An unconventional News Portal.

‘ಕಾವೇರಿ ಕಣಿವೆಯಿಂದ’: 19 ದಿನಗಳ ಹೋರಾಟ; ಸ್ಥಗಿತ ಮತ್ತು ತಳಮಟ್ಟದ ವಾಸ್ತವಗಳು!

‘ಕಾವೇರಿ ಕಣಿವೆಯಿಂದ’: 19 ದಿನಗಳ ಹೋರಾಟ; ಸ್ಥಗಿತ ಮತ್ತು ತಳಮಟ್ಟದ ವಾಸ್ತವಗಳು!

ಎಂದಿನಂತೆಯೇ ಆರಂಭವಾಗುವ ದಿನಚರಿ, ಹಗಲು ಹೊತ್ತಿನಲ್ಲಿ ನಾನಾ ಬ್ಯಾನರ್ ಅಡಿಯಲ್ಲಿ ನಡೆಯುವ ಕಾವೇರಿಯ ಹೋರಾಟಗಳು, ರುಧ್ರಭೂಮಿಯಂತಾಗಿರುವ ನಗರದ ಪ್ರಮುಖ ವೃತ್ತ, ಹಳ್ಳಿಗಳಿಗೆ ಕಾಲಿಟ್ಟರೆ ನೀರಿಲ್ಲದೆ ಒಣಗಿ ನಿಂತಿರುವ ಜಮೀನುಗಳು; ನಾಲೆಗಳು. ಪ್ರತಿ ರೈತನ ಒಡಲೊಳಗೆ ಹುದುಗಿರುವ ಭವಿಷ್ಯದ ಕುರಿತಾದ ಭಯ ಮತ್ತು ಢಾಳಾಗಿ ಕಾಣುವ ‘ಕಾವೇರಿದ ರಾಜಕಾರಣ’ದ ಛಾಯೆ…

ಇದು ಕಾವೇರಿ ಕೊಳ್ಳದ ಪ್ರಮುಖ ಜಿಲ್ಲೆ ಮಂಡ್ಯದಲ್ಲಿ ಶನಿವಾರ ‘ಸಮಚಾರ’ದ ಸುತ್ತಾಟದಲ್ಲಿ ಕಂಡು ಬಂದ ಚದುರಿದ ಚಿತ್ರಗಳು.

“ಈ ವರ್ಷವಂತೂ ಬಿಡಿ ಮುಗಿದು ಹೋಯಿತು. ಮುಂದಿನ ಜೂನ್, ಜುಲೈ (2017)ರ ಹೊತ್ತಿಗೆ ಇಲ್ಲಿನ ರೈತರ ಸ್ಥಿತಿ ಹೀನಾಯವಾಗಿರುತ್ತೆ. ಆಗ ಬಂದು ನೋಡಿ,” ಎಂದರು ಹೊನ್ನೇಗೌಡ. ಮಂಡ್ಯದ ಸಂಜಯ್ ವೃತ್ತದಲ್ಲಿ ಬೆಳಗ್ಗೆಯಿಂದ ಕಾವಲು ಕುಳಿತು ಬೇಸತ್ತಿದ್ದ ಅವರು ಮಾತು ಶುರುಮಾಡಿದರು. ಇತ್ತೀಚೆಗಷ್ಟೆ ‘ಗೃಹ ರಕ್ಷಕ ದಳ’ ಸೇರಿಕೊಂಡು ಹೊಸ ಆದಾಯದ ಮೂಲವನ್ನು ಹುಡುಕಿಕೊಂಡಿದ್ದಾರೆ. ಜಿಲ್ಲಾ ಕೇಂದ್ರದಿಂದ 23 ಕಿ. ಮೀ ದೂರದಲ್ಲಿರುವ ಗೂಳಿಕೊಪ್ಪಲಿನವರು. ಕಾವೇರಿ ಗಲಾಟೆ ಶುರುವಾದ ನಂತರ ಊರಿಂದ ನಾಲ್ಕೈದು ಜನರಿಗೆ ಗೃಹ ರಕ್ಷಕ ದಳಕ್ಕೆ ತರೆತಂದು ಕೆಲಸ ಕೊಡಿಸಿದ್ದಾರೆ. “ನಮಗೂ ಜಮೀನು ಇದೆ. ಆದರೆ ಅದರಲ್ಲಿ ವ್ಯವಸಾಯ ಮಾಡೋಕೆ ನೀರಿಲ್ಲ. ಈ ವರ್ಷ ಕಬ್ಬಿನ ಬೆಳೆಯ ಕತೆ ಮುಗಿಯಿತು ಬಿಡಿ. ಭತ್ತವೂ ಒಣಗುತ್ತಿದೆ. ಹೀಗಾಗಿ, ಬೇರೆ ಏನಾದರೂ ಉದ್ಯೋಗ ಹುಡುಕಿಕೊಂಡು ನಾವು ಸಿಟಿಗೆ ಬಂದೆವು,” ಎಂದರು ಹೊನ್ನೇಗೌಡ.

