An unconventional News Portal.

‘ಸಾಮಾನ್ಯ ಜ್ಞಾನ’: ಏನಿದು ಪಂಕ್ತಿ ಭೇದ?; ಊಟದ ಆಚರಣೆಗೆ ಯಾಕಿಷ್ಟು ವಿರೋಧ?

‘ಸಾಮಾನ್ಯ ಜ್ಞಾನ’: ಏನಿದು ಪಂಕ್ತಿ ಭೇದ?; ಊಟದ ಆಚರಣೆಗೆ ಯಾಕಿಷ್ಟು ವಿರೋಧ?

ದಲಿತ ಹಾಗೂ ದಮನಿತರ ಸ್ವಾಭಿಮಾನಿ ಜಾಥಾದ ಸಮಾರೋಪ ಸಮಾವೇಶ ಉಡುಪಿಯಲ್ಲಿ ಇದೇ ಭಾನುವಾರ ನಡೆಯಿತು. ಈ ಸಂದರ್ಭ ‘ಉಡುಪಿ ಮಠ’ದಲ್ಲಿ ನಡೆಯುತ್ತಿರುವ ‘ಪಂಕ್ತಿ ಭೇದ’ಕ್ಕೆ ಕೊನೆಹಾಡಲು ಗುಜರಾತ್ ಮೂಲದ ಹೋರಾಟಗಾರ ಜಿಗ್ನೇಶ್ ಮೇವಾನಿ ಎರಡು ತಿಂಗಳ ಗಡುವು ನೀಡಿದ್ದರು. ಇದಾದ ಬೆನ್ನಿಗೆ ಈಗ ಪಂಕ್ತಿ ಭೇದದ ಸುತ್ತ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.

ಏನಿದು ‘ಪಂಕ್ತಿ ಭೇದ’?

pankthi beda

ನೆಲದ ಮೇಲೆ ಊಟ ಮಾಡುವ ಉಡುಪಿಯ ಪದ್ಧತಿ (ಸ್ವಚ್ಚತೆ ವಿಚಾರದಲ್ಲಿ ಇದನ್ನು ಪ್ರಗತಿಪರರು ಪ್ರಶ್ನೆ ಮಾಡುತ್ತಾರೆ. ಚಿತ್ರ: ಡಕ್ಕನ್ ಕ್ರಾನಿಕಲ್)

ಮಠ ಮತ್ತು ದೇವಸ್ಥಾನಗಳಲ್ಲಿ ಬ್ರಾಹ್ಮಣರು ಮತ್ತು ಉಳಿದ ಜಾತಿಗಳ ನಡುವೆ ಊಟಕ್ಕಾಗಿ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡುವುದೇ ಪಂಕ್ತಿ (ಊಟದ ಸಾಲು) ಭೇದ.

ಪಂಕ್ತಿ ಭೇದದ ಮಾತು ಬಂದಾಗ ಮುಖ್ಯವಾಗಿ ದಲಿತರ ಹೆಸರು ಕೇಳಿ ಬರುತ್ತದೆ. ಆದರೆ ವಾಸ್ತವ ವಿಚಾರವೆಂದರೆ ದಲಿತರು ಮಾತ್ರವಲ್ಲ ಉಳಿದ ಜಾತಿಗಳವರೂ ಬ್ರಾಹ್ಮಣರ ಜೊತೆ ಕೂರುವಂತಿಲ್ಲ. ಕೆಲವೆಡೆಗಳಲ್ಲಿ ಬ್ರಾಹ್ಮಣರಲ್ಲೇ ಮೇಲ್ವರ್ಗ-ಕೆಳವರ್ಗಗಳೆಂಬ ಭೇದಗಳಿವೆ. ಶಿವಳ್ಳಿ ಬ್ರಾಹ್ಮಣರು, ಹವ್ಯಕರ ಮಧ್ಯೆಯೇ ಪ್ರತ್ಯೇಕ ಊಟದ ವ್ಯವಸ್ಥೆಗಳನ್ನು ಮಾಡುವುದಿದೆ.

ಇಂದು ಜಾತಿ ಆಧಾರಿತ ಪಂಕ್ತಿ ಭೇದಗಳು ಎಲ್ಲೆಲ್ಲೂ ಇವೆ. ಆದರೆ ಮುಂದುವರಿದ ಜಿಲ್ಲೆಗಳೆಂದು ಗುರುತಿಸಲ್ಪಡುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಭೇದ ಸ್ವಲ್ಪ ಹೆಚ್ಚಾಗಿಯೇ ಇದ್ದು, ಸಹಜವಾಗಿಯೇ ಆಕ್ರೋಶಕ್ಕೆ ದಾರಿಯಾಗಿದೆ.

