An unconventional News Portal.

ಅತ್ತೆ ಕಾಲವನ್ನು ಬಣ್ಣಿಸಿದ ಸೊಸೆ: ಭಾರತದ ‘ಉಕ್ಕಿನ ಮಹಿಳೆ’ ಬಗ್ಗೆ ಸೋನಿಯಾ ಏನಂದರು?

ಅತ್ತೆ ಕಾಲವನ್ನು ಬಣ್ಣಿಸಿದ ಸೊಸೆ: ಭಾರತದ ‘ಉಕ್ಕಿನ ಮಹಿಳೆ’ ಬಗ್ಗೆ ಸೋನಿಯಾ ಏನಂದರು?

ದೇಶದ ಕಂಡ ಖಡಕ್ ರಾಜಕಾರಣಿ, ಉಕ್ಕಿನ ಮಹಿಳೆ, ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ವ್ಯಾಪಕ ಟೀಕೆಗೆ ಗುರಿಯಾದ ರಾಜಕಾರಣಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮಶತಮಾನೋತ್ಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿರಾ ಅವರನ್ನು ಹತ್ತಿರದಿಂದ ಬಲ್ಲ ಕಾಂಗ್ರೆಸ್ ಅಧ್ಯಕ್ಷೆ, ಸೊಸೆ ಸೋನಿಯಾ ಗಾಂಧಿ ಅವರ ಸಂದರ್ಶನವನ್ನು ‘ಇಂಡಿಯಾ ಟುಡೆ’ ಭಿತ್ತರಿಸಿದೆ. ಪತ್ರಕರ್ತ ರಾಜ್ದೀಪ್ ಸರ್ ದೇಸಾಯಿ ನಡೆಸಿದ ಸಂದರ್ಶನ ಆಯ್ದ ಭಾಗಗಳನ್ನು ‘ಸಮಾಚಾರ’ ಇಲ್ಲಿ ಕನ್ನಡಕ್ಕೆ ತಂದಿದೆ. 

ಇಂದಿರಾ ಗಾಂಧಿ ವ್ಯಕ್ತಿತ್ವ, ಅವರ ಸಾವಿನ ಕ್ಷಣ, 1971ರ ಯುದ್ಧ, ತುರ್ತು ಪರಿಸ್ಥಿತಿ ಹಾಗೂ ನರೇಂದ್ರ ಮೋದಿ ಹೋಲಿಕೆಗಳ ಕುರಿತಾದ ಅಪರೂಪದ ಮಾಹಿತಿ ಒಳಗೊಂಡ ಸಂದರ್ಶನ ಇಲ್ಲಿದೆ…

sonia-inteview-1

ರಾಜ್ದೀಪ್ ಸರ್ದೇಸಾಯಿ: ನಮಸ್ಕಾರ ಹಾಗೂ ಇಂಡಿಯಾ ಟುಡೇ ವಿಶೇಷ ಕಾರ್ಯಕ್ರಮಕ್ಕೆ ಸುಸ್ವಾಗತ.

ಅಲಹಾಬಾದ್‍ನಲ್ಲಿರುವ ಸ್ವರಾಜ್‍ ಭವನದ ಪ್ರಾಂಗಣದಿಂದ ನಿಮ್ಮ ಮುಂದೆ ಬರುತ್ತಿದ್ದೇವೆ. ಇದು ದೇಶದ ಮಾಜಿ ಪ್ರಧಾನಿ ದಿವಂಗತ ಶ‍್ರೀಮತಿ ಇಂದಿರಾ ಗಾಂಧಿಯವರ  ಜನ್ಮಸ್ಥಳ. ಇವರ ಜನ್ಮಶತಮಾನೋತ್ಸವವನ್ನು ಈ ವಾರ ಆಚರಿಸಲಾಗುತ್ತಿದೆ. ಈಗ ಇಂದಿರಾಗಾಂಧಿಯವರನ್ನು ಹತ್ತಿರದಿಂದ ಬಲ್ಲಂತಹ ವಿಶೇಷ ಅತಿಥಿಯೊಬ್ಬರು ನಮ್ಮ ಜೊತೆಯಾಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ. ನಮ್ಮೊಡನೆ ಇಂದಿರಾಗಾಂಧಿಯವರ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಆಗಮಿಸುತ್ತಿರುವುದಕ್ಕೆ ಅಭಿನಂದನೆಗಳು ಮೇಡಂ. ಆರಂಭದಲ್ಲಿ ನಿಮಗೆ ಕೇಳಬಯಸುವ ಪ್ರಶ್ನೆ; ಶ್ರೀಮತಿ ಇಂದಿರಾ ಗಾಂಧಿಯವರನ್ನು ನೀವು ಮೊತ್ತಮೊದಲ ಬಾರಿಗೆ ಭೇಟಿ ಮಾಡಿದ ಸಂದರ್ಭ ನಿಮಗೆ ನೆನಪಿದೆಯೇ?

 

ಆ ದಿನಗಳು- ಸೋನಿಯಾ ಮತ್ತು ಇಂದಿರಾ ಗಾಂಧಿ.

ಆ ದಿನಗಳು- ಸೋನಿಯಾ ಮತ್ತು ಇಂದಿರಾ ಗಾಂಧಿ.

ಸೋನಿಯಾ ಗಾಂಧಿ: ಖಂಡಿತವಾಗಿ, ತುಂಬಾ ಚೆನ್ನಾಗಿ ನೆನಪಿದೆ. ಇಂದಿರಾ ಜೀಯವರು ಆಗ ಲಂಡನ್ನಲ್ಲಿದ್ದರು.‌ನ್ಯೂಯಾರ್ಕ್ನಲ್ಲಿ ನೆಹರೂ ಅವರಿಗೆ ಸಂಬಂಧಿಸಿದ ವಸ್ತು ಪ್ರದರ್ಶನಕ್ಕೆ ಹಾಜರಾಗಿ ವಾಪಾಸಾಗಿದ್ದರು. ಅದು 1965ರ ಸಮಯ‌. ರಾಜೀವ್ ಅವರು ಅಷ್ಟರಲ್ಲಿ ಪತ್ರ ಬರೆದು ಇಟಲಿಯಲ್ಲಿ ಈ ಹುಡುಗಿ ನನಗೆ ಪರಿಚಯವಾಗಿದ್ದು ಬಹಳ ಇಷ್ಟವಾಗಿದ್ದಾಳೆ ಎಂದು ತಿಳಿಸಿದ್ದರು.‌ ಆಗ ಇಂದಿರಾಜೀಯವರು ನನ್ನನ್ನು ಕರೆತರಲು ತಿಳಿಸಿದ್ದರು. ಅವರು ನನ್ನನ್ನು ನೋಡಲು ಬಯಸಿದ್ದರು.‌ ದಿನಾಂಕ ನಿಗದಿಯಾಗಿಬಿಟ್ಟಿತು. ಆ

