An unconventional News Portal.

ಜಿಯೋ ‘ಸೈಡ್ ಎಫೆಕ್ಟ್ಸ್’: ಹ್ಯಾಂಡ್ ಸೆಟ್ ಮಾರಾಟ ಬಿಡಿ; ಸರ್ವಿಸ್ ಕ್ಷೇತ್ರವೂ ಉಳಿಯುವುದು ಕಷ್ಟ!

ಜಿಯೋ ‘ಸೈಡ್ ಎಫೆಕ್ಟ್ಸ್’: ಹ್ಯಾಂಡ್ ಸೆಟ್ ಮಾರಾಟ ಬಿಡಿ; ಸರ್ವಿಸ್ ಕ್ಷೇತ್ರವೂ ಉಳಿಯುವುದು ಕಷ್ಟ!

ಜಿಯೋ ಆಗಮನ ದೇಶದಾದ್ಯಂತ ಡೇಟಾ ಕ್ಷೇತ್ರದಲ್ಲಿ ಒಂದಷ್ಟು ಪರಿಣಾಮಗಳನ್ನು ಮೂಡಿಸುತ್ತಿದೆ. ಉಚಿತ ಡಾಟಾ ಸಹಜವಾಗಿಯೇ 4ಜಿ ಮೊಬೈಲ್ಗಳಿಗೆ ಶುಕ್ರ ದೆಸೆ ಕುದುರಿದೆ. ಹ್ಯಾಂಡ್ ಸೆಟ್ಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಅದರ ಆಳ ಅಗಲಗಳನ್ನು ತಿಳಿದುಕೊಳ್ಳಲು ‘ಸಮಾಚಾರ’ ಬೆಂಗಳೂರಿನ ಪ್ರಖ್ಯಾತ ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟ ರಸ್ತೆ ‘ಎಸ್.ಪಿ ರೋಡ್’ಗೆ ಭೇಟಿ ನೀಡಿದಾಗ ಸಿಕ್ಕ ಮಾಹಿತಿಗಳಿವು.

ಆಗಿನ್ನೂ ಬೆಳಗ್ಗೆ 10 ಗಂಟೆ. ಅಂಗಡಿಗಳ ಶಟರು ಮೇಲೇರುತ್ತಿತ್ತಷ್ಟೇ. ನಿಂತಿದ್ದ ಬೈಕ್ ಮೇಲಿನ ಹುಡುಗ “ಯಾವುದು ಬೇಕು.. 4ಜಿ.. 3ಜಿ.. ರಿಪೇರಿ…” ಎಂದು ಕರೆಯುತ್ತಿದ್ದ. ದಯಾಳ್ ಎಂಬ ಮೊಬೈಲ್ ಶಾಪ್ ಮುಂದೆ ಆತನ ಪ್ರಚಾರ ನಡೆದಿತ್ತು. “ಈಗ ಎಲ್ಲರೂ 4ಜಿ ಕೇಳುತ್ತಿದ್ದಾರೆ; ಜಿಯೋ ಬಂದ್ಮೇಲೆ,” ಎಂದು ಮಾಹಿತಿ ನೀಡಿ ತನ್ನ ಬಾಯಿ ಪ್ರಚಾರ ಮುಂದುವರೆಸಿದ. ಆತನ ಕೂಗು ಕೇಳುತ್ತಿದ್ದ ಹಾಗೇನೇ ಹೊಕ್ಕಿದ್ದು ಬೆಂಗಳೂರು ಕಂಪ್ಯೂಟರ್ ಮೊಬೈಲ್ಸ್ ಅಂಗಡಿಯನ್ನು.

4ಜಿ ಮಾರಾಟ ಏರಿಕೆ:

1990ರ ಸುಮಾರಿಗೆ ಆರಂಭವಾದ ಅಂಗಡಿಯದು. ಹಾಗಂಥ ರಾಜಸ್ಥಾನ ಮೂಲದ ಮಾಲಿಕರು ಮಾಹಿತಿ ಕೊಟ್ಟರು. ಅವರ ಜನರೇಷನ್ ಹಿಂದಕ್ಕೆ ಉಳಿದಿದ್ದರಿಂದ, ಅವರ ಮಕ್ಕಳು ಮುಂದೆ ಬಂದು ವ್ಯಾಪಾರ ನಡೆಸುತ್ತಿದ್ದರು. ಮಗ ಅಕ್ಷಯ್ ಅಂಗಡಿ ನೋಡಿಕೊಳ್ಳುತ್ತಿದ್ದರು.

