An unconventional News Portal.

ಯಾವುದೂ ಶಾಶ್ವತವಲ್ಲ: ಟಿಪ್ಪು ಬಗೆಗಿನ ಇವರ ಅಭಿಮಾನ ಕೂಡ!

ಯಾವುದೂ ಶಾಶ್ವತವಲ್ಲ: ಟಿಪ್ಪು ಬಗೆಗಿನ ಇವರ ಅಭಿಮಾನ ಕೂಡ!

“ಟಿಪ್ಪು ಒಬ್ಬ ದೇಶ ಪ್ರೇಮಿಯಾಗಿದ್ದರು. ಇಲ್ಲದಿದ್ದರೆ ಬ್ರಿಟೀಷರ ವಿರುದ್ಧ ನಾಲ್ಕು ಯುದ್ಧ ಮಾಡಬೇಕಾದ ಅಗತ್ಯವೇ ಇರಲಿಲ್ಲ” ಹೀಗಂಥ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಗುರುವಾರ ವಿಧಾನಸೌಧದ ಬಾಂಕ್ವೆಟ್ ಹಾಲಿನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

“ಟಿಪ್ಪು ದೇಶ ಪ್ರೇಮಿಯಾಗದಿದ್ದಲ್ಲಿ ನಾಲ್ಕು ಯುದ್ಧ ಮಾಡಬೇಕಾದ ಅವಶ್ಯಕತೆ ಇರಲಿಲ್ಲ. ದೇಶದಲ್ಲಿದ್ದ ಉಳಿದ ರಾಜರಂತೆ ಅವರಿಗೂ ಬ್ರಿಟಿಷರಿಗೆ ಶರಣಾಗಬಹುದಿತ್ತು. ಆದರೆ ಟಿಪ್ಪು ಹಾಗೆ ಮಾಡಲಿಲ್ಲ,” ಎಂದು ಹೇಳಿದರು.

“ಮೊದಲ ಆಂಗ್ಲೋ-ಮೈಸೂರು ಯುದ್ಧ ಹೈದರಾಲಿ ನೇತೃತ್ವದಲ್ಲಿ ಆರಂಭವಾದಾಗ ಟಿಪ್ಪುವಿಗಿನ್ನೂ 15 ವರ್ಷ. ಅವತ್ತೇ ಟಿಪ್ಪು ಯುದ್ಧದಲ್ಲಿ ಭಾಗವಹಿಸಿದ್ದ. ಹೀಗೆ ಮೊದಲ ಎರಡು ಆಂಗ್ಲೋ-ಮೈಸೂರು ಯುದ್ಧದಲ್ಲಿ ಗೆಲುವಾಯಿತು. ಮೂರನೇ ಯುದ್ಧಕ್ಕೆ ಫ್ರೆಂಚ್ ಸಹಾಯವನ್ನು ಟಿಪ್ಪು ಕೇಳಿಕೊಂಡರಾದರೂ ಫ್ರೆಂಚ್ ಕ್ರಾಂತಿಯಿಂದಾಗಿ ಅವರ ಬೆಂಬಲ ಸಿಗಲಿಲ್ಲ. ಹೀಗಾಗಿ ಯುದ್ಧವನ್ನು ಸೋಲಬೇಕಾಯಿತು,” ಎಂದು ಮಾಹಿತಿ ನೀಡಿದರು.

