An unconventional News Portal.

‘ಉಲ್ಟಾ ಪಲ್ಟಾ’: #ಕನಕ ನಡೆ ಯಾರ ವಿರುದ್ಧವೂ ಅಲ್ಲ; ಚಕ್ರವರ್ತಿ ಸೂಲಿಬೆಲೆ ಸ್ಪಷ್ಟೀಕರಣ!

‘ಉಲ್ಟಾ ಪಲ್ಟಾ’: #ಕನಕ ನಡೆ ಯಾರ ವಿರುದ್ಧವೂ ಅಲ್ಲ; ಚಕ್ರವರ್ತಿ ಸೂಲಿಬೆಲೆ ಸ್ಪಷ್ಟೀಕರಣ!

ಚಲೋ ಉಡುಪಿ ಸಮಾವೇಶದ ಬೆನ್ನಿಗೇ ಚಕ್ರವರ್ತಿ ಸೂಲಿಬೆಲೆ ನಡೆಸಲು ಹೊರಟಿರುವ ‘ಕನಕ ನಡೆ’ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಇದೊಂದು ಕಮ್ಯೂನಿಸ್ಟ್ ವಿರೋಧಿ ನಡಿಗೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಈ ಸಂದರ್ಭದಲ್ಲಿ ‘ಸಮಾಚಾರ’ದ ಜೊತೆ ಮುಕ್ತವಾಗಿ ‘ಕನಕ ನಡೆ’ ಸಂಘಟಕ, ‘ನಮೋ ಬ್ರಿಗೇಡ್’ (ಇವತ್ತಿನ ಯುವ ಬ್ರಿಗೇಡ್) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ. ‘ಕನಕ ನಡೆ’ ಯಾರ ವಿರುದ್ಧವೂ ಅಲ್ಲ; ಬದಲಿಗೆ ಸ್ವಚ್ಚ ಭಾರತ್ ಅಭಿಯಾನ ಭಾಗವಾಗಿ ಉಡುಪಿಯನ್ನು ಸ್ವಚ್ಚಗೊಳಿಸಲು ಹೊರಟಿರುವುದಾಗಿ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ‘ಕನಕ ನಡೆ’ ಕುರಿತು ಹಂಚಿಕೊಳ್ಳುತ್ತಿರುವ ವಿಚಾರಗಳಿಗೂ, ‘ಸಮಾಚಾರ’ದ ಜತೆ ದೂರವಾಣಿಯಲ್ಲಿ ಮಾತನಾಡಿ ನೀಡಿದ ಮಾಹಿತಿಗೂ ವೈರುಧ್ಯಗಳಿವೆ.

ಹಿನ್ನಲೆ:

ಚಲೋ ಉಡುಪಿ ಸಮಾವೇಶದ ದಿನ ಚಕ್ರವರ್ತಿ ಸೂಲಿಬೆಲೆ ಶೇರ್ ಮಾಡಿದ ಕನಕ ನಡೆಯ ಫ್ಲೆಕ್ಸ್ ಚಿತ್ರ.

ಚಲೋ ಉಡುಪಿ ಸಮಾವೇಶದ ದಿನ ಚಕ್ರವರ್ತಿ ಸೂಲಿಬೆಲೆ ಶೇರ್ ಮಾಡಿದ ಕನಕ ನಡೆಯ ಫ್ಲೆಕ್ಸ್ನ ಚಿತ್ರ.

