An unconventional News Portal.

‘ಮಾರ್ಟಿಯನ್ ಗಾರ್ಡನ್’: ಮಂಗಳನ ಮೇಲೊಂದು ಮನೆಯ ಮಾಡಿ; ತರಕಾರಿ ಬೆಳೆಯಲು ಹೊರಟರು!

‘ಮಾರ್ಟಿಯನ್ ಗಾರ್ಡನ್’: ಮಂಗಳನ ಮೇಲೊಂದು ಮನೆಯ ಮಾಡಿ; ತರಕಾರಿ ಬೆಳೆಯಲು ಹೊರಟರು!

ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿ ಕೊಂಡಾತ ಕೊನೆಗೆ ಅಲ್ಲಿಯೇ ಆಲೂಗಡ್ಡೆ ಬೆಳೆಯುವ ಕತೆಯನ್ನು ಹೊಂದಿದ್ದ ‘ದಿ ಮಾರ್ಟಿಯನ್’ ಎಂಬ ಹಾಲಿವುಡ್ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಆ ರೀಲ್ ಕತೆಯಂತೆಯೇ ರಿಯಲ್ ಲೈಫಿನಲ್ಲಿ ಅಂಥಹದ್ದೊಂದು ಸಾಧ್ಯತೆ ನಿಜವಾಗಿಸಲು ವಿಜ್ಞಾನಿಗಳೀಗ ಹೊರಟಿದ್ದಾರೆ.

ಮುಂದಿನ 10-15 ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸಲು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಉದ್ಯಮಿ ಎಲೊನ್ ಮಸ್ಕ್ ಯೋಜನೆ ರೂಪಿಸಿದ್ದಾರೆ. ಹಾಗೆ ಕಳುಹಿಸಿದವರು ವಾಪಾಸ್ ಬರುವ ಮಾತೇ ಇಲ್ಲ. ಅದಕ್ಕಾಗಿ ಆಹಾರ ವಿಜ್ಞಾನಿಗಳೀಗ ಅಂತರಿಕ್ಷಯಾನಿಗಳು ಕೆಂಪು ಗ್ರಹದಲ್ಲಿ ಏನೇನು ಬೆಳೆಯಬಹುದು ಎಂಬ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ.

ಭೂಮಿಯಿಂದ ಅಂತರಿಕ್ಷ ಯಾನಿಗಳನ್ನು ಮಂಗಳ ಗ್ರಹಕ್ಕೆ ಹೊತ್ತೊಯ್ಯಬೇಕಾದರೆ ಎರಡೂವರೆ ವರ್ಷ ಬೇಕು. ಹೀಗಿರುವಾಗ ದಾರಿ ಮಧ್ಯೆ ಆಹಾರ ಪೂರೈಸುವುದು ಸವಾಲಿನ ಕೆಲಸ. ತಮ್ಮ ಹಸಿವು ನೀಗಿಸಲು ಅಂತರಿಕ್ಷ ಯಾನಿಗಳು ಕೊಂಡೊಯ್ಯುವ ಆಹಾರದ ಜತೆ ಅವರೇ ಬೆಳೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಇದಕ್ಕಾಗಿ ನಾಸಾದ ‘ಕೆನಡಿ ಬಾಹ್ಯಕಾಶ ಕೇಂದ್ರ’ ಮತ್ತು ‘ಪ್ಲೋರಿಡಾ ಟೆಕ್ ಬಝ್ ಆಲ್ಡ್ರಿನ್ ಬಾಹ್ಯಾಕಾಶ ಸಂಸ್ಥೆ’ ಹಾಗೂ ‘ಮಾರ್ಟಿಯನ್ ಗಾರ್ಡನ್’ ಪ್ರಯೋಗದಲ್ಲಿ ತೊಡಗಿಸಿಕೊಂಡಿದೆ. ಮಂಗಳ ಗ್ರಹದ ಮಣ್ಣಿನ ಗುಣಲಕ್ಷಣಗಳನ್ನು ಹೊಂದಿರುವ ಮಣ್ಣನ್ನು, ಹವಾಯಿ ದೇಶದಿಂದ ತಂದು ಸಂಶೋಧನೆ ನಡೆಸುತ್ತಿವೆ. ಮಂಗಳ ಗ್ರಹದ ಮಣ್ಣು ಲಾವಾ ಕಲ್ಲುಗಳಿಂದ ಪುಡಿಯಾದ ಮಣ್ಣಾಗಿದ್ದು, ಇದರಲ್ಲಿ ರಾಸಾಯನಿಕ ಪದಾರ್ಥಗಳಿರುವುದಿಲ್ಲ. ಇಂಥಹ ಮಣ್ಣಿನಲ್ಲಿ ಬೆಳೆ ಬೆಳೆಯುವುದು ತೀರಾ ಸವಾಲಿನ ಕೆಲಸ.

