An unconventional News Portal.

‘ಬ್ಲಾಕ್ ಮನಿ ಮ್ಯಾಜಿಕ್’: ‘ತುಘಲಕ್ ದರ್ಬಾರ್’ನಿಂದ ನರೇಂದ್ರ ಮೋದಿವರೆಗೆ…!

‘ಬ್ಲಾಕ್ ಮನಿ ಮ್ಯಾಜಿಕ್’: ‘ತುಘಲಕ್ ದರ್ಬಾರ್’ನಿಂದ ನರೇಂದ್ರ ಮೋದಿವರೆಗೆ…!

ದೇಶದೆಲ್ಲೆಡೆ ನೋಟು ಬದಲಾವಣೆ ಬಿರುಗಾಳಿ ಎಬ್ಬಿಸಿದೆ; ರಾತೋರಾತ್ರಿ ಅಘೋಷಿತ ‘ಆರ್ಥಿಕ ತುರ್ತು ಪರಿಸ್ಥಿತಿ’ ಜಾರಿಯಾಗಿದೆ. ಅನಾಣ್ಯೀಕರಣ ಜನ ಸಾಮಾನ್ಯರನ್ನು ಕಿತ್ತು ತಿನ್ನುತ್ತಿದೆ. ಈ ಹಿಂದೆ ದೇಶದಲ್ಲಿ ನಡೆದ ಆರ್ಥಿಕ ಸಂಚಲನಗಳ ಕುರಿತು ‘ಸಮಾಚಾರ’ ಅಪರೂಪದ ಮಾಹಿತಿ ನೀಡಿತ್ತು. ಇದೀಗ, ನಮ್ಮ ದೇಶವನ್ನು ಹೊರತು ಪಡಿಸಿ ಬೇರೆ ಬೇರೆ ದೇಶಗಳಲ್ಲಿ ನಡೆದ ಇಂತಹದ್ದೇ ನೋಟು ಬದಲಾವಣೆ ಪ್ರಕ್ರಿಯೆಗಳ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗರ್ವನರ್ ರಘುರಾಮ್ ರಾಜನ್ 2014ರ ಭಾಷಣವೊಂದರಲ್ಲಿ ಕಪ್ಪು ಹಣಕ್ಕೆ, ಕಳ್ಳ ನೋಟುಗಳಿಗೆ ಕಡಿವಾಣ ಹಾಕಲು ನೋಟುಗಳ ಬದಲಾವಣೆ ಒಂದು ‘ಸಾಧ್ಯತೆ’ ಎಂದಿದ್ದರು. ಮುಂದುವರಿದು ಮಾತನಾಡಿದ್ದ ಅವರು “ದೊಡ್ಡ ಕುಳಗಳು ಕಪ್ಪು ಹಣವನ್ನು ರಕ್ಷಿಸಿಕೊಳ್ಳಲು ದಾರಿಗಳನ್ನು ಹುಡುಕಿಕೊಳ್ಳುತ್ತಾರೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ರಘುರಾಮ್ ರಾಜನ್

ರಘುರಾಮ್ ರಾಜನ್

ಆಸ್ಟ್ರೇಲಿಯಾ ಅನಾಣ್ಯೀಕರಣ:

ಹಲವು ದೇಶಗಳು ಇದೇ ರೀತಿ ಕಪ್ಪುಹಣ, ಕಳ್ಳ ನೋಟಿಗೆ ಕಡಿವಾಣ ಹಾಕಲು ಅನಾಣ್ಯೀಕರಣಕ್ಕೆ ಮೊರೆ ಹೋಗಿರುವುದು ಇತಿಹಾಸದ ಪುಟಗಳಲ್ಲಿ ಅಚ್ಚಾಗಿದೆ. ಅವುಗಳಲ್ಲಿ ಇತ್ತೀಚೆಗೆ ನಡೆದಿದ್ದು ಆಸ್ಟ್ರೇಲಿಯಾ ದೇಶದ ಅನಾಣ್ಯೀಕರಣ.

