An unconventional News Portal.

ದಶಕದ ಹಿಂದೆ ಜಗತ್ತನ್ನು ನಡುಗಿಸಿದ ಅಸಾಂಜೆ ಮತ್ತು ‘ವಿಕಿಲೀಕ್ಸ್’ ಎಂಬ ವಿಶಲ್ ಬ್ಲೋವರ್!

ದಶಕದ ಹಿಂದೆ ಜಗತ್ತನ್ನು ನಡುಗಿಸಿದ ಅಸಾಂಜೆ ಮತ್ತು ‘ವಿಕಿಲೀಕ್ಸ್’ ಎಂಬ ವಿಶಲ್ ಬ್ಲೋವರ್!

ಆಧುನಿಕ ಪತ್ರಿಕೋದ್ಯಮದ ದಿಕ್ಕು ದೆಸೆಯನ್ನು ಬದಲಾಯಿಸಿದ ‘ವಿಕಿಲೀಕ್ಸ್ ಡಾಟ್ ಆರ್ಗ್’ ಹುಟ್ಟಿ ಹತ್ತು ವರ್ಷ ಸಂದಿದೆ. ಈ ಶುಭ ಸಂದರ್ಭಕ್ಕೆ ಹತ್ತು ಲಕ್ಷ ದಾಖಲೆಗಳ ಬಿಡುಗಡೆ ಮಾಡುವುದಾಗಿ ಸಂಸ್ಥಾಪಕ ಜೂಲಿಯನ್ ಅಸಾಂಜೆ ಹೇಳಿದ್ದಾರೆ. ಈ ದಾಖಲೆಗಳು ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ್ದು ಎಂಬುದು ಜಗತ್ತಿನಾದ್ಯಂತ ಕುತೂಹಲ ಹುಟ್ಟಿ ಹಾಕಿದೆ.

wikileaks_logo-svg10 ವರ್ಷಗಳ ಹಿಂದೆ ಇದೇ ವಾರ ವಿಕಿಲೀಕ್ಸ್ ನೋಂದಾವಣೆಯಾಗಿತ್ತು. ಅದಾಗಿ 2007ರಲ್ಲಿ ಅಧಿಕೃತ ಚಾಲನೆ ಪಡೆದ ಈ ಸೋರಿಕೆಯ ಜಾಲ ತಾಣ ಪತ್ರಿಕೋದ್ಯಮಕ್ಕೆ ಹೊಸ ಅಂಗಿ ತೊಡಿಸಿದ್ದು ಇಂದಿಗೆ ಇತಿಹಾಸ. ತನಿಖಾ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದ ವಿಕಿಲೀಕ್ಸ್ ತನ್ನ ಹುಟ್ಟಿನಿಂದಲೇ ವಿವಾದವನ್ನು ಮೈಗಂಟಿಸಿಕೊಂಡೇ ಬಂತು. ಸಂಸ್ಥೆಯ ಜತೆ ಜತೆಗೇ ಬೆಳೆದ ಸಂಸ್ಥಾಪಕ ಸಂಪಾದಕ ಜೂಲಿಯನ್ ಅಸಾಂಜೆ ಪ್ರಕರಣಗಳು ಜಾಗತಿಕ ಸುದ್ದಿಯಾದವು.

ಹ್ಯಾಕಿಂಗ್ ಮಾಹಿತಿಗಳ ಸೋರಿಕೆಯ ತಾಣ

ವಿಕಿಲೀಕ್ಸ್ ಆರಂಭವಾದಾಗ ಅದರ ಪರಿಣಾಮಗಳು ಏನಿರಬಹುದು ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಒಂದಷ್ಟು ಗೆಳೆಯರನ್ನು ಕಟ್ಟಿಕೊಂಡು ಜೂಲಿಯನ್ ಅಸಾಂಜೆ ಎಂಬ ಹ್ಯಾಕರ್ ಈ ಸಂಸ್ಥೆ ಹುಟ್ಟುಹಾಕಿದ್ದರು. ಅದಕ್ಕೆ ಇದೇ ಅಸಾಂಜೆಯೇ ‘ಎಡಿಟರ್ ಇನ್ ಚೀಫ್’ ಆಗಿದ್ದರು.

