An unconventional News Portal.

ನಿವೃತ್ತ ನ್ಯಾಯಾಧೀಶರನ್ನು ಕಟಕಟೆಗೆ ಅಹ್ವಾನಿಸಿದ ಸುಪ್ರಿಂ ಕೋರ್ಟ್: ಯಾರಿವರು ‘ಖಡಕ್ ಮಾತಿನ’ ಖಟ್ಜು?

ನಿವೃತ್ತ ನ್ಯಾಯಾಧೀಶರನ್ನು ಕಟಕಟೆಗೆ ಅಹ್ವಾನಿಸಿದ ಸುಪ್ರಿಂ ಕೋರ್ಟ್: ಯಾರಿವರು ‘ಖಡಕ್ ಮಾತಿನ’ ಖಟ್ಜು?

ಸದಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಮಾರ್ಕಂಡೇಯ ಖಟ್ಜು, ಈಗ ಮತ್ತೊಮ್ಮೆ ‘ಸುದ್ದಿಕೇಂದ್ರ’ಕ್ಕೆ ಬಂದಿದ್ದಾರೆ.

ಸುಪ್ರಿಂ ಕೋರ್ಟಿನ ತೀರ್ಪೊಂದನ್ನು ವಿರೋಧಿಸಿ ಖಟ್ಜು ಹಾಕಿದ್ದ ಫೇಸ್ಬಕ್ ಸ್ಟೇಟಸ್; ಈಗ ದೇಶದ ಸರ್ವೋಚ್ಚ ನ್ಯಾಯಾಲಯದ ಕಟೆ ಕಟೆ ಏರಲು ಕಾರಣವಾಗಿದೆ. ಭಾರತದಂತಹ ದೇಶದಲ್ಲಿ ಸಾಮಾಜಿಕ ಜಾಲತಾಣಗಳು ಬಲಗೊಳ್ಳುತ್ತಿರುವ ಈ ದಿನಗಳಲ್ಲಿ, ಈ ಬೆಳವಣಿಗೆ ಸಹಜವಾಗಿಯೇ ಗಮನ ಸೆಳೆದಿದೆ.

ಸೌಮ್ಯ ಎಂಬ ಕೇರಳ ಮೂಲದ ಹುಡುಗಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಗಮನಿಸಬೇಕಿದೆ. ಸೌಮ್ಯ ‘ರೇಪ್ ಆ್ಯಂಡ್ ಮರ್ಡರ್ ಪ್ರಕರಣ’ದಲ್ಲಿ ಗೋವಿಂದಚಾಮಿಗೆ ಗಲ್ಲು ಶಿಕ್ಷೆ ನೀಡದ ಸರ್ವೋಚ್ಚ ನ್ಯಾಯಾಲಯ, ‘ಘನ ಘೋರ ತಪ್ಪುಎಸಗಿದೆ’ ಎಂದು ನಿವೃತ್ತ ನ್ಯಾಯಮೂರ್ತಿಯೂ ಆಗಿರುವ ಖಡ್ಜು, ತಮ್ಮ ಫೇಸ್ಬುಕ್ ಖಾಲೆಯಲ್ಲಿ ಪೋಸ್ಟ್ ಹಾಕಿದ್ದರು. ಸಾಮಾನ್ಯವಾಗಿ ನ್ಯಾಯಾಲಯಗಳು ನೀಡುವ ತೀರ್ಪನ್ನು ವಿಮರ್ಶೆಗೆ ಒಳಪಡಿಸುವುದು, ಅದನ್ನು ವಿಶ್ಲೇಷಣೆಗೆ ಒಳಪಡಿಸುವುದು ಮತ್ತು ಸರಿ- ತಪ್ಪುಗಳನ್ನು ಚರ್ಚಿಸುವುದು ಅಪರಾಧ ಎಂಬ ಭಾವನೆ ಇರುವ ಸಮಯದಲ್ಲಿ, ಕೋರ್ಟಿನ ತೀರ್ಪನ್ನು ಖಡ್ಜು ತಿರಸ್ಕರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಸುಪ್ರಿಂ ಕೋರ್ಟ್ ಸೋಮವಾರ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜುಗೆ ನೊಟೀಸ್ ಜಾರಿ ಮಾಡಿದೆ.