 

ಗ ಕೇಂಬ್ರಿಜ್ನಿಂದ ರಾಜೀವ್ ನನಗೆ ಅಂದೇ ಬರಲು ತಿಳಿಸಿದ್ದರು.‌ ಆಗ ನಾನು ಇಲ್ಲ… ಸಾಧ್ಯವಿಲ್ಲ, ನಾನು ನಿಮ್ಮ ತಾಯಿಯವರನ್ನು ಭೇಟಿಯಾಗಲು ಬರಲು ಸಾಧ್ಯವಿಲ್ಲ ಎಂದು ತಿಳಿಸಿದೆ. ನಾನು ಆಗ ಭೇಟಿಯಾಗಲಿಲ್ಲ. ಆಗ ಅವರು ಭೇಟಿಯನ್ನು ಮರುದಿನಕ್ಕೆ ನಿಗದಿಪಡಿಸಿದರು. ಆಗ ಓಕೆ, ನಾನು ಬರುತ್ತೇನೆ ಎಂದು ತಿಳಿಸಿದೆ‌.

ರಾಜ್ದೀಪ್: ಅವರನ್ನು ಭೇಟಿಯಾಗಲು ನೀವು ಅಷ್ಟು ಭಯಗೊಂಡಿದ್ದೇಕೆ?

ಸೋನಿಯಾ: ಅತ್ತೆಯನ್ನು ಭೇಟಿ ಮಾಡುವುದು ಎಂದರೆ ಹೆದರಿಕೆ ಆಗುವುದಿಲ್ಲವೇ? ಅದರಲ್ಲೂ ಅತ್ತೆಯಾಗಲಿದ್ದವರ ಬಗ್ಗೆಯಂತೂ ಇನ್ನೂ ಭಯವಿರುತ್ತದೆ.‌ ನಂತರ ನಾನು ಅವರನ್ನು ಭೇಟಿ ಮಾಡಿದೆ. ಆ ದಿನ ಭಯಂಕರ ನರ್ವಸ್ ಆಗಿದ್ದೆ. ಅವರು ಬಹಳ ಸಹಜವಾಗಿದ್ದರು. ನನಗಾಗ ಬಹಳ ಚೆನ್ನಾಗಿ ಇಂಗ್ಲಿಷ್ ಮಾತಾಡಲು ಬರುತ್ತಿರಲಿಲ್ಲ. ಆಗ ಅವರು ನನ್ನೊಂದಿಗೆ ಫ್ರೆಂಚ್ನಲ್ಲಿ ಸಂಭಾಷಣೆ ನಡೆಸಿದರು. ಆಗ ಅವರೇ ನನ್ನನ್ನು ಸಮಾಧಾನ ಮಾಡಿದರು. ಹೆದರಿಕೋಬೇಡ, ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.

ನಾನು ಸಂಪೂರ್ಣವಾಗಿ ಬೇರೆಯದೇ ಸಂಸ್ಕೃತಿಯ ನಾಡಿನವಳಾಗಿದ್ದೆ. ಸಂಪೂರ್ಣ ಭಿನ್ನವಾದ ಹಿನ್ನೆಲೆ ಹೊಂದಿದ್ದೆ. ನಾನವರನ್ನು ಭೇಟಿಯಾದ ನಂತರ ರಾಜೀವ್ ಅವರನ್ನು ಭಾರತಕ್ಕೆ ವಾಪಾಸು ಕರೆಸಿಕೊಂಡರು. ರಾಜೀವ್ ವಾಪಾಸಾಗುವ ಮುನ್ನ ನನ್ನ ತಂದೆಯವರ ಬಳಿ ಬಂದು ಹುಡುಗಿಯನ್ನು ಕೊಡಲು ಒಪ್ಪುವಿರಾ ಎಂದು ಕೇಳಿದ್ದರು.

ರಾಜೀವ್ರನ್ನು ನೋಡಿದ ನನ್ನ ತಂದೆ ಈ ಮನುಷ್ಯ ನನಗೆ ಗೊತ್ತು, ಬಹಳ ಒಳ್ಳೆಯ ಮನುಷ್ಯ ಎಂದರು.‌ ಆದರೆ ಅವರಿಗೆ ತನ್ನ ಮಗಳ ಬಗ್ಗೆ ಆತಂಕವಾಗಿತ್ತು. ಸಂಪೂರ್ಣ ಭಿನ್ನವಾದ, ಭಿನ್ನ ಸಂಪ್ರದಾಯ, ಸಂಸ್ಕೃತಿಗಳ ದೂರದ ದೇಶಕ್ಕೆ ನನ್ನನ್ನು ಕಳುಹಿಸುವುದನ್ನು ಯೋಚಿಸಿ ಇದಕ್ಕೆಲ್ಲಾ ನಾನು ಹೊಂದಿಕೊಳ್ಳಲಾರೆ ಎಂದು ಯೋಚಿಸಿದ್ದರು.‌

ನನಗೆ ಒಂದು ರಿಟರ್ನ್ ಟಿಕೆಟ್ ಕೊಡಲು ಒಪ್ಪಿದ್ದರು. ನಾನು ಎರಡು ವಾರ ಭಾರತದಲ್ಲಿ ನೋಡಿ ನಂತರ ಯೋಚಿಸಲು ಹೇಳಿದ್ದರು. ಆದರೆ ನನ್ನ ಅತ್ತೆಯವರು, ನೀವು ಪರಸ್ಪರ ಪ್ರೀತಿಸಿ ಈಗಾಗಲೇ ತೀರ್ಮಾನಿಸಿಕೊಂಡಿದ್ದರೆ ನೀವು ಮದುವೆಯಾಗುವುದೇ ಒಳ್ಳೆಯದು ಎಂದರು.

ರಾಜ್ದೀಪ್: ಅವರು ಮನೆಯಲ್ಲಿ ಹೇಗಿರುತ್ತಿದ್ದರು? ಉದಾಹರಣೆ ನೀಡ್ತೀರಾ?

