An unconventional News Portal.

ಉಡುಪಿ ಪಂಕ್ತಿ ಭೇದಕ್ಕೆ 2 ತಿಂಗಳ ಗಡುವು: #ಚಲೋಉಡುಪಿ ಸಮಾರೋಪದಲ್ಲಿ ಜಿಗ್ನೇಶ್ ಮೇವಾನಿ

ಉಡುಪಿ ಪಂಕ್ತಿ ಭೇದಕ್ಕೆ 2 ತಿಂಗಳ ಗಡುವು: #ಚಲೋಉಡುಪಿ ಸಮಾರೋಪದಲ್ಲಿ ಜಿಗ್ನೇಶ್ ಮೇವಾನಿ

ಉಡುಪಿಗೆ ಹರಿದು ಬಂದ ಜನಸಾಗರ, ಸಂಪೂರ್ಣ ನೀಲಿ ಮಯವಾದ ಕಡಲತಡಿಯ ಜಿಲ್ಲಾ ಕೇಂದ್ರ, ಪಂಕ್ತಿ ಭೇದಕ್ಕೆ ಎರಡು ತಿಂಗಳ ಗಡುವು ನೀಡಿದ ಜಿಗ್ನೇಶ್.. ಭೂಮಿ ಹಾಗೂ ಆಹಾರದ ಹಕ್ಕನ್ನು ಪ್ರತಿಪಾದನೆಗೆ ಸಾಕ್ಷಿಯಾದ ಸಾವಿರಾರು ಜನ…ಇದು ಭಾನುವಾರ ಉಡುಪಿ ಜಿಲ್ಲಾ ಕೇಂದ್ರದಲ್ಲಿ ಸಮಾರೋಪಗೊಂಡ ‘ಚಲೋ ಉಡುಪಿ’ ಸಮಾವೇಶದ ಹೈಲೈಟ್ಸ್.

“ಉಡುಪಿ ಮಠದಲ್ಲಿ ನಡೆಯುತ್ತಿರುವ ಪಂಕ್ತಿ ಬೇಧ ನಿಲ್ಲಿಸಲು ನಾವೆಲ್ಲ 2 ತಿಂಗಳ ಗಡುವು ನೀಡೋಣ. ಒಂದೊಮ್ಮೆ ನಿಲ್ಲದಿದ್ದಲ್ಲಿ ನಾವು ಮುತ್ತಿಗೆಯನ್ನು ಹಾಕುತ್ತೇವೆ. ಜೈಲಿಗೆ ಹೋಗುವುದಕ್ಕೂ ಸೈ ಎಂದು,” ‘ಊನಾ ಚಳುವಳಿ’ಯ ನಾಯಕ ಜಿಗ್ನೇಶ್ ಮೇವಾನಿ ಎಚ್ಚರಿಕೆ ನೀಡಿದರು. ಚಲೋ ಉಡುಪಿಯ ಸಮಾವೇಶದ ವೇದಿಕೆಯಿಂದ ಸಾವಿರಾರು ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.

“ಗುಜರಾತ್‌ನಲ್ಲಿ ದಲಿತರು ಸರಕಾರಕ್ಕೆ ಚಾಟಿ ಬೀಸುವಂಥ ಕಾರ್ಯಕ್ರchalo udupiಮ ಮಾಡಿದ್ದಾರೋ, ಅದೇ ರೀತಿಯ ಕಾರ್ಯಕ್ರಮವನ್ನು ಇಲ್ಲಿಯೂ ಆಯೋಜಿಸಿದ್ದಾರೆ. ಗುಜರಾತ್‌ನಲ್ಲಿ ಅಹ್ಮದಾಬಾದ್‌ ಹೇಗೆ ಹಿಂದುತ್ವದ ಪ್ರಯೋಗ ಶಾಲೆಯೋ, ಅದೇ ರೀತಿ ಉಡುಪಿ ಕರ್ನಾಟಕದ ಹಿಂದುತ್ವದ ಪ್ರಯೋಗಶಾಲೆ. ಈ ಸಂಘಪರಿವಾರದ ಹಿಂದುತ್ವ ಪ್ರಯೋಗ ಶಾಲೆಯನ್ನು ನಾವೆಲ್ಲರೂ ನಾಶ ಮಾಡಬೇಕು. ಗೋ ರಕ್ಷಕ ಸಮಿತಿಗಳನ್ನು ಅಂತ್ಯಗೊಳಿಸಬೇಕು,” ಎಂದು ಜಿಗ್ನೇಶ್ ಗುಡುಗಿದರು.

