An unconventional News Portal.

ಐಸಿಲ್ ವಿರುದ್ಧ ನಿರ್ಣಾಯಕ ಯುದ್ಧ: ಬಯಲಾಯ್ತು ಇಸ್ಲಾಮಿಕ್ ಉಗ್ರರ ‘ಸುರಂಗ’ ರಹಸ್ಯ!

ಐಸಿಲ್ ವಿರುದ್ಧ ನಿರ್ಣಾಯಕ ಯುದ್ಧ: ಬಯಲಾಯ್ತು ಇಸ್ಲಾಮಿಕ್ ಉಗ್ರರ ‘ಸುರಂಗ’ ರಹಸ್ಯ!

‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವೆನೆಂಟ್’ (ಐಸಿಲ್- ಹಿಂದಿನ ಐಸಿಸ್)ನ ರಹಸ್ಯವೊಂದು ಬಯಲಾಗಿದೆ.

ಇರಾಕಿನ ಮೊಸುಲ್ ಪಟ್ಟಣವನ್ನು ಐಸಿಲ್ ಕೈಯಿಂದ ಇರಾಕ್ ಸೇನೆ ಮತ್ತು ‘ಕುರ್ದಿಸ್ತಾನ ಪೆಶ್ಮಾರ್ಗ ಪಡೆ’ಗಳು ವಶಕ್ಕೆ ಪಡೆಯುತ್ತಿದ್ದಂತೆ, ಉಗ್ರ ಸಂಘಟನೆಯ ಕಾರ್ಯಾಚರಣೆಯ ಹಿನ್ನೆಲೆಯಲ್ಲಿದ್ದ ಅಚ್ಚರಿದಾಯಕ ಸಂಗತಿಗಳು ಹೊರಬರುತ್ತಿವೆ. ಅವುಗಳಲ್ಲಿ ಇಸ್ಲಾಮಿಕ್ ಉಗ್ರರ ಸುರಂಗ ಜಾಲವೂ ಒಂದು.

ಐಸಿಲ್ ಕಮಾಂಡರ್ ಗಳ ಮನೆ ಅಡಿಯಲ್ಲಿ ಸುರಂಗಗಳಿರುವುದು ಸೇನೆಯ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಈ ಸುರಂಗಗಳ ಜಾಡು ಹಿಡಿದು ಹೊರಟ ಸೇನಾ ಪಡೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಕಾರಣ ಈ ಸುರಂಗ ಮಧ್ಯದಲ್ಲಿ ಕವಲೊಡೆದು ಬೇರೆ ಬೇರೆ ಮನೆ ಹೋಗಿ ತಲುಪುತ್ತಿತ್ತು. ಪ್ರತಿ ಸುರಂಗ ಮಾರ್ಗದ ಒಳಗೂ ಕರೆಂಟ್ ವಯರ್ ಎಳೆದು ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಮಾತ್ರವಲ್ಲ ಸುರಂಗದ ಪ್ರತಿ ಮೂಲೆ ಮೂಲೆಗೂ ಉಗ್ರರು ಬಾಂಬ್ ಇಟ್ಟಿದ್ದು ಒಂದೊಮ್ಮೆ ಯಾರಾದರೂ ದಾಳಿ ಮಾಡಿದಾಗ ತಪ್ಪಿಸಿಕೊಳ್ಳುವ ವೇಳೆ ದಾರಿ ಬಂದ್ ಮಾಡಲು ಇದನ್ನು ಉಪಯೋಗಿಸುವ ಯೋಜನೆ ಹಾಕಿಕೊಂಡಿದ್ದಿರಬಹುದು ಎಂದುಕೊಳ್ಳಲಾಗಿದೆ.