1996ರಲ್ಲಿ ಆಸ್ಟ್ರೇಲಿಯ ಹಳೆಯ ಅಸುರಕ್ಷಿತ ಪೇಪರ್ ನೋಟುಗಳಿಗೆ ಬದಲಾಗಿ ಎಲ್ಲಾ ಹಂತಗಳಲ್ಲಿ ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಜಾರಿಗೆ ತಂದಿತು. ಇದಕ್ಕಾಗಿ ಎಲ್ಲಾ ಪೇಪರ್ ನೋಟುಗಳನ್ನೂ ಹಿಂದಕ್ಕೆ ತೆಗೆದುಕೊಳ್ಳಲಾಯಿತು. ವ್ಯವಸ್ಥಿತವಾಗಿ ಈ ಕೆಲಸ ಮಾಡಿದ ಆಸ್ಟ್ರೇಲಿಯಾ ಒಂದು ಹಂತಕ್ಕೆ ಕಪ್ಪು ಕುಳಗಳಿಗೆ ಕಡಿವಾಣ ಹಾಕುವಲ್ಲಿಯೂ ಯಶಸ್ವಿಯಾಗಿತ್ತು. ಅಲ್ಲಿನ ರಿಸರ್ವ್ ಬ್ಯಾಂಕ್ ಹೊಸ ವಿನ್ಯಾಸದ, ಹೆಚ್ಚಿನ ಸುರಕ್ಷಾ ವಿಧಾನಗಳಿರುವ ನೋಟುಗಳನ್ನು ಜನರಿಗೆ ಸುವ್ಯವಸ್ಥಿತವಾಗಿ ತಲುಪಿಸಿತು.

1987 ಸೆಪ್ಟೆಂಬರ್ 5ರಂದು ಇಂಡೋನೇಷ್ಯಾದಲ್ಲೂ ಇದೇ ರೀತಿ ಹೆಚ್ಚಿನ ಮುಖಬೆಲೆಯ ನೋಟುಗಳ ಮಾನ್ಯತೆ ರದ್ದು ಮಾಡಲಾಗಿತ್ತು. ಅವ್ಯವಸ್ಥೆಯಿಂದ ಕೂಡಿದ ಈ ಅನಾಣ್ಯೀಕರಣದಿಂದ ಜನ ಹೆಚ್ಚಿನ ತೊಂದರೆ ಅನುಭವಿಸುವಂತಾಗಿತ್ತು. ಅಲ್ಲಿನ ಅನಾಥಾಶ್ರಮಗಳು ಸೇರಿದಂತೆ ಹಲವರು ದಿನಸಿಯನ್ನೂ ಖರೀದಿಸಲಾಗದೇ ಒದ್ದಾಡಿದ್ದರು. ಒಂದು ಹಂತದಲ್ಲಿಯಂತೂ ವಿದ್ಯಾರ್ಥಿಗಳು ದಂಗೆ ಎದ್ದು ಸರಕಾರಿ ವಾಹನಗಳು ಮತ್ತು ಕಚೇರಿಗಳಿಗೆ ಬೆಂಕಿಯನ್ನೂ ಇಟ್ಟಿದ್ದರು. ಅಲ್ಲಿಯೂ ಭಾರತದಲ್ಲಿ ಇವತ್ತು ನಡೆಯುತ್ತಿರುವಂತೆಯೇ ಹಣಕಾಸಿನ ತೀವ್ರ ಅಭಾವ ಕಾಡಿತ್ತು.

ತುಘಲಕ್ ದರ್ಬಾರ್:

ಹಾಗೆ ನೋಡಿದರೆ ಭಾರತದಲ್ಲಿ ಹಣದ ಬದಲಾವಣೆಗಳನ್ನು ದೊಡ್ಡ ಮಟ್ಟಕ್ಕೆ ಪ್ರಯೋಗ ಮಾಡಿದ್ದು ತುಘಲಕ್ ಸಂತತಿಯ ಸುಲ್ತಾನ ಮೊಹಮ್ಮದ್ ಬಿನ್ ತುಘಲಕ್. ಚೀನಾ ಮತ್ತು ಪರ್ಶಿ‍ಯಾ ದೇಶಗಳಲ್ಲಿ ಹೊಸ ಕರೆನ್ಸಿ ಚಲಾವಣೆಗೆ ಬಂದಿದ್ದನ್ನು ನೋಡಿ ತುಘಲಕ್ ಸ್ಫೂರ್ತಿಯಾಗಿದ್ದ. ಅದೇ ಕಾಲಕ್ಕೆ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಅಭಾವ ತಲೆದೋರಿತ್ತು; ಆಗ ತಾಮ್ರದ ನಾಣ್ಯಗಳನ್ನು ಟಂಕಿಸಿ ಚಲಾವಣೆಗೆ ಬಿಟ್ಟವನು ತುಘಲಕ್. ಇದರಿಂದ ಎಲ್ಲರೂ ತಾವು ತಾವೇ ನಾಣ್ಯ ಟಂಕಿಸಿ ಮಾರುಕಟ್ಟೆಗೆ ಬಿಟ್ಟು, ಖೋಟಾ ನಾಣ್ಯಗಳ ಹಾವಳಿ ಹೆಚ್ಚಾಯಿತು. ಜನ ಬೆಳ್ಳಿ ಮತ್ತು ಬಂಗಾರದ ನಾಣ್ಯಗಳನ್ನು ಬಚ್ಚಿಟ್ಟರು; ಅವು ದುಬಾರಿಯಾದವು. ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ತಬ್ದವಾಗಿ, ಹಣದುಬ್ಬರ ಹೆಚ್ಚಾದಾಗ ಸುಲ್ತಾನನಿಗೆ ತನ್ನ ತಪ್ಪಿನ ಅರಿವಾಯಿತು. ಆಗ ತಾಮ್ರದ ನಾಣ್ಯಗಳನ್ನು ಹಿಂತಿರುಗಿಸಿ ಪುನಃ ತನ್ನ ಖಜಾನೆಯಿಂದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಪಡೆಯುವಂತೆ ಆಜ್ಞಾಪಿಸಿದ್ದನು! ಆದರೆ ಆಗ ಜಾಣ ಜನ ಖೋಟಾ ನಾಣ್ಯಗಳನ್ನು ಹಿಂತಿರುಗಿಸಿ ಅಪ್ಪಟ ಬಂಗಾರದ ನಾಣ್ಯಗಳನ್ನು ಹಿಂದಕ್ಕೆ ಪಡೆದಿದ್ದರು. ಹೀಗೆ ಸುಲ್ತಾನ ತನ್ನ ಜನರಿಂದಲೇ ಮೋಸ ಹೋಗಿದ್ದನು. ವಾಪಸ್ಸಾದ ತಾಮ್ರದ ನಾಣ್ಯಗಳು ಅವನ ತುಘಲಕಾಬಾದ್ ಅರಮನೆಯ ಮುಂದೆ ಬೆಟ್ಟದಂತೆ ಬಿದ್ದಿದ್ದು, ಆತನ ಮೂರ್ಖತನಕ್ಕೆ ಸಾಕ್ಷಿ ಹೇಳುತ್ತಿದ್ದವು.

ಜಗತ್ತಿನಾದ್ಯಂತ ‘ಅನಾಣ್ಯೀಕರಣ’:

ಹೀಗೆ ಅನಾದಿ ಕಾಲದಿಂದಲೂ ಅನಾಣ್ಯೀಕರಣ ಎಂಬ ವ್ಯವಸ್ಥೆ ಹಣಕಾಸು ವಲಯದಲ್ಲಿ ಚಾಲ್ತಿಯಲ್ಲಿ ಇದ್ದದ್ದು ಗಮನಕ್ಕೆ ಬರುತ್ತದೆ. ಹುಡುಕುತ್ತಾ ಹೋದರೆ ಒಂದಲ್ಲ ಒಂದು ದೇಶದಲ್ಲಿ ಅನಾಣ್ಯೀಕರಣ ನಡೆದಿದೆ. ಅರ್ಥ ವ್ಯವಸ್ಥೆಯಲ್ಲಿ ಅನಾಣ್ಯೀಕರಣ ಎನ್ನುವುದು ಒಂದು ಭಾಗ ಎಂಬುದನ್ನು ಇದರಿಂದ ಗಮನಿಸಬಹುದು.