sp-roadಇಡೀ ರಸ್ತೆಯಲ್ಲಿ 100 ಬಿಡಿ ಮೊಬೈಲ್ ಮಾರಾಟ ಅಂಗಡಿಗಳು, 30-40 ಹೋಲ್ ಸೇಲ್ ಮಾರಾಟದ ಅಂಗಡಿಗಳಿರಬಹುದು ಎಂಬ ಮಾಹಿತಿ ಕೊಟ್ಟರು. ಇವರದ್ದೂ ಅಂಥಹದ್ದೇ ಒಂದು ಹೋಲ್ ಸೇಲ್ ಮಾರಾಟ ಮಳಿಗೆ. “ರಸ್ತೆ ರಸ್ತೆಯಲ್ಲಿ ಮೊಬೈಲ್ ಶೋರೂಂಗಳು ಆರಂಭವಾದ ನಂತರ ಬಿಡಿ ಮೊಬೈಲ್ ಕೊಂಡುಕೊಳ್ಳಲು ಯಾರೂ ಇಲ್ಲಿಗೆ ಬರುವುದಿಲ್ಲ. ಹಾಗಾಗಿ ಹೋಲ್ ಸೇಲ್ ಮಾರಾಟದ ಅಂಗಡಿಗಳಷ್ಟೇ ಉಳಿದುಕೊಂಡಿವೆ,” ಎಂಬ ಮಾಹಿತಿಯನ್ನು ಅಕ್ಷಯ್ ತಂದೆ ನೀಡಿದರು.

ಅಲ್ಲಿಗೆ ಬರುವ 10 ರಲ್ಲಿ 4-5 ಗ್ರಾಹಕರು ಇವತ್ತು 4ಜಿ ಆಪ್ಷನ್ ಇದೆಯಾ ಎಂಬ ಪ್ರಶ್ನೆ ಕೇಳುತ್ತಿದ್ದಾರಂತೆ. ಹಿಂದೆಲ್ಲಾ ರ್ಯಾಮ್, ಮೆಮೊರಿ, ಡುಯೆಲ್ ಸಿಮ್ ಎಂಬ ಪದಗಳಷ್ಟೇ ಕೇಳುತ್ತಿದ್ದ ಜಾಗದಲ್ಲಿ 4ಜಿ ಹೊಸದಾಗಿ ಸೇರ್ಪಡೆಯಾಗಿದೆ ಎಂದರು ಅಕ್ಷಯ್. ಇದೆಲ್ಲಾ ಜಿಯೋ ಬಂದ ಮೇಲೆಯೇ ಆಗಿದ್ದು ಎನ್ನುತ್ತಾರೆ ಅವರು. ನಾವಿದ್ದ ಹೊತ್ತಲ್ಲೇ ತಮ್ಮ ಪತಿಯೊಂದಿಗೆ ಅನಿತಾ ಎಂಬ ಮಹಿಳೆ ಮೊಬೈಲ್ ಖರೀದಿಸಲು ಅಲ್ಲಿಗೆ ಬಂದರು. ಅವರ ಗಂಡ ಮದುವೆ ವಾರ್ಷಿಕೋತ್ಸವಕ್ಕೆ ಹೆಂಡತಿಗೆ ಮೊಬೈಲ್ ಕೊಡಿಸಲು ಬಂದಿದ್ದರಂತೆ. ಆಕೆಯೂ “4ಜಿ ಆಗುತ್ತಾ,” ಕೇಳಿದರು. “ಜಿಯೋ ಬಂದಿದೆ. ಸಿಮ್ ತೆಗೆದುಕೊಂಡರೆ ಬಳಕೆಗೆ ಬೇಕಾಗುತ್ತಲ್ಲಾ,” ಎಂಬ ಸಮಜಾಯಿಷಿಯನ್ನೂ ಒಟ್ಟಿಗೇ ನೀಡಿದರು. ಜಿಯೋ ಬಗ್ಗೆ ಆಕೆಗೆ ಪೂರ್ತಿ ನಂಬಿಕೆ ಇರಲಿಲ್ಲ. ಆದರೆ ಕಾದು ನೋಡಿ ಕೊಳ್ಳುವ ಆಸೆಯಂತೂ ಇತ್ತು.

ಜಿಯೋ ಆಗಮನದಿಂದ ಆದ ಬದಲಾವಣೆಗಳನ್ನು ಅಕ್ಷಯ್ ಮತ್ತಷ್ಟು ಬಿಡಿಸಿಟ್ಟರು. ಸ್ಯಾಮ್ಸಂಗ್ Z2 ಮೊಬೈಲ್ ಜತೆಗೆ ಸಿಮ್ ಉಚಿತ ನೀಡಿದರು. ಇದರಿಂದ ಆ ಮೊಬೈಲ್ ಸ್ಟಾಕ್ ಇಲ್ಲ ಎಂಬ ಮಾಹಿತಿ ನೀಡಿದರು. “4ಜಿ ಮೊಬೈಲ್ ಅಂತ ಬಂದಾಗ ಶೇಕಡಾ 18-20 ಮಾರಾಟ ಹೆಚ್ಛಾಗಿರಬಹುದು. ಆದರೆ ಇದರಲ್ಲಿ ಕೆಲವು 3ಜಿ ಅಥವಾ ಕಡಿಮೆ ದರದ ಮೊಬೈಲ್ ತೆಗೆದುಕೊಳ್ಳುವವರು 4ಜಿ ಕೇಳುತ್ತಿದ್ದಾರೆ ಅಷ್ಟೇ. ಒಟ್ಟಾರೆ ಶೇಕಡಾ 5-8 ಹೆಚ್ಚಾಗಿರಬಹುದು,” ಎಂಬ ಮಾಹಿತಿ ನೀಡಿದರು.