markandeya-katju-2

ಸುಪ್ರಿಂ ಕೋರ್ಟ್ ತೀರ್ಪನ್ನು ತಪ್ಪು ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದ ಖಡ್ಜು ಪೋಸ್ಟ್. (ಕೃಪೆ: ಫೇಸ್ಬುಕ್)

ನವೆಂಬರ್ 11 ರಂದು ಕೋರ್ಟಿಗೆ ಖಡ್ಜು ಅವರೇ ಖುದ್ದಾಗಿ ಹಾಜರಾಗಿ, ನಾವು (ಸುಪ್ರಿಂ ಕೋರ್ಟ್) ಗೋವಿಂದಚಾಮಿಗೆ ಶಿಕ್ಷೆ ನೀಡದೆ, ಎಲ್ಲಿ ಮತ್ತು ಏನು ತಪ್ಪು ಮಾಡಿದ್ದೇವೆ ಎಂಬುದನ್ನು ವಿವರಿಸುವಂತೆ ನೊಟೀಸಿನಲ್ಲಿ ತಿಳಿಸಲಾಗಿದೆ.

23 ವರ್ಷ ವಯಸ್ಸಿನ ಕೊಚ್ಚಿ ಶಾಪಿಂಗ್ ಮಾಲ್ ಉದ್ಯೋಗಿ ಸೌಮ್ಯಾ ಎರ್ನಾಕುಲಂ-ಶೋರಾಣ್ಪುರ್ ರೈಲಿನಲ್ಲಿ ನಿರ್ಜನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ಗೋವಿಂದಚಾಮಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದ. ಫೆಬ್ರವರಿ 1, 2011ರಲ್ಲಿ ನಡೆದ ಈ ಘಟನೆಯಲ್ಲಿ ರೈಲು ನಿಧಾನವಾಗಿ ಪ್ರಯಾಣಿಸುತ್ತಿದ್ದಾಗ ಆಕೆಯನ್ನು ರೈಲಿನಿಂದ ತಳ್ಳಿ ನಂತರ ಪೊದೆಗಳಿಗೆ ಕೊಂಡೊಯ್ದು ಅತ್ಯಾಚಾರ ಎಸಗಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯ, ನಂತರ ತ್ರಿಶೂರ್ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯ ಮಧ್ಯೆಯೇ ಫೆಬ್ರವರಿ 6 ರಂದು ಅಸುನೀಗಿದ್ದರು.

ಆರಂಭದಲ್ಲಿ, ಈ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ಗೋವಿಂದಚಾಮಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಕೇರಳ ಹೈಕೊರ್ಟ್ 17, 2013ರಂದು ಎತ್ತಿ ಹಿಡಿದಿತ್ತು. ಆದರೆ ಸುಪ್ರಿಂ ಕೋರ್ಟ್ ಆತನಿಗೆ ಗಲ್ಲು ಶಿಕ್ಷೆ ನೀಡಿರಲಿಲ್ಲ.

ಖಡಕ್ ಮಾತಿನ ಖಟ್ಜು: 

ಚಿತ್ರ ಕೃಪೆ: ಕೋಬ್ರಾ ಪೋಸ್ಟ್

ಚಿತ್ರ ಕೃಪೆ: ಕೋಬ್ರಾ ಪೋಸ್ಟ್

“ದೇಶದಲ್ಲಿ ಶೇ. 80ರಷ್ಟು ಬಡವರಿದ್ದಾರೆ. ಆದರೆ ನಮ್ಮ ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಸುದ್ದಿ ವಾಹಿನಿಗಳು ಸಿನಿಮಾ ತಾರೆಯರು, ಭವಿಷ್ಯ, ಫ್ಯಾಷನ್ ಹಾಗೂ ರಿಯಾಲಿಟಿ ಶೋಗಳ ಹಿಂದೆ ಬಿದ್ದಿವೆ…”

