An unconventional News Portal.

ಕಾವೇರಿ ಕಣದಿಂದ ಜಿ. ಮಾದೇಗೌಡ ಮಾಯ: ಪುತ್ರ ವ್ಯಾಮೋಹಕ್ಕೆ ಬಲಿಯಾದ್ರಾ ‘ಮಂಡ್ಯದ ಗಾಂಧಿ’?

ಕಾವೇರಿ ಕಣದಿಂದ ಜಿ. ಮಾದೇಗೌಡ ಮಾಯ: ಪುತ್ರ ವ್ಯಾಮೋಹಕ್ಕೆ ಬಲಿಯಾದ್ರಾ ‘ಮಂಡ್ಯದ ಗಾಂಧಿ’?

ಜಿ. ಮಾದೇಗೌಡ ಎಂಬ ಹೆಸರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ, ಕರ್ನಾಟಕ ರಾಜಕೀಯದಲ್ಲಿ ಚಿರಪರಿಚಿತ ಹೆಸರು.

ಕಾವೇರಿ ವಿಚಾರ ಬಂದರೆ ಮಂಡ್ಯದ ಬೀದಿಗಳಲ್ಲಿ ಪ್ರತ್ಯಕ್ಷವಾಗುವ ‘ಮಂಡ್ಯದ ಗಾಂಧಿ’, ನೇರ, ನಿಷ್ಟುರ ಪಾರದರ್ಶಕ ಹೋರಾಟಗಾರ ಎಂಬ ಬಿರುದುಗಳ ಭಾರ ಹೊತ್ತವರು ಇವರು. ನಿಜವಾಗಿಯೂ ಮಾದೇಗೌಡ ಪಾರದರ್ಶಕರೇ? ಗಾಂಧಿ ತತ್ವ ಪಾಲಿಸುವವರೇ? ಈ ವಿಚಾರಗಳ ಬೆನ್ನತ್ತಿ ಹೋದರೆ ಸ್ವಂತಕ್ಕಾಗಿ ಈ ‘ಗಾಂಧಿ’ ಮಾಡಿಕೊಂಡಿದ್ದೇನು? ಎಂಬ ಮಾಹಿತಿಗಳು ಸಿಗುತ್ತವೆ.

ಕಾವೇರಿ ವಿಚಾರದಲ್ಲಿ ಮಂಡ್ಯದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಮಾದೇಗೌಡರು ಏಕಾಏಕಿ ತಮ್ಮ ಧರಣಿ ನಿಲ್ಲಿಸಲು ಕಾರಣ ಪುತ್ರ ಡಾ. ಜಿ. ಎಂ. ಪ್ರಕಾಶ್‍ಗೆ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಸಿಕ್ಕ ನಿರ್ದೇಶಕನ ಪಟ್ಟ ಎನ್ನುತ್ತವೆ ‘ಸಮಾಚಾರ’ಕ್ಕೆ ಲಭ್ಯವಾಗಿರುವ ದಾಖಲೆಗಳು.

ಯಾರು ಜಿ. ಮಾದೇಗೌಡ?:

ಮಂಡ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ. ಎ ಶಿಕ್ಷಣವನ್ನು ಮಾದೇಗೌಡರು ಮುಗಿಸಿದರು. ಅಲ್ಲಿಂದ ಮುಂದೆ ಬೆಂಗಳೂರಿನಲ್ಲಿ ಕಾನೂನು ವ್ಯಾಸಾಂಗ ಮುಗಿಸಿ ಮಂಡ್ಯಕ್ಕೆ ವಾಪಸ್ಸಾದರು. ಹೆಗಲ ಮೇಲೆ ಕರೀಕೋಟ್ ತಗಲಿ ಹಾಕಿಕೊಂಡು ಮಂಡ್ಯದಲ್ಲಿ ಲಾಯರ್ ಗಿರಿ ಮಾಡುತ್ತಾ, ಗೆಳೆಯರ ಜೊತೆ ಇಸ್ಪೀಟ್ ಆಡಿಕೊಂಡು ಕಾಲ ಕಳೆಯುತ್ತಾ ಇದ್ದರು. ಈ ಸಮಯದಲ್ಲಿ ರಾಜಕಾರಣಿ ಶಂಕರೇಗೌಡರ ಕಣ್ಣಿಗೆ ಬಿದ್ದರು. ಮುಂದೆ 1962ರಲ್ಲಿ ಶಂಕರೇಗೌಡರ ಆಶೀರ್ವಾದದಿಂದ ಮಂಡ್ಯದ ಮದ್ದೂರು ತಾಲ್ಲೂಕು ಚುನಾವಣೆಗೆ ನಿಂತು ಗೆದ್ದಿದ್ದನ್ನು, ಮಾದೇಗೌಡರು ಹಿಂದೊಮ್ಮೆ ತಮ್ಮ ಸಂದರ್ಶನದಲ್ಲಿ ಉಲ್ಲೇಖಿಸಿದ್ದರು. ಆಮೇಲೆ ಕಿರಿಗಾವಲು ಕ್ರೇತ್ರದಿಂದ ಮಾದೇಗೌಡರು ಎಂಎಲ್ಎಯೂ ಆದರು.