ಆಸ್ಟ್ರೇಲಿಯಾದಲ್ಲಿ ಹುಟ್ಟಿ ಹ್ಯಾಕಿಂಗ್ ಇತಿಹಾಸವನ್ನು ಮೈಗಂಟಿಸಿಕೊಂಡಿರುವ ಅಸಾಂಜೆಗೆ ಮೊದಲ ಬಾರಿಗೆ ಹ್ಯಾಕ್ ಮಾಡಿದಾಗ ಕೇವಲ 16 ವರ್ಷ ವಯಸ್ಸಾಗಿತ್ತು. ಅದಾದ ನಂತರ ಅಮೆರಿಕಾದ ರಕ್ಷಣಾ ಸಂಸ್ಥೆ ಹಾಗೂ ಅಲ್ಲಿನ ಬಾಹ್ಯಕಾಶ ಸಂಸ್ಥೆ ನಾಸಾದ ಮಾಹಿತಿಗಳು ಹಾಗೂ ಪ್ಯಾನಸೋನಿಕ್, ಜೆರಾಕ್ಸ್, ಮೋಟರೋಲಾ, ಸಿಟಿಬ್ಯಾಂಕ್ ಮುಂತಾದ ಕಂಪೆನಿಗಳ ಮಾಹಿತಿಗಳನ್ನೆಲ್ಲಾ ಕದ್ದು ಹ್ಯಾಕರುಗಳ ವಲಯದಲ್ಲಿ ಹೆಸರುವಾಸಿಯಾಗಿದ್ದರು. ಹೀಗೆ ಮಾಹಿತಿ ಕದಿಯುತ್ತಿದ್ದವನ ಮನೆ ಬಾಗಿಲನ್ನು 1994ರಲ್ಲಿ ಪೊಲೀಸರು ತಟ್ಟಿದಾಗ ತನ್ನ ಕಳ್ಳಾದ ಜತೆಗೆ ಅಸಾಂಜೆ ಸಿಕ್ಕಿ ಬಿದ್ದರು. ಮುಂದೆ ಕೋರ್ಟಿನಲ್ಲಿ ತನ್ನ ಮೇಲಿದ್ದ 31 ಪ್ರಕರಣಗಳಲ್ಲಿ 25ಕ್ಕೆ ತಪ್ಪೊಪ್ಪಿಕೊಂಡು ದಂಡ ಕಟ್ಟಿ ಬಿಡುಗಡೆಯಾದರು ಅಸಾಂಜೆ.

ಅಲ್ಲಿಂದ ನಂತರ ಶಿಸ್ತಾಗಿ ಕೂತು ಒಂದಷ್ಟು ಕಡೆ ಕೆಲಸ ಮಾಡಿದ ಅಸಾಂಜೆ ಮತ್ತೆ ಮುನ್ನೆಲೆಗೆ ಬಂದಿದ್ದಕ್ಕೆ ಕಾರಣ ವಿಕಿಲೀಕ್ಸ್. “ವಿಶ್ವದ ಕಿರುಕುಳದ ದಾಖಲೆಗಳ ದೈತ್ಯ ಗ್ರಂಥಾಲಯ,” ಎಂದು ತನ್ನನ್ನು ತಾನು ಕರೆದುಕೊಂಡ ವಿಕಿಲೀಕ್ಸ್ 2007ರಿಂದ 2009ರ ಹೊತ್ತಿಗೆ ಜಗತ್ತೇ ತಿರುಗು ನೋಡುವಂತ ಸುದ್ದಿಗಳನ್ನು ಕೊಟ್ಟಿತು. ‘ಎಕ್ಸ್ ಕ್ಲೂಸಿವ್’ ಪರಿಭಾಷೆಯನ್ನು ಬಿಟ್ಟು ಹಾಕಿ ಸಹ ಸಂಸ್ಥೆಗಳೊಂದಿಗೆ ಸೇರಿ ಸುದ್ದಿಗಳನ್ನು ಒಟ್ಟೊಟ್ಟಿಗೆ ಪ್ರಸಾರ ಮಾಡುವ ನವೀನ ಮಾದರಿಗೆ ನಾಂದಿ ಹಾಡಿತು.