mandya-cauvery-dry-crop

ಮಂಡ್ಯ ನಗರದ ಸಮೀಪದಲ್ಲಿಯೇ ನೀರಿಲ್ಲದೆ ಒಣಗುತ್ತಿರುವ ಭತ್ತದ ಬೆಳೆ.

ಈ ವರ್ಷ ಕಾವೇರಿ ವಿವಾದ ಹುಟ್ಟಿಕೊಳ್ಳುವ ಸಮಯದಲ್ಲಿ ಸರಕಾರವೇ ಇಲ್ಲಿನ ಹಳ್ಳಿಗಳಲ್ಲಿ ಭಿತ್ತನೆ ಬೀಜ ನೀಡಿ, ಗೊಬ್ಬರ ನೀಡಿ ರೈತರಿಗೆ ವ್ಯವಸಾಯಕ್ಕೆ ಪ್ರೋತ್ಸಾಹಿಸಿತು. ಅದಾದ ನಂತರ ಒಂದು ಸಾರಿ ನಾಲೆಗಳಿಗೆ ಕೆಆರ್ಎಸ್ ಅಣೆಕಟ್ಟಿನಿಂದ ನೀರನ್ನು ಹರಿಸಿತು. ನಂತರ ನಿಲ್ಲಿಸಿ ಬಿಟ್ಟಿತು. ಪರಿಣಾಮ, ಇಷ್ಟೊತ್ತಿಗೆ ತುಂಬಿ ಹರಿಯಬೇಕಿದ್ದ ಜಮೀನು ಪಕ್ಕದ ನಾಲೆಗಳು ಒಣಗಿ ನಿಂತಿವೆ. ಹಳ್ಳಿಗಳಿಂದ ರೈತ ಮಕ್ಕಳು ಉದ್ಯೋಗ ಹುಡುಕಿಕೊಂಡು ನಗರಗಳಿಗೆ ಬರುತ್ತಿದ್ದಾರೆ.

ಜಯಲಲಿತಾ ರುಧ್ರಭೂಮಿ:

“ಸಿಟಿಯ ಕತೆ ಏನು ಕೇಳ್ತೀರಾ. ಕಳೆದ ಆಗಸ್ಟ್ 29ರಿಂದ ಶುರುವಾಯಿತು ನೋಡಿ. ಈಗ ನೀವು ನಿಂತಿರುವ ಸಂಜಯ್ ಸರ್ಕಲ್ ಜಯಲಲಿತಾ ರುಧ್ರಭೂಮಿ ಆಗಿದೆ,” ಎಂದು ನಕ್ಕರು ಆಟೋ ಚಾಕಲ ಮಹೇಶ್. ಕಳೆದ ಎರಡು ದಶಕಗಳಿಂದ ಮಂಡ್ಯ ನಗರದಲ್ಲಿ ಆಟೋ ಓಡಿಸುತ್ತಿರುವ ಅವರ ಆದಾಯ ಕಳೆದ ಒಂದು ತಿಂಗಳಲ್ಲಿ ತಳಮುಟ್ಟಿದೆ. ಆರ್ಥಿಕ ಸಂಕಷ್ಟಗಳು ಶುರುವಾಗಿವೆ.