ಆರು ಬಾರಿ ಶಾಸಕರಾಗಿ, 2 ಬಾರಿ ಮಂಡ್ಯ ಜಿಲ್ಲೆಯನ್ನು ಸಂಸದರಾಗಿ ಪ್ರತಿನಿಧಿಸಿದ ಗೌಡರು, ಗುಂಡೂರಾವ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದರು. ಕಾವೇರಿ ನೀರಿನ ವಿಚಾರವಾಗಿ ಹೋರಾಟ ಆರಂಭವಾದಾಗ ಇದೇ ಗೌಡರು ರಾಜೀನಾಮೆ ಬಿಸಾಕಿ ಮಂಡ್ಯದ ಜನರ ಜೊತೆ ನಿಲ್ಲುತ್ತೇನೆ ಎಂದು ಹೊರಟುಹೋದರು. “ನಾನು ಚುನಾವಣೆಯಲ್ಲಿ ಮತದಾರರಿಗೆ ಹಣ ಮತ್ತು ಹೆಂಡ ಹಂಚಲಾರೆ” ಎಂದು ಘೋಷಿಸಿ ಇಪ್ಪತ್ತು ವರ್ಷಗಳ ಹಿಂದೆ ತಮ್ಮ ರಾಜಕೀಯ ಬದುಕಿಗೆ ವಿದಾಯ ಹೇಳಿದರು. ಅಷ್ಟರ ಮಟ್ಟಗೆ ಮಾದೇಗೌಡರದ್ದು ‘ಕ್ಲೀನ್’ ಎಂದು ಹೇಳಬಹುದಾದ ಟ್ರ್ಯಾಕ್ ರೆಕಾರ್ಡ್ ಇತ್ತು.

ಕಾಳಮದ್ದನದೊಡ್ಡಿ (ಇವತ್ತಿನ ಭಾರತೀನಗರ)ಯಲ್ಲಿ ಮಾದೇಗೌಡರ ಒಡೆತನದ ಭಾರತಿ ವಿದ್ಯಾಸಂಸ್ಥೆಯಲ್ಲಿ ಈಗ ಎಂಟು ಸಾವಿರ ಮಕ್ಕಳು ಓದುತ್ತಿದ್ದಾರೆ. ಮಂಡ್ಯದ ಸುತ್ತ ಮುತ್ತ ಇಪ್ಪತ್ತು ಎಕರೆ ಭೂಮಿ ತೆಗೆದುಕೊಂಡು ಅದರಲ್ಲಿ ‘ಗಾಂಧಿ ಗ್ರಾಮ’ ಮಾಡಬೇಕು ಅಂತ ಹೊರಟಿದ್ದಾರೆ. ಸರಕಾರ 10 ಎಕರೆ ಜಾಗ ಲೀಸಿಗೆ ನೀಡಿತ್ತು. ಆದರೆ ಲೀಸಿಗೆ ಬೇಡ, ಸ್ವಂತಕ್ಕೆ ನೀಡಿ ಎಂದು ಮಾದೇಗೌಡು ಕೂತಿದ್ದಾರೆ.