ಸರಣಿ ದಾಖಲೆಗಳ ಪ್ರವಾಹ

ಇವತ್ತಿನವೆರಗೆ ವಿಕಿಲೀಕ್ಸ್ ಒಟ್ಟು ಒಂದು ಕೋಟಿಗೂ ಮಿಗಿಲಾದ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಇದರ ಸರಣಿ ದೊಡ್ಡ ಮಟ್ಟಕ್ಕೆ ಆರಂಭವಾಗಿದ್ದು 2010ರಲ್ಲಿ. ಅವತ್ತು ಇರಾಕಿನ 18 ನಾಗರಿಕರನ್ನು ಹೆಲಿಕಾಫ್ಟರಿನಿಂದ ಅಮೆರಿಕಾ ಸೈನಿಕರು ಕೊಲ್ಲುವ ವೀಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕ ಅಫ್ಘಾನಿಸ್ತಾನದಲ್ಲಿ ಅಮೆರಿಕಾದ ಕಾರ್ಯಚರಣೆಗಳಿಗೆ ಸಂಬಂಧಿಸಿದ ‘ಅಫ್ಘಾನಿಸ್ತಾನ ವಾರ್ ಲಾಗ್ಸ್’ ಅದೇ ವರ್ಷ ಜುಲೈನಲ್ಲಿ ಬಿಡುಗಡೆಯಾಯಿತು. ಮುಂದೆ ಅಕ್ಟೋಬರಿನಲ್ಲಿ ಇದೇ ರೀತಿಯಲ್ಲಿ ‘ಇರಾಕ್ ವಾರ್ ಲಾಗ್ಸ್’ ಬಂತು. ನವೆಂಬರಿನಲ್ಲಿ ಅಮೆರಿಕಾ ರಾಯಭಾರಿಗಳೀಗೆ ಸಂಬಂಧಿಸಿದ ಡಿಪ್ಲೊಮಾಟಿಕ್ ಕೇಬಲ್ಸ್ ಬಿಡುಗಡೆಯಾಯಿತು. ಇದೆಲ್ಲವೂ ಹ್ಯಾಕ್ ಮಾಡಲಾದ ದಾಖಲೆಗಳಾಗಿದ್ದವು, ಮತ್ತು ಕಚ್ಛಾ ಮಾದರಿಯಲ್ಲೇ ಅವುಗಳನ್ನು ವಿಕಿಲೀಕ್ಸ್ ಪ್ರಕಟಿಸಿತ್ತು.

ಮಾಹಿತಿಗಳನ್ನು ಕ್ರೋಢೀಕರಿಸಿ ಸುದ್ದಿ ರೂಪದಲ್ಲಿ ಪ್ರಕಟಿಸುವುದಿಲ್ಲ ಎಂಬ ದೂರುಗಳು ವಿಕಿಲೀಕ್ಸ್ ಬಗ್ಗೆ ಇವೆ. ಆದರೆ “ತಮ್ಮ ದಾಖಲೆಗಳನ್ನು ಎಡಿಟ್ ಮಾಡಿ ಹಲವು ಸಂಸ್ಥೆಗಳು ಸ್ಟೋರಿ ಮಾಡಿದ್ದಾರೆ. ನಾವು ಸುದ್ದಿ ಮನೆಯ ವಾತಾವರಣವನ್ನೇ ಬದಲಾಯಿಸಿದ್ದೇವೆ. ದಾಖಲೆಗಳನ್ನು ಇಟ್ಟುಕೊಂಡು ಬರೆಯುವ ಹೊಸ ಚಾಳಿ ಹುಟ್ಟು ಹಾಕಿದ್ದೇವೆ. ಜನರ ನಿರೀಕ್ಷೆಗಳು ಹೆಚ್ಚಾಗಿವೆ,” ಎಂದು ಅಲ್ ಜಝೀರಾ ಜತೆ ಮಾತನಾಡಿರುವ ವಿಕಿಲೀಕ್ಸ್ ಸಂಪಾದಕಿ ಸರಾ ಹಾರಿಸನ್ ಹೇಳಿದ್ದಾರೆ; ಅದು ನಿಜ ಕೂಡಾ.