ಮೆಕ್ಸಿಕೋ ದೇಶದಲ್ಲಿ 1931 ಜನವರಿಯಲ್ಲಿ ಇದೇ ರೀತಿ ಚಿನ್ನದ ಅನಾಣ್ಯೀಕರಣ ನಡೆಸಲಾಗಿತ್ತು. ಚಿನ್ನಕ್ಕೆ ಬದಲಾಗಿ ಪೇಪರ್ ಹಣವನ್ನು ಜನರಿಗೆ ನೀಡಲಾಗಿತ್ತು. 1981ರಲ್ಲಿ ಬೆಲಿಜೆ ದೇಶದಲ್ಲಿಯೂ ಹಳೆಯ ನೋಟುಗಳನ್ನು ಹಿಂದಕ್ಕೆ ಪಡೆಯಲಾಗಿತ್ತು.

ಪಶ್ಚಿಮ ಆಫ್ರಿಕಾ ದೇಶವನ್ನು ಬ್ರಿಟಿಷರು ಆಳುತ್ತಿದ್ದಾಗ 1880ರಲ್ಲಿ ನಾಣ್ಯಗಳನ್ನು ಇದೇ ರೀತಿ ಅನಾಣ್ಯೀಕರಣಗೊಳಿಸಲಾಗಿತ್ತು. ಭಿನ್ನ ನಾಣ್ಯಗಳ ಬಳಕೆಯ ಬದಲಿಗೆ ಬ್ರಿಟಿಷರ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಹಾಗೂ ಕೆಲವು ದೇಶಗಳ ನಾಣ್ಯಗಳನ್ನಷ್ಟೇ ಬಳಕೆಗೆ ತರಲಾಗಿತ್ತು. 2013ರಲ್ಲಿ ಜರ್ಮನಿ, ಅದಕ್ಕೂ ಮೊದಲು ಜಾಂಬಿಯಾ, ನೈಜೀರಿಯಾ, ಗೋಲ್ಡ್ ಕೋಸ್ಟ್ ಗಳಲ್ಲೂ ಇದೇ ರೀತಿ ನೋಟುಗಳನ್ನು ಹಿಂದಕ್ಕೆ ಪಡೆಯುವ ಬೆಳವಣಿಗೆಗಳು ನಡೆದಿದ್ದವು.

ಮೌಲ್ಯ ಕಳೆದುಕೊಂಡಿದ್ದ ಜಿಂಬಾಬ್ವೆಯ ರಾಶಿ ರಾಶಿ ಹಣ

ಮೌಲ್ಯ ಕಳೆದುಕೊಂಡಿದ್ದ ಜಿಂಬಾಬ್ವೆಯ ರಾಶಿ ರಾಶಿ ಹಣ

ಇದರ ಮಧ್ಯೆ ಜಿಂಬಾಬ್ವೆ ಯದ್ವಾತದ್ವಾ ಹಣ ಪ್ರಿಂಟು ಮಾಡಿ, ಹಣದ ಮೌಲ್ಯ ಕಳೆದುಕೊಂಡು ದಿವಾಳಿಯ ಸ್ಥಿತಿಗೆ ಬಂದು ನಿಂತಿತ್ತು. ಆಗ 100 ಟ್ರಿಲಿಯನ್ ಡಾಲರ್ಗಳ ಒಂದೇ ನೋಟು ಪ್ರಿಂಟು ಮಾಡುವ ಪರಿಸ್ಥಿತಿ ಬಂದಿತ್ತು. ಕೊನೆಗೆ ಇದಕ್ಕೂ ಕಡಿವಾಣ ಹಾಕಲು ಸರಕಾರ ಕಂಡುಕೊಂಡು ಮಾರ್ಗ ಇದೇ ಅನಾಣ್ಯೀಕರಣ.

