An unconventional News Portal.

‘ಅನಾಣ್ಯೀಕರಣದ ಚರ್ಚೆ’: ಇವತ್ತೂ ಮೌನ ಮುರಿಯದ ಮೋದಿ; ‘ಮೌನಿ ಮಾತಿಗೆ’ ಮರುಳಾದ ಸಂಸತ್!

‘ಅನಾಣ್ಯೀಕರಣದ ಚರ್ಚೆ’: ಇವತ್ತೂ ಮೌನ ಮುರಿಯದ ಮೋದಿ; ‘ಮೌನಿ ಮಾತಿಗೆ’ ಮರುಳಾದ ಸಂಸತ್!

ನಿರೀಕ್ಷೆಯಂತೆಯೇ, ಗುರುವಾರವೂ ಪ್ರಧಾನಿ ನರೇಂದ್ರ ಮೋದಿ ಸಂಸತ್ ಅಧಿವೇಶದಲ್ಲಿ ನೋಟು ಬದಲಾವಣೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಹೊರ ನಡೆದಿದ್ದಾರೆ.

ಕಳೆದ ಐದು ದಿನಗಳಿಂದ ದೇಶದಲ್ಲಿ ಎದ್ದಿರುವ ನೋಟು ಬದಲಾವಣೆ ಹಾಹಾಕಾರದ ಬಗ್ಗೆ ಪ್ರಧಾನಿ ಪ್ರತಿಕ್ರಿಯೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಲೇ ಬಂದಿದ್ದವು. ಇದೊಂದು ಕಾರಣಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಧಿವೇಶನ ಸಾಂಗವಾಗಿ ನಡೆಯದೆ ಮುಂದೂಡಲ್ಪಡುತ್ತಲೇ ಬಂದಿತ್ತು. ಕೊನೆಗೆ, ಗುರುವಾರ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಪ್ರಕಟಿಸಿತ್ತು.

ಗುರುವಾರ ಬೆಳಗ್ಗೆ ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜ್ಯಸಭೆಯಲ್ಲಿ ವಿಪಕ್ಷಗಳ ಸದಸ್ಯರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಧಾನಿ ಆಗಮನಕ್ಕೆ ಒತ್ತಾಯಿಸಿದವು. 12 ಗಂಟೆ ಸುಮಾರಿಗೆ ಮೋದಿ ರಾಜ್ಯ ಸಭೆಗೆ ಆಗಮಿಸಿದರು. ಕೊನೆಗೆ, ವಿತ್ತ ಸಚಿವ ಅರುಣ್ ಜೇಟ್ಲಿ ಟಿಪ್ಪಣಿಯ ಮೂಲಕ ಚರ್ಚೆಗೆ ಅನುವು ಮಾಡಿಕೊಡಲಾಯಿತು. ಕಾಂಗ್ರೆಸ್ ಪರವಾಗಿ ಮಾತನಾಡಿದ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಚಿಕ್ಕ ಹಾಗೂ ಚೊಕ್ಕ ಭಾಷಣದಲ್ಲಿ, ನೋಟು ಬದಲಾವಣೆ ಪ್ರಕ್ರಿಯೆಯನ್ನು, “ವ್ಯವಸ್ಥಿತ ಮತ್ತು ಕಾನೂನಾತ್ಮಕ ಲೂಟಿ”ಗೆ ಹೋಲಿಸಿದರು. (ಸಿಂಗ್ ಭಾ‍ಷಣದ ಪೂರ್ಣ ಪಾಠ ಕೆಳಗಿದೆ)

ನಂತರ ಸಮಾಜವಾದಿ ಪಾರ್ಟಿ ಸಂಸದ ನರೇಶ್ ಅಗರ್ವಾಲ್, ಟಿಎಂಸಿಯಿಂದ ಡೆರಿಕ್ ಓಬ್ರಿಯಾನ್ ಮತ್ತಿತರರು ಮಾತನಾಡಿದರು. ಮಧ್ಯಾಹ್ನ ಊಟದ ವಿರಾಮದ ನಂತರ ಮೋದಿ ಕಲಾಪಕ್ಕೆ ಹಾಜರಾಗಲಿಲ್ಲ. ಇದರಿಂದ ಮತ್ತೆ ವಿಪಕ್ಷಗಳು ಗದ್ದಲ ಶುರುಮಾಡಿದವು. ಈ ಹಿನ್ನೆಲೆಯಲ್ಲಿ ಕಲಾಪಗಳನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

 ಸಿಂಗ್ ಭಾಷಣದ ಪೂರ್ಣ ಪಾಠ:

man-mohan-sing-rajya-sabhe

ರಾಜ್ಯಸಭೆಯಲ್ಲಿ ಗುರುವಾರ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್.

