An unconventional News Portal.

ಅರಿವಿನ ಹಬ್ಬ ದೀಪಾವಳಿ ಮತ್ತು ಪಟಾಕಿ ಉದ್ಯಮದ ಒಡಲಾಳದಲ್ಲಿ ಚೈನಾ ಮೂಡಿಸಿದ ತಲ್ಲಣಗಳು!

ಅರಿವಿನ ಹಬ್ಬ ದೀಪಾವಳಿ ಮತ್ತು ಪಟಾಕಿ ಉದ್ಯಮದ ಒಡಲಾಳದಲ್ಲಿ ಚೈನಾ ಮೂಡಿಸಿದ ತಲ್ಲಣಗಳು!

ಹಿಂದೂಗಳು ಬಹು ಸಂಖ್ಯಾತರಾಗಿರುವ ಭಾರತದಲ್ಲಿ ದೀಪಾವಳಿ ಪ್ರಮುಖ ಹಬ್ಬ. ಈ ಹಬ್ಬಕ್ಕೆ ದೇಶದಾದ್ಯಂತ ಸಾವಿರಾರು ಕೋಟಿ ರೂಪಾಯಿಯ ಪಟಾಕಿ ಸುಡಲಾಗುತ್ತದೆ. ಪಟಾಕಿ ತಯಾರಿಕೆಯ ಸುತ್ತ ಕಟ್ಟಿಕೊಂಡ ಬದುಕುಗಳು, ಸಾವಿರಾರು ಕೋಟಿಯ ಉದ್ಯಮ, ಅದರೊಳಗಿನ ತಲ್ಲಣಗಳು ‘ಬೆಳಕಿನ ಹಬ್ಬ’ದ ತಳದಲ್ಲಿರುವ ಕತ್ತಲೆಯ ಕತೆಯನ್ನು ಹೇಳುತ್ತವೆ.

ಈ ಕತೆಗೆ ಕಿವಿಯಾಗಬೇಕಾದರೆ ಇವತ್ತು ಭಾರತದ ಪಟಾಕಿ ತಯಾರಿಕೆಯ ರಾಜಧಾನಿ ಎಂದೇ ಬಿಂಬಿಸಲ್ಪಡುವ ತಮಿಳುನಾಡಿನ ಶಿವಕಾಶಿಯ ಸದ್ಯದ ಒಡಲ ಕರೆಗೆ ಕೇಳಿಸಿಕೊಳ್ಳಬೇಕಿದೆ. ಸ್ಪೋಟಕಗಳ ರಾಜಧಾನಿ ಶಿವಕಾಶಿಯ ಭವಿಷ್ಯದ ದಿನಗಳು ಅಂಧಕಾರದತ್ತ ಮುಖಮಾಡಿದಂತೆ ಭಾಸವಾಗುತ್ತವೆ. ದೇಶವನ್ನೆಲ್ಲಾ ಬೆಳಕಿನಲ್ಲಿ ಬೆಳಗುವ ಇಲ್ಲಿನ ಕಾರ್ಮಿಕರ ಬದುಕು ಪ್ರತಿ ದೀಪಾವಳಿ ಬಂದಾಗಲೂ ನಿಧಾನವಾಗಿ ಕತ್ತಲು ಆವರಿಸಲಾರಂಭಿಸುತ್ತದೆ. ಇದಕ್ಕೆ ಕಾರಣ ಬಿಗಿಯಾಗುತ್ತಿರುವ ಕಾನೂನುಗಳು ಮತ್ತು ಮಾರುಕಟ್ಟೆಗೆ ದಾಗುಂಡಿ ಇಡುತ್ತಿರುವ ಕಡಿಮೆ ಬೆಲೆಯ ಚೈನಾ ಮೂಲದ ಪಟಾಕಿಗಳು.

