An unconventional News Portal.

ಜಿಯೋ ಪ್ರಚಾರಕ್ಕೆ ಪ್ರಧಾನಿ ಭಾವಚಿತ್ರ ಬಳಕೆ: ಹೆಚ್ಚೆಂದರೆ 500 ರೂಪಾಯಿ ದಂಡ ಬೀಳಬಹುದು!

ಜಿಯೋ ಪ್ರಚಾರಕ್ಕೆ ಪ್ರಧಾನಿ ಭಾವಚಿತ್ರ ಬಳಕೆ: ಹೆಚ್ಚೆಂದರೆ 500 ರೂಪಾಯಿ ದಂಡ ಬೀಳಬಹುದು!

ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ಅನುಮತಿ ಇಲ್ಲದೆ ‘ಜಿಯೋ’ ಸಿಮ್ ವ್ಯಾಪಾರದ ಪ್ರಚಾರಕ್ಕೆ ಬಳಸಿಕೊಂಡ ಆರೋಪ ಮೇಲೆ ರಿಲಾಯನ್ಸ್ ಕಂಪನಿ ಮೇಲೆ ದಂಡ ಹಾಕುವ ಸಾಧ್ಯತೆ ಇದೆ. ಅದು ಎಷ್ಟು ಎಂದು ಹೇಳಿದರೆ ನೀವು ಅಚ್ಚರಿ ಪಡುತ್ತೀರ…

ಬರೀ 500 ರೂಪಾಯಿಗಳು!

ಹೌದು, ಮೂರು ತಿಂಗಳ ಹಿಂದೆ ಜಿಯೋ ಮಾರುಕಟ್ಟೆಗೆ ಬಿಡುಗಡೆ ಮಾಡುವ ಹೊತ್ತಿನಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭಾರಿ ಪ್ರಮಾಣದ ಜಾಹೀರಾತುಗಳನ್ನು ನೀಡಲಾಗಿತ್ತು. ಈ ಸಮಯದಲ್ಲಿ ಪ್ರಧಾನಿ ಮೋದಿ ಭಾವಚಿತ್ರವನ್ನು ಕಂಪನಿ ಬಳಸಿಕೊಂಡಿತ್ತು. ಆದರೆ, ಇದಕ್ಕೆ ಪ್ರ‍ಧಾನಿ ಮಂತ್ರಿ ಕಾರ್ಯಾಲಯ ಅನುಮತಿ ನೀಡಲಿರಲಿಲ್ಲ ಎಂದು ಈಗ ಅಧಿಕೃತವಾಗಿ ತಿಳಿದುಬಂದಿದೆ.

ಈ ಕುರಿತು ಸಮಾಜವಾದಿ ಪಕ್ಷದ ಸಂಸದ ನೀರಜ್ ಶೇಖರ್ ಕೇಳಿದ್ದ ಪ್ರಶ್ನೆಗೆ ಶುಕ್ರವಾರ ರಾಜ್ಯಸಭೆಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಲಿಖಿತ ಉತ್ತರ ನೀಡಿದ್ದಾರೆ. ‘ಈ ಕುರಿತು ಸರಕಾರಕ್ಕೆ ಮಾಹಿತಿ ಇತ್ತು. ಆದರೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಯಾವುದೇ ಅನುಮತಿ ನೀಡಲಾಗಿರಲಿಲ್ಲ’ ಎಂದವರು ಸ್ಪಷ್ಟಪಡಿಸಿದ್ದಾರೆ.

ಹೀಗೆ, ಅನುಮತಿ ಇಲ್ಲದೆ ಭಾವಚಿತ್ರ ಬಳಸಿರುವುದಕ್ಕೆ ‘ಲಾಂಛನ ಮತ್ತು ಹೆಸರು (ಸಮಂಜಸವಲ್ಲದ ಬಳಕೆ ತಡೆ) ಕಾಯ್ದೆ 1950’ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ವಿಶೇಷ ಎಂದರೆ, ಈ ಕಾಯ್ದೆ ಅಡಿಯಲ್ಲಿ ಮೋದಿ ಅವರ ಭಾವಚಿತ್ರ ಬಳಸಿದ್ದಕ್ಕೆ ಗರಿಷ್ಠ 500 ರೂಪಾಯಿ ದಂಡವನ್ನು ವಿಧಿಸಬಹುದಾಗಿದೆ.