ಅದರ ನಡುವೆಯೂ ಹಾಸ್ಯ ಮನೋಭಾವನೆಯನ್ನು ಹೊಂದಿರುವ ಅವರು, “ಇಲ್ಲಿ ಒಂದು ತಿಂಗಳಿಂದ ಎಷ್ಟು ಹೆಣ ಸುಟ್ಟರು ಗೊತ್ತಾ. ಕಂಡ ಕಂಡವರ ಶವಗಳನ್ನು ಸುಟ್ಟಿದ್ದೇ ಸುಟ್ಟಿದ್ದು. ಜಯಲಲಿತಾ ಹೆಣವನ್ನೂ ಅದೆಷ್ಟು ಸಾರಿ ಸುಟ್ಟು ಹಾಕಿದ್ದಾರೆ ಎಂಬುದಕ್ಕೆ ಲೆಕ್ಕವೇ ಇಲ್ಲ ಬಿಡಿ. ಈ ಜಾಗ ಒಂಥರಾ ಜಯಲಲಿತಾ ರುಧ್ರಭೂಮಿಯಾಗಿದೆ,” ಎಂದು ಚಟಾಕಿಯನ್ನು ಹಾರಿಸಿದರು. ನಂತರ ಅಷ್ಟೆ ಗಂಭೀರವಾಗಿ ಹಳ್ಳಿಯಲ್ಲಿ ತಮ್ಮ ಜಮೀನಿನ ಪರಿಸ್ಥಿತಿಯನ್ನು ವಿವರಿಸಲು ಶುರುಮಾಡಿದರು.

ನೀರಿಲ್ಲ; ಕರೆಂಟಿಲ್ಲ: 

mandya-cauvery-farmer

ಮಂಡ್ಯದ ಚೀರನಹಳ್ಳಿಯ ರೈತ ನಾಗರಾಜ್.

ಮಂಡ್ಯ ನಗರದಿಂದ ಮಳವಳ್ಳಿಗೆ ಹೋಗುವ ಮಾರ್ಗದಲ್ಲಿ 4 ಕಿ. ಮೀ ಹೋದರೆ ಚೀರನಹಳ್ಳಿ ಎಂಬ ಊರು ಸಿಗುತ್ತದೆ. ಈ ನಾಲ್ಕು ಕಿ. ಮೀ ಉದ್ದದ ರಸ್ತೆಯಲ್ಲಿ ಹಿಂದೆ ಇದ್ದ ಭತ್ತದ ಗದ್ದೆಗಳು ಇವತ್ತು ಲೇ ಔಟ್ಗಳಾಗಿ ಬದಲಾಗುವ ಹಂತದಲ್ಲಿವೆ. ನಗರ ನಿಧಾನವಾಗಿ ಬೆಳೆಯುತ್ತಿದೆ. ನಗರದ ಅಂಚಿಗಿರುವ ಚೀರನಹಳ್ಳಿ ಗ್ರಾಮವನ್ನು ‘ನಿರಂತರ ಜ್ಯೋತಿ’ ಅಡಿಯಲ್ಲಿ ತರಲಾಗಿತ್ತು. ಆದರೆ ಇವತ್ತು ಇಲ್ಲಿ ದಿನಕ್ಕೆ ಮೂರು ಗಂಟೆ ಮಾತ್ರವೇ ವಿದ್ಯುತ್ ನೀಡಲಾಗುತ್ತಿದೆ. ಹೀಗಾಗಿ, ಕಾವೇರಿ ನೀರನ್ನು ನಂಬಿಕೊಳ್ಳಲಾಗದೇ ಬೋರ್ ಹಾಕಿಸಿಕೊಂಡವರೂ ಕೂಡ ಈ ಬಾರಿ ವ್ಯವಸಾಯಕ್ಕೆ ನೀರು ಕಷ್ಟ ಎನ್ನುತ್ತಿದ್ದಾರೆ. ಅಂತವರಲ್ಲಿ ರೈತ ನಾಗರಾಜ್ ಕೂಡ ಒಬ್ಬರು. “ಈ ಕರೆಂಟ್ ನಂಬಿಕೊಂಡು ಏನು ಮಾಡೋಕೆ ಆಗ್ತಿಲ್ಲ. ಸೋಲಾರ್ ಹಾಕಿಸ್ಬೇಕು ಅಂತಿದೀನಿ. ಏಳೂವರೆ ಎಚ್ಪಿ ಮೋಟರ್ ಇದೆ. ಅದಕ್ಕೆ ಎಷ್ಟು ಖರ್ಚಾಗಬಹುದು ಅಂತ ಏನಾದ್ರೂ ಐಡಿಯಾ ಇದೆಯಾ?” ಎಂಬ ಪ್ರಶ್ನೆಯ ಮೂಲಕವೇ ಅವರು ಮಾತು ಆರಂಭಿಸಿದರು.

