An unconventional News Portal.

ಟೆಸ್ಟ್ ಗೆಲುವಿನ ಖುಷಿಯ ನಡುವೆಯೇ ಬಿಸಿಸಿಐ ವಿರುದ್ಧ ‘ಸಿಕ್ಸರ್’ ಎತ್ತಿದ ಲೋಧಾ ಸಮಿತಿ!

ಟೆಸ್ಟ್ ಗೆಲುವಿನ ಖುಷಿಯ ನಡುವೆಯೇ ಬಿಸಿಸಿಐ ವಿರುದ್ಧ ‘ಸಿಕ್ಸರ್’ ಎತ್ತಿದ ಲೋಧಾ ಸಮಿತಿ!

ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ಜಯ ದಾಖಲಿಸುತ್ತಿದ್ದರೆ, ಅತ್ತ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್. ಎಂ. ಲೋಧಾ ಶಾಕ್ ನೀಡಿದ್ದಾರೆ. ‘ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ’ (ಬಿಸಿಸಿಐ)ಗೆ ಜೀರ್ಣಿಸಿಕೊಳ್ಳಲಾದ ಹೊಡೆತ ಕೊಟ್ಟಿದ್ದಾರೆ. ಸುಪ್ರಿಂ ಕೋರ್ಟಿಗೆ ಪ್ರಮುಖ ಶಿಫಾರಸ್ಸುಗಳನ್ನು ಮಾಡಿರುವ ‘ಲೋಧಾ ಸಮಿತಿ’ ಸದ್ಯ ಇರುವ ಎಲ್ಲಾ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡುವಂತೆ ಸಲಹೆ ನೀಡಿದ್ದಾರೆ. ಈ ಮೂಲಕ ‘ಬಿಸಿಸಿಐ ವರ್ಸಸ್ ಲೋಧಾ’ ಸಮರ ನಿರ್ಣಾಯಕ ಹಂತ ತಲುಪಿದೆ.

ಟೆಸ್ಟ್ ಜಯದ ‘ಸಿಹಿ’:

ಸೋಮವಾರ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಬರೋಬ್ಬರಿ 246 ರನ್ನುಗಳಿಂದ ಗೆದ್ದುಕೊಂಡಿದೆ. ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 200 ರನ್ನುಗಳ ಬೃಹತ್ ಮುನ್ನಡೆ ಪಡೆದಿತ್ತು. ಮಾತ್ರವಲ್ಲ ಎರಡನೇ ಇನ್ನಿಂಗ್ಸಿನಲ್ಲಿಯೂ ಉತ್ತಮ ಬ್ಯಾಟಿಂಗ್ ಮಾಡಿ, ಇಂಗ್ಲೆಂಡಿಗೆ 405ರನ್ನುಗಳ ಗೆಲುವಿನ ಗುರಿ ನೀಡಿತ್ತು. ಆದರೆ ಭಾರತದ ಸ್ಪಿನ್ನರುಗಳ ಚಾಣಾಕ್ಷ ದಾಳಿಗೆ ಸಿಲುಕಿದ ಇಂಗ್ಲೆಂಡ್ 158 ರನ್ನುಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 246 ರನ್ನುಗಳ ಹೀನಾಯ ಸೋಲು ಕಂಡಿತು.

India Vs England Test

ಲೋಧಾ ಸಮಿತಿಯ ‘ಕಹಿ’:

ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಪ್ರಮುಖ ದೇಶವೊಂದರ ವಿರುದ್ಧ ಭಾರತ ಕ್ರಿಕೆಟ್ ತಂಡ ಭರ್ಜರಿ ಗೆಲುವು ಕಂಡ ಖುಷಿಯಲ್ಲಿ ಅಭಿಮಾನಿಗಳಿದ್ದರು. ಆದರೆ ಈ ಖುಷಿಯ ಜತೆ ಕಹಿ ಉಣಿಸಲು ಲೋಧಾ ಸಮಿತಿ ತಯಾರಾಗಿ ಕೂತಿತ್ತು.

‘ಲೋಧಾ ವರ್ಸಸ್ ಬಿಸಿಸಿಐ’ ಪ್ರಕರಣದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಜಸ್ಟೀಸ್ ಲೋಧಾ ಸಮಿತಿ ಸರ್ವೋಚ್ಛ ನ್ಯಾಯಾಲಯಕ್ಕೆ ಶಿಫಾರಸ್ಸುಗಳನ್ನು ಮಾಡಿದ್ದು, ಬಿಸಿಸಿಐನ ಎಲ್ಲಾ ಉನ್ನತ ಅಧಿಕಾರಿಗಳನ್ನು ಕಿತ್ತೊಗೆಯುವಂತೆ ಸಲಹೆ ನೀಡಿದೆ. ಮಾತ್ರವಲ್ಲ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈರನ್ನು ಬಿಸಿಸಿಐ ಅಬ್ಸರ್ವರ್ ಆಗಿ ನೇಮಿಸುವಂತೆ ಕೇಳಿಕೊಂಡಿದೆ.