Edward Snowden2013ರಲ್ಲಿ ಬಿಡುಗಡೆಯಾದ ಅಮೆರಿಕಾ ಗುಪ್ತಚರಕ್ಕೆ ಸಂಬಂಧಿಸಿದ ‘ಸ್ನೂಡೆನ್ ಆರ್ಕೈವ್ಸ್’, 2016ರ ‘ಪನಾಮ ಪೇಪರ್ಸ್’ ಮತ್ತು ‘ಟಿಟಿಐಪಿ (ಟ್ರಾನ್ಸ್ ಅಟ್ಲಾಂಟಿಕ್ ಟ್ರೇಡ್ ಆ್ಯಂಡ್ ಇನ್ವೆಸ್ಟ್ ಮೆಂಟ್ ಪಾರ್ಟ್ನರ್ಶಿಪ್ ನೆಗೋಶೀಯೇಷನ್)’ ಮುಂತಾದವು ವಿಕಿಲೀಕ್ಸ್ ಮಾದರಿಯಲ್ಲೇ ಬಿಡುಗಡೆಯಾದ ದಾಖಲೆಗಳು ಎಂಬುದು ಗಮನಾರ್ಹ.

ಎಡ್ವರ್ಡ್ ಸ್ನೂಡೆನ್ ದಾಖಲೆಗಳನ್ನು ಬಿಡುಗಡೆ ಮಾಡಿ ಇಕ್ಕಟ್ಟಿಗೆ ಸಿಲುಕಿದಾಗ ಇದೇ ಸರಾ ಹಾರಿಸನ್ ಆತನನ್ನು ರಷ್ಯಾ ರಾಜಧಾನಿ ಮಾಸ್ಕೋಗೆ ಸುರಕ್ಷಿತವಾಗಿ ತಲುಪಿಸಿದ್ದರು. ಇದೀಗ ರಷ್ಯಾ ಆಶ್ರಯದಲ್ಲಿ ಸ್ನೂಡೆನ್ ಇದ್ದಾರೆ.

ಪರ-ವಿರೋಧ ಯುದ್ಧ

ಮುಂದೆ ಏಪ್ರಿಲ್ 2011ರಲ್ಲಿ ಬಿಡುಗಡೆಯಾದ ಅಮೆರಿಕಾದ ಕ್ಯೂಬಾದಲ್ಲಿರುವ ‘ಗ್ವಂತನಮೋ ಬೇ’ ಕೈದಿಗಳ ಶಿಬಿರದ ಕೈಪಿಡಿ ವಿಶ್ವದಾದ್ಯಂತ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು.

ಅಲ್ಲಿಂದ ಮುಂದೆ ಸರಕಾರಗಳ ವಲಯದಲ್ಲಿ ಅಸಾಂಜೆಯನ್ನು ವಿರೋಧಿಸುವ ದೊಡ್ಡ ವಲಯವೊಂದು ಹುಟ್ಟಿಕೊಂಡಿತು. ಅವತ್ತಿನ ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾನಾ ಗಿಲಾರ್ಡ್ ಅಸಾಂಜೆ ಕೆಲಸವನ್ನು ‘ಅಕ್ರಮ’ ಎಂದೂ, ಅಮೆರಿಕಾ ಉಪಾಧ್ಯಕ್ಷ ಜೋ ಬಿಡನ್ ಜೂಲಿಯಾನ್ ಒಬ್ಬ ‘ಟೆರರಿಸ್ಟ್’ ಎಂದು ಬಣ್ಣಿಸಿದರು.

