An unconventional News Portal.

‘ಹೆಣ್ಣು- ಹೊನ್ನು- ಮಣ್ಣು’: DK ರವಿ ಸಾವಿನ ಕುರಿತು CBI ನೀಡಿದ ವರದಿಯ ಕಂಪ್ಲೀಟ್ ಡೀಟೆಲ್ಸ್

‘ಹೆಣ್ಣು- ಹೊನ್ನು- ಮಣ್ಣು’: DK ರವಿ ಸಾವಿನ ಕುರಿತು CBI ನೀಡಿದ ವರದಿಯ ಕಂಪ್ಲೀಟ್ ಡೀಟೆಲ್ಸ್

ಇದು ಯಾವ ಸಿನೆಮಾಗೂ ಕಡಿಮೆ ಇಲ್ಲದ ಕತೆ. ಇದರಲ್ಲಿ ಒಬ್ಬ ನಾಯಕನಿದ್ದಾನೆ. ಆತ ತುಮಕೂರು ಜಿಲ್ಲೆಯ ದೊಡ್ಡಕೊಪ್ಪಲು ಎಂಬ ಪುಟ್ಟ ಹಳ್ಳಿಯ ಬಡ ಕುಟುಂಬವೊಂದರಲ್ಲಿ ಕಷ್ಟಪಟ್ಟು ಓದಿ ಐಎಎಸ್ ಅಧಿಕಾರಿಯಾಗುತ್ತಾನೆ. ಆತನಿಗೆ  ಸ್ವಜಾತಿಯ ಸ್ಥಿತಿವಂತ ಕುಟುಂಬವೊಂದು ಹುಡುಕಿಕೊಂಡು ಹೋಗಿ ಹೆಣ್ಣು ಕೊಡುತ್ತದೆ; ಸಂಸಾರವೂ ಶುರುವಾಗುತ್ತದೆ. ಆದರೆ ಅದರಲ್ಲಿ ಸತ್ವ ಇರುವುದಿಲ್ಲ. ಆತನಿಗೊಬ್ಬಳು ಪ್ರೇಯಸಿ ಇರುತ್ತಾಳೆ. ಮಧ್ಯದಲ್ಲಿ ಮಸಾಜ್ ಪಾರ್ಲರ್ ಹೆಣ್ಣೊಬ್ಬಳ ಪ್ರವೇಶವಾಗುತ್ತದೆ.

ಅವೆಲ್ಲಕ್ಕಿಂತ ಹೆಚ್ಚಾಗಿ ಆತ 500 ಕೋಟಿಯ ಕಂಪನಿಯೊಂದನ್ನು ಕಟ್ಟುವ ಕನಸು ಕಾಣುತ್ತಾನೆ. ಅದಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೈ ಹಾಕುತ್ತಾನೆ. ತನ್ನ ಗೆಳೆಯ ಮತ್ತು ಹೆಂಡತಿಯ ಹೆಸರಿನಲ್ಲಿ ಕಂಪನಿಯನ್ನು ಹುಟ್ಟು ಹಾಕುತ್ತಾನೆ. ಅದಕ್ಕೆ ಮಾವನಿಂದಲೇ 1 ಕೋಟಿ ರೂಪಾಯಿ ಆರಂಭಿಕ ಹೂಡಿಕೆ ಮಾಡಿಸಿಕೊಳ್ಳುತ್ತಾನೆ. ಒಂದು ಹಂತದಲ್ಲಿ ಯೋಜನೆಗೆ ಮಾರುಕಟ್ಟೆಯ ಪ್ರತಿಸ್ಫರ್ಧಿಯೊಬ್ಬನಿಂದ ತೊಂದರೆಯಾಗುತ್ತದೆ. ಆಗ ತನಿಗಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಆತನ ಮೇಲೆ ಕೇಸು ದಾಖಲಿಸುತ್ತಾನೆ. ಕೊನೆಗೆ, ಮಾಜಿ ಕೇಂದ್ರ ಸಚಿವರೊಬ್ಬರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿಯುತ್ತದೆ, ಆದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾನೆ.

ಇದು ಕಥಾ ನಾಯಕನ ತೆರೆಮರೆಯ ಮುಖವಾದರೆ, ಹೊರಗೆ ಆತ ರಾಜ್ಯದ ಖಡಕ್ ಅಧಿಕಾರಿ. ಜನಪ್ರಿಯತೆಯ ಉತ್ತುಂಗವನ್ನು, ಮಾಧ್ಯಮಗಳ ಕ್ಯಾಮೆರಾ ಕಣ್ಣನ್ನು ತನ್ನೆಡೆಗೆ ಸೆಳೆದ ಯುವ ಐಎಎಸ್ ಆಫೀಸರ್. ಬಡತನದಲ್ಲಿ ಬೆಳೆದು ಬಂದ ಹಿನ್ನೆಲೆಯಿಂದಾಗಿ, ಆತ ಅಧಿಕಾರದ ಒಂದು ಭಾಗವನ್ನು ಬಡವರಿಗಾಗಿ ಬಳಸುತ್ತಾನೆ. ಸಹಜವಾಗಿಯೇ ಅದು ಆತನನ್ನು ಜನಾನುರಾಗಿಯಾಗುವಂತೆ ಮಾಡುತ್ತದೆ.

