An unconventional News Portal.

‘ಕಾವೇರಿದ ಚಂಡು’ ಮತ್ತೆ ಸುಪ್ರಿಂ ಅಂಗಳಕ್ಕೆ: ನಿರ್ಧಾರಕ್ಕೆ ಬಾರದ ಕೇಂದ್ರ ಮಧ್ಯಸ್ಥಿಕೆ ಸಭೆ

‘ಕಾವೇರಿದ ಚಂಡು’ ಮತ್ತೆ ಸುಪ್ರಿಂ ಅಂಗಳಕ್ಕೆ: ನಿರ್ಧಾರಕ್ಕೆ ಬಾರದ ಕೇಂದ್ರ ಮಧ್ಯಸ್ಥಿಕೆ ಸಭೆ

ನಿರೀಕ್ಷೆಯಂತೆಯೇ ಕೇಂದ್ರ ಸರಕಾರ ಕಾವೇರಿ ನದಿ ನೀರು ಹಂಚಿಕೆ ವಿಚಾರವನ್ನು ಗುರುವಾರ ಸುಪ್ರಿಂ ಕೋರ್ಟ್ ಅಂಗಳಕ್ಕೆ ವರ್ಗಾವಣೆ ಮಾಡಿದೆ.

ನ್ಯಾಯಾಲಯದ ಸೂಚನೆ ಮೇರೆಗೆ ದಿಲ್ಲಿಯ ಶ್ರಮಶಕ್ತಿ ಭವನದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಸಭೆಯಲ್ಲಿ ಕರ್ನಾಟಕದ ಕಡೆಯಿಂದ ಸಿಎಂ ಸಿದ್ದರಾಮಯ್ಯ ಹಾಗೂ ತಮಿಳುನಾಡು ಕಡೆಯಿಂದ ಮುಖ್ಯ ಕಾರ್ಯದರ್ಶಿ ಪಿ. ರಾಮ ಮೋಹನ ರಾವ್ ಪಾಲ್ಗೊಂಡಿದ್ದರು. ತಮಿಳುನಾಡು ಮುಖ್ಯಮಂತ್ರಿ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ, ರಾವ್ ಅವರ ಭಾಷಣವನ್ನು ಸಭೆಯಲ್ಲಿ ಮಂಡಿಸಿದರು.

ಕರ್ನಾಟಕದ ವಾದವೇನಿತ್ತು?:

ಕರ್ನಾಟಕದ ಪರವಾಗಿ ಸಭೆಯಲ್ಲಿ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ, “ಕಾವೇರಿ ವಿವಾದ ಸುಮಾರು 125 ವರ್ಷಗಳ ಇತಿಹಾಸವನ್ನು ಹೊಂದಿದೆ. 2016- 17 ನೇ ಸಾಲಿನಲ್ಲಿ ಮಳೆಯ ಕೊರತೆ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳು ‘ಬದುಕಿ ಹಾಗೂ ಬದುಕಲಿ ಬಿಡಿ’ ಎಂಬ ನೀತಿಯನ್ನು ಅನುಸರಿಸಬೇಕಿದೆ. ಸಾಮಾನ್ಯ ಮಳೆಯಾಗುವ ವರ್ಷಗಳಲ್ಲಿ ನೀರು ಹಂಚಿಕೆಗೂ, ಮಳೆ ಕೊರತೆಗಳಿರುವ ವರ್ಷಗಳಲ್ಲಿ ನೀರನ್ನು ಹಂಚಿಕೊಳ್ಳುವುದಕ್ಕೂ ವ್ಯತ್ಯಾಸ ಇರುತ್ತದೆ. ದಕ್ಷಿಣ ಪಶ್ಚಿಮ ಮುಂಗಾರು ಕೈಕೊಟ್ಟ ಕಾರಣ ಕರ್ನಾಟಕದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಕಾವೇರಿ ನೀರು ಹಂಚಿಕೆ ಕುರಿತು ಪ್ರಾಧಿಕಾರ ಹಾಗೂ ಸುಪ್ರಿಂ ಕೋರ್ಟ್ ನೀಡುರುವ ತೀರ್ಪುಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ,” ಎಂದರು. ಅಂಕಿಅಂಶಗಳ ಸಹಿತ ಕರ್ನಾಟಕದ ಜಲಾಶಯಗಳು ಹಾಗೂ ತಮಿಳುನಾಡಿನ ಅಣೆಕಟ್ಟುಗಳಲ್ಲಿ ಇರುವ ಸಂಗ್ರಹವಾಗಿರುವ ನೀರಿನ ವಿವರಗಳನ್ನು ನೀಡಿದರು.

