An unconventional News Portal.

‘ಆಪರೇಷನ್ ಜಿಂಜರ್’: 2011ರಲ್ಲೇ ಗಡಿಯಲ್ಲಿ ನಡೆದಿದ್ದವು ಆ 2 ಭೀಕರ ಸರ್ಜಿಕಲ್ ಸ್ಟ್ರೈಕ್ಸ್!

‘ಆಪರೇಷನ್ ಜಿಂಜರ್’: 2011ರಲ್ಲೇ ಗಡಿಯಲ್ಲಿ ನಡೆದಿದ್ದವು ಆ 2 ಭೀಕರ ಸರ್ಜಿಕಲ್ ಸ್ಟ್ರೈಕ್ಸ್!

‘ಸರ್ಜಿಲ್ ಸ್ಟ್ರೈಕ್’ ಎಂಬ ಪದ ಕಳೆದ ಕೆಲವು ದಿನಗಳಿಂದ ಸುದ್ದಿಕೇಂದ್ರದಲ್ಲಿದೆ. ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ರಾತ್ರೋರಾತ್ರಿ ದಾಳಿ ನಡೆಸಿತು ಎಂಬ ಸುದ್ದಿ ಪರ- ವಿರೋಧದ ಚರ್ಚೆಯನ್ನು ಹುಟ್ಟು ಹಾಕಿದೆ. ಹೀಗಿರುವಾಗಲೇ, ಐದು ವರ್ಷಗಳ ಹಿಂದೆ, ಯುಪಿಎ-2 ಆಡಳಿತಾವಧಿಯಲ್ಲಿ ಭಾರತ- ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ಎರದು ಭೀಕರ ‘ನಿರ್ದಿಷ್ಟ ದಾಳಿ’ಗಳು ನಡೆದಿದ್ದವು ಎಂಬ ವಿಚಾರವನ್ನು ‘ದಿ ಹಿಂದೂ’ ಪತ್ರಿಕೆ ಅ. 9ರ ತನ್ನ ವಿಶೇಷ ಲೇಖನದಲ್ಲಿ ಬಯಲಿಗೆಳೆದಿದೆ. ಅದನ್ನು ಪತ್ರಕರ್ತ ಕುಮಾರ್ ಬುರಡಿಕಟ್ಟಿ ಕನ್ನಡಕ್ಕೆ ತಂದಿದ್ದಾರೆ.  


ವರರಿ ಜತೆಯಲ್ಲಿ 'ದಿ ಹಿಂದೂ' ಪ್ರಕಟಿಸಿದ್ದ ದಾಖಲೆಗಳು.

ವರರಿ ಜತೆಯಲ್ಲಿ ‘ದಿ ಹಿಂದೂ’ ಪ್ರಕಟಿಸಿದ್ದ ದಾಖಲೆಗಳು.

2011ರ ಬೇಸಿಗೆಯ ಕೆಲವು ವಾರಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಗಡಿಯಲ್ಲಿ ಎರಡು ಭೀಕರ ಸರ್ಜಿಕಲ್ ದಾಳಿಗಳನ್ನು ನಡೆಸಿದ್ದವು. ಇವುಗಳಲ್ಲಿ ಕನಿಷ್ಠ 13 ಸೈನಿಕರು ತಮ್ಮ ಜೀವ ಕಳೆದುಕೊಂಡಿದ್ದರಲ್ಲದೇ ಅವರಲ್ಲಿ ಆರು ಸೈನಿಕರ ಶಿರಶ್ಚೇದನ ಮಾಡಲಾಗಿತ್ತು. ಅವುಗಳಲ್ಲಿ ಐದು ತಲೆಗಳನ್ನು ಬಹುಮಾನಗಳಂತೆ ಸ್ವದೇಶಕ್ಕೆ ಒಯ್ಯಲಾಗಿತ್ತು – ಎರಡು ತಲೆಗಳನ್ನು ಪಾಕಿಸ್ತಾನಕ್ಕೆ, ಮೂರು ತಲೆಗಳನ್ನು ಭಾರತಕ್ಕೆ.

