An unconventional News Portal.

ಫೇಕು ‘ಗಾಂಧಿ’ ತತ್ವ ಹಿಡಿದವರಿಗೆ ತೆರೆಯಿತು ಶ್ವೇತಭವನದ ಬಾಗಿಲು; ಇವರು 45ನೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

ಫೇಕು ‘ಗಾಂಧಿ’ ತತ್ವ ಹಿಡಿದವರಿಗೆ ತೆರೆಯಿತು ಶ್ವೇತಭವನದ ಬಾಗಿಲು; ಇವರು 45ನೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

ಬರಾಕ್ ಒಬಾಮ ಉತ್ತರಾಧಿಕಾರಿಯಾಗಿ ಸಹಸ್ರಕೋಟ್ಯಾಧೀಶ ಉದ್ಯಮಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಮಾಜಿ ‘ಸೆಕ್ರೆಟರಿ ಆಫ್ ಸ್ಟೇಟ್’ ಹಾಗೂ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪತ್ನಿ ಹಿಲರಿ ಕ್ಲಿಂಟನ್, ಟ್ರಂಪ್ ವಿರುದ್ಧ 218-289 ಮತಗಳಿಂದ ಪರಾಭವಗೊಂಡಿದ್ದಾರೆ.

45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಶ್ವೇತ ಭವನಕ್ಕೆ ಪ್ರವೇಶಿಸುವುದು ಖಚಿತವಾಗುತ್ತಿದ್ದಂತೆ ಜಗತ್ತಿನಾದ್ಯಂತ ಗೆಲುವಿನ ಅಲೆಗಳು ಅದರದ್ದೇ ಆದ ಪರಿಣಾಮಗಳನ್ನು ಹುಟ್ಟು ಹಾಕಿವೆ. ಮುಖ್ಯವಾಗಿ ಶೇರುಪೇಟೆಯಲ್ಲಿ ತಲ್ಲಣ ಕಾಣಿಸಿಕೊಂಡಿದ್ದು, ಚಿನ್ನದ ಬೆಲೆ ಏಕಾಏಕಿ ಏರಿಕೆಯಾಗಿದೆ. ಇನ್ನು ಬಲಪಂಥೀಯ ಧೋರಣೆಗಳನ್ನು ಬೆನ್ನಿಗಂಟಿಕೊಂಡ ಟ್ರಂಪ್ ಗೆಲುವಿನ ಸಂಭ್ರಮಾಚರಣೆಯಲ್ಲಿ ಒಂದಷ್ಟು ಭಾರತೀಯರೂ ಮಿಂದೇಳುತ್ತಿದ್ದಾರೆ.

ಯಾರು ಈ ಡೊನಾಲ್ಡ್ ಟ್ರಂಪ್?

ವಿವಾದ, ವಿನೋದ, ವ್ಯಂಗ್ಯ ಹೇಳಿಕೆಗಳ ಮೂಲಕ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಧೂಳೆಬ್ಬಿಸಿ ಸದ್ಯ ಅಧ್ಯಕ್ಷ ಗಾದಿಗೆ ಏರಲಿರುವವರು ಡೊನಾಲ್ಡ್ ಟ್ರಂಪ್. ಚುನಾವಣೆಯುದ್ದಕ್ಕೂ ವಿವಾದಿತ ಹೇಳಿಕೆಗಳಿಂದಾಗಿ ಭಾರಿ ಚರ್ಚೆಗೆ ಗ್ರಾಸವಾದ ಟ್ರಂಪ್ ತಮ್ಮ ಆಕ್ರಮಣಕಾರಿ ನಿಲುವಿನೊಂದಿಗೆ ಕೊನೆಗೂ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪತ್ನಿ ಇವಾನ, ತಂದೆ ಫೆಡ್ರಿಕ್ ಜತೆ ಡೊನಾಲ್ಡ್ ಟ್ರಂಪ್