ಸೋಮವಾರ ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಲೋಧಾ ಸಮಿತಿ ಸುಪ್ರಿಂ ಕೋರ್ಟಿಗೆ ಸಲ್ಲಿಸಿದೆ. ಕ್ರಿಕೆಟನ್ನು ಶುದ್ಧಗೊಳಿಸುವ ಉದ್ದೇಶದಿಂದ ಲೋಧಾ ಸಮಿತಿಯ ಸುಧಾರಣೆಗಳನ್ನು ಜಾರಿಗೊಳಿಸುವುದರ ಮುಂದುವರಿದ ಭಾಗ ಇದಾಗಿದೆ.

ಶಿಫಾರಸ್ಸಿನ ಪ್ರಕಾರ ವೀಕ್ಷಕರಾದ ಪಿಳ್ಳೈ ಆಡಿಟರ್ ಗಳನ್ನು ನೇಮಿಸುವ, ‘ಐಪಿಎಲ್’ನಂಥ ಕ್ರೀಡಾಕೂಟದ ಸಂದರ್ಭದಲ್ಲಿ ಬಿಸಿಸಿಐ ಕಾಂಟ್ರಾಕ್ಟುಗಳನ್ನು ನೀಡುವ ಪ್ರಮುಖ ಹೊಣೆಯನ್ನು ಹೊತ್ತುಕೊಳ್ಳಲಿದ್ದಾರೆ.

ಒಂದೊಮ್ಮೆ ತಿಂಗಳು ಕಳೆದಾಗಲೂ ಬಿಸಿಸಿಐ ಹಠ ಹಿಡಿದು ಸಮಿತಿಯ ಶಿಫಾರಸ್ಸು ಜಾರಿಗೆ ಮೀನಾಮೇಷ ಎಣಿಸಿದಲ್ಲಿ ದೊಡ್ಡ ಮಟ್ಟದ ಕಿತ್ತಾಟಕ್ಕೆ ಇದು ನಾಂದಿ ಹಾಡುವ ಸಾಧ್ಯತೆ ಇದೆ.

2015ರಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ಹೊರ ಬಿದ್ದ ಬಳಿಕ ಪ್ರಕರಣ ಸುಪ್ರಿಂ ಕೋರ್ಟ್ ಮೆಟ್ಟಿಲೇರಿತ್ತು. ಆಗ ಸುಪ್ರಿಂ ಕೋರ್ಟ್ ಬಿಸಿಸಿಗೆ ಸುಧಾರಣೆ ತರಲು ಲೋಧಾ ಸಮಿತಿಯನ್ನು ನೇಮಿಸಿತ್ತು. ಇದಾದ ಬಳಿಕ ಲೋಧಾ ಸಮಿತಿ ತನ್ನು ಶಿಫಾರಸ್ಸುಗಳನ್ನು ಸಲ್ಲಿಸಿತ್ತು. ಈ ಎಲ್ಲಾ ಶಿಫಾರಸ್ಸುಗಳ ಜಾರಿ ಮಾಡುವಂತೆ ಸುಪ್ರಿಂ ಕೋರ್ಟ್ ಖಡಾಖಂಡಿತವಾಗಿ ಹೇಳಿತ್ತು. ಆದರೆ ಇದನ್ನು ನಿರ್ಲಕ್ಷಿಸಿರುವ ಸಚಿವ ಅನುರಾಗ್ ಠಾಕೂರ್ ಅಧ್ಯಕ್ಷತೆಯ ಬಿಸಿಸಿಐ ಕೋರ್ಟ್ ತೀರ್ಪಿಗೆ ಮಣೆ ಹಾಕುತ್ತಿಲ್ಲ. ಕಳೆದ ತಿಂಗಳು ಡಿಸೆಂಬರ್ 3ರ ಒಳಗೆ ಎಲ್ಲಾ ರಾಜ್ಯ ಘಟಕಗಳು ಮತ್ತು ಬಿಸಿಸಿಐ, ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ ಗಡುವು ನೀಡಿತ್ತು. ಇದರಲ್ಲಿ ಇತ್ತೀಚೆಗೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಮಾತ್ರ ಲೋ‍ಧಾ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪಿಕೊಂಡಿದೆ.

ಚಿತ್ರ ಕೃಪೆ: ರಾಯ್ಟರ್ಸ್, ದಿ ಕ್ವಿಂಟ್

Leave a comment

FOOT PRINT

Top