ಮಂಗಳ ಗ್ರಹದ ಮೇಲಿನ ಮಣ್ಣು

ಮಂಗಳ ಗ್ರಹದ ಮೇಲಿನ ಮಣ್ಣು

“ಸಾಮಾನ್ಯವಾಗಿ ಮಣ್ಣು ತನ್ನಷ್ಟಕ್ಕೇ ರಾಸಾಯನಿಕ ವಸ್ತುಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಗಿಡ, ಕೀಟ, ಹುಳುಗಳಿರುತ್ತವೆ. ಆದರೆ ನಿಜವಾಗಿ ಮಂಗಳನಲ್ಲಿ ಮಣ್ಣೆ ಇಲ್ಲ.” ಎನ್ನುತ್ತಾರೆ ‘ಕೆನಡಿ ಬಾಹ್ಯಾಕಾಶ ಕೇಂದ್ರ’ದ ಆಹಾರ ಉತ್ಪಾದನೆ ಯೋಜನೆಯ ಹಿರಿಯ ವ್ಯವಸ್ಥಾಪಕ ರಾಲ್ಫ್ ಫ್ರಿಟ್ಶೆ.

ಬೆಳೆಗಳನ್ನು ಬೆಳೆಯಲು ಎಷ್ಟು ಪ್ರಮಾಣದ ಮಣ್ಣನ್ನು ಬಳಸಬೇಕು, ಯಾವ ಪೋಷಕಾಂಶಗಳನ್ನು ನೀಡಬೇಕು ಎಂಬ ಸಂಶೋಧನೆಗಳು ನಡೆಯುತ್ತಿವೆ. ಈಗಾಗಲೇ ವಿಜ್ಞಾನಿಗಳು ಮೂರು ಭಿನ್ನ ಮಣ್ಣಿನಲ್ಲಿ ಕ್ಯಾಬೇಜ್ ಸೇರಿದಂತೆ ಸೊಪ್ಪು ತರಕಾರಿಗಳನ್ನು ಬೆಳೆದಿದ್ದಾರೆ. ಇವುಗಳಲ್ಲಿ ಪೋಷಕಾಂಶಗಳನ್ನು ಬೆರೆಸಿದ ಮಂಗಳನ ಮಣ್ಣು, ಪೋಷಕಾಂಶಗಳನ್ನು ಬೆರೆಸದ ಮಂಗಳನ ಮಣ್ಣು ಹಾಗೂ ಸಾಮಾನ್ಯ ಮಣ್ಣಿನಲ್ಲಿ ಬೆಳೆದು ಒಂದಕ್ಕೊಂದು ಸಮೀಕರಿಸಿ ನೋಡುತ್ತಿದ್ದಾರೆ. ಸದ್ಯದ ವರದಿಗಳ ಪ್ರಕಾರ, ಮಂಗಳ ಗ್ರಹದ ರೀತಿಯ ಮಣ್ಣು ಹಾಗೂ ಸಾಮಾನ್ಯ ಮಣ್ಣಲ್ಲಿ ಬೆಳೆದ ಕ್ಯಾಬೇಜ್ನ ರುಚಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಆದರೆ ಮಂಗಳನ ಮಣ್ಣಿನಲ್ಲಿ ಬೆಳೆದ ಕ್ಯಾಬೇಜಿನ ಬೇರುಗಳು ದುರ್ಭಲವಾಗಿದ್ದು ಬೆಳೆಯಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿವೆ.

