An unconventional News Portal.

ಬಾಳಿಗ ಕೊಲೆ ಪ್ರಕರಣ: ಆರೋಪಿ ನರೇಶ್ ಶೆಣೈಗೆ ಸುಪ್ರಿಂ ಕೋರ್ಟ್ನಿಂದ ‘ಡಸ್ಟಿ ಸರ್ವಿಸ್’!

ಬಾಳಿಗ ಕೊಲೆ ಪ್ರಕರಣ: ಆರೋಪಿ ನರೇಶ್ ಶೆಣೈಗೆ ಸುಪ್ರಿಂ ಕೋರ್ಟ್ನಿಂದ ‘ಡಸ್ಟಿ ಸರ್ವಿಸ್’!

ಮಂಗಳೂರು ಮೂಲದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರಿಂ ಕೋರ್ಟ್ ಮಾನ್ಯ ಮಾಡಿದೆ. ಜತೆಗೆ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯ, ಖುದ್ದು ನೋಟಿಟ್ ಜಾರಿ ಮಾಡುವಂತೆ ತಿಳಿಸಿದೆ.

ಬಾಳಿಗ ಕುಟುಂಬದ ಪರವಾಗಿ ನಿವೃತ್ತ ನ್ಯಾ. ನಾಗಮೋಹನ್ ದಾಸ್ ಮತ್ತು ಮುತ್ತು ವಕೀಲ ಕುಮಾರ್ ವಾದಿಸಿದ್ದರು. “ಸುಮಾರು ಹತ್ತು ನಿಮಿಷ ವಾದ ಮಂಡಿಸಿದ ನಾಗಮೋಹನ್ ದಾಸ್, ತನಿಖೆ ಇನ್ನೂ ಮುಗಿದಿಲ್ಲ. ಈ ಹಂತದಲ್ಲಿ ಜಾಮೀನು ನೀಡುವುದು ಸರಿಯಲ್ಲ ಎಂದು ವಾದಿಸಿದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಯು. ಉದಯ್ ಲಲಿತ್ ಮತ್ತು ಪಿನಾಕಿ ಚಂದ್ರ ಘೋಷ್ ಅವರಿದ್ದ ನ್ಯಾಯಪೀಠ, ‘ಡಸ್ಟಿ ಸರ್ವಿಸ್’ ಆದೇಶ ನೀಡಿದೆ. “ಇದರರ್ಥ ಖುದ್ದು ಆರೋಪಿಗೆ ನೋಟಿಸ್ ಜಾರಿ ಮಾಡಬೇಕು,” ಎಂದು ಬಾಳಿಗಾ ಕುಟುಂಬದ ಪರ ವಕೀಲ ರವೀಂದ್ರ ಕಾಮತ್ ‘ಸಮಾಚಾರ’ಕ್ಕೆ ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯೆಗೆ ನರೇಶ್ ಶೆಣೈ ಮತ್ತು ಬಾಳಿಗ ಕುಟುಂಬಸ್ಥರು ಲಭ್ಯರಾಗಲಿಲ್ಲ.

ಇದಕ್ಕೂ ಮುನ್ನ ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಹೈಕೋರ್ಟ್‌ನ ನ್ಯಾಯವಾದಿ ರವೀಂದ್ರ ಕಾಮತ್ “ವಿನಾಯಕ್ ಬಾಳಿಗ ಅವರ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿರುವಾಗ ಪ್ರಮುಖ ಆರೋಪಿ ನರೇಶ್ ಶೆಣೈಗೆ ಜಾಮೀನು ನೀಡಲಾಗಿದೆ. ಇದರಿಂದ ತನಿಖೆಗೆ ತಡೆಯಾಗುತ್ತದೆ. ಕುಟುಂಬಕ್ಕೂ ಅಪಾಯ ಇದೆ. ಸಾಕ್ಷಿ ನಾಶಕ್ಕೂ ಸಹಕಾರಿಯಾಗಲಿದೆ,” ಎಂದು ದೂರಿದ್ದರು. ಹೀಗಾಗಿ ಬಾಳಿಗ ಕುಟುಂಬದವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂಬ ಮಾಹಿತಿ ನೀಡಿದ್ದರು.

ಮಂಪರು ಪರೀಕ್ಷೆ ವಿರುದ್ಧ ಮೇಲ್ಮನವಿ:

ಈ ಮಧ್ಯೆ ಮಂಪರು ಪರೀಕ್ಷೆಗೆ ಆರೋಪಿ ನರೇಶ್ ಶೆಣೈ ನಿರಾಕರಿಸಿರುವುದನ್ನು ಮಂಗಳೂರು ಸೆಷನ್ಸ್ ಕೋರ್ಟ್‌ ಎತ್ತಿ ಹಿಡಿದಿದೆ. ಈ ತೀರ್ಪಿನ ವಿರುದ್ಧವೂ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್, “ಮಂಪರು ಪರೀಕ್ಷೆಗೆ ಒಳಪಡಲು ಪ್ರಕರಣದ ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈ ನಿರಾಕರಿಸಿದ್ದಾರೆ. ಮಂಪರು ಪರೀಕ್ಷೆಗೆ ಒಳಪಟ್ಟರೆ ಸತ್ಯ ಹೊರಬೀಳುವ ಸಾಧ್ಯತೆ ಇದೆ. ಈ ಕಾರಣಕ್ಕೆ ತನ್ನನ್ನು ತಾನು ಅಮಾಯಕನೆಂದು ಹೇಳಿಕೊಳ್ಳುತ್ತಿರುವ ನರೇಶ್ ಶೆಣೈ ಮಂಪರು ಪರೀಕ್ಷೆಗೆ ಒಳಪಡಲು ಆತಂಕ ಪಡುತ್ತಿದ್ದಾರೆ,” ಎಂದು ಆರೋಪ ಮಾಡಿದ್ದರು.

