An unconventional News Portal.

ಮತ್ತೆ ಉಗ್ರರ ದಾಳಿಗೆ ನಲುಗಿದ ಪಾಕ್: ಕ್ವೆಟ್ಟಾದಲ್ಲಿ 60 ಪೊಲೀಸರ ಮಾರಣ ಹೋಮ!

ಮತ್ತೆ ಉಗ್ರರ ದಾಳಿಗೆ ನಲುಗಿದ ಪಾಕ್: ಕ್ವೆಟ್ಟಾದಲ್ಲಿ 60 ಪೊಲೀಸರ ಮಾರಣ ಹೋಮ!

ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ಬಾಂಬ್ ದಾಳಿಗೆ 60 ಜನ ಸಾವನ್ನಪ್ಪಿದ್ದಾರೆ. ‘ಜಮಾತ್-ಇ-ಝಂಗ್ವಿ’ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದ್ದು 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯಕ್ಕೆ ಸೇರಿದ ಕ್ವೆಟ್ಟಾ ನಗರದಲ್ಲಿ ಪೊಲೀಸರ ತರಬೇತಿ ಶಿಬಿರ ನಡೆಯುತ್ತಿತ್ತು. ಇದರಲ್ಲಿ ಸುಮಾರು 200 ಟ್ರೇನೀ ಪೊಲೀಸರು ಭಾಗವಹಿಸಿದ್ದರು. ಇದೇ ಶಿಬಿರದ ಮೇಲೆ ‘ಜಮಾತ್ ಇ ಝಂಗ್ವಿ’ ಉಗ್ರವಾದಿ ಸಂಘಟನೆಯ ಬಂಡುಕೋರರು ದಾಳಿ ನಡೆಸಿದ್ದಾರೆ. ಸೋಮವಾರ ರಾತ್ರಿಯ ವೇಳೆಗೆ ಈ ದಾಳಿ ನಡೆಸಿದ್ದು ಕೆಲವರನ್ನು ಕೊಂದ ಉಗ್ರರು ಇನ್ನು ಕೆಲವರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಸುಮಾರು ಐದು ಗಂಟೆಗಳ ಕಾರ್ಯಾಚರಣೆ ನಂತರ ಮಂಗಳವಾರ ಮುಂಜಾನೆ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿದೆ. ಘಟನೆಯಲ್ಲಿ ನೂರಕ್ಕೂ ಹೆಚ್ಚು ತರಬೇತಿಯಲ್ಲಿದ್ದ ಪೊಲೀಸರು ಗಾಯಗೊಂಡಿದ್ದಾರೆ. ಕೆಲವು ಕೆಡೆಟ್ಗಳು ಗಂಭೀರ ಗಾಯಗೊಂಡಿದ್ದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

pak-quetta-attack-injuriesಸದ್ಯ ಬಲೂಚಿಸ್ತಾನದ ಎಲ್ಲಾ ಆಸ್ಪತ್ರೆಗಳಿಗೂ ಗಾಯಗೊಂಡವರನ್ನು ರವಾನಿಸಲಾಗಿದ್ದು ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಪೊಲೀಸ್ ಕೆಡೆಟ್ಗಳು ಮಲಗಿದ್ದ ವೇಳೆಯಲ್ಲಿ 5-6 ಬಂದೂಕುದಾರಿಗಳು ದಾಳಿ ನಡೆಸಿದ್ದಾರೆ, ಎಂದು ಬಲೂಚಿಸ್ತಾನ ಪ್ರಾಂತ್ಯದ ಗೃಹ ಮಂತ್ರಿ ಮಿರ್ ಸರ್ಫರಾಜ್ ಅಹ್ಮದ್ ಬುಖ್ತಿ ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಪಾಕಿಸ್ತಾನದ ಅಧಿಕಾರಿಗಳು ವಿಷಯ ಗೊತ್ತಾಗಿ 30 ನಿಮಿಷದೊಳಗೆ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೂರು ಭಾರಿ ಸ್ಪೋಟದ ಸದ್ದು ಕೇಳಿಸಿದೆ ಎಂದು ಜನರು ಹೇಳಿದ್ದಾರೆ. ದಾಳಿಯಲ್ಲಿ ಮೂವರು ಆತ್ಮಾಹುತಿ ಬಾಂಬರ್ಗಳು ತಮ್ಮನ್ನು ತಾವು ಸ್ಪೋಟಿಸಿಕೊಂಡಿದ್ದಾರೆ.