“ದಿ ಹಿಂದೂ” ಪತ್ರಿಕೆಯು ಸಂಗ್ರಹಿಸಿದ ಅಧಿಕೃತ ದಾಖಲೆಗಳು, ವೀಡಿಯೋ ಮತ್ತು ಫೋಟೋಗ್ರಾಫ್ ಸಾಕ್ಷಾಧಾರಗಳು ಈ ಎರಡೂ ಕ್ರಾಸ್‍-ಬಾರ್ಡರ್‍ ದಾಳಿಗಳನ್ನು ಮೈನವಿರೇಳಿಸುವಂತೆ ವರ್ಣಿಸುತ್ತವೆಯಲ್ಲದೇ ಮುಯ್ಯಿಗೆ ಮುಯ್ಯಿ ಎಂಬಂತಿದ್ದ ಈ ದಾಳಿಗಳ ಕ್ರೌರ್ಯಗಳು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಕ್ಕಿಂತ ಬಹಳಷ್ಟು ಭೀಕರವಾಗಿದ್ದವು ಎಂಬುದನ್ನೂ ಕಟ್ಟಿಕೊಡುತ್ತವೆ.

ಕುಪ್ವಾರದಲ್ಲಿ ನೆಲೆಗೊಂಡಿದ್ದ 28 ಡಿವಿಜನ್ ಕಮ್ಯಾಂಡರ್ ಆಗಿ ಈ ಕಾರ್ಯಾಚರಣೆಯನ್ನು ಯೋಜಿಸಿ ಕಾರ್ಯಗತ ಗೊಳಿಸಿದ ಮೇಜರ್ ಜನರಲ್ (ನಿವೃತ್ರ) ಎಸ್.ಕೆ. ಚಕ್ರಯೊರ್ತಿ ಅವರು ಈ ದಾಳಿ ನಡೆದಿದ್ದನ್ನು “ದಿ ಹಿಂದೂ”ಗೆ ಖಚಿತಪಡಿಸಿದರು. ಆದರೆ, ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಕ್ಕೆ ಅವರು ನಿರಾಕರಿಸಿದರು.

2011ರ ಜುಲೈ 30ರಂದು ಮಧ್ಯಾಹ್ನ ಪಾಕಿಸ್ತಾನದ ದಾಳಿಕಾರರು ಕುಪ್ವಾರ ಜಿಲ್ಲೆಯ ದೂರದ ಗುಗಲ್ದಾರ್ ಇಳಿಜಾರು ಪ್ರದೇಶದಲ್ಲಿರುವ ಭಾರತದ ಸೇನಾ ಶಿಬಿರದ ಮೇಲೆ ದಾಳಿ ಮಾಡುವ ಮೂಲಕ ರಜಪೂತ್ ಮತ್ತು ಕುಮಾಂವ್ ರೆಜಿಮೆಂಟುಗಳ ಆರು ಸೈನಿಕರಿಗೆ ಹಠಾತ್ ಅಚ್ಚರಿ ಮೂಡಿಸಿಬಿಟ್ಟರು. ಪಾಕಿಸ್ತಾನ ಗಡಿ ಕಾರ್ಯಪಡೆ (Pakistani Border Action Team – BAT) ಈ ದಾಳಿಯಿಟ್ಟಾಗ ಭಾರತದ 19 ರಜಪೂತ್ ಬೆಟಾಲಿಯನ್ ಪಡೆ ನಿರ್ಗಮಿಸುತ್ತಿತ್ತು ಮತ್ತು ಅದರ ಜಾಗವನ್ನು 20 ಕುಮಾಂವ್ ಬೆಟಾಲಿಯನ್ ಪಡೆಯು ಆಕ್ರಮಿಸಿಕೊಂಡು ಕಾರ್ಯಪ್ರವೃತ್ತವಾಗುವುದರಲ್ಲಿತ್ತು. ಪಾಕಿಸ್ತಾನದ ದಾಳಿಕಾರ ಪಡೆಯು 20 ಕುಮಾಂವ್ ರೆಜಿಮೆಂಟಿನ ಹವಿಲ್ದಾರ್ ಜೈಪಾಲ್ ಸಿಂಗ್ ಮತ್ತು ಲಾನ್ಸ್ ನಾಯ್ಕ್ ದೇವೆಂದರ್ ಸಿಂಗ್ ಎಂಬ ಇಬ್ಬರು ಸೈನಿಕರ ಶಿರಶ್ಛೇಧ ಮಾಡಿ ಅವರ ತಲೆಗಳನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಯಿತು. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 19 ರಜಪೂತ್ ರೆಜಿಮೆಂಟಿನ ಸೈನಿಕನೊಬ್ಬ ನಂತರ ಆಸ್ಪತ್ರೆಯಲ್ಲಿ ಅಸುನೀಗಿದ.

