An unconventional News Portal.

128 ಕೋಟಿಗೆ ಬ್ಯಾಕ್ ತೋರಿಸಿದ ‘ಯಶಸ್ವಿ ಉದ್ಯಮಿ’: ಇದು ಕ್ಯಾಪ್ಟನ್ ಗೋಪಿನಾಥ್ ‘ಎಕಾನಾಮಿಕ್ಸ್’!

128 ಕೋಟಿಗೆ ಬ್ಯಾಕ್ ತೋರಿಸಿದ ‘ಯಶಸ್ವಿ ಉದ್ಯಮಿ’: ಇದು ಕ್ಯಾಪ್ಟನ್ ಗೋಪಿನಾಥ್ ‘ಎಕಾನಾಮಿಕ್ಸ್’!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್’ಬಿಐ) 7,016 ಕೋಟಿ ಸಾಲವನ್ನು ತನ್ನ ಬ್ಯಾಲೆನ್ಸ್ ಶೀಟಿನಿಂದ ತೆಗೆದು ಹಾಕುವ ಮೂಲಕ ಬುಧವಾರ ಪರೋಕ್ಷವಾಗಿ 63 ‘ಉದ್ದೇಶಪೂರ್ವಕ ಸುಸ್ತಿದಾರ’ರಿಗೆ ಸಾಲ ಮನ್ನಾ ಭಾಗ್ಯವನ್ನು ಕರುಣಿಸಿದೆ.

ಈ ಪಟ್ಟಿಯಲ್ಲಿ 1,201 ಕೋಟಿ ಬಾಕಿ ಉಳಿಸಿಕೊಂಡಿದ್ದ ‘ಕಿಂಗ್ ಫಿಷರ್ ಏರ್ಲೈನ್ಸ್’ ವಿಜಯ್ ಮಲ್ಯ ಜತೆ ಮತ್ತೊಬ್ಬರು ಕನ್ನಡಿಗರಿದ್ದಾರೆ. ಅವರೇ ‘ವಿಮಾನಯಾನದ ಪ್ರವರ್ತಕ’ ಬಿರುದಾಂಕಿತ ಗೊರೂರು ರಾಮಸ್ವಾಮಿ ಗೋಪಿನಾಥ್ ಅಲಿಯಾಸ್ ಕ್ಯಾಪ್ಟನ್ ಗೋಪಿನಾಥ್.

ಕ್ಯಾಪ್ಟನ್ ಗೋಪಿನಾಥ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ‘ಡೆಕ್ಕನ್ ಕಾರ್ಗೋ ಆ್ಯಂಡ್ ಎಕ್ಸ್ ಪ್ರೆಸ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್’ ಎಸ್’ಬಿಐಗೆ 128.28 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿತ್ತು. ಸಂಸ್ಥೆ ಇದನ್ನು ಕಟ್ಟಿರಲೇ ಇಲ್ಲ. ಈ ಸಾಲವನ್ನು ಬ್ಯಾಂಕ್ ‘ಉದ್ದೇಶಪೂರ್ವಕ ಸುಸ್ತಿದಾರ’ರ ಪಟ್ಟಿಗೆ ಸೇರಿಸಿತ್ತು. ಈ ಹಿನ್ನಲೆಯಲ್ಲಿ ಬುಧವಾರ ಬ್ಯಾಂಕ್ ಈ ಸಾಲವನ್ನೂ ತನ್ನ ಬ್ಯಾಲೆನ್ಸ್ ಶೀಟಿನಿಂದ ತೆಗೆದು ಹಾಕಿದೆ. ಈ ಮೂಲಕ ಮತ್ತೊಬ್ಬ ಕನ್ನಡ ಮೂಲಕ ಉದ್ಯಮಿಯನ್ನು ತನ್ನ ಕಳಪೆ ಸಾಲದಾರರ ಪಟ್ಟಿಯಿಂದ ಕೈ ಬಿಟ್ಟಿದೆ.