ಸೋನಿಯಾ: ಅವರು ಬಹಳ ಶಾಂತವಾಗಿರುತ್ತಿದ್ದರು. ನಾನು ಎದುರಿಸುತ್ತಿದ್ದ ಕಷ್ಟಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರು. ನನಗೆ ಪೂರ್ತಿ ಬೇರೆಯೇ ಸಂಪ್ರದಾಯ, ಸಂಸ್ಕೃತಿ, ಭಾಷೆ, ಅದರಲ್ಲೂ ಪೂರ್ತಿ ಬಾರದ ಇಂಗ್ಲಿಷ್ ವಿಷಯದಲ್ಲಿ ಬಹಳ ಸಹಾಯ‌ ಮಾಡುತ್ತಿದ್ದರು. ಅಷ್ಟೊತ್ತಿಗೆ ನನಗೆ ಇಂಗ್ಲಿಷ್ ಅರ್ಥವಾಗುತ್ತಿತ್ತು‌. ಜನರು ಇಂದಿರಾಜಿಯವರ ಬಗ್ಗೆ ಏನು ಯೋಚಿಸುತ್ತಾರೋ ಅದಕ್ಕೆ ಪೂರ್ತಿ ವಿರುದ್ಧವಾಗಿ ಅವರಿದ್ದದ್ದು. ಅವರು ಬಹಳ ಆತ್ಮೀಯವಾಗಿ ಇರುತ್ತಿದ್ದರು. ನನಗೆ ಊಟಕ್ಕೆ ಏನು ಇಷ್ಟವೋ ಅದನ್ನು ನೀಡುತ್ತಿದ್ದರು. ಒಬ್ಬ ತಾಯಿ ಹೇಗೋ ಹಾಗೆಯೇ ಅವರಿರುತ್ತಿದ್ದುದು.

ರಾ‌ಜ್ದೀಪ್: ಅತ್ತೆ ಸೊಸೆ ಸಂಬಂಧದಲ್ಲಿ ಕೆಲವೊಮ್ಮೆ ಹೊಂದಾಣಿಕೆ ಬರುವುದಿಲ್ಲ. ನಿಮಗೆ ಅಂತಹ ಸನ್ನಿವೇಶ ಎದುರಾಗಲಿಲ್ಲವೇ?

ಸೋನಿಯಾ: ಇಂದಿರಾಜೀಯವರು ಬಹಳ‌ ಬುದ್ಧಿವಂತ ಮಹಿಳೆಯಾಗಿದ್ದರು. ನನಗೆ ಇಲ್ಲಿನ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಸಾಕಷ್ಟು ಕಾಲ-ಅವಕಾಶ ಒದಗಿಸಿದ್ದರು. ಹೊಸ ರೀತಿಯ ಆಹಾರ ಶೈಲಿ, ಹೊಸ ತರದ ಉಡುಗೆ ತೊಡುಗೆ, ಹೀಗೆ ಎಲ್ಲದಕ್ಕೂ ನನಗೆ ಹೊಂದಿಕೊಳ್ಳಲು ಆಯಿತು. ಯಾವಾಗಲೂ ಅವರು ನನ್ನ ಮೇಲೆ ಇದನ್ನೇ ಮಾಡು, ಅದನ್ನೇ ಮಾಡು ಎಂದು ಒತ್ತಾಯ ಹೇರದೆ ನಾನಾಗಿಯೇ ಇಷ್ಟಪಟ್ಟು ಮಾಡುವಂತೆ ಮಾಡುತ್ತಿದ್ದರು.

ರಾಜ್ದೀಪ್: ನಿಮ್ಮ ರಾಜಕೀಯ ವ್ಯಕ್ತಿತ್ವಕ್ಕೆ ಅವರ ಪ್ರಭಾವ…

ಸೋನಿಯಾ: ನಾನು ಅವರ ಸೊಸೆಯಲ್ಲದಿದ್ದರೆ ರಾಜಕಾರಕ್ಕೆ ಇಳಿಯುತ್ತಲೇ ಇರಲಿಲ್ಲ.

ರಾಜ್ದೀಪ್: ನೀವು ಬದುಕಿನಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವಾಗ ಅವರ ಬಗ್ಗೆ ಯೋಚಿಸಿದ್ದಿರಾ?

ಸೋನಿಯಾ: ನಾನು ರಾಜಕಾರಕ್ಕೆ ಇಳಿಯಬೇಕೇ ಬೇಡವೇ  ಎನ್ನುವುದು ಮೊದಲ ಕಠಿಣ ತೀರ್ಮಾನ ತೆಗೆದುಕೊಳ್ಳಬೇಕಾದ ಸಂದರ್ಭ. ನಾನು ರಾಜಕಾರಣಕ್ಕೆ ಇಳಿಯಲು ಬಯಸಿರಲಿಲ್ಲ. ನನ್ನ ಗಂಡ ರಾಜಕಾರಣಿಯಾಗುವುದೂ ನನಗೆ ಇಷ್ಟವಿರಲಿಲ್ಲ. ಅವರು ಒಬ್ಬ ಪೈಲಟ್ ಆಗಿ ಬಹಳ ಸಂತೋಷವಾಗಿದ್ದರು‌.

ನನ್ನ ಅತ್ತೆ ಹಾಗೂ ಗಂಡ ಕೆಲವು ಮೌಲ್ಯಗಳನ್ನು,‌ ತತ್ವಗಳನ್ನು ಎತ್ತಿಹಿಡಿಯಲಿಕ್ಕಾಗಿ ಹೇಗೆ ಹಗಲೂ ರಾತ್ರಿ ಶ್ರಮಪಡುತ್ತಿದ್ದರು ಎಂಬುದನ್ನು ನೋಡಿದ ಮೇಲೆ, ನನಗೆ ನಾನೇ ಎಲ್ಲೋ ಹೇಡಿಯಾಗಿಬಿಟ್ಟಿದ್ದೇನೆ ಎನ್ನಿಸಿತ್ತು. ಅವರಿಗೆ  ಸರಿಯಾದ ರೀತಿಯಲ್ಲಿ ನನ್ನ ಪ್ರತಿಸ್ಪಂದನೆ ಇಲ್ಲ ಎನಿಸಿತ್ತು.

ರಾಜ್ದೀಪ್: ಇಂದಿರಾ ಗಾಂಧಿಯವರು ತಮ್ಮ ಕುಟುಂಬ ಸದಸ್ಯರನ್ನು ಒತ್ತಾಯಪೂರ್ವಕವಾಗಿ ರಾಜಕಾರಣಕ್ಕೆ ತಳ್ಳಿದರೆಲ್ಲವೇ? ನಿಮಗೆ ಹಾಗೆ ಅನ್ನಿಸಿಲ್ಲವೇ?