ಪತ್ನಿ ಇವಾನ, ತಂದೆ ಫೆಡ್ರಿಕ್ ಜತೆ ಡೊನಾಲ್ಡ್ ಟ್ರಂಪ್

ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ಡೊನಾಲ್ಡ್ ಟ್ರಂಪ್ ಹುಟ್ಟಿದ್ದು; ತಂದೆ ಫ್ರೆಡ್ರಿಕ್ ಟ್ರಂಪ್ ಮಧ್ಯಮ ವರ್ಗಕ್ಕೆ ಬೇಕಾದ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸುವ ಜನಪ್ರಿಯ ರಿಯಲ್ ಎಸ್ಟೇಟ್ ಉದ್ಯಮಿ. ಮಗ ಟ್ರಂಪ್‍ನನ್ನು 13ನೇ ವಯಸ್ಸಿಗೇ ನ್ಯೂಯಾರ್ಕ್ ಮಿಲಿಟರಿ ಶಾಲೆಗೆ ಸೇರಿಸಿದರು. ಅಥ್ಲೆಟಿಕ್ಸ್‍, ಓದು ಎರಡರಲ್ಲೂ ಟ್ರಂಪ್ ಎತ್ತಿದ ಕೈ. ಇವತ್ತು ಅಧ್ಯಕ್ಷಗಾದಿಗೆ ಏರಿರುವ ಟ್ರಂಪ್’ಗೆ ಕಾಲೇಜು ದಿನಗಳಲ್ಲೇ ನಾಯಕತ್ವ ಗುಣಗಳು ಬಂದಿದ್ದವು. ಮುಂದೆ ರಾಜಕೀಯ ಪಡಸಾಲೆಗಳಲ್ಲಿ ಉದ್ಯಮಿಯ ಮಗ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳಲಾರಂಭಿಸಿದರು. ಕಾಲೇಜು ನಾಯಕರಾಗಿ ಹೊರಹೊಮ್ಮಿದರು. ಇವತ್ತು ಅವರು ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತುಕೊಳ್ಳಲು ಇದೂ ಸಹಾಯ ಮಾಡಿರಬಹುದು.

ಕಾಲೇಜು ಮುಗಿಸಿದ ಟ್ರಂಪ್ ರಾಜಕೀಯ ಬದಿಗಿಟ್ಟು, ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡು ತಂದೆಯ ಉದ್ಯಮದಲ್ಲೇ ತೊಡಗಿಸಿಕೊಂಡ್ರು. ಮ್ಯಾನ್‍ಹಟ್ಟನ್‍ನಲ್ಲಿ ಲಾಭದಾಯಕ ಬಿಲ್ಡಿಂಗ್ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿ ಅಪ್ಪನಿಂದ ಶಹಬ್ಬಾಸ್ ಗಿಟ್ಟಿಸಿದರು. ವಿಶಾಲ ಉದ್ಯಮ ಸಾಮ್ರಾಜ್ಯದ ಒಡೆಯವನಾಗುವ ಆಸೆ ಟ್ರಂಪ್‍ಗಿತ್ತು. ಅದಕ್ಕಾಗಿ ತಂದೆಯನ್ನು ಒಪ್ಪಿಸಿ ಸಾಲ ತೆಗೆದುಕೊಂಡರು. ಅದು ಅವರ ಮೊದಲ ರಿಸ್ಕ್. ಮ್ಯಾನ್‍ಹಟ್ಟನ್‍ಗೆ ಬಂದ ಟ್ರಂಪ್ ಅಧಿಕಾರ ಕೇಂದ್ರದ ಸುತ್ತ ಸುತ್ತಾಡುವ ಪ್ರಭಾವಿಗಳ ಗೆಳೆತನ ಸಂಪಾದಿಸಿಕೊಂಡರು. ಹೊಸ ಆಲೋಚನೆಗಳು, ಚಾಣಾಕ್ಷ ತಂತ್ರಗಳು, ಅಧಿಕಾರ ಕೇಂದ್ರದ ಜತೆಗಿನ ಸಂಪರ್ಕದಿಂದ ಟ್ರಂಪ್ ಬಲು ಬೇಗ ಲಾಭ ಗಳಿಸಲು ಆರಂಭಿಸಿದರು.

