An unconventional News Portal.

ಭಾರತ ಸೇನೆಯ ‘ಸರ್ಜಿಕಲ್’ ದಾಳಿ: ಚರ್ಚೆಗೆ ಗ್ರಾಸವಾದ ನಾನಾ ಆಯಾಮಗಳು!

ಭಾರತ ಸೇನೆಯ ‘ಸರ್ಜಿಕಲ್’ ದಾಳಿ: ಚರ್ಚೆಗೆ ಗ್ರಾಸವಾದ ನಾನಾ ಆಯಾಮಗಳು!

ಭಾರತೀಯ ಸೇನೆ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ‘ದಾಳಿಗೆ ಸಜ್ಜಾಗಿದ್ದ ಭಯೋತ್ಪಾದಕ’ ಶಿಬಿರಗಳ ಮೇಲೆ ‘ನಿರ್ದಿಷ್ಟ ದಾಳಿ’ ನಡೆಸಿರುವುದಾಗಿ ಹೇಳಿದ್ದು ಈಗ ನಾನಾ ಆಯಾಮಗಳ ಚರ್ಚೆಗೆ ಕಾರಣವಾಗಿದೆ.

ಗುರುವಾರ ಬೆಳಗ್ಗೆಯಿಂದ ಭಾರತದ ಮಾಧ್ಯಮಗಳು ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿರುವ ಈ ಸುದ್ದಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಒಂದು ಕಡೆ ಕಾಶ್ಮೀರಾದ ಸೇನಾ ನೆಲೆ ‘ಉರಿ’ಯ ಮೇಲೆ ನಡೆದ ದಾಳಿಗೆ ಪ್ರತೀಕಾರದ ನಡೆ ಇದು ಎಂದು ಭಾರತದ ಮಾಧ್ಯಮಗಳು ವಿಶ್ಲೇಷಿಸುತ್ತಿದ್ದರೆ, ಅಂತರಾಷ್ಟ್ರೀಯ ಮಾಧ್ಯಮಗಳು ಇದೊಂದು ‘ಗಡಿ ನಿಯಂತ್ರಣ ರೇಖೆ’ಯಲ್ಲಿ ನಡೆದ ಚಕಮಕಿ ಎನ್ನುತ್ತಿವೆ.

“ಭಾರತದ ಸೇನೆ ನಡೆದ ದಾಳಿಯಲ್ಲಿ ಇಬ್ಬರು ಸೈನಿಕರು ಮೃತ ಪಟ್ಟಿದ್ದಾರೆ,” ಎಂದು ಪಾಕಿಸ್ತಾನಾ ಸೇನೆಯ ಪ್ರಕಟಣೆ ತಿಳಿಸಿದೆ. ಇನ್ನೊಂದೆಡೆ, ನಿರ್ದಿಷ್ಟ ದಾಳಿಯಲ್ಲಿ ’40 ಭಯೋತ್ಪಾದಕರು ಮೃತಪಟ್ಟಿದ್ದಾರೆ,’ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ದಾಳಿಯನ್ನು ಡ್ರೋಣ್ ಕ್ಯಾಮೆರಾದಿಂದ ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿದ್ದರೂ, ಈವರೆಗೂ ಅದನ್ನು ಬಹಿರಂಗಪಡಿಸಿಲ್ಲ.

ಭಾರತ- ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (ಎಪಿ)

ಭಾರತ- ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (ಎಪಿ)

ಏನಿದು ನಿರ್ದಿಷ್ಟ ದಾಳಿ?: 

ಇಂಗ್ಲಿಷ್ ಭಾಷೆಯಲ್ಲಿ ‘ಸರ್ಜಿಕಲ್ ಸ್ಟ್ರೈಕ್’ ಎಂದು ಕರೆಯುವ ಮಿಲಿಟರಿ ಕಾರ್ಯಾಚರಣೆ ತನ್ನದೇ ಆಯಾಮವನ್ನು ಹೊಂದಿದೆ. ನಿರ್ದಿಷ್ಟ ಪ್ರದೇಶ ಅಥವಾ ಗುರಿಯನ್ನು ಇಟ್ಟುಕೊಂಡು ನಡೆಸುವ ದಾಳಿಯಲ್ಲಿ, ಕಡಿಮೆ ಸಮಯದಲ್ಲಿ ಹೆಚ್ಚು ಹಾನಿಯನ್ನು ಉಂಟು ಮಾಡುವುದು ಕಾರ್ಯಚರಣೆಯ ಉದ್ದೇಶವಾಗಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾನಾ ದೇಶಗಳ ಸೇನಾ ಪಡೆಗಳು ಹೀಗೊಂದು ‘ನಿರ್ದಿಷ್ಟ ದಾಳಿ’ ನಡೆಸಿರುವ ಇತಿಹಾಸ ಇದೆ. ಪಾಕಿಸ್ತಾನದ ಅಬೋಟಾಬಾದ್ ಪ್ರದೇಶದ ಮನೆಯಲ್ಲಿ ಅಡಗಿದ್ದ ಬಿನ್ ಲಾಡೆನ್ ವಿರುದ್ಧ ಅಮೆರಿಕಾ ಇಂತಹದೊಂದು ‘ಸರ್ಜಿಕಲ್ ಸ್ಟ್ರೈಕ್’ನ್ನು ಆಯೋಜಿಸಿತ್ತು. ಸಾಮಾನ್ಯವಾಗಿ ಇಂತಹ ದಾಳಿಗಳಲ್ಲಿ ಹೆಲಿಕ್ಯಾಪ್ಟರ್ಗಳನ್ನು ಬಳಸಿಕೊಳ್ಳಲಾಗುತ್ತದೆ.

ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮುಖ್ಯಸ್ಥ ಲೆ. ಜ. ರನಭೀರ್ ಸಿಂಗ್ ಗುರುವಾರ ನೀಡಿದ ಮಾಧ್ಯಮ ಹೇಳಿಕೆಯಲ್ಲಿ, “ಭಾರತದ ಸೇನೆಯು ಬುಧವಾರ ರಾತ್ರಿ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ದಾಳಿಗೆ ಸನ್ನದ್ಧವಾಗಿದ್ದ ಭಯತ್ಪಾದಕ ಶಿಬಿರ (ಲಾಂಚಿಂಗ್ ಪ್ಯಾಡ್)ಗಳ ಮೇಲೆ ದಾಳಿ ನಡೆಸಲಾಗಿದೆ. ಈ ಸಮಯದಲ್ಲಿ ಆ ಕಡೆಯಲ್ಲಿ ಸಾವು ನೋವುಗಳ ಸಂಭವಿಸಿವೆ,” ಎಂದು ತಿಳಿಸಿದ್ದಾರೆ. ಈವರೆಗೆ ನಿರ್ದಿಷ್ಟವಾಗಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂದು ಸೇನೆಯಾಗಲೀ, ವಿದೇಶಾಂಗ ಇಲಾಖೆಯಾಗಲೀ ಹೇಳಿಲ್ಲ ಎಂಬುದು ಗಮನಾರ್ಹ.

ಭಯೋತ್ಪಾದಕರ ನೆಲೆ?:

ಭಾರತ ದಾಳಿ ನಡೆಸಲು ಪ್ರಮುಖ ಕಾರಣ, ಗಡಿ ರೇಖೆಯಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಸಿದ್ಧರಾಗಿದ್ದ ಬಗ್ಗೆ ನಿಖರ ಮಾಹಿತಿ ಇತ್ತು ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇದನ್ನು ಪಾಕಿಸ್ತಾನದ ‘ಡಾನ್’ ನ್ಯೂಸ್ಗೆ ಪ್ರತಿಕ್ರಿಯೆಯಲ್ಲಿ ಪಾಕ್ ವಾಯುಪಡೆಯ ನಿವೃತ್ತ ಏರ್ ಮಾರ್ಶಲ್ ಶಹಬಾಝ್ ಚೌಧರಿ ಅಲ್ಲಗೆಳೆದಿದ್ದಾರೆ. “ಎರಡೂ ದೇಶಗಳ ಗಡಿ ರೇಖೆಯಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿರುವ ಸಮಯದಲ್ಲಿ ಯಾವ ಭಯೋತ್ಪಾದಕ ದಾಳಿಗೆ ಸನ್ನದ್ಧವಾಗಿರಲು ಸಾಧ್ಯ. ಇದೊಂದು ಮೂರ್ಖತನ ಹೇಳಿಕೆ,” ಎಂದು ಅವರು ಹೇಳಿದ್ದಾರೆ.

ಸೆ. 18ರಂದು ಕಾಶ್ಮೀರದ ಉರಿ ಪ್ರದೇಶದಲ್ಲಿದ್ದ ಭಾರತದ ಸೇನಾ ನೆಲೆಯ ಮೇಲೆ ದಾಳಿ ನಡೆದಿತ್ತು. ಈ ಸಮಯದಲ್ಲಿ ಸುಮಾರು 19 ಸೈನಿಕರು ಸಾವನ್ನಪ್ಪಿದ್ದರು. ಇದಾದ ನಂತರ ಅಣ್ವಸ್ತ್ರಗಳನ್ನು ಹೊಂದಿರುವ ಭಾರತ ಮತ್ತು ಪಾಕಿಸ್ತಾನಗಳ ಗಡಿ ರೇಖೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜತೆಗೆ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ ಈ ವಿಚಾರವನ್ನು ಭಾರತ ಮತ್ತು ಪಾಕಿಸ್ತಾನ ಪ್ರಸ್ತಾಪಿಸಿದ್ದವು.