ಮಾರಾಟ ತಂತ್ರ:

‘ಜಿಯೋ’ ಸಿಮ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ವೇಳೆಗೆ ಕಂಪನಿ ದೇಶದ ಪ್ರಮುಖ ದಿನ ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತುಗಳನ್ನು ಪ್ರಕಟಿಸಿತ್ತು. ಇದರಲ್ಲಿ ಪ್ರಧಾನಿ ಮೋದಿ ರಿಜಿಟಲ್ ಇಂಡಿಯಾ ಕನಸನ್ನು ನನಸು ಮಾಡಲು ಹೊರಟಿರುವುದಾಗಿ ಹೇಳಿಕೊಂಡಿತ್ತು. ಟಿವಿಗಳಿಗೆ ನೀಡಿದ ಜಾಹೀರಾತಿನಲ್ಲಿ ಮೋದಿ ಭಾವಚಿತ್ರದ ಜತೆಗೆ, ಮದರ್ ಥೆರೇಸಾ, ವಿವೇಕಾನಂದ, ಗಾಂಧಿ ಹಾಗೂ ರವೀಂದ್ರನಾಥ ಟ್ಯಾಗೋರ್ ಅವರ ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿತ್ತು.

ಈ ಸಮಯದಲ್ಲಿ ಜಿಯೋ ಕಂಪನಿ ನೀಡಿದ ಜಾಹೀರಾತಿನ ಕುರಿತು ಟೀಕೆಗಳು ವ್ಯಕ್ತವಾಗಿದ್ದವು. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ಮೋದಿ ಅಂಬಾನಿಯ ಪಾಕೆಟ್ನಲ್ಲಿ ಇರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ?” ಎಂದು ಪ್ರಶ್ನಿಸಿದ್ದರು.

ರಿಲಾಯನ್ಸ್ ಜಿಯೋ ತನ್ನ ಜಾಹೀರಾತು ಪ್ರಚಾರಕ್ಕಾಗಿ ಪ್ರಮುಖ ಜಾಹೀರಾತು ಕಂಪನಿ ಮೆಕ್ ಕ್ಯಾನ್ ಅನ್ನು ನೇಮಕ ಮಾಡಿಕೊಂಡಿತ್ತು. ಸುಮಾರು 200- 300 ಕೋಟಿ ಬರೀ ಜಾಹೀರಾತಿಗಾಗಿ ಕಂಪನಿ ಖರ್ಚು ಮಾಡುತ್ತಿದೆ ಎಂದು ‘ಬಿಜಿನೆಸ್ ಸ್ಟ್ಯಾಂಡರ್ಡ್’ ಪತ್ರಿಕೆ ವರದಿ ಮಾಡಿತ್ತು.

ಇದೀಗ, ಅದರ ಜಾಹೀರಾತಿನಲ್ಲಿ ಅನುಮತಿ ಇಲ್ಲದೆ ಪ್ರಧಾನಿ ಭಾವಚಿತ್ರ ಬಳಸಿದ್ದು ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿದೆ. ಒಂದು ವೆಳೆ ಸರಕಾರ ಕ್ರಮಕ್ಕೆ ಮುಂದಾದರೆ, ಗರಿಷ್ಠ 500 ರೂಪಾಯಿ ದಂಡವನ್ನು ವಿಧಿಸಬಹುದಾಗಿದೆ.

ನೋಟು ಬದಲಾವಣೆ ಪ್ರಕ್ರಿಯೆ ಘೋ‍ಷಣೆಯಾಗುತ್ತಿದ್ದಂತೆ ಪೇಟಿಎಮ್ ಕೂಡ ಪ್ರಧಾನಿ ಭಾವಚಿತ್ರವನ್ನು ಬಳಸಿಕೊಂಡು ಜಾಹೀರಾತುಗಳನ್ನು ನೀಡಿತ್ತು.

 

Leave a comment

FOOT PRINT

Top