ತಮ್ಮ ಕಂಪೆನಿಯ ಹೆಸರನ್ನು 1971ರಲ್ಲಿ ‘ಟ್ರಂಪ್ ಆರ್ಗನೈಜೇಷನ್’ ಎಂದು ಬದಲಾಯಿಸಿದರು. ದೊಡ್ಡ ದೊಡ್ಡ ಬಿಲ್ಡಿಂಗ್ ನಿರ್ಮಾಣ ಪ್ರಾಜೆಕ್ಟ್ ಕೈಗೆತ್ತಿಕೊಂಡರು. 1980ರಲ್ಲಿ ಡೊನಾಲ್ಡ್ ಟ್ರಂಪ್, ‘ಗ್ರಾಂಡ್ ಹೈಟ್’ ಎನ್ನುವ ಬಿಲ್ಡಿಂಗ್ ನಿರ್ಮಾಣ ಮಾಡಿದಾಗ ನಿರ್ಮಾಣ ಕ್ಷೇತ್ರದಲ್ಲಿ ಟ್ರಂಪ್ ಖ್ಯಾತಿಯೂ ಅಷ್ಟೇ ಎತ್ತರಕ್ಕೆ ಏರಿತು. ಬರೋಬ್ಬರಿ ಲಾಭವೂ ಒಲಿದು ಬಂತು.

ಟ್ರಂಪ್ ಮಹತ್ವಾಕಾಂಕ್ಷಿ; ಸಣ್ಣ ಪುಟ್ಟ ಲಾಭಕ್ಕೆ ಸುಮ್ಮನಾಗಲಿಲ್ಲ. ಟ್ರಂಪ್ ಸಾಮ್ರಾಜ್ಯ ಅಮೆರಿಕಾದೆಲ್ಲೆಡೆ ವಿಸ್ತರಣೆಯಾಯಿತು. ಟ್ರಂಪ್ ಅದೇ ವೇಳೆಗ ದಾಂಪತ್ಯ ಜೀವನವನ್ನೂ ಆರಂಭಿಸಿದರು. ನ್ಯೂಯಾರ್ಕ್‍ನ ಜನಪ್ರಿಯ ಮಾಡೆಲ್ ಇವಾನಾ ವಿಂಕಲ್‍ಮೈರ್‍ ಜತೆ ರಿಂಗ್ ಬದಲಾಯಿಸಿದರು. ಈ ದಂಪತಿಗಳಿಗೆ ಮೂರು ಮಕ್ಕಳು ಹುಟ್ಟಿದರು.

ಮದುವೆಯಾದ ಮೇಲೆ ಟ್ರಂಪ್ ಖ್ಯಾತಿ ಮತ್ತಷ್ಟು ಹೆಚ್ಚಾಯಿತು. ಒಂದಾದ ಮೇಲೊಂದು ದೊಡ್ಡ ದೊಡ್ಡ ಬಿಲ್ಡಿಂಗ್‍ಗಳನ್ನು ಕಟ್ಟುತ್ತಾ ಹೋದರು. 1982ರಲ್ಲಿ ಐಶಾರಾಮಿ ಕಟ್ಟಡ ‘ಟ್ರಂಪ್ ಟವರ್’ ನಿರ್ಮಾಣವಾಯ್ತು. ಅಮೆರಿಕಾದ ಅಟ್ಲಾಂಟಿಕ್ ನಗರದಲ್ಲಿ ತಾಜ್ ಮಹಲ್ ಹೆಸರಿನಲ್ಲಿ ಕ್ಯಾಸಿನೋ ಆರಂಭಿಸಿದರು. ಆಗ ಅಮೆರಿಕಾದಲ್ಲಿ ಜೂಜಾಟ ಕಾನೂನು ಬದ್ದವಾಗಿತ್ತು. ಹಲವು ನಗರಗಳಲ್ಲಿ ಟ್ರಂಪ್ ಆಸ್ತಿ ಖರೀದಿಸಿ ಉದ್ಯಮ ದೈತ್ಯನಾಗಿ ಬೆಳೆದು ಬಿಟ್ಟರು. ನೂರಾರು ಸಾವಿರಾರು ಕೋಟಿ ಸುರಿದು ಒಂದೊಂದೇ ಆಸ್ತಿ ಖಬ್ಜ ಮಾಡಿಕೊಳ್ಳುತ್ತಾ ಯಶಸ್ವಿ ಉದ್ಯಮಿಯಾದರು ಟ್ರಂಪ್.