ಸೋನಿಯಾ: ಅವರು ಯಾರನ್ನೇ ಆಗಲಿ ಒತ್ತಾಯದಿಂದ ರಾಜಕಾರಣಕ್ಕೆ ತಳ್ಳಿದರು ಎಂದು ನನಗೆ ಅನಿಸಲ್ಲ. ಆದರೆ ಅವರು ತಮ್ಮ ಮಕ್ಕಳು ತಮ್ಮ ಕಾರ್ಯ, ತ್ಯಾಗಗಳನ್ನು ಅರ್ಥಮಾಡಿಕೊಂಡು ಅವುಗಳತ್ತ ಮೆಚ್ಚುಗೆಯಿಂದ ನೋಡುವಂತೆ ಬೆಳೆಸಿದ್ದರು. ನಿಮಗೆ ಗೊತ್ತಿರಬಹುದು‌. ಇಂದಿರಾಗಾಂಧಿಯವರಿಗೇ ಸ್ವತಃ ರಾಜಕಾರಣದಲ್ಲಿ ತೊಡಗಲು ಇಷ್ಟವಿರಲಿಲ್ಲ.

ರಾಜ್ದೀಪ್: ಹೊರಜಗತ್ತಿಗೆ ಅವರು ಶಕ್ತಿರಾಜಕಾರಣಕ್ಕೆ ಹೇಳಿ‌ ಮಾಡಿಸಿದವರು ಎಂಬಂತೆ ಇದ್ದರು‌. ನೀವು ಇದಕ್ಕೆ ವಿರುದ್ಧವಾಗಿ ಇಂದು ಹೇಳುತ್ತಿದ್ದೀರಿ.

ಸೋನಿಯಾ: ನಾನು ಹಾಗೆಂದೇ ನಂಬಿದ್ದೇನೆ. ನನ್ನ ಅಭಿಪ್ರಾಯ ತಪ್ಪಿರಬಹುದು. ಆದರೆ ಅವರು ಈ ದೇಶಕ್ಕೆ, ದೇಶದ ಜನತೆಗೆ ತನ್ನ ಕರ್ತವ್ಯನಿಷ್ಠೆ ತೋರಿದರು.

ರಾಜ್ದೀಪ್: ಇಂದಿರಾಗಾಂಧಿ ಅವರ ಬಗ್ಗೆ ಇರುವ ದೊಡ್ಡ ಆರೋಪ ಅವರು ಕುಟುಂಬ ರಾಜಕಾರಣ ಬೆಂಬಲಿಸಿದರು. ನಿಮ್ಮ ಮೇಲೆ ಸಹ ಇದೇ ಆರೋಪ ಇದೆ. ಈ ಕುಟುಂಬ ಈಗ ನಾಲ್ಕನೇ ಪೀಳಿಗೆಗೂ ರಾಜಕಾರಣದಲ್ಲಿ ಮುಂದುವರೆದಿದೆ. ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಇಂದಿರಾ, ರಾಜೀವ್, ಸಂಜಯ್, ಈಗ ರಾಹುಲ್.

ಸೋನಿಯಾ: ಜನರು ಹಾಗೆ ಗುರುತಿಸುವುದು ನನಗೆ ಅರಿವಿದೆ. ಒಂದು ವೈದ್ಯರ ಕುಟುಂಬದಲ್ಲಿ, ಪ್ರೊಫೆಸ್ಸರ್ ಗಳ ಕುಟುಂಬದಲ್ಲಿ, ಉದ್ಯಮ ನಡೆಸುವವರ ಕುಟಂಬದಲ್ಲಿ, ಆ ಕುಟುಂಬದ ಒಬ್ಬರಲ್ಲಾ ಒಬ್ಬರು ತಮ್ಮ ತಂದೆಯ ಉದ್ಯೋಗವನ್ನೇ ಆರಿಸಿಕೊಳ್ಳುವುದಿರುತ್ತದೆ‌, ಅಲ್ಲವೇ? ರಾಜಕಾರಣದಲ್ಲಿ ನಿಮ್ಮನ್ನು ಜನರು ಪ್ರಜಾತಾಂತ್ರಿಕವಾಗಿ ಚುನಾಯಿಸುತ್ತಾರೆ ಇಲ್ಲವೇ ಸೋಲಿಸುತ್ತಾರೆ‌. ಈ ವ್ಯತ್ಯಾಸವೂ ಇರುತ್ತದೆ.

ರಾಜ್ದೀಪ್: ಇಂದಿರಾಗಾಂಧಿ ಪ್ರತಿನಿಧಿಸಿದ ಮೌಲ್ಯ, ತತ್ವಾದರ್ಶಗಳು ಎಂದರೆ ನಿಮ್ಮ ಪ್ರಕಾರ ಯಾವುದು?

ಸೋನಿಯಾ: ಜಾತ್ಯತೀತತೆ.

ರಾಜ್ದೀಪ್: ಜಾತ್ಯತೀತತೆ ಎಂದರೆ ಅದರ ಶಾಸ್ತ್ರೀಯ ಅರ್ಥದಲ್ಲಿ? ಅಲ್ಪಸಂಖ್ಯಾತರ ಓಲೈಕೆ ಎಂಬರ್ಥದಲ್ಲಿ ಅಲ್ಲ ಅಲ್ಲವೇ?

ಸೋನಿಯಾ: ಖಂಡಿತಾ ಅಲ್ಲ. ಎಲ್ಲಾ ಭಾರತೀಯರೂ ತಮ್ಮ ಹಿನ್ನೆಲೆ, ಧರ್ಮಗಳೆಲ್ಲದರಾಚೆಗೆ ಒಂದೇ ಎಂದು‌ ಭಾವಿಸುವುದು.

ರಾಜ್ದೀಪ್: 1971 ರ ಯುದ್ಧ ಇಂದಿರಾಗಾಂಧಿಯವ ಬಗ್ಗೆ ಹೆಮ್ಮೆಯನ್ನೂ, ತುರ್ತುಪರಿಸ್ಥಿತಿ ಘೋಷಣೆ ಕಪ್ಪುಚುಕ್ಕೆಯನ್ನೂ ತಂದಿತ್ತು? ಇಂದು ಅವರಿದ್ದಿದ್ದರೆ ತುರ್ತುಪರಿಸ್ಥಿತಿ ಬಗ್ಗೆ ಏನು ಹೇಳುತ್ತಿದ್ದರೆನಿಸುತ್ತದೆ?