ಹೀಗಂತ ಹಿಂದೊಮ್ಮೆ ತಮ್ಮ ಲೇಖನದಲ್ಲಿ ಬರೆದಿದ್ದವರು ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷರಾಗಿದ್ದ ನ್ಯಾ. ಮಾರ್ಕಂಡೇಯ ಖಟ್ಜು. ಇವತ್ತು ಸುಪ್ರಿಂ ಕೋರ್ಟಿನ ತೀರ್ಪು ವಿರೋಧಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ. ಆದರೆ ಖಟ್ಜು ಸಾಗಿ ಬಂದ ಬದುಕಿನ ಹಾದಿ ಗಮನಿಸಿದರೆ, ಅವರ ಮುಕ್ತ ಅಭಿಪ್ರಾಯ ಹಂಚಿಕೆಗಳ ಹಿಂದೆ ಬೇರೇನೋ ಕಾರಣಗಳು ಇರಬಹುದೆನ್ನಿಸುತ್ತದೆ. ಕಲೆ, ಸಂಸ್ಕೃತಿ, ಭಾಷೆ, ಕವಿತೆ, ಕಾನೂನು, ರಾಜಕೀಯ, ಮಾಧ್ಯಮಗಳು… ಹೀಗೆ ಮುಖ್ಯವಾಹಿನಿಯ ಬಹು ವಿಚಾರಗಳ ಕುರಿತು ಆಳವಾದ ಜ್ಞಾನ ಹೊಂದಿರುವ ಅಪರೂಪದ ನ್ಯಾಯಾಧೀಶ ಅವರು.

ಖಟ್ಜು ಹುಟ್ಟಿದ್ದು, ಸೆಪ್ಟೆಂಬರ್ 1946ರಲ್ಲಿ. ಕಾಶ್ಮೀರಿ ಪಂಡಿತ ಸಮುದಾಯದ ಹಿನ್ನೆಲೆಯ ಅವರ ಕುಟುಂಬ ಲಖನೌಗೆ ವಲಸೆ ಬಂದಿತ್ತು. ತಂದೆ ಶಿವನಾಥ್ ಖಟ್ಜು ಅಲಹಾಬಾದ್ ಹೈ ಕೋರ್ಟ್ ನ್ಯಾಯಾಧೀಶರಾಗಿದ್ದರು. ರಾಜಕೀಯವಾಗಿಯೂ ಅವರ ಕುಟುಂಬ ಪ್ರಭಾವ ಹೊಂದಿತ್ತು. ಅವರ ಅಜ್ಜ ಡಾ. ಕೈಲಾಸ್‌ನಾಥ್ ಖಟ್ಜು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದವರು. ಒಂದಷ್ಟು ಕಾಲ ಕೇಂದ್ರ ಸಚಿವರಾಗಿದ್ದ ಅವರು ನಂತರ ಪಶ್ಚಿಮ ಬಂಗಾಳ ಹಾಗೂ ಒರಿಸ್ಸಾಗಳಿಗೆ ರಾಜ್ಯಪಾಲರೂ ಆಗಿದ್ದರು.