ಅಂದಾಗೆ, ಈ ಕತೆಯ ನಾಯಕನ ಹೆಸರು ಡಿ. ಕೆ. ರವಿ ಮತ್ತು ಇದು ಕಾಲ್ಪನಿಕ ಕತೆಯಲ್ಲ; ಬದಲಿಗೆ ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆ- ಸಿಬಿಐ, ನ್ಯಾಯಾಲಯಕ್ಕೆ ಸಲ್ಲಿಸಿದ ತನಿಖಾ ವರದಿಯ ಬಿ- ರಿಪೋರ್ಟ್ ಒಳಗೊಂಡಿರುವ ನಿಜ ಜೀವನದ ಸಂಗತಿಗಳು.

ಅದು, ಮಾ.16, 2015. ಸಂಜೆ 7 ಗಂಟೆ ಸುಮಾರಿಗೆ ಐಎಎಸ್ ಅಧಿಕಾರಿ ಡಿ. ಕೆ. ರವಿ ತಮ್ಮ ಅಪಾರ್ಟ್ಮೆಂಟಿನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಸುದ್ದಿ ಬಹಿರಂಗವಾಗುತ್ತಿದ್ದಂತೆ ರಾಜ್ಯಾದ್ಯಂತ ಆಕ್ರೋಶದ ಕಟ್ಟೆಯೊಡೆದಿತ್ತು. ರಾಜ್ಯ ಸರಕಾರದ ವಿರುದ್ಧ ಜನ ಬೀದಿಗೆ ಇಳಿದಿದ್ದರು. ಇದೊಂದು ‘ವ್ಯವಸ್ಥಿತ ಕೊಲೆ’ ಎಂದು ಹುಯಿಲೆದ್ದಿತ್ತು. ರಾಜ್ಯ ಸರಕಾರ ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಐಡಿಗೆ ವಹಿಸಿತಾದರೂ, ಮಾಧ್ಯಮಗಳ, ವಿಪಕ್ಷಗಳ ಹಾಗೂ ಜನರ ಒತ್ತಾಯದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕಾಗಿ ಬಂದಿತ್ತು. ‘ಸಾವಿಗೆ ನ್ಯಾಯ’ ಕೊಡಿಸುವ ನಿಟ್ಟಿನಲ್ಲಿ ಸಿಬಿಐ ತನಿಖೆ ಆರಂಭವಾಗಿತ್ತು.

ಡಿ. ಕೆ. ರವಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ.

ಡಿ. ಕೆ. ರವಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ.

ಇದೀಗ ಸುಮಾರು 20 ತಿಂಗಳ ನಂತರ, ಸಿಬಿಐ ಇಡೀ ಪ್ರಕರಣದ ಕುರಿತು ತಾನು ನಡೆಸಿದ ತನಿಖೆಯ ಸಾರಾಂಶವನ್ನು ನ್ಯಾಯಾಲಯದ ಮುಂದಿಟ್ಟಿದೆ. ‘ಮೇಲ್ಕಂಡ ಅಂಶಗಳನ್ನು ಗಮನಿಸುವುದಾದರೆ, ಹಲವು ವಿಚಾರಗಳು ಅವರನ್ನು (ಡಿ. ಕೆ. ರವಿ) ಬಾಧಿಸಿದ್ದವಾದರೂ, ತಕ್ಷಣದ ನಿರ್ಧಾರಕ್ಕೆ ಬರಲು ರೋಹಿಣಿ ಸಿಂಧೂರಿ ಅವರ ಅವತ್ತಿನ ಪ್ರತಿಕ್ರಿಯೆ ಕಾರಣ.  ಸಿಂಧೂರಿ ಗಂಡನ ಕರೆ ಸ್ವೀಕರಿಸಿ ಮಾತನಾಡಿದ್ದು ರವಿ ಪ್ರತಿಷ್ಠೆಗೆ ಧಕ್ಕೆಯಾಗಿತ್ತು ಮತ್ತು ಏರಿದ ಏಣಿಯಿಂದ ಬಿದ್ದಂತಾಗಿತ್ತು. ತನ್ನ ಜೀವನವನ್ನೇ ಕೊನೆಯಾಗಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಅಂಶವಾಯಿತು’ ಎಂಬರ್ಥದಲ್ಲಿ ಷರಾ ಬರೆದಿದೆ ಸಿಬಿಐ.