ಕಾವೇರಿ ನೀರಿನಲ್ಲಿ: 

ಈ ಬಾರಿ ಕಾವೇರಿ ವಿಷಯದಲ್ಲಿ, ಸುಪ್ರೀಂಕೋರ್ಟ್ನಿಂದ ಸರಣಿ ಆದೇಶಗಳು ಹೊರಬಿದ್ದವು. ಆದರೆ, ಅದನ್ನೇ ರಾಜಕೀಯ ದಾಳವಾಗಿ ಮಾಡಿಕೊಂಡ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪರಸ್ಪರರನ್ನು ಅಭಿನಂದಿಸಿಕೊಳ್ಳುತ್ತಾ ಜನರನ್ನು ಯಾಮಾರಿಸಿದವು. ಇತ್ತ ಮಂಡ್ಯದಲ್ಲಿ ಕಾವೇರಿ ಚಳುವಳಿ ಹುಟ್ಟಿಕೊಂಡಿತು. ಯಥಾಪ್ರಕಾರ ಅದರ ಮುನ್ನಲೆಯಲ್ಲಿದ್ದವರು ಮಾದೇಗೌಡರು. ಆದರೆ, ಒಂದು ದಿನ ಏಕಾಏಕಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಧರಣಿ ಕುಳಿತಿದ್ದ ಮಾದೇಗೌಡರು ‘ಕಾವೇರಿ ಹೋರಾಟ’ವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲು ಮುಂದಾದರೆ. ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಜತೆ ದೂರವಾಣಿಯಲ್ಲಿ ಅವರು ಮಾತನಾಡಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಯಿತು.

ಇದೀಗ, ತಳಮಟ್ಟದಲ್ಲಿ ಸಿಗುತ್ತಿರುವ ಮಾಹಿತಿಯು, ಮಾದೇಗೌಡರು ಕಾವೇರಿ ಹೋರಾಟಕ್ಕೆ ತಿಲಾಂಜಲಿ ಇಡಲು ಮಂಡ್ಯ ಮೆಡಿಕಲ್ ಕಾಲೇಜು (ಮಿಮ್ಸ್) ನಿರ್ದೇಶಕ ಪಟ್ಟ ಕಾರಣ ಎಂಬ ಬಲವಾದ ಆರೋಪಗಳು ಕೇಳಿಬರುತ್ತಿವೆ.

ಸಾಂಪ್ರದಾಯಿಕ ಚಳವಳಿ:

ಕಾವೇರಿ ವಿವಾದ ಎಂದೊಡನೆ ಮಂಡ್ಯ ಜಿಲ್ಲೆಯಲ್ಲಿ ಚಳುವಳಿ ಪುಟಿದೇಳುತ್ತದೆ. ರೈತರು ಸ್ವಯಂ ಪ್ರೇರಿತವಾಗಿ ಚಳುವಳಿಯಲ್ಲಿ ತೊಡಗುತ್ತಾರೆ. ನಂತರದಲ್ಲಿ ಮಾಜಿ ಸಂಸದ ಜಿ.ಮಾದೇಗೌಡ ಪೆಂಡಾಲು ಹೂಡಿ, ಧರಣಿ ಆರಂಭಿಸುತ್ತಾರೆ. ನಂತರ ಕಾವೇರಿ ತಮಿಳುನಾಡಿಗೆ ಹರಿದು, ಒಂದಿಷ್ಟು ಮಳೆ ಬಿದ್ದು ಎಲ್ಲವೂ ತಣ್ಣಗಾಗುವುದು ಮಂಡ್ಯದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.

ಈ ಬಾರಿ ಪರಿಸ್ಥಿತಿ ಅಷ್ಟು ಸುಲಭವಾಗಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಮಂಡ್ಯ ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ಪಡಿಪಾಟಲುಗಳು, ರೈತರ ಸಾಲುಸಾಲು ಆತ್ಮಹತ್ಯೆಗಳು ಎಲ್ಲವೂ ಸೇರಿ ರೈತರ ಸಿಟ್ಟು ನೆತ್ತಿಗೇರಿತ್ತು. ಅದೇ ಕಾರಣಕ್ಕೆ ತಿಂಗಳುಗಟ್ಟಲೆ ಮಂಡ್ಯದಲ್ಲಿ ಕಾವೇರಿ ಚಳುವಳಿ ನಡೆಯಿತು. ಆದರೆ ನಿರಂತರವಾಗಿ ಚಳುವಳಿ ನಡೆದರೆ ಹಳೇ ಮೈಸೂರಿನ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೇಸ್‍ ಪಕ್ಷಕ್ಕೆ ಹಿನ್ನಡೆಯಾವುದು ಗ್ಯಾರೆಂಟಿ ಎಂದು ಸಿದ್ಧರಾಮಯ್ಯನವರಿಗೂ ಗೊತ್ತಿತ್ತು.

