An unconventional News Portal.

ಅಧ್ಯಕ್ಷರಾಗುವ ಮೊದಲೇ ಕುಟುಂಬ ಸದಸ್ಯರ ಹಸ್ತಕ್ಷೇಪ: ಮೂವರು ಹೆಂಡತಿಯರ ಮುದ್ದಿನ ಗಂಡ ಡೊನಾಲ್ಡ್ ಟ್ರಂಪ್ ಹೊಸ ವಿವಾದ!

ಅಧ್ಯಕ್ಷರಾಗುವ ಮೊದಲೇ ಕುಟುಂಬ ಸದಸ್ಯರ ಹಸ್ತಕ್ಷೇಪ: ಮೂವರು ಹೆಂಡತಿಯರ ಮುದ್ದಿನ ಗಂಡ ಡೊನಾಲ್ಡ್ ಟ್ರಂಪ್ ಹೊಸ ವಿವಾದ!

ಡೊನಾಲ್ಡ್ ಟ್ರಂಪ್ ಶ್ವೇತ ಭವನ ಪ್ರವೇಶಿಸುತ್ತಿದ್ದಂತೆ, ರಿಪಬ್ಲಿಕನ್ ಪಕ್ಷದ ನಾಯಕ ಮತ್ತು ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ರೋಜರ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆಗೆ ಅವರು ಯಾವುದೇ ವಿವರಣೆ ನೀಡಿಲ್ಲ. ಅವರ ಅನಿರೀಕ್ಷಿತ ನಿರ್ಗಮನದ ಸುತ್ತ ಟ್ರಂಪ್ ಮೂವರು ಮಕ್ಕಳು ಮತ್ತು ಅಳಿಯನ ಪಾತ್ರದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ಆದರೆ ಇದನ್ನು ನಿರಾಕರಿಸಿರುವ ‘ಮೂವರು ಹೆಂಡತಿಯರ ಮುದ್ದಿನ ಗಂಡ’, ಡೊನಾಲ್ಡ್ ಟ್ರಂಪ್ ಇದೊಂದು ‘ವ್ಯವಸ್ಥಿತ ರಾಜೀನಾಮೆ’ ಎಂದು ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಟ್ರಂಪ್ ಗೆ ಒಟ್ಟು ಐವರು ಮಕ್ಕಳು.

ಹೀಗೆ ಅಧಿಕಾರಕ್ಕೆ ಏರುವ ಮೊದಲೇ ಟ್ರಂಪ್ ವಿರುದ್ಧ ಆತನ ಕುಟುಂಬದವರು ಅಧಿಕಾರ ದುರ್ಬಳಕೆ ಮಾಡಿದ ಆರೋಪ ಕೇಳಿ ಬಂದಿದೆ.

ಮೂವರು ಹೆಂಡಂದಿರ ಗಂಡ:

ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ‘ರಿಂಗ್’ ಬದಲಾಯಿಸಿದ್ದು ನ್ಯೂಯಾರ್ಕ್‍ನ ಜನಪ್ರಿಯ ಮಾಡೆಲ್ ಇವಾನಾ ವಿಂಕಲ್‍ಮೈರ್‍ ಜತೆ; 1977ರಲ್ಲಿ ಈ ಮದುವೆ ನಡೆಯಿತು. ಈ ದಂಪತಿಗಳಿಗೆ ಮೂರು ಮಕ್ಕಳು ಹುಟ್ಟಿದರು. ಇವಾಂಕ, ಎರಿಕ್ ಮತ್ತು ಡೊನಾಲ್ಡ್ ಟ್ರಂಪ್ ಜೂನಿಯರ್.

ಡೊನಾಲ್ಡ್ ಟ್ರಂಪ್ ಫ್ಯಾಮಿಲಿ ಫೊಟೋ

ಡೊನಾಲ್ಡ್ ಟ್ರಂಪ್ ಫ್ಯಾಮಿಲಿ ಫೊಟೋ

ಇವತ್ತಿಗೆ ಟ್ರಂಪ್ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವವರು ಡೊನಾಲ್ಡ್ ಟ್ರಂಪ್ ಜೂನಿಯರ್; ಟ್ರಂಪ್ ಬಿಸಿನೆಸ್ ಸಾಮ್ರಾಜ್ಯವನ್ನು ಮುನ್ನಡೆಸುತ್ತಿರುವುದು ಇವರೇ.

ಟ್ರಂಪ್ ಮಗಳು ಇವನ್ಕಾ ಟ್ರಂಪ್ ಕೂಡಾ ಅಮ್ಮನ ಹಾದಿಯಲ್ಲಿ ಮಾಡೆಲ್ ಕ್ಷೇತ್ರದಲ್ಲಿ ಒಂದಷ್ಟು ಕೈಯಾಡಿಸಿದವರು. ಈಗ ಸಣ್ಣ ಉದ್ಯಮ ಸಾಮ್ರಾಜ್ಯ ನಡೆಸುತ್ತಿದ್ದಾರೆ.

