An unconventional News Portal.

‘ಅಮ್ಮ’ ಇನ್ನಿಲ್ಲ…: ಮೈಸೂರಿನ ‘ಚಂದನದ ಗೊಂಬೆ’ಯ ಹೆಜ್ಜೆಗಳು ಚೆನ್ನೈ ಅಪೋಲೋದಲ್ಲಿ ಅಂತ್ಯ

‘ಅಮ್ಮ’ ಇನ್ನಿಲ್ಲ…: ಮೈಸೂರಿನ ‘ಚಂದನದ ಗೊಂಬೆ’ಯ ಹೆಜ್ಜೆಗಳು ಚೆನ್ನೈ ಅಪೋಲೋದಲ್ಲಿ ಅಂತ್ಯ

ಮೈಸೂರಿನಲ್ಲಿ ಹುಟ್ಟಿ, ಕನ್ನಡ ಚಿತ್ರರಂಗದಲ್ಲಿ ‘ಚಂದನದ ಗೊಂಬೆ’ಯಾಗಿ, ನಂತರ ಪಕ್ಕದ ತಮಿಳುನಾಡಿಗೆ ಕಾಲಿಟ್ಟು, ಮೇರು ನಟರ ಜತೆ ಹೆಜ್ಜೆ ಹಾಕುವ ಮೂಲಕ ಜನಪ್ರಿಯತೆ ಕಂಡಿದ್ದ ನಟಿ, ರಾಜಕೀಯಕ್ಕೂ ಕಾಲಿಡುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿ ಪಕ್ಷದ ಕಾರ್ಯಕರ್ತರ ಪಾಲಿಗೆ ‘ಪ್ರೀತಿಯ ಅಮ್ಮ’ ಅಂತ ಕರೆಸಿಕೊಂಡಿದ್ದ ಜಯಲಲಿತಾ ಜಯರಾಮನ್ ಜೀವನ ಪಯಣದ ಹಾದಿ ಕೊನೆಯಾಗಿದೆ.

ತಮಿಳುನಾಡು ರಾಜಧಾನಿ ಚೆನ್ನೈನ ಪಂಚತಾರಾ ಆಸ್ಪತ್ರೆಯಲ್ಲಿ ಸೆಲ್ವಿ. ಜೆ. ಜಯಲಲಿತಾ ಸೋಮವಾರ ರಾತ್ರಿ 11. 30ಕ್ಕೆ ಅಸುನೀಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕಳೆದ 74 ದಿನಗಳ ಕಾಲ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಪ್ರಾಣಕ್ಕಾಗಿ ಹೋರಾಟ ನಡೆಸಿದ ಅವರು ತಮ್ಮ ಬದುಕಿಗೆ ಅಂತ್ಯ ಹಾಡಿದ್ದಾರೆ. ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆಯಿಲ್ಲದೇ ಬಂದ ನಾನು, ‘ಸೆಲ್ಫ್ ಮೇಡ್ ವುಮನ್’ ಎಂದು ಅವರು ತಮ್ಮ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಅದಕ್ಕಾಗಿ ಟೀಕೆ ಟಿಪ್ಪಣಿಗಳಿಗೆ ಹೆಚ್ಚು ಗುರಿಯಾಗುತ್ತಿದ್ದೇನೆ ಎಂದು ಮಾಧ್ಯಮಗಳನ್ನೂ ಬೈದಿದ್ದರು. ಕೊನೆಗೆ ಅವರೇ ತಮ್ಮ ಹೆಸರಿನಲ್ಲಿ ಮಾಧ್ಯಮ ಸಂಸ್ಥೆಯನ್ನೂ ಹುಟ್ಟು ಹಾಕಿದ್ದರು. (ಟೈಮ್ ಲೈನ್ ನೋಡಿ)

ಸಾವು ನಿರೀಕ್ಷಿತ:

ವಯಸ್ಸಾದವರು ಸಾಯಲೇಬೇಕು. ಅದು ನಿಸರ್ಗದ ನಿಯಮ. ಆದರೆ, ಕೆಲವರ ಸಾವುಗಳು ಮಾತ್ರ ಜನಮಾನಸದಲ್ಲಿ ಉಳಿದುಬಿಡುತ್ತವೆ. ಅದು ಈ ದೇಶ ಕಂಡ ಅಧಿಕಾರ ರಾಜಕೀಯ ರಹಿತ, ರಾಜಕೀಯ ನಾಯಕ ಮಹಾತ್ಮಗಾಂಧಿಯಿಂದ ಶುರುವಾಗಿ ಇಂದಿರಾ ಗಾಂಧಿವರೆಗೆ ಕಂಡ ದುರಂತ ಸಾವುಗಳಿರಲಿ ಅಥವಾ ಫಿಡೆಲ್ ಕ್ಯಾಸ್ಟ್ರೋ ರೀತಿಯ ಹೋರಾಟಗಾರರು ಅಂತ್ಯವಾದ ರೀತಿಗಳಿಂದ ಹಿಡಿದು ಅಷ್ಟೇಕೆ, ಎಐಎಡಿಎಂಕೆಯ ಜನಪ್ರಿಯ ನಾಯಕ, ಮಾಜಿ ಮುಖ್ಯಮಂತ್ರಿ, ಜಯಲಲಿತಾರನ್ನು ಎರಡು ದಶಕಗಳ ಕಾಲ ಕೈ ಹಿಡಿದು ನಡೆಸಿಕೊಂಡು ಬಂದ ಎಂಜಿಆರ್ ಅವರ ಕೊನೆಗಾಲಗಳು ಕೆಲವು ಕಾಲವಾದರೂ ಜನರನ್ನು ಕಾಡುತ್ತವೆ. ಸೆಲ್ವಿ ಜಯಲಲಿತಾ ಅವರ ಸಾವು ಕೂಡ ಹೀಗೆ ಕಳೆದ 74 ದಿನಗಳಿಂದ ಕಾಡುತ್ತಿತ್ತು. ಇದಕ್ಕೂ ಮೊದಲೇ ಅವರ ಆರೋಗ್ಯದ ಬಗ್ಗೆ ವರದಿಗಳು ಬಂದಿದ್ದವು. ಆದರೆ ಈ ಬಾರಿ ಜಯಲಲಿತಾ ಆಸ್ಪತ್ರೆಗೆ ದಾಖಲಾಗಿ, ಹಲವು ದಿನಗಳ ಅನುಪಸ್ಥಿತಿಯ ನಂತರ, ರಾಜ್ಯಪಾಲರು ತಮಗಿರುವ ಅಧಿಕಾರವನ್ನು ಬಳಸಿ, ಪದವಿಯನ್ನು ಉಳಿಸಿ, ಹೊಣೆಗಾರಿಕೆಯಿಂದ ಮುಕ್ತರನ್ನಾಗಿ ಮಾಡಿದ್ದರು. ಈ ಕುರಿತು ‘ಸಮಾಚಾರ’ ವರದಿಯೊಂದನ್ನು ಪ್ರಕಟಿಸಿತ್ತು.

