An unconventional News Portal.

ಸರಕಾರ ಕೊಡದಿದ್ದರೇನಂತೆ? ಜೇನುಕುರುಬರ ಸೋಮಣ್ಣಗೆ ‘ಜನರಾಜ್ಯೋತ್ಸವ’ ಪ್ರಶಸ್ತಿ!

ಸರಕಾರ ಕೊಡದಿದ್ದರೇನಂತೆ? ಜೇನುಕುರುಬರ ಸೋಮಣ್ಣಗೆ ‘ಜನರಾಜ್ಯೋತ್ಸವ’ ಪ್ರಶಸ್ತಿ!

ಆದಿವಾಸಿಗಳ ಒಡನಾಡಿ ಜೇನುಕುರುಬರ ಸೋಮಣ್ಣಗೆ ‘ಜನರಾಜ್ಯೋತ್ಸವ’ ಪ್ರಶಸ್ತಿಯನ್ನು ಹಿರಿಯ ಸಾಹಿತಿ ದೇವನೂರು ಮಹಾದೇವ ಶನಿವಾರ ಸಂಜೆ ಪ್ರಧಾನ ಮಾಡಿದರು. ಹೆಗ್ಗಡದೇವನಕೋಟೆಯ ಜೇನುಕುರುಬರ ಮೊತ್ತ ಹಾಡಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಜನರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಿತಿ, ಜನಪರ ಸಂಘಟನೆಗಳು ಹಾಗೂ ಸಮಾನ ಮನಸ್ಕರು ಸೋಮಣ್ಣರನ್ನು ಒಂದು ಲಕ್ಷ ರೂಪಾಯಿ ಗೌರವ ಧನ ನೀಡಿ ಸನ್ಮಾನಿಸಿದರು.

ಕರ್ನಾಟಕ ಸರಕಾರ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ದಿನ ನೀಡುವ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ಜೇನು ಕುರುಬರ ಸೋಮಣ್ಣ ಅವರಿಗೆ ನಿರಾಕರಿಸಿದ, ಪ್ರತಿಭಟನಾರ್ಥವಾಗಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಮೂಲಕ ಆದಿವಾಸಿಗಳಿಗಾಗುತ್ತಿರುವ ಅನ್ಯಾಯವನ್ನು ವಿಶಿಷ್ಟವಾಗಿ ಎದುರಿಸಲಾಯಿತು.

ಮೊತ್ತ ಹಾಡಿಯ ಜನರನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನ್ನಾಡಿದ ಹರ್ಷಕುಮಾರ್ ಕುಗ್ವೆ “ನಾಗರಿಕರೆಂದು ಕರೆಸಿಕೊಂಡು ಪೇಟೆಯಲ್ಲಿ ಬದುಕುವ ನಾವು, ನಾಗರಿಕತೆಯ ಹೆಸರಲ್ಲಿ ನಿಮಗೆ ಮಾಡಿದ ಅವಮಾನಕ್ಕೆ ಪ್ರಾಯಶ್ಚಿತ್ತವಾಗಿ ನಿಮ್ಮ ಮುಂದೆ ಬಂದು ನಿಂತಿದ್ದೇವೆ. ಇವತ್ತಿನ ದಿನ ಕರ್ನಾಟಕದ ಇತಿಹಾಸದಲ್ಲಿ ಬರೆದಿಡಬೇಕಾದ ದಿನ. ಮೊತ್ತ ಹಾಡಿಯಲ್ಲಿ ಮೊತ್ತ ಮೊದಲ ಬಾರಿಗೆ ‘ಜನರಾಜ್ಯೋತ್ಸವ’ ಪ್ರಶಸ್ತಿ ವಿತರಣೆ ನಡೆಯುತ್ತಿರುವುದು ಸಂತೋಷದ ವಿಚಾರ. ನಮ್ಮ ಈ ಕಾರ್ಯಕ್ರಮದ ಉದ್ದೇಶ ‘ಲಾಬಿ ನಡೆಸಿ ಸೋಮಣ್ಣನಿಗೆ ಅವಮಾನ ಮಾಡಿದವರಿಗೆ’ ಎಚ್ಚರಿಕೆ ಗಂಟೆಯಾಗಬೇಕು,” ಎಂದರು.

ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಹಿರಿಯ ಸಾಹಿತಿ, ನಾಡಿನ ಸಾಕ್ಷಿಪ್ರಜ್ಞೆ ದೇವನೂರ ಮಹಾದೇವ “ಇವತ್ತು ಅಂತಃಕರಣದ ಧ್ವನಿ ಮಾತಾಗಿದೆ, ಕರುಳಬಳ್ಳಿ ಸ್ಪಂದಿಸಿದೆ, ಅಂತಃಕರಣದ ಮಿಡಿತಕ್ಕೆ ಬೆಲೆ ಕಟ್ಟಲಾಗದು. ಮೂಲ ನಿವಾಸಿಗಳ ಬದುಕು ನಾಗರಿಕ ಜಗತ್ತಿನ ದಬ್ಬಾಳಿಕೆ ನಲುಗಿ ತತ್ತರಿಸಿ ಹೋಗಿದೆ. ಮೂಲ ನಿವಾಸಿಗಳು ಈ ನೆಲದ ಮಾಜಿ ಒಡೆಯರಾಗಿ ಹೋಗಿದ್ದಾರೆ. ಆದ್ದರಿಂದ ಅವುಗಳನ್ನು ಹುಡುಕಿ ಹುಡುಕಿ ಮತ್ತೆ ಬೀಜ ಬಿತ್ತಬೇಕಾಗಿದೆ,” ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸೋಮಣ್ಣ, “ವಿಶಾಲ ಮನಸಿನ ಜನರು ಇವತ್ತು ನನಗೆ ಪ್ರಶಸ್ತಿ ಕೊಟ್ಟಿದ್ದೀರಿ. ಸರಕಾರ ಪ್ರಶಸ್ತಿ ಕೊಟ್ಟಿದ್ದರೂ ಇಷ್ಟು ಸಂತೋಷ ಆಗುತ್ತಿರಲಿಲ್ಲ. ನೀವು ಕೊಟ್ಟಿರೋ ಪ್ರಶಸ್ತಿ ಸುಪ್ರೀಂ ಕೋರ್ಟ್ ತೀರ್ಪಿಗಿಂತಲೂ ಮಿಗಿಲು. ಕಟ್ಟಕಡೆಯ ವ್ಯಕ್ತಿಯನ್ನು ರಾಜ್ಯದ ಮೂಲೆ ಮೂಲೆಯ ಜನ, ಜಾತಿ ಧರ್ಮದ ಭೇದವಿಲ್ಲದೆ ಬಂದು ಗುರುತಿಸಿದ್ದೀರಲ್ವಾ, ಇದಕ್ಕಿಂತ ಹೆಚ್ಚು ನನಗೇನು ಬೇಕು? ಇದೇ ರೀತಿ ನಮ್ಮ ಜತೆ ಕಡೆಯ ತನಕ ನೀವಿದ್ದರೆ 16 ವರ್ಷದ ಯುವಕನಾಗಿ ಮತ್ತೆ ಈ ಹಾಡಿಯ ಜನರಿಗಾಗಿ ಹೋರಾಡುತ್ತೇನೆ,”ಎಂದು ಉತ್ಸಾಹಭರಿತರಾಗಿ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, “ವಿದ್ಯಾವಂತರೆಂದರೆ ಬರೀ ಅಕ್ಷರ ವಿದ್ಯೆ ಅಲ್ಲ; ಅಕ್ಷರ ಜ್ಞಾನ ಅಹಂಕಾರದ ಸಂಕೇತ. ಅನುಭವ ಅನ್ನುವ ಜ್ಞಾನವನ್ನು ನಾವು ಮರೆತುಬಿಟ್ಟಿದ್ದೇವೆ. ಸೋಮಣ್ಣನಿಗೆ ಅಪಮಾನ ಆಗಿಲ್ಲ. ನಮಗೆ ಅವಮಾನ ಆಗಿದೆ. ಅದಕ್ಕಾಗಿ ಇವತ್ತು ನಾವಿಲ್ಲಿ ಬಂದು ಕಾರ್ಯಕ್ರಮ ಮಾಡಿದ್ದೇವೆ. ನಿಯಮಗಳನ್ನು ಉಲ್ಲಂಘಿಸಿ ಮಾಡಿದ ಕಾರಣಕ್ಕಾಗಿ ಇವತ್ತು ಸೋಮಣ್ಣನಿಗೆ ಪ್ರಶಸ್ತಿ ನಿರ್ಲಕ್ಷಿಸಲಾಗಿದೆ. ಸರಕಾರ ಕೊಡುವ ಪ್ರಶಸ್ತಿಗಿಂತ ಜನರೇ ಕೊಡುವಂತಹ ‘ಜನರಾಜ್ಯೋತ್ಸವ’ ಪ್ರಶಸ್ತಿ ನಿಜಕ್ಕೂ ಶ್ರೇಷ್ಟವಾದದ್ದು,” ಎಂದು ಅಭಿಪ್ರಾಯಪಟ್ಟರು.