ಇನ್ನು ಟಿಪ್ಪು ಜಯಂತಿ ಆಚರಣೆಯ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮರ್ಥಿಸಿಕೊಂಡರು. “ಸರಕಾರ ಹಿಂದಿನಿಂದಲೂ ಅನೇಕ ಜಯಂತಿಗಳನ್ನು ಆಚರಿಸುತ್ತಾ ಬಂದಿದೆ. ನಾವು ಬಂದ ಮೇಲೆ ಮಾತ್ರ ಆಚರಿಸುತ್ತಿರುವುದಲ್ಲ. ನಾವು ಒಂದಷ್ಟು ಜಯಂತಿಗಳನ್ನು ಆರಂಭಿಸಿದ್ದೇವೆ ಅಷ್ಟೆ. ಹಿಂದಿನ ವರ್ಷ ಟಿಪ್ಪು ಜಯಂತಿ ಮತ್ತು ಈ ವರ್ಷ ನಾರಾಯಣ ಗುರುಗಳ ಜಯಂತಿಯನ್ನು ಹೊಸದಾಗಿ ಆಚರಿಸಲು ಆರಂಭಿಸಿದ್ದೇವೆ. ಟಿಪ್ಪು ಜಯಂತಿ ಆಚರಣೆ ಹಿಂದೆ ಮತಗಳಿಕೆಯ ಉದ್ದೇಶವಿಲ್ಲ; ಮುಸಲ್ಮಾನರನ್ನು ಖುಷಿ ಪಡಿಸಿಕೊಳ್ಳಬೇಕು ಎಂದೂ ಆಚರಣೆ ಇಳಿದಿಲ್ಲ,”ಎಂದು ಸ್ಪಷ್ಟಪಡಿಸಿದರು.

“ಆಯಾಯ ಜಾತಿಗೆ ಸೇರಿದ ಜನರು ತಮ್ಮ ಜಾತಿಯ ದಾರ್ಶನಿಕರು, ಮಹಾತ್ಮರು, ಪ್ರಸಿದ್ಧ ವ್ಯಕ್ತಿಗಳ ಜಯಂತಿಗಳನ್ನು ಆಚರಿಸುತ್ತಾರೆ. ಆದರೆ ಸರಕಾರ ಹಾಗೆ ಮಾಡಲು ಬರುವುದಿಲ್ಲ. ಅದರಲ್ಲೂ ನಮ್ಮದು ಜಾತ್ಯಾತೀತ ಸರಕಾರ. ಟಿಪ್ಪು ಜಯಂತಿಯನ್ನು ಸರಕಾರ ಆಚರಿಸಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇತ್ತು. ಅದನ್ನು ಪೂರೈಸಿದ್ದೇವೆ,” ಎಂದು ಮುಖ್ಯಮಂತ್ರಿಗಳು ವಿವರಿಸಿದರು.

‘ಆಂಗ್ಲೋ- ಮೈಸೂರು ಯುದ್ದ’ದಿಂದಲೇ ‘ಸ್ವಾತಂತ್ರ ಸಂಗ್ರಾಮ’:

ಭಾಷಣದಲ್ಲಿ ಸಿಎಂ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. “ಟಿಪ್ಪು ಸುಲ್ತಾನ ಜಯಂತಿ ಆಚರಣೆ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆಯೋ ಅಥವಾ ಕಾಂಗ್ರೆಸ್ ರಾಜಕೀಯ ಮಾಡ್ತಿದೆಯೋ ಜನ ತೀರ್ಮಾನ ಮಾಡಲಿ. 1857 ರಿಂದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭ ಆಯ್ತು ಅಂತ ಹೇಳಲಾಗುತ್ತದೆ. ಆದ್ರೆ ನಿಜವಾದ ಸ್ವಾತಂತ್ರ್ಯ ಹೋರಾಟ ಆಂಗ್ಲೋ-ಮೈಸೂರ್ ಯುದ್ಧದಿಂದಲೇ ಪ್ರಾರಂಭವಾಗಿತ್ತು ಅಂತ ನನಗೆ ಅನಿಸುತ್ತದೆ,” ಎಂದು ಅವರು ಹೇಳಿದರು.