ಒಟ್ಟು 40 ಪುಟಗಳ ವರದಿಯ ಉದ್ದಕ್ಕೂ- ಒಬ್ಬ ಖಡಕ್ ಅಧಿಕಾರಿ, ತನ್ನ ಸಾಧನೆಗಳ ಆಚೆಗೂ ಹೊಂದಿದ್ದ ಹಣ ಮತ್ತು ಹೆಣ್ಣು ಎಂಬ ಮಿತಿಗಳ ಕಾರಣಕ್ಕೆ ತನ್ನನ್ನು ತಾನು ಕೊಂದುಕೊಳ್ಳುವ ಹಂತಕ್ಕೆ ಹೇಗೆ ಬಂದು ತಲುಪಿದ ಎಂಬುದನ್ನು ತನಿಖಾ ಸಂಸ್ಥೆ ವಿವರಿಸುತ್ತಾ ಹೋಗುತ್ತದೆ. ಇದು ಅಧಿಕಾರ ಕೇಂದ್ರದಲ್ಲಿರುವ ಹಲವರ ಬದುಕಿನ ಕನ್ನಡಿಯಂತೆಯೂ ಇದೆ. ಅದೇ ವೇಳೆ, ಸಾರ್ವಜನಿಕ ಬದುಕಿಗೆ ಕಾಲಿಡುವವರಿಗೆ ಪಾಠದಂತೆಯೂ ಕಾಣಿಸುತ್ತದೆ. ಡಿ. ಕೆ. ರವಿ ಮತ್ತು ಅವರ ವೈಯಕ್ತಿಕ ಬದುಕಿನ ಪಯಣದ ಆಚೆಗೆ ಗಮನಿಸಬೇಕಿರುವ ಅಂಶಗಳು ಇಲ್ಲಿ ಸಿಗುತ್ತವೆ.

ಇಲ್ಲಿಂದ ಮುಂದೆ, ಸಿಬಿಐ ಸಲ್ಲಿಸಿರುವ 40 ಪುಟಗಳ ವಿಸ್ತೃತ ವರದಿಯ ಆಯ್ದ ಭಾಗಗಳು, ನಿಮ್ಮ ಓದಿಗಾಗಿ…

ಅದು ‘ಕೋಲಾರ ಮಾಡೆಲ್’:

ಸಿಬಿಐ ಪ್ರಕರಣದ ಹಿನ್ನೆಲೆಯಿಂದಲೇ ವರದಿಯನ್ನು ಆರಂಭಿಸುತ್ತದೆ. ಮಾ. 16ರ ರಾತ್ರಿ 8 ಗಂಟೆಗೆ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ರಾಜ್ಯ ಸರಕಾರ ಅಧಿವೇಶನದಲ್ಲಿ ನೀಡಿದ ಮಾತಿನಂತೆ ತನಿಖಾ ಸಂಸ್ಥೆಗೆ ವಹಿಸುತ್ತದೆ. ತನಿಖೆಯನ್ನು ಆರಂಭಿಸುವ ಸಿಬಿಐ, ಮೊದಲು ಮಡಿವಾಳ ಪೊಲೀಸರು ಮೃತ ಅಧಿಕಾರಿಯ ದೇಹ ಸಿಕ್ಕ ಸಮಯದಲ್ಲಿ ಗಮನಿಸಿದ 11 ಅಂಶಗಳನ್ನು ವಿಚಾರಣೆಗೆ ಎತ್ತಿಕೊಳ್ಳುತ್ತದೆ. ತಾವರೆಕೆರೆಯಲ್ಲಿರುವ ಸೈಂಟ್ ವುಡ್ಸ್ ಅಪಾರ್ಟ್ಮೆಂಟಿನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ಡಿ. ಕೆ. ರವಿ ಶವದ ಸುಮಾರು 32 ಫೊಟೋಗಳು ಹಾಗೂ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲನೆಗೆ ಕಳುಹಿಸಲಾಗಿರುತ್ತದೆ.

ನಂತರ, ಮನೆಯಲ್ಲಿ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಗಳು ಮತ್ತು ಶವಪರೀಕ್ಷೆಯ ಕುರಿತು ಮಾಹಿತಿಯನ್ನು ವರದಿ ಒಳಗೊಳ್ಳುತ್ತದೆ. ‘ಕುತ್ತಿಗೆ ಭಾಗದಲ್ಲಿ ನೇಣು ಬಿಗಿದ ಕಾರಣ’ ಎಂಬ ಮರಣೋತ್ತರ ವರದಿ ನೀಡಿದ ವೈದ್ಯರ ಹೇಳಿಕೆಯನ್ನು ವರದಿ ಉಲ್ಲೇಖಿಸುತ್ತದೆ. ಆ ನಂತರ, ಡಿ. ಕೆ. ರವಿ ಎಂಬ ಅಧಿಕಾರಿಯ ಬದುಕಿನ ಒಂದೊಂದೆ ಘಟನೆಗಳನ್ನು ಪರಿಶೀಲನೆಗೆ ಎತ್ತಿಕೊಳ್ಳುತ್ತದೆ ತನಿಖೆ.