ಶತ್ರು ಸ್ಥಳಾನ್ವೇಷಣ ಕಾರ್ಯಾಚರಣೆ

ಪಾಕಿಸ್ತಾನದ ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿ ಭಾರತೀಯ ಸೇನೆ ಆಪರೇಷನ್ ಜಿಂಜರ್ (Operation Ginger) ಎಂಬ ಸೈನಿಕ ಕಾರ್ಯಾಚರಣೆಯನ್ನು ಯೋಜಿಸಿತು. ಮುಂದೆ ಅದು ಭಾರತೀಯ ಸೈನ್ಯ ತನ್ನ ಇತ್ತೀಚಿನ ಚರಿತ್ರೆಯಲ್ಲಿ ನಡೆಸಿದ ಅತ್ಯಂತ ಭೀಕರ ಕ್ರಾಸ್‍-ಬಾರ್ಡರ್‍ ದಾಳಿಯಾಯಿತು.

ಈ ಪ್ರತಿಕಾರ ದಾಳಿಯನ್ನು ನಡೆಸುವ ಮುನ್ನ ದಾಳಿಯ ಸಂಭವನೀಯ ಗುರಿಗಳನ್ನು ಗುರುತಿಸಿ ನಿರ್ಧರಿಸುವುದಕ್ಕೆ ಭಾರತೀಯ ಸೇನೆ ಕನಿಷ್ಠ ಏಳು ಬಾರಿ ಪೂರ್ವಭಾವಿಯಾಗಿ ಶತ್ರುವಿನ ಸ್ಥಳಾನ್ವೇಷಣಾ ಕಾರ್ಯಾಚರಣೆಯನ್ನು ನಡೆಸಿತ್ತು. ಇವುಗಳಲ್ಲಿ ಖುದ್ದಾಗಿ ಒಳನುಸುಳಿ ಶತ್ರುಶಿಬಿರಗಳನ್ನು ಗೌಪ್ಯವಾಗಿ ವೀಕ್ಷಣೆ ಮಾಡುವುದು ಹಾಗೂ ಮಾನವರಹಿತ ವಾಯು ವಾಹನಗಳ (UAV) ಮೂಲಕ ವೀಕ್ಷಿಸುವುದೂ ಸೇರಿದ್ದವು.

ಗಡಿಯಲ್ಲಿ ಭಾರತೀಯ ಸೈನಿಕರು. (ಸಾಂದರ್ಭಿಕ ಚಿತ್ರ- ಇಂಡಿಯನ್ ಎಕ್ಸ್ ಪ್ರೆಸ್)

ಗಡಿಯಲ್ಲಿ ಭಾರತೀಯ ಸೈನಿಕರು. (ಸಾಂದರ್ಭಿಕ ಚಿತ್ರ- ಇಂಡಿಯನ್ ಎಕ್ಸ್ ಪ್ರೆಸ್)

ಪರಿಣಾಮವಾಗಿ, ಮೂರು ಪಾಕಿಸ್ತಾನಿ ಸೇನಾ ಶಿಬಿರಗಳು ಸುಲಭ ತುತ್ತುಗಳಾಗಬಲ್ಲವು ಎಂದು ನಿರ್ಧರಿಸಲಾಯಿತು. ಅವುಗಳೆಂದರೆ ಒಂದು ಪೊಲೀಸ್ ಚೌಕಿ, ಜೋರ್, ಹಿಫಾಝಾತ್ ಬಳಿಯ ನೇನಾಶಿಬಿರ ಮತ್ತು ಲಾಷ್ದತ್ ವಿಶ್ರಾಂತಿ ನೆಲೆ. ಪೊಲೀಸ್ ಚೌಕಿಯ ಮೇಲೆ ಎಗರಿ ಹಠಾತ್ ದಾಳಿ ಮಾಡುವ ಮೂಲಕ ಶತ್ರು ಪಡೆಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ಸಾವುನೋವುಗಳನ್ನು ಉಂಟುಮಾಡುವುದು ಕಾರ್ಯಾಚರಣೆಯ ಉದ್ದೇಶವಾಯಿತು.