ಲಷ್ಕರ್ ಇ ಝಂಗ್ವಿ ಈ ಘಟನೆಯ ಹೊಣೆ ಹೊತ್ತುಕೊಂಡಿದ್ದು, ಇದೇ ಉಗ್ರವಾದಿಗಳ ಗುಂಪು ಈ ಹಿಂದೆಯೂ ಸೇನೆಯ ಮೇಲೆ ದಾಳಿಗಳನ್ನು ನಡೆಸಿತ್ತು. ಸದ್ಯ ದೇಶದಲ್ಲಿ ಈ ಸಂಘಟನೆ ಮೇಲೆ ಸರಕಾರ ನಿಷೇಧ ಹೇರಿದೆ.

ಕ್ವೆಟ್ಟಾ ಮತ್ತು ಭಯೋತ್ಪಾದನೆ

 

ಕ್ವೆಟ್ಟಾ ಬಲೂಚಿಸ್ತಾನದ ರಾಜಧಾನಿ. ಬಲೂಚಿಸ್ತಾನ ಪ್ರತ್ಯೇಕ ರಾಷ್ಟ್ರವಾಗಬೇಕು ಎಂಬ ಬೇಡಿಕೆಯಿಂದಾಗಿ ಕ್ವೆಟ್ಟಾ ಇಸ್ಲಾಮಿಕ್ ಬಂಡುಕೋರರಿಂದ ತೀವ್ರ ಪ್ರತಿರೋಧವನ್ನು ಎದುರಿಸುತ್ತಿದೆ. ಹಾಗಾಗಿ ಇಲ್ಲಿ ಬಾಂಬ್ ಮತ್ತು ಗುಂಡಿನ ದಾಳಿಗಳು ಮಾಮೂಲಾಗಿ ಬಿಟ್ಟಿವೆ.

ಕ್ವೆಟ್ಟಾ ದಾಳಿಗೆ ಎರಡು ಗಂಟೆಗಳ ಮೊದಲು ಇಲ್ಲಿಂದ 145 ಕಿಲೋಮೀಟರ್ ದೂರದಲ್ಲಿರುವ ಸುರಬ್ ಪ್ರದೇಶದಲ್ಲಿ ಇಬ್ಬರು ಕಸ್ಟಮ್ಸ್ ಅಧಿಕಾರಿಗಳನ್ನು ಬೈಕಿನಲ್ಲಿ ಬಂದ ಬಂದೂಕುದಾರಿಗಳು ಕೊಂದಿದ್ದರು. ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

ಇದೇ ರೀತಿ ಸೋಮವಾರವೇ ಗುಂಡಿನ ದಾಳಿಯ ಇನ್ನೊಂದು ಘಟನೆ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ. ಅಲ್ಲೂ ಬೈಕಿನಲ್ಲಿ ಬಂದ ಇಬ್ಬರು ಬಂದೂಕುದಾರಿಗಳು ಪೊಲೀಸ್ ಗೂಢಚರ ಅಧಿಕಾರಿಯೊಬ್ಬರನ್ನು ಕೊಲೆ ಮಾಡಿದ್ದಾರೆ. ‘ಪಾಕಿಸ್ತಾನ ತಾಲಿಬಾನ್’ ಸಂಘಟನೆ ಇದರ ಹೊಣೆ ಹೊತ್ತಿದೆ. ಸಂಘಟನೆಯ ವಕ್ತಾರ ಮುಹಮ್ಮದ್ ಖುರಾನಾಸಿ ಹೇಳಿಕೆ ನೀಡಿದ್ದು ಕೊಲೆಯ ನಂತರ ಕೊಲೆ ಮಾಡಿದ ವ್ಯಕ್ತಿಯು ತಮ್ಮ ಅಡಗುತಾಣಕ್ಕೆ ಮರಳಿರುವುದಾಗಿ ಹೇಳಿಕೆ ನೀಡಿದ್ದಾರೆ.