ಈ ಕಾರಣಕ್ಕೆ “ಮೆಡಿಕಲ್ ಕಾಲೇಜಿನ ನಿರ್ದೇಶಕ ಪಟ್ಟವನ್ನು ಮಾದೇಗೌಡರ ಮಗನಿಗೆ ನೀಡಿ ಚಳುವಳಿ ತಣ್ಣಗಾಗಿರುವ ಪ್ಲಾನು ಹೂಡಿದರು,” ಎನ್ನುತ್ತಾರೆ ಮಂಡ್ಯದ ಪತ್ರಕರ್ತರೊಬ್ಬರು.

ಹಿಂದಿನಿಂದಲೂ ಹೀಗೆಯೇ:

ಸಾಮಾನ್ಯವಾಗಿ ಕಾವೇರಿ ಚಳುವಳಿಯ ನಾಯಕತ್ವವನ್ನು ವಹಿಸಿಕೊಂಡು ಬಂದ ಮಾದೇಗೌಡರು, ಪ್ರತಿ ಬಾರಿಯೂ ವಿವಾದ ಕಾವೇರುತ್ತಿದ್ದಂತೆ ಸರ್ಕಾರದ ಮ್ಟದಲ್ಲಿ ಲಾಬಿ ನಡೆಸಿಕೊಂಡು ಬರುತ್ತಿದ್ದವರು. ಯಾವತ್ತಿಗೂ ಜನರೊಂದಿಗೆ ಬೆರೆಯದ, ತನ್ನ ಪುತ್ರ ಮಧು ಮಾದೇಗೌಡರನ್ನು ಕಾಂಗ್ರೆಸ್‍ನಿಂದ ಮದ್ದೂರಿನಲ್ಲಿ ಕಣಕ್ಕಿಳಿಸಿದರೆ, ಬಿಜೆಪಿಯಿಂದ ಒಮ್ಮೆ ಎಂಎಲ್ಸಿ ಮಾಡಿಸಿದ್ದು ಅವರ ಇತಿಹಾಸದಲ್ಲಿ ಸೇರಿಹೋಗಿದೆ.

ಹೀಗಿದ್ದವರು ಈ ಬಾರಿ ಇನ್ನೊಬ್ಬ ಮಗನ ಪರವಾಗಿ ಬ್ಯಾಟ್ ಬೀಸಲು ಆರಂಭಿಸಿದ್ದಾರೆ ಎನ್ನುತ್ತವೆ ನಡೆದಿರುವ ಬೆಳವಣಿಗೆಗಳು. ಸೆ.23ರಂದು ರಾಜ್ಯ ಸರ್ಕಾರದ ಜಂಟಿ ಅಧಿವೇಶನದ ನಿರ್ಣಯವನ್ನು ಮುಂದಿಟ್ಟುಕೊಂಡು ಮಾದೇಗೌಡರು ಟೆಂಟು ಖಾಲಿಮಾಡಿದರು. ನಂತರದಲ್ಲಿ ಸಾಕಷ್ಟು ಆದೇಶಗಳು ಸುಪ್ರಿಂ ಕೋರ್ಟಿನಿಂದ ಹೊರಬಿದ್ದರೂ ಮಾದೇಗೌಡರು ಮನೆಬಿಟ್ಟು ಆಚೆಗೆ ಬರಲಿಲ್ಲ. ಇದಕ್ಕೆ ಕಾರಣ ಮಾದೇಗೌಡರ ಮತ್ತೊಬ್ಬ ಪುತ್ರ ಡಾ. ಜಿ. ಎಂ. ಪ್ರಕಾಶ್‍ಗೆ ಸರಕಾರ ನೀಡಿದ ಮಂಡ್ಯ ಮೆಡಿಕಲ್ ಕಾಲೇಜಿನ ನಿರ್ದೇಶಕನ ಪಟ್ಟ.ಈ ಜಿ.ಎಂ.ಪ್ರಕಾಶ್ ಮೊದಲೇ ಹಗರಣಗಳನ್ನು ಮೈಗಂಟಿಸಿಕೊಂಡಿದ್ದ ಮನುಷ್ಯ ಎನ್ನುತ್ತವೆ ಮಂಡ್ಯದ ಮೂಲಗಳು.