“ಪ್ರಧಾನ ಮಂತ್ರಿಗಳು ಕಪ್ಪುಹಣ, ಭಯೋತ್ಪಾದನೆಗೆ ಕಡಿವಾಣ ಹಾಕಲು ನೋಟ್ ಬ್ಯಾನ್ ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ. ನಾನು ಇದನ್ನು ಒಪ್ಪುವುದಿಲ್ಲ. ಅನಾಣ್ಯೀಕರಣದ ಅಸಮರ್ಪಕ ಅನುಷ್ಠಾನದಿಂದ ಇವತ್ತು ದೇಶದಲ್ಲಿ ಎರಡು ಅಭಿಪ್ರಾಯವೇ ಇಲ್ಲವಾಗಿದೆ. ಯಾರೂ ಇದು ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯದಾಗಲಿದೆ ಎನ್ನುತ್ತಿದ್ದರೋ, ಅವರು ಇವತ್ತು ಜಾನ್ ಕೆಯ್ನೆಸ್ ಮಾತಿನಂತೆ ‘ದೂರದ ಓಟದಲ್ಲಿ ನಾವೆಲ್ಲಾ ಸಾಯುತ್ತೇವೆ’ (In the long run all of us are dead) ಎನ್ನುತ್ತಿದ್ದಾರೆ.
ಪ್ರಧಾನ ಮಂತ್ರಿಗಳು ರಾತೋ ರಾತ್ರಿ ಅನಾಣ್ಯೀಕರಣ ಜಾರಿಗೆ ತಂದ ನಂತರ ದೇಶದ ಸಾಮಾನ್ಯ ಜನ ತೊಂದರೆ ಅನುಭವಿಸುತ್ತಿದ್ದಾರೆ. ನಾವು ಅವರಿಗಾಗುತ್ತಿರುವ ತೊಂದರೆಯನ್ನು ಗಮನಕ್ಕೆ ತಂದುಕೊಳ್ಳಬೇಕಾಗಿತ್ತು. ನನಗಿರುವ ಎಲ್ಲಾ ಜವಾಬ್ದಾರಿಗಳನ್ನು ಇಟ್ಟುಕೊಂಡು ಹೇಳುತ್ತೇನೆ, ಇದರ ಅಂತಿಮ ಫಲಿತಾಂಶ ಏನು ಎಂದು ನಮಗ್ಯಾರಿಗೂ ಗೊತ್ತಿಲ್ಲ. ಪ್ರಧಾನ ಮಂತ್ರಿಗಳು 50 ದಿನ ಕಾಯಿರಿ ಎನ್ನುತ್ತಿದ್ದಾರೆ. 50 ದಿನ ಸಣ್ಣದೇ. ಆದರೆ ಬಡವರಿಗೆ ಈ ದೇಶದ ಸಾಮಾನ್ಯ ಜನರಿಗೆ 50 ದಿನವೂ ದೊಡ್ಡದು. 50 ದಿನಗಳ ಹಿಂಸೆ ಇನ್ನೇನೋ ವಿಕೋಪದ ಪರಿಸ್ಥಿತಿಗೆ ದೂಡುತ್ತದೆ. ಇದೇ ಕಾರಣಕ್ಕೆ 60 -65 ಜನ ಜೀವ ಕಳೆದುಕೊಂಡಿದ್ದಾರೆ. ಬಹುಶಃ ಈ ಸಂಖ್ಯೆ ಇನ್ನೂ ಹೆಚ್ಚಬಹುದು. ಇವತ್ತು ಏನು ನಡೆದಿದೆ, ಅದು ದೇಶದ ಹಣಕಾಸು ಮತ್ತು ಬ್ಯಾಂಕಿಗ್ ವ್ಯವಸ್ಥೆಯ ಮೇಲೆ ಜನರು ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡಿದೆ.