ಕೃಷಿಕ ಗೋಪಿನಾಥ್:

Captain Gopinath

ಕ್ಯಾಪ್ಟನ್ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನವರು. ಅವರ ತಂದೆ ಕನ್ನಡ ಶಾಲೆಯ ಮೇಷ್ಟ್ರು. ಗೋಪಿನಾಥ್ ಕೂಡ ಅದೇ ಹಳ್ಳಿಯಲ್ಲಿ ಓದಿ, ಹೈಸ್ಕೂಲು ಶಿಕ್ಷಣ ವಿಜಯಪುರದ ಸೈನಿಕ ಶಾಲೆಯಲ್ಲಿ ಪಡೆದರು. ಆನಂತರ ಪುಣೆಯ ಖಡಕ್ ವಾಸ್ಲಾದಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿ ಅಲ್ಲಿ ತರಬೇತಿ ಪಡೆದು, ಭಾರತೀಯ ಸೇನೆಯನ್ನು ಸೇರಿದರು. ಅಲ್ಲಿ ಕ್ಯಾಪ್ಟನ್ ಹುದ್ದೆಗೆ ಏರಿ, ನಂತರ ಸೇನೆಗೆ ರಾಜೀನಾಮೆ ನೀಡಿ ಮನೆಗೆ ಬಂದುಬಿಟ್ಟರು.

ಬಂದವರು ಕೃಷಿ ಮಾಡುತ್ತಾ ದಿನ ದೂಡುತ್ತಿದ್ದರು. ರೇಷ್ಮೆ ಸಾಕಾಣಿಕೆಯಲ್ಲಿ ಸಾಕಷ್ಟು ಪ್ರಯೋಗ ಮಾಡಿದರು. ಕರ್ನಾಟಕದ ಪ್ರಗತಿಪರ ಕೃಷಿಕ ಎಂದು ಪ್ರಶಸ್ತಿಗಳನ್ನು ಬಾಚಿಕೊಂಡರು. ಈ ವೇಳೆಗೆ ಹಲವು ಉದ್ಯಮಗಳಲ್ಲೂ ಅವರು ಕೈಯಾಡಿಸಿದ್ದರು. ಮದರಾಸಿಗೆ ಹೋಗಿ ಎನ್‌ಫೀಲ್ಡ್ ಬುಲೆಟ್ ಬೈಕ್ ಕಂಪನಿಯ ಡೀಲರ್‌ಶಿಪ್ ತೆಗೆದುಕೊಂಡರು. `ಯಗಚಿ ಟಿಫಿನ್ಸ್’ ಹೆಸರಿನಲ್ಲಿ ಹೋಟೆಲನ್ನು ಸ್ಥಾಪಿಸಿದರು. ಡೇರಿ ಮಾಡಿದರು. ಕೋಳಿ ಫಾರ್ಮ್ ಶುರುಮಾಡಿದರು. ತೆಂಗಿನ ಮಂಡಿ ಇಟ್ಟರು. ಸ್ಟಾಕ್ ಬ್ರೋಕರ್ ಆದರು. ನೀರಾವರಿ ಪಂಪ್‌ಸೆಟ್‌ಗಳ ಡೀಲರ್ ಆದರು. ಸಾವಯವ ಕೃಷಿಯಲ್ಲಿ ವ್ಯವಸಾಯ ಮಾಡಿದರು. ಕೈತೋಟ ವಿನ್ಯಾಸಕಾರರಾದರು. ಕೃಷಿ ಸಲಹಾ ಕೇಂದ್ರ ತೆರೆದರು. ಹಾಸನ ಬಿಜೆಪಿ ಜಿಲ್ಲಾ ಅಧ್ಯಕ್ಷರಾದರು. ಗಂಡಸಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತರು. ಹೀಗೆ ಅವರ ಬದುಕಿನ ಪಯಣ ಮುಂದುವರಿದಿತ್ತು.