ಅವರ ಮೊಮ್ಮಗ ಖಟ್ಜು ಅವರಲ್ಲಿ ಮಾನವೀಯತೆ ಬೆಳೆಸಿದ್ದು ಅವರ ಓದುವ ಹವ್ಯಾಸ. ಹಾಗೆಂದು ಅವರೇ ‘ರಾಜ್ಯಸಭಾ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಳ್ಳುತ್ತಾರೆ. ”ನಾನು 10ನೇ ವಯಸ್ಸಿನಲ್ಲೇ ಓದಲು ಆರಂಭಿಸಿದೆ. ಈಗಲೂ ದಿನಕ್ಕೆ ಮೂರ್ನಾಲ್ಕು ಗಂಟೆಗಳ ಕಾಲ ಓದುತ್ತೇನೆ. ಆದರೆ ಓದು ಮಾತ್ರವೇ ನಿಮಗೆ ಜ್ಞಾನವನ್ನು ಪರಿಪೂರ್ಣವಾಗಿಸುವುದಿಲ್ಲ. ಜನರ ಸಂಪರ್ಕವೂ ಬೇಕು,” ಎಂದಿದ್ದರು. ಖಟ್ಜು ಅವರ ಅಭಿಪ್ರಾಯಗಳು ಹೇಗೆಲ್ಲಾ ರೂಪು ಗೊಳ್ಳುತ್ತವೆ ಎಂಬುದಕ್ಕೆ ಇದೊಂದು ಸಾಕ್ಷಿ ಅಷ್ಟೆ.

ಖಟ್ಜು ಸಾಹಿತ್ಯಾಸಕ್ತಿ ಕೂಡ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿತ್ತು. 1967ರಲ್ಲಿ ಅಲಹಬಾದ್ ಕಾನೂನು ವಿಶ್ವ ವಿದ್ಯಾಲಯದಿಂದ ಪದವಿ ಪಡೆದಾಗ ಅವರ ಕೊರಳಲ್ಲಿ ಚಿನ್ನದ ಪದಕಗಳು ನೇತಾಡುತ್ತಿದ್ದವು. ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ಪದವಿ ಸಿಗುತ್ತಲೇ ಪಕ್ಕದ ಹಳ್ಳಿಗೆ ಹೋಗಿ, ಅಲ್ಲೊಂದಿಷ್ಟು ಕಾಲ ಪಾಠ ಹೇಳಿಕೊಂಡು ಜನರ ನಡುವೆ ಇದ್ದು ಬಿಟ್ಟರು. ನಂತರ ವಕೀಲಿಕೆ ಆರಂಭಿಸಿದರು.

”ವಕೀಲನಾಗುವುದು ಒಳ್ಳೆಯ ಅನುಭವವನ್ನು ನೀಡುತ್ತದೆ. ದೇಶದ ಎಲ್ಲಾ ರೀತಿಯ ಜನರೂ ನಿಮ್ಮನ್ನು ನೋಡಲು ಬರುತ್ತಾರೆ,” ಎಂದು ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ಅವರು ಹೇಳಿಕೊಂಡಿದ್ದರು. ಮುಂದೆ ಅದೇ ಅಲಹಾಬಾದ್ ಹೈ ಕೋರ್ಟ್‌ನಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾದರು. ಮದ್ರಾಸ್, ನಂತರ ದಿಲ್ಲಿ ಹೈ ಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಯಾಗಿದ್ದವರನ್ನು, 2006ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು.

ನ್ಯಾಯಧೀಶರಾಗಿ, ವಾರದಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಿದ ಅಪರೂಪದ ‘ಟ್ರ್ಯಾಕ್ ರೆಕಾರ್ಡ್’ ಹೊಂದಿದ್ದಾರೆ ಖಟ್ಜು. ಮದ್ರಾಸ್ ಹೈ ಕೋರ್ಟ್‌ನಲ್ಲಿದ್ದಾಗ ಮಧುರೈ ಬೆಂಚ್‌ನ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ”ಜನ ಸಾಮಾನ್ಯರಿಗೆ ನ್ಯಾಯಾಂಗ ವ್ಯವಸ್ಥೆಯನ್ನು ವಿಮರ್ಶೆ ಮಾಡುವ ಅಧಿಕಾರವಿದೆ,” ಎನ್ನುವ ಮೂಲಕ ಹೊಸ ಅಲೆಯ ಚರ್ಚೆಯನ್ನು ಹುಟ್ಟು ಹಾಕಿದ್ದರು. ಹೀಗೆ ತಮ್ಮದೇ ರೀತಿಯ ‘ಕಾನೂನು ಚಳವಳಿ’ ನಡೆಸಿಕೊಂಡು ಬಂದ ಅವರು ಅಗತ್ಯಕ್ಕಿಂತಲೂ ಹೆಚ್ಚೇ ಬಹಿರ್ಮುಖಿ ಅನ್ನಿಸುತ್ತಾರೆ.

