An unconventional News Portal.

‘ಸಂವಿಧಾನ ಶಿಲ್ಪಿಗೆ ಅವಹೇಳನ’: ಠಾಣೆಗಳ ಮೆಟ್ಟಿಲೇರುತ್ತಿವೆ ‘ಫೇಸ್ಬುಕ್’ ಕಾಮೆಂಟ್ಸ್!

‘ಸಂವಿಧಾನ ಶಿಲ್ಪಿಗೆ ಅವಹೇಳನ’: ಠಾಣೆಗಳ ಮೆಟ್ಟಿಲೇರುತ್ತಿವೆ ‘ಫೇಸ್ಬುಕ್’ ಕಾಮೆಂಟ್ಸ್!

ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಫೇಸ್ಬುಕ್ಕಿನಲ್ಲಿ ಅಸಂಬದ್ಧವಾಗಿ ಬರೆದಿದ್ದಾರೆ ಎಂದು ಆರೋಪಿಸಿ ವಿಕ್ರಮ್ ಎಂಕೆ ಕುಂದಾಪುರ್ ಮತ್ತು ರಂಜಿತ್ ರಂಜು ಶೆಟ್ಟಿ ಎಂಬುವವರ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುತ್ತಿದೆ.

ವಿಕ್ರಮ್ ಎಂಕೆ ಕುಂದಾಪುರ್ “ರೀ ನಮ್ಮ ಮೋದಿನಾ, ಆ ತಿಕ್ಲ ****** ರಿಗೆ ಹೋಲಿಸಬೇಡಿ,” ಎಂದು ಸ್ಟೇಟಸ್ ಒಂದಕ್ಕೆ ಕಮೆಂಟ್ ಮಾಡಿದ್ದರು. ಇದೇ ರೀತಿ ರಂಜಿತ್ ರಂಜು ಶೆಟ್ಟಿ, “ಯಾರ್ರಿ ಸಂವಿಧಾನ ಶಿಲ್ಪಿ… ಯಾವುದು ಕಾನೂನು… ನಮ್ಮ ಮೋದಿನ ಅವನಿಗೆ ಹೋಲಿಸ್ಬೇಡಿ..” ಎಂದು ಪ್ರತಿಕ್ರಿಯೆ ನೀಡಿದ್ದರು. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಕೆ. ಎಸ್. ವಿಜಯ ಎನ್ನುವವರು ದೂರು ನೀಡಿದ್ದಾರೆ. ಜತೆಗೆ, ಇಬ್ಬರ ಕಾಮೆಂಟ್ಗಳ ಸ್ಕ್ರೀನ್ ಶಾಟನ್ನೂ ಪೊಲೀಸರಿಗೆ ನೀಡಿದ್ದಾರೆ.

ಫೇಸ್ಬುಕ್ಕಿನಲ್ಲಿ ಬರೆದ ಕಮೆಂಟುಗಳು

ಫೇಸ್ಬುಕ್ಕಿನಲ್ಲಿ ಬರೆದ ಕಮೆಂಟುಗಳು

“ಅವಾಚ್ಯ ಶಬ್ದಗಳಿಂದ ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರನ್ನು ನಿಂದಿಸಿ, ಅವಮಾನ ಮಾಡಿ ಮತ್ತು ಏಕವಚನದಲ್ಲಿ ಸಂಬೋಧಿಸಿ, ಪರಿಶಿಷ್ಟ ಜಾತಿ ವ್ಯಕ್ತಿ ಎಂಬ ಕಾರಣಕ್ಕಾಗಿ ಉದ್ಧೇಶಪೂರ್ವಕವಾಗಿ ಅವರ ಗೌರವಕ್ಕೆ ಧಕ್ಕೆ ಉಂಟು ಮಾಡಿ, ಅವರ ಹೆಸರನ್ನು ಕೆಡಿಸುವಂತ ಕೆಲಸ ಮಾಡಿದ್ದಾರೆ. ಇವರಿಬ್ಬರ ಮೇಲೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕಾಗಿ ಮನವಿ ಮಾಡುತ್ತೇವೆ,” ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಮವಾಸ್ಯೆಬೈಲು ಪೊಲೀಸ್ ಠಾಣೆಯಲ್ಲಿ ನೀಡಿದ ದೂರು

ಅಮವಾಸ್ಯೆಬೈಲು ಪೊಲೀಸ್ ಠಾಣೆಯಲ್ಲಿ ಚಂದ್ರ ಸಿದ್ಧಾಪುರ ನೀಡಿದ ದೂರು

ಇದೇ ರೀತಿಯ ದೂರು ಇದೀಗ ಕುಂದಾಪುರದ ಅಮಾವಾಸೆಬೈಲು, ಶಂಕರನಾರಾಯಣ ಠಾಣೆಯಲ್ಲೂ ದಾಖಲಾಗಿದೆ.

ಈ ಕುರಿತು ಕುಂದಾಪುರ ಪಿಎಸ್ಐ ನಾಸೀರ್ ಹುಸೇನ್ ಹೇಳುವುದು ಹೀಗೆ, “ದೂರು ನೀಡಿದ್ದಾರೆ. ಆದರೆ ಎಫ್ಐಆರ್ ಮಾಡಿಲ್ಲ. ಹಿಂದಿನ ‘ಐಟಿ ಆಕ್ಟ್-66’ರ ಪ್ರಕಾರ ಈ ರೀತಿ ಕಮೆಂಟ್ಗಳಿಗೆ ಎಫ್ಐಆರ್ ಮಾಡುವ ಅವಕಾಶ ಇತ್ತು. ಈಗ ಚಿತ್ರ ಮಾಡಿಫಿಕೇಷನ್ (ತಿರುಚಿದರೆ) ಮಾತ್ರ ಎಫ್ಐಆರ್ ಮಾಡಬಹುದು. ಮಾತ್ರವಲ್ಲ ಇಲ್ಲಿ ಧರ್ಮದ ಬಗ್ಗೆ ಇದ್ದಿದ್ದರೆ ನಾನು ಎಫ್ಐಆರ್ ಮಾಡುತ್ತಿದ್ದೆ. ಆದರೆ ಸ್ಪಷ್ಟವಾಗಿ ಇಲ್ಲಿ ಜಾತಿ ಬಗ್ಗೆ ಕಮೆಂಟ್ ಮಾಡಿಲ್ಲ. ನಾನು ಈ ಬಗ್ಗೆ ಎಸಿಪಿ ಹಾಗೂ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಎಫ್ಐಆರ್ ಮಾಡ್ತೇನೆ,” ಎಂದು ‘ಸಮಾಚಾರ’ಕ್ಕೆ ತಿಳಿಸಿದ್ದಾರೆ.

Leave a comment

FOOT PRINT

Top