ಎತ್ತರಕ್ಕೇರಿದ ಟ್ರಂಪ್‍ ಕುಸಿತವೂ ನಿಧಾನವಾಗಿ ಆರಂಭವಾಯ್ತು. ಅದು 1990; ಅಮೆರಿಕಾದಲ್ಲಿ ಆರ್ಥಿಕ ಕುಸಿತ ಆರಂಭವಾಗಿತ್ತು. ನಿಧಾನವಾಗಿ ರಿಯಲ್ ಎಸ್ಟೇಟ್ ವಲಯದಲ್ಲಿ ತಲ್ಲಣಗಳು ಕಾಣಿಸಿಕೊಂಡವು. ಡೊನಾಲ್ಡ್ ಟ್ರಂಪ್‍ ಆಸ್ತಿಗಳ ಮೌಲ್ಯ ನಾಲ್ಕು ಪಟ್ಟು ಕುಸಿದು ಬಿತ್ತು. ಬ್ಯಾಂಕ್‍ಗಳ ಸಾಲ ಕಟ್ಟಲಾಗದೆ ಹಲವು ಬಿಲ್ಡಿಂಗ್‍ಗಳನ್ನು ಅವತ್ತು ಟ್ರಂಪ್ ಕಳೆದುಕೊಳ್ಳಬೇಕಾಯಿತು. ಟ್ರಂಪ್‍ರ ವೈವಾಹಿಕ ಬದುಕೂ ಹದಗೆಟ್ಟಿತು. 1991ರಲ್ಲಿ ಇವಾನಗೆ ಟ್ರಂಪ್ ವಿಚ್ಚೇದನ ನೀಡಿದರು. ಮುಂದೆ ನಟಿ ಮಾರ್ಲಾ ಮ್ಯಾಪಲ್‍ರನ್ನು ವರಿಸಿದರು ಟ್ರಂಪ್. ಆದ್ರೆ 1993ರಲ್ಲಿ ಆದ ಈ ಮದುವೆಯೂ ಬಾಳಿದ್ದು ನಾಲ್ಕು ವರ್ಷ ಮಾತ್ರ. ಮತ್ತೆ ಆಕೆಯೊಂದಿಗೂ ಮುನಿಸಿಕೊಂಡ ಟ್ರಂಪ್ ವಿಚ್ಛೇದನದ ಹಾದಿ ತುಳಿದರು. ಇದಾದ ಬಳಿಕ ಟ್ರಂಪ್ ಮತ್ತೆ ರಿಂಗ್ ಅದಲು ಬದಲು ಮಾಡಿಕೊಂಡಿದ್ದು ಸೂಪರ್ ಮಾಡೆಲ್ ಮೆಲಾನಿಯಾ ಕ್ಲೌಸ್ ಜೊತೆ. ಇದು ಅವರ ಪಾಲಿನ ಮೂರನೇ ಮದುವೆ.

Donald Trump Yಮಾಡೆಲ್, ಚಿತ್ರನಟಿಯರನ್ನು ವರಿಸಿದ ಟ್ರಂಪ್ ಜನಪ್ರಿಯ ಟಿವಿ ಶೋನಲ್ಲಿ ಕಾಣಿಸಿಕೊಂಡರು. 2004ರಲ್ಲಿ ‘ಎನ್‍ಬಿಸಿ’ಯ ‘ದಿ ಅಪ್ರೆಂಟೈಸ್ ಶೋ’ದಲ್ಲಿ ಸೆಲೆಬ್ರಿಟಿಯಾಗಿ ಭಾಗವಹಿಸಿದ ಟ್ರಂಪ್ಗೆ ರಾತೋ ರಾತ್ರಿ ಹೊಸ ಅಭಿಮಾನಿಗಳು ಹುಟ್ಟಿಕೊಂಡರು. ಟ್ರಂಪ್ ಹೆಸರು ಅಮೆರಿಕಾದಲ್ಲಿ ಮನೆ ಮಾತಾಯಿತು. ಇದು ಟ್ರಂಪ್‍ರ ಒಂದು ಬದುಕಿನ ಕಥೆ. ಇದರ ಹೊರಾಗಿಯೂ ಟ್ರಂಪ್‍ರಿಗೆ ಇನ್ನೊಂದು ಬದುಕಿತ್ತು. ಅದು ರಾಜಕೀಯ.