ಸರಕಾರ ಸಿನಿಯಾರಿಟಿಯ ಕಾರಣಕ್ಕೆ  ನನ್ನ ಮಗನನ್ನು ನೇಮಕಮಾಡಿದೆ ಎಂದು ಮಾದೇಗೌಡರು ಸಮರ್ಥಿಸಿಕೊಂಡಿದ್ದಾರೆ. ಆದರೆ ಸತ್ಯದ ಸಂಗತಿ ಎಂದರೆ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 48, ಪಿಯುಸಿಯಲ್ಲಿ ಶೇಕಡಾ 55 ಅಂಕಗಳನ್ನು ಪಡೆದು, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಪೇಮೆಂಟ್ ಸೀಟಿನಲ್ಲಿ ಎಂಬಿಬಿಎಸ್ ಸೇರಿಕೊಂಡು, ಮೂರು ಬಾರಿ ಫೇಲ್ ಆದ ಇತಿಹಾಸ ಬೆನ್ನಿಗಂಟಿಸಿಕೊಂಡಿರುವ ಪ್ರಕಾಶ್ ನಿರ್ದೇಶಕ ಹುದ್ದೆಯ ಸಂದರ್ಶನಕ್ಕೆ ಹಾಜರಾದವರ ಪೈಕಿ ಸಿನಿಯಾರಿಟಿಯಲ್ಲಿ 6ನೇ ಸ್ಥಾನದಲ್ಲಿದ್ದರು.

ನಕಲಿ ಸರ್ಟಿಫಿಕೇಟ್ ಫ್ರೊಫೆಸರ್:

ಮಂಡ್ಯ ಮೆಡಿಕಲ್ ಕಾಲೇಜಿ (ಮಿಮ್ಸ್) ನಲ್ಲಿ ಇದೇ ಪ್ರಕಾಶ್ ಹಿಂದೊಮ್ಮೆ ಪ್ರೊಫೆಸರ್ ಹುದ್ದೆ ಗಿಟ್ಟಿಸಿಕೊಂಡಿದ್ದರು. ಅಸಿಸ್ಟೆಂಟ್ ಪ್ರೊಫೆಸರ್‍ ಆಗಿ ಕೇವಲ ನಲವತ್ತು ಸಾವಿರಕ್ಕೆ ದುಡಿಯಬೇಕಿದ್ದ ಪ್ರಕಾಶ್, ಸುಳ್ಳು ದಾಖಲೆಗಳೊಂದಕ್ಕೆ 1.35ಲಕ್ಷ ಸಂಬಳ ಎಣಿಸತೊಡಗಿದ್ದರು.

ತನಿಖಾ ಆಯೋಗದಲ್ಲಿ ಬಯಲಾದ ಅಕ್ರಮಗಳ ಕುರಿತಾದ ದಾಖಲೆ.

ತನಿಖಾ ಆಯೋಗದಲ್ಲಿ ಬಯಲಾದ ಅಕ್ರಮಗಳ ಕುರಿತಾದ ದಾಖಲೆ.

ಯಾವುದೇ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಹುದ್ದೆ ನಿರ್ವಹಿಸಬೇಕಾದರೆ ಕನಿಷ್ಟ 5-6 ವರ್ಷ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಅನುಭವ ಇರಬೇಕು. ಇವ್ಯಾವ ಹಿನ್ನೆಲೆ ಇಲ್ಲದ ಈ ಪ್ರಕಾಶ್ ನೇರ ಆದಿ ಚುಂಚನಗಿರಿ ಮೆಡಿಕಲ್ ಕಾಲೇಜಿಗೆ ಹೋಗಿ 1999ರಿಂದ 2006ರ ವರೆಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿರುವುದಾಗಿ ಸುಳ್ಳು ಬೋಧನಾ ಅನುಭವದ ಪ್ರಮಾಣ ಪತ್ರ ಬರೆಸಿಕೊಂಡರು ಎನ್ನುತ್ತವೆ ದಾಖಲೆಗಳು.