“ದಿ ಹಿಂದೂ” ಪತ್ರಿಕೆಗೆ ಲಭ್ಯವಾಗಿರುವ ಗೌಪ್ಯ ವರದಿಯ ಪ್ರಕಾರ, ಗುಗಲ್ದಾರ್ ಶಿರಶ್ಛೇದ ದಾಳಿಯ ನಂತರ ಪ್ರತಿಕಾರ ತೀರಿಸುವುದಕ್ಕಾಗಿ ಹಠಾತ್ ದಾಳಿಗಾಗಿ, ಧ್ವಂಸ ದಾಳಿಗಾಗಿ, ಸರ್ಜಿಕಲ್ ದಾಳಿಗಾಗಿ ಮತ್ತು ಕಣ್ಗಾವಲಿಗಾಗಿ ಬೇರೆ ಬೇರೆ ತಂಡಗಳನ್ನು ರಚಿಸಲಾಯಿತು.

ಭಾರತೀಯ ಸೈನಿಕರ ಶಿರಚ್ಚೇದ ನಡೆದ ಕೆಲವು ದಿನಗಳ ನಂತರ, ಪಾಕಿಸ್ತಾನಿ ಉಗ್ರನೊಬ್ಬ ಕಾಶ್ಮೀರದೊಳಗೆ ನುಸುಳುವುದಕ್ಕೆ ಪ್ರಯತ್ನಿಸುತ್ತಿದ್ದಾಗ ಆತನೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಆತನನ್ನು ಕೊಂದುಹಾಕಲಾಯಿತು. ಆತನ ಕಳೇಬರವನ್ನು ಪರೀಕ್ಷಿಸಿದ ಭಾರತೀಯ ಸೈನ್ಯಕ್ಕೆ ಒಂದು ವೀಡಿಯೋ ತುಣುಕು ಸಿಕ್ಕಿತು. ಅದರಲ್ಲಿ ಹವಿಲ್ದಾರ್ ಜೈಪಾಲ್ ಸಿಂಗ್ ಮತ್ತು ಲಾನ್ಸ್ ನಾಯ್ಕ್ ದೇವೆಂದರ್ ಸಿಂಗ್ ಅವರ ತಲೆಯ ಸುತ್ತ ಪಾಕಿಸ್ತಾನಿಗಳು ದಿಣ್ಣೆಯ ಮೇಲೆ ನಿಂತಿರುವ ದೃಶ್ಯಗಳಿದ್ದವು. “ದಿ ಹಿಂದೂ” ಪತ್ರಿಕೆಯ ಬಳಿ ಈ ವೀಡಿಯೋ ತುಣುಕಿನ ಪ್ರತಿ ಇದೆ.

ಎರಡು ತಿಂಗಳುಗಳ ಕಾಲ ಶತ್ರುಪಡೆಯ ಶಿಬಿರಗಳ ಚಲನವಲನಗಳ ಅನ್ವೇಷಣಾ ಕಾರ್ಯಾಚರಣೆ ಮಾಡಿದ ನಂತರ ಭಾರತೀಯ ಸೇನೆ ‘ಆಪರೇಷನ್ ಜಿಂಜರ್’ ಎಂಬ ಹೆಸರಿನ ಅಂತಿಮ ಕಾರ್ಯಾಚರಣೆಯನ್ನು ಆಗಸ್ಟ್ 30ರ ಮಂಗಳವಾರ ಮಾಡಿತು. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬನ ಪ್ರಕಾರ: “ನಾವು ಮಂಗಳವಾರವೇ ಕಾರ್ಯಾಚರಣೆ ನಡೆಸುವುದಕ್ಕೆ ನಿರ್ಧರಿಸಿದೆವು. ಏಕೆಂದರೆ, 1999ರ ಕಾರ್ಗಿಲ್ ಯುದ್ಧವನ್ನೂ ಒಳಗೊಂಡಂತೆ ನಾವು ಹಿಂದೆ ನಡೆಸಿದ ಎಲ್ಲಾ ಕಾರ್ಯಾಚರಣೆಗಳಲ್ಲೂ ಮಂಗಳವಾರದ ದಿನ ಜಯ ಸಾಧಿಸಿದ್ದೆವು. ಈದ್ ಹಿಂದಿನ ದಿನವನ್ನೇ ನಾವು ಉದ್ದೇಶಪೂರ್ವಕವಾಗಿ ದಾಳಿಗಾಗಿ ಆಯ್ಕೆ ಮಾಡಿಕೊಂಡಿದ್ದೆವು. ಏಕೆಂದರೆ, ಆ ಸಮಯದಲ್ಲಿ ಪಾಕಿಸ್ತಾನಿಗಳು ನಮ್ಮಿಂದ ಪ್ರತಿಕಾರ ದಾಳಿಯನ್ನು ನಿರೀಕ್ಷಿಸುವುದು ಕಡಿಮೆ,” ಎಂದು ಹೇಳಿದರು.