ರಾಜಕೀಯ ಪಡಸಾಲೆಗಳಲ್ಲಿ ‘ಬಿಲ್ಡರ್’:

ಶಾಲಾ ದಿನಗಳಲ್ಲೇ ವಿದ್ಯಾರ್ಥಿ ಚುನಾವಣೆಯ ಕಟ್ಟಾಳು ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷನಾಬೇಕೆಂಬ ಅಪಾರ ಆಸೆ ಇಟ್ಟುಕೊಂಡಿದ್ದರು. ಆ ನಿಟ್ಟಿನಲ್ಲಿ ಅವರ ಮೊದಲ ಪ್ರಯತ್ನ 2000ನೇ ಇಸವಿಯಲ್ಲಿ ಆರಂಭವಾಯಿತು. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿದರು. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲೇ ಟ್ರಂಪ್ ಹೀನಾಯವಾಗಿ ಸೋಲಬೇಕಾಯಿತು. ಆದರೇನಂತೆ ಟ್ರಂಪ್ ಅಧ್ಯಕ್ಷರಾಗುವ ತಮ್ಮ ಬಯಕೆಯನ್ನು ಮಾತ್ರ ಬಿಟ್ಟುಕೊಡಲಿಲ್ಲ.

ಮತ್ತೆ ಅಧ್ಯಕ್ಷರಾಗುವ ಆಸೆ ಟ್ರಂಪ್ ರಲ್ಲಿ ಮೊಳಕೆಯೊಡೆಯಿತು. 12 ವರ್ಷಗಳ ನಂತರ, 2012ರಲ್ಲಿ ಡೊನಾಲ್ಡ್ ಟ್ರಂಪ್ ತಾವೂ ಮುಂದಿನ ಅಧ್ಯಕ್ಷೀಯ ಚುಣಾವಣೆಯ ರೇಸ್‍ನಲ್ಲಿರುವುದಾಗಿ ಪ್ರಕಟಿಸಿದರು. ಸದಾ ಅಮೆರಿಕಾ ಅಧ್ಯಕ್ಷ ಒಬಾಮ ವಿರುದ್ಧ ಕೆಂಡ ಕಾರುತ್ತಾ ತಮ್ಮ ಅಸ್ತಿತ್ವವನ್ನು ಕಾಪಾಡುತ್ತಾ ಬಂದರು. ಬರಾಕ್ ಒಬಾಮಾ ಅಮೆರಿಕಾದಲ್ಲಿ ಜನಿಸಿಲ್ಲ ಎನ್ನುವುದರಿಂದ ಹಿಡಿದು, ಒಬಾಮ ಸರಕಾರದ ಪ್ರತಿ ನಡೆಯನ್ನೂ ಟೀಕಿಸುತ್ತಲೇ ಬಂದವರು ಟ್ರಂಪ್.

2015

ಟ್ರಂಪ್ ರಿಪಬ್ಲಿಕನ್ ಪಕ್ಷದಿಂದ ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿಯಾಗ್ತೇನೆ ಅಂತ ಘೋಷಣೆ ಮಾಡಿಯೇ ಬಿಟ್ಟರು. ಹಾಗೆ ಘೋಷಣೆ ಮಾಡಿದ್ದೇ ತಡ ವಿವಾದಗಳನ್ನು ಹೊದ್ದು ಮಲಗಿದರು ಟ್ರಂಪ್. ಈ ಹಿಂದೆ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಜಾನ್ ಮೆಕೇನ್‍ರನ್ನು ಮಿಲಿಟರಿ ಹೀರೋ ಎಂದು ಕರೆದರು. ತಮ್ಮನ್ನು ಗಾಂಧೀಜಿ ಜೊತೆ ಹೋಲಿಸಿಕೊಂಡು ವಿವಾದ ಮಾಡಿಕೊಂಡರು.