ಇದೀಗ ಇದೇ ದಾರಿ ತುಳಿಯಲು ಪಾಕಿಸ್ತಾನವೂ ಹೊರಟಿದೆ. ಡಿಸೆಂಬರ್ 1ರಿಂದ ಹಳೆನೋಟುಗಳ ಬಳಕೆಗೆ ತೆರೆ ಎಳೆಯಲು ನೆರೆಯ ರಾಷ್ಟ್ರ ಹೊರಟಿದೆ. ಆದರೆ ನೋಟು ಬದಲಾವಣೆಗೆ ಬರೋಬ್ಬರಿ ಒಂದೂವರೆ ವರ್ಷ ಕಾಲಾವಕಾಶ ನೀಡಿದೆ. ಇಲ್ಲಿ ಕಪ್ಪು ಹಣಕ್ಕೆ ಕಡಿವಾಣ ಹಾಕುವುದಕ್ಕಿಂತ ಹೆಚ್ಚಿನ ಸುರಕ್ಷತೆ ಮಾನದಂಡಗಳಿರುವ ನೋಟುಗಳನ್ನು ಬಳಕೆಗೆ ತರುವ ಗುರಿಯನ್ನು ಅಲ್ಲಿನ ಸರಕಾರ ಹಾಕಿಕೊಂಡಿದೆ. ಈ ಹಿಂದೆ ಪಾಕಿಸ್ತಾನ ಇದೇ ರೀತಿ ಯಶಸ್ವಿಯಾಗಿ 500 ಮತ್ತು 5 ರೂಪಾಯಿ ಮುಖಬೆಲೆಯ ನೋಟುಗಳನ್ನು ಅನಾಣ್ಯೀಕರಣಗೊಳಿಸಿತ್ತು.

ಅಂಚೆ ಸೇವೆಗಳಲ್ಲೂ ಅನಾಣ್ಯೀಕರಣ:

ಇದು ಸ್ವಲ್ಪ ವಿಚಿತ್ರವಾದರೂ ಸತ್ಯ. ಜಗತ್ತಿನ ಹಲವು ದೇಶಗಳಲ್ಲಿ ಅಂಚೆ ಸೇವೆಯಲ್ಲಿಯೂ ಅನಾಣ್ಯೀಕರಣ ನಡೆದಿದ್ದನ್ನು ಗಮನಿಸಬಹುದು.

ಅಮೆರಿಕಾದಲ್ಲಿ 1851 ಹಾಗೂ 1861ರಲ್ಲಿ ಹೀಗೆ ಎರಡು ಬಾರಿ ಸ್ಟಾಂಪ್ ಮುದ್ರಿತ ಅಂಚೆ ಕವರ್ (ಎನ್ವಲಾಪ್)ಗಳನ್ನು ಹಿಂದಕ್ಕೆ ಪಡೆದು ಹೊಸ ಸ್ಟ್ಯಾಂಪ್ ಮುದ್ರಿತ ಕವರ್ಗಳನ್ನು ಮಾರುಕಟ್ಟೆಗೆ ಬಿಡಲಾಗಿತ್ತು.

ಇದು ಉದಾಹರಣೆ ಅಷ್ಟೆ; ಇದೇ ರೀತಿ ಹಲವು ದೇಶಗಳಲ್ಲಿ ಸ್ಟ್ಯಾಂಪ್ ಗಳ ಅನಾಣ್ಯೀಕರಣ ಇತಿಹಾಸದುದ್ದಕ್ಕೂ ನಡೆದಿದೆ. ಇಂಗ್ಲೆಂಡಿನಲ್ಲಿ 1971ರಲ್ಲಿ ಈ ರೀತಿ ನಡೆದಿದ್ದರೆ, 19 ಮತ್ತು 20ನೇ ಶತಮಾನದಲ್ಲಿ ಇಂಥಹ ಹಲವು ಅನಾಣ್ಯೀಕರಣಗಳಿಗೆ ಇಂಗ್ಲೆಂಡ್ ಸಾಕ್ಷಿಯಾಗಿದೆ. ಇದಲ್ಲದೆ ಪೋಲೆಂಡ್, ಹಾಂಕಾಂಗ್, ಆಸ್ಟ್ರೇಲಿಯಾ, ಆಶ್ಟ್ರಿಯಾ, ವ್ಯಾಟಿಕನ್ ನಗರ, ನೆದರ್ಲಾಂಡ್, ಪೊರ್ಚುಗಲ್, ಸ್ಪೇನ್ ಮುಂತಾದ ರಾಷ್ಟ್ರಗಳ ಅಂಚೆ ಇಲಾಖೆಗಳಲ್ಲೆಲ್ಲಾ ಅನಾಣ್ಯೀಕರಣ ನಡೆದು ಹೋಗಿದೆ.