ನಾನು ಪ್ರಧಾನ ಮಂತ್ರಿಗಳಿಂದ ತಿಳಿದುಕೊಳ್ಳಲು ಬಯಸುತ್ತೇನೆ; ಯಾವ ದೇಶದಲ್ಲಿ ಜನರು ಬ್ಯಾಂಕಿನಲ್ಲಿ ಜಮೆ ಮಾಡಿದ ಹಣವನ್ನು ವಿತ್ ಡ್ರಾ ಮಾಡಲು ಬಿಡುತ್ತಿಲ್ಲ. ದೇಶದ ಜನರಿಗೆ ದೊಡ್ಡದೇನೋ ಒಳ್ಳೆಯದನ್ನು ಮಾಡುತ್ತೇವೆ ಎಂದು ಈಗ ಮಾಡಿರುವ ಕೆಲಸವನ್ನು ವಿರೋಧಿಸಲು ಇದೊಂದು ಸಾಕು. ಸರ್ (ಸಭಾಪತಿ) ನಾನು ಇನ್ನೂ ಒಂದು ಅಭಿಪ್ರಾಯ ಹೇಳಲು ಇಚ್ಚಿಸುತ್ತೇನೆ. ಯೋಜನೆಯನ್ನು ಅನುಷ್ಠಾನಗೊಳಿಸಿದ ರೀತಿ ದೇಶದ ಕೃಷಿ ಬೆಳವಣಿಗೆಗೆ ಹೊಡೆತ ನೀಡಲಿದೆ, ಸಣ್ಣ ಕೈಗಾರಿಕೆಗಳಿಗೆ ಏಟು ಕೊಡಲಿದೆ, ಹಣಕಾಸು ಮುಖ್ಯವಾಹಿನಿಯಿಂದ ಹೊರಗೆಯೇ ಉಳಿದ ಜನರಿಗೆ ಇದು ದೊಡ್ಡ ಹೊಡೆತ ನೀಡಲಿದೆ. ನನ್ನ ಯೋಚನೆ ಪ್ರಕಾರ, ದೇಶದ ಆದಾಯ ‘ಜಿಡಿಪಿ’ ಶೇಕಡಾ 2 ರಷ್ಟು ಕುಸಿತವಾಗಲಿದೆ. ಇದು ನನ್ನ ಕನಿಷ್ಠ ಅಂದಾಜು, ಗರಿಷ್ಠ ಅಂದಾಜಲ್ಲ.
ಆದ ಕಾರಣ ಈ ಯೋಜನೆಯನ್ನು ಹೇಗೆ ಜಾರಿಗೆ ತರಬಹುದು ಎಂಬ ವಿಚಾರದಲ್ಲಿ ರಚನಾತ್ಮಕ ಉಪಾಯಗಳೊಂದಿಗೆ ಪ್ರಧಾನಮಂತ್ರಿಗಳು ಬರಬೇಕು. ಆಗಲಾದರೂ ಸಾಮಾನ್ಯ ಜನರಿಗೆ ಇದರಿಂದಾಗುವ ಸಮಸ್ಯೆಗಳನ್ನು ತಡೆಯಬೇಕು. ಜನರು ಯಾವ ನಿಯಮದ ಮೇಲೆ ಹಣ ಡ್ರಾ ಮಾಡಬೇಕು ಎಂಬುದನ್ನು ನಿರ್ಧರಿಸಲು ಬ್ಯಾಂಕ್ ವ್ಯವಸ್ಥೆ ಪ್ರತಿದಿನ ಹೊಸ ನಿಯಮಗಳೊಂದಿಗೆ ಬರುವುದು ಸರಿಯಲ್ಲ. ಇದು ಪ್ರಧಾನ ಮಂತ್ರಿಗಳ, ಹಣಕಾಸು ಸಚಿವರ ಮತ್ತು ರಿಸರ್ವ್ ಬ್ಯಾಂಕ್ ಕಚೇರಿಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುತ್ತದೆ. ಐ ಯಾಮ್ ವೆರಿ ವೆರಿ ಸಾರಿ; ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎದುರಿಸುತ್ತಿರುವ ಟೀಕೆಗಳು ಸಂಪೂರ್ಣ ನ್ಯಾಯಯುತವಾಗಿವೆ. ನಾನು ಇದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳಲು ಸಾಧ್ಯವಿಲ್ಲ.