ಸೆಪ್ಟೆಂಬರ್ 24ರಂದು ನರೇಶ್ ಶೆಣೈಗೆ ಮಂಪರು ಪರೀಕ್ಷೆ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ನರೇಶ್ ಶೆಣೈ ಮಂಪರು ಪರೀಕ್ಷೆಗೆ ಅವಕಾಶ ನೀಡುವಂತೆ ಪ್ರಕರಣದ ತನಿಖಾಧಿಕಾರಿಗಳು ಮಂಗಳೂರಿನ 2 ನೇ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ನ್ಯಾಯಾಲಯವು ಮಂಪರು ಪರೀಕ್ಷೆಗೆ ಅವಕಾಶ ನೀಡದೆ ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ವಿರುದ್ಧ ಹತ್ಯೆಗೀಡಾದ ವಿನಾಯಕ ಬಾಳಿಗರ ತಂದೆ ರಾಮಚಂದ್ರ ಬಾಳಿಗ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಮಂಪರು ಪರೀಕ್ಷೆಗೆ ಅವಕಾಶ ಕೋರಿ ಮತ್ತೆ ಅರ್ಜಿ ಸಲ್ಲಿಸಿದ್ದರು.

ಪೊಲೀಸರ ಮೇಲೆ ನಾಯಕ್ ಆರೋಪ:

“ಬಾಳಿಗ ಕೊಲೆ ಪ್ರಕರಣದಲ್ಲಿ ಮಂಗಳೂರು ಪೊಲೀಸರು ನಡೆದುಕೊಂಡ ಬಗ್ಗೆಯೂ ಸಂಶಯ ವ್ಯಕ್ತವಾಗುತ್ತದೆ. ವಿನಾಯಕ ಬಾಳಿಗ ಬರೆದ ಪತ್ರವನ್ನು ಹಾಜರುಪಡಿಸುವಂತೆ ಮಠದ ಈಗಿನ ಮುಖ್ಯಸ್ಥ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಗೆ ಸಮನ್ಸ್ ಕಳುಹಿಸಿದಾಗ ಸ್ವಾಮೀಜಿ ಖುದ್ದು ಹಾಜರಾಗದೆ ಮಠದ ಗುಮಾಸ್ತರನ್ನು ಹಾಗೂ ತಮ್ಮ ಪ್ರತಿನಿಧಿಯಾಗಿ ಇಬ್ಬರು ವಕೀಲರನ್ನು ಕಳುಹಿಸಿದ್ದರು. ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಠಾಣೆಯಲ್ಲಿ ಪ್ರಶ್ನೋತ್ತರ ವಿಚಾರಣೆ ನಡೆಸುವುದರಿಂದ ಹೀಗೆ ವ್ಯಕ್ತಿಯ ಬದಲು ಇನ್ನೊಬ್ಬರು ಪ್ರತಿನಿಧಿಯಾಗಿ ಹೋಗುವಂತಿಲ್ಲ. ಹೀಗಿದ್ದೂ ಪೊಲೀಸರು ಮಾನ್ಯ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿದೆ,” ಎಂದು ನರೇಂದ್ರ ನಾಯಕ್ ಆರೋಪಿಸಿದ್ದರು.

ಮಂಗಳೂರಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದಿವಂಗತ ವಿನಯಾಕ್ ಬಾಳಿಗಾ ಕುಟುಂಬಸ್ಥರು ಭಾಗವಹಿಸಿದ್ದರು.

ಮಂಗಳೂರಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದಿವಂಗತ ವಿನಯಾಕ್ ಬಾಳಿಗಾ ಕುಟುಂಬಸ್ಥರು ಭಾಗವಹಿಸಿದ್ದರು.

2016ರ ಮಾರ್ಚ್ 21ರಂದು ಮಂಗಳೂರಿನ ಕೊಡಿಯಾಲ್‌ ಬೈಲ್ ಬಳಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಅವರ ಹತ್ಯೆ ನಡೆದಿತ್ತು. ಹತ್ಯೆಯ ಪ್ರಮುಖ ಆರೋಪಿ ನರೇಶ್ ಶೆಣೈ ಮೂರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದರು. ನಂತರ ಹೆಜಮಾಡಿಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಅದಕ್ಕೂ ಮೊದಲು ಶೆಣೈ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಎರಡೆರಡು ಬಾರಿ ತಿರಸ್ಕೃತವಾಗಿತ್ತು. ಬಂಧನದ ನಂತರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಕೋರಿ ನರೇಶ್ ಶೆಣೈ ಸಲ್ಲಿಸಿದ ಅರ್ಜಿ ಆಗಸ್ಟ್ 9ರಂದು ತಿರಸ್ಕೃತಗೊಂಡಿತ್ತು. ಆದರೆ, ಹೈಕೋರ್ಟಿನಲ್ಲಿ ಷರತ್ತುಬದ್ಧ ಜಾಮೀನು ಮಂಜೂರಾದ್ದರಿಂದ ಜೈಲಿನಿಂದ ಬಿಡುಗಡೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ. ಹೆಚ್ಚುವರಿ ದೋಷಾರೋಪ ಪಟ್ಟಿ ಇನ್ನೂ ಸಲ್ಲಿಕೆಯಾಗಲಿದೆ.

Leave a comment

FOOT PRINT

Top