ಸೋನಿಯಾ: ಈಗ ಅವರು ಹೇಗೆ ನೋಡುತ್ತಿದ್ದರು ಎಂದು ನಾನು‌ ಹೇಳಲಾರೆ. ಆದರೆ, ಆ ಬಗ್ಗೆ ಅವರಿಗೆ ಎಲ್ಲೋ ಒಂದು ಕಡೆ ಅತೀವ ಅಸಮಾಧಾನ ಇರದಿದ್ದರೆ ಅವರು ಚುನಾವಣೆ ಎದುರಿಸುತ್ತಲೇ ಇರಲಿಲ್ಲ. ಸರಿಯಲ್ಲವಾ?

ರಾಜ್ದೀಪ್: ಅದು ನಿಜ. 1977ರಲ್ಲಿ ತುರ್ತುಪರಿಸ್ಥಿತಿ ವಾಪಾಸು ಪಡೆಯುವ ನಿರ್ಧಾರ ಮಾಡಿದರು. ಈ ಬಗ್ಗೆ ನಿಮ್ಮ ಬಳಿ ಯಾವತ್ತಾದರೂ ವೈಯಕ್ತಿಕ ಮಾತುಕತೆಯಲ್ಲಿ ತಂದಿದ್ದರಾ?

ಸೋನಿಯಾ: ಖಂಡಿತಾ. ಅಂತಹ ಕೆಲ ಉದಾಹರಣೆಗಳು ನನಗೆ‌ ನೆನಪಿವೆ. ರಾಜೀವ್ ಆಗ ಪೈಲಟ್ ಆಗಿ ದೇಶದೇಶಗಳಿಗೆ ಓಡಾಡುತ್ತಿದ್ದರು. ಬೇರೆ ಬೇರೆ ದೇಶಗಳಲ್ಲಿ ನಡೆಯುವುದನ್ನು ಅವರು ತಾಯಿಗೆ‌ ಬಂದು ಹೇಳುತ್ತಿದ್ದರು.‌ ಅದನ್ನು ಇಂದಿರಾಜೀ‌ ಕೇಳಿಸಿಕೊಳ್ಳುತ್ತಿದ್ದರು. ಅಲ್ಲದೇ ಆ ಬಗ್ಗೆ ಆಲೋಚಿಸುತ್ತಿದ್ದರು.

ರಾಜ್ದೀಪ್: 60ರ ದಶಕದ ಮಧ್ಯದಲ್ಲಿ ಅವರು ಇಂಗ್ಲೆಂಡಿಗೆ ಹೋಗಿ ಕೆಲಕಾಲ ವಾಸಿಸುವ ಯೋಜನೆ ಇಟ್ಟುಕೊಂಡಿದ್ದರು

ಸೋನಿಯಾ: ಅವರಿಗೆ ತಮ್ಮ ಇಚ್ಛೆಯಂತೆ ಬದುಕಲು ಅವಕಾಶವಿದ್ದರೆ ಒಬ್ಬ ಸಾಮಾನ್ಯ ಮಹಿಳೆಯಂತೆ ಬದುಕುತ್ತಿದ್ದರು ಎಂದು ನನ್ನ ನಂಬಿಕೆ.

ರಾಜ್ದೀಪ್: ಅವರು ಇದನ್ನು ಬಹಿರಂಗವಾಗಿ ನಿಮ್ಮೊಂದಿಗೆ ವ್ಯಕ್ತಪಡಿಸಿರಲಿಲ್ಲವೇ?

ಸೋನಿಯಾ: ಈ ಬಗ್ಗೆ ನಾನು ನನ್ನ ಪುಸ್ತಕದಲ್ಲಿ ದಾಖಲಿಸುತ್ತೇನೆ.

ರಾಜ್ದೀಪ್: ಸಂಜಯ್ ಗಾಂಧಿ ಅವರ ಮರಣಾ ನಂತರ ರಾಜೀವ್ ತನ್ನ ರಾಜಕೀಯ ಉತ್ತರಾಧಿಕಾರಿ ಆಗಬೇಕೆಂದು ಇಂದಿರಾಗಾಂಧಿಯವರು ಬಯಸಿದಾಗ ನೀವು ಬಹಿರಂಗವಾಗಿಯೇ ಹೇಳಿದ್ರಿ. ನೀವು ಅದರ ವಿರುದ್ಧವಾಗಿದ್ದೀರಿ ಎಂದು.

ಸೋನಿಯಾ: ಖಂಡಿತವಾಗಿಯೂ ನಾನು ಸಂಪೂರ್ಣ ಅದಕ್ಕೆ ವಿರುದ್ಧವಾಗಿದ್ದೆ.

ರಾಜ್ದೀಪ್: ಹಾಗಾದರೆ ಇದು ನಿಮ್ಮಿಬ್ಬರ ಅಂದರೆ ಅತ್ತೆ ಸೊಸೆ ನಡುವೆ ಸಂಬಂಧವನ್ನು ಬದಲಿಸಿತ್ತಾ?

ಸೋನಿಯಾ: ಇಲ್ಲ… ಹಾಗಾಗಲಿಲ್ಲ… ನಾನಾಗಲೇ ನಿಮಗೆ ಹೇಳಿದಂತೆ ಅವರು ತುಂಬಾ ಬುದ್ಧಿವಂತ ಮಹಿಳೆಯಾಗಿದ್ದರು ಅನ್ನುವುದನ್ನು ಮರೆಯಬೇಡಿ. ಅವರು ಈ ವಿಷಯವನ್ನು ನಮ್ಮಿಬ್ಬರಿಗೇ ಬಿಟ್ಟು ನೀವೇ ತೀರ್ಮಾನಿಸಿಕೊಳ್ಳಿ ಎಂದು ಬಿಟ್ಟುಬಿಟ್ಟರು. ಅವರು ನನಗೆ ಈ ಬಗ್ಗೆ ಎಂದೂ ಏನೂ ಹೇಳಲಿಲ್ಲ.

ರಾಜ್ದೀಪ್: ನರೇಂದ್ರ ಮೋದಿಯಂತವರ ವಿರುದ್ಧವಾಗಿ ಕಾಂಗ್ರೆಸ್ನಲ್ಲಿ ಇಂದು ಇಂದಿರಾ ಗಾಂಧಿಯಂತಹ ನಾಯಕತ್ವದ ಕೊರತೆಯಿದೆ ಎಂಬ ಮಾತು ಕೇಳಿ ಬರುತ್ತಿದೆ. ನರೇಂದ್ರ ಮೋದಿಯವರು ಇಂದಿರಾ ಗಾಂಧಿಯವರಂತೆ ಕಠಿಣ ಸ್ವಭಾವದ ನಾಯಕ. ಕಾಂಗ್ರೆಸ್‌ನಲ್ಲಿ ಅಂತಹ ನಾಯಕರ ಕೊರತೆ ಇದೆ ಎಂಬ ಅಭಿಪ್ರಾಯವಿದೆ?