ಮುಂದಿನ ದಿನಗಳಲ್ಲಿ ಇದೇ ರೀತಿಯ ಪ್ರಯೋಗಗಳನ್ನು ಸಿಹಿ ಗೆಣಸು, ಚೀನಾ ಕ್ಯಾಬೇಜ್, ಟೊಮೆಟೋ, ಅವರೆ, ಗುಂಡು ಮೆಣಸು ಹಾಗೂ ಇತರ ಸೊಪ್ಪು ತರಕಾರಿಗಳ ಮೇಲೆಯೂ ಮಾಡಲಿದ್ದಾರೆ.

2015ರಲ್ಲಿ ಮೊದಲ ಬಾರಿಗೆ ನಾಸಾದ ಬಾಹ್ಯಾಕಾಶ ವಿಜ್ಞಾನಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಬೆಳೆದ ಕ್ಯಾಬೇಜ್ ಎಲೆಗಳನ್ನು ತಿಂದಿದ್ದರು. ಬಾಹ್ಯಾಕಾಶ ಕೇಂದ್ರದಲ್ಲಿ ಕ್ಯಾಬೇಜ್ ಎಲೆ ಬೆಳೆಯಲು 33 ದಿನಗಳನ್ನು ತೆಗೆದುಕೊಂಡಿತ್ತು. ಭವಿಷ್ಯದಲ್ಲಿ ಅಂತರಿಕ್ಷ ಯಾನಿಗಳಿಗೆ ದೀರ್ಘ ಕಾಲ ಆಹಾರ ಪೂರೈಸುವ ನಾಸಾದ ಯೋಜನೆಯ ಭಾಗವಾಗಿ ಇದನ್ನು ಕೈಗೊಳ್ಳಲಾಗಿತ್ತು.

ಅಂತರಿಕ್ಷ ಯಾನದಿಂದ ಮರಳಿ ಬಂದಿದ್ದ ಗಗನಯಾನಿ ಸ್ಕಾಟ್ ಕೆಲ್ಲಿ “ನಾವು ಮುಂದೊಂದು ದಿನ ಮಂಗಳ ಯಾತ್ರೆ ಹೊರಡುವುದಿದ್ದರೆ, ಆಹಾರ ಪೂರೈಕೆ ಸೇರಿದಂತೆ ಹಲವು ವಿಚಾರಗಳಿಗೆ ಬೆಂಬಲ ನೀಡುವ ಬಾಹ್ಯಾಕಾಶ ನೌಕೆ ಇರಬೇಕಾಗುತ್ತದೆ,” ಎಂದು ಅವತ್ತು ಹೇಳಿದ್ದರು.

ನಾಸಾ ಮತ್ತು ಅದರ ಸಹಯೋಗದ ಸಂಸ್ಥೆಗಳು ನಿರಂತರವಾಗಿ ಪಥಗಾಮಿಗಳನ್ನು, ಲ್ಯಾಂಡರ್, ರೋವರ್ಗಳನ್ನು ಮಂಗಳನಲ್ಲಿಗೆ ಕಳುಹಿಸುತ್ತಿವೆ. ಇತ್ತೀಚೆಗೆ ‘ಕ್ಯೂರಿಯಾಸಿಟಿ ರೋವರ್’ನ್ನು 40 ವರ್ಷಗಳ ಪ್ರಯತ್ನದ ನಂತರ ಮಂಗಳನ ನೆಲದ ಮೇಲೆ ಇಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ 2030ರ ಹೊತ್ತಿಗೆ ಮಂಗಳನ ನೆಲಕ್ಕೆ ಮನುಷ್ಯನನ್ನೇ ಕಳುಹಿಸುವ ಯೋಜನೆಯಲ್ಲಿ ನಾಸಾ ತೊಡಗಿಸಿಕೊಂಡಿದೆ.