ಈ ದಾಳಿಗಾಗಿ 25 ಸೈನಿಕರು (ಮುಖ್ಯವಾಗಿ ಪ್ಯಾರಾ ಕಮ್ಯಾಂಡೋಗಳು) ಆಗಸ್ಟ್ 29ರ ಬೆಳಗಿನ ಜಾವ 3 ಗಂಟೆಗೆ ಗಡಿ ಬಳಿಯ ದಾಳಿಗಾಗಿ ಚಿಮ್ಮುವ ನೆಲೆಗೆ (ಲಾಂಚ್ ಪ್ಯಾಡ್‍) ಬಂದಿಳಿದರು. ಅವರು ಅಂದು ರಾತ್ರಿ 10 ಗಂಟೆಯ ತನಕ ಅದೇ ಸ್ಥಳದಲ್ಲಿ ಅವಿತು ಕುಳಿತಿದ್ದರು. ನಂತರ ಅವರು ಮೊದಲೇ ನಿರ್ಧರಿಸಲಾಗಿದ್ದ ಪಾಕಿಸ್ತಾನದ ಪೊಲೀಸ್ ಚೌಕಿಯ ಬಳಿ ಹೋಗುವುದಕ್ಕೆ ಗಡಿನಿಯಂತ್ರಣಾ ರೇಖೆಯನ್ನು ದಾಟಿದರು. ಆಗಸ್ಟ್ 30ರ ಬೆಳಗಿನ ಜಾವ 4 ಗಂಟೆಯ ಹೊತ್ತಿಗೆ, ಅಂದರೆ ಯೋಜಿತ ದಾಳಿಯ ದಿನ, ಹಠಾತ್ ದಾಳಿಯ ತಂಡ ಶತ್ರುವಿನ ಪಾಳೆಯದ ಒಳಗೆ ನುಸುಳಿ ದಾಳಿಗಾಗಿ ಕಾಯುತ್ತಿತ್ತು. ಮುಂದಿನ ಒಂದು ತಾಸಿನಲ್ಲಿ, ಕಮ್ಯಾಂಡೋಗಳು ಆ ಪ್ರದೇಶದ ಸುತ್ತ ಕ್ಲೇಮೋರ್ ನೆಲಬಾಂಬುಗಳನ್ನು ಇಟ್ಟು ಹಠಾತ್ ದಾಳಿಗೆ ಸಿದ್ಧರಾಗಿ ಪೊಜಿಷನ್ ತೆಗೆದುಕೊಂಡು ಕುಳಿತರು. ಸಂರಕ್ಷಿತ ಸಂವಹನ ಮಾರ್ಗದ ಮೂಲಕ ಬರಲಿರುವ ದಾಳಿಯ ಆದೇಶಕ್ಕಾಗಿ ಅವರು ಕಾಯುತ್ತಿದ್ದರು. ಆಗಸ್ಟ್ 30ರ ಬೆಳಿಗ್ಗೆ 7 ಗಂಟೆಗೆ ಮೂವರು ಪಾಕಿಸ್ತಾನಿ ಸೈನಿಕರು ಜ್ಯೂನಿಯರ್ ಕಮೀಷಂಡ್ ಆಫೀಸರ್ ನೇತೃತ್ವದಲ್ಲಿ ದಾಳಿ ನಡೆಯಲಿದ್ದ ಸ್ಥಳದ ಕಡೆ ಬರುವುದನ್ನು, ಹೊಂಚುಹಾಕಿ ಕುಳಿತಿದ್ದ ಭಾರತೀಯ ಪಡೆಗಳು ಕಂಡವು. ಪಾಕಿಸ್ತಾನಿಗಳು ದಾಳಿಯ ಜಾಗಕ್ಕೆ ಬರುವ ತನಕ ಕಾದಿದ್ದು ಅವರು ಬಂದ ತಕ್ಷಣವೇ ರಿಮೋಟ್ ಮೂಲಕ ನೆಲಬಾಂಬ್ ಸಿಡಿಸಿಬಿಟ್ಟರು. ಸ್ಫೋಟದಲ್ಲಿ ಎಲ್ಲಾ ನಾಲ್ವರು ಪಾಕಿಸ್ತಾನಿಗಳು ಗಂಭೀರವಾಗಿ ಗಾಯಗೊಂಡರು. ಕೂಡಲೇ ಭಾರತದ ದಾಳಿಕಾರ ಪಡೆ ಅವರತ್ತ ಕೈಬಾಂಬುಗಳನ್ನು ಎಸೆದು ಗುಂಡಿನ ಮಳೆಗರೆಯಲಾರಂಭಿಸಿತು.

