An unconventional News Portal.

ಭೂಮಿ ಹಂಚಿಕೆಗೆ ಎರಡು ವರ್ಷದ ಗಡುವು: ‘ಹೈಪವರ್ ಕಮಿಟಿ’ ರಚನೆಗೆ ಮುಂದಾದ ಸರಕಾರ

ಭೂಮಿ ಹಂಚಿಕೆಗೆ ಎರಡು ವರ್ಷದ ಗಡುವು: ‘ಹೈಪವರ್ ಕಮಿಟಿ’ ರಚನೆಗೆ ಮುಂದಾದ ಸರಕಾರ

‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಹೋರಾಟಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ಸಮಿತಿಯ ಹಕ್ಕೊತ್ತಾಯಗಳನ್ನು ಸರಕಾರ ತಾತ್ವಿಕವಾಗಿ ಒಪ್ಪಿಕೊಂಡಿದ್ದು ನಿರ್ಧಿಷ್ಟ ತೀರ್ಮಾನಗಳನ್ನು ತೆಗೆದುಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಹೋರಾಟಗಾರರ ಪರವಾಗಿ ಎಚ್.ಎಸ್. ದೊರೆಸ್ವಾಮಿ, ನೂರ್ ಶ್ರೀಧರ್, ಡಿ.ಎಚ್. ಪೂಜಾರ್, ಎನ್. ವೆಂಕಟೇಶ್, ಕುಮಾರ್ ಸಮಾತಳ, ಸ್ವರ್ಣ ಭಟ್ ಅವರನ್ನೊಳಗೊಂಡ ನಿಯೋಗ ಮಾತುಕತೆ ನಡೆಸಿ, ರಾಜ್ಯದ ಭೂಮಿ ಮತ್ತು ವಸತಿ ಪರಿಸ್ಥಿತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿತು. ಈ ಸಂದರ್ಭ ಚರ್ಚೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕಾನೂನು ಮಂತ್ರಿ ಟಿ.ಬಿ. ಜಯಚಂದ್ರ ಕೂಡಾ ಉಪಸ್ಥಿತರಿದ್ದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಹಕ್ಕೊತ್ತಾಯಗಳಿಗೆ ಸರ್ಕಾರ ಒಪ್ಪಿಕೊಂಡು, ಈ ಕೆಳಗಿನ ತೀರ್ಮಾನವನ್ನು ತಗೆದುಕೊಂಡಿದೆ ಎಂದು ನೂರ್ ಶ್ರೀಧರ್ ತಮ್ಮ ಫೇಸ್ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ.


  1. ಸದನದಲ್ಲಿ ಭೂಮಿ ಮತ್ತು ವಸತಿ ವಿಚಾರವನ್ನು ಚರ್ಚಿಸಲು ಒಪ್ಪಿಗೆ.
  2. ಭೂಮಿ ಮತ್ತು ವಸತಿ ವಿಷಯವನ್ನು ಆದ್ಯತೆಯ ವಿಚಾರವಾಗಿ ತಗೆದುಕೊಳ್ಳಲು ಸರಕಾರದ ಒಪ್ಪಿಗೆ.
  3. ಭೂಮಿ ಆಡಿಟಿಂಗ್ ಮಾಡಲು ಒಪ್ಪಿಕೊಂಡಿದ್ದು, ಕಾಲಾವಕಾಶ ಕೇಳಿದ ಸರಕಾರ.
  4. ಹೋರಾಟಗಾರರನ್ನು ಒಳಗೊಂಡ ಹೈಪವರ್ ಕಮಿಟಿ ರಚನೆ ಮಾಡಲು ಸರಕಾರ ಸಿದ್ಧ.

ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭಿಸುವುದಕ್ಕೂ ಮೊದಲು ಅಂದರೆ ಭಾನುವಾರದಿಂದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಅನಿರ್ಧಾಷ್ಟಾವಧಿ ಧರಣಿ ಹಮ್ಮಿಕೊಂಡಿತ್ತು. ಸ್ವಾತಂತ್ರ್ಯ ಸೇನಾನಿ ಎಚ್.ಎಸ್ ದೊರೆಸ್ವಾಮಿ ಈ ಹೋರಾಟ ನೇತೃತ್ವ ವಹಿಸಿದ್ದರು.

bhumi-horata-3

ದೊರೆಸ್ವಾಮಿ ಗುಡುಗು:

“ನನ್ನ ರಕ್ತ ಹರಿದು ಇಲ್ಲೇ ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ. ನಾನು ಮಾತ್ರ ಈ ಜಾಗ ಬಿಟ್ಟು ಕದಲೋದಿಲ್ಲ. ಪ್ರತಿ ಭೂರಹಿತ ಬಡ ಕುಟುಂಬಕ್ಕೆ ಐದು ಎಕರೆ ಭೂಮಿ ಕೊಡಬೇಕು, ವಸತಿ ರಹಿತರಿಗೆ ವಸತಿ ನೀಡಬೇಕು. ಭೂಮಿ ಎಲ್ಲಿದೆ ಎಂದು ನೀವು ಕೇಳುತ್ತೀರಲ್ಲವೇ? ನಾನು ತೋರಿಸುತ್ತೇನೆ ಭೂಮಿ ಎಲ್ಲಿದೆ ಎಂದು. ನನ್ನ ಬಳಿ ಇದೆ ಭೂಮಿ ಲಭ್ಯತೆಯ ಅಂಕಿ ಅಂಶಗಳಿವೆ,” ಹೀಗಂತ ಪ್ರತಿಭಟನೆ ಉದ್ದೇಶಿಸಿ ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿಯವರು ಗುಡುಗಿದ್ದರು. ಪ್ರತಿಭಟನೆ ಆರಂಭವಾಗಿ ಎರಡನೇ ದಿನಕ್ಕೇ ಅನಿವಾರ್ಯವಾಗಿ ಸರಕಾರ ಹೋರಾಟಗಾರರ ಜತೆ ಮಾತುಕತೆ ನಡೆಸಬೇಕಾಗಿ ಬಂದಿದ್ದು, ಚಳುವಳಿ ಒಂದು ಹಂತಕ್ಕೆ ಯಶಸ್ವಿಯಾಗಿದೆ.

ರಾಜ್ಯಾದ್ಯಂತ ಆಗಮಿಸಿದ್ದ ನೂರಾರು ಹೋರಾಟಗಾರರು ಈ ಚಳವಳಿಯಲ್ಲಿ ಭಾಗವಹಿಸಿದ್ದರು. ಇದರಿಂದ ವಿಧಿ ಇಲ್ಲದೆ ಸದನದಲ್ಲಿ ಚರ್ಚೆಗೆ ಎತ್ತಿಕೊಳ್ಳಲು ಸರಕಾರ ಮುಂದಾಗಬೇಕಾಯಿತು. ಮಂಗಳವಾರ ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೂಮಿ ಮತ್ತು ವಸತಿ ವಿಚಾರವನ್ನು ಚರ್ಚೆಗೆ ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದರು.

ನಂತರ ಸರಕಾರ ಖುದ್ದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರನ್ನೇ ಪ್ರತಿಭಟನಾ ನಿರತ ಸ್ಥಳಕ್ಕೆ ಕಳುಹಿಸಿ ಮಾತುಕತೆಗೆ ಸುವರ್ಣ ವಿಧಾನಸೌಧಕ್ಕೆ ಆಹ್ವಾನಿಸಿತು. ಸಂಜೆ ವೇಳೆಗೆ ನಿಯೋಗ ಹೋಗಿ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದು ಹೋರಾಟಗಾರರ ಪ್ರಮುಖ ಬೇಡಿಕೆಗಳಿಗೆ ಸರಕಾರ ಒಪ್ಪಿಕೊಂಡಿದೆ.

ಹಲವು ಶಾಸಕರು, ಸಚಿವರ ಬೆಂಬಲ:

ಒಂದೆಡೆ ಜನಪರ ಹೋರಾಟ ಸುವರ್ಣ ಸೌಧದ ಹೊರಗೆ ನಡೆಯುತ್ತಿದ್ದರೆ, ಇದೇ ಮೊದಲ ಬಾರಿಗೆ ಹಲವು ಸಚಿವರು, ಶಾಸಕರು ಹೋರಾಟದ ಸ್ಥಳಕ್ಕೆ ಬಂದು ಭೇಟಿ ನೀಡಿ ಹೋದರು. ಸಚಿವರುಗಳಾದ ಎಚ್.ಕೆ. ಪಾಟೀಲ್, ರಮೇಶ್ ಕುಮಾರ್, ಟಿ. ಬಿ. ಜಯಚಂದ್ರ, ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಶಾಸಕರುಗಳಾದ ಪಿ.ರಾಜೀವ್, ವಿಶ್ವೇಶ್ವರ ಹೆಗಡೆ ಕಾಗೇರಿ, ಎಚ್.ಕೆ. ಕುಮಾರಸ್ವಾಮಿ, ಇನ್ನು ಮುಂತಾದ ಅನೇಕರು ಮಂಗಳವಾರ ಧರಣಿಗೆ ಬಂದು ತಮ್ಮ ನೈತಿಕ ಬೆಂಬಲ ಹೇಳಿ ಹೋಗಿದ್ದರು. ಇವರೆಲ್ಲ ಬಂದಾಗ ದೊರೆಸ್ವಾಮಿಯವರು “ನೀವು ಮೊದಲು ಸದನದಲ್ಲಿ ಈ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳಿ” ಎನ್ನುವ ಬೇಡಿಕೆ ಮುಂದಿಡುತ್ತಿದ್ದರು. ಹೀಗೆ ಅನಿವಾರ್ಯವಾಗಿ ಸದನದಲ್ಲಿ ಭೂಮಿ ಮತ್ತು ವಸತಿ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.