ವಿವಾದದ ಮೂಲ:

pankthi bedaಪಂಕ್ತಿ ಬೇಧ ಕೊನೆಯಾಗಬೇಕು ಎಂದು ಬಹಳ ಹಿಂದಿನಿಂದಲೂ ಸಮಾಜ ಸುಧಾರಕರು ಹಾಗೂ ಹಲವರು ಹೋರಾಡುತ್ತಾ ಬಂದಿದ್ದಾರೆ. 3-4 ವರ್ಷಗಳ ಕೆಳಗೆ ಬ್ರಾಹ್ಮಣಳಲ್ಲ ಎಂಬ ಏಕೈಕ ಕಾರಣಕ್ಕೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಊಟದ ಪಂಕ್ತಿಯಿಂದ ಮಹಿಳೆಯೊಬ್ಬರನ್ನು ಎಬ್ಬಿಸಿದ್ದು ಭಾರಿ ವಿವಾದ ಹುಟ್ಟುಹಾಕಿತ್ತು. ಈ ಅಮಾನವೀಯ ಘಟನೆಯನ್ನು ವಿರೋಧಿಸಿ ಹಾಗೂ ಪಂಕ್ತಿಭೇದ ಕೊನೆಯಾಗಬೇಕು ಎಂದು ಆಗ್ರಹಿಸಿ 2014 ಮೇ.5ರಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಸಿಪಿಐಎಂ ಪಕ್ಷವು ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದಲ್ಲಿ ಹಮ್ಮಿಕೊಂಡಿತ್ತು. ನಾಲ್ಕು ದಿನಗಳ ಕಾಲ ಈ ಧರಣಿ ನಡೆಯಿತು. ಇದೇ ಅವಧಿಯಲ್ಲಿ ಬೀದರ್ ಮುಂತಾದ ಕಡೆಗಳಲ್ಲೂ ವಿವಿಧ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು. ಆದರೆ ಪಂಕ್ತಿ ಭೇದ ಮಾತ್ರ ಕೊನೆಯಾಗಲೇ ಇಲ್ಲ.

ಅದರಲ್ಲೂ ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸುವ, ‘ಸೋ ಕಾಲ್ಡ್’ ಸಮಾಜ ಸುಧಾರಕರಾದ ಪೇಜಾವರ ಮಠದ ವಿಶ್ವೇಶತೀರ್ಥ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಕ್ಷೇತ್ರದಲ್ಲೂ ಇದು ಎಗ್ಗಿಲ್ಲದೆ ನಡೆಯುತ್ತಿದೆ. ಇನ್ನು ಸರಕಾರದ ವಶದಲ್ಲಿರುವ ರಾಜ್ಯದ ನಂಬರ್ ವನ್ ದೇವಸ್ಥಾನ ಕುಕ್ಕೆ ಸುಬ್ರಮಣ್ಯವೂ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಈ ಆಚರಣೆಗಳು ಇಂದಿಗೂ ಜಾರಿಯಲ್ಲಿವೆ.

ವಿರೋಧವೇಕೆ?:

ಗುಡಿ ನಿರ್ಮಿಸುವುದರಿಂದ ಹಿಡಿದು ದೇವಸ್ಥಾನದ ಸ್ವಚ್ಛತೆ ಸಹಿತ ಪ್ರತಿಯೊಂದು ಕೆಲಸಗಳಿಗೆ ಕೆಳ ಸಮುದಾಯದವರನ್ನು ಬಳಸಿಕೊಳ್ಳುವ ಬ್ರಾಹ್ಮಣರು ಊಟಕ್ಕಾಗುವಾಗ ಯಾಕೆ ಈ ರೀತಿ ಪಂಕ್ತಿ ಭೇದ ಮಾಡುತ್ತಾರೆ ಎನ್ನುವುದು ಒಟ್ಟಾರೆ ವಿರೋಧಕ್ಕೆ ಕಾರಣ

