An unconventional News Portal.

‘ಟಿವಿ 9 ಫಾರ್ ಸೇಲ್’: ಆಂಧ್ರ ಮೂಲದ ಸುದ್ದಿವಾಹಿನಿಗಳ ಗುಚ್ಛ ಝೀ ತೆಕ್ಕೆಗೆ?

‘ಟಿವಿ 9 ಫಾರ್ ಸೇಲ್’: ಆಂಧ್ರ ಮೂಲದ ಸುದ್ದಿವಾಹಿನಿಗಳ ಗುಚ್ಛ ಝೀ ತೆಕ್ಕೆಗೆ?

13 ವರ್ಷಗಳನ್ನು ಕಳೆದ ಕಂಪನಿ, ಪ್ರಾದೇಶಿಕ ಭಾಷಾ ಟಿವಿ ಮಾಧ್ಯಮದಲ್ಲಿ ಹೆಸರುವಾಸಿಯಾಗಿರುವ ಟಿವಿ 9 ಸಮೂಹ ‘ಝೀ ಗ್ರೂಪ್’ ಪಾಲಾಗಲಿದೆ.

ಹೈದರಾಬಾದ್ ಮೂಲದ ಮಾಧ್ಯಮ ಸಂಸ್ಥೆ ‘ಅಸೋಸಿಯೇಟೆಡ್ ಬ್ರಾಡ್ಕಾಸ್ಟಿಂಗ್ ಕಂಪೆನಿ ಪ್ರೈವೇಟ್ ಲಿಮಿಟೆಡ್’ (ಎಬಿಸಿಎಲ್)ನಲ್ಲಿ ದೊಡ್ಡ ಪ್ರಮಾಣದ ಶೇರು ಖರೀದಿಗೆ ‘ಝೀ ಸಂಸ್ಥೆ’ ಮುಂದಾಗಿದೆ. ಇದೇ ‘ಎಬಿಸಿಎಲ್’ ಕಂಪೆನಿ ವತಿಯಿಂದ ಕನ್ನಡವೂ ಸೇರಿದಂತೆ, ಹಲವು ಭಾಷೆಗಳಲ್ಲಿ 24/7 ಸುದ್ದಿ ವಾಹಿನಿಗಳು ಟಿವಿ 9 ಬ್ರ್ಯಾಂಡ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಟಿವಿ 9 ಮಾರಾಟದ ಸುದ್ದಿಯನ್ನು ಮೂಲಗಳು ಖಚಿತಪಡಿಸಿದ್ದು, ಸದ್ಯದಲ್ಲೇ ವ್ಯವಹಾರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು ಹೇಳಿವೆ.

ಟಿವಿ 9 ಸಮೂಹ ಸಂಸ್ಥಾಪಕ ರವಿ ಪ್ರಕಾಶ್.

ಟಿವಿ 9 ಸಮೂಹ ಸಂಸ್ಥಾಪಕ ರವಿ ಪ್ರಕಾಶ್.

ಉದ್ಯಮಿ ಚಿಂತಾಲಪತಿ ಶ್ರೀನಿವಾಸ ರಾಜು (ಶ್ರೀನಿ ರಾಜು) ‘ಎಬಿಸಿಎಲ್’ನಲ್ಲಿ ಶೇಕಡಾ 60 ಶೇರುಗಳನ್ನು ಹೊಂದಿದ್ದಾರೆ. ಅಮೆರಿಕಾ ಮೂಲದ ‘ಸೈಫ್ ಪಾರ್ಟ್ನರ್’ ಶೇಕಡಾ 20 ಶೇರು ಹೊಂದಿದ್ದರೆ, ಟಿವಿ 9 ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿ ಪ್ರಕಾಶ್ ಮತ್ತು ಅವರ ಸಹವರ್ತಿಗಳು ಉಳಿದ ಶೇಕಡಾ 20 ಶೇರುಗಳನ್ನು ಹಂಚಿಕೊಂಡಿದ್ದಾರೆ. ಇವರಲ್ಲಿ ಪತ್ರಕರ್ತ ರವಿ ಪ್ರಕಾಶ್ ಮತ್ತು ‘ಸೈಫ್ ಪಾರ್ಟ್ನರ್ಸ್’ ತುಂಬಾ ಹಿಂದೇಯೇ ತಮ್ಮ ಪಾಲಿನ ಶೇರುಗಳನ್ನು ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಅವರ ಬೇಡಿಕೆಯ ಮೊತ್ತಕ್ಕೆ ಶೇರು ಖರೀದಿಸಲು ಯಾರೂ ಮುಂದೆ ಬಂದಿರಲಿಲ್ಲ.