ನಾಲ್ವರು ಪಾಕಿಸ್ತಾನಿ ಸೈನಿಕರ ಪೈಕಿ ಒಬ್ಬನು ಕೆಳಗೆ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದ. ನಂತರ ಮುನ್ನುಗ್ಗಿದ ಭಾರತೀಯ ಸೈನಿಕರು ಉಳಿದ ಮೂವರು ಪಾಕ್ ಸೈನಿಕರ ತಲೆ ಕತ್ತರಿಸಿದರು. ನಂತರ ಮೃತ ಸೈನಿಕರ ಶ್ರೇಣಿಯನ್ನು ಸೂಚಿಸುವ ಪದಕಗಳನ್ನು, ಅವರ ಶಸ್ತ್ರಾಸ್ತ್ರಗಳನ್ನು ಮತ್ತು ಇತರ ವೈಯಕ್ತಿಕ ವಸ್ತುಗಳನ್ನು ಕಿತ್ತುಕೊಂಡರು. ನಂತರ ಭಾರತೀಯ ಕಮ್ಯಾಂಡೋಗಳು ಮೃತ ಪಾಕ್ ಸೈನಿಕರ ದೇಹದಡಿಯಲ್ಲಿ ಒತ್ತಡ ಬಾಂಬುಗಳನ್ನು (ಸುಧಾರಿತ ಸ್ಫೋಟಕ ಸಲಕರಣೆ – Improvised Explosive Devices – IED) ಇಟ್ಟರು. ಮೃತದೇಹಗಳನ್ನು ಎತ್ತಿದ ತಕ್ಷಣ ಅವು ಸಿಡಿಯುವ ಹಾಗೆ ವ್ಯವಸ್ಥೆ ಮಾಡಿದ್ದರು.

ಭಾರತ- ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (ಎಪಿ)

ಭಾರತ- ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (ಎಪಿ)

ಕೈಬಾಂಬು ಸ್ಫೋಟದ ಸದ್ದು ಕೇಳಿದ ತಕ್ಷಣ ಇಬ್ಬರು ಪಾಕ್ ಸೈನಿಕರು ತಮ್ಮ ಶಿಬಿರದಿಂದ ಗಾಬರಿಯಿಂದ ಹೊರಬಂದರು. ಆದರೆ, ದಾಳಿಯ ಸ್ಥಳದಲ್ಲಿ ಹೊಂಚು ಹಾಕಿ ಕುಳಿತಿದ್ದ ಭಾರತದ ಎರಡನೇ ತಂಡ ಅವರನ್ನು ಗುಂಡು ಹಾರಿಸಿ ಕೊಂದಿತು. ಈ ಎರಡನೇ ತಂಡವನ್ನು ಸುತ್ತುವರಿದು ಸಿಕ್ಕಿಹಾಕಿಸುವುದಕ್ಕೆ ಮತ್ತಿಬ್ಬರು ಪಾಕ್ ಸೈನಿಕರು ಪ್ರಯತ್ನಿಸಿದರು. ಆದರೆ, ಎರಡನೇ ತಂಡಕ್ಕೆ ಹಿಂದುಗಡೆಯ ಮರೆಯಿಂದ ರಕ್ಷಣೆ ಒದಗಿಸಿದ್ದ ಭಾರತದ ಮೂರನೇ ತಂಡ ಅವರನ್ನೂ ಗುಂಡು ಹಾರಿಸಿ ಕೊಂದಿತು, ಎನ್ನುತ್ತದೆ ಅಧಿಕೃತ ವರದಿ.