ಸಂಚಿಗೆ ದಲಿತರು ಬಲಿ:

“ಹಿಂದುತ್ವದ ಅಜೆಂಡಾವನ್ನು, ಸಂಚನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಗುಜರಾತಿನಲ್ಲಿ 2012ರ ದಂಗೆಯಲ್ಲಿ ಮುಸ್ಲಿಂ ಸಹೋದರರ ಮೇಲೆ ಹಲ್ಲೆಯಾದಾಗ, ದಲಿತರ ಮೇಲೆ 746 ಮೇಲೆ ಕೇಸ್ ಬಿದ್ದರೆ, ಮೇಲ್ಜಾತಿಯವ ಮೇಲೆ ಬಿದ್ದಿದ್ದು ಕೇವಲ 56 ಪ್ರಕರಣಗಳು ಮಾತ್ರ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು,” ಎಂದರು ಜಿಗ್ನೇಶ್.

“ಇವತ್ತು ಗುಜರಾತ್ ಮಾಡೆಲ್ ಬಗ್ಗೆ ದೇಶದೆಲ್ಲೆಡೆ ಚರ್ಚೆ ನಡೆಯುತ್ತಿದೆ. ಆದರೆ ವಾಸ್ತವ ಬೇರೆಯೇ ಇದೆ. ಇಂದಿಗೂ 119 ಹಳ್ಳಿಗಳ ದಲಿತರು ಪೊಲೀಸ್ ರಕ್ಷಣೆಯಲ್ಲಿ ಜೀವನ ಸವೆಸುತ್ತಿದ್ದಾರೆ. 74 ದಲಿತ ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆ. ಇವರನ್ನು ಭೇಟಿ ಮಾಡಲಿಕ್ಕೆ ಪ್ರಧಾನಿ ನರೇಂದ್ರ ಮೋದಿ ಹೋಗಲಿಲ್ಲ. ದಲಿತ ಕುಟುಂಬಗಳು 55 ಹಳ್ಳಿಗಳಲ್ಲಿ ಇವತ್ತಿಗೂ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿವೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಮೋದಿಯ ಘೋಷಣೆ ದಲಿತರ ವಿನಾಶಕ್ಕೆ ಮಾಡಿದ ಘೋಷಣೆಯಾಗಿದೆ,” ಎಂದು ಮಾಹಿತಿ ನೀಡಿದರು.

ಊನಾ ಮಾದರಿ: 