ತಮಿಳುನಾಡಿನ ಮಂಡನೆ:

ಇದೇ ಸಭೆಯಲ್ಲಿ ಮುಖ್ಯಮಂತ್ರಿ ಜಯಲಲಿತಾ ಪರವಾಗಿ ಅವರ ಭಾಷಣವನ್ನು ಮಂಡಿಸಿದ ಅಧಿಕಾರಿ ರಾವ್, “ಕಾವೇರಿ ವಿಚಾರದಲ್ಲಿ ತಮಿಳುನಾಡು ನ್ಯಾಯಾಲಯ ಈವರೆಗೆ ನೀಡಿರುವ ಆದೇಶಗಳಿಗೆ ಬದ್ಧವಾಗಿದೆ. ಈ ಸಭೆಯಲ್ಲಿ ನ್ಯಾಯ ಸಿಗಿವ ಭರವಸೆಯೊಂದಿಗೆ ಭಾಗವಹಿಸುತ್ತಿದೆ. ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ನೀಡಿದ ಅಂತಿಮ ಆದೇಶದ ಪ್ರಕಾರ, ಆಗಸ್ಟ್ ಕೊನೆಯ ವೇಳೆಯಲ್ಲಿ ತಮಿಳುನಾಡು ಸುಮಾರು 60 ಟಿಎಂಸಿ ನೀರನ್ನು ಪಡೆದುಕೊಳ್ಳಬೇಕಿತ್ತು. ಆದರೆ ಕರ್ನಾಟಕ ಉದ್ದೇಶಪೂರ್ವಕವಾಗಿ ಬಿಡುತ್ತಿಲ್ಲ,” ಎಂದರು. ಜತೆಗೆ, ಕೇಂದ್ರ ಸರಕಾರ ತುರ್ತಾಗಿ ಕಾವೇರಿ ನಿರು ಹಂಚಿಕೆ ಸಂಬಂಧಪಟ್ಟಂತೆ ‘ಕಾವೇರಿ ನಿರ್ಹವಣಾ ಮಂಡಳಿ’ಯನ್ನು ರಚಿಸಬೇಕು ಎಂದು ಜಯಲಲಿತಾ ಭಾಷಣದಲ್ಲಿ ಒತ್ತಾಯಿಸಿದರು.

ಮತ್ತೆ ಸುಪ್ರಿಂ ಅಂಗಳಕ್ಕೆ: 

ಸಭೆಯಲ್ಲಿ ಎರಡೂ ಕಡೆಯ ಭಾಷಣವನ್ನು ಆಲಿಸಿದ ಸಚಿವೆ ಉಮಾ ಭಾರತಿ, ನಡೆದ ಮಾತುಕತೆಯನ್ನು ಸುಪ್ರಿಂ ಕೋರ್ಟ್ ಗಮನಕ್ಕೆ ತರುವುದಾಗಿ ತಿಳಿಸಿದರು ಎಂದು ವರದಿಯಾಗಿದೆ. ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್, “ಕೇಂದ್ರ ಸರಕಾರ ತಜ್ಞರ ತಂಡವನ್ನು ಎರಡೂ ರಾಜ್ಯಗಳಿಗೆ ಕಳುಹಿಸಲಿ. ಆ ತಂಡ ಜಲಾಶಯಗಳು ಮತ್ತು ಅಣೆಕಟ್ಟು ಪ್ರದೇಶಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲಿ, ಬಳಿಕ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂಬ ಅಭಿಪ್ರಾಯವನ್ನು ನಮ್ಮ ಸಕರಾರ ವ್ಯಕ್ತಪಡಿಸಿದೆ,” ಎಂದರು.

Leave a comment

FOOT PRINT

Top