Tippu BJP

ಟಿಪ್ಪು ಪೇಟ ತೊಟ್ಟ ಬಿಜೆಪಿ ನಾಯಕರ ಚಿತ್ರಗಳು

ಬಿಜೆಪಿ ಟಿಪ್ಪು ವಿಚಾರದಲ್ಲಿ ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದು ಅವರು ಕಿಡಿಕಾರಿದರು. “ಬಿಜೆಪಿ ನಾಯಕರು ಟಿಪ್ಪು ಟೋಪಿ ಹಾಕಿಕೊಂಡು ಅಂದು ಟಿಪ್ಪು ಬಗ್ಗೆ ಹಾಡಿ ಹೊಗಳಿದ್ದರು. ಇಂದು ಅದೇ ಬಿಜೆಪಿ ನಾಯಕರು ರಾಜಕೀಯ ಸ್ವಾರ್ಥಕ್ಕೋಸ್ಕರ ಟಿಪ್ಪು ಮತಾಂಧ ಎನ್ನುತ್ತಿದ್ದಾರೆ. ಟಿಪ್ಪು ಮತಾಂಧನಲ್ಲ. ಈ ಬಿಜೆಪಿಯವರು ಮತಾಂಧರು,” ಎಂದು ತಮ್ಮ ಎಂದಿನ ದಾಟಿಯಲ್ಲಿ ವಾಗ್ದಾಳಿ ನಡೆಸಿದರು.

ಟಿಪ್ಪು ಕುರಿತು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಹೊರತಂದ ಪುಸ್ತಕಕ್ಕೆ ಬರೆದ ಮುನ್ನುಡಿಯನ್ನು ಅವರು ಪ್ರಸ್ತಾಪಿಸಿದರು. ಒಂದು ಕಾಲದಲ್ಲಿ ಟಿಪ್ಪು ಕುರಿತು ಅಭಿಮಾನವನ್ನು ವ್ಯಕ್ತಪಡಿಸಿದ ಬಿಜೆಪಿ ನಾಯಕರೇ ಈಗ ಟಿಪ್ಪುವನ್ನು ದೂರುತ್ತಿರುವುದನ್ನು ಭಾಷಣದಲ್ಲಿ ವ್ಯಂಗ್ಯವಾಗಿ ಪ್ರಸ್ತುತಪಡಿಸಿದರು.

ಟಿಪ್ಪು ಸಮಸ್ತ ಕನ್ನಡಿಗರ ಹೆಮ್ಮೆ:

“ಟಿಪ್ಪು ಸುಲ್ತಾನ್ ಎಲ್ಲ ಜಾತಿ, ಧರ್ಮಗಳ ನಾಯಕ. ಆತ ಕನ್ನಡ ನಾಡಿನ ಹೆಮ್ಮೆಯ ವ್ಯಕ್ತಿ. ಹೀಗಾಗಿ ರಾಜ್ಯ ಸರಕಾರವು ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತಿದೆ,” ಹೀಗೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

“ಸಾವಿರ ಸುಳ್ಳುಗಳನ್ನ ಹೇಳುವ ಮುಖಾಂತರ ಇತಿಹಾಸ ತಿರುಚುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ. ಸಮಾಜದಲ್ಲಿ ಕೋಮುವಾದವನ್ನು ಬಿತ್ತುವ ಕೆಲಸ ನಡೆಯುತ್ತಿದೆ. ಟಿಪ್ಪು ಜಯಂತಿ ಆಚರಣೆಯಲ್ಲಿ ಯಾವುದೇ ತಪ್ಪಿಲ್ಲ,” ಎಂದು ನಿಡುಮಾಮಿಡಿ ಶ್ರೀ ಈ ಸಂದರ್ಭ ಹೇಳಿದರು.

ಈ ಬಾರಿ ಕಾರ್ಯಕ್ರಮದ ಆಯೋಜನೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಿಕೊಂಡಿತ್ತು. ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡ, ಸಚಿವರಾದ ರೋಷನ್ ಬೇಗ್, ಕೆ.ಜೆ.ಜಾರ್ಜ್, ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

BJP Yadiyurappaರಾಜ್ಯಾದ್ಯಂತ ಬಿಜೆಪಿ ಹಾಗೂ ಸಂಘ ಪರಿವಾರದ ಟಿಪ್ಪು ಜಯಂತಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿತು. ಶಿವಮೊಗ್ಗ, ಉಡುಪಿ, ಧಾರವಾಡ, ವಿಜಯಪುರ, ಮೈಸೂರು, ಮಂಗಳೂರು, ಮಡಿಕೇರಿ, ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ, ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಲಾಯಿತು.

ಚಿತ್ರ ಕೃಪೆ: ಒನ್ ಇಂಡಿಯಾ

Leave a comment

FOOT PRINT

Top