ಸುರಂಗದೊಳಗೆ ಆಹಾರ ಸಾಮಾಗ್ರಿಗಳನ್ನು ಪೇರಿಸಿಟ್ಟ ದೃಶ್ಯ

ಸುರಂಗದೊಳಗೆ ಆಹಾರ ಸಾಮಾಗ್ರಿಗಳನ್ನು ಪೇರಿಸಿಟ್ಟ ದೃಶ್ಯ

‘ಅಲ್ ಜಝೀರಾ’ದ ಯುದ್ಧ ಭೂಮಿಯ ವರದಿಗಾರ ಸ್ಟೆಫಾನಿ ಡೆಕ್ಕರ್, ಈ ಸುರಂಗಗಳಿಗೆ ಭೇಟಿ ನೀಡಿ ಬಂದಿದ್ದು, ಅಲ್ಲಿ ಕಂಡ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ. ಪೆಶ್ಮಾರ್ಗ ಕಮಾಂಡರ್ ಒಬ್ಬರು ಸ್ಟೆಫಾನಿಯನ್ನು ಐಸಿಲ್  ಕಮಾಂಡರ್ ಮನೆಯೊಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಗೋಡೆಯೊಂದರ ಮೇಲೆ ಪರದೆಗಳನ್ನು ತೂಗು ಹಾಕಲಾಗಿತ್ತು. (ಹಳೇ ಕನ್ನಡ ಸಿನಿಮಾಗಳ ವಿಲನ್ಗಳ ಮನೆಗಳನ್ನು ನೆನಪಿಸಿಕೊಳ್ಳಿ). ಆ ಪರದೆ ಸರಿಸಿದಾಗ ಅಲ್ಲಿ ಕಂಡ ದೃಶ್ಯ ನೋಡಿ ಸ್ಟೆಫಾನಿ ಅಚ್ಚರಿಯಾಗಿದ್ದಾರೆ. ಗೋಡೆಯಲ್ಲಿ ದೊಡ್ಡ ರಂಧ್ರವೊಂದಿತ್ತು. ಈ ರಂಧ್ರದ ಮೂಲಕ ಒಳ ಹೊಕ್ಕರೆ ಅಲ್ಲಿ ಸುರಂಗ ಕಾಣಿಸುತ್ತಿತ್ತು. ಮೇಲ್ನೋಟಕ್ಕೆ ಇಡೀ ಮನೆಯನ್ನು ನೋಡಿದರೆ ಅಲ್ಲೊಂದು ಸುರಂಗವಿದೆ ಎಂದು ಅನಿಸಲು ಸಾಧ್ಯವೇ ಇರಲಿಲ್ಲ ಎಂದು ಬರೆಯುತ್ತಾರೆ ಸ್ಟೆಫಾನಿ ಡೆಕ್ಕರ್.

ಸುರಂಗದೊಳಕ್ಕೆ ಇಳಿಯಲು ಮರಳಿನ ಮೆಟ್ಟಿಲುಗಳನ್ನು ಮಾಡಲಾಗಿತ್ತು. ಸುರಂಗದ ಗೋಡೆಗಳು ಗಟ್ಟಿಯಾಗಿದ್ದವು. ನೆಲಕ್ಕೆ ಕಾರ್ಪೆಟ್ಗಳನ್ನು ಹಾಕಲಾಗಿತ್ತು. ಸುರಂಗದ ಮಧ್ಯದಲ್ಲಿ ಸ್ವಲ್ಪ ವಿಶಾಲ ಜಾಗವಿತ್ತು. ಅಲ್ಲಿ ಬೆಡ್ ಶೀಟ್, ತಲೆದಿಂಬು ಹರಿದು ಬಿದ್ದಿತ್ತು. ಬಹುಶಃ ಉಗ್ರರು ಇವುಗಳ ಒಳಗೆ ಮಲಗುತ್ತಿದ್ದರೆಂದು ತೋರುತ್ತದೆ. ಅಲ್ಲೆ ಒಂದು ಕಡೆ ಸ್ವಲ್ಪ ಜಾಗವಿತ್ತು. ಅಲ್ಲಿ ನೀರು ಮತ್ತು ಆಹಾರ ಇಡಲು ವ್ಯವಸ್ಥೆಗಳಿತ್ತು ಎನ್ನುತ್ತಾರೆ ಡೆಕ್ಕರ್.