ಸೋನಿಯಾ: ಈ ಮಾತನ್ನು ನಾನು ಒಪ್ಪಲಾರೆ. ಶ್ರೀಮತಿ ಗಾಂಧಿಯವರು ರಾಜಕಾರಣಕ್ಕಿಳಿದಾಗ, ಅವರು ಪಕ್ಷದ ಅಧ್ಯಕ್ಷರಾದಾಗ, ನಂತರ ಪ್ರಧಾನಿಯಾದಾಗಲೂ ಅವರನ್ನು ಹಂಗಿಸಲಾಗಿತ್ತು. ಅವರ ಬಗ್ಗೆ ತಮಾಷೆ ಮಾಡಿ ಆಡಿಕೊಳ್ಳಲಾಗಿತ್ತು. ಅವರನ್ನು ಅಪಮಾನಿಸಲಾಗಿತ್ತು. ಹೊರಗಡೆಯವರಿಗಿಂತ ಪಕ್ಷದ ಒಳಗಿನವರೇ ಹೆಚ್ಚು ಅವಮಾನಿಸಿದ್ದರು.

ರಾಜ್ದೀಪ್: ಕಾಂಗ್ರೆಸ್ ದೇಶದ ಪ್ರಬಲ ಪಕ್ಷವಾಗಿದ್ದ ಸಂದರ್ಭ ಅಂದಾಗಿತ್ತು. ಇಂದು 44 ಸೀಟುಗಳಿಂದ ಮೇಲೆ ಬರಬೇಕಿದೆ.

ಸೋನಿಯಾ: ಇದು ಖಂಡಿತಾ ಸಾಧ್ಯ ಎಂದು ನಾನು ನಂಬಿದ್ದೇನೆ. ನಾವು ಖಚಿತವಾಗಿಯೂ 44 ಸೀಟುಗಳಿಂದ ಸಂಸತ್ತಿನಲ್ಲಿ ಅಗತ್ಯವಿರುವು ಪೂರ್ಣಬಲ ಗಳಿಸುತ್ತೇವೆ.

ರಾಜ್ದೀಪ್: ಹಾಗಾದರೆ ನೀವು ಅಧಿಕಾರಕ್ಕೆ ಮರಳುತ್ತೀರಿ?

ಸೋನಿಯಾ: ಸಂಶಯವಿಲ್ಲ. ರಾಜಕೀಯದಲ್ಲಿ ಸೋಲು, ಗೆಲುವು, ಮೇಲಕ್ಕೇರುವುದು, ಕೆಳಕ್ಕಿಳಿಯುವುದು ಇದೆಲ್ಲಾ ಬದುಕಿನ ಭಾಗ.

ನರೇಂದ್ರ ಮೋದಿ ಮತ್ತು ಇಂದಿರಾ ಗಾಂಧಿ.

ನರೇಂದ್ರ ಮೋದಿ ಮತ್ತು ಇಂದಿರಾ ಗಾಂಧಿ.

ರಾಜ್ದೀಪ್: ನರೇಂದ್ರ ಮೋದಿ ಇಂದಿರಾ ಗಾಂಧಿಯವರಂತೆ, ಶಕ್ತಿ ರಾಜಕಾರಣಿ ಎಂದೆಲ್ಲಾ ಹೇಳುವಾಗ ನಿಮಗೆ ಕಿರಿಕಿರಿ ಎನಿಸುವುದೇ?

ಸೋನಿಯಾ: ನನಗೆ ಅದರಿಂದ ಯಾವುದೇ ತೊಂದರೆ ಆಗಲಾರದು. ಯಾಕೆಂದರೆ ನಾನು ಆ ಮಾತು ನಂಬುವುದೇ ಇಲ್ಲ. ಅಂತ ಯಾವುದೇ ಹೋಲಿಕೆ ಸಾಧ್ಯವಿಲ್ಲ. ಈ ಬಗ್ಗೆ ನನಗೆ ಸ್ಪಷ್ಟ ನೋಟವಿದೆ.

ರಾಜ್ದೀಪ್: ಯಾವುದೇ ಹೋಲಿಕೆ ಇಲ್ಲವೇ?

ಸೋನಿಯಾ: ಖಂಡಿತಾ ಇಲ್ಲ… ಖಂಡಿತಾ ಇಲ್ಲ.

ರಾಜ್ದೀಪ್: ಪ್ರಿಯಾಂಕಾ ಅವರು ಇಂದಿರಾಗಾಂಧಿಯರನ್ನು ಹೆಚ್ಚಾಗಿ ಹೋಲುತ್ತಾರೆ ಎಂಬ ಅಭಿಪ್ರಾಯವಿದೆ. ನಿಮ್ಮ ಪ್ರಕಾರ ಯಾರು ಇಂದು ನೆಹರೂ ಕುಟುಂಬದಲ್ಲಿ ಯಾರು ಹೆಚ್ಚು ಇಂದಿರಾ ಗಾಂಧಿಯವರನ್ನು ಹೋಲುತ್ತಾರೆ?

ಸೋನಿಯಾ: ನಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರೂ ಇಂದಿರಾ ಗಾಂಧಿಯವರಿಂದ ಒಂದಲ್ಲಾ ಒಂದು ರೀತಿಯಲ್ಲಿ ಪ್ರಭಾವಕ್ಕೆ ಒಳಗಾಗಿದ್ದೇವೆ. ನಾನು ನನ್ನದೇ ರೀತಿ, ಪ್ರಿಯಾಂಕ, ರಾಹುಲ್ ಅವರದೇ ರೀತಿಯಲ್ಲಿ ಪ್ರಭಾವಕ್ಕೆ ಒಳಗಾಗಿದ್ದೇವೆ.