ಇದೇ ಆಗಸ್ಟ್ ನಲ್ಲಿ ಇಲ್ಲಿ ವಕೀಲರನ್ನು ಮತ್ತು ಆಸ್ಪತ್ರೆಯನ್ನು ಗುರಿಯಾಗಿಸಿ ನಡೆದ ಪ್ರತ್ಯೇಕ ದಾಳಿಗಳಲ್ಲಿ 88 ಮಂದಿ ಪ್ರಾಣ ತೆತ್ತಿದ್ದರು.

pak-quetta-map“ಕಳೆದ ಕೆಲವು ವರ್ಷಗಳಿಂದ ಸೇನಾಪಡೆಗಳು ನಿರಂತರವಾಗಿ ಎಲ್ಎಜೆ ಮೇಲೆ ದಾಳಿ ನಡೆಸುತ್ತಿವೆ. ಅದರಲ್ಲೂ ಪಂಜಾಬ್ ಪ್ರಾಂತ್ಯದಲ್ಲಿ ಮೇಲಿಂದ ಮೇಲೆ ದಾಳಿಗಳನ್ನು ನಡೆಸುತ್ತಿದ್ದು, ಅವರ ನಾಯಕನನ್ನೇ ಹೊಡೆದುರುಳಿಸಲಾಗಿದೆ. ಈ ದಾಳಿಯಿಂದ ಎಲ್ಎಜೆ ಇನ್ನೂ ಬದುಕುಳಿದಿದ್ದು ಹಲವರಿಗೆ ಅಚ್ಚರಿ ಉಂಟು ಮಾಡಿದೆ,” ಎಂದು ಬರಹಗಾರ ಮತ್ತು ಅಂಕಣಕಾರ ರಾಜಾ ರುಮಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಗಡಿ ಮತ್ತು ದೇಶದ ಇತರ ಬುಡಕಟ್ಟು ಪ್ರದೇಶಗಳಲ್ಲಿರುವ ಉಗ್ರವಾದಿಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಹೀಗಿದ್ದೂ ಉಗ್ರರು ಪದೇ ಪದೇ ದಾಳಿ ನಡೆಸುವ ಮೂಲಕ ತಮ್ಮ ಅಸ್ತಿತ್ವ ಪುನರ್ ಸ್ಥಾಪಿಸುತ್ತಲೇ ಬಂದಿದ್ದಾರೆ.

ಬಲೂಚಿಸ್ತಾನ ಪೊಲೀಸ್ ಕಾಲೇಜ್

ಕ್ವೆಟ್ಟಾದಿಂದ 13 ಕಿಲೋ ಮೀಟರ್ ದೂರದಲ್ಲಿ ಸಾರಿಯಾಬ್ ಎನ್ನುವ ಪ್ರದೇಶದಲ್ಲಿ ಈ ಪೊಲೀಸ್ ಕಾಲೇಜ್ ಇದೆ. ಕ್ವೆಟ್ಟಾದ ಸೂಕ್ಷ್ಮ ಪ್ರದೇಶಗಳಲ್ಲಿ ಇದೂ ಒಂದು. ಇಲ್ಲಿ ಸಾಮಾನ್ಯವಾಗಿ 600 ಕೆಡೆಟ್ಗಳು ತರಬೇತು ಪಡೆಯುತ್ತಿರುತ್ತಾರೆ.

ಈ ಪೊಲೀಸ್ ಕಾಲೇಜಿನ ಮೇಲೆ ಉಗ್ರರಿಗೆ ಹಿಂದಿನಿಂದಲೂ ಒಂದು ಕಣ್ಣು ಇದ್ದೇ ಇದೆ. 2006ರಲ್ಲಿ ಇದೇ ಅಕಾಡೆಮಿಯಲ್ಲಿ 5 ಸುಧಾರಿತ ಸ್ಪೋಟಕಗಳು ಸ್ಪೋಟಗೊಂಡ ಪರಿಣಾಮ 6 ಜನ ಅಸುನೀಗಿದ್ದರು. 2008ರಲ್ಲಿ ಉಗ್ರರು ಇದೇ ಶಿಬಿರದ ಮೇಲೆ ರಾಕೆಟ್ಗಳನ್ನು ಉಡಾಯಿಸಿ, ನಂತರ ಕಾಲೇಜಿನ ಮೇಲೆ ಗುಂಡಿನ ದಾಳಿಯನ್ನೂ ನಡೆಸಿದ್ದರು.

ಚಿತ್ರ ಕೃಪೆ: ಬಿಬಿಸಿ, ಅಲ್ ಜಝೀರಾ

Leave a comment

FOOT PRINT

Top