ಸದ್ಯ ಜಯಲಲಿತಾ ಅವರ ಮೃತದೇಹವನ್ನು ಚೆನ್ನೈನ ರಾಜಾಜಿ ಗಾರ್ಡನ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.


ವಿದಾಯದ ವೇಳೆಯಲ್ಲಿ…

(ನಟನೆ- ರಾಜಕೀಯ- ಅಧಿಕಾರ)

ಮಾಹಿತಿ, ಚಿತ್ರ, ವಿಡಿಯೋ

ಚಂದನದ ಗೊಂಬೆ:

ಕನ್ನಡ ಸಿನೆಮಾ 'ಚಂದನದ ಗೊಂಬೆ'ಯಲ್ಲಿ ಜಯಲಲಿತಾ.

ಇದು ಜಯಲಲಿತಾ ಪ್ರಮುಖ ಪಾತ್ರದಲ್ಲಿ ನಟಿಸಿದ ಕನ್ನಡದ ಚಿತ್ರ ‘ಚಂದನದ ಗೊಂಬೆ’ಯ ಚಿತ್ರ. ಇದಕ್ಕೂ ಮೊದಲೇ ಅವರು ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದರು ಮತ್ತು ಬಾಲ ಕಲಾವಿದೆಯಾಗಿ ಸಿನೆಮಾ ರಂಗಕ್ಕೆ ಪ್ರವೇಶ ಮಾಡಿಯಾಗಿತ್ತು.

ಎಂಜಿಆರ್ ‘ಜತೆಜತೆಯಲ್ಲಿ’:

ಜಯಲಲಿತಾ ಅವರ ಮೊದಲ ತಮಿಳು ಸಿನೆಮಾ ‘ವೆನ್ನಿರಾ ಆಡೈ’ (ಬಿಳಿ ಬಟ್ಟೆ). ಇದರಲ್ಲಿ ಅವರು ನಾಯಕಿ ಪಾತ್ರವನ್ನು ನಿರ್ವಹಿಸಿದ್ದರು. ಬಾಕ್ಸ್ ಆಫೀಸ್ ಕೊಳ್ಳೆಹೊಡೆದ ಸಿನೆಮಾ ಇದು.

ಅದಾದ ಮೇಲೆ, ಅವತ್ತಿನ ತಮಿಳು ಚಿತ್ರರಂಗದ ಮೇರು ನಟ ಎಂ. ಜಿ. ರಾಮಚಂದ್ರನ್ (ಎಂಜಿಆರ್) ಜತೆ ಅವರು ನಟಿಸಲು ಶುರು ಮಾಡಿದರು. ಮುಂದೆ ಎಂಜಿಆರ್ ರಾಜಕೀಯ ಪ್ರವೇಶ ಮಾಡುತ್ತಿದ್ದಂತೆ, ಜಯಲಲಿತಾ ಕೂಡ ಅವರನ್ನು ಹಿಂಬಾಲಿಸಿದರು. ಮುಂದಿನ 2 ವರ್ಷಗಳ ಕಾಲ ಅವರಿಬ್ಬರು ಜತೆಜತೆಯಲ್ಲಿ ಹೆಜ್ಜೆ ಹಾಕಿದರು.

1970: ತೆರೆಯ ಮೇಲೆ ಬೇರ್ಪಡೆ

ಹೆಚ್ಚು ಕಡಿಮೆ ಇದೇ ವರ್ಷ ಪಕ್ಷದೊಳಗಿನ ಒತ್ತಡದಿಂದಾಗಿ ಎಂಜಿಆರ್ ಇತರೆ ನಾಯಕಿಯರ ಜತೆಗೂ ನಟಿಸಲು ಶುರುಮಾಡಿದರು. ಅದೇ ವೇಳೆ, ಜನಪ್ರಿಯ ನಟಿಯಾಗಿದ್ದ ಜಯಲಲಿತಾ ಕೂಡ ಬೇರೆ ನಾಯಕರ ಜತೆ ಚಿತ್ರಗಳಿಗಾಗಿ ಹೆಜ್ಜೆ ಹಾಕಿದರು. ಮುಂದಿನ ಒಂದು ದಶಕ ಇಬ್ಬರೂ ಒಟ್ಟಿಗೆ ನಟಿಸಲೇ ಇಲ್ಲ. ತೆರೆ ಮೇಲೆ ಇಬ್ಬರು ದೂರ ದೂರ ಇದ್ದು ಬಿಟ್ಟಿದ್ದರು.