Markandeya Katju2011ಸೆಪ್ಟೆಂಬರ್‌ನಲ್ಲಿ ಸುಪ್ರಿಂಕೋರ್ಟ್‌ನಿಂದ ನಿವೃತ್ತರಾದರು. ಅದಾಗಿ ಒಂದು ತಿಂಗಳಿಗೆ ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಾದರು. ಅಲ್ಲಿಂದ ಮುಂದೆ ಮೂರು ವರ್ಷಗಳ ಕಾಲ ಇವರಷ್ಟು ಸುದ್ದಿಯಲ್ಲಿದ್ದ ಮತ್ತೊಬ್ಬ ನಿವೃತ್ತ ನ್ಯಾಯಾಧೀಶರು ಬಹುಶಃ ಇರಲಾರರು. ಕೇಂದ್ರ ಕಾನೂನು ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್‌ರಿಂದ ಹಿಡಿದು ಗುಜರಾತ್ ಮುಖ್ಯಮಂತ್ರಿಯಾಗಿದ್ದ, ಈಗಿನ ಪ್ರಧಾನಿ ನರೇಂದ್ರ ಮೋದಿವರೆಗೆ ಖಟ್ಜು ವಾಗ್ಝರಿಯ ಬಿಸಿ ತಟ್ಟಿತ್ತು. ಪತ್ರಿಕೋದ್ಯಮ ಕುರಿತು ವಿಶೇಷವಾಗಿ ಟಿವಿ ವಾಹಿನಿಗಳ ಹುಳುಕುಗಳ ಬಗ್ಗೆ ನೇರವಾಗಿ ಮಾತನಾಡಿದ್ದರು. ಅದೇ ವೇಳೆ ಪತ್ರಕರ್ತರ ಮೇಲೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ಆದಾಗ ಖಂಡಿಸಲು ನಿಂತಿದ್ದರು. ಠಾಕ್ರೆ ಸಾವಿನ ಕುರಿತು ಸಾಮಾಜಿಕ ತಾಣದಲ್ಲಿ ಅಭಿಪ್ರಾಯ ಹಂಚಿಕೊಂಡ ಮುಂಬೈ ಯುವತಿಯರ ಬಂಧನ ವಿರೋಧಿಸಿದ್ದರು. ಹೀಗೆ ಖಟ್ಜು ಎಲ್ಲಾ ಕಡೆಗೂ ಇದ್ದೂ, ಆ ಮೂಲಕ ಭಾರತೀಯ ಪತ್ರಿಕಾ ಮಂಡಳಿಗೆ ಹೊಸ ಪ್ರಭೆ ಸೃಷ್ಟಿಸಿಬಿಟ್ಟರು.

“ಯುಪಿಎ ಸರಕಾರದ ಅವಧಿಯಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯ ಸೇವಾವಧಿ ವಿಸ್ತರಣೆ ಹಾಗೂ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಬಡ್ತಿ ನೀಡಿದ ವಿಚಾರದಲ್ಲಿ ಮೂವರು ನಿವೃತ್ತ ಮುಖ್ಯನ್ಯಾಯಮೂರ್ತಿಗಳು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ,” ಎಂದು ಖಟ್ಜು ಆರೋಪಿಸಿದ್ದರು. ಅವತ್ತಿಗದು ಕೋಲಾಹಲ ಎಬ್ಬಿಸಿತ್ತು.