ಅನಾಣ್ಯೀಕರಣ ‘ಕಳಪೆ’ ಆರ್ಥಿಕ ನಿರ್ಧಾರ:

ಅನಾಣ್ಯೀಕರಣ ದೇಶದೆಲ್ಲೆಡೆ ತಲ್ಲಣ ಹುಟ್ಟುಹಾಕಿದ ಸಮಯದಲ್ಲೇ ಬಿಬಿಸಿ ಜತೆ ಮಾತನಾಡಿರುವ ಹಿರಿಯ ಆರ್ಥಿಕ ತಜ್ಞ ಹಾಗೂ ವಿಶ್ವಬ್ಯಾಂಕಿನ ಮಾಜಿ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು, “ಅನಾಣ್ಯೀಕರಣದಿಂದಾಗುವ ಬದಲಾವಣೆಯನ್ನು ಅದರಿಂದಾಗುವ ತೊಂದರೆಗಳೇ ನುಂಗಿ ಹಾಕಲಿವೆ,” ಎಂದಿದ್ದಾರೆ. “ಸರಕು ಮತ್ತು ಸೇವಾ ತೆರಿಗೆ ಜಾರಿ ಒಂದು ಒಳ್ಳೆಯ ಆರ್ಥಿಕ ನಿರ್ಧಾರ ಆದರೆ ಅನಾಣ್ಯೀಕರಣವಲ್ಲ,” ಎಂದು ಹೇಳಿದ್ದಾರೆ.

ಕೌಶಿಕ್ ಬಸು

ಕೌಶಿಕ್ ಬಸು

ಈ ಕುರಿತು ‘ದಿ ವೈರ್’ ಜತೆ ಮಾತನಾಡಿರುವ ಇನ್ನೊಬ್ಬ ಆರ್ಥಿಕ ತಜ್ಞ ಪ್ರಭಾತ್ ಪಟ್ನಾಯಕ್, ‘ಮೋದಿ ಏನು ಅಂದುಕೊಂಡಿದ್ದಾರೋ ಅದು ತಿರುಗುಬಾಣವಾಗಲಿದೆ,” ಎಂದಿದ್ದಾರೆ. “ಇಂಥ ಪರಿಸ್ಥಿತಿಗಳಲ್ಲಿ ಬಂಡವಾಳಶಾಹಿಗಳಲ್ಲಿ ಏನಾಗುತ್ತದೆ ಎಂದರೆ, ಹಳೆ ಕರೆನ್ಸಿ ನೋಟುಗಳನ್ನು ಹೊಸದಾಗಿ ಬದಲಾಯಿಸುವುದು ಹೇಗೆ ಎಂಬ ಹೊಸ ವ್ಯವಹಾರ ಹುಟ್ಟಿಕೊಳ್ಳುತ್ತದೆ. ದೊಡ್ಡ ಗುಂಪಿನಲ್ಲಿ ಜನ ಬಂದು ನಮಗೆ 1000 ಕೊಡಿ ನಾವು 700 ಅಥವಾ 800 ಕೊಡುತ್ತೇವೆ ಎನ್ನುತ್ತಾರೆ. ಹೀಗಾಗಿ ಕಪ್ಪುಹಣವನ್ನು ತಡೆಯುವ ಬದಲು ಕಪ್ಪುಹಣವನ್ನು ಬೆಳೆಸಿದಂತಾಗುತ್ತದೆ,” ಎಂದಿದ್ದಾರೆ.

Leave a comment

FOOT PRINT

Top