ಚಿಕ್ಕ ಹಳ್ಳಿಯಿಂದ ಬಂದು 2009ರ ಐಎಎಸ್ ಬ್ಯಾಚ್ ಅಧಿಕಾರಿಯಾಗಿ ತರಬೇತಿಗೆ ತೆರಳುವುದು, ಅದೇ ಸಮಯದಲ್ಲಿ ಡಿ. ಕೆ. ರವಿಯವರ ಮದುವೆ ರಾಜಕಾರಣಿ, ರಿಯಲ್ ಎಸ್ಟೇಟ್ ಉದ್ಯಮಿ ಹನುಮಂತರಾಯಪ್ಪ ಅವರ ಮಗಳ ಜತೆ ಅದ್ಧೂರಿಯಾಗಿ ನಡೆಯುವುದು, ತರಬೇತಿ ಸಮಯದಲ್ಲಿಯೇ ಕೋಲಾರ ಮೂಲಕ ಮಾಜಿ ಕೇಂದ್ರ ಸಚಿವ ಕೆ. ಎಚ್. ಮುನಿಯಪ್ಪ ಅವರ ಮಗ, ನರಸಿಂಹರಾಜುರ ಪರಿಚಯವಾಗುವುದು ವರದಿಯಲ್ಲಿದೆ.

ಮುಂದೆ, ಕೋಲಾರಕ್ಕೆ ಡಿ. ಕೆ. ರವಿ ಜಿಲ್ಲಾಧಿಕಾರಿಯಾಗಿ ಬರುವಾಗ ಕೆ. ಎಚ್. ಮುನಿಯಪ್ಪ ಮುಖ್ಯಮಂತ್ರಿಗೆ ಶಿಫಾರಸು ಪತ್ರವನ್ನು ನೀಡುತ್ತಾರೆ. ಅವರ ಒತ್ತಾಸೆ ಮೇರೆಗೆ ಹಿರಿತನವನ್ನೂ ಕಡೆಗಣಿಸಿ ರಾಜ್ಯ ಸರಕಾರ ಡಿ. ಕೆ. ರವಿಯವರನ್ನು ಕೋಲಾರ ಜಿಲ್ಲಾಧಿಕಾರಿಯಾಗಿ ನೇಮಿಸುತ್ತದೆ. ಅಲ್ಲಿ ‘ರೆವೆನ್ಯೂ ಅದಾಲತ್’ಗಳನ್ನು ರವಿ ಆಯೋಜಿಸುತ್ತಾರೆ. ಈ ಮೂಲಕ ಸಾಮಾನ್ಯ ಜನರಿಗೆ ಜಮೀನಿನ ದಾಖಲೆಗಳು ಸಕಾಲದಲ್ಲಿ ಮನೆಗೆ ತಲುಪುವಂತೆ ನೋಡಿಕೊಳ್ಳುತ್ತಾರೆ. ಇದು ಅವರಿಗೆ  ಜನಪ್ರಿಯತೆಯನ್ನು ತಂದುಕೊಡುತ್ತದೆ. ಇದೇ ವೇಳೆಗೆ, ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ವಹಿವಾಟಿಗೆ ಕಡಿವಾಣ ಹಾಕುತ್ತಾರೆ. ಈ ವಿಚಾರಗಳು ‘ಕೋಲಾರ ಮಾಡೆಲ್’ ಹೆಸರಿನಲ್ಲಿ ಸಿಬಿಐ ವರದಿಯಲ್ಲಿ ಪ್ರಸ್ತಾಪವಾಗಿವೆ.

ಮೊದಲ ಹಿನ್ನೆಡೆ:

ಅಲ್ಲಿವರೆಗೂ ಡಿ. ಕೆ. ರವಿ ಬದುಕಿನಲ್ಲಿ ಹಿನ್ನೆಡೆ ಎಂಬುದು ಕಂಡಿರಲಿಲ್ಲ. ಬಡತನದಿಂದ ಬಂದವರ ಗ್ರಾಫ್ ಏರುತ್ತಲೇ ಇತ್ತು. ಆದರೆ, ಕಾನ್ಫಿಡೆಂಟ್ ಗ್ರೂಪ್ ವಿಚಾರದಲ್ಲಿ ಡಿ. ಕೆ. ರವಿ ಕೊಂಚ ಪರ್ಸನಲ್ ಆಗಿಯೇ ತೆಗೆದುಕೊಂಡರು ಎಂಬುದನ್ನು ಸಿಬಿಐ ವರದಿ ಬಯಲಿಗೆ ಎಳೆಯುತ್ತದೆ. ನ್ಯಾಯಾಲಯದ ಆದೇಶವಿದ್ದಾಗ್ಯೂ ಕಾನ್ಫಿಡೆಂಟ್ ಗ್ರೂಪ್ ಕಾನೂನಾತ್ಮಕವಾಗಿ ಕಬ್ಜ ಮಾಡಿಕೊಂಡಿದ್ದ ಜಮೀನನ್ನು ವಾಪಾಸ್ ತೆಗೆದುಕೊಳ್ಳಲು ಹೋಗುತ್ತಾರೆ. ಈ ಸಮಯದಲ್ಲಿ ಅದೇ ಕೆ. ಎಚ್. ಮುನಿಯಪ್ಪ ಮಧ್ಯಪ್ರವೇಶದಿಂದಾಗಿ ರವಿ ವಾಣಿಜ್ಯ ಇಲಾಖೆಯ ಬೆಂಗಳೂರು ಕಚೇರಿಗೆ ವರ್ಗಾವಣೆಯಾಗುತ್ತಾರೆ. ‘ಈ ಸಮಯದಲ್ಲಿ ಸರಕಾರ ಸ್ವತಃ ಡಿ. ಕೆ. ರವಿಯವರ ಮನವಿ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದು ಹೊರಗೆ ಹೇಳುತ್ತದೆ. ಆದರೆ ರವಿ ತಮ್ಮ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರಿಗೆ ವಾಣಿಜ್ಯ ಇಲಾಖೆಗೆ ಸೇರಲು ಇಷ್ಟವಿರಲಿಲ್ಲ. ಹೀಗಾಗಿ ಮೊದಲ 10 ದಿನ ಕರ್ತವ್ಯಕ್ಕೆ ಹಾಜರಾಗದೆ ರಜೆ ಹಾಕಿ ಸ್ನೇಹಿತರ ಜತೆ ಗೋವಾಕ್ಕೆ ಹೋಗಿದ್ದರು. ಅಲ್ಲಿ ರಾತ್ರಿ ಇಡೀ ಬೆಡ್ ಮೇಲೆ ಕುಳಿತುಕೊಂಡಿದ್ದರು. ಸ್ನೇಹಿತರು ಕೇಳಿದರೆ ಮೆಡಿಟೇಶನ್ ಮಾಡ್ತಿದೀನಿ ಎಂದು ಹೇಳಿದ್ದರು’ ಎಂಬುದಾಗಿ ವರದಿ ದಾಖಲಿಸುತ್ತದೆ.

ಜಾರ್ಜ್ ಸುಮ್ಮನಿದ್ದರು:

ಸಚಿವ ಕೆ. ಜೆ. ಜಾರ್ಜ್.

ಸಚಿವ ಕೆ. ಜೆ. ಜಾರ್ಜ್.

ಕೊನೆಗೆ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಉಪ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು ರವಿ. ಅಲ್ಲಿ ತಮ್ಮ ಶೈಲಿಗೆ ಒಗ್ಗುವ ಕೆಲಸವನ್ನು ಸೃಷ್ಟಿಸಿಕೊಂಡರು. 2015ರ ಮಾರ್ಚ್ ವೇಳೆಗೆ ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ ದಾಳಿಗಳನ್ನು ಶುರು ಮಾಡಿದರು. ಈ ಸಮಯದಲ್ಲಿ ಕೆಲವು ಪತ್ರಕರ್ತರ ಜತೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಕಾರ್ಯ ಚಟುವಟಿಕೆಗಳು ವರದಿಯಾಗುವಂತೆ ನೋಡಿಕೊಂಡರು. ಮಾರ್ಚ್. 11, 2015ರಂದು ಸಚಿವ ಕೆ. ಜೆ. ಜಾರ್ಜ್ ಅವರಿಗೆ ಸೇರಿದ ಎಂಬೆಸಿ ಗ್ರೂಪ್ ಕಂಪನಿ ಮೇಲೆ ದಾಳಿ ನಡೆಸಿದರು. ಆದರೆ ಅವರ ಕಡೆಯಿಂದ ಯಾವುದೇ  ಪ್ರತಿಕ್ರಿಯೆ ಬರಲಿಲ್ಲ. ಹೀಗೆ, ಶೋಭಾ ಡೆವಲಪರ್ಸ್, ಪೂರವಂಕರ, ಬ್ರಿಗೇಡ್ ಎಂಟರ್ಪ್ರೈಸಸ್, ನಿತೇಶ್ ಎಸ್ಟೇಟ್, ರಾಜೇಶ್ ಎಕ್ಸ್ಪೋರ್ಟ್ಸ್ ಮತ್ತಿತರ ಕಂಪನಿಗಳ ಮೇಲೆ ದಾಳಿ ನಡೆಸಲಾಯಿತು.