ಈ ದೃಶ್ಯಗಳನ್ನು ನೋಡಿ ಶೂಟಿಂಗ್ ಮಾಡಿದರೆ ಉತ್ತಮ ಎಂದು ಡೆಕ್ಕರ್ ಕ್ಯಾಮೆರಾ ಮನ್ ಹುಡುಕಲು ತಾವು ಬಂದ ದಾರಿಯಲ್ಲೆ ಹಿಂದೆ ಬಂದಿದ್ದರಂತೆ. ಆಗ ಕತ್ತಲೆಯಲ್ಲಿ ಹಾಗೇ ನಡೆದುಕೊಂಡು ಹೋಗಿ ಮನೆಯೊಂದರೊಳಕ್ಕೆ ಹೋಗಿ ತಲುಪಿದರು. ತಾವು ಬಂದ ಮನೆ ಇದೇ ಎಂದುಕೊಂಡು ಕ್ಯಾಮೆರಾಮನ್ ಕೂಗಿದರು. ಆದರೆ ಆತ ಬರಲೇ ಇಲ್ಲ. ನಂತರ ಕಮಾಂಡೆರ್ ಸ್ಟೆಫಾನಿಯತ್ತ ನೋಡಿ ನಗುತ್ತಾ ಹೇಳಿದನಂತೆ; “ನೀವು ಬೇರೆ ಮನೆಯಲ್ಲಿದ್ದೀರಿ ಇದು ನೀವು ಬಂದ ಮನೆಯಲ್ಲ,” ಎಂದು. ಹೀಗೆ ತನಗೆ ಈ ಸುರಂಗ ಜಾಲ ಗೊತ್ತಾಯಿತು ಎನ್ನುತ್ತಾರೆ ಡೆಕ್ಕರ್. ತೀರಾ ವೃತ್ತಿಪರ ರೀತಿಯಲ್ಲಿ ಬೇರೆ ಬೇರೆ ಮನೆಗಳನ್ನು ಸಂಪರ್ಕಿಸುವಂತೆ ಸುರಂಗಗಳ ಜಾಲವನ್ನೇ ಅಲ್ಲಿ ನಿರ್ಮಿಸಲಾಗಿತ್ತು ಎಂದು ವಿವರಿಸುತ್ತಾರೆ ಅವರು.

ವಿಚಿತ್ರವೆಂದರೆ ಐಸಿಲ್ ನೆಲೆಯೂರಿರುವ ಎಲ್ಲಾ ಪ್ರದೇಶಗಳಲ್ಲಿಯೂ ಇದೇ ರೀತಿಯ ಸುರಂಗದ ಜಾಲವನ್ನೇ ನಿರ್ಮಿಸಿಕೊಂಡಿದ್ದಾರೆ ಎಂದು ಪೆಶ್ಮಾರ್ಗ್ ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ಸೇನೆಯ ದಾಳಿಗೆ ಸಿದ್ಧರಾಗಿದ್ದ ಉಗ್ರರು ತಪ್ಪಿಸಿಕೊಳ್ಳಲು ಇಂಥಹದ್ದೊಂದು ದಾರಿ ಕಂಡುಕೊಂಡಿದ್ದರು.

ಈ ಹಿಂದೆ ಫಲ್ಲುಜಾ ನಗರದ ಮೇಲೆ ದಾಳಿ ಮಾಡಿದಾಗಲೂ ಇದೇ ರೀತಿಯ ಸುರಂಗಗಳು ಪತ್ತಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮೊಸುಲ್ ಕೇಂದ್ರದತ್ತ ಸೇನೆ

ಸುತ್ತ ಮುತ್ತಲಿನ ಪ್ರದೇಶಗಳನ್ನು ಗೆದ್ದುಕೊಂಡು ಇದೀಗ ಇರಾಕ್ ಮತ್ತು ಕುರ್ದಿಸ್ತಾನ್ ಪಡೆಗಳು ಕೇಂದ್ರ ಭಾಗದತ್ತ ಧಾವಿಸಿವೆ. “ನಾವು ಅಂದುಕೊಂಡಿದ್ದಕ್ಕಿಂತ ಮತ್ತು ನಮ್ಮ ಯೋಜನೆಗಿಂತ ವೇಗವಾಗಿ ಮೊಸುಲ್ನ ಭಾಗಗಳನ್ನು ವಶಪಡಿಸಿಕೊಳ್ಳುತ್ತಿದ್ದೇವೆ,” ಎಂದು ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿ ಹೇಳಿದ್ದಾರೆ.

ಸದ್ಯ ಐಸಿಲ್ ತನ್ನ ವಶದಲ್ಲಿದ್ದ ಕೊನೆಯ, ದೊಡ್ಡ ಹಾಗೂ ಪ್ರಮುಖ ಪಟ್ಟಣವನ್ನು ಕಳೆದುಕೊಳ್ಳುವತ್ತ ಸಾಗಿದ್ದು ಅದರ ಪತನ ಆರಂಭವಾಗಿದೆ.

Leave a comment

FOOT PRINT

Top