ಖಟ್ಜು ಕಚೇರಿಯನ್ನು ಕಂಡವರು ಅದೊಂದು ಮಿನಿ ಗ್ರಂಥಾಲಯ ಎನ್ನುತ್ತಾರೆ. ಅವರ ಪ್ರತಿ ಸಂದರ್ಶನ, ಲೇಖನದಲ್ಲೂ ಉರ್ದು ಕವಿತೆಗಳ ಝಲಕ್ ಕಾಣಿಸುತ್ತದೆ. ”ಉರ್ದು ಕವಿತೆಗಳು ಭೂಮಿ ಮೇಲಿನ ಶ್ರೇಷ್ಠ ಕವಿತೆಗಳು. ಆದರೆ ನಮ್ಮವರೇ ಅದನ್ನು ಹೊರಗಿಡಲು ಪ್ರಯತ್ನಿಸುತ್ತಿದ್ದಾರೆ,” ಎಂದು ಸಂದರ್ಶನವೊಂದರಲ್ಲಿ ಕಿಡಿ ಕಾರಿದ್ದರು ಖಟ್ಜು. ಅದೇ ವೇಳೆ ”ನಮ್ಮದು ವಲಸಿಗರ ದೇಶ. ಎಲ್ಲಾ ರೀತಿಯ ಸಂಸ್ಕೃತಿಗಳ ಸಂಕರವನ್ನು ಸೃಷ್ಟಿಸಿಕೊಳ್ಳುವ ಅಗತ್ಯವಿದೆ. ವಿಶೇಷವಾಗಿ ಉರ್ದು ಮತ್ತು ಸಂಸ್ಕೃತ ಭಾಷೆಗಳ ಸಮಾಗಮದಲ್ಲಿ ನಮ್ಮ ಸಂಸ್ಕೃತಿ ಅಡಗಿದೆ,” ಅಂತ ತೀರಾ ಫಿಲಾಸಫಿಕಲ್ ಆಗಿಯೂ ಮಾತನಾಡಿದ್ದರು. ಕಳೆದ ಇಷ್ಟು ವರ್ಷಗಳಲ್ಲಿ ಖಟ್ಜು ವ್ಯಕ್ತಿತ್ವ ಹಾಗೂ ನಡೆಯನ್ನು ಗಮನಿಸಿದರೆ ಅವರಿಗೆ ಬಡತನದ ಕುರಿತು ಬಹು ದೊಡ್ಡ ತಿರಸ್ಕಾರವಿರುವುದು ಸ್ಪಷ್ಟ. ಮಧ್ಯಮ ವರ್ಗದ ಹಣದಾಹದ ಬಗ್ಗೆಯೂ ಬೇಸರವಿದೆ.

ಈ ದೇಶದ ಮಧ್ಯಮ ವರ್ಗದ ಜನ ಶೇ. 90ರಷ್ಟು ಮೂರ್ಖರು, ಸ್ವಾರ್ಥಿಗಳು ಎಂಬ ಅವರ ವಿವಾದಾತ್ಮಕ ಹೇಳಿಕೆ ನೆನಪಿರಬಹುದು. ದೂರದರ್ಶನದ ಒಂದು ಸಂದರ್ಶನದಲ್ಲಿ ಈ ಕುರಿತು ಖಟ್ಜು ಮುಂದೆ ಹೀಗೇಕೆ ಎಂದಿರಿ? ಎಂಬ ಪ್ರಶ್ನೆ ಇಡಲಾಯಿತು. ”ನಾನು ಈ ದೇಶವನ್ನು, ಜನರನ್ನು ಪ್ರೀತಿಸುತ್ತೇನೆ. ಅವರಲ್ಲಿ ಶೇ. 90ರಷ್ಟು ಸ್ವಾರ್ಥಿಗಳೆಂಬುದನ್ನು ಈಗಲೂ ಹೇಳುತ್ತೇನೆ,” ಎಂದು ಅಮಾಯಕ ಹಠ ಪ್ರದರ್ಶಿಸಿದ್ದರು. ಅವರ ಬಹುತೇಕ ಅಭಿಪ್ರಾಯಗಳಲ್ಲಿ ವಾಸ್ತವದ ಕಹಿ ಸತ್ಯಗಳಿವೆ. ಅದನ್ನು ಹೇಳಲು ಹೋದಾಗೆಲ್ಲಾ ಅವರು ವಿವಾದಗಳಲ್ಲಿ ಸಿಕ್ಕಿ ಬಿದ್ದಿದ್ದಾರೆ. ಆದರೆ ಆ ನಂತರ ಅದನ್ನು ಚಾಲಾಕಿತನದಿಂದ ಸಮರ್ಥಿಸಿಕೊಳ್ಳಲು ವಿಫಲರಾಗುವುದು ಖಟ್ಜು ಅವರ ಮಿತಿ ಇರಬಹುದು.