ಆದರೆ ಪ್ರೊ. ಹೆಚ್. ಎಲ್. ಕೇಶವಮೂರ್ತಿಯವರ ನೇತೃತ್ವದ ಪ್ರಗತಿಪರರ ತಂಡ, ಪ್ರಕಾಶ್ ಸೇರಿದಂತೆ ಹಲವರು ನಕಲಿ ದಾಖಲೆ ನೀಡಿದ್ದನ್ನು ಬಯಲಿಗೆಳೆಯಿತು. ಕೊನೆಗೆ ಎಚ್ಚೆತ್ತ ಸರ್ಕಾರ ನಿವೃತ್ತ ನ್ಯಾಯಾದೀಶರಾದ ಎನ್.ನಾರಾಯಣ ನೇತೃತ್ವದಲ್ಲಿ ವಿಚಾರಣಾ ಆಯೋಗ ನೇಮಿಸಿತು. ಆಯೋಗವು ತನ್ನ ವರದಿಯಲ್ಲಿ ಡಾ. ಜಿ. ಎಂ.ಪ್ರಕಾಶ್, ಶಸ್ತ್ರಚಿಕಿತ್ಸಕ ಡಾ. ವಿ. ಎಲ್. ನಂದೀಶ್, ಮಾಜಿ ಶಾಸಕ ಚೌಡಯ್ಯ ಪುತ್ರಿ ಡಾ. ಸವಿತಾ, ಸಜ್ಜನ ಕೆ. ಮರಿಗೌಡರ ಪುತ್ರ ಡಾ. ಕೆ. ಎಂ. ಶಿವಕುಮಾರ್, ಮಾಜಿ ಸಿ. ಎಂ. ಯಡ್ಡಿಯೂರಪ್ಪ ಪುತ್ರಿ (ಮಾನಸ ಪುತ್ರಿ- ತಿದ್ದುಪಡಿ) ಡಾ. ಕಾವ್ಯಶ್ರೀ, ಮೂಳೆ ವೈದ್ಯ ಡಾ. ವಿದ್ಯಾಪ್ರಸಾದ್, ಡಾ. ಸಿದ್ದೇಗೌಡ ಸೇರಿದಂತೆ ಹಲವರು ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. 1999ರಿಂದ 2005ರವರೆಗೆ ಇವರ್ಯಾರೂ ಆದಿ ಚುಂಚನಗಿರಿ ಕಾಲೇಜಿನಲ್ಲಿ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ದೃಢಪಡಿಸಿಕೊಂಡು ಇವೆಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮ್ಮೆ ಹೂಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.

ಇಷ್ಟೊತ್ತಿಗೆ ಯಾವುದೇ ಜವಾಬ್ದಾರಿಯುತ ಸರ್ಕಾರ, ಆ ಕೆಲಸವನ್ನು ಮಾಡಿ ಮುಗಿಸಬೇಕಿತ್ತು. ಆದರೆ ಈ ಪ್ರಭಾವಿಗಳಿಗೆ ಕ್ಲೀನ್ ಚಿಟ್ ನೀಡುವ ಸಲುವಾಗಿ ಮತ್ತೊಬ್ಬ ನಿವೃತ್ತ ನ್ಯಾಯಾದೀಶ ಗುರುರಾಜನ್ ವಿಚಾರಣ ಸಮಿತಿ ನೇಮಿಸಿತು. ಈ ಸಮಿತಿಯ ವರದಿಯಲ್ಲಿ 1999ರಿಂದ 2005ರ ವರೆಗೆ ಈ ವೈದ್ಯರು ಗಳಿಕೆ ರಜೆಯಲ್ಲಿದ್ದರು ಎಂದು ಷರಾ ಬರೆದು ಕ್ಲೀನ್ ಚೀಟ್ ನೀಡಿತು.