ಇದೇ ಅಕ್ಟೋಬರ್ 9ರ ಭಾನುವಾರ ಉಡುಪಿಯಲ್ಲಿ ‘ದಲಿತ ದಮನಿತರ ಹೋರಾಟ ಸಮಿತಿ’ಯಿಂದ ಸ್ವಾಭಿಮಾನಿ ಸಂಘರ್ಷ ಜಾಥಾ ‘ಚಲೋ ಉಡುಪಿ’ ಸಮಾವೇಶ ನಡೆದಿತ್ತು. ಸೂಲಿಬೆಲೆ ಯುವ ಬ್ರಿಗೇಡ್ ವತಿಯಿಂದ ‘ಕನಕ ನಡೆ’ ಹಮ್ಮಿಕೊಂಡಿರುವುದಾಗಿ ‘ಫ್ಲೆಕ್ಸ್’ನ ಚಿತ್ರವೊಂದನ್ನು ಅದೇ ದಿನ ಫೇಸ್ಬುಕಿನಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ “ನೂರು ಬಾರಿ ಒಡೆಯಲಿ, ನಾವು ಸಾವಿರ ಬಾರಿ ಕಟ್ಟೋಣ! ಬನ್ನಿ ಉಡುಪಿ ಸ್ವಚ್ಛ ಮಾಡೋಣ!!” ಎಂದು ಬರೆದಿತ್ತು. “ಜಾತಿ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ, ಸೈನಿಕರನ್ನು ಅವಮಾನಿಸುವ ದೇಶದ್ರೋಹಿಗಳ ವಿರುದ್ಧ ನಮ್ಮದೊಂದು ಆರೋಗ್ಯಪೂರ್ಣ ಕೂಗು,” ಎಂದೂ ಇದರಲ್ಲಿ ಹೇಳಲಾಗಿತ್ತು. ಇಷ್ಟೇ ಆಗಿದ್ದರೆ ಈ ಪರ ವಿರೋಧ ಚರ್ಚೆಯೇ ನಡೆಯುತ್ತಿರಲಿಲ್ಲ.

ಸೂಲಿಬೆಲೆ ಹೇಳುವುದೇನು?:

ಆದರೆ ಸಮಾವೇಶದ ಹಿಂದಿನ ದಿನ, “ಸುಂದರ ಉಡುಪಿ ಸದ್ಯದಲ್ಲೇ ಕೊಳಕಾಗುವ ಲಕ್ಷಣಗಳು ದಟ್ಟವಾಗಿವೆ. ಆದಷ್ಟು ಬೇಗ, #ಸ್ವಚ್ಛ_ಉಡುಪಿ ಮಾಡಬೇಕಾದ ಅವಶ್ಯಕತೆ ಇದೆ. ಜೊತೆಯಾಗುವಿರಾ?” ಎಂಬ ಸ್ಟೇಟಸನ್ನು ಸೂಲಿಬೆಲೆ ಹಾಕಿದ್ದರು. ಮಾತ್ರವಲ್ಲ ಅವರೇ ಶೇರ್ ಮಾಡಿದ ಪೋಸ್ಟರಿನ ಸಾಲುಗಳಲ್ಲಿ, ‘ದೇಶದ್ರೋಹಿ’ಗಳು ಎಂಬ ಪದದ ಜಾಗದಲ್ಲಿ ‘ಎಡಪಂಥೀಯರು’ ಎಂಬ ಶಬ್ದ ಜಾಗ ಪಡೆದಿತ್ತು. ಮಾತ್ರವಲ್ಲ ‘ಕನಕ ನಡೆ’ಯ ಇನ್ನೊಂದು ಪೋಸ್ಟರಿನಲ್ಲಿಯೂ “..ಎಡಪಡೆಯ ವಿರುದ್ಧ ನಮ್ಮದೊಂದು ಆರೋಗ್ಯಪೂರ್ಣ ಕೂಗು,” ಎಂದಿದೆ. ಅವರ ಮತ್ತೊಂದು ಸ್ಟೇಟಸ್ ಕೂಡಾ ಹೀಗಿದೆ, “ನೀಲಿಯೊಂದಿಗೆ ಕೆಂಪು ಬೆರೆಸೋದೇ ನೀಲಿ ಕಾಣದಂತೆ‌ ಮಾಡಲು!! ಈ ‌ಎಡಚರಿಗೆ ಸರಿಯಾದ ಪಾಠ ಕಲಿಸಲು ದಲಿತ ಮಿತ್ರರೊಂದಿಗೇ ಸಜ್ಜಾಗಿದ್ದೇವೆ. ಏಕೆಂದರೆ ದಲಿತರೂ ಈಗ ಜಾಗೃತರಾಗಿದ್ದಾರೆ,” ಎಂದು ಸ್ಟೇಟಸ್ ಹಾಕಿದ್ದಾರೆ.

ಚಲೋ ಉಡುಪಿಯ ಸಾಮಾವೇಶಕಕ್ಕೂ ಮುನ್ನ ಸೂಲಿಬೆಲೆ ಹಾಕಿದ್ದ ಫೇಸ್ಬುಕ್ ಸ್ಟೇಟಸ್.