‘ಡೆಕ್ಕನ್’ ಸಂಸ್ಥಾಪಕ:

ಆ ನಂತರ ಬೆಂಗಳೂರಿಗೆ ತಮ್ಮ ಕಾರ್ಯಕ್ಷೇತ್ರವನ್ನು ಬದಲಿಸಿದ ಗೋಪಿನಾಥ್, 1997ರಲ್ಲಿ ‘ಡೆಕ್ಕನ್ ಹೆಲಿಕಾಪ್ಟರ್’ ಸಂಸ್ಥೆಯನ್ನು ಸ್ಥಾಪಿಸಿದರು. ಬಳಿಕ 2003ರಲ್ಲಿ `ಏರ್ ಡೆಕ್ಕನ್’ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿದರು. ಅವತ್ತಿಗೆ ಪ್ರಗತಿಪರ ರೈತನೊಬ್ಬ ಹೆಲಿಕಾಪ್ಟರ್ ಸಂಸ್ಥೆ ಆರಂಭಿಸಿದ್ದೇ ಒಂದು ಅದ್ಭುತ ಸಾಹಸವಾಗಿತ್ತು. ವಿಮಾನಯಾನ ಸಂಸ್ಥೆ ಸ್ಥಾಪಿಸಿದ್ದಂತೂ ಭಾರತದ ವೈಮಾನಿಕ ಇತಿಹಾಸದಲ್ಲಿ ಒಂದು ಅಪೂರ್ವ ಮೈಲಿಗಲ್ಲು ಎಂದೇ ಬಿಂಬಿತವಾಗಿತ್ತು. “ಹೆಲಿಕಾಪ್ಟರ್ ಹಾಗೂ ವಿಮಾನಯಾನ ಸಂಸ್ಥೆ ಆರಂಭಿಸುವಾಗ ನೂರಾರು, ಸಾವಿರಾರು ಕೋಟಿ ರೂ. ಬಂಡವಾಳ ಬೇಕು. ಆದರೆ ಸ್ವಂತ ವ್ಯಕ್ತಿತ್ವ ಹಾಗೂ ಛಲವನ್ನೇ ಬಂಡವಾಳವಾಗಿಸಿಕೊಂಡು ಅವರು ಬೆಳೆದ ಪರಿ ಎಂಥವರಿಗೂ ಮಾದರಿ” ಎಂದು ಇವತ್ತಿನ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ಟರು ಬರೆದಿದ್ದರು.

ಆ ಮಾದರಿ ಇವತ್ತು ಸಾರ್ವಜನಿಕ ಬ್ಯಾಂಕ್ ಸಾಲ ಅರ್ಥಾತ್ ಜನರ ತೆರಿಗೆ ಹಣಕ್ಕೆ ಎಳ್ಳು ನೀರು ಬಿಡುವ ಮಾಡೆಲ್ ಆಗಿದೆ ಎಂಬುದು ವಿಪರ್ಯಾಸ.

2007ರಲ್ಲಿ ‘ಏರ್‌ ಡೆಕ್ಕನ್’ ಮಲ್ಯ ಒಡೆತನದ ‘ಕಿಂಗ್ ಫಿಷರ್ ಏರ್ಲೈನ್ಸ್’ನಲ್ಲಿ ವಿಲೀನವಾಯಿತು. ಇದರಿಂದ ಸಿಕ್ಕ ದೊಡ್ಡ ಮೊತ್ತ ಎತ್ತಿಕೊಂಡು ಗೋಪಿನಾಥ್ ‘ಡೆಕ್ಕನ್ 360’ (ಡೆಕ್ಕನ್ ಕಾರ್ಗೋ ಆ್ಯಂಡ್ ಎಕ್ಸ್ ಪ್ರೆಸ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್) ಆರಂಭಿಸಿದರು. ವಿಮಾನದ ಮೂಲಕ ಪಾರ್ಸಲ್ ಸೇವೆ ನೀಡುವ ಕಂಪೆನಿ ಇದಾಗಿತ್ತು. ಜತೆಗೆ ಡೆಕ್ಕನ್ ಚಾರ್ಟರ್ಸ್, ಡೆಕ್ಕನ್ ಶೆಟಲ್ಸ್ ಕೂಡಾ ಆರಂಭವಾಯಿತು.

vijay_mallya_and_captain_gopinath

ಮಲ್ಯ ಮತ್ತು ಗೋಪಿನಾಥ್ ಜೋಡಿ.