“3-4  ವರ್ಷದ ಕೆಳಗೆ ಉಡುಪಿ ಮಠದಲ್ಲಿ ನನ್ನ ತಂಗಿಯನ್ನೇ ಇದೇ ರೀತಿ ಪಂಕ್ತಿಯಿಂದ ಎಬ್ಬಿಸಿದ್ದರು. ಹಿಂದೂಗಳು ನಾವೆಲ್ಲಾ ಒಂದು ಎಂದು ಹೇಳುತ್ತಾರೆ. ಆದರೆ ಜಾತಿ, ಧರ್ಮದ ಆಧಾರದಲ್ಲಿ ತುತ್ತು ಅನ್ನಕ್ಕೂ ಭೇದ ಭಾವ ಮಾಡುವವರನ್ನ ಹೇಗೆ ಮಾನವೀಯರು ಎಂದು ಹೇಳುವುದು,” ಎಂದು ಪ್ರಶ್ಮೆ ಮಾಡುತ್ತಾರೆ ಸಹಪಂಕ್ತಿ ಭೋಜನವನ್ನು ನಿರಂತರವಾಗಿ ಪ್ರತಿಪಾದಿಸುತ್ತ ಬಂದಿರುವ ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ.

“ಹಾಗೆ ನೋಡಿದರೆ ಉಡುಪಿಯ ಕೃಷ್ಣ ಗೊಲ್ಲ. ನಮ್ಮ ಇವತ್ತಿನ ಜಾತಿಗಳ ಪ್ರಕಾರ ಆತನೇ ಹಿಂದುಳಿದ ವರ್ಗದವ. ಹೀಗಿದ್ದೂ ಇವರು ಆತನನ್ನೇ ಬಳಸಿಕೊಂಡು ದಲಿತರಿಗೆ, ಹಿಂದುಳಿದವರಿಗೆ ಅವಮಾನ ಮಾಡುತ್ತಿದ್ದಾರೆ. ದೇವರ ಹೆಸರಿನ ವ್ಯಾಪಾರಿಗಳು ಇವರೆಲ್ಲಾ,” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಅವರು.

“ಇದೊಂದು ಮಾನವೀಯತೆ ವಿರುದ್ಧದ ಆಚರಣೆ. ಊಟಕ್ಕೆ ಕೂತಾಗ ಕೂಡಾ ನಿನ್ನ ಧರ್ಮ ಯಾವುದು ಜಾತಿ ಯಾವುದು ಎಂದು ಕೇಳುತ್ತಾರೆ. ನಾವು ಸುಪಿರಿಯರ್, ಊಟದಲ್ಲಿಯೂ ನೀವು ನಮ್ಮ ಸಮನಲ್ಲ ಎನ್ನುವುದನ್ನು ಬ್ರಾಹ್ಮಣರು ಬಿತ್ತುತ್ತಿದ್ದಾರೆ. ಈ ಆಚರಣೆಗಳನ್ನು ಒಪ್ಪಲು ಸಾಧ್ಯವಿಲ್ಲ,” ಎನ್ನುತ್ತಾರೆ ಅವರು. ಇವರನ್ನೆಲ್ಲಾ ನೋಡಿದಾಗ ನಾನೂ ಇದೇ ಹಿಂದೂ ಎಂದು ಹೇಗೆ ಹೇಳಿಕೊಳ್ಳಲಿ ಎಂದು ಅವರು ಪ್ರಶ್ನೆ ಮಾಡುತ್ತಾರೆ.

ಬೇರೆಯೇ ಪಂಕ್ತಿ ಬೇಕು!:

ಉಡುಪಿ ಅಷ್ಟಮಠಗಳಲ್ಲಾದ ಒಂದಾದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿ ಆಗಾಗ ದಲಿತರ ಕಾಲನಿಗಳಿಗೆ ಭೇಟಿ ಕೊಡುತ್ತಾ, ಅವರ ದೇವರುಗಳಿಗೆ ಪೂಜೆ ಮಾಡುತ್ತಾ ಬಂದವರು. ಹೀಗಿರುವವರು ತಮ್ಮ ಮಠದಲ್ಲೇ ಜಾತಿ ಕಾರಣಕ್ಕೆ ಊಟದಲ್ಲಿ ಯಾಕೆ ಭೇದ ಮಾಡುತ್ತಾರೆ ಎನ್ನುವ ಪ್ರಶ್ನೆಗಳನ್ನು ಹಲವರು ಆಗಾಗ ಎತ್ತುತ್ತಲೇ ಬಂದಿದ್ದಾರೆ.