ತಮಿಳು ಸಿನೆಮಾ 'ಚೈತ್ರ ಪೂರ್ಣಿಮ'ದಲ್ಲಿ ಜಯಲಲಿತಾ ಮತ್ತು ಶಿವಾಜಿ ಗಣೇಶನ್.

ತಮಿಳು ಸಿನೆಮಾ ‘ಚೈತ್ರ ಪೂರ್ಣಿಮ’ದಲ್ಲಿ ಜಯಲಲಿತಾ ಮತ್ತು ಶಿವಾಜಿ ಗಣೇಶನ್.

1973: ಬೆಳ್ಳಿತೆರೆಯಲ್ಲಿ ಜೋಡಿ ಅಂತ್ಯ

ಇದು ಜಯಲಲಿತಾ ಮತ್ತು ಎಂಜಿಆರ್ 1973ರಲ್ಲಿ ಒಟ್ಟಿಗೆ ನಟಿಸಿದ ಕೊನೆಯ ಚಿತ್ರ, ‘ಪಟ್ಟಿಕೊಟ್ಟಿ ಪೊನ್ನಯ್ಯ’.

1977: ಮುಖ್ಯಮಂತ್ರಿ MGR

ಮೊದಲ ಬಾರಿ ಎಂಜಿಆರ್ ಮುಖ್ಯಮಂತ್ರಿಯಾದಾಗ ನಡೆದ ಬೃಹತ್ ರ್ಯಾಲಿಯ ಚಿತ್ರ.

ಮೊದಲ ಬಾರಿ ಎಂಜಿಆರ್ ಮುಖ್ಯಮಂತ್ರಿಯಾದಾಗ ನಡೆದ ಬೃಹತ್ ರ್ಯಾಲಿಯ ಚಿತ್ರ.

1980: ಚಿತ್ರ ರಂಗಕ್ಕೆ ವಿದಾಯ

ಜಯಲಲಿತಾ ‘ನಾದಿಯೈ ತೇಡಿವಂದಾ ಕಡಲ್’ ಸಿನೆಮಾದಲ್ಲಿ ನಟಿಸಿದ್ದು 1980ರಲ್ಲಿ. ಅದು ಅವರ ಚಿತ್ರರಂಗದ ಕೊನೆಯ ಚಿತ್ರವಾಯಿತು. ಅಷ್ಟೊತ್ತಿಗಾಗಲೇ ಎಂಜಿಆರ್ ಜತೆಯಲ್ಲಿ 28 ಸಿನೆಮಾ ಸೇರಿದಂತೆ ಒಟ್ಟು 300 ಚಿತ್ರಗಳಲ್ಲಿ ಅಭಿನಯಿಸಿಯಾಗಿತ್ತು. ಅವರು ಮೂರು ಸೆಂಚುರಿ ಸಿನೆಮಾಗಳನ್ನು ಪೂರೈಸಿದ ನಟಿಯರ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದರು.

1982-83: ರಾಜಕೀಯ ಪ್ರವೇಶ

ಸಿನೆಮಾ ಬಿಟ್ಟ ನಂತರ ಚಿಕ್ಕದೊಂದು ವಿರಾಮ ತೆಗೆದುಕೊಂಡ ಜಯಲಲಿತಾ, ನೇರವಾಗಿ ರಾಜಕೀಯಕ್ಕೆ ಕಾಲಿಟ್ಟರು. ಎಐಡಿಎಂಕೆ ಕಾರ್ಯಕರ್ತೆಯಾಗಿ ಅವರು 1982ರಲ್ಲಿ ರಾಜಕೀಯ ಜೀವನದ ಮೊದಲ ಭಾಷಣ ಮಾಡಿದರು. ‘ಪೆನ್ನಿನ್ ಪೇರುಮೈ’ (ಹೆಣ್ಣಿನ ಗೌರವ) ಅವರ ಭಾಷಣದ ವಿಚಾರವಾಗಿತ್ತು.

ಮರು ವರ್ಷ ಅವರಿಗೆ ತಿರುಚೆಂಡೂರ್ ಉಪ ಚುನಾವಣೆಯ ಪ್ರಚಾರ ಕಾರ್ಯದರ್ಶಿ ಹೊಣೆಗಾರಿಕೆ ನೀಡಲಾಯಿತು.

1984: ರಾಜ್ಯಸಭೆಗೆ ಪ್ರವೇಶ

ಮರು ವರ್ಷವೇ ರಾಜ್ಯಸಭೆಗೆ ಜಯಲಲಿತಾರನ್ನು ಎಂಜಿಆರ್ ಕಳುಹಿಸಿಕೊಟ್ಟರು. ಮುಂದಿನ ನಾಲ್ಕು ವರ್ಷ ಅವರು ಮೇಲ್ಮನೆಯಲ್ಲಿ ಎಐಎಡಿಎಂಕೆ ಪಕ್ಷವನ್ನು ಪ್ರತಿನಿಧಿಸಿದರು. ಸಂಸದೆಯಾಗಿ ಕೊನೆಯ ವರ್ಷದಲ್ಲಿದ್ದಾಗಲೇ ಎಂಜಿಆರ್ ಪಾರ್ಶ್ವವಾಯು ಪೀಡಿತರಾಗಿ ಅಮೆರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾದರು. ಈ ಸಮಯದಲ್ಲಿ ಬಂದ ವರದಿಗಳ ಪ್ರಕಾರ, ಜಯಾ ಇದೇ ವೇಳೆ ಪ್ರಧಾನಿ ರಾಜೀವ್ ಗಾಂಧಿಯವರ ಮುಂದೆ, ತಮಿಳುನಾಡಿನ ಮುಖ್ಯಮಂತ್ರಿ ಮಾಡುವಂತೆ ಬೇಡಿಕೆ ಇಟ್ಟಿದ್ದರು.