ಆದರೆ ಅದರಾಚೆಗೆ ದೊಡ್ಡ ಅಭಿಮಾನಿ ವರ್ಗವೊಂದು ಅಸಾಂಜೆಗೆ ಸೃಷ್ಟಿಯಾಗಿತ್ತು. ಇವತ್ತಿನ ಇಂಗ್ಲೆಂಡ್ ಲೇಬರ್ ಪಾರ್ಟಿಯ ನಾಯಕ ಜೆರೋಮ್ ಕಾರ್ಬೈನ್, ನೋಮ್ ಚಾಮ್ಸ್ಕಿ, ರಷ್ಯಾ, ಈಕ್ವೆಡಾರ್, ಬ್ರೆಜಿಲ್ ಮುಂತಾದ ದೇಶಗಳ ಅಧ್ಯಕ್ಷರು ಅಸಾಂಜೆ ಬೆನ್ನಿಗೆ ನಿಂತರು. ಹಲವು ದೇಶಗಳು ಅಮೆರಿಕಾದ ದುರಾಚಾರಗಳನ್ನು ಬಯಲಿಗೆಳಿದಿದ್ದಕ್ಕಾಗಿ ಅಸಾಂಜೆರನ್ನು ಹೊಗಳಿದವು. ಸೆಲೆಬ್ರಿಟಿ ಇಮೇಜ್ ಪಡೆದ ಅಸಾಂಜೆ ಹಲವು ಕೆಲಸಗಳಿಗೆ ಕೈ ಹಾಕಿದರು. ‘ರಷ್ಯಾ ಟುಡೇ’ ವಾಹಿನಿಯಲ್ಲಿ ಟಾಕ್ ಶೋ, ಆಸ್ಟ್ರೇಲಿಯಾದಲ್ಲಿ ವಿಕಿಲೀಕ್ಸ್ ಪಾರ್ಟಿ ಹುಟ್ಟುಹಾಕಿದರು. ಸೈಪರ್ಫಂಕ್ಸ್ ಎಂಬ ಪುಸ್ತಕವನ್ನು ಪ್ರಕಟಿಸಿದರು. ಯುವ ಪತ್ರಕರ್ತರ ಪಾಲಿಗೆ ಅಸಾಂಜೆ ಐಕಾನ್ ಆಗಿ ಮೂಡಿ ಬಂದರು. ಆದರೆ ಜನಪ್ರಿಯತೆಯಾಚೆಗೆ ಅಸಾಂಜೆರನ್ನು ಬಲಿ ಪಡೆದುಕೊಡಲು ಹುಲಿಯೊಂದ ಹೊಂಚು ಹಾಕಿ ಕುಳಿತಿತ್ತು; ಅದು ಅಮೆರಿಕಾ.

ಅಸಾಂಜೆ ದುರ್ದಿನಗಳು

ದಾಖಲೆಗಳ ಬಿಡುಗಡೆ ಬೆನ್ನಿಗೆ ಅಮೆರಿಕಾದಲ್ಲಿ ಜೂಲಿಯನ್ ಮೇಲಿನ ಕ್ರಮಿನಲ್ ಆರೋಪಗಳ ವಿಚಾರಣೆಯೂ ಆರಂಭವಾಯಿತು. ಅಮೆರಿಕಾದ ದಾಖಲೆಗಳನ್ನೇ ಹೆಚ್ಚಾಗಿ ಬಿಡುಗಡೆ ಮಾಡಿದ್ದರಿಂದ ಅಸಾಂಜೆನನ್ನು ತಮ್ಮ ವಿರೋಧಿ ಎಂದುಕೊಂಡ ಅಲ್ಲಿನ ಸರ್ಕಾರ ಬಲಿ ಹಾಕಲು ಪ್ಲಾನ್ ಸಿದ್ಧ ಮಾಡಿತು. ಆದರೆ ಈ ಮಿಕ ಮಾತ್ರ ಅಮೆರಿಕಾದ ಬಲೆಯೊಳಗೆ ಬೀಳಲೇ ಇಲ್ಲ. ಕೊನೆಗೆ ಸ್ವೀಡನಿನ ಹೋಟೆಲೊಂದರಲ್ಲಿ ಮಹಿಳೆ ಜೊತೆಗೆ ಅಸಾಂಜೆ ಸೆಕ್ಸ್ ನಲ್ಲಿ ಪಾಲ್ಗೊಂಡಿದ್ದು ಗೊತ್ತಾಯಿತು. ಮುಂದೆ ಅದೇ ಪ್ರಕರಣದಲ್ಲಿ ‘ಆಕೆ’ ಅಸಾಂಜೆ ವಿರುದ್ಧ ರೇಪ್ ಕೇಸ್ ಹಾಕಿದರು. ಆದರೆ ಅಸಾಂಜೆ ಅದು ‘ಸಮ್ಮತಿಯ ಸೆಕ್ಸ್’ ಎಂದು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದರು; ಮಾತ್ರವಲ್ಲ ತಮ್ಮನ್ನು ಅಮೆರಿಕಾಗೆ ಹಸ್ತಾಂತರಿಸುವ ಪ್ರಯತ್ನವಿದು ಎಂದು ಹೇಳಿದರು. ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ ಸ್ವೀಡನ್ ಅವತ್ತಿಗೆ ಇಂಗ್ಲಂಡಿನಲ್ಲಿದ್ದ ಅಸಾಂಜೆ ಬಂಧನಕ್ಕೆ ಸಿದ್ಧತೆ ಮಾಡಿಕೊಂಡಿತು. ಅಸಾಂಜೆ ಪಾಸ್ಪೋರ್ಟ್ ರದ್ದಾಯಿತು.