ಮೊಬೈಲ್ ವ್ಯವಹಾರದ ಆತಂಕ

s-p-road-3ಆದರೆ ಇದೆಲ್ಲಾ ಕ್ಷಣಿಕ. ಮತ್ತೆ ಮಾರಾಟ ಕಡಿತ ಆಗಿಯೇ ಆಗುತ್ತದೆ ಎಂಬ ಭಾವನೆಯನ್ನು ಅವರು ವ್ಯಕ್ತಪಡಿಸಿದರು. “ನಮಿಗೇನೋ ಲಾಭ ಸಿಗುತ್ತಿದೆ. ಆದರೆ ಇಲ್ಲಿರುವ ಉಳಿದವರ ಕತೆ ಏನು?” ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು.

ಇವತ್ತು ಆನ್ಲೈನ್ ಮಾರಾಟ ಮತ್ತು ಮೊಬೈಲ್ ಶೋರೂಂಗಳು ಗಲ್ಲಿ ಗಲ್ಲಿಯಲ್ಲಿ ಕಾಲಿಟ್ಟ ನಂತರ ಇಲ್ಲಿನ ಹಿಂದಿನ ವರ್ತಕರು ಮೊಬೈಲ್ ವ್ಯಾಪಾರ ನಿಲ್ಲಿಸಿದ್ದರು; ಅನಿವಾರ್ಯವಾಗಿ ಹೊಟ್ಟೆಪಾಡಿಗೆ ರಿಪೇರಿ ಕೆಲಸಕ್ಕೆ ಕೈ ಹಾಕಿದ್ದರು. ಹಾಗಾಗಿ ಎಸ್.ಪಿ ರಸ್ತೆಯಲ್ಲಿ ಎಲ್ಲಿ ನೋಡಿದರೂ ರಿಪೇರಿ ಅಂಗಡಿಗಳೇ ಕಾಣಿಸುತ್ತಿದ್ದವು.

“ಸದ್ಯ ಕಡಿಮೆ ದರದ ಯೂಸ್ ಆಂಡ್ ಥ್ರೋ ಮೊಬೈಲ್ಗಳಿಂದಾಗಿ ಇನ್ನು ರಿಪೇರಿಯೂ ನಿಂತು ಹೋಗುತ್ತೋ ಎನ್ನುವ ಆತಂಕದಲ್ಲಿದ್ದೇವೆ,” ಎಂದವರು ಅಂಗಡಿ ಮುಂದೆ ಸಣ್ಣ ಗೂಡು ಕಟ್ಟಿಕೊಂಡು ರಿಪೇರಿ ಮಾಡುತ್ತಿದ್ದ ಯೂಸುಫ್. ಹಿಂದೆ ಸಣ್ಣದೊಂದು ಮೊಬೈಲ್ ಅಂಗಡಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ವ್ಯಾಪಾರ ಕಡಿಮೆ ಆದ ಮೇಲೆ ಅಂಗಡಿಯಲ್ಲಿ ಮಾಲಿಕ ಬಿಟ್ಟರೆ ಬೇರೆಯವರಿಗೆ ಕೆಲಸವಿರಲಿಲ್ಲ. ನಂತರ ಅನಿವಾರ್ಯವಾಗಿ ರಿಪೇರಿ ಶುರು ಮಾಡಿದ್ದರು.

ಜಿಯೋ ಕಡಿಮೆ ದರಕ್ಕೆ 4ಜಿ ಮೊಬೈಲ್ ಮಾರಾಟ ಆರಂಭಿಸಿದ್ದರಿಂದ ತನ್ನ ರಿಪೇರಿಗೆ ಇನ್ನೂ ಮೊಬೈಲ್ಗಳೇ ಇರುವುದಿಲ್ಲವೇನೋ ಎಂಬ ಆತಂಕ ಅವರದಾಗಿತ್ತು.

“ಜಿಯೋದಿಂದ ಲಾಭವಾಗುವುದು ಇತ್ತೀಚೆಗಷ್ಟೇ 4ಜಿ ಮೊಬೈಲ್ ಮಾರಾಟಕ್ಕಾಗಿ ಭಾರತಕ್ಕೆ ಬಂದಿರುವ ಚೀನಾ ಕಂಪೆನಿಗಳಿಗೆ ಮಾತ್ರ,” ಎಂದರು ಅಕ್ಷಯ್.

Leave a comment

FOOT PRINT

Top