ಯಶಸ್ವಿ ಉದ್ಯಮಿಯ ಅಸಲಿ ಕತೆ:

24 ಆಗಸ್ಟ್ 2007ರಲ್ಲಿ ಡೆಕ್ಕನ್ ಕಂಪೆನಿ ಆರಂಭವಾಯಿತು. ಸುಮಾರು 120 ಕೋಟಿ ಮೊತ್ತದಲ್ಲಿ ಕಂಪೆನಿ ಆರಂಭವಾಗಿತ್ತು. ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್ ಕಚೇರಿಯ ಮುಂಭಾಗದ ಎಂಬೆಸಿ ಸ್ಕ್ವೇರ್’ನಲ್ಲಿ ಇದರ ಕಚೇರಿ ಇತ್ತು. ಗೋಪಿನಾಥ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದರೆ, ನಿರ್ದೇಶಕರಾಗಿ ಕೆ.ಜೆ.ಸ್ಯಾಮುಯೆಲ್, ಸಂಜಯ್ ಶಾಮರಾವ್ ಕುಲಕರ್ಣಿ ಹಾಗೂ ತರುಣ್ ಕುಮಾರ್ ಝುಂಝುನ್ವಾಲ ಇದ್ದರು.

ಕಂಪೆನಿ ಸರಕಾರಿ ಸ್ವಾಮ್ಯದ ಎಸ್’ಬಿಐ ನಿಂದ 211 ಕೋಟಿ ಸಾಲ ಪಡೆಯಿತು. ಆದರೆ ಸಾಲ ಕಟ್ಟಲಾಗಲಿಲ್ಲ. ಗೋಪಿನಾಥ್ ಕಂಪೆನಿಯನ್ನೂ ಸರಿಯಾಗಿ ನಡೆಸಲಿಲ್ಲ. ಆರ್ಡರ್ ಕ್ಯಾನ್ಸಲ್, ಬ್ಯಾಗುಗಳು ಕಾಣೆಯಾಗುವುದು, ಸಮಯಕ್ಕೆ ಸರಿಯಾಗಿ ಪಾರ್ಸೆಲ್ ಬರದೇ ಇರುವುದು ಹೀಗೆ ಡೆಕ್ಕನ್ ಮೇಲೆ ಸರಣಿ ಆರೋಪಗಳು ಕೇಳಿ ಬಂದವು.

ಆದರೆ ಇಲ್ಲಿ ಕರ್ನಾಟಕದಲ್ಲಿ ಅವರೊಬ್ಬ ಯಶಸ್ವೀ ಉದ್ಯಮಿ ಎಂದು ಅದಾಗಲೇ ಬಿಂಬಿತವಾಗಿತ್ತು. ಈ ಅವಧಿಯಲ್ಲಿ ಕ್ಯಾಪ್ಟನ್ ಗೋಪಿನಾಥ್ ತಮ್ಮ ‘Simply Fly: A Deccan Odyssey’ ಆತ್ಮ ಚರಿತ್ರೆಯನ್ನೂ ಬರೆದರು. ಇದನ್ನು ಕನ್ನಡದ ಹಿರಿಯ ಪತ್ರಕರ್ತ ವಿಶ್ವೇಶ್ವರ್ ಭಟ್ ‘ಬಾನಯಾನ’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ಮಾರುಕಟ್ಟೆಗೆ ಬಿಟ್ಟರು. ಹಳ್ಳಿ ರೈತನಾಗಿ ವಿಮಾನಯಾನ ಕಂಪನಿ ಕಟ್ಟಿದ ಗೋಪಿನಾಥ್ ಕತೆ ಭರ್ಜರಿ ಮಾರಾಟ ಕಂಡಿತು.