ರಾಜ್ದೀಪ್: ನೀವು ಶ್ರೀಮತಿ ಗಾಂಧಿಯವರನ್ನು ಮೊದಲ ಬಾರಿಗೆ ಲಂಡನ್‌ನಲ್ಲಿ ಸಂತೋಷದ ಗಳಿಗೆಗಳಲ್ಲಿ ನೋಡಿದ್ದಿರಿ. ಆದರೆ ಕೊನೆಯ ಬಾರಿಗೆ ಅವರನ್ನು ನೋಡುವಾಗ ದುಃಖದ ಸಂದರ್ಭ. 1948ರ ಅಕ್ಟೋಬರ್ 31ರ ಆ ದಿನ ಅವರು ನಿಮ್ಮ ತೋಳುಗಳಲ್ಲಿಯೇ ಕೊನೆಯುಸಿರೆಳೆದರು. ಈ ಬಗ್ಗೆ ನಿಮ್ಮ ನೆನಪುಗಳನ್ನು ಹಂಚಿಕೊಳ್ಳಿ

ಸೋನಿಯಾ: ಹೌದು. ಅವು ಅತ್ಯಂತ ಭೀಕರ ದಿನಗಳು. ಅವರ ಕೊಠಡಿಯ ಪಕ್ಕದಲ್ಲೇ ಇದ್ದ ನನ್ನ ಕೊಠಡಿಯಲ್ಲಿ ಇದ್ದೆ. ಅವು ದೀಪಾವಳಿಯ ಆರಂಭದ ದಿನಗಳು. ಹೊರಗೆ ಏನೋ ಸದ್ದು ಕೇಳಿದಾಗ ಮೊದಲು ದೀಪಾವಳಿಯ ಪಟಾಕಿ ಸದ್ದೆಂದುಕೊಂಡೆ. ಆದರೆ ಆ ಸದ್ದು ಸ್ವಲ್ಪ ವಿಚಿತ್ರವೆನಿಸಿದ್ದರಿಂದ ನನ್ನ ಸಹಾಯಕಿಯನ್ನು ಕಳಿಸಿದೆ. ಆಕೆ ಜೋರಾಗಿ ಅಳುತ್ತಾ ವಾಪಾಸು ಬಂದಳು. ಆದರೆ ಇಂತಹದು ಸಂಭವಿಸಬಹುದೆಂದು ನಮಗೆ ನಿರೀಕ್ಷೆಯಿತ್ತು. ನಮ್ಮ ಅತ್ತೆಯವರೇ ಈ ಬಗ್ಗೆ ಮಾತಾಡಿದ್ದರು. ಅದರಲ್ಲೂ ನಿರ್ದಿಷ್ಟವಾಗಿ ರಾಹುಲ್ ಜೊತೆ ಇದನ್ನು ಮಾತಾಡಿದ್ದರು. ನಾನು ಕೂಡಲೇ ದೌಡಾಯಿಸಿದೆ. ಅಲ್ಲಿ ಹೋಗಿ ನೋಡಿದರೆ ಅತ್ತೆಯವರು ಬುಲೆಟ್ ಗಾಯಗಳಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಗ ಅಂಬ್ಯುಲೆನ್ಸ್ ಇರಲಿಲ್ಲ. ಅಂಬಾಸೆಡರ್ ಕಾರಿನ ಹಿಂದಿನ ಸೀಟಿನಲ್ಲಿ ನನ್ನ ತೋಳಿನಲ್ಲಿ ಅವರನ್ನು ಬಿಗಿಹಿಡಿದು ಕೂರಿಸಿಕೊಂಡಿದ್ದೆ. ಅಲ್ಲಿ ಬಹಳ ಟ್ರಾಫಿಕ್ ಇತ್ತು. ನಿಧಾನವಾಗಿ ಆಸ್ಪತ್ರೆ ತಲುಪಿದ್ದೆವು.

ರಾಜ್ದೀಪ್: ನಿಮ್ಮ ಅತ್ತೆಯವರಿಗೆ ಏನಾಗಿತ್ತೋ ಆ ಆಘಾತದಿಂದ ಹೊರಬರಲು ನಿಮಗೆ ಬಹಳ ಸಮಯ ಹಿಡಿಯಿತಲ್ಲವೇ?

ಸೋನಿಯಾ: ಹೌದು. ರಾಜೀವ್, ರಾಹುಲ್, ಪ್ರಿಯಾಂಕಾ, ನಮ್ಮೆಲ್ಲರಿಗೂ.

ರಾಜ್ದೀಪ್: ದೇಶಕ್ಕೆ ಇಂದಿರಾಗಾಂಧಿಯವರ ಕೊಡುಗೆಯನ್ನು ನೀವು ಹೇಗೆ ಗುರುತಿಸುತ್ತೀರಿ? ನೀವು ಹೇಳಿದಂತೆ ಅವರಿಗೆ ಎಲ್ಲಕ್ಕಿಂತ ದೇಶ ಮುಖ್ಯವಾಗಿತ್ತು. ಇಂದು ಈ ಸ್ವರಾಜ್ ಭವನ್‌ದಲ್ಲಿ ಕುಳಿತುಕೊಂಡು ನಾವು ಶ್ರೀಮಂತಿ ಗಾಂಧಿಯವರ ಕೊಡುಗೆಯ ಬಗ್ಗೆ ಏನು ಹೇಳಬಹುದು?

ಸೋನಿಯಾ: ನಾನು ಅದನ್ನು ಈ ಮಾತುಗಳಲ್ಲಿಡಲು ಬಯಸುತ್ತೆನೆ. ದೇಶಕ್ಕೆ ಅವರ ಮಹಾನ್ ಕೊಡುಗೆ ಏನೆಂದರೆ, ಭಾರತದ ಜನತೆಗಾಗಿ ಅವರಿಗಿದ್ದ ನಿಷ್ಠತೆ ಹಾಗೂ ಭಕ್ತಿ. ಮಿಕ್ಕೆಲ್ಲವೂ ಇದರಿಂದಲೇ ಬಂದಂತವು.

ರಾಜ್ದೀಪ್: ನಾನು ಯಾಕೆ ಈ ಮಾತು ಹೇಳಿದೆ ಎಂದರೆ 2016ರಲ್ಲಿಯೂ ಅಮೆರಿಕಾಗೆ ಒಬ್ಬ ಮಹಿಳಾ ರಾಷ್ಟ್ರಾಧ್ಯಕ್ಷರನ್ನು ತರಲು ಆಗಲಿಲ್ಲ. ಇಂತಾದ್ದರಲ್ಲಿ 1966ರಲ್ಲಿ ಭಾರತದ ಪ್ರಧಾನಿಯಾಗಿದ್ದವರು ಇಂದಿರಾ. ಅವರು ಮಹಿಳೆಯಾಗಿದ್ದ ಬಗ್ಗೆ ಎಂದಾದರೂ ಹೆಮ್ಮೆ ಪಟ್ಟುಕೊಂಡಿದ್ದರೇ? ಅವರು ಮಹಿಳಾವಾದಿಯಾಗಿದ್ದರೇ? ತಮ್ಮ ಸುತ್ತಲೂ ಪುರುಷ ರಾಜಕಾರಣಿಗಳನ್ನಿಟ್ಟುಕೊಂಡು ಗಡಸುತನದಲ್ಲಿ ರಾಜಕಾರಣ ನಡೆಸುತ್ತಿದ್ದರು. ಇದು ಅವರ ನಿರ್ಣಯಗಳ ಮೇಲೆ ಪರಿಣಾಮ ಬೀರಿತ್ತೇ?