ಯಾರು ಈ ಜೇನುಕುರುಬರ ಸೋಮಣ್ಣ?

ಜೇನುಕುರುಬರ ಸೋಮಣ್ಣ ಒಂದು ರೀತಿಯಲ್ಲಿ ನಾಗರಹೊಳೆ ಭಾಗದ ಜನರ ಆಶಾ ಕಿರಣ. ಹಲವು ಸಂಶೋಧಕರ ಪಾಲಿನ ಜ್ಞಾನ ನಿಧಿ.

ಜೂನ್ 1, 1957ರಲ್ಲಿ ಜನಿಸಿದ ಸೋಮಣ್ಣ, ಶಾಲೆಯ ಸಾಂಪ್ರದಾಯಿಕ ಶಿಕ್ಷಣದಿಂದ ದೂರ ಉಳಿದವರು. ತಂದೆ ಕುನ್ನಯ್ಯರಿಗಿದ್ದ ತೀವ್ರ ಬಡತನ ಅವರನ್ನು ಹಾಡಿಗೆ ಸೀಮಿತವಾಗಿಸಿತ್ತು. ಆದರೆ ಅದನ್ನು ಮೀರಿ ಬೆಳೆದವರು, ಕಳೆದ ಮೂರ್ನಾಲ್ಕು ದಶಕಗಳಿಂದ ಭೂರಹಿತ ಆದಿವಾಸಿಗಳನ್ನು ಸಂಘಟಿಸಿದ್ದಾರೆ. ಸ್ಥಳೀಯ ಪ್ರಗತಿಪರ ಹೋರಾಟಗಾರರ ಜೊತೆಗೂಡಿ ಕಟ್ಟಿದ ‘ರಾಜ್ಯ ಮೂಲನಿವಾಸಿ ವೇದಿಕೆಯ’ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸೋಮಣ್ಣ ಸಾಂಘಿಕ ಹೋರಾಟದಿಂದ ಆದಿವಾಸಿಗಳಿಗೆ ಸರಿಸುಮಾರು ಆರು ಸಾವಿರ ಎಕರೆ ಕೃಷಿ ಭೂಮಿ ದೊರಕಿದೆ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನಾಗರಹೊಳೆ ಮತ್ತು ಕಾಕನಕೋಟೆ ಅರಣ್ಯ ಪ್ರದೇಶದಿಂದ ಒಕ್ಕಲೆದ್ದ ಆದಿವಾಸಿಗಳನ್ನು ಸೋಮಣ್ಣ ಸಂಘಟಿಸಿ, ಪುನರ್ವಸತಿಗಾಗಿ ಅನೇಕ ಚಳುವಳಿಗಳನ್ನು ರೂಪಿಸಿದ್ದಾರೆ.