ಇನ್ನೊಬ್ಬ ಮಗ ಎರಿಕ್ ಟ್ರಂಪ್; ಅರ್ಥಶಾಸ್ತ್ರ ಮತ್ತ ವಾಣಿಜ್ಯ ಅಧ್ಯಯನ ಮಾಡಿರುವ ಇವರು ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ಎನ್’ಜಿಒ ನಡೆಸುತ್ತಾರೆ. ಬಿಸಿನೆಸ್ ಮೊದಲಾದ ಕೆಲಸದಿಂದ ಮಾರು ದೂರ ಉಳಿದಿರುವ ಇವರಿಗೆ ಸೇವೆಯ ಮೇಲೆಯೇ ಹೆಚ್ಚಿನ ಆಸಕ್ತಿ. 1977ರಲ್ಲಿ ಮದುವೆಯಾದ ಮೇಲೆ ಟ್ರಂಪ್ ಖ್ಯಾತಿ ಮತ್ತಷ್ಟು ಹೆಚ್ಚಾಯಿತು. ಉದ್ಯಮ ಸಾಮ್ರಾಜ್ಯದ ಅಧಿಪತಿಯಾಗಿ ಟ್ರಂಪ್ ಮೂಡಿ ಬಂದರು.

ಅದು 1990; ಅಮೆರಿಕಾದಲ್ಲಿ ಆರ್ಥಿಕ ಕುಸಿತ ಆರಂಭವಾಗಿತ್ತು. ನಿಧಾನವಾಗಿ ರಿಯಲ್ ಎಸ್ಟೇಟ್ ವಲಯದಲ್ಲಿ ತಲ್ಲಣಗಳು ಕಾಣಿಸಿಕೊಂಡವು. ಡೊನಾಲ್ಡ್ ಟ್ರಂಪ್‍ ಆಸ್ತಿಗಳ ಮೌಲ್ಯ ನಾಲ್ಕು ಪಟ್ಟು ಕುಸಿದು ಬಿತ್ತು. ಬ್ಯಾಂಕ್‍ಗಳ ಸಾಲ ಕಟ್ಟಲಾಗದೆ ಹಲವು ಬಿಲ್ಡಿಂಗ್‍ಗಳನ್ನು ಅವತ್ತು ಟ್ರಂಪ್ ಕಳೆದುಕೊಳ್ಳಬೇಕಾಯಿತು. ಅದೇ ಒತ್ತಿಗೆ ಟ್ರಂಪ್‍ ವೈವಾಹಿಕ ಬದುಕೂ ಹದಗೆಟ್ಟಿತು. 1992ರಲ್ಲಿ ಇವಾನಗೆ ಟ್ರಂಪ್ ವಿಚ್ಚೇದನ ನೀಡಿದರು.

ಅಷ್ಟೊತ್ತಿಗಾಗಲೇ ಮಾಜಿ ಬ್ಯೂಟಿ ಕ್ವೀನ್, ನಟಿ ಮಾರ್ಲಾ ಮ್ಯಾಪಲ್‍ ಜತೆ ಟ್ರಂಪ್ ಸಂಬಂಧ ಕುದುರಿತ್ತು. 1993ರಲ್ಲಿ ಮಾರ್ಲಾ ವರಿಸಿದರು ಟ್ರಂಪ್. ಈ ದಂಪತಿಗಳಿಗೆ ಟಿಫ್ಫಾನಿ ಎಂಬ ಮಗಳು ಹುಟ್ಟಿದಳು. ಅಮೆರಿಕಾದ ಭಾವಿ ಅಧ್ಯಕ್ಷರ ಇನ್ನೊಬ್ಬ ಮಗಳು ಟಿಫ್ಫಾನಿ ಟ್ರಂಪ್ ಸದ್ಯ ವೋಗ್ ಮ್ಯಾಗಜೀನಿನಲ್ಲಿ ಇಂಟರ್ನಿಯಾಗಿದ್ದಾರೆ. ಇವರಿಗೂ ಫ್ಯಾಷನ್ ಲೋಕದತ್ತ ಒಲವು ಜಾಸ್ತಿ. ಪಾಪ್ ಹಾಡುಗಳೆಂದರೆ ಈಕೆಗೆ ಅಚ್ಚು ಮೆಚ್ಚು.

ಮಗಳು ಹುಟ್ಟಿದರೂ, ಟ್ರಂಪ್ ಎರಡನೇ ಮದುವೆಯೂ ಬಾಳಿದ್ದು ನಾಲ್ಕು ವರ್ಷ ಮಾತ್ರ.

ಅಮೆರಿಕಾ ‘ಪ್ರಥಮ ಮಹಿಳೆ’ಯ ಮದುವೆಯ ಕತೆ!

ಮಾರ್ಲಾ ಮ್ಯಾಪಲ್ ಜತೆ‍ ಇದ್ದಾಗಲೇ 1998ರಲ್ಲೇ ಸೂಪರ್ ಮಾಡೆಲ್ ಮೆಲಾನಿಯಾ ಕ್ನಾಸ್ ಜತೆ ಟ್ರಂಪ್ ಕದ್ದು ಮುಚ್ಚಿ ಡೇಟಿಂಗ್ ಆರಂಭಿಸಿದ್ದರು. ಇದು ಮಾರ್ಲಾ ಜತೆ ಮುನಿಸಿಗೆ ಕಾರಣವಾಯಿತು. ಟ್ರಂಪ್-ಮ್ಯಾಪಲ್ ವಿಚ್ಛೇದನದ ಹಾದಿ ತುಳಿದರು.