ರಾಜಕೀಯ ಒಮ್ಮತ: 

ಭಾರತೀಯ ಸೇನೆಯ ‘ನಿರ್ದಿಷ್ಟ ದಾಳಿ’ ವಿಚಾರ ಬಹಿರಂಗವಾಗುತ್ತಲೇ ಭಾರತದ ರಾಜಕೀಯ ಪಕ್ಷಗಳು ಒಮ್ಮತದ ದನಿಯನ್ನು ಹೊರಹಾಕಿವೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸೋನಿಯಾ ಗಾಂಧಿ, ಸೇನಾ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದರ ನಡುವೆ ಗಡಿಯಿಂದ 10 ಕಿ. ಮೀ ಅಂತರದಲ್ಲಿರುವ ಹಳ್ಳಿಗಳಲ್ಲಿನ ಜನರನ್ನು ಸ್ಥಳಾಂತರ ಮಾಡುವ ಕೆಲಸ ನಡೆದಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ. ಸೇನಾ ದಾಳಿ ಸಹಜವಾಗಿಯೇ ರಾಜಕೀಯ ಆಯಾಮವನ್ನು ಪಡೆದುಕೊಂಡಿದೆ. ಗುರುವಾರ ಮಧ್ಯಾಹ್ನದ ಹೊತ್ತಿಗೆ ಭಾರತದ ಸೇನಾ ದಾಳಿಯ ವಿಚಾರ ಬಹಿರಂಗವಾದ ನಂತರ ಭಾರತದ ಶೇರು ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿದೆ.

ಕಳೆದ ತಿಂಗಳಿನಿಂದ ಕಾಶ್ಮೀರದಲ್ಲಿ ಭಾರತದ ಸೇನೆ ಹಾಗೂ ಜನರ ನಡುವೆ ಸಂಘರ್ಷ ನಡೆಯುತ್ತಿದೆ. ಇವತ್ತಿಗೂ ಅಲ್ಲಿನ ಕೆಲವು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಉರಿ ದಾಳಿ ನಂತರ ಕಾಶ್ಮೀರದ ಆಂತರಿಕ ಸಂಘರ್ಷ ಅಂತರಾಷ್ಟ್ರೀಯ ಆಯಾಮವನ್ನು ಪಡೆದುಕೊಂಡಿತ್ತು. ಭಾರತದ ಸೇನೆ ಪಾಕಿಸ್ತಾನದ ಮೇಲೆ ದಾಳಿ ನಡೆಸಬೇಕು ಎಂಬ ಒತ್ತಡ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ಹೆಚ್ಚಾಗಿತ್ತು.

ಈ ಸಮಯದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ‘ನಿರ್ದಿಷ್ಟ ದಾಳಿ’ ನಡೆಸಿದ ವಿಚಾರವನ್ನು ಬಹಿರಂಗಪಡಿಸುವ ಮೂಲಕ ಜನರನ್ನು ಸಂತೃಪ್ತಗೊಳಸುವ ಕೆಲಸವನ್ನು ಭಾರತದ ಸರಕಾರ ಮಾಡಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವಿಶ್ಲೇಷಿಸುತ್ತಿವೆ.

ಸದ್ಯಕ್ಕೆ, ಭಾರತೀಯ ಸೇನೆಯ ಈ ಕಾರ್ಯಾಚರಣೆ ಉಬಯ ದೇಶಗಳ ನಡುವೆ ಬಿಗುವಿನ ವಾತಾವರಣವನ್ನು ಸೃಷ್ಟಿಸಿದೆ. ಶುಕ್ರವಾರದ ಹೊತ್ತಿಗೆ ಈ ವಿಚಾರ ತೆರೆಮರೆಗೆ ಸರಿಯುತ್ತಾ? ಇಲ್ಲಾ ಭಾರತ ತನ್ನ ದಾಳಿಯನ್ನು ಮುಂದುವರಿಸುತ್ತಾ? ಎಂಬುದರ ಮೇಲೆ ಭವಿಷ್ಯ ನಿಂತಿದೆ. ಜತೆಗೆ, ಈಗ ಚರ್ಚೆಗೆ ಒಳಗಾಗಿರುವ ಆಯಾಮಗಳಿಗೂ ಒಂದು ಸ್ಪಷ್ಟತೆ ಲಭಿಸಲಿದೆ.

(ಸಾಂದರ್ಭಿಕ ಚಿತ್ರ). 

Leave a comment

FOOT PRINT

Top