“ಪ್ರತಿಭಟನಾ ನಿರತರ ಜೊತೆ ಮಾತುಕತೆ ನಡೆಸಿದ ಮುಖ್ಯಮಂತ್ರಿಗಳು ಮತ್ತು ಇನ್ನಿತರ ಸಚಿವರುಗಳು ಕೂಡಲೇ ಭೂಮಿಯ ಆಡಿಟಿಂಗ್ ನಡೆಸಲು ಮತ್ತು ಭೂಮಿಯ ಲಭ್ಯತೆಯ ಅನುಸಾರ ಭೂ ರಹಿತರಿಗೆ ಮತ್ತು ವಸತಿ ರಹಿತರಿಗೆ ಭೂಮಿ ಹಂಚುವ ಪ್ರಕ್ರಿಯೆಗೆ ಈ ಕೂಡಲೇ ಚಾಲನೆ ನೀಡಲು, ರಾಜ್ಯದ ಎಲ್ಲಾ ತಹಸಿಲ್ದಾರರಿಗೂ ಸುತ್ತೋಲೆ ಹೊರಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆ ನಂತರವಷ್ಟೇ ಪ್ರತಿಭಟನೆಯನ್ನು ಕೈಬಿಡಲಾಯಿತು. ಸರ್ಕಾರವೇನಾದರೂ ಮತ್ತೆ ಮಾತಿಗೆ ತಪ್ಪಿದರೆ ಮುಂದಿನ ಚುನಾವಣೆಯಲ್ಲಿ ನಿಮ್ಮ ಸರ್ವನಾಶ ಶತಸಿದ್ದ ಎಂಬ ಎಚ್ಚರಿಕೆಯನ್ನೂ ನೀಡಲಾಯಿತು,” ಎಂದು ಹೋರಾಟಗಾರ ಬಿ. ಆರ್. ಭಾಸ್ಕರ್ ಪ್ರಸಾದ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡಿದ್ದಾರೆ.

ಹೋರಾಟದ ನಾಯಕತ್ವವನ್ನು ಸಿರಿಮನೆ ನಾಗರಾಜ್, ಡಾ. ಶ್ರೀರಾಮಪ್ಪ, ವೀರಸಂಗಯ್ಯ, ಕುಮಾರ ಸಮತಳ, ತಿಪಟೂರ್ ಕೃಷ್ಣ, ಅಭಯ್, ಸುವರ್ಣ ಭಟ್, ಕರಿಯಪ್ಪ ಗುಡಿಯಪ್ಪ, ಎನ್. ವೆಂಕಟೇಶ್ ಮುಂತಾದವರು ವಹಿಸಿದ್ದರು. ಮಾತ್ರವಲ್ಲ ಸಾಹಿತಿ ದೇವನೂರು ಮಹದೇವ, ಎಸ್.ಆರ್. ಹಿರೇಮಠ್, ರವಿಕೃಷ್ಣಾ ರೆಡ್ಡಿ ಮುಂತಾದವರು ಬಂದು ಬೆಂಬಲ ಸೂಚಿಸಿ ಹೋರಾಟಕ್ಕೆ ಕೈ ಜೋಡಿಸಿದ್ದರು.

ಸದ್ಯ ಸದನದಲ್ಲಿ ಬರ ಮತ್ತು ಮಹದಾಯಿ ವಿಚಾರದ ಚರ್ಚೆ ನಡೆಯುತ್ತಿದೆ. ಇದಾದ ಬಳಿಕ ಭೂಮಿ ಮತ್ತು ವಸತಿ ವಿಚಾರವನ್ನು ಚರ್ಚೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ನಮ್ಮ ಪ್ರಮುಖ ಬೇಡಿಕೆ ಇದ್ದದ್ದು ಸದನದಲ್ಲಿ ಈ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳಬೇಕು ಮತ್ತು ಹೈಪವರ್ ಕಮಿಟಿ ರಚಿಸಬೇಕು ಎನ್ನುವುದು. ಇದಕ್ಕೆ ಸರಕಾರ ಒಪ್ಪಿಕೊಂಡಿದೆ. ಮೊದಲ ಹೈಪವರ್ ಕಮಿಟಿ ರಚನೆಯಾಗಿ, ಸಮರೋಪಾದಿಯಲ್ಲಿ ಕೆಲಸ ಆರಂಭಿಸಬೇಕು. ವಿವಿಧ ಇಲಾಖೆಗಳ ಜತೆ ಸಮನ್ವಯ ಸಾಧಿಸಲು ಇದು ಅನಿವಾರ್ಯ. ಹೀಗೆ ಮುಂದಿನ ಎರಡು ವರ್ಷಗಳ ಒಳಗೆ ಭೂಮಿ ಹಂಚಿಕೆಯಾಗಬೇಕು ಎಂಬ ಮುನ್ನೋಟ ಇಟ್ಟುಕೊಂಡಿದ್ದೇವೆ. – ಸಿರಿಮನೆ ನಾಗರಾಜ್

Leave a comment

FOOT PRINT

Top