ಯಾವ ದೇಶದ ಪೌರತ್ವವೂ ಇಲ್ಲದೇ ಅಸಾಂಜೆ ಅಸಾಹಾಯಕರಾಗಿ ಲಂಡನಿನಲ್ಲಿದ್ದರು. ಮೊದಲು ಭಾರತದ ಆಶ್ರಯ ಕೋರಿ ಅರ್ಜಿ ಸಲ್ಲಿಸಿದರು. ಆದರೆ ಭಾರತ ತಕ್ಷಣ ಸ್ಪಂದಿಸದಾದಾಗ ಕೊನೆಗೆ ಲಂಡನಿನಲ್ಲಿರುವ ಈಕ್ವೆಡಾರ್ ರಾಯಭಾರ ಕಚೇರಿಯೊಳಕ್ಕೆ ನುಗ್ಗಿದರು.

19 ಜೂನ್ 2012

ಈಕ್ವೆಡಾರ್ ವಿದೇಶಾಂಗ ಸಚಿವರು, “ಅಸಾಂಜೆ ರಾಜಕೀಯ ಆಶ್ರಯ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅವರು ಈಕ್ವೆಡಾರ್ ರಾಯಭಾರ ಕಚೇರಿಯೊಳಗಿದ್ದಾರೆ,” ಎಂಬುದನ್ನು ಘೋಷಿಸಿದರು. ಅದಾಗಿ ಬ್ರಿಟಿಷ್ ಪೊಲೀಸರು ರಾಯಭಾರ ಕಚೇರಿಯೊಳಕ್ಕೆ ಕಾಲಿಟ್ಟು ಅಸಾಂಜೆ ಬಂಧಿಸುವ ಬೆದರಿಕೆಯನ್ನೂ ಹಾಕಿದರಾದರೂ, ಈಕ್ವೆಡಾರ್ ಅಧ್ಯಕ್ಷ ರಾಫೆಲ್ ಕೊರೆಯಾ ತೀವ್ರ ವಿರೋಧದಿಂದ ಅದೆಲ್ಲಾ ಸಾಧ್ಯವಾಗಲಿಲ್ಲ. ಅವತ್ತಿನಿಂದ ಇವತ್ತಿನವರೆಗೂ ಲಂಡನಿನ ಈಕ್ವೆಡಾರ್ ಎಂಬೆಸಿಯ ಹೊರಗೆ ಪೊಲೀಸರು ಅಸಾಂಜೆಗಾಗಿ ಕಾಯುತ್ತಾ ನಿಂತಿದ್ದಾರೆ. ಆದರೆ ಅಸಾಂಜೆ ಮಾತ್ರ ಹೊರ ಬರುತ್ತಿಲ್ಲ. ಸ್ವೀಡನ್ ಕಾನೂನು ಪ್ರಕಾರ ಅಸಾಂಜೆ ವಿರುದ್ಧ ಇರುವ ಪ್ರಕರಣದ ವಿಚಾರಣೆ 2020ಕ್ಕೆ ಮೊದಲು ಆರಂಭವಾಗಬೇಕು. ಬಹುಶಃ ಅಲ್ಲೀವರೆಗೆ 45 ವರ್ಷದ ಅಸಾಂಜೆ ಈ ಕಚೇರಿಯ ಗೃಹಬಂಧನದಲ್ಲೇ ಕಾಲ ತಳ್ಳಬೇಕಾಗುತ್ತದೋ ಏನೋ.

ಕುಗ್ಗದ ಉತ್ಸಾಹ

ಈಕ್ವೆಡಾರ್ ರಾಯಭಾರ ಕಚೇರಿಯ ಬಾಲ್ಕನಿಯಿಂದ ಭಾಷಣ ಮಾಡುತ್ತಿರುವ ಅಸಾಂಜೆ; ಪೊಲೀಸರು ಬಂಧಿಸಲು ಕಾಯುತ್ತಿರುವುದನ್ನು ಕಾಣಬಹುದು

ಈಕ್ವೆಡಾರ್ ರಾಯಭಾರ ಕಚೇರಿಯ ಬಾಲ್ಕನಿಯಿಂದ ಭಾಷಣ ಮಾಡುತ್ತಿರುವ ಅಸಾಂಜೆ; ಪೊಲೀಸರು ಬಂಧಿಸಲು ಕಾಯುತ್ತಿರುವುದನ್ನು ಕಾಣಬಹುದು

