An unconventional News Portal.

ಅಪರೂಪದ ಪತ್ರಕರ್ತ ಗೋಪಾಲ್ ವಾಜಪೇಯಿ ಇನ್ನು ನೆನಪು ಮಾತ್ರ

ಅಪರೂಪದ ಪತ್ರಕರ್ತ ಗೋಪಾಲ್ ವಾಜಪೇಯಿ ಇನ್ನು ನೆನಪು ಮಾತ್ರ

ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ್ ವಾಜಪೇಯಿ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಾಜಪೇಯಿ ಬೆಂಗಳೂರಿನ ಕುಸುಮಾ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ 9:30ರ ಸುಮಾರಿಗೆ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದು, ಅವರಿಗೆ 64 ವರ್ಷ ವಯಸ್ಸಾಗಿತ್ತು.

ವೃತ್ತಿಯಿಂದ ಪತ್ರಕರ್ತರಾಗಿದ್ದ ಗೋಪಾಲ್ ವಾಜಪೇಯಿ ಸಿನಿಮಾ ಗೀತರಚನೆಕಾರ, ಸಂಭಾಷಣೆಕಾರ, ಸಾಹಿತಿ, ನಟರಾಗಿಯೂ ಖ್ಯಾತಿಗಳಿಸಿದ್ದರು.

ಆತ್ಮೀಯರಿಂದ ಗೋಪಾಲ ಕಾಕಾ ಎಂದೇ ಕರೆಯಲ್ಪಡುತ್ತಿದ್ದ ವಾಜಪೇಯಿ, ಗದಗದ ಲಕ್ಷ್ಮೇಶ್ವರದಲ್ಲಿ ಜನಿಸಿ ಧಾರವಾಡದಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದರು. ಅಲ್ಲಿಂದ ಸಂಯುಕ್ತ ಕರ್ನಾಟಕ ಮತ್ತು ಕರ್ಮವೀರ ಪತ್ರಿಕೆಗಳಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಕರ್ಮವೀರ ವಾರಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ನಂತರ ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮದತ್ತ ಹೊರಳಿದ ಗೋಪಾಲ್ ವಾಜಪೇಯಿ ‘ಈಟಿವಿ’ ವಾಹಿನಿ ಸೇರಿಕೊಂಡರು. ಅಲ್ಲಿ ಅವರು ಮನರಂಜನಾ ವಿಭಾಗದ ಹೊಣೆಗಾರಿಕೆ ಹೊತ್ತುಕೊಂಡಿದ್ದು.

ಸಂತ ಶಿಶುನಾಳ ಷರೀಫ ಚಿತ್ರದಿಂದ ಸಂಭಾಷಣಕಾರನಾಗಿ ಚಿತ್ರರಂಗ ಪ್ರವೇಶಿಸಿದ ವಾಜಪೇಯಿ, ಸಂಗ್ಯಾ ಬಾಳ್ಯ, ನಾಗಮಂಡಲ, ಒಂದಾನೊಂದು ಕಾಲದಲ್ಲಿ ಮೊದಲಾದ ಚಿತ್ರಗಳಿಗೆ ಹಾಡು ಬರೆದಿದ್ದಾರೆ. ಇತ್ತೀಚೆಗೆ ತೆರೆ ಕಂಡ ಶಿವರಾಜ್ ಕುಮಾರ್ ಅಭಿನಯದ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರಕ್ಕೂ ವಾಜಪೇಯಿ ಸಾಹಿತ್ಯ ರಚಿಸಿದ್ದರು. ಒಂದಾನೊಂದು ಕಾಲದಲ್ಲಿ ಮತ್ತು ನಾಗಮಂಡಲದ ಹಾಡುಗಳನ್ನು ಇವತ್ತಿಗೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.

ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿ ಗಿರೀಶ್ ಕಾರ್ನಾಡ್, ಶಂಕರ್ ನಾಗ್ ಜೊತೆ ಗೋಪಾಲ್ ವಾಜಪೇಯಿ

ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿ ಗಿರೀಶ್ ಕಾರ್ನಾಡ್, ಶಂಕರ್ ನಾಗ್ ಜೊತೆ ಗೋಪಾಲ್ ವಾಜಪೇಯಿ

‘ದೊಡ್ಡಪ್ಪ’ ನಾಟಕ, ಯಂಡಮೂರಿ ವೀರೇಂದ್ರನಾಥರ ಅನುವಾದದ ‘ಯಶಸ್ಸಿನತ್ತ ಪಯಣ’’ ಮತ್ತು ಭೀಶಮ್ ಸಾಹ್ನಿಯವರ ಹಿಂದಿ ನಾಟಕದ ಅನುವಾದ ‘ಸಂತ್ಯಾಗ ನಿಂತ್ಯಾನ ಕಬೀರ’, ‘ಧರ್ಮಪುರಿಯ ಶ್ವೇತ ವೃತ್ತಾಂತ’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರ ತಾಮ್ರಪತ್ರ, ಹಸಿರು ಬಳೆ, ದೊಡ್ಡಪ್ಪ ಮುಂತಾದ ನಾಟಕಗಳು ವಾಜಪೇಯಿ ಅವರಿಗೆ ಪ್ರಸಿದ್ಧಿ ತಂದುಕೊಟ್ಟಿದ್ದವು.