ಇದು ಜಯಾ ಮತ್ತು ಎಂಜಿಆರ್ ಸಂಬಂಧದಲ್ಲಿ ಮೊದಲ ಬಿರುಕು ಹುಟ್ಟಲು ಕಾರಣವಾಯಿತು. ಜಯಾರನ್ನು ಪಕ್ಷದ ಎಲ್ಲಾ ಸ್ಥಾನಗಳಿಂದ ಕಿತ್ತು ಹಾಕಿದರು. ಅದೇ ವರ್ಷ ಪಕ್ಷವು ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಎದುರಿಸಿತು. ಎರಡೂ ಕಡೆಗಳಲ್ಲಿ ಗೆದ್ದು ಬಂತು ಕೂಡ. ಇದರಲ್ಲಿ ಜಯಲಲಿತಾ ಕೊಡುಗೆ ಅಪಾರವಾಗಿತ್ತು ಎಂದು ವರದಿಗಳು ಹೇಳುತ್ತವೆ.

ದಿಲ್ಲಿಯ ಪಾರ್ಲಿಮೆಂಟ್ ಭವನದ ಮುಂದೆ ಜಯಲಲಿತಾ.

ದಿಲ್ಲಿಯ ಪಾರ್ಲಿಮೆಂಟ್ ಭವನದ ಮುಂದೆ ಜಯಲಲಿತಾ.

1987: ಎಂಜಿಆರ್ ಸಾವು

ಇದು ಎಂಜಿಆರ್ ಅಂತ್ಯಸಂಸ್ಕಾರದ ಅಪರೂಪದ ವಿಡಿಯೋ. ಇದರಲ್ಲಿ ಪಕ್ಷದ ಕಾರ್ಯಕರ್ತರ ಜತೆ ರೋಧಿಸುತ್ತಿರುವ ಜಯಲಲಿತಾರನ್ನೂ ಕಾಣಬಹುದು.

ಎಂಜಿಆರ್ ಸಾವಿನ ನಂತರ ಎಐಎಡಿಎಂಕೆ ಪಕ್ಷದಲ್ಲಿ ಉತ್ತರಾಧಿಕಾರಿ ಪಟ್ಟಕ್ಕಾಗಿ ಕಚ್ಚಾಟ ಆರಂಭವಾಯಿತು. ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಮತ್ತು ಜಯಲಲಿತಾ ನಾಯಕತ್ವದಲ್ಲಿ ಎರಡು ಬಣಗಳಾಗಿ ಪಕ್ಷ ಒಡೆದು ಹೋಯಿತು.

1988: ಮೊದಲ ಹಿನ್ನಡೆ

ಎಂಜಿಆರ್ ಸಾವಿನ ನಂತರ ಇದ್ದ 132 ಶಾಸಕರ ಪೈಕಿ, 97 ಜನ ಜಾನಕಿ ರಾಮಚಂದ್ರನ್ ಪರವಾಗಿ ನಿಂತರು. ಆದರೆ, 21 ದಿನಗಳ ನಂತರ ಅವರ ಸರಕಾರ ಬಿದ್ದು ಹೋಯಿತು. ಆ ಸಮಯದಲ್ಲಿ ಪ್ರಧಾನಿ ರಾಜೀವ್ ಗಾಂಧಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದರು. ಈ ಸಮಯ ಜಯಲಲಿತಾ ರಾಜಕೀಯ ಜೀವನದಲ್ಲಿ ಕೊಂಚ ಮಟ್ಟಿಗಿನ ಹಿನ್ನಡೆ ಎಂದು ಇತಿಹಾಸ ವಿಶ್ಲೇಷಿಸುತ್ತಿದೆ.

ಮುಖ್ಯಮಂತ್ರಿ ಜಯಲಲಿತಾ ಪತ್ರಿಕಾಗೋಷ್ಠಿಯೊಂದರಲ್ಲಿ.

ಎಐಎಡಿಎಂಕೆ ಪಾಲಿಗೆ 1989ರ ವಿಧಾನಸಭಾ ಚುನಾವಣೆ ಭಾರಿ ಸವಾಲನ್ನು ಮುಂದಿಟ್ಟಿತ್ತು. ಪಕ್ಷ ಅಷ್ಟೊತ್ತಿಗಾಗಲೇ ಇಬ್ಭಾಗವಾಗಿತ್ತು. ಪಕ್ಷದ ಚಿಹ್ನೆ, ‘ಎರಡು ಎಲೆಯ ಕುಡಿ’ಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿತ್ತು. ಪಕ್ಷದ ಕಾರ್ಯಕರ್ತರು ಮತ್ತು ಮತದಾರರಿಗೆ ಇದು ಗೊಂದಲ ಮೂಡಿಸಿತು.

ಪ್ರತಿಪಕ್ಷ ಡಿಎಂಕೆ (ಡ್ರಾವಿಡ ಮುನ್ನೇತ್ರ ಕಳಗಂ) ಚುನಾವಣೆಯನ್ನು ಗೆದ್ದುಕೊಂಡಿತು. ಜಯಲಲಿತಾ ಬಣ, 27 ಸ್ಥಾನಗಳನ್ನು ಗಳಿಸುವಲ್ಲಿ ಮಾತ್ರವೇ ಸಫಲವಾಯಿತು. ಜಾನಕಿ ಬಣ ಕೇವಲ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ, ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಜಾನಕಿ ಪಕ್ಷದಿಂದ ಹೊರನಡೆದರು. ಇದು ಎಐಎಡಿಎಂಕೆ ಪಕ್ಷದಲ್ಲಿ ಜಯಾ ಪ್ರಶ್ನಾತೀತ ನಾಯಕಿಯಾಗಿ ಬೆಳೆಯಲು ಹಾದಿ ಸುಗಮವಾಯಿತು.