ಪಟಾಕಿಗಳ ‘ಕಾಶಿ’:

firecracker factory‘ಭಾರತೀಯ ಸ್ಪೋಟಕವಸ್ತು ಕಾಯ್ದೆ-1940’ರಲ್ಲಿ ಜಾರಿಗೆ ಬಂದ ನಂತರ ಚೆನ್ನೈ ನಗರದಿಂದ 545 ಕಿಲೋಮೀಟರ್ ದೂರದಲ್ಲಿರುವ ಶಿವಕಾಶಿಯಲ್ಲಿ ಮೊದಲ ಲೈಸೆನ್ಸ್ ಪಡೆದ ಪಟಾಕಿ ತಯಾರಿಕಾ ಕಾರ್ಖಾನೆ ಆರಂಭವಾಯಿತು. ಇವತ್ತು ಇಲ್ಲಿನ ಪಟಾಕಿ ಕಾರ್ಖಾನೆಗಳು ದೇಶಕ್ಕೆ ಬೇಕಾಗುವ ಶೇಕಡಾ 90 ಪಟಾಕಿಗಳನ್ನು ಪೂರೈಸುತ್ತವೆ. ಪ್ರತಿ ವರ್ಷ ಸುಮಾರು 2,000 ಕೋಟಿಗೂ ಹೆಚ್ಚಿನ ಪಟಾಕಿಗಳು ಇಲ್ಲಿಂದ ಮಾರಾಟವಾಗುತ್ತದೆ. 2013ರ ಅಂದಾಜಿನಂತೆ ಇಲ್ಲಿನ ಪಟಾಕಿ ಉದ್ದಿಮೆ 25,000 ಜನರಿಗೆ ಉದ್ಯೋಗ ನೀಡಿದ್ದರೆ, ಈ ಪಟಾಕಿಯನ್ನೇ ಆಧರಿಸಿ ಬದುಕುವ 4 ಲಕ್ಷ ಜನ ಈ ದೇಶದಲ್ಲಿದ್ದಾರೆ. ಇಲ್ಲಿ ಸುಮಾರು 780 ಲೈಸೆನ್ಸ್ ಪಡೆದ ಮತ್ತು 700 ರಷ್ಟ ಲೈಸನ್ಸ್ ರಹಿತ ಪಟಾಕಿ ಕಾರ್ಖಾನೆಗಳಿವೆ ಎಂದು 2013ರಲ್ಲಿ ಅಂದಾಜು ಮಾಡಲಾಗಿದೆ.

ಶಿವಕಾಶಿ ಪಟಾಕಿ ಹಬ್ ಆಗಿ ಬೆಳೆಯಲು ಕಾರಣ ಇಲ್ಲಿನ ವಾತಾವರಣ. ಹೆಚ್ಚಿನ ಸಮಯ ಇಲ್ಲಿ ಬಿಸಿಲಿರುತ್ತದೆ; ಮಳೆ ಬೀಳುವುದು ತುಂಬಾ ಕಡಿಮೆ. ವರ್ಷದ 300 ದಿನ ಇಲ್ಲಿ ಆರಾಮವಾಗಿ ಪಟಾಕಿ ತಯಾರಿಸಬಹುದು.

ಒಮ್ಮೆ ದೀಪಾವಳಿ ಹತ್ತಿರ ಬಂತು ಎಂದರೆ ಸಾಕು, ಶಿವಕಾಶಿಯ ಬೀದಿಗಳು ಗಿಜಿಗುಟ್ಟುತ್ತವೆ. ದೊಡ್ಡ ಮೊತ್ತದ ಪಟಾಕಿ ಕೊಳ್ಳುವವರು, ಸಗಟು ವ್ಯಾಪಾರಿಗಳು ಇಲ್ಲಿಗೆ ಬಂದು ಇಲ್ಲಿಂದ ಪಟಾಕಿಗಳನ್ನು ಖರೀದಿಸುತ್ತಾರೆ. ಇದೇ ಪಟಾಕಿಗಳು ನಮ್ಮ ಮನೆ ಮೇಲಿನ ಆಗಸದಲ್ಲೇ ಚಿತ್ತಾರ ಬಿಡಿಸುತ್ತವೆ.