ಶಂಕರ್ ನಾಗ್, ಸಿ. ಅಶ್ವಥ್, ಟಿ.ಎಸ್ ನಾಗಾಭರಣ, ಗಿರೀಶ್ ಕಾರ್ನಾಡರ ಒಡನಾಡಿಯಾಗಿದ್ದ ಗೋಪಾಲ್ ವಾಜಪೇಯಿ ಸೂಪರ್ ನೋವಾ ಎಂಬ ಸಿನಿಮಾದಲ್ಲಿ ಅಕ್ಕಸಾಲಿಗನ ಪಾತ್ರದಲ್ಲಿಯೂ ನಟಿಸಿದ್ದರು.

ಮೃತರ ಅಂತ್ಯ ಸಂಸ್ಕಾರ ಗುರುವಾರ ಬನಶಂಕರಿ ಚಿತಾಗಾರದಲ್ಲಿ ನಡೆಯಲಿದೆ. ಗೋಪಾಲ್ ವಾಜಪೇಯಿ ಅವರ ಅಂತಿಮ ದರ್ಶನವನ್ನು ಅವರ ಮನೆಯಲ್ಲಿ ಗುರುವಾರ ಬೆಳಿಗ್ಗೆ 11:30 ರಿಂದ ಪಡೆಯಬಹುದು.

ಮನೆ ವಿಳಾಸ: Gopal Wajapeyi, G.202, 3rd floor, Plot no.75 & 76, Behind Chaitanya School, 3rd Main, 2nd Cross, Arehalli, Hanuman Hills Layout, Subramanyapura Post, Bengaluru.560061.

ಗೋಪಾಲ್ ವಾಜಪೇಯಿ ನಿಧನರಾಗುತ್ತಿದ್ದತೆ ಅವರ ಶಿಷ್ಯರು, ಅವರೊಂದಿಗೆ ಕೆಲಸ ಮಾಡಿದವರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

“ಈಟಿವಿ ಚಾನಲ್ ನ ನ್ಯೂಸ್ ವಿಭಾಗದ ಮುಖ್ಯಸ್ಥನಾಗಿ ನಾನು ರಾಮೋಜಿ ಫಿಲಂ ಸಿಟಿಗೆ ಹೋದಾಗ ಅಲ್ಲಿ ಮನರಂಜನಾ ವಿಭಾಗದಲ್ಲಿ ವಾಜಪೇಯಿ ಅವರು ಇದ್ದರು. ಎಷ್ಟು ಸರಳ ಬದುಕಿನ, ಮೆಲು ಮಾತಿನ, ಕಾಳಜಿಯ ಹೃದಯದ ವಾಜಪೇಯಿ ಅವರ ಸನಿಹದಲ್ಲಿದ್ದೆ ಎಂಬುದು ನನಗೆ ಖುಷಿಯ ವಿಷಯ.”

ಜಿ.ಎನ್ ಮೋಹನ್, ಸಂಪಾದಕರು ಅವಧಿ ಡಾಟ್ ಕಾಂ. (ಅವಧಿಯಿಂದ)

“..ನನ್ನ ತಲೆಗಂಟಿದ್ದ ಶಬ್ದಾಡಂಬರದ ದೆವ್ವ ಇಳಿಸಿ, ನನ್ನ ಬರವಣಿಗೆ ಟಿವಿ ಮಾಧ್ಯಮಕ್ಕೆ ಹೊಂದಾಣಿಕೆಯಾಗುವಂತೆ ಮಾಡಿದವರು ಗುರುಗಳಾದ ಗೋಪಾಲ ವಾಜಪೇಯಿ. ನಾನು ಹೈದರಾಬಾದಲ್ಲಿದ್ದಷ್ಟೂ ದಿನ ನನ್ನ ಭಾಷೆಯನ್ನ ಕೈಹಿಡಿದು ತಿದ್ದಿದವರು. ನನಗೆ ಉತ್ತರ ಕರ್ನಾಟಕದ ಮೇಲಿನ ಮಮಕಾರ ಹೆಚ್ಚುವಂತೆ ಮಾಡಿದವರೂ ವಾಜಪೇಯಿ ಅವರೆ.”

ಎಂ. ಎಸ್. ರಾಘವೇಂದ್ರ, ಮುಖ್ಯಸ್ಥರು, ಸರಳ ಜೀವನ ವಾಹಿನಿ. (ಫೇಸ್ಬುಕ್ ವಾಲ್ನಿಂದ)

Leave a comment

FOOT PRINT

Top