ತಮ್ಮ ಜನಪ್ರಿಯತೆ ಬೆನ್ನಿಗಿಟ್ಟುಕೊಂಡು ಬೆಂಗಳೂರಿನಲ್ಲಿ 2009ರಲ್ಲಿ ಅನಂತ್ ಕುಮಾರ್ ವಿರುದ್ಧ ಲೋಕ ಸಭೆ ಚುನಾವಣೆಗೂ ಧುಮುಕಿದರು ಗೋಪಿನಾಥ್. ಮುಂದೆ 2014ರಲ್ಲಿ ಆಮ್ ಆದ್ಮಿ ಪಕ್ಷ ಸೇರಿ ಮತ್ತೆ ಅನಂತ್ ಕುಮಾರ್, ನಂದನ್ ನೀಲೇಕಣಿ ವಿರುದ್ದ ಅಖಾಡಕ್ಕೆ ಇಳಿದರು. ಆದರೆ ಸೋಲಾಯಿತು. ಅಂತಿಮವಾಗಿ ಎಎಪಿಯಿಂದಲೂ ಕಾಲ್ಕಿತ್ತರು.

ಇದರ ಮಧ್ಯೆ 2012ರಲ್ಲಿ ಅವತ್ತಿನ ಬಿಜೆಪಿ ಸರಕಾರ, ಕೈಗಾರಿಕೋದ್ಯಮಿಗಳಿಗೆ ಸಹಕಾರಿಯಾಗುವ ಉದ್ದೇಶಕ್ಕಾಗಿ ರಾಜ್ಯದ ಎರಡನೇ ಹಂತದ ನಗರಗಳಿಗೆ ವಿಮಾನ ಹಾರಾಟ ಕಲ್ಪಿಸಲು ಗೋಪಿನಾಥ್ ಜತೆ ಒಪ್ಪಂದ ಮಾಡಿಕೊಂಡಿತು.

ಕ್ಯಾಪ್ಟನ್ ಗೋಪಿನಾಥ್ ಕುಸಿತ:

captain-gopinath

ಅಷ್ಟೊತ್ತಿಗಾಗಲೇ ಮರಳಿನ ಮೇಲೆ ಕಟ್ಟಿದ ಗೋಪಿನಾಥ್ ಸಾಮ್ರಾಜ್ಯದ ಕುಸಿತ ಆರಂಭವಾಗಿತ್ತು. ಸಾಲ ಮರು ಪಾವತಿಯಾಗಿರಲಿಲ್ಲ. ಬ್ಯಾಂಕ್ ಮೇಲಿಂದ ಮೇಲೆ ನೋಟಿಸ್ ನೀಡುತ್ತಿತ್ತು. ಕೊನೆಗೊಂದು ದಿನ ಕಂಪೆನಿ ಮುಚ್ಚಿ ಹೋಯಿತು. ಇತ್ತ ದುಬೈ ಮೂಲದ ‘ಯುನೈಟೆಡ್ ಏವಿಯೇಷನ್ ಸರ್ವೀಸ್’ ಮತ್ತು ‘ಪಟೇಲ್ ಇಂಟೆಗ್ರೇಟೆಡ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿ.’ ಕಂಪೆನಿಗಳು ತಮಗೆ ಡೆಕ್ಕನ್ ಕಂಪೆನಿಯಿಂದ ಬರಬೇಕಾದ ಹಣ ಬಂದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದವು. ಜುಲೈ 2013ರಲ್ಲಿ ಡೆಕ್ಕನ್ ಸಂಸ್ಥೆಗೆ ಹಣ ಪಾವತಿಸುವಂತೆ ಹೈಕೋರ್ಟ್ ಆದೇಶ ನೀಡಿತು. ಅಷ್ಟೊತ್ತಿಗೆ ಎಲ್ಲಾ ಮುಗಿದಿತ್ತು. ಹೀಗೆ ಡೆಕ್ಕನ್ ಸಾಮ್ರಾಜ್ಯ ಆಗಸದಲ್ಲೆ ಪತನವಾಯಿತು.