ಮೂಲಗಳ ಪ್ರಕಾರ, ಝೀ ಮತ್ತು ‘ಎಬಿಸಿಎಲ್’ ನಡುವೆ ಡೀಲ್ ಮುಗಿದಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ವರ್ಗಾವಣೆ ಪ್ರಕ್ರಿಯೆಗಳೆಲ್ಲಾ ಮುಗಿಯಲಿವೆ. “ಕೆಲವು ಸಮಯದ ಹಿಂದೆ ಸುಭಾಶ್ಚಂದ್ರ ಒಡೆತನದ ‘ಝೀ ಗ್ರೂಪ್’ ಮತ್ತು ಇತರ ನಾಲ್ಕು ಕಂಪೆನಿಗಳು ‘ಎಬಿಸಿಎಲ್’ ಮಾಲೀಕರ ಜತೆ ಒಪ್ಪಂದಕ್ಕೆ ಬಂದಿವೆ. ಆದರೆ ಒಪ್ಪಂದದ ಮೊತ್ತವನ್ನು ಮಾತ್ರ ಗುಪ್ತವಾಗಿಡಲಾಗಿದೆ,” ಎಂದು ‘ಎಬಿಸಿಎಲ್’ ಹಿರಿಯ ಅಧಿಕಾರಿ ಹೇಳಿದ್ದಾರೆ ಎಂದು ‘ಬಿಸಿನೆಸ್ ಸ್ಟಾಂಡರ್ಡ್’ ವರದಿ ಮಾಡಿದೆ.

ಎಷ್ಟು ಮೊತ್ತಕ್ಕೆ ಕಂಪೆನಿಯನ್ನು ಮಾರಲಾಗುತ್ತಿದೆ, ಎಷ್ಟು ಶೇಕಡಾ ಶೇರನ್ನು ಯಾರು ಪಡೆಯಲಿದ್ದಾರೆ ಎಂಬ ಮಾಹಿತಿಗಳನ್ನು ಮಾತ್ರ ಗುಟ್ಟಾಗಿಡಲಾಗಿದೆ. ಆದರೆ ಎಬಿಸಿಎಲ್ ಅಧಿಕಾರಿಗಳು ಮಾತ್ರ ನಾವು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಅಂತ ಮಾರಾಟದ ವಾರ್ತೆಗಳನ್ನು ತಳ್ಳಿ ಹಾಕಿದ್ದಾರೆ.

ಟಿವಿ 9 ಸಾಂಭಾವ್ಯ ಮಾರಾಟದ ಕುರಿತು ಪ್ರಶ್ನೆಗೆ ಉತ್ತರಿಸಿದ ಸಿಇಒ ರವಿ ಪ್ರಕಾಶ್ “ಸಾಮಾನ್ಯವಾಗಿ ಖಾಸಗಿ ಬಂಡವಾಳಗಾರರು 7 ವರ್ಷಗಳಲ್ಲಿ ಕಂಪೆನಿಯಿಂದ ಹೊರಬರುವ ಗುರಿ ಇಟ್ಟುಕೊಂಡು ಹೂಡಿಕೆ ಮಾಡುತ್ತಾರೆ. ಆದರೆ ನಮಗೆ ಬಂಡವಾಳ ಹೂಡಿದವರು 12 ವರ್ಷಗಳಿಂದ ಕಂಪೆನಿಯ ಜೊತೆಗಿದ್ದಾರೆ. ನಾವು ಒಂದಷ್ಟು ಜನರೊಂದಿಗೆ ಶೇರು ಮಾರುವ ವಿಚಾರದಲ್ಲಿ ಸಂಪರ್ಕದಲ್ಲಿದ್ದೇವೆ ನಿಜ. ಆದರೆ ಅಂತಿಮ ತೀರ್ಮಾನಕ್ಕಿನ್ನೂ ಬಂದಿಲ್ಲ,” ಎಂದಿದ್ದಾರೆ.