1989ರಿಂದಲೇ ಸೋಮಣ್ಣ ಸ್ಥಳಾಂತರಗೊಂಡು ದಿಕ್ಕೆಟ್ಟು ಹೋದ ಜೇನುಕುರುಬ, ಬೆಟ್ಟಕುರುಬ, ಎರವ ಮತ್ತು ಸೋಲಿಗರನ್ನು ಸಂಘಟಿಸಿ ಪುನರ್ವಸತಿಗಾಗಿ ಹೋರಾಡುತ್ತಲೇ ಬಂದಿದ್ದಾರೆ. ಹೀಗಿದ್ದೂ ಆದಿವಾಸಿಗಳಿಗೆ, ಘನತೆಯುಳ್ಳ ಪುನರ್ವಸತಿ ಮಾತ್ರ ದೊರಕದಾದಾಗ ಸೋಮಣ್ಣ ಚಳುವಳಿಯ ಜತೆಗೆ ಕಾನೂನು ಹೋರಾಟಕ್ಕೂ ಇಳಿದ್ದರು. ಒಕ್ಕಲೆದ್ದ ಆದಿವಾಸಿಗಳ ಪರ ಹೈಕೋರ್ಟಿನಲ್ಲಿ ‘ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಕೊನೆಗೆ ಕೋರ್ಟ್ ಒಕ್ಕಲೆದ್ದ ಆದಿವಾಸಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಪ್ರೊ. ಮುಜಫರ್ ಅಸಾದಿ ಏಕವ್ಯಕ್ತಿ ಆಯೋಗವನ್ನು ರಚಿಸಿತ್ತು. ಪ್ರೊ. ಅಸಾದಿ ವರದಿಯನ್ನಾಧರಿಸಿ ಹೈಕೋರ್ಟ್ ಆದಿವಾಸಿಗಳ ಪುನರ್ವಸತಿಯನ್ನು ಗೌರವಾನ್ವಿತವಾಗಿ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಆದೇಶವನ್ನೂ ನೀಡಿತ್ತು.

ಸ್ಥಳಾಂತರಗೊಂಡ ಆದಿವಾಸಿಗಳಿಗೆ ಪಡಿತರ ಚೀಟಿ ದೊರಕಿಸಿ ಕೊಟ್ಟು, ಆದಿವಾಸಿಗಳ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ತೆರೆದು, ಬಡ ಗಿರಿಜನರಿಗೆ ಆಹಾರದ ಕೊರತೆ ನೀಗುವಂತೆ ಮಾಡಿದ್ದರಲ್ಲಿ ಸೋಮಣ್ಣ ಪಾತ್ರ ಹಿರಿದು.

ಕೇವಲ ಸಮಾಜಸೇವಕರಾಗಿ ಉಳಿದುಕೊಳ್ಳದೆ ಸದಾ ನಗುತ್ತಾ, ಜೊತೆಗಿದ್ದವರನ್ನು ನಗೆಯ ಕಡಲಲ್ಲಿ ಮುಳುಗೇಳಿಸುತ್ತಾ ಬಂಡವಾಳಶಾಹಿಗಳ ವಿರುದ್ಧವೂ ತೊಡೆತಟ್ಟಿದವರು ಸೋಮಣ್ಣ. ನಾಗರಹೊಳೆ ದಟ್ಟಾರಣ್ಯದಲ್ಲಿ ಕಟ್ಟಲು ಹೊರಟಿದ್ದ ತಾಜ್ ಹೋಟೆಲ್ ನಿರ್ಮಾಣದ ವಿರುದ್ಧ ಆದಿವಾಸಿ ಮತ್ತು ಪ್ರಗತಿಪರರ ಜತೆ ಹೋರಾಟಕ್ಕಿಳಿದ ಸೋಮಣ್ಣ, ಹೊಟೇಲ್ ನಿರ್ಮಾಣ ರದ್ದಾಗಿಸಿದ್ದರು. ಮೇಧಾ ಪಾಟ್ಕರ್ ಜತೆ ‘ನರ್ಮದಾ ಬಚಾವ್’ ಆಂದೋಲನದಲ್ಲಿಯೂ ಸೋಮಣ್ಣ ಭಾಗವಹಿಸಿದ್ದರು. ಪಶ್ಚಿಮಘಟ್ಟ ಉಳಿಸುವ ಸಲುವಾಗಿ ಕೈಗೊಂಡ ‘ಗೋವಾ ಕನ್ಯಾಕುಮಾರಿ ಕಾಲ್ನಡಿಗೆ ಜಾಥಾ’ದಲ್ಲಿ ಸೋಮಣ್ಣ ಮುಂಚೂಣಿಯಲ್ಲಿದ್ದವರು. 2008ರಿಂದ ಜಾರಿಗೆ ಬಂದ ಅರಣ್ಯವಾಸಿಗಳ ಪಾರಂಪರಿಕ ಹಕ್ಕುಗಳ ಸಮಿತಿಯಲ್ಲಿ ಸೋಮಣ್ಣ ಸಕ್ರಿಯರಾಗಿ ಆದಿವಾಸಿಗಳ ಪರ ಹೋರಾಡುತ್ತಲೇ ಇದ್ದಾರೆ. 1991ರಲ್ಲಿ ಫಿಲಿಫೈನ್ಸ್ ದೇಶದಲ್ಲಿ ನಡೆದ ಆದಿವಾಸಿಗಳ ಮೇಳದಲ್ಲಿ ಸೋಮಣ್ಣ ಕರ್ನಾಟಕದ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸಿದ್ದರು.