ಅವತ್ತು ಸರ್ಕಾರಿ ನೌಕರರು ಆರು ವರ್ಷಗಳ ಕಾಲ ಗಳಿಕೆ ರಜೆಯಲ್ಲಿರಲು ಸಾಧ್ಯವೇ ಎಂದು ಈ ವಿಚರಣಾ ಆಯೋಗವನ್ನು ಯಾರೂ ಕೇಳಲೇ ಇಲ್ಲ. ಇದೀಗ ಮಂಡ್ಯದ ನೂರಡಿ ರಸ್ತೆಯಲ್ಲಿ ಸಾಮಾನ್ಯ ಕ್ಲಿನಿಕ್ ನಡೆಸುತ್ತಿದ್ದ ಇದೇ ಜಿ. ಎಂ. ಪ್ರಕಾಶ್ ಮಂಡ್ಯ ಮೆಡಿಕಲ್ ಕಾಲೇಜಿನ ನಿರ್ದೇಶಕರ ಪಟ್ಟಕ್ಕೇರಿದ್ದಾರೆ.

ಇದೆಲ್ಲವೂ ‘ಮಂಡ್ಯದ ಗಾಂಧಿ’ ಎಂದು ಹೆಸರಾಗಿರುವ, ಕಾವೇರಿ ವಿಚಾರ ಬಂದಾಗ ಇಡೀ ರಾಜ್ಯವೇ ಆಶಯದ ಕಣ್ಣುಗಳೊಂದಿಗೆ ತಿರುಗಿ ನೋಡುವ ಮಾದೇಗೌಡರಿಗೆ ಗೊತ್ತಿಲ್ಲ ಅಂತೇನಿಲ್ಲ. ಕಾವೇರಿ ವಿಚಾರದಲ್ಲಿ ನೇರ ಪರಿಣಾಮವನ್ನು ಅನುಭವಿಸುವವರು ಕಣಿವೆ ಜಿಲ್ಲೆಗಳ ರೈತರು. ಅವರ ಹೆಸರಿನಲ್ಲಿ ಪೆಂಡಾಲು ಹಾಕಿ ಕೂರುವವರಿಗೆ ಲಾಭ. ಇದು ಈ ಬಾರಿಯ ಕಾವೇರಿ ಹೋರಾಟದಲ್ಲಿ ನಿಜವಾಗಿದೆ.

ಅನಾಥ ರೈತರು

ಮಂಡ್ಯ ಜಿಲ್ಲೆಯಲ್ಲಿ ಪ್ರಭಲವಾಗಿರುವ ಜೆಡಿಎಸ್ ಪಕ್ಷದವರಿಗೂ ಕಾವೇರಿ ಚಳುವಳಿಯನ್ನು ಮುಂದುವರೆಸುವುದು ಬೇಕಿಲ್ಲದ ಸಂಗತಿ. ಮಾಜಿ ಸಿಎಂ ಕುಮಾರ್‍ಸ್ವಾಮಿ ಪುತ್ರ ನಿಖಿಲ್‍ನ ಜಾಗ್ವಾರ್ ಸಿನಿಮಾ ಇಂದು (ಗುರುವಾರ) ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಕಾವೇರಿ ಕಣಿವೆಯಲ್ಲಿ ಚಳುವಳಿಗಳು ನಡೆಯುವುದು ಮಗನ ಭವಿಷ್ಯದ ದೃಷ್ಟಿಯಿಂದ ಕುಮಾರಸ್ವಾಮಿ ಪಾಲಿಗೆ ಒಳ್ಳೆಯ ಬೆಳವಣಿಗೆಯೇನಲ್ಲ. ಹಿಂದೆ ಚಳುವಳಿಯ ಕಾರಣಕ್ಕೆ ಜೆಡಿಎಸ್ ಶಾಸಕ ಚಲುವರಾಯಸ್ವಾಮಿ ಪುತ್ರನ ಹ್ಯಾಪಿ ಬರ್ತಡೇ ಸಿನಿಮಾ ಮಕಾಡೆ ಮಲಗಿತು. ಅದಕ್ಕಾಗಿ ಚಳುವಳಿ ಯಾರಿಗೂ ಬೇಡ. ಇಂಥವರನ್ನು ನಂಬಿ ಹೋರಾಟಕ್ಕೆ ಇಳಿಯುವ ಮಂಡ್ಯ ರೈತರನ್ನು ಆ ಕಾವೇರಿ ತಾಯಿಯೇ ಕಾಪಾಡಬೇಕು.

Leave a comment

FOOT PRINT

Top