ಭಾರತೀಯ ಸೈನಿಕರು ತಮ್ಮ ನೆಲೆಗೆ ಹಿಂದೆ ಸರಿಯುತ್ತಿದ್ದಾಗ ಪಾಕಿಸ್ತಾನದ ಇನ್ನೊಂದು ಸೈನಿಕ ತಂಡ ಪೊಲೀಸ್ ಚೌಕಿಯತ್ತ ಸಾಗುತ್ತಿರುವುದು ಕಣ್ಣಿಗೆ ಬಿತ್ತು. ಅಷ್ಟರಲ್ಲಿ ಪಾಕ್ ಸೈನಿಕರ ಮೃತದೇಹದ ಕೆಳಗೆ ಅವಿತಿಟ್ಟಿದ್ದ ಬಾಂಬುಗಳು ಸ್ಫೋಟಿಸಿದ್ದನ್ನು ಸೂಚಿಸುವ ಭೀಕರ ಸ್ಫೋಟದ ಸದ್ದು ಕೇಳಿಸಿತು, ಎಂದು ವರದಿ ಹೇಳುತ್ತದೆ. ಅಂದಾಜಿನ ಪ್ರಕಾರ ಕನಿಷ್ಠ ಮತ್ತಿಬ್ಬರು ಅಥವಾ ಮೂವರು ಪಾಕಿಸ್ತಾನಿ ಸೈನಿಕರು ಈ ಸ್ಫೋಟದಲ್ಲಿ ಕೊಲ್ಲಲ್ಪಟ್ಟಿರಬಹುದು.

ಈ ಕಾರ್ಯಾಚರಣೆ 48 ತಾಸುಗಳಲ್ಲಿ ಮುಗಿಯಿತು; ಭಾರತೀಯ ತಂಡ ಬೆಳಿಗ್ಗೆ 7.45ಕ್ಕೆ ಆ ಪ್ರದೇಶವನ್ನು ಬಿಟ್ಟು ಗಡಿನಿಯಂತ್ರಣಾ ರೇಖೆಯತ್ತ ಹೊರಟಿತು. ಮೊದಲ ತಂಡ ಭಾರತೀಯ ಸೇನಾ ಶಿಬಿರವನ್ನು ಮಧ್ಯಾಹ್ನ 12 ಗಂಟೆಗೆ ತಲುಪಿತು. ಕೊನೆಯ ತಂಡ ಮಧ್ಯಾಹ್ನ 2.30ಕ್ಕೆ ಬಂತು. ಅವರು ಶತ್ರುಪಾಳೆಯ ಪರಿವೀಕ್ಷಣೆಯ ಅವಧಿಯನ್ನೂ ಒಳಗೊಂಡಂತೆ ಒಟ್ಟು 48 ತಾಸುಗಳ ಕಾಲ ಶತ್ರು ನೆಲದಲ್ಲಿ ಇದ್ದರು. ಕನಿಷ್ಠ 8 ಪಾಕಿಸ್ತಾನಿ ಸೈನಿಕರನ್ನು ಕೊಂದಿದ್ದರು. ಕನಿಷ್ಠ ಇಬ್ಬರು ಅಥವಾ ಮೂವರು ಪಾಕಿಸ್ತಾನಿ ಸೈನಿಕರನ್ನು ಗಾಯಗೊಳಿಸಿದ್ದರು. ಮೂವರು ಪಾಕಿಸ್ತಾನಿ ಸೈನಿಕರ – ಸುಬೇದಾರ್ ಪರ್ವೇಜ್, ಹವಿಲ್ದಾರ್ ಅಫ್ತಾಬ್ ಮತ್ತು ನಾಯ್ಕ್ ಇಮ್ರಾನ್ – ತಲೆಗಳನ್ನು ಕತ್ತರಿಸಿ ತಂದಿದ್ದರು. ಭಾರತೀಯ ಸೈನಿಕರು ತಂದ ಪಾರಿತೋಷಕಗಳಲ್ಲಿ ಮೂರು ಎಕೆ-46 ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳೂ ಸೇರಿದ್ದವು.