“ಊನಾದಲ್ಲಿ ಸತ್ತ ದನದ ಕಳೇಬರ ವಿಲೇವಾರಿ ಮಾಡಿದಾಗ ದಲಿತರ ಮೇಲೆ ಹಲ್ಲೆಯಾಯ್ತು. ಅದಾದ ನಂತರ ಹುಟ್ಟಿಕೊಂಡ ‘ಊನ ಚಳವಳಿ’ಯ ಘೋಷಣೆಯೇ ‘ಅಸ್ಮಿತೆ ಮತ್ತು ಅಸ್ತಿತ್ವದ ಆಂದೋಲನ’. ಈ ಹೋರಾಟವನ್ನು ನಾವು ಭೂ ರಹಿತರ ಪರವಾಗಿಯೂ ಮುನ್ನಡೆಸುತ್ತಿದ್ದೇವೆ. ಈಗಾಗಲೇ ನಾವು ನಡೆಸಿದ ಸಮಾವೇಶದಲ್ಲಿ 1ಲಕ್ಷಕ್ಕೂ ಅಧಿಕ ಜನ, ಇನ್ನು ಮುಂದೆ ದನದ ಕಳೇಬರ ವಿಲೇವಾರಿ ಮಾಡಲ್ಲ, ಮಲ ಎತ್ತಲ್ಲ, ಕೊಳೆಚೆ ಸ್ವಚ್ಛತೆಗೆ ಇಳಿಯಲ್ಲ ಎಂದು ಶಪಥ ಮಾಡಿದ್ದಾರೆ. ಈ ಹೋರಾಟ ನೋಡಿಯೇ ಪ್ರಧಾನಿ ಮೋದಿ ‘ಹೊಡೆಯುವುದಾದರೆ ನನಗೆ ಹೊಡೆಯಿರಿ; ದಲಿತರಿಗಲ್ಲ’ ಎಂಬ ಹೇಳಿಕೆಯನ್ನು ಕೊಟ್ಟರು. ಈ ಹೋರಾಟ ನಡೆದ ಮೇಲೆ ಹಲವರಿಗೆ ಬೆದರಿಕೆಗಳನ್ನೂ ಹಾಕಿದ್ದರು. ಇದು ಕೇವಲ ನನ್ನ ಆಂದೋಲನವಲ್ಲ. ಇದು ಇಂದು ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಈ ದಲಿತರ ಆಂದೋಲನ 3 ತಿಂಗಳ ನಂತರವೂ ತನ್ನ ಗತಿಯನ್ನು ಕಾಯ್ದುಕೊಂಡ ಪರಿಣಾಮ 150ಸೆಂಟ್ಸ್ ಭೂಮಿಯನ್ನು ಪ್ರತಿ ಭೂರಹಿತ ದಲಿತರಿಗೆ ಕೊಡುವ ಕೆಲಸವಾಗುತ್ತಿದೆ,” ಎಂದ ಜಿಗ್ನೇಶ್ ಚಳವಳಿಯ ಮಹತ್ವ ತಿಳಿಸಿದರು.

ಭೂ ಒಡೆಯರಲ್ಲ:

“ಗುಜರಾತ್ ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ದಲಿತರಿಗೆ ಭೂಮಿಯನ್ನು ಕೊಡಲಿಲ್ಲ. ಕರ್ನಾಟಕ ಸರ್ಕಾರವೂ ಕೂಡ ದಲಿತರಿಗೆ ಭೂಮಿಯನ್ನು ಕೊಡಲು ಹಿಂದೇಟು ಹಾಕಿದರೆ ನಿಮ್ಮ ವಿರುದ್ದವೂ ನಾವು ಸೆಟೆದು ನಿಲ್ಲುತ್ತೇವೆ. ಕರ್ನಾಟಕ ಸರಕಾರ ದಲಿತರಿಗೆ ಎಷ್ಟು ಜಮೀನು ನೀಡಿದೆ. ವಿವಿಧ ಕಂಪೆನಿಗಳಿಗೆ ಎಷ್ಟು ಕೊಟ್ಟಿದೆ ಎಂದು ಶ್ವೇತ ಪತ್ರ ಹೊರಡಿಸಬೇಕು. ನಾವು ಸಾವಿತ್ರಿ ಫುಲೆಗೆ ಜೈಕಾರ ಹಾಕುತ್ತೀವಿ. ಯಾವ ದಲಿತರಿಗೆ ಜಮೀನನ್ನು ಕೊಡುತ್ತಾರೊ ಅದು ಮಹಿಳೆಯರ ಹೆಸರಿಗೆ ಆಗಬೇಕು. ಅದಾನಿ ಅಂಬಾನಿಗೆ ಭೂಮಿ ಕೊಡಲು ಸಾಧ್ಯವಾಗುವುದಾದರೆ ದಲಿತರಿಗೆ ಯಾಕೆ ಕೊಡಲಾಗುತ್ತಿಲ್ಲ,” ಎಂದು ಪ್ರಶ್ನಿಸಿದರು.