ಆದರೆ ದಲಿತರ ಕೇರಿಗೆ ಕಾಲಿಡುವ ಪೇಜಾವರ ಮಠಾಧಿಪತಿಗಳು, ಪಂಕ್ತಿಭೇದಕ್ಕೆ ಮಾತ್ರ ಮೊದಲಿನಿಂದಲೂ ಆತುಕೊಂಡಿದ್ದಾರೆ. 2013ರಲ್ಲಿ ಅವರೊಮ್ಮೆ “ಧರ್ಮಸ್ಥಳ, ಸುಬ್ರಹ್ಮಣ್ಯಗಳಲ್ಲೂ ಇದು ಇರುವಾಗ, ಪಂಕ್ತಿಭೇದದ ವಿಚಾರದಲ್ಲಿ ತಮ್ಮನ್ನೇ ಏಕೆ ಗುರಿ ಮಾಡಲಾಗುತ್ತಿದೆ?” ಎಂದು ಪ್ರಶ್ನಿಸಿದ್ದರು.  ಇದು ಅಂದಿನ ಜನವರಿ 7 ರ ಪ್ರಜಾವಾಣಿಯಲ್ಲಿ ಸುದ್ದಿಯಾಗಿ ಪ್ರಕಟವೂ ಆಗಿತ್ತು.

ಇದರಾಚೆಗೆ, ‘ಕೆಲವರು ಬ್ರಾಹ್ಮಣರ ಊಟದ ಸಂಪ್ರದಾಯಗಳು ಬೇರೆ. ಉಡುಪಿಯ ಜನರಿಗೂ, ಹೊರಗಿನಿಂದ ಬರುತ್ತಿದ್ದವರಿಗೂ ಊಟದ ಸಂಸ್ಕೃತಿಯಲ್ಲಿ ವ್ಯತ್ಯಾಸಗಳಿದ್ದವು. ಹೀಗಾಗಿ ಪ್ರತ್ಯೇಕ ಪಂಕ್ತಿಗಳಲ್ಲಿ ಕೂರುವ ವ್ಯವಸ್ಥೆ ಮಾಡಿಕೊಂಡರು,’ ಎನ್ನುವ ಒಂದು ವಾದವಿದೆ. ‘ಬ್ರಾಹ್ಮಣರು ಸಸ್ಯಾಹಾರಿಗಳು. ಮಡಿ ಮೈಲಿಗೆ ಇತ್ಯಾದಿಯನ್ನು ಆಚರಿಸಿದವರು. ನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡುವವರು. ಹಾಗಾಗಿ ಅವರು ಮಾಂಸಾಹಾರಿಗಳ ಜೊತೆ ಕೂತು ಉಣ್ಣುವುದು ಸರಿಯಲ್ಲ ಅದೂ ಅಲ್ಲದೆ ಬ್ರಾಹ್ಮಣರದು ಸಾತ್ವಿಕ ಆಹಾರ,’ ಎಂಬ ಇನ್ನೊಂದು ವಾದವಿದೆ.

‘ಕರ್ಮಠ ಬ್ರಾಹ್ಮಣನಿಗೆ ಎಲ್ಲವನ್ನೂ ಬಿಟ್ಟು ಉಳಿದವರ ಜತೆ ಊಟ ಮಾಡಬೇಕು ಎಂದರೆ ಕಿರಿಕಿರಿಯಾಗಬಹುದು. ಹಾಗಾಗಿ ಅವರ ಪಾಡಿಗೆ ಅವರನ್ನು ಬಿಟ್ಟುಬಿಡೋಣ. ಮಠ ಎಂಬುದು ಒಂದು ಖಾಸಗಿ ಸಂಸ್ಥೆ,’ ಎಂದು ಹಲವರು ತಮ್ಮ ವಾದ ಸರಣಿ ಮಂಡಿಸಿದ್ದಾರೆ.

ವಿಚಿತ್ರವೆಂದರೆ ಈ ಮೂಲಕ ಮೌಢ್ಯದ ಆಚರಣೆಗಳು ಇನ್ನೂ ಇರಲಿ ಎನ್ನುತ್ತಿದ್ದಾರೆ. ಅದರಲ್ಲಿ ಸಾಮಾಜಿಕ ಸುಧಾರಣೆಯ ಮುಖವಾಡ ಹೊತ್ತ ಧರ್ಮಾಧಿಕಾರಿಗಳು, ಮಠಾಧಿಪತಿಗಳೂ ಇದ್ದಾರೆ ಎನ್ನುವುದು ಇನ್ನೊಂದು ವಿಶೇಷ ಹಾಗೂ ವಿಪರ್ಯಾಸದ ಸಂಗತಿ.

ಚಿತ್ರ ಕೃಪೆ: ಡೈಲಿ ಮೇಲ್

Leave a comment

FOOT PRINT

Top