ಸೌಮ್ಯ ಪ್ರಕರಣದಲ್ಲಿ ನ್ಯಾ. ಖಟ್ಜು ನಿಲುವು ಸರಿನಾ? ತಪ್ಪಾ? ಎಂಬ ಕುರಿತು ತೀರ್ಮಾನಕ್ಕೆ ಬರುವ ಅಗತ್ಯವಿಲ್ಲ. ಅದೇ ವೇಳೆ ಇದೊಂದೇ ವಿವಾದವನ್ನು ಇಟ್ಟುಕೊಂಡು ಖಟ್ಜು ಅವರ ಇಡೀ ವ್ಯಕ್ತಿತ್ವ ಅಳೆಯುವುದು ಕೂಡ ಸರಿಯಲ್ಲ. ”ನಾವೀಗ ಅತ್ಯಂತ ನೋವಿನ ದಿನಗಳಲ್ಲಿ ಬದುಕುತ್ತಿದ್ದೇವೆ. ಒಂದು ಕಡೆ ಊಳಿಗಮಾನ್ಯ ವಿಚಾರಗಳು ಸಂಪೂರ್ಣವಾಗಿ ಬದಲಾಗಿಲ್ಲ. ಇತ್ತ ಆಧುನಿಕತೆಯನ್ನೂ ಸಂಪೂರ್ಣವಾಗಿ ಅಳವಡಿಸಿಕೊಂಡಿಲ್ಲ. ಸಂಕೀರ್ಣ ಮನಸ್ಥಿತಿಗಳನ್ನು ಪ್ರತಿಪಾದಿಸುವ ಕಾಲಘಟ್ಟವಿದು,” ಎಂದು ಹಿಂದೊಮ್ಮೆ ಹೇಳಿದ್ದರು. ಇದೆಲ್ಲಾ ಏನೇ ಇರಲಿ, ಕಾಲವನ್ನು ಅಳೆಯುವ ಧಾವಂತದಲ್ಲಿ ಸಮಾಜದ ನಾಡಿ ಮಿಡಿತವನ್ನು ಅರ್ಥ ಮಾಡಿಕೊಳ್ಳುವಲ್ಲಿ ಖಟ್ಜು ಸೋಲದಿದ್ದರೆ ಸಾಕು.

ಸದ್ಯ, ಸಾಲು ಸಾಲು ಪ್ರಕರಣಗಳಲ್ಲಿ ಸುಪ್ರಿಂ ಕೋರ್ಟ್ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಈ ಸಮಯದಲ್ಲಿ ಹಿಂದೊಮ್ಮೆ ತಮ್ಮಲ್ಲಿಯೇ ನ್ಯಾಯದಾನ ಮಾಡಿದ್ದ ವ್ಯಕ್ತಿಯನ್ನು ಕಟಕಟೆಗೆ ನ್ಯಾಯಾಲಯ ಅಹ್ವಾನಿಸಿದೆ. ಅದರ ಮೂಲಕ ಈ ದೇಶದ ನ್ಯಾಯಾಂಗ ವ್ಯವಸ್ಥೆ ಯಾವ ಸಂದೇಶ ನೀಡಲು ಮುಂದಾಗಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a comment

FOOT PRINT

Top