ಸಾಮಾನ್ಯವಾಗಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಬಹುದಾದರೂ, ದಂಡ ಕಟ್ಟಿಸಿಕೊಳ್ಳುವ ಅವಕಾಶ ಇರುವುದಿಲ್ಲ. ಹೀಗಾಗಿ, ಈ ದಾಳಿಗಳು ಆಡಿಟ್ ಮಾಡುವಂತೆ ಸೂಚನೆ ನೀಡುತ್ತವೆ ಅಷ್ಟೆ. ಹೀಗಾಗಿ ಇದರಿಂದ ಕಂಪನಿಗಳಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ. ಆದ್ದರಿಂದ ಡಿ. ಕೆ. ರವಿ ಅವರಿಗೆ ಯಾವುದೇ ಬೆದರಿಕೆಗಳೂ ಬರಲಿಲ್ಲ ಎಂಬುದನ್ನು ಸಿಬಿಐ ತನಿಖಾ ವರದಿ ಉಲ್ಲೇಖಿಸುತ್ತದೆ.

ಇದೇ ರೀತಿ, ಕರ್ನಾಟಕ ಸಾರ್ವಜನಿಕ ಭೂ ಅಭಿವೃದ್ಧಿ ನಿಗಮದ ಹೆಚ್ಚುವರಿ ಹೊಣೆಗಾರಿಕೆಯನ್ನು ರವಿ ವಹಿಸಿಕೊಂಡ ಸಮಯದಲ್ಲಿ ನಡೆದುಕೊಂಡ ರೀತಿಯನ್ನೂ ಸಿಬಿಐ ಪ್ರಸ್ತಾಪಿಸಿದೆ. ಈ ಸಮಯಗಳಲ್ಲಿ ರವಿ ಮಾಧ್ಯಮಗಳಲ್ಲಿ ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದರು ಎಂದು ಅದು ಹೇಳುತ್ತದೆ.

ರಿಯಲ್ ಎಸ್ಟೇಟ್ ಒಲವು:

ಡಿ. ಕೆ. ರವಿ ಇಟ್ಟ ಕೆಲವೇ ಕೆಲವು ತಪ್ಪು ಹೆಜ್ಜೆಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕೂಡ ಒಂದು. ಹರಿ ಎಂಬ ಸ್ನೇಹಿತನ ಜತೆಗೂಡಿ, ‘ಆರ್ ಅಂಡ್ ಎಚ್ ಪ್ರಾಪರ್ಟಿ’ ಎಂಬ ಕಂಪನಿಯೊಂದನ್ನು ಅವರು ಹುಟ್ಟು ಹಾಕಿದ್ದರು. ಅದರಲ್ಲಿ ತಮ್ಮ ಪತ್ನಿ ಕುಸುಮಾ ಅವರನ್ನೂ ನಿರ್ದೇಶಕಿಯನ್ನಾಗಿ ಮಾಡಿದ್ದರು. ಆದರೆ ಅವರಿಗೆ ಅದರ ವಹಿವಾಟುಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಜತೆಗೆ, ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಮಾವ ಹನುಮಂತರಾಯಪ್ಪ ಅವರನ್ನೂ ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ ಎನ್ನುತ್ತದೆ ಸಿಬಿಐ ತನಿಖೆ.

ಆರ್ ಅಂಡ್ ಎಚ್ (ರವಿ ಮತ್ತು ಹರಿ) ಪ್ರಾಪರ್ಟಿ ಎಂಬ ಹೆಸರಿನಲ್ಲಿ ಜೂನ್ 2013ರಲ್ಲಿ ಕಂಪನಿಯನ್ನು ಹುಟ್ಟು ಹಾಕಿದ ನಂತರ ಯಲಹಂಕದ ಎಸ್ಬಿಎಂ ಬ್ಯಾಂಕಿನಲ್ಲಿ ಖಾತೆಯನ್ನೂ ತೆರೆದಿದ್ದರು. ಅದಕ್ಕೆ ಆರಂಭಿಕ ಹೂಡಿಕೆಯಾಗಿ 1 ಕೋಟಿ ರೂಪಾಯಿಗಳನ್ನು ಮಾವ ಹನುಮಂತರಾಯಪ್ಪ ನೀಡಿದ್ದರು. ಆ ಹಣದಲ್ಲಿ ಬೆಂಗಳೂರಿನ ಹೊರವಲಯದ ನೀಲಮಂಗಲ ಎಂಬಲ್ಲಿ ಚಿಕ್ಕದೊಂದು ಲೇಔಟ್ ನಿರ್ಮಿಸಿ ಮಾರಾಟ ಮಾಡಿದ್ದರು. ಅದರಿಂದ ಬಂದ ಹಣದಲ್ಲಿ ಹನುಮಂತರಾಪ್ಪರಿಗೆ 55 ಲಕ್ಷ ರೂಪಾಯಿ ಹಿಂತಿರುಗಿಸಿದ್ದರು. ನಂತರದ ದಿನಗಳಲ್ಲಿ ಹನುಮಂತರಾಯಪ್ಪ ಮತ್ತೆ 2 ಕೋಟಿಯನ್ನು ಕಂಪನಿಗಾಗಿ ನೀಡಿದ್ದರು.