ಈ ಮೇಲಿನ ಕಪ್ಪು- ಬಿಳುಪು ಚಿತ್ರದಲ್ಲಿ ತಮಿಳುನಾಡಿನ ಅಸೆಂಬ್ಲಿ ಭವನದ ಮುಂದೆ ಕುಳಿತು ಸಾರ್ವಜನಿಕವಾಗಿ ರೋಧಿಸುತ್ತಿರುವ ಜಯಲಲಿತಾ ಕಾಣಿಸುತ್ತಿದ್ದಾರೆ. ಅಸೆಂಬ್ಲಿಯ ಒಳಗೆ ಈ ದಿನ ನಡೆದ ಬೆಳವಣಿಗೆಗಳು ತಮಿಳುನಾಡಿನ ರಾಜಕೀಯದಲ್ಲಿ ಮನ್ವಂತರವಾಗಲು ಕಾರಣವಾಯಿತು.
ಅವತ್ತು ನಿಜಕ್ಕೂ ಏನು ನಡೆಯಿತು ಎಂಬುದಕ್ಕೆ ಹಲವು ವಾದಗಳಿವೆ. ಸದ್ಯ ಎಲ್ಲರೂ ಒಪ್ಪಿಕೊಂಡಿರುವ ಪ್ರಕಾರ ಹೇಳುವುದಾದರೆ, ಅಸೆಂಬ್ಲಿ ಒಳಗೆ ಮುಖ್ಯಮಂತ್ರಿ ಕರುಣಾನಿಧಿ ಆಯವ್ಯಯ ಮಂಡಿಸಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಮಧ್ಯದಲ್ಲಿ ಮಾತನಾಡಿದ ಜಯಲಲಿತಾ, ‘ಕ್ರಿಮಿನಲ್’ ಎಂಬ ಪದವನ್ನು ಪದೇ ಪದೇ ಬಳಸಿದರು. ಆಗ ಕರುಣಾನಿಧಿ ಪರವಾಗಿ ಜಯಲಲಿತಾರ ವಿರುದ್ಧ ಕೆಟ್ಟ ಶಬ್ಧಗಳನ್ನು ಬಳಸಿ ಬೈಯಲು ಶುರುಮಾಡಿದರು. ಈ ಸಮಯದಲ್ಲಿ ಎಐಎಡಿಎಂಕೆ ಸದಸ್ಯರು ತೋಳೇರಿಸಿಕೊಂಡು ಹೋದಾಗ ಉಬಯ ಪಕ್ಷಗಳ ಶಾಸಕರು ಬಡಿದಾಡಿಕೊಂಡರು. ಈ ಸಮಯದಲ್ಲಿ ಹೊರಬರುತ್ತಿದ್ದ ಜಯಾರನ್ನು ಡಿಎಂಕೆ ಶಾಸಕನೊಬ್ಬ ಎಳೆದಾಡಿದ್ದ. ನಂತರ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಜಯಲಲಿತಾ, ‘ಮುಖ್ಯಮಂತ್ರಿಯಾಗಿಯೇ ಸದನಕ್ಕೆ ಕಾಲಿಡುತ್ತೇನೆ’ ಎಂದು ಘೋಷಿಸಿದರು. ಸಹಜವಾಗಿಯೇ ಎಐಎಡಿಎಂಕೆ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಮುನಿಸು ಮರೆತು ಒಂದಾಗಿ, ಡಿಎಂಕೆಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿದರು. ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದರು.

1991: ಮುಖ್ಯಮಂತ್ರಿ ‘ಅಮ್ಮ’

ತೊಂಬತ್ತರ ದಶಕದ ಆರಂಭದಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿತ್ತು. ಮೈತ್ರಿಕೂಟ 225 ಸೀಟುಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬಂತು. ಡಿಎಂಕೆ ಕೇವಲ 2 ಸೀಟುಗಳಿಗೆ ಸೀಮಿತವಾಗುವ ಮೂಲಕ ಭಾರಿ ಮುಖಭಂಗವನ್ನು ಅನುಭವಿಸಿತು. ಜಯಲಲಿತಾ ಮುಖ್ಯಮಂತ್ರಿಯಾಗಿಯೇ ವಿಧಾನಸಭೆಯನ್ನು ಪ್ರವೇಶಿಸಿದರು.

1991-96: ಹಗರಣಗಳೊಂದಿಗೆ ‘ಜನಪ್ರಿಯ’ ಆಡಳಿತ!

ಅತ್ಯಂತ ಕಿರಿಯ ವಯಸ್ಸಿನಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ತಮಿಳುನಾಡು ಅಧಿಕಾರ ಹಿಡಿದ ಜಯಲಲಿತಾ 1996ರಲ್ಲಿ ಸೋಲು ಕಂಡು ಮತ್ತೆ ವಿರೋಧ ಪಕ್ಷದಲ್ಲಿ ಕೂರಬೇಕಾಯಿತು. ಅದರ ನಡುವಿನ  ಐದು ವರ್ಷಗಳಲ್ಲಿ ಜಯಲಲಿತಾ ತಮ್ಮ ಅಂತರಂಗದ ಮುನ್ನೋಟ ಬಿಟ್ಟುಕೊಟ್ಟರು. ಜನಪ್ರಿಯ ‘ತೊಟ್ಟಿಲು ಮಗು ಯೋಜನೆ’ ಜಾರಿಗೆ ತಂದರು. ಅವತ್ತಿಗೆ ತಮಿಳುನಾಡಿನ ಕೆಲವು  ಭಾಗಗಳಲ್ಲಿ ಲಿಂಗ ಬೇಧ ವ್ಯಾಪಕವಾಗಿತ್ತು. 57 ಮಹಿಳಾ ಪೊಲೀಸ್ ಠಾಣೆಗಳನ್ನು ಆರಂಭಿಸಿದ್ದಲ್ಲದೆ, ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇಕಡಾ 30 ಮೀಸಲಾತಿ ತಂದಿದ್ದರು. ‘ಅಮ್ಮ’ ಬ್ರ್ಯಾಂಡ್ ಜನಪ್ರಿಯ ಯೋಜನೆಗಳ ಪರ್ವ ಅವತ್ತು ಆರಂಭವಾಗಿತ್ತು.