ಸೋಮಣ್ಣಗೆ ಆದ ಅನ್ಯಾಯ!

ಕನ್ನಡ ರಾಜ್ಯೋತ್ಸವ ದಿನ ಸರಕಾರ ನೀಡಬೇಕಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಜೇನುಕುರುಬರ ಮುಖಂಡ, ಹೆಗ್ಗಡದೇವನ ಕೋಟೆಯ ‘ಮತ್ತ ಹಾಡಿಯ ಸೋಮಣ್ಣ’ ಅವರ (ಸರ್ಕಾರಿ ಆದೇಶ ಸಂಖ್ಯೆ: ಕಸಂವಾ:341; ಕಸಧ; 2016, ದಿ: 28.10.2016) ಹೆಸರಿತ್ತು. ಅಕ್ಟೋಬರ್ 30ನೇ ತಾರೀಕು ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ಸೋಮಣ್ಣಗೆ ದೂರವಾಣಿ ಕರೆ ಮಾಡಿ, ಅವರ ಜೀವನ ವಿವರಗಳನ್ನು ಮೇಲ್ ಮುಖಾಂತರ ತರಿಸಿಕೊಂಡಿದ್ದರು. ಆದರೆ, ಅಕ್ಟೋಬರ್ 31ರ ದಿನಪತ್ರಿಕೆಗಳಲ್ಲಿ ಪ್ರಕಟವಾದ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸೋಮಣ್ಣನವರ ಹೆಸರೇ ಇರಲಿಲ್ಲ. ಕೊನೆಗೆ ಕನ್ನಡ ಸಂಸ್ಕೃತಿ ಇಲಾಖೆಯವರು “ಸೋಮಣ್ಣ ಎಂಬ ಹೆಸರಿನ ಒಬ್ಬ ವ್ಯಕ್ತಿಗೆ ಹಿಂದಿನ ವರ್ಷ ಪ್ರಶಸ್ತಿ ಕೊಡಲಾಗಿದೆ. ಆ ಹೆಸರೇ ಈಗ ಮತ್ತೆ ಪಟ್ಟಿಯಲ್ಲಿ ಕಣ್ತಪ್ಪಿನಿಂದಾಗಿ ಪ್ರಕಟವಾಗಿದೆ” ಎಂದು ಸಬೂಬು ಹೇಳಿ ನುಣುಚಿಕೊಂಡರು. ಪ್ರಶಸ್ತಿ ಪುರಸ್ಕೃತರ ಹಳೆಯ ಪಟ್ಟಿಯ ಸೋಮಣ್ಣ – ಹೆಗ್ಗಡದೇವನಕೋಟೆ ಹೆಸರಿದ್ದ ಕ್ರಮಸಂಖ್ಯೆ 36ರಲ್ಲಿ ಬೀದರಿನ ಯಾವುದೂ ‘ಟೀಂ ಯುವ’ ಎಂಬ ಸಂಸ್ಥೆಗೆ ಪ್ರಶಸ್ತಿ ನೀಡಲಾಗಿತ್ತು.

ಆದಿವಾಸಿಗಳ ಒಡನಾಡಿ ಜೇನುಕುರುಬರ ಸೋಮಣ್ಣ ಅವರ ಹೆಸರು ಬಿಟ್ಟು ಹೋಗಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಚಾಮರಾಜನಗರ ಜಿಲ್ಲೆಯ ಅದೇ ಹೆಸರಿನವರು ಪಟ್ಟಿಯಲ್ಲಿದ್ದರು ಎಂದು ಸೋಮಣ್ಣ ಹೆಸರನ್ನು ತೆಗೆಯಲಾಗಿತ್ತು.

Leave a comment

FOOT PRINT

Top