ಚಲೋ ಉಡುಪಿಯ ಸಾಮಾವೇಶಕಕ್ಕೂ ಮುನ್ನ ಸೂಲಿಬೆಲೆ ಹಾಕಿದ್ದ ಫೇಸ್ಬುಕ್ ಸ್ಟೇಟಸ್.

ಇದಕ್ಕೆ ‘ಚಲೋ ಉಡುಪಿ’ ಸಮಾರೋಪ ಸಮಾರಂಭದ ವೇದಿಕೆಯಿಂದ ಪ್ರತಿಕ್ರಿಯೆಯೂ ಬಂದಿತ್ತು. ಈ ಕುರಿತು ಮಾತನಾಡಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, “ಸಮಾವೇಶ ಮುಗಿದ ನಂತರ ಉಡುಪಿಯನ್ನು ಸ್ವಚ್ಛಗೊಳಿಸುತ್ತೇನೆ ಎಂದು ಚಕ್ರವರ್ತಿ ಸೂಲಿಬೆಲೆ ಎಂಬ ಅವಿವೇಕಿ ಹೇಳಿದ್ದಾನೆ. ಉಡುಪಿಯನ್ನು ಸ್ವಚ್ಛ ಮಾಡುವುದಲ್ಲ. ಜಾತೀಯತೆ, ವೈದಿಕಶಾಹಿ ತುಂಬಿರುವ ಪೇಜಾವರ ಸ್ವಾಮೀಜಿಯ ಮಿದುಳನ್ನು ಶುದ್ಧ ಮಾಡಲಿ. ಆಗ ಉಡುಪಿ ಸ್ವಚ್ಛ ಆಗುತ್ತದೆ’ ಎಂದಿದ್ದರು.

ಆದರೆ  ಈಗ ತಮ್ಮ ಸ್ಟೇಟಸ್ಗಳನ್ನು ಚಕ್ರವರ್ತಿ ಸೂಲಿಬೆಲೆ ಅಲ್ಲಗೆಳೆಯುತ್ತಿದ್ದಾರೆ. “ಕನಕ ನಡೆ ಎಡಪಂಥೀಯರ ವಿರುದ್ಧ ಅಲ್ಲವೇ ಅಲ್ಲ. ನಾವು ಯಾರನ್ನೂ ವಿರೋಧಿಸುತ್ತಲೇ ಇಲ್ಲ. ಅವರೇ ಬೇಕೆಂದೇ ಇದು ಎಡಪಂಥೀಯರ ವಿರುದ್ಧ ಎಂದು ಪ್ರಚಾರ ಮಾಡುತ್ತಿದ್ದಾರೆ,” ಎಂದು ಅವರು ಸ್ಪಷ್ಟೀಕರಣ ನೀಡುತ್ತಿದ್ದಾರೆ. ಸೂಲಿಬೆಲೆ ಮಾತಿಗೂ ಅವರದ್ದೇ ಫೇಸ್ಬುಕ್ ಸ್ಟೇಟಸ್ಸಿಗೂ ವೈರುಧ್ಯಗಳೀಗ ಎದ್ದು ಕಾಣಿಸುತ್ತಿವೆ.

‘ಕನಕ ನಡೆ’ ಮತ್ತು ಕಮ್ಯೂನಿಸ್ಟರು:

‘ಕನಕ ನಡೆ’ ಬಗ್ಗೆ ಇನ್ನೂ ಪ್ಲಾನಿಂಗ್ ಆಗಿಲ್ಲ ಎಂಬ ಮಾತನ್ನು ಅವರು ‘ಸಮಾಚಾರ’ದ ಜೊತೆ ಹಂಚಿಕೊಂಡರು. “ಈಗಾಗಲೆ ಕೆಲವು ದಲಿತ ಸಂಘಟನೆಗಳೂ ಇದರಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದೆಲ್ಲ ನಂತರ ಟಿವಿಗಳಲ್ಲಿ ಚರ್ಚೆಗೆ ಬರುತ್ತದೆ. ನೀವು ಅಲ್ಲಿಂದ ಮಾಹಿತಿಗಳನ್ನು ಪಡೆದುಕೊಳ್ಳಬಹುದು,” ಎಂದರು ಸೂಲಿಬೆಲೆ.

