ಪರವಾಗಿ ಅಭಿಯಾನವನ್ನೂ ಆರಂಭಿಸಿದ್ದರು. ನಂತರ ತಮ್ಮನ್ನು ತಾವು ಮೋದಿಯವರ ‘ರಾಜ ಗುರು’ ಎಂದು ಕರೆದುಕೊಂಡಿದ್ದರು.

ಚೋ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, “ಚೋ ಓರ್ವ ಒಳನೋಟವುಳ್ಳ, ಸರಳ, ಮೇಧಾವಿಯಾಗಿದ್ದರು. ಅವರ ಸಾವಿನಿಂದ ನೋವಾಗಿದೆ. ಅವರ ಕುಟುಂಬಕ್ಕೆ ಮತ್ತು ‘ತುಘ್ಲಕ್’ ಅಸಂಖ್ಯಾತ ಓದುಗರಿಗೆ ಸಂತಾಪಗಳು,” ಎಂದು ಹೇಳಿದ್ದಾರೆ.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ರಾಮಸ್ವಾಮಿಯವರನ್ನು ನವೆಂಬರ್ 29ರಂದು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. “ಮಂಗಳವಾರ ಮಧ್ಯಾಹ್ನದವರಗೆ ಅವರು ಜಯಲಲಿತಾ ಅಂತಿಮ ಯಾತ್ರೆಯನ್ನು ಸುದ್ದಿವಾಹಿನಿಗಳಲ್ಲಿ ನೋಡುತ್ತಿದ್ದರು. ನಂತರ ಅವರ ಆರೋಗ್ಯ ವಿಷಮಿಸಿದ ಕಾರಣ ವೆಂಟಿಲೇಟರ್ ಸಹಾಯದಲ್ಲಿ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು,” ಎಂದು ಉಪಚರಿಸುತ್ತಿದ್ದ ವೈದ್ಯರು ಹೇಳಿದ್ದಾರೆ. ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಚೋ ಉಸಿರಾಟ ನಿಂತು ಹೋಯಿತು. ಅವರು ಕಳೆದ ಒಂದು ವರ್ಷದಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು.

ಚೋ, ಪತ್ನಿ ಸೌಂದರ್ಯ ರಾಮಸ್ವಾಮಿ, ಮಗ ರಾಜೀವಕ್ಷಣ್ ಅಲಿಯಾಸ್ ಶ್ರೀರಾಮ್ ಮತ್ತು ಮಗಳು ಸಿಂಧುವನ್ನು ಅಗಲಿದ್ದಾರೆ. ಅವರ ದೇಹವನ್ನು ಎಮ್.ಆರ್.ಸಿ ನಗರದಲ್ಲಿರುವ ಮನೆಗೆ ಕೊಂಡೊಯ್ಯಲಾಗಿದ್ದು, ಬುಧವಾರವೇ ಶವ ಸಂಸ್ಕಾರ ನಡೆಯಲಿದೆ.

ಚೋ ನಡದು ಬಂದ ದಾರಿ

vijayakanth_jayalalitha cho ramaswami

1934 ಅಕ್ಟೋಬರ್ 5ರಂದು ಹಿರಿಯ ವಕೀಲ ಶ್ರೀನಿವಾಸ ಐಯರ್ ಮತ್ತು ರಾಜಾಂಬಲ್ ಮಗನಾಗಿ ಚೋ ಜನಿಸಿದರು. ತಮಿಳುನಾಡಿನ ಮೈಲಪೊರೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಕಾನೂನು ಪದವಿ ಪಡೆದರು. ತಮ್ಮ ಕಾಲೇಜು ದಿನಗಳಲ್ಲೇ ರಂಗಭೂಮಿಯತ್ತ ಒಲವು ಬೆಳೆಸಿಕೊಂಡಿದ್ದವರು ಚೋ. ಹವ್ಯಾಸಿ ಕಲಾ ತಂಡದಲ್ಲಿದ್ದಾಗ, ನಾಟಕ ಅಭ್ಯಾಸಕ್ಕೆ ಬರುತ್ತಿದ್ದ ತಮ್ಮ ತಾಯಿ ಜತೆಗೆ ಜಯಲಲಿತಾ ಕೂಡಾ ಅಲ್ಲಿಗೆ ಬರುತ್ತಿದ್ದರು. ಆಗಿನ್ನೂ ಜಯಾ ಚಿಕ್ಕವರು. ಆದರೆ ಜಯಾ ಮತ್ತು ಚೋ ಸಂಪರ್ಕ ಬೆಳೆದಿದ್ದು ಅಲ್ಲೆ.