ಕ್ಯೂರಿಯಾಸಿಟಿ ರೋವರ್

ಕ್ಯೂರಿಯಾಸಿಟಿ ರೋವರ್

ಆದರೆ, ‘2030ಕ್ಕೆ ಮಂಗಳ ಗ್ರಹಕ್ಕೆ ಹೋಗುವುದು ಅಸಾಧ್ಯ; ನಾಸಾದ ಯೋಜನೆ ವಾಸ್ತವಕ್ಕಿಂತ ದೂರವಾಗಿದೆ’ ಎಂದು ರಾಷ್ಟ್ರೀಯ ವಿಜ್ಞಾನ, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಅಕಾಡೆಮಿ 2014ರಲ್ಲಿ ಹೇಳಿತ್ತು. “2046ರ ಹೊತ್ತಿಗೆ ಇದೆಲ್ಲಾ ಸಾಧ್ಯವಾಗಬಹುದೋ ಏನೋ. ಆದರೆ ಅವತ್ತೂ ಇದಕ್ಕಾಗಿ ಭಾರೀ ಹಣ ಹೂಡಬೇಕಾಗುತ್ತದೆ,” ಎಂದು ಅಕಾಡೆಮಿ ಹೇಳಿತ್ತು. ಆದರೆ ಕೆಲವು ಸಂಸ್ಥೆಗಳು ಮಾತ್ರ, “ಇದು ಸಾಧ್ಯವಿದೆ. ಹಣ ಒಂದು ಸಮಸ್ಯೆಯಲ್ಲ. ಇದನ್ನ ಮಾಡಿಯೇ ತೀರುತ್ತೇವೆ,” ಎಂದು ಹೊರಟಿವೆ.

ಉದ್ಯಮಿ ಎಲೊನ್ ಮಸ್ಕ್ ಗೆ ಸೇರಿದ ‘ಸ್ಪೇಸ್ ಎಕ್ಸ್’ ರೀತಿಯ ಖಾಸಗಿ ಸಂಸ್ಥೆಗಳೂ ಮಂಗಳನಲ್ಲಿಗೆ ಮನುಷ್ಯನನ್ನು ಕಳುಹಿಸುವ ಯೋಜನೆಯತ್ತ ಕಣ್ಣಿಟ್ಟಿವೆ. ಕಳೆದ ವಾರ, ”2024ಕ್ಕೆ ಮೊದಲು ಮಂಗಳನಲ್ಲಿ ಮನುಷ್ಯನನ್ನು ಇಳಿಸಲಿದ್ದೇವೆ,” ಎಂದು ಮಸ್ಕ್ ತಮ್ಮ ಯೋಜನೆ ಬಿಚ್ಚಿಟ್ಟಿದ್ದರು. ಭೂಮಿ ಮೇಲಿನ ಒಣ ಸಂಘರ್ಷಗಳಿಂದ ಬೇಜಾರಾಗಿರುವವರು ಮಂಗಳ ಗ್ರಹದಲ್ಲಿ ಸೆಟಲ್ ಆಗುವ ಕನಸು ಕಾಣಲು ಈ ಬೆಳವಣಿಗೆಗಳು ಪ್ರೇರೇಪಿಸಬಹುದು. ಅದಕ್ಕೂ ಮೊದಲು ರುಚಿ ಇಲ್ಲದ ಕ್ಯಾಬೇಜನ್ನು ನಾಲಿಗೆ ಅರಗಿಸಿಕೊಳ್ಳಬೇಕಾಗುತ್ತದೆ. ಜತೆಗೆ, ವಿಜ್ಞಾನಿಗಳ ತರಕಾರಿ ಬೆಳೆಯುವ ಯೋಜನೆ ಯಶಸ್ವಿಯಾಗುವುದು ಕೂಡ ಮುಖ್ಯವಾಗುತ್ತದೆ.

ಏನೇ ಆಗಲಿ, ಆದಷ್ಟು ಬೇಗ ಮಂಗಳನ ಮೇಲೊಂದು ಮನೆಯ ಮಾಡುವ, ಹೂದೋಟಗಳನ್ನು ನಿರ್ಮಿಸಿಕೊಂಡು ತರಕಾರಿಗಳನ್ನು ಬೆಳೆಯುವ, ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಒಣಭೂಮಿಗೆ ಮನುಷ್ಯ ಬೇಲಿ ಹಾಕಿಕೊಳ್ಳುವ ದಿನಗಳ ದೂರವಿಲ್ಲ, ಬಿಡಿ!

Leave a comment

FOOT PRINT

Top