ವೇಮುಲಾ ಪ್ರಾಣಾರ್ಪಣೆ:

“ರೋಹಿತ್ ವೇಮುಲಾ ಇಲ್ಲಿಯ ಯುವಕರಲ್ಲಿ ಜೀವಂತವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇತ್ತೀಚೆಗೆ ಬಂದ ವರದಿಯಲ್ಲಿ ರೋಹಿತ್ ದಲಿತ ಅಲ್ಲ ಎಂದು ಹೇಳುತ್ತಿದ್ದಾರೆ. ರೋಹಿತ್ ತಾಯಿಯನ್ನುಸಂಶಯದಿಂದ ಕಾಣುತ್ತಿದ್ದಾರೆ. ಉಚ್ಚಂಗಿ ಪ್ರಸಾದ್ ವಿಷಯದಲ್ಲೂ ಇದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದರ ವಿರುದ್ದವೂ ನಾವು ಹೋರಾಡಬೇಕಿದೆ,” ಎಂದು ಜಿಗ್ನೇಶ್ ನುಡಿದರು.

ಅಟ್ರಾಸಿಟಿ ಕಾನೂನು ಜಾರಿಯಲ್ಲಿದ್ದರೂ ಕೂಡ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಲೇವಾರಿಗೆ ವಿಶೇಷವಾದ ಕೋರ್ಟ್ ಇಲ್ಲ. ಇದೀಗ ಹೋರಾಟದ ಪರಿಣಾಮದಿಂದ ವಿಶೇಷ ಕೋರ್ಟ್ ಹಲವು ಕಡೆ ಆರಂಭವಾಗುತ್ತಿದೆ ಎಂದು ತಿಳಿಸಿದರು.

ಪೇಜಾವರ ಮೆದುಳು ಸ್ವಚ್ಚ ಮಾಡಿ:

chalo udupiಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಬಲಪಂಥೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ದ ಕಿಡಿಕಾರಿದರು. “ಆತನೊಬ್ಬ ದೊಡ್ಡ ಅವಿವೇಕಿ. ಅವನು ನಿಜವಾಗಿ ಶುದ್ದ ಮಾಡುವುದಿದ್ದರೆ ಪೇಜಾವರ ಸ್ವಾಮಿಯ ಮೆದುಳು ಕ್ಲೀನ್ ಮಾಡಲಿ. ಆಗ ಉಡುಪಿಯೇ ಕ್ಲೀನ್ ಆಗುತ್ತದೆ. ಅಂಥದೊಂದು ಮಲಿನ ಮನಸ್ಥಿತಿ ಇಟ್ಟುಕೊಂಡ ಸ್ವಾಮಿಯಿಂದ ಉಡುಪಿ ಮಲಿನವಾಗಿದೆ,” ಮಟ್ಟು ಆಕ್ರೋಶ ವ್ಯಕ್ತಪಡಿಸಿದರು.