“ಮೊದಲು ಅವರು ನಿಮ್ಮತ್ತ ಉದಾಸೀನ ಮಾಡ್ತಾರೆ, ನಿಮ್ಮನ್ನು ನೋಡಿ ನಗ್ತಾರೆ, ನಿಮ್ಮ ಜೊತೆಗೆ ಕಾದಾಡ್ತಾರೆ, ನಂತರ ನೀವು ಗೆಲ್ಲುತ್ತೀರಿ” ಇದನ್ನು ಗಾಂಧೀಜಿ ಹೇಳಿದ ಸಾಲುಗಳೆಂದು ಟ್ವಿಟ್ಟರ್‍ನಲ್ಲಿ ಹಾಕಿ ಪಕ್ಕದಲ್ಲಿ ತಮ್ಮ ಫೋಟೋ ಹಾಕಿ ಪ್ರಚಾರ ಗಿಟ್ಟಿಸಲು ಹೋದರು. ಆದರೆ ಅದು ನಿಕೋಲಸ್ ಕ್ಲೀನ್ ಹೇಳಿಕೆಯಾಗಿತ್ತು; ಗಾಂಧೀಜಿ ಮಾತಾಗಿರಲಿಲ್ಲ.

ಚುನಾವಣಾ ಪ್ರಚಾರದಲ್ಲಿ ಡೊನಾಲ್ಡ್ ಟ್ರಂಪ್

ಚುನಾವಣಾ ಪ್ರಚಾರದಲ್ಲಿ ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ ವ್ಯಕ್ತಿಗತವಾಗಿ ಬಲಪಂಥೀಯ ಧೋರಣೆ ಇರುವ ಮನುಷ್ಯ. ಅಮೆರಿಕಾ ಜನರ ಬೆಂಬಲ ಗಿಟ್ಟಿಸಲು ತಿಪ್ಪರಲಾಗ ಹಾಕಿದರು. ಅಮೆರಿಕಾ ದೇಶದೊಳಗೆ ಮುಸ್ಲಿಮರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದಾಗಿಯೂ ಟ್ರಂಪ್ ಬಹಿರಂಗವಾಗಿ ಹೇಳಿದರು. ಇದು ಅಲ್ಲಿನ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿತು. ಜನಾಂಗೀಯವಾದಿ ಎಂಬೆಲ್ಲಾ ದೂರುಗಳು ಕೇಳಿ ಬಂದವು. ಭಾರತೀಯರು ಅಮೆರಿಕನ್ನರ ಉದ್ಯೋಗ ಕಸಿಯುತ್ತಿದ್ದಾರೆ ಎಂಬ ಹೇಳಿಕೆ ನೀಡಿ ಕೊನೆಗೆ ಅದೇ ಭಾರತೀಯರನ್ನು ಓಲೈಸಬೇಕಾಗಿ ಬಂತು. ಹಿಂದಿಯಲ್ಲಿ ಭಾರತೀಯರನ್ನು ಒಲಿಸಲು ಭಾಷಣದ ತುಣುಕನ್ನು ಹರಿಯಬಿಟ್ಟರು. ಭಾರತ ಮಾತ್ರವಲ್ಲ ಚೀನಾ, ಮೆಕ್ಸಿಕೋ, ಜಪಾನ್ ಜನರೂ ಉದ್ಯೋಗ ಕಸಿಯುತ್ತಿದ್ದಾರೆ. ಮೆಕ್ಸಿಕೋ ವಲಸೆ ತಡೆಯಲು ತಾನು ಅಮೆರಿಕಾ ಮೆಕ್ಸಿಕೋ ನಡುವೆ ಗೋಡೆ ಕಟ್ಟುತ್ತೇನೆ ಎನ್ನುವ ಅತಿರೇಕದ ಹೇಳಿಕೆಗಳನ್ನೂ ನೀಡಿದ್ದರು. ಇದಕ್ಕೆ ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅವರೇ ವಿರೋಧ ವ್ಯಕ್ತಪಡಿಸಿ, ಟ್ರಂಪ್ ಕ್ರೈಸ್ತರೇ ಅಲ್ಲ ಅಂತ ಹೇಳಿಕೆ ನೀಡಿದ್ದರು. ಅವರ ಲೈಂಗಿಕ ನಿಂದನೆಯ ಆಡಿಯೋ ಟೇಪ್ ಲೀಕ್ ಆಗಿ ವಿವಾದವೆದ್ದಿತು. ತನ್ನ ಟ್ಯಾಕ್ಸ್ ರಿಟರ್ನ್ಸ್ ಗಳನ್ನು ಬಹಿರಂಗಪಡಿಸಲು ಅವರು ಕೊನೆವರೆಗೂ ಒಪ್ಪಲೇ ಇಲ್ಲ.