ರಾಯಭಾರ ಕಚೇರಿಯೊಳಕ್ಕ ಅಸಾಂಜೆಗೆ ಪ್ರತ್ಯೇಕ ಕೋಣೆ ನೀಡಲಾಗಿದೆ. ಇಲ್ಲಿದ್ದುಕೊಂಡೇ ಅಸಾಂಜೆ ಆಗಾಗ ಅಬ್ಬರಿಸುತ್ತಿರುತ್ತಾರೆ. ಇದೇ ವರ್ಷದ ಜೂನಿನಲ್ಲಿ ಅವರ ವಿಕಿಲೀಕ್ಸ್ ಅಮೆರಿಕಾ ಡೆಮಾಕ್ರಾಟಿಕ್ ಪಾರ್ಟಿಗೆ ಸಂಬಂಧಿಸಿದ ಈ -ಮೇಲ್ ಗಳನ್ನು ಬಿಡುಗಡೆ ಮಾಡಿತ್ತು. ಹೇಗೆ ಪ್ರಾಥಮಿಕ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ನಿಗೆ ಲಾಭ ಮಾಡಿಕೊಡಲು ಬರ್ನಿ ಸ್ಯಾಂಡರ್ಸ್ ಸೋಲಿಸುವ ಪ್ಲಾನ್ ಇತ್ತು ಎಂಬುದನ್ನು ಈ ದಾಖಲೆಗಳು ಬಹಿರಂಗಪಡಿಸಿದ್ದವು. ಇದಾದ ಬಳಿಕ ಪಕ್ಷದ ಹಲವು ಅಧಿಕಾರಿಗಳು ರಾಜೀನಾಮೆ ನೀಡಿದ್ದರು.

ಇದು ಅಸಾಂಜೆಯ ವಿಕಿಲೀಕ್ಸ್ ಇವತ್ತಿಗೂ ಉಳಿಸಿಕೊಂಡಿರುವ ಶಕ್ತಿ.

ಇದೀಗ ಪ್ರತಿಷ್ಠಿತ ಹಾಗೂ ಜಾಗತಿಕವಾಗಿ ಭಾರಿ ಸದ್ದು ಮಾಡುತ್ತಿರುವ ಅಮೆರಿಕಾ ಚುನಾವಣೆಯ ಕುರಿತು ಸುಮಾರು 10 ಲಕ್ಷ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಅಸಾಂಜೆ ಘೋಷಿಸಿದ್ದಾರೆ. ಯುದ್ಧ, ಶಸ್ತ್ರಾಸ್ತ್ರ, ಕಚ್ಛಾ ತೈಲ, ಸಮೂಹ ಗೂಢಚರ್ಯೆ, ಗೂಗಲ್ ಮತ್ತು ಅಮೆರಿಕಾ ಚುನಾವಣೆಗೆ ಸಂಬಂಧಿಸಿದ ದಾಖಲೆಗಳು ಇವು ಎಂದು ಅವರು ಹೇಳಿದ್ದು, ವಿವರವಾದ ಮಾಹಿತಿಗಳನ್ನು ಕೊಟ್ಟಿಲ್ಲ. ದಾಖಲೆಗಳಲ್ಲಿ ಹಿಲರಿ ಕ್ಲಿಂಟನ್ನಿಗೆ ಸಮಸ್ಯೆ ತಂದೊಡ್ಡುವ ಉದ್ದೇಶಗಳಿಲ್ಲ ಎಂದು ಹೇಳಿದ್ದಾರೆ. ಆದರೆ ಇದರಿಂದ ಯಾರಿಗೆ ಗಂಡಾಂತರ ಕಾದಿದೆಯೋ ಗೊತ್ತಿಲ್ಲ.

ಆದರೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಭಿಮಾನಿಗಳು ಮಾತ್ರ ಹಿಲರಿ ಕತೆಯನ್ನು ಅಸಾಂಜೆ ಮುಗಿಸುತ್ತಾರೆ ಎಂದೇ ಅಂದುಕೊಂಡು ದಾಖಲೆಗಳನ್ನು ಎದುರು ನೋಡುತ್ತಿದ್ದಾರೆ.

Leave a comment

FOOT PRINT

Top