ಅಮೆರಿಕಾದ ಮುಂದಿನ 'ಪ್ರಥಮ ಮಹಿಳೆ' ಮೆಲೆನಿಯಾ ಟ್ರಂಪ್

ಅಮೆರಿಕಾದ ‘ಪ್ರಥಮ ಮಹಿಳೆ’ ಮೆಲೆನಿಯಾ ಟ್ರಂಪ್.

ಕೊನೆಗೆ ಮೆಲಾನಿಯಾ ಕ್ನಾಸ್ ಜತೆಗಿನ ಅನೈತಿಕ ಸಂಬಂಧಕ್ಕೆ 2005ರಲ್ಲಿ ಬ್ರೇಕ್ ಹಾಕಿ ಆಕೆಯನ್ನೇ ಟ್ರಂಪ್ ವರಿಸಿದರು. ಆಗ ಆಕೆಗೆ 46 ವರ್ಷ ವಯಸ್ಸು. ಡೊನಾಲ್ಡ್ ಟ್ರಂಪ್ ಮೊದಲ ಮಗನಿಗೆ ಆಗ 38 ವರ್ಷ; ಸರಿ ಸುಮಾರು ಮಗನ ವಯಸ್ಸಿನವಳನ್ನೇ ಟ್ರಂಪ್ ಹೆಂಡತಿಯನ್ನಾಗಿ ಮಾಡಿಕೊಂಡಿದ್ದರು. 2006ರಲ್ಲಿ ಇವರಿಗೆ ಬ್ಯಾರನ್ ಹೆಸರಿನ ಮಗ ಹುಟ್ಟಿದ.

ಮದುವೆ ಆದ ನಂತರ ಮೆಲಾನಿಯಾ ತಮ್ಮ ಹೆಸರನ್ನು ಮೆಲಾನಿಯಾ ಟ್ರಂಪ್ ಎಂದು ಬದಲಿಸಿದರು. ಈಕೆಯೀಗ ಅಮೆರಿಕಾದ ಪ್ರಥಮ ಮಹಿಳೆ. ಈಕೆ ಮಾಡೆಲ್ ಆಗಿದ್ದಾಗ ಬೆತ್ತಲೆ ಫೋಟೋಶೂಟ್ ಮಾಡಿಸಿಕೊಂಡಿದ್ದರು. ‘ನ್ಯೂಡ್ ಪೋಸ್’ ನೀಡಿದ ಅಮೆರಿಕಾದ ಮೊತ್ತ ಮೊದಲ ‘ಪ್ರಥಮ ಮಹಿಳೆ’ ಎಂಬ ವಿಶೇಷ ಕೀರ್ತಿಗೆ ಈಕೆ ಭಾಜನರಾಗಿದ್ದಾರೆ.

ಈಕೆಯ ಚಿತ್ರಗಳನ್ನು ವಾಟ್ಸಾಪ್ನಲ್ಲಿ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇತ್ ನೋಡುತ್ತಿದ್ದರು ಎಂಬ ಆರೋಪ ಇತ್ತೀಚಿಗೆ ಕೇಳಿ ಬಂದಿತ್ತು.

ಈಕೆಗೆ ಫ್ಯಾಷನ್ ಎಂದರೆ ಅಚ್ಚುಮೆಚ್ಚು. ಬರೆದು ಭಾಷಣ ಓದುವುದು ಎಂದರೆ ಅಲರ್ಜಿ. ಇವರಿಗೆ ಒಬ್ಬ ಮಗನಿದ್ದಾನೆ; ಬ್ಯಾರನ್ ಟ್ರಂಪ್. ತಂದೆ ಜತೆಗೆ ಗಾಲ್ಫ್ ಆಡುವುದು ಈತನ ಮೆಚ್ಚಿನ ಹವ್ಯಾಸ.

ಇವಿಷ್ಟು ಅಮೆರಿಕಾದ ಭಾವಿ ಅಧ್ಯಕ್ಷರ ಕೌಟುಂಬಿಕ ವಿವರಗಳು. ಅಧ್ಯಕ್ಷರಾಗುವ ಮೊದಲೇ ಅವರ ಕುಟುಂಬದ ಮೇಲೆ ರಾಜಕೀಯ ಹಸ್ತಕ್ಷೇಪದ ಆರೋಪವೊಂದು ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಕುಟುಂಬದ ಇತರ ಸದಸ್ಯರ ವರ್ತನೆಗಳು ಅಮೆರಿಕಾ ರಾಜಕೀಯದಲ್ಲಿ ಪಡಿಮೂಡುವ ದಿನಗಳು ದೂರವಿಲ್ಲ ಎಂಬುದಕ್ಕೆ ಮುನ್ಸೂಚನೆಯಂತೂ ಸಿಕ್ಕಿದೆ.

Leave a comment

FOOT PRINT

Top