ಹೀಗಿದ್ದೂ ಅವರು ಅಧ್ಯಕ್ಷರಾದರು. ಅಮೆರಿಕಾವನ್ನು ಮತ್ತೆ ಉನ್ನತ ಮಟ್ಟಕ್ಕೆ ತರುತ್ತೇನೆ; ಚೀನಾ ಒಂದು ದರೋಡೆಕೋರ ರಾಷ್ಟ್ರ; ಹೀಗೆ ವಿರೋಧಿ ರಾಷ್ಟ್ರಗಳನ್ನು ಮೇಲಿಂದ ಮೇಲೆ ಜರೆಯುತ್ತಾ ಬೆಂಬಲಿಗರ ಭರ್ಜರಿ ಚಪ್ಪಾಳೆ ಗಿಟ್ಟಿಸುತ್ತಿದ್ದರು. ಇದು ಅವರ ಚುನಾವಣಾ ಪ್ರಚಾರದ ವೈಖರಿಯಾಗಿತ್ತು.

ಹೀಗೆ ಟ್ರಂಪ್ ದೇಶಭಕ್ತಿಯ ಮಾತುಗಳು, ಅವರನ್ನು ಇವತ್ತು ಅಮೆರಿಕಾ ಅಧ್ಯಕ್ಷ ಪಟ್ಟಕ್ಕೆ ತಂದು ಕೂರಿಸಿದೆ. ಮುಕ್ತ ವ್ಯಾಪಾರ ವಹಿವಾಟು ಜಾರಿಗೆ ತರುತ್ತೇನೆ, ನಮ್ಮ ಗಡಿಗಳನ್ನು ಗಟ್ಟಿ ಮಾಡುತ್ತೇನೆ, ಮಾದಕವಸ್ತುಗಳ ಕಳ್ಳ ವ್ಯಾಪಾರಕ್ಕೆ ಬ್ರೇಕ್ ಹಾಕುತ್ತೇನೆ ಎಂಬೆಲ್ಲಾ ಸಾಲುಗಳ ಗೆಲುವಿನ ಭಾಷಣಗಳನ್ನು ಈಗಾಗಲೇ ಬಿಗಿದಿದ್ದಾರೆ. ಮಾತ್ರವಲ್ಲ ರಷ್ಯಾ ಜತೆ ಒಪ್ಪಂದ ಮಾಡಿಕೊಳ್ಳುವ ಸೂಚನೆಯನ್ನೂ ನೀಡಿದ್ದಾರೆ. ಇದು ಮಧ್ಯ ಪೂರ್ವ ಏಷ್ಯಾದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಗಳಿವೆ. ಮುಖ್ಯವಾಗಿ ಐಸಿಲ್ (ಐಸಿಸ್) ಪ್ರತಿಕ್ರಿಯೆ ಏನು ಎಂಬುದು ಕುತೂಹಲ ಮೂಡಿಸಿದೆ. ಇದೆಲ್ಲಾ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಆದರೆ ಒಂದಂತೂ ನಿಜ; ಜಗತ್ತಿನಾದ್ಯಂತ ಬಲಪಂಥದ ಗಾಳಿ ಬಲವಾಗಿ ಬೀಸುತ್ತಿದೆ. ಅದಕ್ಕೆ ಟ್ರಂಪ್ ಮತ್ತೊಂದು ಸೇರ್ಪಡೆಯಷ್ಟೆ.

ಚಿತ್ರ ಕೃಪೆ: ವಾಲ್ ಸ್ಟ್ರೀಟ್ ಜರ್ನಲ್, ಗಾರ್ಡಿಯನ್, ಡೈಲಿಮೇಲ್

Leave a comment

FOOT PRINT

Top