ಸೋನಿಯಾ: ನನಗೆ ಹಾಗೇನೂ ಅನ್ನಿಸುವುದಿಲ್ಲ. ನನಗೆ ನೆನಪಿರುವಂತೆ ಅವರೊಮ್ಮೆ ಒಂದು ಕಡೆ ಹೇಳಿದ್ದರು. ತಮಗೆ ತಾವು ಎಲ್ಲರೊಂದಿಗಿದ್ದಾಗ ಮಹಿಳೆ ಎಂದು ಅನ್ನಿಸುವುದೇ ಇಲ್ಲ ಎಂದು. ಅವರು ಪುರುಷರೊಂದಿಗೆ ಸಮಾನವಾಗಿಯೇ ಇರುತ್ತಿದ್ದರು.

ರಾಜ್ದೀಪ್: ಅವರ ಮಹಾನ್ ವಿಜಯ ಎಂದರೆ 1971ರ ವಿಜಯ. ಅದು ಅವರನ್ನು ಯಾವುದಾದರೂ ರೀತಿ ಬದಲಾಯಿಸಿತ್ತೇ?

ಸೋನಿಯಾ: ಖಂಡಿತಾ ಇಲ್ಲ. ನಿಜ ಎಂದರೆ ಪೂರ್ವ ಬಾಂಗ್ಲಾದೇಶದ ಜನರ ಬಗ್ಗೆ ಅವರು ತೀವ್ರ ಅನುಕಂಪ ವ್ಯಕ್ತಪಡಿಸುತ್ತಿದ್ದರು. ಪೂರ್ವ ಬಾಂಗ್ಲಾದೇಶದ ಜನರ ಮೇಲೆ ನಡೆಸಿದ್ದ ಭೀಕರ ದೌರ್ಜನ್ಯಗಳ ಬಗ್ಗೆ ತಿಳಿಯುತ್ತಾ, ಕೇಳುತ್ತಾ ಇದ್ದಾಗ ಅವರು ನಿಜಕ್ಕೂ ಪ್ರಾಮಾಣಿಕವಾಗಿ ತಮಗಾಗುವ ಸಂಕಟವನ್ನು ವ್ಯಕ್ತಪಡಿಸುತ್ತಿದ್ದರು. ಅಲ್ಲಿ ಏನೇನೆಲ್ಲಾ ನಡೆಯುತ್ತಿದೆ ಎಂದು ನಮಗೆ ಹೇಳುತ್ತಿದ್ದರು.

 

ಇಂದಿರಾ ಗಾಂಧಿ ಕುಟುಂಬ.

ಇಂದಿರಾ ಗಾಂಧಿ ಕುಟುಂಬ.

ರಾಜ್ದೀಪ್: ಇಂದು ಇಂದಿರಾಗಾಂಧಿಯವರ ಜನ್ಮಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಶ್ರೀಮತಿ ಗಾಂಧಿಯವರನ್ನು ನೋಡಿಯೇ ಇರದ ಹೊಸ ಪೀಳಿಗೆಯೊಂದು ಕಣ್ಣೆದುರಿಗಿದೆ. ಈ ಯುವ ಪೀಳಿಗೆ ಇಂದಿರಾಗಾಂಧಿಯವರನ್ನು ಹೇಗೆ ಸ್ಮರಿಸಬೇಕೆಂದು ಆಶಿಸುತ್ತೀರಿ?

 

ಸೋನಿಯಾ: ಒಬ್ಬ ತನ್ನ ಜನರಿಗಾಗಿ ತನ್ನನ್ನು ತಾನು ಸಂಪೂರ್ಣವಾಗಿ ಮುಡುಪಾಗಿಟ್ಟುಕೊಂಡು ಕೊನೆಗೆ ತನ್ನ ದೇಶದ ಜನರಿಗಾಗಿ ತನ್ನ ಪ್ರಾಣವನ್ನೂ ಮುಡುಪಾಗಿಟ್ಟ ಒಬ್ಬ ಮಹಿಳೆಯಾಗಿ.

ರಾಜ್ದೀಪ್: ಇಂದಿರಾ ಅವರಿಗೆ ಉತ್ತಮ ಹಾಸ್ಯಪ್ರಜ್ಞೆಯೂ ಇತ್ತಂತೆ…?

ಸೋನಿಯಾ: ಅವರಿಗೆ ಅದ್ಭುತ ಹಾಸ್ಯಪ್ರಜ್ಞೆ ಇತ್ತು. ಅವರೊಬ್ಬ ಅದ್ಭುತ ಪತ್ರ ಬರಹಗಾರರಾಗಿದ್ರು. ತಮ್ಮ ಮಿತ್ರ ವರ್ಗದವರಿಗೆ, ಸಂಬಂಧಿಕರಿಗೆ, ಸಹೋದ್ಯೋಗಿಗಳಿಗೆ, ನನಗೂ ಪತ್ರ ಬರೆಯುತ್ತಿದ್ದರು. ಇತರ ಕುಟುಂಬ ಸದಸ್ಯರಿಗೂ ಬರೆಯುತ್ತಿದ್ದರು. ಚಿಕ್ಕಚಿಕ್ಕ ನೋಟ್ಸ್ ಬರೆಯುತ್ತಿದ್ದರು.

ಬಹಳ ಜನರಿಗೆ ತಿಳಿದಿರದ ಅವರ ವಿಶಿಷ್ಟ ಗುಣವೆಂದರೆ ಅವರು ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ಆಸಕ್ತಿ ತೋರಿಸುತ್ತಿದ್ದರು. ಭಾರತೀಯ, ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿಯಿತ್ತು. ಶಾಸ್ರೀಯ ಕಲೆಯಲ್ಲಿ, ಪರಂಪರೆಯಲ್ಲಿ, ಜಾನಪದ ಕಲೆ ಹಾಗೂ ಜಾನಪದ ಸಂಗೀತದಲ್ಲಿ ಆಸಕ್ತಿಯಿತ್ತು. ಪರಿಸರ – ಹೂವು, ಮರ, ಪರ್ವತ ಹೀಗೆ ಎಲ್ಲೆದರಲ್ಲೂ ಅವರಿಗೆ ವಿಶೇಷ ಆಸಕ್ತಿಯಿತ್ತು.

Leave a comment

FOOT PRINT

Top