ಹೀಗಿರುವಾಗಲೇ ಇದೇ ಅವಧಿಯಲ್ಲಿ ಜಯಾ ಮತ್ತವರ ಸಂಪುಟ ಸಹೋದ್ಯೋಗಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆಯ ಆರೋಪ ಕೇಳಿ ಬಂದಿತ್ತು.

7 ಸೆಪ್ಟೆಂಬರ್ 1995ರಂದು ದತ್ತು ಪುತ್ರ ಸುಧಾಕರನ್ ಮದುವೆಯನ್ನು ಅದ್ಧೂರಿಯಾಗಿ ಮುಗಿಸಿದ್ದರು ಜಯಾ. ಒಂದೂವರೆ ಲಕ್ಷ ಅಥಿತಿಗಳಿಗೆ ಉಣಬಡಿಸಿದ ಹಾಗೂ ಅತೀ ದೊಡ್ಡ ಪುಷ್ಟ ಗುಚ್ಛ ತಯಾರಿಸಿದ ಕಾರಣಕ್ಕೆ ಈ ಮದುವೆಯಲ್ಲಿ ಎರಡು ಗಿನ್ನೆಸ್ ದಾಖಲೆಗಳೂ ಸೃಷ್ಟಿಯಾಗಿದ್ದವು. ಅದ್ದೂರಿ ಮದುವೆ ಟ್ರಯಲ್ ಕೋರ್ಟ್ ಮೆಟ್ಟಿಲೇರಿದಾಗ ಮದುವೆ ಖರ್ಚು 6 ಕೋಟಿಯನ್ನು ವಧುವಿನ ಕಡೆಯವರೇ ಪಾವತಿಸಿದ್ದಾರೆ ಎಂದು ಹೇಳಿ ಜಯಲಲಿತಾ ಕೈ ತೊಳೆದುಕೊಂಡಿದ್ದರು.

1996: ‘ಜಯ’ ಉಳಿಸಿಕೊಳ್ಳಲಾಗದ ಅಮ್ಮಾ..

ಅಧಿಕಾರ ಸಿಕ್ಕಿದರೂ ಅದನ್ನು ಉಳಿಸಿಕೊಳ್ಳಲು ಜಯಾಗೆ ಆಗಿರಲಿಲ್ಲ. 1996ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 168 ಸ್ಥಾನಗಳ ಪೈಕಿ ಎಐಎಡಿಎಂಕೆ ದಕ್ಕಿದ್ದು ಕೇವಲ 4 ಸ್ಥಾನಗಳು. ಸ್ವತಃ ಜಯಲಲಿತಾ ಸೋಲು ಅನುಭವಿಸಿದರು. ಆಡಳಿತ ವಿರೋಧಿ ಅಲೆಗೆ ಎಐಎಡಿಎಂಕೆ ತರಗೆಲೆಯಾಗಿತ್ತು.

ವಿಪಕ್ಷ ಡಿಎಂಕೆ ಅಧಿಕಾರಕ್ಕೆ ಬಂತು. ಕುರ್ಚಿಯಲ್ಲಿ ಆಸೀನರಾಗುತ್ತಿದ್ದಂತೆ ಕರುಣಾನಿಧಿ ಮೇಲಿಂದ ಮೇಲೆ ಜಯಲಲಿತಾ ವಿರುದ್ಧ ಕೇಸುಗಳನ್ನು ಹಾಕಿದರು. ‘ಕಲರ್ ಟಿವಿ ಹಗರಣ’ ಅವತ್ತಿಗೆ ದೊಡ್ಡ ಸುದ್ದಿಯಾಗಿತ್ತು. ಇದರಲ್ಲಿ ತಮ್ಮ ಗೆಳತಿ ಶಶಿಕಲಾ ಹೆಸರಿಗೆ ಚೆಕ್ ಮೂಲಕ ಜಯಾ 10.13 ಕೋಟಿ ರೂಪಾಯಿ ಕಿಕ್’ಬ್ಯಾಕ್ ಪಡೆದುಕೊಂಡಿದ್ದಾರೆ ಎಂಬ ಆರೋಪದ ಮೇಲೆ 7 ಡಿಸೆಂಬರ್ 1996ರಲ್ಲಿ ಜಯಲಲಿತಾ ಬಂಧನವೂ ನಡೆಯಿತು. 30 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಅವರನ್ನು ಕಳುಹಿಸಲಾಗಿತ್ತು.  ಮುಂದೆ 30 ಮೇ 2000ದಲ್ಲಿ ಕೆಳ ಹಂತದ ನ್ಯಾಯಾಲಯ ಪ್ರಕರಣದಿಂದ ಅವರಿಗೆ ಮುಕ್ತಿ ನೀಡಿತ್ತು. ಮತ್ತು ಇದೇ ಆದೇಶವನ್ನು ಹೈಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು.