ಮುಂದೆ ಮದ್ರಾಸ್ ಹೈಕೋರ್ಟಿನಲ್ಲಿ 6 ವರ್ಷ ವಕೀಲಿ ಅಭ್ಯಾಸ ಮಾಡಿ ‘ಟಿಟಿಕೆ ಗ್ರೋಪ್’ಗೆ ಕಾನೂನು ಸಲಹೆಗಾರರಾಗಿ ಸೇರಿಕೊಂಡರು. ಅಲ್ಲಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಒಟ್ಟು 23 ನಾಟಕಗಳಿಗೆ ಚೋ ಕತೆ ಬರೆದಿದ್ದಾರೆ. ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. 14 ಸಿನಿಮಾಗಳಿಗೆ ಕಥೆ ಬರೆದಿದ್ದರೆ, ನಾಲ್ಕು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ‘ತೆಲ್ಮೋಝಿಯಾಲ್’ ನಾಟಕದಲ್ಲಿ ನಟಿಸಿದ ನಂತರ ರಾಮಸ್ವಾಮಿಗೆ ಚೋ ಎಂಬ ಅಡ್ಡ ಹೆಸರು ಬಂತು. ಅಲ್ಲಿಂದ ಚೋ ರಾಮಸ್ವಾಮಿ ಎಂದೇ ಜನಪ್ರಿಯರಾದರು. ಹಲವು ಟಿವಿ ಧಾರವಾಹಿಗಳನ್ನು ನಿರ್ದೇಶಿಸಿ, ನಟಿಸಿದವರು ಚೋ. ಸಮಾಧಿಯಿಂಧ ಸುಲ್ತಾನ್ ತುಘಲಕ್ ನನ್ನು ಎಬ್ಬಿಸಿ ಭಾರತದ ಪ್ರಧಾನಿಯಾಗಿಸುವ ಅವರ ‘ಮೊಹಮ್ಮದ್ ಬಿನ್ ತುಘಲಕ್’ ಹಾಸ್ಯ ನಾಟಕ ಭಾರಿ ಜನಪ್ರಿಯವಾಗಿತ್ತು. ಅವರ ಹಲವು ನಾಟಕಗಳು ವಿವಾದ, ವಿರೋಧಗಳನ್ನು ತಮಿಳುನಾಡಿನಲ್ಲಿ ಹುಟ್ಟುಹಾಕಿದ್ದವು.

ಜನವರಿ 14, 1970ರಲ್ಲಿ ಚೋ ತಮಿಳು ಭಾಷೆಯಲ್ಲಿ ‘ತುಘ್ಲಕ್’ ಎಂಬ ನಿಯತಕಾಲಿಕೆ ಆರಂಭಿಸಿದರು. ತಮ್ಮ ನಿಯತಕಾಲಿಕೆಯನ್ನು ‘ಸರಕಾರದ ಟೀಕಾಕಾರ, ಜವಾಬ್ದಾರಿಯುವ ವಿರೋಧ ಪಕ್ಷ’ ಎಂದು ಕರೆದುಕೊಂಡಿದ್ದರು. ಪ್ರತಿ ವರ್ಷ ಜನವರಿ 14ರಂದು ಓದುಗರನ್ನು ಭೇಟಿಯಾಗಲು ಸಾರ್ವಜನಿಕ ಸಭೆ ಆಯೋಜಿಸುತ್ತಿದ್ದರು. ಇದರಲ್ಲಿ ತಮ್ಮ ಸಿಬ್ಬಂದಿಗಳನ್ನು ಗೌರವಿಸುತ್ತಿದ್ದರು, ಹಲವು ಹಿರಿಯ ರಾಜಕೀಯ ನಾಯಕರೂ ಇದೇ ಸಭೆಯಲ್ಲಿ ಭಾಗವಹಿಸುತ್ತಿದ್ದರು.

ಚೋ ರಾಮಸ್ವಾಮಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಮುಖ್ಯಮಂತ್ರಿ ಕರುಣಾನಿಧಿ, ಎಂಜಿ ರಾಮಚಂದ್ರನ್, ಜಯಲಲಿತಾ ಮೊದಲಾದವರ ರಾಜಕೀಯ ಸಲಹೆಗಾರರೂ ಆಗಿದ್ದಲ್ಲದೆ, ಟೀಕೆಗಳು ವಿಡಂಬನೆಗಳ ಮೂಲಕವೂ ಸದಾ ಕಾಲೆಳೆಯುತ್ತಿದ್ದರು. ಹೀಗಿದ್ದ ಚೋ ಇನ್ನಿಲ್ಲ.

Leave a comment

FOOT PRINT

Top