ಇವತ್ತು ದೊಡ್ಡ ಮಟ್ಟಿಗೆ ತೊಂದರೆಯಾಗಿರುವ ಜನರಿಗೆ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ಇದನ್ನು ಜಾರಿಗೆ ತರುವಂತೆ ನಾನು ಪ್ರಧಾನ ಮಂತ್ರಿಗಳಲ್ಲಿ ಕೇಳಿಕೊಳ್ಳುತ್ತೇನೆ. ಇವತ್ತು ಶೇಕಡಾ 90ಕ್ಕಿಂತ ಹೆಚ್ಚು ಜನ ಮುಖ್ಯವಾಹಿನಿಯಿಂದ ಹೊರಗಿದ್ದಾರೆ. ಕೃಷಿ ಮಾಡಿಕೊಂಡಿರುವ ಶೇಕಡಾ 55 ಜನ ಇವತ್ತು ಅಸಹಾಯಕರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚಿನ ಜನರಿಗೆ ಸೇವೆ ನೀಡುವ ಸಹಕಾರ ಬ್ಯಾಂಕುಗಳು ಇವತ್ತು ಕೆಲಸ ನಿರ್ವಹಿಸದಂಥ ಸ್ಥಿತಿ ನಿರ್ಮಾಣವಾಗಿದೆ. ಹಣಕಾಸು ವ್ಯವಹಾರ ಮಾಡದಂತೆ ಅವುಗಳನ್ನು ತಡೆ ಹಿಡಿಯಲಾಗಿದೆ. ಇದೆಲ್ಲಾ ಕಾರಣದಿಂದ ನನಗೆ ಇದೊಂದು ‘ಅವಿಚ್ಛಿನ್ನ ಆಡಳಿತಾತ್ಮಕ ವೈಫಲ್ಯ’ ಎಂದು ಅನ್ನಿಸುತ್ತಿದೆ. ಮಾತ್ರವಲ್ಲ ಇದು ಸಾಮಾನ್ಯ ಜನರನ್ನು ವ್ಯವಸ್ಥಿತವಾಗಿ ಹಾಗೂ ಕಾನೂನಾತ್ಮಕವಾಗಿ ಮಾಡುತ್ತಿರುವ ಲೂಟಿಯಾಗಿದೆ.
ಈ ಮಾತಿನೊಂದಿಗೆ ನಾನು ನನ್ನ ಮಾತನ್ನು ಮುಗಿಸುತ್ತೇನೆ. ಒಂದು ಪಕ್ಷದವರು ಮತ್ತೊಂದು ಪಕ್ಷದವರಿಗೆ ಮಾಡಿದಂತೆ, ತಪ್ಪು ಹುಡುಕುವುದು ನನ್ನ ಉದ್ದೇಶವಲ್ಲ. ಆದರೆ ನಾನು ಹೇಳಿರುವುದು ದೇಶದ ಸಾಮಾನ್ಯ ಜನರಿಗೆ ಈ ತೊಂದರೆಯಿಂದ ಬಿಡುಗಡೆ ನೀಡಲು, ಪ್ರಧಾನ ಮಂತ್ರಿಗಳಿಗೆ ಯೋಜನೆಯನ್ನು ವಾಸ್ತವ ಮತ್ತು ಸೂಕ್ತ ದಾರಿಯಲ್ಲಿ ಜಾರಿಗೆ ತರಲು ಸಹಾಯವಾಗಬಹುದು ಎಂದು ಸಂಫೂರ್ಣವಾಗಿ ನಾನು ನಂಬಿದ್ದೇನೆ. ಧನ್ಯವಾದಗಳು…”

Leave a comment

FOOT PRINT

Top