2001: ಅಧಿಕಾರದ ಕುರ್ಚಿಗೆ ಮತ್ತೆ ಮರಳಿದ ‘ಅಮ್ಮ’

ಈ ಬಾರಿ ಜಯಾ ಗೆಲುವು ಹಾವು ಏಣಿಯಂತಾಗಿತ್ತು. 2001ರ ಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಯದಂತೆ ತಡೆಯಲಾಗಿತ್ತು. ಗಂಭೀರ ಪ್ರಕರಣಗಳನ್ನು ಅವರು ಎದುರಿಸುತ್ತಿದ್ದರು. ‘ತನ್ಸಿ (TANSI)’ ಯಿಂದ ನಿಯಮ ಮೀರಿ ಆಸ್ತಿ ಖರೀದಿಸಿದ ಆರೋಪ ಅವರ ಮೇಲಿತ್ತು. ಪ್ರಕರಣದಲ್ಲಿ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಘೋಷಿಸಿದ್ದನ್ನು ಪ್ರಶ್ನಿಸಿ ಜಯಾ ಸುಪ್ರಿಂ ಮೆಟ್ಟಿಲೇರಿದರೂ ಪ್ರಕರಣ ಅಂತ್ಯವಾಗದೆ ಜಯಾ ಕಣಕ್ಕಿಳಿಯಲಾಗಿರಲಿಲ್ಲ. ಅಲ್ಲದೆ ‘ಪ್ಲೆಸೆಂಟ್ ಸ್ಟೇ ಹೊಟೇಲ್ ಪ್ರಕರಣ’ದಲ್ಲಿಯೂ ಫೆಬ್ರವರಿ 2000ನೇ ಇಸವಿಯಲ್ಲಿ ಟ್ರಯಲ್ ಕೋರ್ಟ್ ಜಯಾಗೆ ಒಂದು ವರ್ಷ ಜೈಲು ಶಿಕ್ಷೆ ನೀಡಿತ್ತು. ಅವರ ಅನುಪಸ್ಥಿತಿಯಲ್ಲಿ ಪಕ್ಷ ಭರ್ಜರಿ ಬಹುಮತ ಪಡೆದು, ಮೇ 14, 2001ರಂದು ಜಯಾ ಮತ್ತೆ ಮುಖ್ಯಮಂತ್ರಿಯಾಗಿದ್ದರು.

ಆದರೆ ವಿಧಾನ ಸಭೆಯ ಸದಸ್ಯರಾಗದೇ ಇದ್ದುದರಿಂದ 2001 ಸೆಪ್ಟೆಂಬರಿನಲ್ಲಿ ಹುದ್ದೆ ಕಳೆದುಕೊಳ್ಳಬೇಕಾಗಿತ್ತು. ಆಗ ತಮ್ಮ ಅಣತಿಯಂತೆ ನಡೆದುಕೊಳ್ಳುವ ಓ. ಪನ್ನೀರು ಸೆಲ್ವಂ ಅವರನ್ನು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳ್ಳಿರಿಸಿ ಜಯಾ ಹಿಂಬಾಗಿಲಿನ ಆಡಳಿತ ನಡೆಸಿದ್ದರು.

ಮುಂದೆ ಡಿಸೆಂಬರ್ 2001ರಲ್ಲಿ ಹೈಕೋರ್ಟ್ ‘ತನ್ಸಿ’ ಮತ್ತು ‘ಪ್ಲೆಸೆಂಟ್ ಸ್ಟೇ ಹೊಟೇಲ್ ಪ್ರಕರಣ’ದಲ್ಲಿ ಅವರನ್ನು ದೋಷಮುಕ್ತಗೊಳಿಸಿತ್ತು. ಇದನ್ನೇ ಸುಪ್ರಿಂ ಕೋರ್ಟ್ 2003ರಲ್ಲಿ ಎತ್ತಿ ಹಿಡಿದಿತ್ತು. ಸುಪ್ರಿಂ ತೀರ್ಪು ಬರುತ್ತಿದ್ದಂತೆ ಜಯಾ ಮತ್ತೆ ಮುಖ್ಯಮಂತ್ರಿ ಹುದ್ದೆಗೆ ಬಂದಿದ್ದರು.

2011: ಮೂರನೇ ಬಾರಿಗೆ ಮುಖ್ಯಮಂತ್ರಿ

2006ರಲ್ಲಿ ಜಯಾ ಮಗದೊಮ್ಮೆ ಅಧಿಕಾರದಿಂದ ಕೆಳಗಿಳಿಯಬೇಕಾಗಿ ಬಂದಿತ್ತು. ಅವರ ಪಕ್ಷ ಚುನಾವಣೆಯಲ್ಲಿ ಸೋತಿತ್ತು. ಆದರೆ 16 ಮೇ 2011ರಲ್ಲಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿದ್ದರು ಜಯಾ. ಈ ನಡುವೆ ಬೆಳವಣಿಗೆಯೊಂದು ನಡೆದು ಹೋಗಿತ್ತು. ಡಿಸೆಂಬರ್ 19, 2011ರಲ್ಲಿ ತಮ್ಮ ಆಪ್ತ ಗೆಳತಿ ಶಶಿಕಲಾ ಮತ್ತು ಇತರ 13 ಜನರನ್ನು ಎಐಎಡಿಎಂಕೆಯಿಂದ ಜಯಾ ಕಿತ್ತು ಹಾಕಿದ್ದರು. ಮುಂದೆ ಈ ಕುರಿತು ವಿವರವಾಗಿ ಬರೆದ ತೆಹೆಲ್ಕಾ ಮ್ಯಾಗಜಿನ್, ಅವರೆಲ್ಲಾ ಜಯಾ ಕೊಲೆಗೆ ಸಂಚು ರೂಪಿಸಿದ್ದರು ಎಂದು ಹೇಳಿತ್ತು. ಆದರೆ ಸಮಸ್ಯೆ ಬಗೆಹರಿದಿತ್ತು. ಬರವಣಿಗೆಯಲ್ಲಿ ಕ್ಷಮೆ ಕೋರಿದ ನಂತರ ಶಶಿಕಲಾರನ್ನು 31 ಮಾರ್ಚಿನಲ್ಲಿ ಪಕ್ಷಕ್ಕೆ ಮತ್ತೆ ಸೇರ್ಪಡೆ ಮಾಡಲಾಗಿತ್ತು.