ಊರಿನ ಸಂಕಷ್ಟಗಳು, ನೀರಿಲ್ಲದ ರೈತರ ಬವಣೆಗಳು ಹಾಗೂ ಕಾವೇರಿಗಾಗಿ ಮುಖ್ಯವಾಹಿನಿಯಲ್ಲಿ ನಡೆಯುತ್ತಿರುವ ಹೋರಾಟಗಳಿಂದ ರೈತರಿಗೆ ಆಗದ ಅನುಕೂಲಗಳ ಬಗ್ಗೆ ವಿವರವಾಗಿ ಮಾತನಾಡಿದರು. ಅವರ ಊರಿನಲ್ಲಿಯೇ ಜನ ಇವತ್ತಿಗೂ ನದಿ ಮರಳನ್ನು ಎತ್ತಿನ ಗಾಡಿಗೆ ಹಾಕಿಕೊಂಡು ಹೋಗುವುದು ಕಂಡು ಬಂತು. ಜತೆಗೆ, “ಐಟಿಐ ಆಗಿದೆ, ಕೆಲಸ ಇಲ್ಲ,” ಎಂಬ ಯುವಕರ ಸಂಖ್ಯೆಯೂ ದೊಡ್ಡದಿದೆ.

ಈ ಬಾರಿಯ ಕಾವೇರಿ ಹೋರಾಟದ ಪ್ರಮುಖ ಕೇಂದ್ರವಾಗಿ ಮಂಡ್ಯ ಜಿಲ್ಲಾ ಕೇಂದ್ರ ಬದಲಾಗಿತ್ತು. ಕಳೆದ 19 ದಿನಗಳಿಂದ ಮಂಡ್ಯವನ್ನೇ ಕೇಂದ್ರವಾಗಿಟ್ಟುಕೊಂಡು ರಾಜ್ಯಾದ್ಯಂತ ಕಾವೇರಿ ಹೋರಾಟಗಳು ನಡೆದುಕೊಂಡು ಬಂದಿದ್ದರು. ಇಲ್ಲಿ ಹೋರಾಟ ನಡೆಯುತ್ತಿದ್ದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನಡೆಯುತ್ತಿದ್ದ ಹೋರಾಟದ ಸ್ಥಳಕ್ಕೆ ರಾಜಕಾರಣಿಗಳು, ಮಠಾಧೀಶರು, ಹೋರಾಟಗಾರರು ಭೇಟಿ ನೀಡಿ ಬೆಂಬಲ ನೀಡುತ್ತ ಬಂದಿದ್ದರು. ಶನಿವಾರ ಸಂಜೆ ವೇಳೆಗೆ ಸಿಎಂ ಸಿದ್ದರಾಮಯ್ಯ ಅವರ ಜತೆ ದೂರವಾಣಿ ಮೂಲಕ ಮಾತನಾಡಿದ ‘ರೈತ ಹಿತರಕ್ಷಣಾ ಸಮಿತಿ’ ಅಧ್ಯಕ್ಷ ಮಾದೇಗೌಡ ಕಾವೇರಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದರು.

ಆದರೆ, ಅಲ್ಲಿಂದ ಕೇವಲ ನಾಲ್ಕು ಕಿ. ಮೀ ದೂರ ಚೀರನಹಳ್ಳಿ ಗ್ರಾಮದಲ್ಲಿ ಕಾವೇರಿ ಹೋರಾಟದ ಆರಂಭಕ್ಕೂ ಮತ್ತು ಅಂತ್ಯಕ್ಕೂ ಹೆಚ್ಚಿನ ವ್ಯತ್ಯಾಸಗಳು ಕಾಣಿಸಲಿಲ್ಲ ಎಂಬುದು ವಿಪರ್ಯಾಸ. ಕಾವೇರಿಯನ್ನು ಕುಡಿಯುವುದಕ್ಕೆ ಮಾತ್ರವೇ ಬಳಸಿಕೊಳ್ಳುವುದಾಗಿ ವಿಶೇಷ ಅಧಿವೇಶನ ತೀರ್ಮಾನಿಸಿದೆ. ಆದರೆ, ಮಂಡ್ಯ ಭಾಗದ ರೈತರು ಕುಡಿಯುವ ನೀರು ಪಕ್ಕಕ್ಕಿರಲಿ, ತಿನ್ನುವ ಅನ್ನಕ್ಕೆ ಏನು ಮಾಡುವುದು ಎಂದು ಯೋಚಿಸುತ್ತಿದ್ದಾರೆ. ಅದರ ಪರಿಣಾಮಗಳು ಇನ್ನೂ ಭೀಕರವಾಗಿವೆ.

Leave a comment

FOOT PRINT

Top