ನಂತರ ಟಪಿಕಲ್ ಅರ್ಥಶಾಸ್ತ್ರಜ್ಞರಂತೆ ಬಂದು ಗೋಪಿನಾಥ್ ‘ಅರ್ಥ ವಿಚಾರ’ ಎಂಬ ಅಂಕಣವನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಜನರಿಗೆಲ್ಲಾ ಬುದ್ಧಿವಾದ ಹೇಳುತ್ತಿದ್ದರು. ಅದೇ ಗೋಪಿನಾಥ್ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ಗೆ 128.28 ಕೋಟಿ ಬಾಕಿ ಉಳಿಸಿಕೊಂಡಿದ್ದರು. ಬ್ಯಾಂಕ್ ಸಾಲಕ್ಕೆ ಬದಲಾಗಿ ಜಪ್ತಿ ಮಾಡಲು ಆಸ್ತಿಯೂ ಇಲ್ಲದೆ, ಕೊನೆಗೆ ಬುಧವಾರ ಅನಿವಾರ್ಯವಾಗಿ ಗೋಪಿನಾಥ್ ಕಂಪೆನಿಯ ಸಾಲವನ್ನು ತನ್ನ ಬ್ಯಾಲೆನ್ಸ್ ಶೀಟಿನಿಂದ ಕೈ ಬಿಟ್ಟಿದೆ.

ವಿಚಿತ್ರ ಎಂದರೆ ಯಾವ ‘ಕಿಂಗ್ ಫಿಷರ್ ಏರ್ಲೈನ್ಸ್’ ಜತೆ ಗೋಪಿನಾಥ್ ತಮ್ಮ ಕಂಪೆನಿಯನ್ನು ವಿಲೀನ ಮಾಡಿಕೊಂಡರೋ, ಅದೇ ಕಂಪೆನಿ ಉದ್ದೇಶ ಪೂರ್ವಕ ಸುಸ್ತಿದಾರ ಪಟ್ಟಿಯ ಮೊದಲ ಸ್ಥಾನದಲ್ಲಿದೆ. ಒಂದೇ ವ್ಯತ್ಯಾಸ ಎಂದರೆ ಮಲ್ಯ ವಿದೇಶಕ್ಕೆ ಓಡಿ ಹೋಗಿದ್ದಾರೆ; ಗೋಪಿನಾಥ್ ಇಲ್ಲೇ ದೇಶದಲ್ಲಿ ತಿರುಗಾಡುತ್ತಿದ್ದಾರೆ.

ಇದು ಸೋ ಕಾಲ್ಡ್ ಯಶಸ್ವಿ, ಮಾದರಿ ಉದ್ಯಮಿಯ ನೈಜ ಕತೆ. ಅಂದ ಹಾಗೆ 2014ರಲ್ಲಿ ಬೆಂಗಳೂರಿನಲ್ಲಿ ಲೋಕ ಚುನಾವಣೆಗೆ ನಿಂತಾಗ ಗೋಪಿನಾಥ್ ಘೋಷಿಸಿಕೊಂಡ ಅವರ ಆಸ್ತಿಯ ಮೊತ್ತ ಜಸ್ಟ್ 69 ಕೋಟಿ. ಅದನ್ನು ಬ್ಯಾಂಕ್ ಸಾಲಕ್ಕೆ ಜಪ್ತಿ ಮಾಡಿಕೊಂಡಿಲ್ಲ ಎಂಬುದು ಮಾಹಿತಿ.

ಅಂದಹಾಗೆ, ನೋಟು ಬದಲಾವಣೆ ಗಡಿಬಿಡಯ ನಡುವೆಯೇ ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳಪೆ ಸಾಲ ಎಂದು ವಸೂಲಾತಿಯನ್ನು ಕೈ ಬಿಟ್ಟ ಉದ್ಯಮಿಗಳು ಸಾಲದ ಮೊತ್ತದ ಪಟ್ಟಿ ಹೀಗಿದೆ:

ಕೃಪೆ: ಡಿಎನ್ಎ.

ಕೃಪೆ: ಡಿಎನ್ಎ.

ಚಿತ್ರ ಕೃಪೆ: ರೊಲೆಕ್ಸ್ ಅವಾರ್ಡ್ ಬ್ಲಾಗ್, ದಿ ಹಿಂದೂ, ಫೋರ್ಬ್ಸ್ ಇಂಡಿಯಾ, ಡಿಎನ್ಎ.

Leave a comment

FOOT PRINT

Top