Pejavaraಹಾಗಾದರೆ ‘ಕನಕ ನಡೆ’ಯ ಉದ್ದೇಶ ಏನು ಎನ್ನುವ ಪ್ರಶ್ನೆಗೆ ಸೂಲಿಬೆಲೆ ಹೇಳಿದ್ದು ಹೀಗೆ: “ಉಡುಪಿ ಸ್ವಚ್ಛ ಮಾಡುವುದಷ್ಟೇ ನಮ್ಮ ಉದ್ದೇಶ; ಚಲೋ ಉಡುಪಿಗೂ ಇದಕ್ಕೂ ಸಂಬಂಧವಿಲ್ಲ. ಪರ್ಯಾಯದ ಸಂದರ್ಭದಲ್ಲೇ ಈ ಕುರಿತು ಪೇಜಾವರರೊಂದಿಗೆ ಚರ್ಚೆ ನಡೆದಿತ್ತು. ಬೇಸಿಗೆಯಲ್ಲಿ ನೀರಿರುವುದಿಲ್ಲ ಎಂಬ ಕಾರಣಕ್ಕೆ ಆಗಿರಲಿಲ್ಲ; ಈಗ ಮಳೆಗಾಲ, ಹೀಗಾಗಿ ಈಗ ಸ್ವಚ್ಚ ಮಾಡಲಿದ್ದೇವೆ. ದೇಶದಾದ್ಯಂತ ಸ್ವಚ್ಛತೆಯ ಅಭಿಯಾನ ನಡೆಯುತ್ತಿದೆ. ಇಲ್ಲಿ ಸ್ವಚ್ಛತೆ ಬಿಟ್ಟು ಬೇರೇನೂ ಇಲ್ಲ,” ಎನ್ನುತ್ತಾರೆ ಸೂಲಿಬೆಲೆ.

ಇನ್ನು ‘ಚಲೋ ಉಡುಪಿ’ ಬಗ್ಗೆ ಮಾತನಾಡಿದ ಸೂಲಿಬೆಲೆ, “ಇವರೆಲ್ಲಾ ದಲಿತರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮೊದಲಿನಿಂದಲೂ ಇವರು ನಡೆದುಕೊಂಡು ಬಂದಿದ್ದೇ ಹೀಗೆ. ‘ಚಲೋ ಉಡುಪಿ’ ಇದರ ಒಂದು ಭಾಗ ಅಷ್ಟೇ. ಇಂಥ ಸಂದರ್ಭದಲ್ಲಿ ದಲಿತರನ್ನು ಬೆಸಯುತ್ತಿರುವ ಪೇಜಾವರ ಮಠದ ಸ್ವಾಮೀಜಿಗಳೊಂದಿಗೆ ನಾನು ಯಾವತ್ತೂ ನಿಲ್ತೇನೆ,” ಎನ್ನುತ್ತಾರೆ ಸೂಲಿಬೆಲೆ. “ನಾವು ಯಾವತ್ತೂ ಇವರನ್ನು (ಚಲೋ ಉಡುಪಿ) ಸೀರಿಯಸ್ಸಾಗಿ ತೆಗೆದುಕೊಂಡಿದ್ದೇ ಇಲ್ಲ. ಆದರೆ ಅವರು ನಮ್ಮನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ; ನಮಗದೇ ಸಂತೋಷ,” ಎನ್ನುತ್ತಾರೆ ಚಕ್ರವರ್ತಿ ಸೂಲಿಬೆಲೆ.