‘ಎಬಿಸಿಎಲ್’ ಇತಿಹಾಸ

ಎಬಿಎಸ್ಎಲ್ 2003ರಲ್ಲಿ ‘ಟಿವಿ 9’ ಹೆಸರಿನಲ್ಲಿ ಮೊದಲ 24/7 ಚಾನಲನ್ನು ತೆಲುಗು ಬಾಷೆಯಲ್ಲಿ ಆರಂಭಿಸಿತು. ಇದಾದ ನಂತರ ಕನ್ನಡದಲ್ಲಿಯೂ ಟಿವಿ 9 ಕರ್ನಾಟಕ ಆರಂಭವಾಯಿತು. ಮುಂದೆ ಮರಾಠಿ, ಗುಜರಾತಿ ಸೇರಿದಂತೆ ಇತರ ಭಾಷೆಗಳಿಗೂ ತನ್ನ ಜಾಲ ವಿಸ್ತರಿಸಿಕೊಂಡ ‘ಎಬಿಸಿಎಲ್’ ಸದ್ಯ 7 ವಾಹಿನಿಗಳನ್ನು ಮುನ್ನಡೆಸುತ್ತಿದೆ.

ಶ್ರೀನಿ ರಾಜು ಐ ಲ್ಯಾಬ್ಸ್ ಕ್ಯಾಪಿಟಲ್ ಎಂಬ ಕಂಪೆನಿ ಹೊಂದಿದ್ದರು. ಮುಂದೆ ಇದೇ ‘ಪೀಪುಲ್ ಕ್ಯಾಪಿಟಲ್ ಎಲ್ಎಲ್ಸಿ’ ಎಂದು ಹೆಸರು ಬದಲಾಯಿಸಿಕೊಂಡಿತ್ತು. ಈ ಕಂಪೆನಿ ಮೂಲಕ 2004ರಲ್ಲಿ ‘ಎಬಿಸಿಎಲ್’ನಲ್ಲಿ 80 ಕೋಟಿ ರೂಪಾಯಿ ಹಣ ಹೂಡಲಾಗಿತ್ತು. ‘ಪೀಪುಲ್ ಕ್ಯಾಪಿಟಲ್’ ಕೈಯಿಂದಲೇ 2009ರಲ್ಲಿ ‘ಸೈಫ್ ಪಾರ್ಟ್ನರ್ಸ್’ ಶೇಕಡಾ 20 ಶೇರುಗಳನ್ನು ಖರೀದಿಸಿತ್ತು.