ಉದ್ಯಮದ ಒಡಲ ಬೆಂಕಿ:

ಇಂದು ಶಿವಕಾಶಿ ಪಟಾಕಿ ಉದ್ಯಮ ಬಿಕ್ಕಟ್ಟಿನ ಸ್ಥಿತಿಗೆ ಬಂದು ನಿಂತಿದೆ. ನಗರಗಳಲ್ಲಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವಾಗುತ್ತದೆ, ಹಣ ಪೋಲಾಗುತ್ತದೆ ಎಂಬ ವಿಚಾರದಲ್ಲಿ ಜನರನ್ನು ಪಟಾಕಿ ಕೊಳ್ಳದಂತೆ ಹಲವು ಆಯಾಮಗಳಿಂದ ಒತ್ತಡ ಹೇರುವ ಕೆಲಸಗಳಾಗುತ್ತಿವೆ. ಇದು ಇಲ್ಲಿನ ಪಟಾಕಿ ಉದ್ಯಮದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪಟಾಕಿಯ ಖರೀದಿ ಕಡಿಮೆಯಾಗಿದೆ ಎನ್ನುವುದು ಶಿವಕಾಶಿಯ ಉದ್ಯಮಿಗಳ ಮಾತು.

sivakasi2-cracker-deathಇಲ್ಲಿನ ಪಟಾಕಿ ಉದ್ಯಮವೂ ಕವಲು ದಾರಿಯಲ್ಲಿ ನಿಂತಿದೆ. ಸುರಕ್ಷತಾ ಕ್ರಮಗಳ ಬಗ್ಗೆ ಸರಕಾರಗಳು ತಕರಾರು ಎತ್ತುತ್ತಿವೆ. 2012ರಲ್ಲಿ ಇಲ್ಲಿನ ಓಂ ಶಕ್ತಿ ಫ್ಯಾಕ್ಟರಿಯಲ್ಲಿ ನಡೆದ ಪಟಾಕಿ ಸ್ಪೋಟ ಅವಘಡದಲ್ಲಿ 35 ಜನ ಪ್ರಾಣ ಕಳೆದುಕೊಂಡಿದ್ದರು. ಇಲ್ಲಿ ಮೊದಲಿನಿಂದಲೂ ಬಾಲಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸುರಕ್ಷತೆಯ ಕಾರಣಕ್ಕೆ ಸರಕಾರ ಲೈಸೆನ್ಸ್ ನಿಯಮಗಳನ್ನು ಬಿಗಿ ಮಾಡಿದ್ದರಿಂದ 2013ರಲ್ಲಿ ಇಲ್ಲಿನ 80 ಘಟಕಗಳು ಬಾಗಿಲೆಳೆದುಕೊಂಡಿದ್ದವು. ಇದೇ ಹೊತ್ತಿಗೆ ಇದನ್ನೇ ನಂಬಿಕೊಂಡಿದ್ದ 20,000 ಜನರ ಬದುಕು ಬೀದಿಗೆ ಬಂದಿತ್ತು.

ಚೈನಾದ ಹಾವಳಿ:

ಇದಲ್ಲದೇ ಚೀನಾದಿಂದ ಕಡಿಮೆ ಬೆಲೆಯ ಪಟಾಕಿಗಳು ಭಾರತಕ್ಕೆ ಬರುತ್ತಿದ್ದು ಶಿವಕಾಶಿಯ ಪಟಾಕಿಗಳಿಗೆ ಕೊಳ್ಳಿ ಇಡುತ್ತಿವೆ.