“ವಿವೇಕಾನಂದ, ನಾರಾಯಣ ಗುರು, ಬುದ್ದ ಹೇಳಿದ ಧರ್ಮದ ಬಗ್ಗೆ ನಮ್ಮ ವಿರೋಧವಿಲ್ಲ. ಭಾಗವತ್, ಕಲ್ಲಡ್ಕ ಪ್ರಭಾಕರ್ ಭಟ್ ಹೇಳುವ ಧರ್ಮದ ವಿರುದ್ದ ಮಾತ್ರವೇ ನಮ್ಮ ಹೋರಾಟ. ಇಂತಹ ಧರ್ಮ ನಾವು ಯಾವತ್ತೂ ಒಪ್ಪಿಕೊಳ್ಲುವುದಿಲ್ಲ. ಕರಾವಳಿಗರು ಬುದ್ದಿವಂತರು ಎಂದು ಎಲ್ಲ ಕಡೆಯೂ ಹೇಳುತ್ತಿದ್ದರು.  ಆದರೆ ಇತ್ತೀಚಿನ ದಿನಗಳಲ್ಲಿ ನಾವು ಕರಾವಳಿಯವರು ಎಂದರೆ ನೀವು ಕೋಮುವಾದಿಗಳಾ?  ನೀವು ತಾಲಿಬಾನರಾ? ಎಂದು ಕೇಳುತ್ತಿದ್ದಾರೆ. ನಮ್ಮದು ಬಹು ಸಂಸ್ಕೃತಿಯ ತೊಟ್ಟಿಲು. ಮಂಗಳೂರು ಮಲ್ಲಿಗೆ ಇಂದು ವಿಶ್ವವಿಖ್ಯಾತಿ ಹೊಂದಿದೆ. ಇದನ್ನು ಬೆಳೆಯುವವರು, ಕ್ರೈಸ್ತರು, ಮಾರುವವರು ಸಾಬರು, ಕೊಳ್ಳುವವರು ಹಿಂದೂಗಳು. ಬಹುಸಂಸ್ಕೃತಿಯ ತೊಟ್ಟಿಲು ಕೂಡಿ ಕಟ್ಟಿದ್ದನ್ನು ಒಡೆದು ಮುರಿದು ಹಾಕಿದರು,” ಎಂದು ದಿನೇಶ್ ಅಮೀನ್ ವಿಷಾದ ವ್ಯಕ್ತಪಡಿಸಿದರು.

ಮನುವಾದಕ್ಕೆ ಮರಣಶಾಸನ:

“ಆಹಾರ ನಮ್ಮ ಹಕ್ಕು, ಭೂಮಿ ನಮ್ಮ ಹಕ್ಕು. ನೀವು ಅಧಿಕಾರವನ್ನು ನಮಗೆ ಬಿಟ್ಟು ಹೋಗಿ ಎಂದು ಹೇಳಲು ಬಂದಿದ್ದೇವೆ. ಉಡುಪಿಯಲ್ಲಿ ಇರುವ ಮನುವಾದಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ. ಮನುವಾದಕ್ಕೆ ಮರಣಶಾಸನ ಬರೆಯಲು ನಾವು ಬಂದಿದ್ದೇವೆ,” ಎಂದು ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್ ದ್ವಾರಕಾನಾಥ್ ಹೇಳಿದರು.

“ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ದಲಿತ ವಿರೋಧಿಗಳೇ ಆಗಿದ್ದಾರೆ. ಬಿಜೆಪಿ ನೇರವಾಗಿ ದಲಿತ ವಿರೋಧಿಯಾಗಿದ್ದರೆ, ಕಾಂಗ್ರೆಸ್ ಪರೋಕ್ಷವಾಗಿದೆ,” ಎಂದರು.

ಮುಂದೆ ಕೇರಿ ಚಲೋ:

“ನಮಗೆ ಈ ಸಮಾವೇಶ ಮುಖ್ಯವಾದ ಪಾಠ ಕಲಿಸಿಕೊಟ್ಟಿದೆ. ಆ ಪಾಠವನ್ನು ನಮ್ಮ ತಲೆಯಲ್ಲಿ ಇಟ್ಟುಕೊಳ್ಳಬೇಕಿದೆ. ಜಿಗ್ನೇಶ್ ದಲಿತರ ಹೋರಾಟವನ್ನು ಭಾವನಾತ್ಮಕ ಅಂಶಗಳ ಜತೆಗೆ ಭೂಮಿ ಹಕ್ಕಿನಂತರ ಸ್ವಾಭಿಮಾನದ ವಿಚಾರವನ್ನೂ ಹೋರಾಟಜತೆ ಬೆಸೆದಿದ್ದಾರೆ. ಹಾಗಾಗಿ ಅಲ್ಲಿ (ಗುಜರಾತ್) ದಲಿತರು ಸಿಡಿಗೆದ್ದಿದ್ದಾರೆ. ಈ ಹೋರಾಟವನ್ನು ಗೆಲ್ಲಬೇಕಾದರೆ ನಾವೂ ಜನರ ಬೇಡಿಕೆಗಳನ್ನು ಹೋರಾಟಗಳ ಜತೆ ಬೆಸೆಯಬೇಕು. ಉಡುಪಿ ಚಲೋ ಮಾದರಿಯಲ್ಲಿ ಕೇರಿಗಳ ಚಲೋ ನಡೆಸಬೇಕು. ಆಗ ಎಷ್ಟು ಜನ ಸೇರಲಿದ್ದಾರೆ ನೋಡುತ್ತಿರಿ,” ಎಂದು ಸಾಮಾಜಿಕ ಹೋರಾಟಗಾರ ನೂರ್ ಶ್ರೀಧರ್ ಅಭಿಪ್ರಾಯಪಟ್ಟರು.

ದಲಿತ, ದಮನಿತರ ಸ್ವಾಭಿಮಾನಿ ಜಾಥಾವನ್ನು ದಲಿತ ಸಂಘರ್ಷ ಸಮಿತಿಯ ನಾಯಕ ಲಕ್ಷ್ಮೀನಾರಾಯಣ ನಾಗಾವರ ಉದ್ಘಾಟಿಸಿದರು. ನಂತರ ಸಮಾವೇಶ ಉದ್ದೇಶಿಸಿ ಮಾತಾಡಿದ ಅವರು, “ಉಡುಪಿ ಕೋಮುವಾದದ ನಾಯಕ ಪೇಜಾವರ ಸ್ವಾಮಿಯ ನೆಲ ಮಾತ್ರವಲ್ಲ, ಸೌಹಾರ್ದದ ಮುಖಂಡರಾಗಿದ್ದ ಕುದ್ಮುಲ್ ರಂಗರಾವ್ ಅವರ ನೆಲವೂ ಆಗಿದೆ. ಇದೇ ನೆಲದಲ್ಲಿ ‘ಉಡುಪಿ ಚಲೋ’ ಹಮ್ಮಿಕೊಂಡಿರುವುದು ಐತಿಹಾಸಿಕ. ಪೇಜಾವರ ಸ್ವಾಮಿ ದಲಿತರ ಮನೆಗಳಿಗೆ, ಕಾಲನಿಗಳಿಗೆ ಹೋಗುವುದರ ಬದಲು ಮೇಲ್ವರ್ಗದವರ ಮನೆಗಳಿಗೆ ಹೋಗಲಿ.. ದಲಿತರನ್ನು ಮನುಷ್ಯರಂತೆ ಕಾಣುವಂತೆ ಅವರಿಗೆ ಹೇಳಲಿ,” ಎಂದರು.

“ಗೋವಿನ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡುವವರನ್ನು ಗೋ ರಕ್ಷಕರೆಂದು ಕರೆಯಬೇಡಿ ಅವರನ್ನು ಭಯೋತ್ಪಾದಕರು ಎಂದು ಕರೆಯಿರಿ,” ಎಂದು ಚಲೋ ಉಡುಪಿ ಜಾಥಾದ ಸಂಘಟಕರಲ್ಲಿ ಒಬ್ಬರಾದ ಭಾಸ್ಕರ್ ಪ್ರಸಾದ್ ಹೇಳಿದರು.