ಸದ್ಯ ದೇಶದಲ್ಲಿ ಝೀ ಸಂಸ್ಥೆ ಒಟ್ಟು 35 ಮನರಂಜನೆ ಮತ್ತು ಸುದ್ದಿ ವಾಹಿನಿಗಳನ್ನು ಹಿಂದಿ, ಇಂಗ್ಲೀಷ್ ಮತ್ತು ಇತರ ಭಾಷೆಗಳಲ್ಲಿ ನಡೆಸುತ್ತಿದೆ. ಈ ಹಿಂದೆ ತೆಲುಗಿನಲ್ಲಿ ಝೀ ಸಂಸ್ಥೆ ಸುದ್ದಿ ವಾಹಿನಿಯನ್ನು ಆರಂಭಿಸಿತ್ತು. ನಾಲ್ಕು ವರ್ಷಗಳ ಕೆಳಗೆ ಅದನ್ನು ಮುಚ್ಚಲಾಗಿತ್ತು. ಇದೀಗ ಟಿವಿ 9 ಖರೀದಿಯೊಂದಿಗೆ ಕನ್ನಡವೂ ಸೇರಿದಂತೆ ತೆಲುಗು, ಗುಜರಾತ್ ಹಾಗೂ ಹಲವು ಪ್ರಾದೇಶಿಕ ಭಾಷೆಗಳ ಸುದ್ದಿ ಮಾರುಕಟ್ಟೆಗೆ ಝೀ ಸಂಸ್ಥೆ ಲಗ್ಗೆ ಹಾಕಲಿದೆ.

ಬಿಡ್ಡಿಂಗ್ ಭರಾಟೆ: 

‘ಎಕ್ಸ್ಚೇಂಜ್ ಫಾರ್ ಮೀಡಿಯಾ’ ಪೋರ್ಟಲ್ ವರದಿ ಪ್ರಕಾರ, ಟಿವಿ 9 ಸಮೂಹ ಸಂಸ್ಥೆಯನ್ನು ಮಾರಾಟ ಮಾಡಲು ಬಿಡ್ಡಿಂಗ್ ನಡೆಯುತ್ತಿದೆ. ಎಬಿಸಿಎಲ್ ಮಾಲೀಕರು 540- 600 ಕೋಟಿ ಮೊತ್ತದ ಹೂಡಿಕೆಯನ್ನು  ನಿರೀಕ್ಷಿಸುತ್ತಿದ್ದಾರೆ. ಬಿಡ್ಡಿಂಗ್ ಪ್ರಕ್ರಿಯೆಯ ಅಂತಿಮ ಸುತ್ತಿನಲ್ಲಿ ಝೀ ಸಂಸ್ಥೆ ಭಾಗವಹಿಸುತ್ತಿರುವುದು ಖಚಿತಗೊಂಡಿದೆ.

ಈವರೆಗೆ, ಟಿವಿ9 ತೆಲುಗು 76. 3 ಕೋಟಿ, ಟಿವಿ9 ಕರ್ನಾಟಕ 60. 6 ಕೋಟಿ, ಟಿವಿ ಗುಜರಾತ್ 23. 5 ಕೋಟಿ ವಾರ್ಷಿಕ ಆದಾಯವನ್ನು ತಂದುಕೊಡುತ್ತಿವೆ. 2016ರ ಆರ್ಥಿಕ ವರ್ಷಗದ ಅಂತ್ಯದ ವೇಳೆಗೆ 188. 56 ಕೋಟಿ ಲಾಭವಾಗಿದೆ. 2017ರ ಅಂತ್ಯಕ್ಕೆ ಲಾಭದ ಮೊತ್ತವು 228 ಕೋಟಿ ತಲುಪುವ ಅಂದಾಜಿದೆ.

ಈ ಹಿಂದೆ, ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆಪ್ತ, ‘ಮೈ ಹೋಮ್ ಗ್ರೂಪ್’ನ ಜೆ. ರಾಮೇಶ್ವರ ರಾವ್ ಟಿವಿ 9 ಸಂಸ್ಥೆಯನ್ನು ಖರೀದಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೂ ಮೊದಲು, ‘ಟೈಮ್ಸ್ ಗ್ರೂಪ್’ ಕೂಡ ಟಿವಿ 9 ಖರೀದಿಯ ಕುರಿತು ಮಾತುಕತೆ ನಡೆಸಿತ್ತು.

ಮಾಹಿತಿ ಮೂಲ: ಬಿಜಿನೆಸ್ ಸ್ಟ್ಯಾಂಡರ್ಡ್.

Leave a comment

FOOT PRINT

Top