ಯಾವುದೇ ಕುರುಹಿಲ್ಲ:

“ಆದರೆ, ಇದೆಲ್ಲಾ ಎದೆ ಢವಗುಟ್ಟುವ ಆತಂಕದ ಕ್ಷಣಗಳಿಲ್ಲದೇ ಆಗಲಿಲ್ಲ. ನಮ್ಮ ಒಬ್ಬ ಸೈನಿಕ ಪಾಕ್ ನೆಲದಿಂದ ಹೊರನುಸುಳುತ್ತಿದ್ದಾಗ ಅಕಸ್ಮಾತಾಗಿ ನೆಲಬಾಂಬ್ ಮೇಲೆ ಬಿದ್ದು ತನ್ನ ಬೆರಳು ಒತ್ತಿಕೊಂಡ ಎಂಬ ಸುದ್ದಿ ನಮ್ಮ ಸುರಕ್ಷಿತ ಗಡಿರೇಖೆಯ ಬಳಿ ಬಂತು. ಆ ವ್ಯಕ್ತಿಯನ್ನು ಕಾಣುವ ತನಕ ನಿಜಕ್ಕೂ ಅಲ್ಲಿ ಏನಾಗಿರಬಹುದು ಅಂತ ಹೇಳುವುದು ಕಷ್ಟವಾಗಿತ್ತು. ಕೊನೆಗೆ ಆತ ತನ್ನ ಸಂಗಡಿಗರೊಂದಿಗೆ ಸುರಕ್ಷಿತವಾಗಿ ಮರಳಿಬಂದ,” ಎಂದು ಒಬ್ಬ ಅಧಿಕಾರಿ ಹೇಳಿದರು.

ಕತ್ತರಿಸಿ ತಂದ ಪಾಕ್ ಸೈನಿಕರ ತಲೆಗಳನ್ನು ಚಿತ್ರೀಕರಿಸಿ, ನಂತರ ಹಿರಿಯ ಅಧಿಕಾರಿಗಳ ಸೂಚನೆಯಂತೆ ಹೂತುಹಾಕಲಾಯಿತು. ಹಲವು ದಿನಗಳ ನಂತರ ಆ ಕಮ್ಯಾಂಡಿನ ಅತ್ಯಂತ ಹಿರಿಯ ಸೇನಾಧಿಕಾರಿಯೊಬ್ಬ ಬಂದು ಆ ತಲೆಗಳು ಎಲ್ಲಿವೆ ಎಂದು ಕೇಳಿದರು. “ಅವುಗಳನ್ನು ಹೂತು ಹಾಕಲಾಗಿದೆ ಎಂಬುದು ನಮಗೆ ಗೊತ್ತಾದಾಗ, ಆ ಅಧಿಕಾರಿ ಕುಪಿತಗೊಂಡರು. ಅವುಗಳನ್ನು ಹೊರತೆಗೆದು ಯಾವುದೇ ಡಿ.ಎನ್.ಎ. ಕುರುಹೂ ಕೂಡ ಸಿಗದಂತೆ ಸಂಪೂರ್ಣವಾಗಿ ಸುಟ್ಟು ಅವುಗಳ ಬೂದಿಯನ್ನು ಕಿಷನ್ ಗಂಗಾ ನದಿಯಲ್ಲಿ ಎಸೆದುಬಿಡಿ ಎಂದರು. ನಾವು ಹಾಗೇ ಮಾಡಿದೆವು” ಎಂದು ಒಬ್ಬ ಅಧಿಕಾರಿ ಹೇಳಿದರು.

ಕೃಪೆ: ದಿ ಹಿಂದೂ.

Leave a comment

FOOT PRINT

Top