ಒಂದು ಅಂದಾಜಿನಂತೆ ಈ ವರ್ಷ ಚೀನಾದಿಂದ 1,500 ಕೋಟಿ ಬೆಲೆಯ ಪಟಾಕಿಗಳು ಭಾರತಕ್ಕೆ ಬಂದಿವೆ. ಚೈನಾದಲ್ಲಿ ಕಡಿಮೆ ಕೂಲಿಗೆ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವುದರಿಂದ ಹಾಗೂ ಕಡಿಮೆ ಬೆಲೆಯ ಕಚ್ಛಾಪದಾರ್ಥಗಳನ್ನು ಬಳಕೆಯಿಂದ ಶಿವಕಾಶಿಯ ಬೆಲೆಯ ಅರ್ಧ ಬೆಲೆಗೆ ಪಟಾಕಿಗಳು ಸಿಗುತ್ತವೆ. ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಪೊಟಾಷಿಯಂ, ಸೋಡಿಯಂ ಕ್ಲೋರೈಡ್ ರೀತಿಯ ರಾಸಾಯನಿಕಗಳನ್ನು ಈ ಪಟಾಕಿಗಳಲ್ಲಿ ಬಳಸುವುದರಿಂದ ಹೆಚ್ಚಿನ ಶಬ್ದ ಮತ್ತು ಬೆಂಕಿ ಏಳುವುದರಿಂದ ಜನರೂ ಇದನ್ನೇ ಹೆಚ್ಚು ಇಷ್ಟಪಡುತ್ತಾರೆ.

ಕಡಿಮೆ ಬೆಲೆಯಿಂದಾಗಿ ಜಗತ್ತಿನ ಸುಮಾರು 47 ಸಾವಿರ ಕೋಟಿಯ ಪಟಾಕಿ ರಫ್ತಿನಲ್ಲಿ ಚೀನಾವೇ ಮೇಲುಗೈ ಸಾಧಿಸಿದೆ. ಇದು ಶಿವಕಾಶಿಗೆ ದೊಡ್ಡ ಹೊಡೆತ ನೀಡುತ್ತಿದೆ.

ಉಳಿವಿಗಾಗಿ ಗುದ್ದಾಟ:

sivakasi2-cracker-makingಸಾಂಪ್ರದಾಯಿಕ ಪಟಾಕಿಗಳ ತಯಾರಿಕೆಯನ್ನೇ ನೆಚ್ಚಿಕೊಂಡ ಶಿವಕಾಶಿಯ ಕಾರ್ಖಾನೆಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಕಾರ್ಯಶೈಲಿ ಬದಲಾಯಿಸಿಕೊಂಡಿವೆ. ಹೆಚ್ಚು ಸುರಕ್ಷತಾ ಕ್ರಮಗಳನ್ನು ಒಳಗೊಳ್ಳುವ ಮೂಲಕ ಪಟಾಕಿ ಉತ್ಪಾದನೆಯನ್ನು ಮುಂದುವರಿಸಿವೆ. ಸುಡುಮದ್ದುಗಳ ಮಿಶ್ರಣ, ಪ್ಯಾಕಿಂಗ್, ದೊಡ್ಡ ದೊಡ್ಡ ಪಟಾಕಿಗಳಿಗೆ ಮದ್ದು ತುಂಬಿಸುವುದು ಮುಂತಾದ ಕೆಲಸಗಳನ್ನು ಸಂಪೂರ್ಣ ಯಾಂತ್ರೀಕೃತಗೊಳಿಸಿವೆ. ಇದರಿಂದ ತಯಾರಿ ವೆಚ್ಚವೂ ಕಡಿಮೆಯಾಗಿದೆ.

ಸಂಶೋಧನೆ ಮತ್ತು ಅಭಿವೃದ್ದಿ (R&D) ವಿಭಾಗಗಳು ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಹುಟ್ಟಿಕೊಂಡಿವೆ. ಯಾರು ಹೊಸ ಹೊಸ ಪಟಾಕಿಗಳನ್ನು ತಯಾರಿಸುತ್ತಾರೋ ಅವರು ಮಾತ್ರ ಮೇಲೆ ಮೇಲೆ ಹೋಗುತ್ತಾರೆ ಎನ್ನುವುದು ಇಲ್ಲಿನ ದೊಡ್ಡ ದೊಡ್ಡ ಪಟಾಕಿ ಉದ್ಯಮಿಗಳಿಗೂ ಅರ್ಥವಾಗಿದೆ.