ಈ ಕುರಿತು ಫೇಸ್ಬುಕ್ ಸ್ಟೇಟಸ್ ಒಂದರಲ್ಲಿ, “ಪೇಜಾವರ ಶ್ರೀಗಳು ದಲಿತ ಪರ ಮತ್ತು ನಕ್ಸಲ್ ಪೀಡಿತ ಕ್ಷೇತ್ರಗಳಲ್ಲಿ ನಡೆಸುತ್ತಿರುವ ಚಟುವಟಿಕೆಗಳಿಂದ ಗಾಬರಿಗೊಂಡಿರುವ #ಚೀನಾಚೇಲಾ ನಕ್ಸಲರ ಹೋರಾಟವಿದು, ದಲಿತರದ್ದಲ್ಲ..,” ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಹಾಕುತ್ತಿರುವ ಫೇಸ್ಬುಕ್ ಸ್ಟೇಟಸ್ಗಳಿಗೂ, ಈಗ ಅವರಾಡುತ್ತಿರುವ ಮಾತುಗಳಿಗೂ ವೈರುಧ್ಯಗಳಿರುವುದನ್ನು ಇವು ಸ್ಪಷ್ಟವಾಗಿ ಸಾರುತ್ತಿವೆ. ಮಾತಿನಲ್ಲಿ ಕಮ್ಯೂನಿಷ್ಟರ ವಿರುದ್ಧ ಅಲ್ಲ ಎನ್ನುತ್ತಲೇ ಪೇಸ್ಬುಕ್ಕಿನಲ್ಲಿ ಎಡಪಂಥೀಯ, ನಕ್ಸಲ್ ಪದವನ್ನು ಆಗಾಗ ಎಳೆದು ತಂದಿದ್ದಾರೆ. ಇದೇ ಕಾರಣಕ್ಕೆ ಕಮ್ಯೂನಿಸ್ಟರು ಸೇರಿದಂತೆ ದಲಿತ ಹಾಗೂ ದಮನಿತರ ಪರವಾಗಿ ಹೋರಾಟಕ್ಕಿಳಿದವರು ಸೂಲಿಬೆಲೆ ಹಾಗೂ ಯುವ ಬ್ರಿಗೇಡ್ ವಿರುದ್ಧ ತಿರುಗು ಬಿದ್ದಿದ್ದಾರೆ.

ಹೀಗಿರುವಾಗಲೇ ಸೂಲೆಬೆಲೆ ಅವರನ್ನು ‘ದಲಿತ ಹೃದಯ ಸಾಮ್ರಾಟ್’ ಎಂಬ ಹ್ಯಾಶ್ ಅಡಿಯಲ್ಲಿ ವಿಜೃಂಬಣೆ ಮಾಡುವ ಕೆಲಸ ನಡೆಸುತ್ತಿದೆ. “ಸೂಲಿಬೆಲೆ ದಲಿತ ಹೃದಯ ಸಾಮ್ರಾಟ್ ಆದರೆ, ಅಂಬೇಡ್ಕರ್ ಏನು?,” ಎಂದು ಹಿರಿಯ ಪತ್ರಕರ್ತರೊಬ್ಬರು ಪ್ರಶ್ನಿಸುತ್ತಾರೆ. ಒಟ್ಟಾರೆ, ‘ಉಡುಪಿ ಚಲೋ’ ನಂತರ ರಾಜ್ಯದಲ್ಲಿ ದಲಿತ ಪ್ರೇಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮೀರಿ ಅನಾವರಣಗೊಳ್ಳುತ್ತಿದೆ. ಇದರಲ್ಲಿ ಪ್ರಾಮಾಣಿಕವಾಗಿರುವುದು ಯಾವುದು ಎಂಬುದನ್ನು ಕಾಲವೇ ಉತ್ತರಿಸಲಿದೆ.

ಕನಕ ನಡೆ ಬಗ್ಗೆ ನಮ್ಮ ಕಡೆಯಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಯುವ ಬ್ರಿಗೇಡ್ ಎಂಬ ಹೆಸರಿಟ್ಟುಕೊಂಡು ದಲಿತರು ಕಾಲಿಟ್ಟ ಜಾಗವನ್ನು ಸ್ವಚ್ಚಗೊಳಿಸುತ್ತೇವೆ ಎಂದು ಹೇಳುವುದು, ನಿಜವಾದ ಅರ್ಥದಲ್ಲಿ ಅಸ್ಪೃಶ್ಯತೆಯ ಆಚರಣೆ. ಇದಕ್ಕೆ ಕನಕರನ್ನು ಬಳಸಿಕೊಳ್ಳುತ್ತಿರುವುದು, ಕನಕನಿಗೆ ಹಾಗೂ ಕನಕನನ್ನು ಪ್ರತಿನಿಧಿಸುತ್ತಿರುವವರಿಗೆ ಮಾಡುತ್ತಿರುವ ಅವಮಾನ. ಈಗ ಅವರ ಮಾತು ಬದಲಿಸಬಹುದು. ಆದರೆ, ಯಾರು ಏನೇ ಹೇಳಿದರು ಜನ ಅರ್ಥ ಮಾಡಿಕೊಳ್ಳುತ್ತಾರೆ.

ಹುಲಿಕುಂಟೆ ಮೂರ್ತಿ, ‘ಚಲೋ ಉಡುಪಿ’ ಸಂಘಟಕ 

 

Leave a comment

FOOT PRINT

Top