ಡಿ. ಕೆ. ರವಿ ತಮ್ಮ ಬ್ಯಾಚ್ ಮೇಟ್ಗಳನ್ನು ತಮ್ಮ ಕಂಪನಿಯಲ್ಲಿ ಹಣ ಹೂಡುವಂತೆ ಕೇಳಿಕೊಂಡಿದ್ದರು. ರೋಹಿಣಿ ಸಿಂಧೂರಿ 10 ಲಕ್ಷ, ಡಾ. ಟಿ. ಮಂಜುನಾಥ್ 30 ಲಕ್ಷ, ಹರಿ ಕೃಷ್ಣ 30 ಲಕ್ಷ, ನರಸಿಂಹರಾಜು 35 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು.

ಅಧಿಕಾರದ ದುರ್ಬಳಕೆ:

ಡಿ. ಕೆ. ರವಿ

ಡಿ. ಕೆ. ರವಿ

ಈ ಹಣದಲ್ಲಿ ಹೊಸ ಯೋಜನೆಗೆ ರವಿ ಕೈ ಹಾಕಿದ್ದರು. ಮಧ್ಯವರ್ತಿಯೊಬ್ಬರ ಸಹಾಯದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಬಳಿಯ ಸಿಗತೂರು ಹಳ್ಳಿಯಲ್ಲಿ 100 ಎಕರೆ ಭೂಮಿ ಖರೀದಿಸಲು ಮುಂದಾದರು. ಒಂದಷ್ಟು ರೈತರಿಗೆ ಮುಂಗಡ ಹಣವನ್ನೂ ನೀಡಿದರು. ಇವೆಲ್ಲವೂ ಪರಿಶಿಷ್ಟ ಜಾತಿ/ ಪಂಗಡವರಿಗೆ ಸರಕಾರ ನೀಡಿದ ಜಮೀನಾಗಿತ್ತು. ಇದೇ ಜಾಗವನ್ನು ಇವರಿಗಿಂತಲೂ ಮೊದಲೇ ಖರೀದಿ ಮಾಡಿರುವುದಾಗಿ ನಾರ್ತ್ ಈಸ್ಟ್ ಪ್ರಾಪರ್ಟಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಸುರೇಶ್ ಎಂಬಾತ ಯೋಜನೆಗೆ ತೊಡಕು ಮಾಡತೊಡಗಿದ.

ಕೊನೆಗೆ ಆತನ ವಿರುದ್ಧ ಚಿಕ್ಕಬಳ್ಳಾಪುರ ಠಾಣೆಯಲ್ಲಿ ದೂರು ದಾಖಲಾಗುವಂತೆ ರವಿ ನೋಡಿಕೊಂಡರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಕಾನೂನಿಗೆ ವಿರುದ್ಧವಾಗಿ ನಾರ್ತ್ ಈಸ್ಟ್ ಪಾಪರ್ಟಿ ಕಚೇರಿ ಮೇಲೆ ದಾಳಿಯನ್ನೂ ನಡೆಸಿದರು. ಕೆ. ಎಚ್. ಮುನಿಯಪ್ಪ ಮಧ್ಯಪ್ರವೇಶಿಸಿ ಇಬ್ಬರ ನಡುವೆ ಹೊಂದಾಣಿಕೆ ಸೂತ್ರವನ್ನು ಹೆಣೆದರು. ಅರ್ಧ ಭಾಗದಲ್ಲಿ ‘ಆರ್ ಅಂಡ್ ಎಚ್‌ ಪ್ರಾಪರ್ಟಿ’ಗೆ ಲೇಔಟ್ ನಿರ್ಮಿಸಲು ಅವಕಾಶ ನೀಡಲಾಯಿತು. ಇದರಿಂದ ಒಂದಷ್ಟು ಹಣದ ಬಿಕ್ಕಟ್ಟಿಗೆ ಡಿ. ಕೆ. ರವಿ ಬಿದ್ದಿದ್ದರು ಎನ್ನುತ್ತದೆ ಸಿಬಿಐ ವರದಿ.