“ಜಾತಿ, ಧರ್ಮ ದೇವರನ್ನು ಮುಂದಿಟ್ಟಡುಕೊಂಡು ಈ ಮನುವಾದಿಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ದ ಧ್ವನಿ ಎತ್ತುವುದು ನಮ್ಮೆಲ್ಲರ ಕರ್ತವ್ಯ. ಕ್ರೈಸ್ತರ ಚರ್ಚುಗಳಲ್ಲಿ ದಾಂಧಲೆ ಮಾಡುವುದೇ ಇವರಿಗೆ ದೇಶಭಕ್ತಿಯಾದರೆ ನಮಗೆ ಆ ದೇಶ ಭಕ್ತಿ ಬೇಡ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಮನುವಾದಿ ಮನಸ್ಥಿತಿಯನ್ನು ನಾವು ದೂರ ಇಡಬೇಕಾಗುತ್ತದೆ. ದಲಿತರನ್ನು ಸುಡುವುದೇ ನಿಮಗೆ ಧರ್ಮವಾದರೆ ಆ ಧರ್ಮಕ್ಕೆ ಬೆಂಕಿ ಬೀಳಲಿ. ಮಹಿಳೆಯರನ್ನು ದ್ವೇಷಿಸುವುದೇ ನಿಮಗೆ ಧರ್ಮವಾದರೆ, ಆ ಧರ್ಮಕ್ಕೆ ಧಿಕ್ಕಾರ.  ದನದ ಮಾಂಸ ತಿಂದರು ಎಂಬ ಕಾರಣಕ್ಕೆ ಮಹಿಳೆಯರನ್ನು ಅತ್ಯಾಚಾರ ಮಾಡುತ್ತಾರೆ, ಜನರ ತಿನ್ನುವ ಹಕ್ಕನ್ನು ಕಸಿದುಕೊಳ್ಳುವ ರಾಜಕಾರಣದ ವಿರುದ್ದ ಈ ಸಮಾವೇಶ ನಡೆಯುತ್ತಿದೆ,” ಎಂದು ಭಾಸ್ಕರ್ ಪ್ರಸಾದ್ ತಿಳಿಸಿದರು.

160ಕ್ಕೂ ಹೆಚ್ಚು ಸಂಘಟನೆಗಳು ತಮ್ಮ ಲಾಂಛನ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ನೀಲಿ ಬಾವುಟಗಳೊಂದಿಗೆ ‘ಚಲೋ ಉಡುಪಿ’ ಚಳವಳಿಯನ್ನು ನಡೆಸಿದ್ದು ವಿಶೇಷವಾಗಿತ್ತು.

chalo udupiಜಯಪುರದಲ್ಲಿ ಸಂಘಪರಿವಾರದ ಗೂಂಡಾಗಳ ಹಲ್ಲೆಗೊಳಗಾದ ದಲಿತ ಕುಟುಂಬದ ಬಾಲರಾಜ್ ‘ಚಲೋ ಉಡುಪಿ’ಯ ನೀಲಿ ಪತಾಕೆ ಹಾರಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ‘ಜೈ ಭೀಮ್’ ಘೋಷಣೆಯೊಂದಿಗೆ, ನೀಲಿ ಪತಾಕೆಗಳಡಿಯಲ್ಲಿ ಮಹಿಳೆಯರು, ಯುವಕರು, ಚಿಂತಕರು, ಲೇಖಕರು, ಸಾಹಿತಿಗಳನ್ನೊಳಗೊಂಡ ಮೆರವಣಿಗೆಯು ಬೀಡಿನಗುಡ್ಡೆ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ಬಂದು ಸೇರಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್, ಫಾ. ವಿಲಿಯಂ ಮಾರ್ಟಿಸ್, ಕೋಮು ಸೌಹಾರ್ದ ವೇದಿಕೆಯ ಮುಖಂಡ ಕೆ.ಎಲ್.ಅಶೋಕ್, ಚಿಂತಕ ಜಿ.ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a comment

FOOT PRINT

Top