2014: ಪರಪ್ಪನ ಅಗ್ರಹಾರ ಮತ್ತು ಜಯಲಲಿತಾ

ಸೆಪ್ಟೆಂಬರ್ 27, 2014 ಜಯಾ ಪಾಲಿನ ಕರಾಳ ದಿನ. ಬೆಂಗಳೂರಿನ ವಿಶೇಷ ನ್ಯಾಯಾಲಯ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ, ಆಕೆಯ ಆಪ್ತೆ ಶಶಿಕಲಾ, ದತ್ತು ಮಗ ಸುಧಾಕರನ್ ಹಾಗೂ ಇಳವರಸಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು ನೂರು ಕೋಟಿಯ ದಂಡ ಹಾಕಿತ್ತು. 1991-96 ನಡುವೆ ಮೊದಲ ಬಾರಿಗೆ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ನಡೆದ ಹಗರಣಗಳು ಇವಾಗಿದ್ದವು.

ಶಿಕ್ಷೆ ಪ್ರಕಟವಾಗುತ್ತಿದ್ದಂತೆ ತನ್ನಿಂತಾನೆ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದ ಜಯಲಲಿತಾ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದರು. ಮತ್ತೆ ಓ. ಪನ್ನೀರು ಸೆಲ್ವಂ ಅವರ ಹುದ್ದೆ ನಿಭಾಯಿಸಿದ್ದರು. ಅಕ್ಟೋಬರ್ 17, 2014ರಲ್ಲಿ ಸುಪ್ರಿಂ ಕೋರ್ಟ್ ಅವರಿಗೆ ಎರಡು ತಿಂಗಳ ಬೇಲ್ ನೀಡಿದಾಗಲಷ್ಟೆ ಆಕೆ ಜೈಲಿನಿಂದ ಹೊರಬಂದಿದ್ದರು. ಮುಂದೆ ಮೇ 11, 2015ರಲ್ಲಿ ಆಕೆಯ ಮೇಲಿನ ಆರೋಪ ನಿರಾಧಾರ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು.

2015-16: ಮತ್ತೆ ಮತ್ತೆ ಅಧಿಕಾರದಲ್ಲಿ ‘ಜಯ’ಲಲಿತಾ

23 ಮೇ, 2015ರಲ್ಲಿ ಮರಳಿ ಮುಖ್ಯಮಂತ್ರಿಯಾದ ಜಯಲಲಿತಾ ಹಿಂತಿರುಗಿ ನೋಡಲಿಲ್ಲ. 2016ರ ಚುನಾವಣೆಯಲ್ಲೂ ಅಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತು ಮತ್ತೆ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿ ಹುದ್ದೆಗೇರಿದ್ದರು. ಅವತ್ತು ಗೆಲುವಿನ ಭಾಷಣ ಮಾಡಿದ್ದ ಜಯಾ, “10 ಪಕ್ಷಗಳು ನನ್ನ ವಿರುದ್ಧ ತಮ್ಮ ತಮ್ಮಲ್ಲೇ ಒಂದಾಗಿದ್ದವು. ಆದರೆ ನಾನು ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ ದೇವರ ಮೇಲೆ ಭಾರ ಹಾಕಿ ಜನರ ಜತೆ ಸಂಬಂಧ ಬೆಸೆದೆ. ಇದರಿಂದ ಜನರಿಗೆ ನನ್ನ ಮೇಲೆ ನಂಬಿಕೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ. ನನಗೆ ಜನರ ಮೇಲೆ ನಂಬಿಕೆ ಇದೆ,” ಎಂದಿದ್ದರು.

ಬಹುಶಃ ಇವತ್ತು ಜಯಾ ಆಸ್ಪತ್ರೆ ಸೇರಿದಾಗ ಯಾಕೆ ತಮಿಳುನಾಡಿನ ಜನ ಭಾವೋದ್ವೇಕಕ್ಕೆ ಒಳಗಾಗುತ್ತಾರೆ ಎನ್ನುವುದಕ್ಕೆ ಇದೇ ಕಾರಣವಿರಬಹುದೋ ಏನೋ. ಜನ ಜಯಾಲಲಿತಾರಲ್ಲಿ ನಂಬಿಕೆ ಇಟ್ಟಿದ್ದರು. ಆ ನಂಬಿಕೆಯ ಮೂರ್ತಿ ಈಗ ಪತನವಾಗಿದೆ.


ಜಯಲಲಿತಾ ಕುರಿತು ‘ಸಮಾಚಾರ’ದ ಹಿಂದಿನ ವರದಿಗಳು; ಹೆಚ್ಚಿನ ಓದಿಗಾಗಿ… 

  1. ‘ಅಮ್ಮ’ಗೆ ಜಾಮೀನು…

  2. …ಅಮ್ಮ ಮರು ಆಯ್ಕೆ ಹಿಂದಿನ ನಿಗೂಢ ನಡೆಗಳು!

  3. ಎಐಎಡಿಎಂಕೆ ಪ್ರಣಾಳಿಕೆ: ಮಕ್ಕಳ ಅಗತ್ಯವೇನು ಎಂಬುದನ್ನು ಅರ್ಥಮಾಡಿಕೊಂಡವರ ಹೆಸರು ‘ಅಮ್ಮ’


Leave a comment

FOOT PRINT

Top