ಉಳಿದ್ದದ್ದು ಸುದ್ದಿಯಾಗಿದ್ದೇ:

ಇದರ ಆಚೆಗೆ ಸಿಬಿಐ ವರದಿಯಲ್ಲಿ ಡಿ. ಕೆ. ರವಿ ಮತ್ತು ರೋಹಿಣಿ ಸಿಂಧೂರಿ ನಡುವೆ ನಡೆದ ದೂರವಾಣಿ ಸಂಭಾಷಣೆ ಬಗ್ಗೆ ಮಾಹಿತಿ ಇದೆ. ಇಬ್ಬರು ಎಷ್ಟು ಹೊತ್ತು ಮಾತನಾಡಿದರು, ಡಿ. ಕೆ. ರವಿ ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ರೋಹಿಣಿ ಜತೆ ಮಾತನಾಡುತ್ತಿದ್ದರು ಎಂಬುದಕ್ಕೆ ಪುರಾವೆ ರೂಪದಲ್ಲಿ ಒಂದಷ್ಟು ಪ್ರಸಂಗಗಳ ಪಟ್ಟಿ ಇದೆ.

ಪತ್ನಿ ಮಸಾಜ್ ಮಾಡಿಸಿಕೊಳ್ಳಲು ಹೇಳಿದ್ದ ವಿವರಗಳಿವೆ. ಮಸಾಜ್ ಮಾಡಿಸಿಕೊಳ್ಳಲು ತಾಜ್ ವಿವಾಂತ ಹೋಟೆಲ್ಲಿಗೆ ಹೋದಾಗ ಪರಿಚಯವಾದ ನಾಗಾಲ್ಯಾಂಡ್ ಮೂಲದ ಯುವತಿ ಶೆಲ್ಲಿ ಅಲಿಯಾಸ್ ಕ್ಯಾಥರೀನ್ ಜತೆ ನಡೆಸಿದ ವಾಟ್ಸಾಪ್ ಸಂದೇಶಗಳ ಬಗ್ಗೆ ಮಾಹಿತಿ ಇದೆ. ಈ ವಿವರಗಳನ್ನು ನೀಡುವ ಸಮಯದಲ್ಲಿ ಸಿಬಿಐ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ‘ಡಿ. ಕೆ. ರವಿ ಲೈಂಗಿಕ ತೃಷೆ ಹೊಂದಿದ್ದರು’ ಎಂಬುದಕ್ಕೆ ಇದು ಉದಾಹರಣೆ ಎನ್ನುತ್ತದೆ.

ಸಾವಿಗೆ ಕೆಲವು ದಿನಗಳ ಮೊದಲು ಹಾಗೂ ಸಾವಿನ ದಿನ ಏನೇನು ನಡೆಯಿತು ಎಂಬ ಕುರಿತು ವಿಸ್ತೃತ ಮಾಹಿತಿ ವರದಿಯಲ್ಲಿದೆ. ಇಡೀ ವರದಿಯು ಡಿ. ಕೆ. ರವಿಯವರ ಸಮೀಪವರ್ತಿಗಳ ಹೇಳಿಕೆ ಮತ್ತು ಅವರ ಎರಡು ದೂರವಾಣಿ ‘ಸಿಡಿಆರ್’ನ್ನು ಅವಲಂಬಿಸಿರುವುದು ಎದ್ದು ಕಾಣಿಸುತ್ತಿದೆ.

ಒಟ್ಟಾರೆ, ಒಬ್ಬ ಮಹತ್ವಾಕಾಂಕ್ಷಿ ಅಧಿಕಾರಿ, ತನಗಿರುವ ಸೀಮಿತ ಅಧಿಕಾರದ ಬಳಕೆಯಲ್ಲಿ ಎಡವಿದ್ದು ಮತ್ತು ವೈವಾಹಿಕ ಬದುಕನ್ನು ಸರಿಯಾಗಿ ಇಟ್ಟುಕೊಳ್ಳುವಲ್ಲಿ ವಿಫಲವಾದ ಪರಿಣಾಮಗಳು ಹೇಗೆ ದುರಂತ ಅಂತ್ಯಕ್ಕೆ ತಂದು ಬಿಟ್ಟವು ಎಂಬ ಕತೆಯನ್ನು ಸಿಬಿಐ ಸಾಕ್ಷಿ ಸಮೇತ ಕಟ್ಟಿಕೊಟ್ಟಿದೆ. ಈ ಮೂಲಕ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದ ‘ಪ್ರಾಮಾಣಿಕ ಅಧಿಕಾರಿ’ಯ ವಿವಾದಾತ್ಮಕ ಸಾವಿಗೆ ನಿರೀಕ್ಷಿತ ರೀತಿಯಲ್ಲಿಯೇ ತೆರೆ ಬಿದ್ದಿದೆ.

CBI ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Leave a comment

FOOT PRINT

Top