ಇಲ್ಲಿನ ಪಟಾಕಿ ಉದ್ಯಮದೊಳಗೆ ಹೊಸ ತಲೆಮಾರು ಕಾಲಿಡುತ್ತಿದ್ದಂತೆ ಬದಲಾವಣೆಗಳೂ ಕಾಣುತ್ತಿವೆ. ಯುವಕರು ಉದ್ಯಮದೊಳಕ್ಕೆ ಕಾಲಿಟ್ಟು ಹೊಸ ಮಾದರಿಗಳನ್ನು ಹುಟ್ಟಿ ಹಾಕುತ್ತಿದ್ದಾರೆ. ಕೆಲವು ಕಂಪೆನಿಗಳು ಈಗಾಗಲೇ ಮುಖ್ಯ ಪಟ್ಟಣಗಳಲ್ಲಿ ತಮ್ಮದೇ ಮಾರಾಟ ಮಳಿಗೆಗಳನ್ನು ತೆರೆದು, ಪಟಾಕಿಗಳನ್ನೂ ‘ಬ್ರ್ಯಾಂಡ್’ ಹೆಸರಿನಲ್ಲಿ ಮಾರಾಟಕ್ಕೆ ಇಳಿಸಿದ್ದಾರೆ. ಇದರಿಂದ ಜನರಿಗೂ ಕಡಿಮೆ ದರದಲ್ಲಿ ಪಟಾಕಿ ಕೈಗೆ ಸಿಗುವುದಲ್ಲದೇ ಉತ್ಪಾದಕರೂ ಹೆಚ್ಚಿನ ಲಾಭ ಎಣಿಸುತ್ತಿದ್ದಾರೆ.

ಹೀಗಿದ್ದೂ, ಇಲ್ಲಿನ ಉದ್ಯಮಿಗಳಿಗೆ ತಮ್ಮ ಪಟಾಕಿ ಉದ್ಯಮದ ಮೇಲೆ ನಂಬಿಕೆ ಉಳಿದಿಲ್ಲ. ಪರಂಪರಾಗತವಾಗಿ ಸುಡುಮದ್ದುನ್ನೇ ಉತ್ಪಾದಿಸುತ್ತಾ ಬಂದವರು ನಿಧಾನವಾಗಿ ಬೇರೆ ಉದ್ಯಮಗಳತ್ತಲೂ ಮನಸ್ಸು ಮಾಡುತ್ತಿದ್ದಾರೆ.  ಪ್ರಮುಖ ಕಂಪೆನಿಗಳು ಈಗಾಗಲೇ ಶಾಲೆ, ಕಾಲೇಜು ಆಸ್ಪತ್ರೆಗಳನ್ನು ಕಟ್ಟಿಕೊಂಡಿದ್ದು ಹೊಸ ಆದಾಯದ ಮೂಲಗಳತ್ತ ಹೊರಟು ನಿಂತಿವೆ. ಶಿವಕಾಶಿ ಸುತ್ತ ಮುತ್ತ ಬೆಳೆದು ನಿಂತಿರುವ ಕಾಲೇಜು, ಆಸ್ಪತ್ರೆಗಳೇ ಇದಕ್ಕೆ ಸಾಕ್ಷಿ.

ಶಿವಕಾಶಿ ಬದಲಾಗುತ್ತಿದೆ. ಪಟಾಕಿ ಮಾರುಕಟ್ಟೆಯೂ ಬದಲಾಗುತ್ತಿದೆ. ಅರಿವಿನ ಹಬ್ಬ ದೀಪಾವಳಿ ಮಾತ್ರ ತನ್ನೊಳಗಿನ ಸಂಭ್ರಮಗಳಿಗೆ ಪ್ರತಿ ವರ್ಷ ಹೊಸ ಸಾಕ್ಷಿಗಳನ್ನು, ಶುಭಾಷಯ ವಿನಿಮಯಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ.

ಚಿತ್ರ ಕೃಪೆ: ಬಿಸಿನೆಸ್ ಸ್ಟಾಂಡರ್ಡ್, ಮಿಂಟ್, ದಿ ಹಿಂದೂ

Leave a comment

FOOT PRINT

Top